ಮಧ್ಯಾಹ್ನ ೧.೩೦ ಆಗಿತ್ತು, ಮಂತ್ರಾಲಯದ ರೇಲ್ವೆ ಸ್ಟೆಷನ್ನ್ಯಾಗ ಗುಲಬರ್ಗಾಕ್ಕ ಹೋಗೊ ಟ್ರೇನಿನ ಸಲುವಾಗಿ ಕಾಯಕೊತ ನಿಂತಿದ್ವಿ. ಮಂತ್ರಾಲಯದಾಗ ರಾಯರ ಸನ್ನಿಧಿಯೊಳಗ ಹೆಂಗ ಮೂರ ದಿನಾ ಕಳದ್ವು ಗೊತ್ತಾಗಲೆಯಿಲ್ಲಾ. ರಾಯರ ಸನ್ನಿಧಿ ಅಂದ್ರ ಅಮ್ಮನ ಮಡಿಲಿನ್ಯಾಗ ಮಲ್ಕೊಂಡಷ್ಟ ಹಿತಾ ಇರತದ.ಮನಸ್ಸು ಪ್ರಶಾಂತ ಇರತದ. ವಾಪಸ ಊರಿಗೆ ಹೋಗ್ಲಿಕ್ಕೆ ಮನಸಾಗಲಾರದ ಒಲ್ಲದ ಮನಿಸಿನಿಂದ ಸ್ಟೇಷನ್ನಿಗೆ ಬಂದ ನಿಂತಿದ್ವಿ. ಮುಂಬೈಕ್ಕ ಹೋಗೊ ಟ್ರೇನ್ ಬಂತು ನಾವು ಲೇಡಿಸ್ ಬೋಗಿಯೊಳಗ ಹತ್ತಿದ್ವಿ. ಬೋಗಿ ಪೂರ್ತಿ ಖಾಲಿನ ಇತ್ತು. ನಮ್ಮ ಫ್ಯಾಮಿಲಿಯವರ ಮಾತ್ರ ಇದ್ವಿ.
ಮುಂದ ರಾಯಚೂರಿಗೆ ಹೋಧಂಗ ಹೋಧಂಗ ಭಾಳ ಗದ್ದಲಾಗಲಿಕತ್ತು.ಮುಂಬೈಕ ದುಡಿಲಿಕ್ಕೆ ಹೋಗೊ ಮಂದಿ ಎಲ್ಲಾ ಬೋಗಿಯೊಳ್ಗ ತುಂಬಲಿಕತ್ರು. ಒಬ್ಬೊಬ್ಬರ ಹಿಂದ ನಾಲ್ಕ ಲಗೇಜ್ ಇದ್ವು. ನೋಡ ನೋಡೊದ್ರಾಗ ಮಂದಿಗಿಂತಾ ಲಗೇಜ್ ನಿಂದನ ಪೂರ್ತಿ ಬೋಗಿ ತುಂಬಿಹೋತು. ದುಡಿಲಿಕ್ಕೆ ಹೋಗೊವರು ತಿಂಗಳಾನಗಟ್ಟಲೆ ಆಗೊ ಅಷ್ಟು ಜ್ವಾಳಾ,ಗೋಧಿ, ಕಾಳು-ಕಡಿ ಕಟಗೊಂಡ ಹೋಗ್ತಾರ. ಇಂಥಾ ಗದ್ದಲದಾಗ ಸಣ್ಣ ಸಣ್ಣ ತಿಂಗಳ ಮೂರ ತಿಂಗಳ ಕೂಸಗೊಳನ ಕಟಗೊಂಡ ಮುಂಬೈ ತನಕಾ ದುಡಿಲಿಕ್ಕ ಹೋಗೊ ಆ ಹೆಣ್ಣ ಮಕ್ಕಳನ್ನ ನೋಡಿದ್ರ ಪಾಪ ಅನಿಸ್ತದ. ಅಲ್ಲೆ ಎರಡು ಸಿಟಿನ ನಡುವ ಸಿರಿಲೆ ಜೋಳಿಗಿ ಕಟ್ಟಿ ಕೂಸಿನ್ನ ಮಲಗಿಸಿ ತೂಗಲಿಕತ್ರು. ಜೋಳಿಗಿ ಕಟ್ಟೊ ಸಲುವಾಗಿನ ಒಂದಿಬ್ಬರ ಹೆಣ್ಣಮಕ್ಕಳು ಜಗಳಾಡಲಿಕತ್ರು. ಒಬ್ಬಾಕಿ " ನೀವೊಬ್ಬಾಕಿನ ಜೋಳಿಗಿ ಕಟಗೊಂಡ್ರ ಹೆಂಗ, ಇತ್ತಾಕಡೆಯವರ ಎನಮಾಡಬೇಕ, ಗಾಡಿ ಎನ ನಿಮ್ಮಪ್ಪಂದೆನ? ’ ಅಂದ್ರ, ಇನ್ನೊಬ್ಬಾಕಿ, " ನಿಮ್ಮಪ್ಪಂದೆನ್ ಹಂಗಿದ್ರ ಅಂತ ಸಿರಿ ಎತ್ತಿ ಕಟ್ಟಿ ಜಗಳಕ್ಕ ನಿಂತಳು. ಅಷ್ಟರಾಗ ಅಲ್ಲೆ ಇದ್ದ ನಡು ವಯಸ್ಸಿನ ಹೆಣ್ಣಮಗಳು " ಎ ಪೋರಿ ಒಬ್ಬರಿಗೊಬ್ಬರು ಸಂಭಾಳಿಸಿಗೊಂಡ ಹೋಗೊದಿರತೈತಿ, ನಮ್ಮ ನಮ್ಮ ಠೀಕಾಣಾ ಬಂದಾಗ ಯಾರೇನ ಕುಂತ ಜಾಗಾನ ಎದಿಮ್ಯಾಲ ಹೇರಕೊಂಡ ಹೋಗುದಿಲ್ಲಾ." ಅಂತ ಬುದ್ಧಿ ಹೇಳಿ ಜಗಳಾಡಲಿಕತ್ತ ಹೆಣ್ಣ ಮಕ್ಕಳನ್ನ ಶಾಂತ ಮಾಡಿ ಕೂಡಿಸಿದ್ಲು. ನೋಡ್ಲಿಕ್ಕೆ ಆ ಹೆಣ್ಣಮಗಳು ಕೆಂಪ್ಗ, ಗಿಡ್ಡ, ಇದ್ಲು ಕಚ್ಚಿ ಹಾಕಿ ಸೀರಿ ಉಟ್ಟಿದ್ಲು. ಮಾರಿ ಮ್ಯಾಲೆ ಮುಂಬೈ ಊರಿನ ನೀರಿನ ದಿಟ್ಟ ಕಳೆ ಇತ್ತು. ಗಾಡಿಯೋಳಗ ಹತ್ತಲಿಕತ್ತ ಮಂದಿಗೆಲ್ಲಾ ಈಕಿ ಒಂಥರಾ ತಾನ ಲೀಡರ್ ಇದ್ಧಂಗ ಮಾಡತಿದ್ಲು. ಎಲ್ಲಾರಗು ಜಾಗಾ ಹೊಂದಿಸಿಕೊಡಲಿಕತ್ತಿದ್ಲು. ಬೋಗಿಯೊಳಗ ಹತ್ತಿದ್ದ ಸಣ್ಣ ಸಣ್ಣ ಗಂಡ ಹುಡುಗುರಿಗೆಲ್ಲಾ " ಅರೆ ಯೆ ಪೋರಗಾ ಲೋಗ ಸಗಳೆ ವರತಿ ಚಡುನ ಬಸಾ ಚಲಾ" ಅಂತ ಎಲ್ಲಾರನು ಮ್ಯಾಲೆ ಹತ್ತಿಸಿ ಕೂಡಿಸಿ, " ಹೆಣ್ಣ ಮಕ್ಕಳಿಗೆಲ್ಲಾ ಅಲ್ಲೆ ಇದ್ದ ಕಾಳು ಕಡಿಯ ಚೀಲದ ಮ್ಯಾಲೆ ಜಾಗಾ ಮಾಡಿ ಕೂಡಿಸಿದ್ಲು.ಕೆಲವರು ಜಾಗಾ ಹುಡಕೊದ್ರಾಗ ವ್ಯಸ್ತ ಇದ್ರ ಇನ್ನೂ ಕೆಲವರು ತಮ್ಮನ್ನ ಬೀಳ್ಕೊಡಲಿಕ್ಕೆ ಬಂದವರ ಕಣ್ಣಿರ ವರಸೊದ್ರಾಗ ವ್ಯಸ್ತ ಇದ್ರು. ಸಣ್ಣ ಸಣ್ಣ ವಯಸ್ಸಿನ ಗಂಡಹುಡುಗುರು ತಂದಿತಾಯಿನ್ನ ಬಿಟ್ಟು ದೂರದ ಮುಂಬೈಕ್ಕ ದುಡಿಲಿಕ್ಕೆ ಹೋಗತಿರತಾವ. ಬಡತಂದಿತಾಯಂದ್ರಿಗೆ ಅನಿವಾರ್ಯ ಇರತದ ಹಿಂಗ ಮಕ್ಕಳನ ದುಡಿಲಿಕ್ಕೆ ಕಳಸೊದು. ತಂದಿತಾಯಿ ನೆರಳಿನ್ಯಾಗ ಬೆಳದು ದೊಡ್ಡವರಾಗಬೇಕಿದ್ದ ಮಕ್ಕಳು ಬಿಸಲಾಗ,ಮಳ್ಯಾಗ ರಟ್ಟಿ ಕಟ್ಟಿ ದುಡಿಲಿಕ್ಕೆ ಹೋಗೊಅಂಥಾ ಪರಿಸ್ಥಿತಿ ನಮ್ಮ ದೇಶದಾಗಿನ ಭಾಳ ಮಕ್ಕಳಿಗೆ ಅನಿವಾರ್ಯ ಆಗೇದ. ಇಂಥಾ ಗದ್ದಲದಾಗ ಸ್ಥಿತಪ್ರಜ್ಞನ ಹಂಗಿದ್ದ ರೈಲು ನಿಮ್ಮ ಯಾರ ಅಳುವಿಗು, ನಗುವಿಗು ನನಗೇನ ಸಂಬಂಧ ಇಲ್ಲಾ ನಾ ಇನ್ನ ಹೋಗತೇನಿ ಅನ್ನೊ ಲೆಕ್ಕದಾಗ ಸಿಟಿ ಹೋಡದು ಹವರಗ ಮುಂದ ಹೋಗಲಿಕ್ಕೆ ಶೂರು ಆತು. ಕಳಸಲಿಕ್ಕೆ ಬಂದವರದು ಮತ್ತ ಊರಿಗೆ ಹೊಂಟವರದು ಗೋಳಾಟ ಒಮ್ಮಿಂದೊಮ್ಲೆ ಜೋರಾತು. ಇವ್ರೆಲ್ಲಾರ ಜೋಡಿ ಸ್ಪರ್ಧೆ ಅದ ಅನ್ನೊ ಹಂಗ ಗಾಡಿಯ ವೇಗ ಇವರಕಿಂತಾ ಜೋರಾತು. ನೋಡನೋಡೊದ್ರಾಗ ರೈಲು ಸ್ಟೇಷನ ಬಿಟ್ಟು ಮುಂದಹೋತು. ಒಬ್ಬರಿಗೊಬ್ಬರ ಮಾರಿ ಮಸಕ ಮಸಕಾದಿಂದ ಒಬ್ಬೊಬ್ಬರ ಬಂದು ತಮ್ಮ ಜಾಗಾಕ್ಕ ಕೂಡಲಿಕತ್ತರು.ಒಮ್ಮಿಕಲೆ ಬೋಗಿಪೂರ್ತಿ ಗಪ್ಪಚಿಪ್ಪಾತು.
ನನ್ನ ಯಾರ ತಡಿಲಿಕ್ಕೆ ಸಾಧ್ಯನ ಇಲ್ಲಾ ಅಂತ ತನ್ನದ ಒಂದ ನಮೂನಿ ದಿಮಾಕಿನ್ಯಾಗ ಗಾಡಿ ಓಡಲಿಕತ್ತಿತ್ತು. ಗಾಡಿ ಮುಂದ ಓಡಿಧಂಗ ಓಡಿಧಂಗ ಮಂದಗಸೂಸ ಗಾಳಿ ಬಿಸಲಿಕತ್ತು. ಸೂಸ ಗಾಳಿಗೆ ಮೈಮನಸ್ಸು ಎನೊ ಒಂಥರಾ ಆರಾಮ ಅನಿಸಿ ಈಡಿ ಬೋಗಿಯೊಳಗನು ಹುರುಪಿನ ವಾತವರಣ ಎಬ್ಬಿಸ್ತು. ಅಷ್ಟೊತ್ತನಕಾ ತಮ್ಮವರ ಅಗಲಿಕಿಯಿಂದ ಅತ್ತು ಬ್ಯಾಸರಾಗಿ ಕೂತವರು ಹವರಗ ನಿಚ್ಚಳಾಗಿ ಆಜು ಬಾಜುದವರ ಕಡೆ ಲಕ್ಷ ಹಾಕಲಿಕ್ಕೆ ಶುರು ಮಾಡಿದ್ರು. ಒಬ್ಬರಿಗೊಬ್ಬರು ಮುಖಾನೋಡಿ ಮುಗುಳ್ನಗಿಯಿಂದ ಮಾತುಗೊಳ ಶೂರು ಆದ್ವು.ತಾವ ತಂದಿದ್ದ ಬುತ್ತಿ ಮತ್ತ ಫಳಾರ ಒಬ್ಬರಿಗೊಬ್ಬರು ಹಂಚ್ಕೊಂಡ ತಿನಕೊತ ತಮ್ಮ ಊರಿನ ಮತ್ತ ಕೆಲಸ ಸುದ್ದಿ ಹೇಳ್ಕೊಳ್ಳಿಕತ್ತರು. ಅವರನ್ನ ನೋಡಿ ಇಗ ಸ್ವಲ್ಪ ಹೊತ್ತಿನ ಹಿಂದ ಸೀಟಿನ ಸಲುವಾಗಿ ಲಗ್ಗಿ-ಭಗ್ಗಿ ಜಗಳಾಡಿದವರು ಇವರ ಎನಂತ ನಂಗ ಆಶ್ಚರ್ಯ ಆತು. ಜೀವನದ ಈ ಪ್ರಯಾಣದೊಳಗ ನಮಗ ಎಷ್ಟ ಮಂದಿ ಭೆಟ್ಟಿ ಆಗತಾರ. ಮುಂದ ನಾವ ಯಾವತ್ತು ಅವರನ್ನ ನೋಡ್ಲಿಕ್ಕಾಗುದಿಲ್ಲಾ ಅಂತ ಗೊತ್ತಿದ್ರು ಮಾತಾಡಸ್ತೆವಿ, ಆತ್ಮೀಯ್ತೆ ಬೆಳಿಸ್ಕೊತೇವಿ,ಒಬ್ಬರಿಗೊಬ್ಬರು ಕಷ್ಟ-ಸುಖಾ ಹೇಳ್ಕೊತೇವಿ, ಕ್ಷಣದ ಅಂತರದಾಗ ಅಗಲಿ ನಮ್ಮ ನಮ್ಮ ದಾರಿಗೆ ನಾವ ಹೋಗಿಬಿಡತೇವಿ. ಆದರ ಆ ಆತ್ಮೀಯ ಘಳಿಗಿಯೊಳಗ ಸಿಕ್ಕಂಥಾ ನಮ್ಮತನಾ, ಆ ಹೊತ್ತಿಗೆ ನಮ್ಮ ಚಿಂತಿ,ಬ್ಯಾಸರಾ ಮರತು ಮನಸ್ಸಪೂರ್ತಿ ನಕ್ಕಂಥಾ ಅನುಭವದ ಸುಖಾ ಶಬ್ದದೊಳಗ ಹೇಳಲಿಕ್ಕಾಗುದಿಲ್ಲಾ.
ಯಾವದ ವಾಹನದಾಗ ಪ್ರಯಾಣಿಸಿದ್ರು, ಈ ರೈಲಿನ್ಯಾಗ ಪ್ರಯಾಣ ಮಾಡಿದ ಅನುಭವಾನ ಬ್ಯಾರೆ ಇರತದ. ಮುಂಬೈನ ಲೋಕಲ್ ಟ್ರೈನನ್ಯಾಗ ಅಡ್ಡ್ಯಾಡಿದ್ರಂತು ಮನಷ್ಯಾನ ಜೀವನದ ಯಾಂತ್ರಿಕತೆ ಮತ್ತ ಅನಿವಾರ್ಯತೆಗಳ ಅರಿವಾಗತದ. ಸ್ಟೇಷನ್ನಿನ್ಯಾಗ ಕೆಲವು ಕ್ಷಣಗೊಳ ಅಷ್ಟ ನಿಲ್ಲೊ ಆ ರೈಲನ್ನ ಹತ್ತಬೇಕಾದ್ರ ಜನಾ ಎಷ್ಟ ಸ್ವಾರ್ಥಿಗಳಾಗಿರತಾರಂದ್ರ ಇನ್ನೊಬರು ಕೇಳಗ ಬೀಳತಾರ ಅನ್ನೊ ಅರಿವಿರಲಾರಧಂಗೂಬ್ಬರಿಗೊಬ್ಬರು ದುಗಿಸಿ ಹತ್ತತಾರ. ಯಾಕಂದ್ರ ಮುಂಬೈಯೊಳಗ ಒಂದಕಡೆಯಿಂದ ಇನ್ನೊಂದ ಕಡೆ ಹೋಗ್ಬೇಕಂದ್ರ ಭಾಳ ಸಮಯ ಬೇಕಾಗತದ, ಹೊತ್ತಿಗೆ ಸರಿಯಾಗಿ ಹೋಗಿ ಮುಟ್ಟಬೇಕಾಗತದ.ಇದು ಅಲ್ಲಿಯ ಜನರ ಅನಿವಾರ್ಯ ಪರಿಸ್ಥಿತಿ ಅದ. ಆದ್ರ ಒಳಗ ಹತ್ತಿದಮ್ಯಾಲೆ ಒಳ್ಳೆತನಾನು ಅವರಲ್ಲಿರೊದು ನೋಡಬಹುದು.ಹಿಂಗ ದುಗಿಸ್ಯಾಡಿ ಮ್ಯಾಲೆ ಹತ್ತಿದವರನ ವಯಸ್ಸಾದವರಿಗೆ , ಮಕ್ಕಳಿಗೆ,ಗರ್ಭಿಣಿಯರಿಗೆ ಜಾಗ ಬಿಟ್ಟಕೊಟ್ಟಿದ್ದನ್ನ ನೋಡಿದ್ರ ವಿಚಿತ್ರ ಅನಿಸ್ತದ. ಹೊತ್ತಿಗೆ ಸರಿಯಾಗಿ ತಮ್ಮ ಮೆಟ್ಟಿಗೆ ಹೋಗೊದಿರ್ತದ ಅಷ್ಟ ಹೊರತು ಸಿಟ ಮ್ಯಾಲೆ ಕೂಡೊದು ಬಿಡೊದು ಅವರಿಗೆ ಮುಖ್ಯ ಇರಂಗಿಲ್ಲಾ. ಯಾವದಕ್ಕು ತಲಿ ಕೆಡಿಸ್ಕೊಳ್ಳಾರದ ಜನಾ, ಕುಡಲಿಕ್ಕೆ ಜಾಗಾ ಸಿಕ್ಕರು ಸರಿ ಇಲ್ಲಂದ್ರು ಸರಿ, ಕಿವಿ ಒಳಗ earphone ಇಟಗೊಂಡ ಹಾಡ ಕೇಳಕೊತ ಆರಾಮ ನಿಂತಿರತಾರ. ಹಿಂಗ ಒಂದ ಸಲಾ ನಾವು ಟ್ರೈನಿನ್ಯಾಗ ಬೋರಿವಲ್ಲಿಗೆ ಹೊಂಟಾಗ ನಡುವ ಸ್ಟೆಷನ್ನಿನ್ಯಾಗ ಈ ಬಳಿ ,ಸರಾ, ಕ್ಲಿಪ್ಪು, ಕಿವಿಯೊಳಗ ಹಕ್ಕೊಳೊವನ್ನ ಮಾರೊ ಹೆಣ್ಣ ಮಗಳು ಹತ್ತಿದ್ಲು. ತುಂಬಿದ ಬೋಗಿಯೊಳಗ ವ್ಯಾಪಾರ ಶೂರು ಮಾಡಿದ್ಲು. ಆಕಿ ಕೈಯ್ಯಾಗ ಒಂದ ಮೂರು ಟ್ರೇ ಇದ್ವು. ನಾವಿದ್ದ ಕಡೆ ಒಂದೆರಡ ಟ್ರೇ ಕೊಟ್ಟು ಬೋಗಿಯ ಇನ್ನೊಂದ ತುದಿಗೆ ಒಂದ ಟ್ರೇ ತಗೊಂಡ ಹೋದಳು. ಒಂದ ನಾಲ್ಕೈದ ಸಾಮಾನ ಯಾರರ ತಗದಿಟ್ಕೊಂಡ್ರು ಗೊತ್ತಾಗಲಾರದಷ್ಟ ಗದ್ದಲಿತ್ತ ಅಲ್ಲೆ. ನಂಗ ವಿಚಿತ್ರ ಆತು ಆಕಿನ್ನ ಮತ್ತ ಆಕಿಯ ವಿಶ್ವಾಸ ನೋಡಿ. ನಾನು ಸೂಕ್ಷ್ಮಾಗಿ ನೋಡಲಿಕತ್ತಿದ್ದೆ ,ಆದ್ರ ಅಲ್ಲಿದ್ದವರು ಮಾತ್ರ ತಮಗ ಯಾವದು ಬೇಕೊ ಅದನ್ನ ಆರಿಸಿಕೊಂಡ, ಪ್ರಾಮಾಣಿಕತನದಿಂದ ರೊಕ್ಕಾ ಮತ್ತ ಆಕಿ ಟ್ರೇ ಗಳನ್ನ ವಾಪಸಕೊಟ್ಟದ್ದನ್ನ ನೋಡಿ ಭಾಳ ಖುಷಿ ಅನಿಸ್ತು. ಹಿಂಗ ತಿನಸು,ಹಣ್ಣು, ಆಟಗಿಸಾಮಾನ ಮಾರೊವರು ಈ ಲೋಕಲ್ ಟ್ರೈನಿನ್ಯಾಗ ಆರಾಮಸೆ ತಮ್ಮ ವ್ಯಾಪಾರ ಮಾಡ್ಕೊಂಡ ಹೋಗತಾರ. ಹಂಗ ಮಾರಾಟ ಮಾಡ್ಲಿಕ್ಕೆ ಬಂದವರನ್ನ ಗಾಡಿಯೊಳಗ ಯಾರು ಅಲಕ್ಷ್ಯ ಮಾಡಂಗಿಲ್ಲಾ. ತಮಗ ನೀಗಿದ್ದ ಸಹಕಾರ ಕೊಟ್ಟು ಸಹಾಯ ಮಾಡತಾರ.
ಹೊಂಟಂಥಾ ಟ್ರೈನಿನಿಂದ ಜಿಗದು ಇಳಿಯೊ ಮತ್ತ ಹತ್ತೊ ಹೆಣ್ಣಮಕ್ಕಳನ ನೋಡಿದ್ರಂತು ನಂಗ ಭಾಳ ಆಶ್ಚರ್ಯ ಅನಿಸ್ತಿತ್ತು. ಮುಂಬೈನ ವೇಗದ ಜೀವನ ಇಂಥಾ ದಿಟ್ಟಾತನಾನ ಗಂಡು ಹೆಣ್ಣು ಭೇದ ಇಲ್ಲದನ ಕಲಿಸಿಬಿಟ್ಟಿರತದ. ಅಲ್ಲೆ ಎಲ್ಲಾರು ಎಷ್ಟ ವ್ಯಸ್ತ ಇರತಾರ ಅಂದ್ರ ಯಾರಿಗು ಯಾರ ಕಡೆನು ಲಕ್ಷ ಸುಧ್ಧಾ ಇರಂಗಿಲ್ಲಾ. ಬಾಜುಕ ಮಿಸ್ ವಲ್ಡ ಹೊಂಟಿದ್ರು ತಿರುಗಿ ನೋಡೊ ಅಷ್ಟು ಪುರಸೊತ್ತು ಯಾರಿಗು ಇರುದಿಲ್ಲಾ.
ಮೊದಲನೆ ಸರತೆ ನಾ ಮುಂಬೈ ಲೋಕಲ್ ಟ್ರೈನಿನ್ಯಾಗ ಹತ್ತಿದಾಗ ನನ್ನ ಸ್ಟೇಷನ ಬಂದಾಗ ಮುಂದಿದ್ದವರಿಗೆ ಸ್ವಲ್ಪ ಸರಿರಿ ನಾವ ಇಳಿಬೇಕು ಅಂದಾಗ ಯಾರು ಕೇಳ್ಸಲಾರಧಂಗ ನಿಂತಿದ್ರು ಆವಾಗ ಒಬ್ಬಾಕಿ ಹಣ್ಣ ಮಾರೊ ಹೆಣ್ಣಮಗಳು " ಅಗ ಬಾಯಿ ಅಸ ಸಾಂಗಿತಲೆತರ ಸರಕತ ನಾಹಿ ತ್ಯಾ, ಬರೊಬ್ಬರ ಧಕ್ಕಾ ದೇವುನಚ ಉತರಾಯಚ ಅಣಿ ಧಕ್ಕಾ ದೇವುನಚ ಚಡಾಯಚ." ಅಂದ್ಲು. ನಾ ಆಕಿನ್ನ ಆಶ್ಚರ್ಯದಿಂದ ನೋಡಿದೆ ಅಂಥಾ ಗಿಜಿ ಗಿಜಿ ಗದ್ದಲದಾಗು ತನ್ನ ಹಣ್ಣಿನ ಬುಟ್ಟಿ ಇಟಗೊಂಡ ವ್ಯಾಪಾರ ನಡಸಿದ್ಲು. ಕೊಲ್ಹಾಪೂರಿ ಸೀರಿ ಕಚ್ಚಿ ಹಾಕಿ ಉಟಗೊಂಡ, ಎತ್ತಿ ಕಟ್ಟಿದ್ದ ತುರುಬಕ್ಕ ಮಲ್ಲಿಗಿ,ಮರಗಾ ಕಟ್ಟಿದ್ದ ಮಾಲಿ ಸುತ್ತಿದ್ಲು. ಹಣಿಮ್ಯಾಲೆ ನಾಲ್ಕ ಅಣೆ ಅಗಲದ್ದ ದೊಡ್ಡ ಕುಂಕಮಾ ಹಚ್ಚಿ ಬಾಯಾಗ ಜಾರ್ದಾ ಎಲಿಅಡಕಿ ಹಾಕ್ಕೊಂಡ ಒಳೆ ಶಿಸ್ತ ಇದ್ದಳು. ಆ ಟ್ರೈನಿನ್ಯಾಗಿನ ಗದ್ದಲಾ ನೋಡಿ ನಮಗಂತು ಬ್ಯಾಸರಾಗಿತ್ತ. ಆದ್ರ ಆಕಿ ಮುಖದ ಮ್ಯಾಲೆ ಒಂದಚೂರು ಬ್ಯಾಸರದ ಕಳೆ ಇದ್ದಿಲ್ಲಾ. ನಕ್ಕೊತ ವೈನಿ ಮಾವಶಿ ಅನಕೊತ ವ್ಯಾಪಾರ ನಡಸಿದ್ಲು. ಈ ಹಣ್ಣ ಮಾರಾಕಿನ ಅಂತ ಅಲ್ಲಾ ಅಲ್ಲೆ ನೌಕರಿಗೆ ಅಂತ ಹೋಗಿ ಬರೊ ಹೆಣ್ಣಮಕ್ಕಳು ರಾತ್ರಿ ೧೧ ಗಂಟೆಕ್ಕ ನೋಡಿದ್ರುನು ಫ್ರೇಶ್ ಆಗಿನ ಇರತಿದ್ರು. ಯಾರ ಮಾರಿ ಮ್ಯಾಲೆನು ಜೊಭದ್ರ ಕಳೆ ಇರತಿದ್ದಿಲ್ಲಾ. ಮುಂಬೈ ನೀರಿನ ಪ್ರಭಾವನ ಹಂಗಿರತದ ಎನೊ.
ನಾ ನೋಡಿಧಂಗ ಅಲ್ಲಿ ಮಂದಿ ಭಾಳ ಕ್ರೀಯೆಟಿವ ಇರತಾರ. ಮುಂಬೈನ್ಯಾಗ ಮುಂಬಾದೇವಿ ಕಾಲಮುರಕೊಂಡ ಬಿದ್ದಾಳ ಅಲ್ಲೆ ಹೋದವರಿಗೆ ಅನ್ನಕ್ಕ ಕಡಮಿ ಇರುದಿಲ್ಲಾ ಅಂತಾರ, ಖರೆ ಅದ ಅಲ್ಲಿ ಮಂದಿ ಮನಿ ಮುಂದ ಬೆಳದ ಹುಲ್ಲಿನಿಂದನು ರೊಕ್ಕಾತಗಿತಾರ ಅನ್ನೊದಕ್ಕ ಸಾಕ್ಷಿ ಅಂದ್ರ ಅಲ್ಲಿಯ ಸಿದ್ದಿವಿನಾಯಕ ದೇವಸ್ಥಾನ ಮುಂದ ೨೧ ಕರಕಿಯ ಎಳಿಗಳ ಕಟ್ಟಿನ ಜೋಡಿ ಒಂದು ಕೆಂಪ ದಾಸವಾಳ ಹೂವ ಜೋಡಿಸಿ ಕಟ್ಟಿ ಮಾರತಿರತಾರ. ಮುಂಬೈಕ್ಕ ದುಡಿಲಿಕ್ಕಂತ ಹೋದವರೊಳಗ ಕೆಲಸ ಸಿಗಲಿಲ್ಲಾ ಅಂತ ವಾಪಸ ಬಂದವರ ಇಲ್ಲೆ ಇಲ್ಲಾ ಅನಿಸ್ತದ. ಆ ಮಹಾನಗರ ತನ್ನ ಕೈ ಚಾಚಿ ಬಂದವರನ್ನೆಲ್ಲಾ ತನ್ನ ಉಡಿಯೊಳಗ ಹಾಕ್ಕೊಂಡ ಸಲಹತದ. ಮುಂಬೈನ ಬಗ್ಗೆ ತಿಳಕೊಬೇಕಂದ್ರ ಅಲ್ಲಿಯ ಲೋಕಲ ಟ್ರೈನಿನ್ಯಾಗ ಅಡ್ಡ್ಯಾಡಬೇಕಂತಾರ ಅದು ಖರೆ ಅದ. ಜೀವನದ ಬ್ಯಾರೆ ಬ್ಯಾರೆ ರೂಪ ನೋಡಲಿಕ್ಕೆ ಸಿಗತದ. ಮಧ್ಯಮವರ್ಗದವರ ಮತ್ತ ದುಡಕೊಂಡ ಜೀವನಾ ಮಾಡತಿರೊ ಬಡವರ ಜೀವನದ ವಾಸ್ತವಿಕತೆ ಮತ್ತ ಅನಿವಾರ್ಯತೆಗೊಳೆನಂತ ಗೊತ್ತಾಗತದ. ಇವು ಯಾವುದು ನಂಗ ಸಂಭಂದ ಇಲ್ಲಾ ಅನ್ನೊಹಂಗ ತನ್ನ ಹೊಟ್ಟ್ಯಾಗ ಬಂದವರನ್ನ ಅವರವರ ಮುಕ್ಕಾಂಕ್ಕ ಮುಟ್ಟಿಸೊ ಜವಾಬ್ದಾರಿ ಹೊತ್ತಿರೊ ರೈಲ ಗಾಡಿಯ ಸ್ಥಿತಪ್ರಜ್ಞತೆಯಿಂದ ಕೂಡಿದ ಗಾಂಭಿರ್ಯ ನೋಡಿದ್ರ ಕರ್ತವ್ಯ ನಿಷ್ಠತೆಯ ಪ್ರತೀಕ ಅನಿಸ್ತದ.
******
ರೈಲು ಪಯಣದ ಅನುಭವದ ಲೇಖನ ಚೆನ್ನಾಗಿದೆ ಮೇಡಮ್…
ಭಾಳ ಚೊಲೊ ಅದ ಲೇಖನ -"ಅಗ ಬಾಯಿ ಅಸ ಸಾಂಗಿತಲೆತರ ಸರಕತ ನಾಹಿ ತ್ಯಾ, ಬರೊಬ್ಬರ ಧಕ್ಕಾ ದೇವುನಚ ಉತರಾಯಚ ಅಣಿ ಧಕ್ಕಾ ದೇವುನಚ ಚಡಾಯಚ" ಮುಂಬೈಗೆ ಹೋದಮ್ಯಾಲೆ ,ಮುಂದ ಹೋಗಬೇಕಂದ್ರ ನೂಕ್ಕಂಡ ಹೋಗಬೇಕು. ಒಮ್ಮೆ ಒಳ ಹೊಕ್ಕ ಮ್ಯಾಲೆ ನೀವ ಹೇಳಿದಂಗ ಎಲ್ಲಾ ಆರಾಂ ಇರ್ತದ
-ಅನಿಲ
suman avara chuku chuku rail lekhana bahala chennagide