ಪಂಜು-ವಿಶೇಷ

ಛಾಯಾಗ್ರಹಣ: ರಜನಿ ನಿಟ್ಟೆ

ನಾನು ಬೆಂಗಳೂರಿನ ತಂತಜ್ಞಾನ ಸಂಸ್ಥೆಯಲ್ಲಿ ಉದ್ಯೋಗಿ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪುಟ್ಟ ಹಳ್ಳಿ ನಿಟ್ಟೆ ನನ್ನೂರು. ನನಗೂ ಎಲ್ಲರಂತೆ ಬಿಡುವಿನ ವೇಳೆ ಕಳೆಯಲು ಕೆಲವು ಹವ್ಯಾಸಗಳು. ಸುಮಾರು ಐದಾರು ವರ್ಷಗಳಿಂದ ತುಂಬಾ ಆಸಕ್ತಿಯಿಂದ ಬೆಳೆಸಿಕೊಂಡು ಬಂದಿರುವ ಒಂದು ಮುಖ್ಯ ಹವ್ಯಾಸ ಛಾಯಾಗ್ರಹಣ. ಹಾಗೆಂದು ನಾನು ವ್ರತ್ತಿಪರ ಛಾಯಾಗ್ರಾಹಕಿಯೆಂದಾಗಲೀ ಅಥವಾ ಪರಿಣಿತೆ ಎಂದಾಗಲಿ ಅಂದುಕೊಳ್ಳಬೇಡಿ. ಮನಸ್ಸಿಗೆ ಇಷ್ಟವಾದದ್ದನ್ನು ನನಗೆ ತಿಳಿದಂತೆ ಸೆರೆಹಿಡಿಯುವುದಷ್ಟೇ ನನಗೆ ತಿಳಿದಿರುವುದು.   

ಛಾಯಾಗ್ರಾಹಕಿಯಾಗಿ ಪ್ರಕೃತಿ ಮತ್ತು ಜನಜೀವನದ ಚಿತ್ರಗಳನ್ನು ಸೆರೆಹಿಡಿಯುವುದು ನನಗೆ ತುಂಬಾ ಖುಷಿಕೊಡುವ ವಿಷಯ. ನಾನು ಛಾಯಾಗ್ರಹಣ ಶುರುಮಾಡಿದ್ದು ನನ್ನ ಕಾಲೇಜಿನ ದಿನಗಳಲ್ಲಿ ಒಂದು ಪುಟ್ಟ ರೋಲ್ ಕ್ಯಾಮರಾದ ಜೊತೆ. ಆ ಕ್ಯಾಮರಾ ಕೊಂಡವನು ನಮ್ಮಣ್ಣನಾದರೂ ಅದನ್ನು ಜಾಸ್ತಿ ಉಪಯೋಗಿಸಿದ್ದು ನಾನೇ ಅನ್ನಿ. ಆಗ ಸಾಮಾನ್ಯವಾಗಿ ಸೆರೆಹಿಡಿದದ್ದು ಕಾಲೇಜಿನ ಗೆಳೆಯ ಗೆಳತಿಯರ ಮತ್ತು ಪ್ರವಾಸದ ಚಿತ್ರಗಳನ್ನು.  

ಮುಂದೆ ಶಿಕ್ಷಣ ಮುಗಿಸಿ ಬೆಂಗಳೂರಲ್ಲಿ ಕೆಲಸಕ್ಕೆ ಸೇರಿದ ಮೇಲೆ ಒಂದು ಪುಟ್ಟ ಡಿಜಿಟಲ್ ಕ್ಯಾಮರಾ ಖರೀದಿಸಿದೆ. ಅಂದಿನಿಂದ ಸಮಾನಾಸಕ್ತ ಸಹೋದ್ಯೋಗಿಗಳು ಮತ್ತು ಗೆಳೆಯರೊಂದಿಗೆ ಹೋಗುತ್ತಿದ್ದ ಪ್ರವಾಸಗಳು ಮತ್ತು ಚಾರಣಗಳು ಛಾಯಾಗ್ರಹಣದ ಪ್ರಮುಖ ವೇದಿಕೆಗಳಾದವು. ನನ್ನ ಸ್ನೇಹಿತರು ಮತ್ತು ಸುತ್ತಮುತ್ತಲಿನ ಆತ್ಮೀಯರೇ ನನ್ನ ಚಿತ್ರಗಳ ವೀಕ್ಷಕರು ಮತ್ತು ವಿಮರ್ಶಕರು. ಛಾಯಾಗ್ರಹಣ ಬಲ್ಲ ಮಿತ್ರರಿಂದ ಕೆಲವೊಂದು ತಾಂತ್ರಿಕ ಸೂಕ್ಷ್ಮಗಳನ್ನು ಅರಿಯುತ್ತಿದ್ದೇನೆ. ಕೆಲವು ಸ್ನೇಹಿತರ ಮನೆಯ ಕಾರ್ಯಕ್ರಮಗಳು/ಸಮಾರಂಭಗಳ ಚಿತ್ರಗಳನ್ನೂ ಸೆರೆಹಿಡಿದಿದ್ದೇನೆ.

ಹೀಗೆ ನನಗಿಷ್ಟವಾದದ್ದನ್ನು ಸೆರೆಹಿಡಿದು ಆತ್ಮೀಯರಿಗೆ ತೋರಿಸುತ್ತೇನೆ ಮತ್ತು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ನಲ್ಲಿ ಅಪ್‌ಲೋಡ್ ಮಾಡುತ್ತೇನೆ. ಅಲ್ಲಿ ಗೆಳೆಯರ ಅಭಿಪ್ರಾಯಗಳು/ಸಲಹೆಗಳು/ಮೆಚ್ಚುಗೆಗಳು ನನಗೆ ಪ್ರೋತ್ಸಾಹ ನೀಡುತ್ತವೆ. ಇತ್ತೀಚಿನ ದಿನಗಳಲ್ಲಿ ಕ್ಯಾಮರಗಿಂತಲೂ ಮೊಬೈಲ್‌ನಲ್ಲಿ ಚಿತ್ರಗಳನ್ನು ಹಿಡಿಯುವುದು ಅಭ್ಯಾಸವಾಗಿಬಿಟ್ಟಿದೆ, ಯಾಕೆಂದರೆ ಅದನ್ನು ಉಪಯೋಗಿಸುವುದು ಸುಲಭ ಮತ್ತು ಚಿತ್ರಗಳನ್ನು ಹಂಚಿಕೊಳ್ಳುವುದೂ ಸುಲಭ.

ಸರಳ ಮಾತುಗಳಲ್ಲಿ ಹೇಳುವುದಾದರೆ ಛಾಯಾಗ್ರಹಣಕ್ಕೆ ಮುಖ್ಯವಾಗಿ ಬೇಕಾಗಿರುವುದು ಆಸಕ್ತಿ. ಎರಡನೆಯದಾಗಿ, ಕ್ಯಾಮರಾ, ಅದು ರೋಲ್ ಕ್ಯಾಮರಾ ಅಥವಾ ಡಿಜಿಟಲ್ ಕ್ಯಾಮಾರಾ ಅಥವಾ ಮೊಬೈಲ್ ಕ್ಯಾಮರಾವಾದರೂ ಆಗಿರಬಹುದು. ಮೂರನೆಯದಾಗಿ ಬೇಕಾಗಿರುವುದು ತಾಳ್ಮೆ.  ನಾಲ್ಕನೆಯದಾಗಿ ಬೇಕಾಗಿರುವುದು ಸುತ್ತಲಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುವ ಮನಸ್ಸು, ಐದನೆಯದಾಗಿ ಮತ್ತು ಕೊನೆಯದಾಗಿ ಬೇಕಾಗಿರುವುದು ನಾವು ಸೆರೆಹಿಡಿದ ಚಿತ್ರಗಳನ್ನು ಸುತ್ತಮುತ್ತಲಿನ ಸಮಾನಾಸಕ್ತ, ತಿಳಿದಿರುವ ಮಿತ್ರರೊಂದಿಗೆ ಹಂಚಿಕೊಂಡು ಅವರ ಅಭಿಪ್ರಾಯ ತಿಳಿದು ತಪ್ಪುಗಳನ್ನು ತಿದ್ದಿಕೊಳ್ಳುವುದು. ಈಗ ಛಾಯಾಗ್ರಹಣದ ಬಗ್ಗೆ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡು ಕಲಿಯುವ ಅವಕಾಶವಿದೆ. ಅಷ್ಟೇ ಅಲ್ಲದೆ ಛಾಯಾಗ್ರಹಣದ ಬಗ್ಗೆ ಓದಿ ತಿಳಿದುಕೊಳ್ಳುವುದು ಕೂಡ ಸಾಕಷ್ಟಿದೆ.  ಛಾಯಾಗ್ರಹಣವೂ ಕೂಡ ಒಂದು ಕಲೆ, ಅದರಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಷ್ಟು ಪ್ರಾವೀಣ್ಯತೆ ಪಡೆಯುತ್ತಾ ಹೋಗುತ್ತೇವೆ.

ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ, ಛಾಯಾಗ್ರಹಣದ  ಬಗ್ಗೆ, ಛಾಯಾಗ್ರಾಹಕದ ಬಗ್ಗೆ ಸಾಕಷ್ಟು ಮಾಹಿತಿಗಳು ಅಂತರ್ಜಾಲದಲ್ಲಿ ದೊರಕುತ್ತವೆ. ಆಸಕ್ತಿ ಇರುವ ಯಾರೇ ಆಗಲಿ ಈ ಮಾಹಿತಿಗಳನ್ನು ಉಪಯೋಗಿಸಿಕೊಂಡು ಒಳ್ಳೆಯ ಛಾಯಾಗ್ರಾಹಕರಾಗಬಹುದು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಛಾಯಾಗ್ರಹಣ: ರಜನಿ ನಿಟ್ಟೆ

 1. Dear Madam Rajani Nitte,

  A very useful artical for the upcoming and interested photographers.

  It appears you are not only good photographer but also a good narrator of your experience.

  Have not loaded any of photos taken by you ?.

  wish y ou good luck

  V N JOHSI

  A REGULAR READER OF PANJU MAGZINE.

   

Leave a Reply

Your email address will not be published. Required fields are marked *