“ಚೌಕಟ್ಟಿನಾಚೆ” ಒಂದು ತೌಲನಿಕ ಕೃತಿ: ಕೆ.ಎಂ.ವಿಶ್ವನಾಥ ಮರತೂರ


ಅನುಭವಗಳಾದರೆ ಅಕ್ಷರಗಳ ಜೊತೆಗೆ ಆಟವಾಡಬಹುದು. ನಮ್ಮೊಳಗೆ ಕಾಡಿದ ಅದೆಷ್ಟೊ ವಿಷಯಗಳಿಗೆ ಧ್ವನಿಯಾಗಬಹುದು. ಇಂತಹದ್ದೆ ಪ್ರಯತ್ನ “ಚೌಕಟ್ಟಿನಾಚೆ” ಕೃತಿ ಪ್ರಯತ್ನ ಮಾಡಿದೆ. ಸಮಾಜದಲ್ಲಿರುವ ಅನೇಕ ವಿಷಯಗಳು ಸಮಯ ಬಂದಂತೆ ನಮಗೆ ಕಾಡಲಾರಂಭಿಸುತ್ತವೆ ಅವಶ್ಯಕ ಮತ್ತು ಅನಾವಶ್ಯಕ ಎನ್ನುವ ವಿಚಾರಗಳತ್ತ ತೊಳಲಾಡುತ್ತವೆ. ಯಾವುದು ಸರಿ ಯಾವುದು ತಪ್ಪು ಎನ್ನುವ ವಿಚಾರದತ್ತ ವಿನಮಯದತ್ತ ಕೇಂದ್ರಿಕೃತವಾಗುತ್ತವೆ. ಇಂತಹ ವಿಚಾರಗಳತ್ತ ಹೊರಳುವುದೇ “ಚೌಕಟ್ಟಿನಾಚೆ” ಕೃತಿಯ ಮುಖ್ಯ ಉದ್ದೇಶವಾಗಿದೆ.

ಲೇಖಕರು ತಮ್ಮ ಲೇಖನಗಳ ಮೂಲಕ ಬೀದರ ಜಿಲ್ಲೆಯ ಸಾಹಿತ್ಯದ ಕೊಡುಗೆ ಅದರ ಆಳ ಅಗಲ ತಿಳಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಬೀದರನ ಸಾಂಸ್ಕೃತಿಕ ವೈಭವವನ್ನು ತೆರೆದಿಡುವ ಮೂಲಕ ತಾವು ಬೀದರಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ರಾಯಭಾರಿಯಾಗಿ ನಾಡಸೇವೆಯಲ್ಲಿ ನೈಜತೆ ಮೆರೆಯಲು ಪ್ರಯತ್ನಿಸಿದ ಬಗೆಯೂ ಉಲ್ಲೇಖಿಸಿದ್ದಾರೆ. ಬೀದರ ಜಿಲ್ಲೆಯ ವಿಶಿಷ್ಠತೆ ವಚನ ಸಾಹಿತ್ಯ ಪ್ರಭಾವ, ವಚನಕಾರರು ಈ ಜಗತ್ತಿಗೆ ನೀಡಿದ ಕೊಡುಗೆಯನ್ನು ಹಿಡಿದಿಡುವ ಪ್ರಯತ್ನ ಕೃತಿಯ ಲೇಖಕರು ಮಾಡಿದ್ದಾರೆ.

ವಚನ ಮತ್ತು ಕಾಯಕ ಮಹತ್ವ ತಿಳಿಸುವ ಮೂಲಕ ಅನುಸರಣೆ ಎಷ್ಟು ಅವಶ್ಯಕವಾಗಿದೆ ಎಂಬುವುದನ್ನು ತೋರ್ಪಡಿಸುವ ಪ್ರಯತ್ನ ಮಾಡಲಾಗಿದೆ. ಜಾನಪದದ ಮೂಲಕ ಸಾಹಿತ್ಯ ಮತ್ತು ಸಾಂಸ್ಕøತಿಕ ಲೋಕ ಹೇಗೆ ವಿಭಿನ್ನ ಹಾಗೂ ವೈಶಿಷ್ಠತೆ ಮರೆಯುತ್ತದೆ ಎನ್ನುವುದನ್ನು ಪ್ರಯತ್ನಿಸಿದ್ದಾರೆ. ಲೇಖಕರಾದ ಸಂಜೀವಕುಮಾರ ಅತಿವಾಳೆ ಮೂಲತ: ಶಿಕ್ಷಕರಾಗಿದ್ದು ಶಿಕ್ಷಣ ವೃತ್ತಿಯ ಬಗೆಗೆ ಹಾಗೂ ಶಿಕ್ಷಣದ ಮಹತ್ವದ ಬಗೆಗೆ, ವಿಧ್ಯಾರ್ಥಿಯ ಜೀವನದ ಬಗೆಗೆ, ಬೆಳಕು ಚೆಲ್ಲುವ ವಿಚಾರ ಮಾಡಿದ್ದಾರೆ. ಯುವಜನರನ್ನು ಹುರಿದುಂಬಿಸುವ ಮಾತುಗಳನ್ನು ಅತ್ಯಂತ ನಮ್ಯವಾಗಿ ಆಡಿದ್ದಾರೆ.

ಈ ಕೃತಿಯು ಕೆಲವು ಸಾಹಿತಿಗಳ ನುಡಿಚಿತ್ರ ಹೊಂದಿದ್ದು, ಅವರ ಜೀವನ ಸಾಹಿತ್ಯ ಸಾಧನೆ ಒಳಗೊಂಡಿರುವುದು ವಿಶೇಷವಾಗಿದೆ. ಸಂಜೀವಕುಮಾರ ಅತಿವಾಳೆ ಈಗಾಗಲೇ ಸಾಹಿತ್ಯ ಸಂಘಟಕ ಎನ್ನುವ ಬಿರುದಿನೊಂದಿಗೆ ಬೀದರ ಜಿಲ್ಲೆಯಾದ್ಯಾಂತ ಅನೇಕ ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಸಾಹಿತ್ಯ ಸೇವೆ ಮಾಡಿದ್ದಾರೆ. ಅದರ ಒಟ್ಟಾರೆ ಅನುಭವಗಳನ್ನು ತಮ್ಮ ಮೊದಲ ಕೃತಿಯಲ್ಲಿ ಸೂಕ್ಷ್ಮವಾಗಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ನೋವುಗಳ ಜೊತೆಗೆ ನಲಿವಿನ ಸಂಬಂಧವನ್ನು ಪದಗಳಲ್ಲಿ ಹಿಡಿದಿಡುವಲ್ಲಿ ಕೃತಿ ಯಶಸ್ವಿಯಾಗಿದೆ. ಲೇಖಕರು ಇನ್ನಷ್ಟು ಹಿರಿಯರ ವೈಚಾರಿಕ ಲೇಖನಗಳು, ನುಡಿಚಿತ್ರಗಳು ,ಪ್ರಬಂಧಗಳ ಅಧ್ಯಯನ ನಡೆಸಿದರೆ ಇನ್ನಷ್ಟು ಮೌಲಿಕ ಕೃತಿಗಳ ಇವರ ಲೇಖನಿಯ ಮೂಲಕ ಹೊರಬರುವುದರಲ್ಲಿ ಯಾವ ಸಂದೇಹವು ಇಲ್ಲ.

ಈ ಕೃತಿಯ ಲೇಖಕರು, ಸಂಜೀವಕುಮಾರ ಅತಿವಾಳೆ ಬೀದರ ನಾಡಿನ ಚಿರಪರಿಚಿತ ಸಾಹಿತ್ಯ ಸಂಘಟಕ ಇದೀಗ ವೈಚಾರಿಕ ಲೇಖನಗಳನ್ನು ಬರೆಯುವ ಮೂಲಕ ಬರಹಗಾರನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮೊದಲ ಕೃತಿಯಲ್ಲಿಯೇ ಪದಗಳ ಮೋಡಿ ಮಾಡಿದ್ದಾರೆ. ಇವರಿಂದ ಮುಂದಿನ ದಿನಗಳಲ್ಲಿ ಭರವಸೆಯ ಬರವಣಿಗೆ ನಿರೀಕ್ಷಿಸಬಹುದಾಗಿದೆ.

ಈ ಕೃತಿಗೆ ಶಕ್ತಿ ತುಂಬಿದ್ದು ಇದರ ಮುನ್ನುಡಿ ನಾಡಿನ ಹೆಸರಾಂತ ಸಾಹಿತಿ ಕುಷ್ಟಗಿ ಸರ್ ಬರೆದಿದ್ದಾರೆ. ಅವರ ಜಾಣತನದ ಮಾತಿನ ಮೂಲಕ ಕೃತಿಯ ಪರಿಚಯ ಮಾಡಿದ್ದಾರೆ. ಕೃತಿಯು ಸಂಶೋಧನಾ ಹಾದಿಯಲ್ಲಿದ್ದು ಅದರ ಮುಂದಾಲೋಚನೆಯನ್ನು ಕೃತಿಕಾರ ಮಾಡಿದರೆ ಹೆಚ್ಚು ಬರೆಯಬಲ್ಲ ಶಕ್ತಿಯಿದೆ ಎಂದೆನಿಸುತ್ತದೆ. ಕೃತಿಯೊಳಗೆ ಬಳಸಲಾದ ಪ್ರಾದೇಶಿಕತೆ ಕೃತಿಯ ಜೀವಾಳವಾಗಿದೆ. ಅದ್ಯಾವುದೇ ಮುಲಾಜಿಗೆ ಒಳಗಾಗದೆ ಪದಬಳಕೆಯಲ್ಲಿ ಹಿಂಜರಿಯದೇ ಅತ್ಯಂತ ಘಟ್ಟಿ ವಿಚಾರಗಳನ್ನು ಎತ್ತಿಕೊಂಡು ಬರವಣಿಗೆ ರೂಪ ಕೊಡಲಾಗಿದೆ. ಮನಸ್ಸುಗಳನ್ನು ತಿಳಿಗೊಳಿಸುವ ಪ್ರಯತ್ನವನ್ನು ಲೇಖಕರು ಪ್ರಮಾಣಿಕವಾಗಿ ಮಾಡಿದ್ದಾರೆ. “ಚೌಕಟ್ಟಿನಾಚೆ” ಕೃತಿಯು ಯುವ ತಲೆಮಾರಿನ ಓದುಗರ ಮನಗೆಲ್ಲಬಲ್ಲ ಶಕ್ತಿ ಹೊಂದಿದ್ದು, ಒಂದು ತೌಲನಿಕ ಕೃತಿಯಾಗಿದೆ.

-ಕೆ.ಎಂ.ವಿಶ್ವನಾಥ ಮರತೂರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x