ನವೆಂಬರ್ ತಿಂಗಳ ಚುಮು ಚುಮಿ ಚಳಿಯಲ್ಲಿ ಮಲೆನಾಡಿನಿಂದ ತಂದ ಕೊಟ್ಟೆ ಕಂಬಳಿಯ ಒಳಗೆ ಬೆಚ್ಚಗೆ ಮಲಗಿ ಸುಖ ನಿದ್ರೆಯಲ್ಲಿ ತೇಲುತ್ತಿದ್ದೆ, ಮಲಗಿದ್ದವನನ್ನು ಬಡಿದೆಬ್ಬಿಸುವಂತೆ ಒಂದೇ ಸಮನೆ ನನ್ನ ಮೊಬೈಲ್ ಕೂಗಿಕೊಳ್ಳತೊಡಗಿತು, ಈ ಹಾಳ್ ಮೊಬೈಲು ನನ್ ನಿದ್ದೆ ಹಾಳ್ ಮಾಡಕ್ಕೇ ಇರದೇನೋ ಅನ್ನೋವಷ್ಟು ಸಿಟ್ಟು ಬಂದಿತ್ತು ಆ ಮೊಬೈಲ್ ಮೇಲೆ, ಕೋಪದಿಂದ ಅದರ ಕಡೆಗೆ ತೀಕ್ಷ್ಣ ದೃಷ್ಠಿಯನ್ನು ಬೀರಿ ಅದನ್ನು ಕೈಗೆತ್ತಿಕೊಂಡು, ಬಡ್ಕೋತಿದ್ದ ಅಲಾರಾಂ ಅನ್ನು ಆಫ್ ಮಾಡಿಟ್ಟೆ, ಟೈಂ ಆಗ್ಲೇ ಏಳು ಗಂಟೆ ಮೀರಿತ್ತು, ಅಯ್ಯೋ ಟೈಂ ಆಗೋಯ್ತಲ್ಲಪ್ಪಾ ಅನ್ಕೊಂಡ್ ಬೇಗಬೇಗನೇ ನಿತ್ಯಕರ್ಮಗಳನ್ನೆಲ್ಲಾ ಮುಗ್ಸಿ ಆಫೀಸ್ ಕಡೆ ಹೊಂಟೆ.
ಮಾಮೂಲಿ ತರಾನೇ ದಿನಾ ನನ್ ಜೊತೆ ಬರೋ ಫ್ಲಾಪಿಬಾಯ್ ಅವತ್ತೂ ಲೇಟಾಗೇ ಬಂದ, ಯಾಕ್ಲಾ ಲೇಟು ಅಂದಿದ್ದಕ್ಕೆ ಅಯ್ಯೋ ಈ ಚಳೀಗೇ ನಿದ್ದೆಂ ಇಂದಾ ಏಳಕ್ಕೇ ಆಗಲ್ಲ ಕಣಲೇ, ಈ ಕೆಲ್ಸಾ ಅನ್ನದ್ನಾ ಯಾವನ್ ಕಂಡಿಡುದ್ನೋ ಅವ್ನ್ ನಮ್ ಕೈಗೆ ಸಿಕ್ರೆ ಅವ್ನ್ ಕಿವೀಲ್ ರಕ್ತ ಬರೋ ಹಂಗೆ ಬೈದು ಮಾತಲ್ಲೇ ಅವ್ನಾ ಮರ್‍ಡರ್ ಮಾಡ್ಬೇಕು ಅಂತಾ ಅನ್ಕಂಡ್ ಆಫೀಸ್ ಕಡೆ ಹೆಜ್ಜೆ ಹಾಕಂಡ್ ಹೊಂಟ್ವಿ, ಪಾಪ ನನ್ನಂಗೇ ಅವ್ನಿಗೂ ಇವತ್ತು ಮನೇಲಿ ಟಿಫನ್ ಆಗಿರ್‍ಲಿಲ್ಲಾ ಅನ್ಸತ್ತೆ ಅವ್ನೂ ಬೈಕಂಡೇ ಬರ್‍ತಿದ್ದ, ಅವ್ನ್ ಜೊತೆ ಈ ಚಳೀ ನಲ್ಲಿ ಅರಾಮಾಗಿ ನಿದ್ದೆ ಮಾಡದ್ ಬಿಟ್ಟು ಕೆಲ್ಸಕ್ ಹೋಗದೇ ಬೋರು ಮಾರಾಯ ಅನ್ಕಂಡ್ ಹೋಗ್ತಿದ್ವಿ, ಆಗ್ಲೇ ಬಿ.ಬಿ.ಎಂ.ಪಿ. ಕೆಲ್ಸಾ ಮಾಡೋ ಆಂಟಿಗಳೆಲ್ಲಾ ಬೆಳಗ್ಗೆ ಬೆಳಗ್ಗೇನೇ ಎಲೆ ಅಡ್ಕೇ ಹಾಕಂಡ್ ರೋಡಲ್ಲಿ ಕಸಾ ಗುಡುಸ್ತಾ ಇದ್ರು, ಆ ಕಸಾ ಗುಡಿಸೊರ್ ಗುಂಪಲ್ಲಿ ಸುಮಾರು ೧೦-೧೨ ವರ್ಷದ ಹುಡ್ಗಾ ಒಬ್ಬ ನಮ್ ಫ್ಲಾಪಿ ಕಣ್ಣಿಗ್ ಬಿದ್ದಾ, ಯಪ್ಪಾ ಈ ಚಳೀಲಿ ನಮ್ಗೇ ಕೆಲ್ಸಾ ಮಾಡಕ್ಕೆ ಉರ್‍ದೋಯ್ತದೆ ಅಂತದ್ರಲ್ಲಿ ಈ ಹುಡ್ಗಾ ನೋಡೋ ಹೆಂಗ್ ಕೆಲ್ಸಾ ಮಾಡ್ತಾವ್ನೇ ಅಂದ ಫ್ಲಾಪಿ………, ಯಾರಪ್ಪಾ ಅದೂ ಅಂತಾ ನಾನು ಆಕಡೇನೇ ನೋಡ್ದೇ, ಅಲ್ಲೊಬ್ಬ ಹುಡ್ಗಾ ಪರ್‍ಕೇನಾ ಸ್ಪೀಡಾಗಿ ಬರ ಬರ ಬರಾ ಅಂತಾ ಒಳ್ಳೇ ಜಾಕೀ ಚಾನ್ ಸ್ಟೈಲ್ ನಲ್ಲಿ ಕಸ ಗುಡುಸ್ತಾ ಇದ್ದ, ಲೇ ಅವ್ನು ಬಿ.ಬಿ.ಎಂ.ಪಿ ಯವ್ನು ಅಲ್ಲಾ ಲೇ, ಅಲ್ಲೇ ಪಕ್ಕದಲ್ಲಿದ್ದ ಹೋಟೆಲ್ ಹುಡ್ಗಾ ಕಣೋ ಅಂದೆ. ಥೂ ಈ ಫಾಸ್ಟ್ ಫುಡ್‌ಓನರ್ ಗಳು ಅದೇನ್ ಜನಾನಪ್ಪಾ ಇಷ್ಟು ಸಣ್ ಸಣ್ ಹುಡ್ಗೂರ್‍ನ ಹಿಂಗ್ ಕೆಲ್ಸಾ ಮಾಡುಸ್ತಾರಲ್ಲಾ ಅನ್ಕಂಡ್ ಟಿಫನ್ ಮಾಡಣಾ ಅಂತಾ ಇಬ್ರೂ ಅದೇ ಹೋಟಲ್‌ಗೋದ್ವಿ ಟೋಕನ್ ತಗಂಡ್ ತಿಂಡಿ ತರೋಣಾ ಅಂತಾ ಕೌಂಟರ್ ಕಡೆಗೆ ಹೋದ್ವಿ, ತಿಂಡಿ ತಗೋಳೋವಾಗ ಮಾಮೂಲಿ ಕಪಿ ಚೇಷ್ಟೆಯಂತೆ ಕಿಚನ್ ನೀಟಾಗಿದ ಇದೆಯೋ ಇಲ್ವೋ ಅಂತಾ ನೋಡಕ್ಕಂತಾ ಕಿಚನ್ ಒಳಗೆ ಇಣುಕಿ ನೋಡಿದ್ವಿ……..
ಆದ್ರೆ ಅಲ್ಲಿ ಗಲೀಜನ್ನಾ ಗಮನಿಸೋದಕ್ಕಿಂತಾ ಹೆಚ್ಚಿಗೆ ಅಲ್ಲಿ ಕೆಲ್ಸಾ ಮಾಡ್ತಿದ್ ಹುಡುಗ್ರು ಕಡೆ ನನ್ನ ಗಮನ ಜಾಸ್ತಿ ಹೋಯ್ತು ಅಲ್ಲಿ ವಯಸ್ಕರಿಗಿಂತಲೂ ೧೩-೧೪ ವರ್ಷದ ಹುಡುಗ್ರು ಕೆಲ್ಸಾ ಮಾಡ್ತಾ ಇದ್ರು……. ಹಾಗೇ ತಿಂಡಿ ತಗಂಡು…. ಅಲ್ಲಿ ಪ್ಲೇಟ್ ಇಟ್ಟುಕೊಂಡು ತಿನ್ನಲು ಅಂತನೇ ಇರೋ ಟೇಬಲ್ ಸ್ಟಾಂಡ್ ಹತ್ರ ಹೋದ್ವಿ, ಅಲ್ಲಿ ತಿಂದು ಖಾಲಿಯಾಗಿದ್ದ ಪ್ಲೇಟ್ ಗಳನ್ನು ಇನ್ನೂ ಎತ್ತಿರೋದನ್ನು ನೋಡಿ ಯಾವ ಸ್ಟಾಂಡ್ ಖಾಲಿಯಾಗಿದೆ ಅಂತಾ ಹಂಗೇ ಕಣ್ಣಲ್ಲೇ ಸ್ಕ್ಯಾನ್ ಮಾಡ್ತಾ ಇದ್ವಿ…… ನಾನ್ ಏನ್ ನೋಡ್ತಾ ಇದಿವಿ ಅಂತಾ ಕ್ಯಾಷಿಯರ್‍ಗೆ ಗೊತ್ತಾಯ್ತು ಅನ್ಸತ್ತೆ, ಅವ್ನು ಕೂತಲ್ಲಿಂದಾನೇ ಲೇ ಯಾರೋ ಅಲ್ಲಿ ಏನ್ ಮಾಡ್ತಾ ಇದರೋ ಒಳ್ಗೆ ಆ ಖಾಲಿ ಫ್ಲೇಟ್ ಎತ್ಕಳ್ರೋ ಬಂದು ಅಂದಾ……. ಅಷ್ಟ್ರಲ್ಲೇ ಒಂದ್ ಹುಡ್ಗಾ ಬಂದು ಖಾಲಿ ಪ್ಲೇಟ್ ಎತ್ಕಂಡು, ಯಾವನೋ ಒಳ್ಳೇ ಸಣ್ ಮಕ್ಳು ತರ ಕೆಳಗೆಲ್ಲಾ ಚೆಲ್ಲಿದ್ದ ತಿಂಡೀನಾ ಅದೇ ಪ್ಲೇಟ್ ಗೆ ಬಟ್ಟೇಲಿ ಎಳ್ಕಂಡು ಕ್ಲೀನ್ ಮಾಡ್ತಾ ಇದ್ದಾ, ಅಪ್ಪೀ ಯಾವೂರೋ ನಿಂದು ಅಂದೆ ಅದ್ಕವನು, ಹಾಸ್ನ ಕಣಣ ಅಂದಾ, ಅಲ್ವೋ ಈ ವಯಸ್ಸಿಗೇ ಕೆಲ್ಸಾ ಮಾಡಕ್ಕೆ ಅಲ್ಲಿಂದಾ ಬೆಂಗ್ಲೂರ್ ವರ್‍ಗೂ ಬಂದಿದಿಯಲ್ಲೋ ಯಾಕೋ ಓದ್ಕೊಂಡು ಊರಲ್ಲೇ ಇದ್ದಿದ್ರೆ ಆಗ್ತಿರ್‍ಲಿಲ್ವಾ ಅಂದೆ, ಅಯ್ಯೋ ಏನ್ ಮಾಡೋದ್ ಸರ್, ಎಸ್ಸೆಲ್ಸಿ ಪೇಲ್ ಆದ್ಮೇಲೆ ಊರಲ್ಲಿದ್ದು ಏನ್ ಮಾಡ್ಲಿ ಅಂತಾ ಕೆಲಸಕ್ಕೇ ಸೇರ್‍ಕಳನಾ ಅಂತಾ ಇಲ್ಲಿ ಬಂದು ಕೆಲ್ಸಾ ಮಾಡ್ತಾ ಇದಿನಿ ಅಂತಾ ಬಾಯಲ್ ಹೇಳ್ತಾ ಇದ್ರೂ…….. ಇವ್ನಿಗ್ಯಾಕೆ ನನ್ ವಿಷ್ಯಾ, ಮುಚ್ಕಂಡ್ ಇವ್ನ್ ಕೆಲ್ಸಾ ಇವ್ನ್ ನೋಡ್ಕಂಡ್ ಹೋಗಕ್ಕೇ ಅನ್ನೋ ತರಾ ಇತ್ತು ಅವ್ನ್ ನೋಟ್…….. ಆ ನೋಟದ ಅರ್ಥಾ ನಮ್ ಫ್ಲಾಪಿಗೂ ಗೊತ್ತಾಯ್ತು ಅನ್ನುಸ್ತದೆ "ಹ್ಹಿ ಹ್ಹಿ ಹ್ಹಿ…….. ನಿಂಗ್ಯಾಕಲೇ ಬೇಕಿತ್ತು ಅವ್ನ ವಿಷ್ಯಾ ಸುಮ್ನೇ ತಿಂಡೀ ತಿನ್ನೋ ಇಲ್ಲಾ ಅಂದ್ರೆ ಇಡ್ಲಿ ಬಿಸಿ ಆರಿ ಹೋಗಿ ತಿನ್ನಕ್ಕಾಗಲ್ಲಾ" ಅಂದಾ……. ಹಂಗಲ್ಲಾ ಕಣಲೇ ಈ ಚಳಿನಲ್ಲಿ ಈ ಏಜ್ ನಲ್ಲಿರೋ ನಮ್ಗೇ ಕೆಲ್ಸಾ ಮಾಡಕ್ಕಾಗಲ್ಲಾ……. ಅಂತದ್ರಲ್ಲಿ ಪಾಪಿ ಇನ್ನೂ ಚಿಕ್ಕ ಹುಡುಗರು ಹೆಂಗೋ ಕೆಲ್ಸಾ ಮಾಡ್ತಾರೇ…… ನೀನೇ ಕೆಲ್ಸಾ ಮಾಡೋ ಅಂದ್ರೆ ನೂರೆಂಟು ನೆವ ಹೇಳ್ಕಂಡ್ ಅಂತದ್ರಲ್ಲಿ ಪಾಪ ಅವ್ರ ಪಾಡೇನೋ ಅಂತಾ ಪೆಚ್ಚು ಮಕಾ ಮಾಡ್ಕಂಡ್ ಅವನ ಕಡೇ ನೋಡ್ದೇ… ಹ್ಮೂಂ ಹೌದು ಕಣೋ ನೀನ್ ಹೇಳೋದ್ ಸರಿ ಪಾಪ ಚಿಕ್ಕವಯಸ್ಸಿನ ಮಕ್ಕಳು ಕೆಲ್ಸಾ ಮಾಡೋದ್ ನೋಡ್ತಾ ಇದ್ರೆ ನಂಗೂ ಒಂತರಾ ಆಗ್ತದೆ ಅಂದ ಅಷ್ಟೊತ್ತಿಗೆ ಹೋಟೆಲ್‌ಗೆ ದಿನಸಿ ಪದಾರ್ಥ ಹಾಕೊಂಡ್ ಒಂದು ಲಗೇಜ್ ಆಟೋ ಬಂತು, ಕ್ಯಾಷಿಯರ್ ಜೋರಾಗಿ ಲೋ ಐಟಂ ಬಂತು ಇಳುಸ್ಕರ್ರೋ ಅಂತ ಬೊಬ್ಬೆ ಹಾಕಿದ.. ಇಳುಸ್ಕಳಕ್ಕೆ ಅಂತಾ ಅದೇ ಏಜ್‌ನ ಹುಡುಗರು ಬಂದ್ರು…….. ಪಾಪ ಅವ್ರು ಹೊರಲಾರದೇ ಹೊರ್‍ತಿದ್ದ ಮೂಟೆಗಳನ್ನು ಹೊರುವಾಗ ಅವ್ರ ಮುಖದಲ್ಲಿ ಕಾಣ್ತಿದ್ದ ಆಯಾಸವನ್ನು ನಾವಿಬ್ಬರೂ ಅಸಹಾಯಕರಾಗಿ ನೋಡ್ತಾ ಇದ್ವಿ, ತಿಂಡಿ ತಿಂದು ಹೊರಟಮೇಲೆ,
ಲೋ ಅಲ್ಲಾ ಕಣೋ ಸರ್ಕಾರ ಬಾಲಕಾರ್ಮಿಕ ಪದ್ದತಿ ವಿರೋದಿ ನೀತಿ ಜಾರಿಗೆ ತಂದ್ರೂ ಪಾಪ ಇಂತಾ ಹುಡುಗ್ರು ಕೆಲ್ಸಾ ಮಾಡೋದು ತಪ್ಪಿಸಕ್ಕಾಗಿಲ್ವಲ್ಲೋ ಅಂದೇ ಹೌದು ಕಣೋ ಸರ್ಕಾರ ಏನೋ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೆ ಅಂತಾ ರೂಲ್ಸ್ ಮಾಡಿದ್ರೂ ಸರ್ಕಾರಾನೇ ಎಷ್ಟು ಅಂತಾ ಹುಡ್ಕೀ ಹುಡ್ಕೀ ಇಂತೋರ್‍ನಾ ಬಚಾವ್ ಮಾಡಕ್ಕಾಗುತ್ತೆ, ಇದಕ್ಕೆ ಜನಗಳ ಸಪೋಟೂ ಬೇಡ್ವಾ ?? ಅದಲ್ಲದೇ ಪಾಪ ಆ ಹುಡುಗ್ರ ಪರಿಸ್ಥಿತಿನೂ ನೋಡ್ಬೇಕಲ್ವೇನೋ, ಅವ್ರ್ ಮನೇಲಿ ಏನ್ ಕಷ್ಟ ಇರುತ್ತೋ ಏನೋ ಅವ್ರ್ದೂ ಹೊಟ್ಟೆ ಪಾಡು ಅಲ್ವೇನೋ ಅಂದಾ ಫ್ಲಾಪಿ, ಆದ್ರೂ ಪಾಪ ಕಣೋ ಆಡೋ ವಯಸಲ್ಲಿ, ಮನೆಯವರ ಕಷ್ಟಕ್ಕೋಸ್ಕರಾನೋ, ಓದನ್ನು ಅರ್ಧಕ್ಕೆ ನಿಲ್ಲಿಸಿ, ಓನರ್ ಗಳ ಕೈಲಿ ಬೈಗುಳದ ಮಳೆಯನ್ನೇ ಸುರಿಸಿಕೊಂಡು, ಬೇರೆ ವಿದಿಯಿಲ್ಲದೇ, ಅವ್ರು ಕೊಡೋ ಕಡಿಮೇ ಸಂಬಳಕ್ಕೆ ಕತ್ತೆ ದುಡಿದ ಹಾಗೇ ದುಡಿಯೋ ಮಕ್ಕಳನ್ನು ನೋಡಿದ್ರೆ ತುಂಬಾ ಬೇಜಾರಾಗುತ್ತೆ ಆ ವಯಸ್ಸಿನ ಮಕ್ಕಳನ್ನ ಕೆಲಸಕ್ಕೆ ತಗೊಂಡು ಅವ್ರತ್ರ ಅಂತಾ ಕೆಲಸಾ ಮಾಡ್ಸೋರಿಗೆ ಏನಾದ್ರೂ ಮಾಡ್ಬೇಕು ಕಣೋ ನಾವಿಬ್ರೂ ಅಂದೇ ಹೌದು ಕಣೋ… ಇಂತಾ ಓನರ್ ಗಳ್ಗೆ ಸರ್ಯಾಗ್ ಬುದ್ದಿ ಕಲುಸ್ಬೇಕು, ಇಂತೋರ್‍ಗೆಲ್ಲಾ ಚೈಲ್ಡ್ ಲೇಬರ್ ಕಮಿಟಿಯವರಿಗೆ ಕಂಫ್ಲೆಂಟ್ ಕೊಟ್ಟು ಜೈಲಿಗೆ ಹಾಕುಸ್ಬೇಕು ಅಂದಾ, ಲೋ ಅದೆಲ್ಲಾ ವರ್ಕೌಟ್ ಆಗಲ್ಲಾ ಕಣೋ, ಅವ್ರೆಲ್ಲಾ ಫೈನ್ ಕಟ್ಟಿ ಏನೂ ಶಿಕ್ಷೆ ಇಲ್ಲದೇ ಆರಾಮಾಗ್ ಹೊರ್‍ಗಡೆ ಬಂದ್ ಬಿಡ್ತಾರೆ, ಚಿಕ್ಕಮಕ್ಕಳ ಕೈಲೆ ಕೆಲಸ ಮಾಡಿಸೊರಿಗೆ ಕಠಿಣ ಶಿಕ್ಷೆ ಇರೋ ಅಂತಾ ಕಾನೂನು ಜಾರಿಯಾಗಬೇಕು, ಈ ನಿಟ್ಟಿನಲ್ಲಿ ನಾವೇನಾದ್ರೂ ಮಾಡ್ಬೇಕು, ಇದಕ್ಕಾಗಿಯೇ ಒಂದು ಸಂಘಟನೆ ಕಟ್ಟೋಣ, ಬೀದಿಗಿಳಿದು ಪ್ರತಿಭಟನೆ ಮಾಡಿ ನಾವೇ ಇಂತಾ ಕಡೇಗೆಲ್ಲಾ ರೈಡ್ ಮಾಡಿ, ಚಿಕ್ಕಮಕ್ಕಳನ್ನ ಕೆಲಸದಿಂದ ಬಿಡಿಸಿ ಶಾಲೆಗೆ ಹೋಗುವ ವ್ಯವಸ್ಥೆ ಮಾಡೋಣ, ಅಷ್ಟೇ ಅಲ್ಲಾ ಹುಡುಗರನ್ನು ಕೆಲಸಕ್ಕೆ ತೆಗೆದುಕೊಳ್ಳೋ ಓನರ್ ಗಳಿಗೆ ಸರಿಯಾದ ಶಿಕ್ಷೇನೂ ನಾವೇ ಕೊಡೋಣ, ಆ ಹೋಟೆಲ್ ಕ್ಯಾಷಿಯರ್ ನೋಡು ನನ್ಮಗ ಏನೂ ಕೆಲ್ಸಾ ಮಾಡ್ತೇ ತಿಂದೂ ತಿಂದೂ ಎಷ್ಟ್ ದಪ್ಪಾ ಹೊಟ್ಟೆ ಇಟ್ಕಂಡಿದ್ದ, ಇಂತೋರ್‍ಗೆಲ್ಲಾ ನಾವೇ ಮುಂದೆ ನಿಂತು, ಅವ್ರ್ ಕೈನಲ್ಲೇ ಎಂಜಲು ಪ್ಲೇಟ್ ತೊಳೆಸಬೇಕು ಪಾಪ ಆ ಹುಡ್ಗಾ ಹೊರೋಕಾಗ್ದೇ ಹೊರ್‍ತಿದ್ನಲ್ಲಾ ಅಂತಾ ೧೦ ಮೂಟೆನ ಅವನ ಡೊಳ್ಳೂ ಹೊಟ್ಟೆ ಮೇಲಿಟ್ಟು ಹೊತ್ತು ಕೊಂಡು ಹೋಗೋವರ್‍ಗೂ ಬಿಡ್ಬಾದ್ದು, ಹಂಗ್ ಮಾಡಣಾ, ಪಾಪ ಆ ಹುಡುಗ್ರು ಮಲ್ಗಕ್ಕೆ ಕೊಟ್ಟಿರೋ ರೂಮ್ ಗಳಾದ್ರೂ ಹೆಂಗಿರ್‍ತವೋ, ಅಂತಾ ರೂಮ್ ನಲ್ಲಿ ಓನರ್‍ಗಳನ್ನ ಮಲ್ಗಿಸೋಣ. ಅವ್ರನ್ನಾ ಕತ್ತೆ ಮೇಲಿ ಕುಂಡ್ಸೀ ಅವ್ರ ಮಕ್ಕೆ ಲಿಫ್ಸ್ ಸ್ಟಿಕ್ ಹಚ್ಚಿ, ತಲೆಗೆ ಹೂ ಮುಡಿಸಿ, ಹೆಗಲಿಗೆ ವ್ಯಾನಿಟಿ ಬ್ಯಾಗ್ ಹಾಕಿ, ರೋಡ್ ತುಂಬಾ ಮೆರವಣಿಗೆ ಮಾಡ್ಸಣಾ ಏನಂತಿಯಾ ಅಂದೇ, ಹೌದು ಕಣೋ ನಾನು ನಂಗೊತ್ತಿರೋ ಹುಡ್ಗೂರ್‍ಗೆಲ್ಲಾ ಹೇಳ್ತೀನಿ ನೀನೂ ಹೇಳು ಎಲ್ರೂ ಸೇರಿ ಏನಾರೂ ಮಾಡಣಾ ಅಂತಾ ಹೇಳೋವಷ್ಟ್ರಲ್ಲಿ ಆಫೀಸ್ ಬಂದಿತ್ತು,
ಅಯ್ಯಯ್ಯೋ ಆಗ್ಲೇ ಲೇಟಾಗ್ಬಿಟ್ಟದಲ್ಲೋ, ಲೇಟಾಗ್ ಬಂದಿದ್ದಕ್ಕೆ ಬಾಸ್ ಬೇರೆ ಗುರ್‌ರ್‌ರ್‌ರ್‌ರ್ ಅಂತರೇ ಬೇಗ ನಡ್ಯೋ ಅಂತಾ ಹೇಳಿ ಒಳಗೆ ಹೋಗಿ ಅಟೆಂಡೆನ್ಸ್ ಸೈನ್ ಮಾಡಿ ಕೆಲಸ ಮಾಡಲು ಕೂತ ನಮ್ ಮೈಂಡ್ ಇಂದಾ ಆ ಚೈಲ್ಡ್ ಲೇಬರ್ ಗಳ ವಿಷಯ ಅದ್ಯಾವಾಗ ಮಾಯವಾಗಿತ್ತೋ ಆ ನಮ್ಗೇ ಗೊತ್ತಿಲ್ಲಾ, ನಮ್ಮಂಗೇ ಸಮಾಜದಲ್ಲಿ ಶೋಷಣೆಗೊಳಗಾಗುವವರ ಬಗ್ಗೆ ಯೋಚ್ನೇ ಮಾಡಿ ಕಾರ್ಯರೂಪಕ್ಕೆ ತರದ ಅನೇಕರ ಮೈಂಡ್ ಇಂದಾ ಆ ಭಗವಂತ ಅದ್ಹೇಗೆ ವಿಷಯಗಳನ್ನ ಎರೈಸ್ ಮಾಡ್ತಾನೋ ಆ ಭಗವಂತನಿಗೇ ಗೊತ್ತು.
*****
Nice…!! 😉
ಥ್ಯಾಕ್ಯೂ ಚಚ್ಚಿ 🙂
Nice ..
ಚನ್ನಾಗಿದೆ ಕ್ರಾಕು 🙂