ನೀವು ಬೆಂಗಳೂರಿಗೆ ಕೆಲವೇ ದಿನಗಳ ಕೆಳಗೆ ಹೊಸದಾಗಿ ಬಂದು ಸೇರಿಕೊಂಡಿದ್ದೀರ. ಈಗಷ್ಟೇ ಒಂದು ಕೆಲಸ ಸಿಕ್ಕಿದೆ. ಅಲ್ಲಿ ಯಾವುದೋ ರೋಡಿನ ಎಷ್ಟನೆಯದೋ ಕ್ರಾಸಿನಲ್ಲಿರುವ ನಿಮ್ಮ ರೂಮಿನಿಂದ ಆಫೀಸಿಗೆ ದಿನಾ ಬಸ್ಸಿನಲ್ಲಿ ಓಡಾಡುತ್ತಿದ್ದೀರ. ಭಾರತದ ಜ್ವಲಂತ ಸಮಸ್ಯೆಯಾದ ಜನಸಂಖ್ಯಾ ಸ್ಪೋಟದ ನೇರ ಪರಿಣಾಮದಿಂದ ಹಿಗ್ಗಮಗ್ಗಾ ರಶ್ ಆಗಿರುವ ಬಸ್ಸಿನಲ್ಲಿ ಸೊಂಟ ಬಳುಕಿದ ತೆಂಗಿನ ಮರದಂತೆ ನಿಂತು ದಿನವೂ ಪ್ರಯಾಣಿಸುತ್ತಿದ್ದ ನಿಮಗೆ ಈ ದಿನ ಇದ್ದಕ್ಕಿದ್ದಂತೆ ಸೀಟೊಂದು ಸಿಕ್ಕಿದೆ. ಬಸ್ಸಿನಲ್ಲಿ ನಿಂತಿರುವ ಉಳಿದ ಅಸಂಖ್ಯಾತ ಪ್ರಯಾಣಿಕರ ನಡುವೆ ನಿಮಗೆ ಮಾತ್ರ ದೊರಕಿದ ಈ ಸೌಭಾಗ್ಯಕ್ಕಾಗಿ ಸಂಭ್ರಮ ಪಡುತ್ತಾ ಆ ಸೀಟಿನಲ್ಲಿ ಕುಳಿತ ನೀವು ಇನ್ನೇನು ಎಸ್ಪೀಬಿ, ಸೋನು ನಿಗಮ್ ಮುಂತಾದ ದಿಗ್ಗಜರನ್ನು ನಿಮ್ಮ ಇಯರ್ ಫೋನಿಗೆ ಆವಾಹಿಸಿ ಅವರಿಂದ ಚಂದಚಂದದ ಹಾಡು ಹಾಡಿಸಬೇಕು, ಅಷ್ಟರಲ್ಲಿ ನಿಮ್ಮ ಪಕ್ಕ ಕುಳಿತ ಅಪರಿಚಿತ ವ್ಯಕ್ತಿ ನಿಮ್ಮತ್ತ ಭಾರೀ ಪ್ರಮಾಣದ ಆತ್ಮೀಯತೆ ತುಂಬಿದ ನಗುವೊಂದನ್ನು ನಗುತ್ತಾನೆ.
ಎಲ ಎಲಾ! ಏನಿದೇನಿದು? ನೀವು ಅಚ್ಚರಿಗೊಳಗಾಗುತ್ತೀರ. ಬಾಯಿ ಬಿಟ್ಟರೆ ಖಾನ್ದಾನಿನ ಸಕಲರಿಗೂ ಒಂದೇ ಮಾತಿನಲ್ಲಿ ಮರ್ಯಾದೆ ಕಳೆಯುವ, ತಪ್ಪಿ ಕಾಲ್ತುಳಿದರೂ ಸಾಕ್ಷಾತ್ ಅವರ ಮನೆಯ ಕಾಂಪೌಂಡ್ ಮುರಿದೆವೇನೋ ಎಂಬಂತೆ ಮೈಮೇಲೆ ನುಗ್ಗಿ ಬರುವ, ಬಸ್ಸು ವಾಲಾಡಿದಾಗ ಮೈಗೆ ಮೈ ತಾಕಿದರೂ ಒಬ್ಬೊಬ್ಬರೂ ಒಬ್ಬೊಬ್ಬ ದರ್ಶನ್, ಸುದೀಪ್ ರಾಗಿ ಡಿಚ್ಚಿ, ಮಾಂಜಾ, ಕಿಕ್ ಮುಂತಾದ ಒದೆಗಳನ್ನು ಕೊಡುವ ಈ ಬಿಎಂಟಿಸಿಯಲ್ಲಿ ಹೀಗೆ ಅಕಾರಣವಾಗಿ ನಿಮ್ಮತ್ತ ನೋಡಿ ನಗುತ್ತಿರುವ ಈ ಪುಣ್ಯ ಪುರುಷ ಯಾರಿರಬಹುದು? ಹುಳವೊಂದು ನಿಮ್ಮ ತಲೆಯನ್ನು ಹೊಗ್ಗುತ್ತದೆ. ಅಷ್ಟರಲ್ಲಿ ಅವನೇ ನಿಮ್ಮತ್ತ ಮತ್ತೊಂದು ಮುಗುಳ್ನಗು ಎಸೆದು ಮಾತಿಗೆ ತೊಡಗುತ್ತಾನೆ. ನೀವು ಯಾರು? ಯಾವ ಊರು? ಎಲ್ಲಿ ಕೆಲಸ ಮಾಡುತ್ತಿದ್ದೀರಾ? ಎಂದೆಲ್ಲಾ ಸಾಕ್ಷಾತ್ ನಿಮ್ಮ ಆತ್ನಬಂಧುವಿನಂತೆ ಪ್ರಶ್ನಿಸುತ್ತಾನೆ. ಅಪರಿಚಿತರೇ ತುಂಬಿರುವ ಈ ಊರಿನಲ್ಲಿ ಕಳೆದ ಜನ್ಮದ ಗೆಳೆಯನಂತೆ ಮಾತಿಗೆ ಸಿಕ್ಕಿರುವ ಈ ಮಹಾತ್ಮನೊಡನೆ ನೀವು ಆತ್ಮೀಯತೆಯಿಂದ ಮಾತಿಗೆ ತೊಡಗುತ್ತೀರ.
ಈಗ ಅವನು ಎರೆಡನೇ ಸುತ್ತಿನ ಪ್ರಶ್ನೆಗಳನ್ನು ಪ್ರಾರಂಭಿಸುತ್ತಾನೆ. ಊರಿನಲ್ಲಿ ನಿಮ್ಮ ತಂದೆ ಏನು ಕೆಲಸ ಮಾಡುತ್ತಾರೆ? ನೀವು ಏನು ಓದಿದ್ದು? ಡಿಗ್ರಿಯಲ್ಲಿ ಎಷ್ಟು ಅಂಕ? ಬಿಡುವಿನ ವೇಳೆಯಲ್ಲಿ ಏನು ಮಾಡುತ್ತೀರಾ? ಹೀಗೆ. ಈ ಹಂತದಲ್ಲಿ ನೀವು ಕೊಡುವ ಪ್ರತೀ ಉತ್ತರಕ್ಕೂ ಅವನಿಂದ ಭರ್ಜರಿ ಶಭಾಶ್’ಗಿರಿಗಳು ದೊರೆಯುತ್ತವೆ. ನಿಮ್ಮ ತಂದೆ ರೈತರು ಎಂದು ನೀವು ಹೇಳಿದರೆ ‘ವಾವ್, ರೈತರೇ ಈ ದೇಶದ ಬೆನ್ನೆಲುಬು!’ ಎನ್ನುತ್ತಾನೆ. ಅವರೇನಾದರೂ ಕೂಲಿಕಾರರು ಎಂದು ನೀವಂದರೆ ‘ಭಲೇ, ಕೂಲಿಕಾರರೇ ಈ ದೇಶದ ರಕ್ತನಾಡಿಗಳು’ ಎನ್ನುತ್ತಾನೆ. ನಿಮ್ಮ ತಂದೆ ಯಾವುದೇ ಉದ್ಯೋಗದವರಾಗಿದ್ದರೂ ಅವರನ್ನು ಇವನು ದೇಶದ ಬೆನ್ನೆಲುಬು, ರಕ್ತನಾಳ, ಕರುಳು, ಕಿಡ್ನಿ, ಜಠರ ಹೀಗೆ ಯಾವುದೋ ಒಂದಕ್ಕೆ ಹೋಲಿಸುತ್ತಾನೆ. ನೀವು ಡಿಗ್ರಿಯಲ್ಲಿ ಎಷ್ಟೇ ಅಂಕ ತೆಗೆದಿದ್ದರೂ ಅದನ್ನು ನೂರಕ್ಕೆ ನೂರು ಎಂಬಂತೆ ಹೊಗಳಿ ಕೂತಲ್ಲೇ ಸರ್ಟಿಫಿಕೇಟ್, ಪದಕ ಘೋಶಿಸುತ್ತಾನೆ. ಹೀಗೆ ತೀರಾ ಸಾಧಾರಣ ಎಂದು ನೀವು ತಿಳಿದಿರುವ ನಿಮ್ಮ ತಂದೆ, ನಿಮ್ಮ ಅಂಕಗಳ ಬಗ್ಗೆ ಇದ್ದಕ್ಕಿದ್ದಂತೆ ನಿಮ್ಮೊಳಗೊಂದು ಹೆಮ್ಮೆ ಹುಟ್ಟಿರುವಾಗಲೇ ಅವನು ಮೂರನೇ ಸುತ್ತಿನ ಪ್ರಶ್ನೆಗಳನ್ನು ಪ್ರಾರಂಭಿಸುತ್ತಾನೆ.
ನಿಮ್ಮ ತಂದೆಯ ವರಮಾನ ಎಷ್ಟು? ಎನ್ನುತ್ತಾನೆ. ನೀವು ಎಷ್ಟೇ ಹೇಳಿದರೂ ಅಷ್ಟೇನಾ? ಛೇಛೇ ಎಂದು ವಿಷಾದ ಸೂಚಿಸುತ್ತಾನೆ. ಅದಕ್ಕಿಂತ ಹೆಚ್ಚಿನ ಸಂತಾಪವನ್ನು ನಿಮ್ಮ ಸಂಬಳವನ್ನು ಕೇಳಿದ ಮೇಲೆ ವ್ಯಕ್ತಪಡಿಸುತ್ತಾನೆ. ನಿಮ್ಮ ಆಫೀಸಿನ ಟೈಮಿಂಗ್ಸ್ ಕೇಳಿ ಇಷ್ಟೇ ಸಂಬಳಕ್ಕೆ ಅಷ್ಟೊಂದು ಕೆಲಸ ಮಾಡ್ತೀರಾ? ಅಕಟಕಟಕಟಾ ಎಂದು ನಿಮ್ಮ ಬಗ್ಗೆ ನಿಮಗೇ ಮರುಕ ಹುಟ್ಟಿಸುತ್ತಾನೆ. ಹಾಗೆ ಮಾತನಾಡುತ್ತಲೇ ನಿಮ್ಮ ನಂಬರ್ ಕೇಳುತ್ತಾನೆ. ನಿಮ್ಮ ಬಗ್ಗೆ ಈ ಪರಿಯ ಕನಿಕರವಿರುವ ಈತ ಬೇರೆಲ್ಲಾದರೂ ಒಳ್ಳೆಯ ಕೆಲಸವಿದ್ದರೆ ಹೇಳಿಯಾನೆಂದು ನೀವು ನಿಮ್ಮ ನಂಬರನ್ನು ಕೊಟ್ಟೇ ಬಿಡುತ್ತೀರ. ನಾನು ಇಷ್ಟೊಂದು ಕಷ್ಟ ಪಡುತ್ತಿದ್ದೇನೆಂಬುದು ಇಷ್ಟು ದಿನ ನನಗೇ ತಿಳಿದಿರಲಿಲ್ಲವಲ್ಲಾ ಎಂಬ ಗಾಢ ವಿಶಾದದಲ್ಲಿ ನೀವು ಮುಳುಗಿರುವಾಗಲೇ ಅವನು ತಾನು ಹೇಳಬೇಕೆಂದಿದ್ದ ನಿಜವಾದ ಸಂಗತಿಯನ್ನು ಪ್ರಸ್ತಾಪಿಸುತ್ತಾನೆ:
ಸಂಬಳದ ಜೊತೆಗೆ ಸಿಗುವ ಹೆಚ್ಚುವರಿ ಆದಾಯ-
ಚೈನ್ ಲಿಂಕ್ ಬ್ಯುಸಿನೆಸ್!
*
ಪಟ್ಟಣವನ್ನು ಪ್ರವೇಶಿಸುವ ಲಕ್ಷಾಂತರ ಉದ್ಯೋಗಿಗಳಿಗೆಲ್ಲಾ ಒಂದಲ್ಲ ಒಂದು ದಿನ ಇಂಥಹಾ ವ್ಯಕ್ತಿಯೊಬ್ಬ ಸಿಕ್ಕೇ ಸಿಗುತ್ತಾನೆ ಹಾಗೂ ತನ್ನ ಚೈನ್ ಲಿಂಕ್ ಜಾಲದಲ್ಲಿ ಅವರನ್ನು ಸಿಕ್ಕಿಸಲು ನೋಡಿಯೇ ನೋಡುತ್ತಾನೆ. ಬಸ್ಸಿನಲ್ಲಿ ಉಳಿದ ಪ್ರಯಾಣಿಕರಂತೆಯೇ ಓಲಾಡುತ್ತಾ ಕುಳಿತಿರುವ ಈ ಚತುರರು ಮೌನವಾಗಿಯೇ ಅಕ್ಕಪಕ್ಕ ವೀಕ್ಷಿಸುತ್ತಿರುತ್ತಾರೆ. ತಮ್ಮ ಪಕ್ಕ ಕುಳಿತುಕೊಳ್ಳುವ ವ್ಯಕ್ತಿಯೊಳಗೆ ಕುರಿಯಾಗಲಿಕ್ಕಿರುವ ಯಾವುದೇ ಒಂದು ಅಂಶ ಕಂಡುಬಂದರೂ ಸಾಕು, ಅವನೊಡನೆ ತಮ್ಮ ಭಾಷಣವನ್ನು ಆರಂಭಿಸಿಬಿಡುತ್ತಾರೆ!
ನೋಡಿ ಸರ್, ಇದು ಸ್ಪರ್ಧಾಯುಗ. ಇಲ್ಲಿ ಬರೀ ಸಂಬಳಕ್ಕೆ ಕೆಲಸ ಮಾಡುವವನು ಬರೀ ಸಂಪಾದಿಸುತ್ತಾನೆ, ಆದರೆ ಹಣ ಮಾಡೋದಿಲ್ಲ. ಸಂಬಳದ ಜೊತೆಗೆ ಇನ್ನೇನಾದರೂ ಮಾಡಿಕೊಳ್ಳುವವನೇ ಬುದ್ಧಿವಂತ. (ಇದುವರೆಗೂ ಹಾಗೇನೂ ಮಾಡದ ನೀವು ದಡ್ಡ ಎಂಬುದು ಅವನ ಮಾತಿನ ಅರ್ಥ!) ನೀವು ಒಪ್ಪುವುದಾದರೆ ನಿಮ್ಮ ಸಂಬಳಕ್ಕಿಂತ ಹೆಚ್ಚಿಗೆ ಸಂಪಾದನೆ ಮಾಡಬಹುದಾದ ದಾರಿಯೊಂದನ್ನು ನಿಮಗೆ ತಿಳಿಸುತ್ತೇನೆ. ನೀವೇನೂ ಮಾಡಬೇಕಿಲ್ಲ. ಬರೀ ನಮ್ಮ ಕಂಪನಿಯ ಮೆಂಬರ್ರಾದರೆ ಸಾಕು. ತಿಂಗಳಿಗೆ ಇಪ್ಪತ್ತುಸಾವಿರದಿಂದ ಒಂದು ಲಕ್ಷದ ತನಕ ದುಡಿಯಬಹುದು! ಯಾವ ಮ್ಯಾನೇಜರ್ರೂ ಇಲ್ಲದ ಕೆಲಸ! ನಮಗೆ ನಾವೇ ಬಾಸ್ ಆಗಿರುವ ಏಕಮಾತ್ರ ಉದ್ಯೋಗ! ಇದರಿಂದಾಗ ಕೂತಕೂತಲ್ಲಿಯೇ ಕಾರು ಗಳಿಸಿದವರಿದ್ದಾರೆ! ವಿದೇಶಕ್ಕೆ ಹೋದವರಿದ್ದಾರೆ! ಇದು ಹೂಡಿಕೆಯೇ ಇಲ್ಲದೆ ಲಾಭ ಗಳಿಸುವ ವಿಶಿಷ್ಠ ವ್ಯವಹಾರ.. ಸೆಖೆ ಉರಿಯುತ್ತಿರುವ ಬಸ್ಸಿನಲ್ಲಿರುವ ನೀವು ಇದ್ದಕ್ಕಿದ್ದ ಹಾಗೇ ಸ್ವಂತದ ತಂಪು ಏಸಿ ಕಾರನ್ನೇರಿ ಪ್ರಯಾಣ ಹೊರಟೇಬಿಡುತ್ತೀರ!
ಐಟಿ, ಕಾರ್ಪೋರೇಟ್, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳಲ್ಲಿ ಯಾರ ಕೈಕೆಳಗೋ ಬಿಡುವುಲ್ಲದೆ ದುಡಿಯುತ್ತಿರುವ ಪ್ರತಿಯೊಬ್ಬ ಉದ್ಯೋಗಿಗೂ ತಾನು ಸ್ವತಂತ್ರವಾಗಿ ಏನಾದರೂ ಮಾಡಬೇಕು, ಸ್ವಂತಕ್ಕೆಂದು ಒಂದಿಷ್ಟು ಸಮಯವನ್ನು ಎತ್ತಿಡಬೇಕು ಎಂಬ ತುಡಿತ ಇದ್ದೇಇರುತ್ತದೆ. ಅಂಥವರಲ್ಲಿ ಒಬ್ಬನನನ್ನಾದರೂ ತನ್ನ ಜಾಲಕ್ಕೆ ಸಿಕ್ಕಿಸಿಕೊಂಡೇ ಅವನು ಬಸ್ಸಿಳಿದುಹೋಗುತ್ತಾನೆ.
ಹಾಗಂತ ಎಲ್ಲ ಚೈನ್ ಲಿಂಕ್ ಗಳನ್ನೂ ‘ಜಾಲ’ಗಳು ಎನ್ನಲಿಕ್ಕಾಗುವುದಿಲ್ಲ. ಉಳಿದ ಉದ್ಯೋಗಗಳಂತೆಯೇ ವೃತ್ತಿಪರವಾಗಿರುವ ಚೈನ್ ಲಿಂಕ್ ಬ್ಯುಸಿನೆಸ್ ಗಳೂ ಇಲ್ಲದಿಲ್ಲ. ಆದರೆ ಯಾವುದು ಹಾಲು, ಯಾವುದು ಸುಣ್ಣದ ನೀರು ಎಂದು ಅದನ್ನು ನಮಗೆ ನೀಡಬಂದ ವ್ಯಕ್ತಿಯನ್ನು ನೋಡಿ ನಿರ್ಧರಿಸುವುದಕ್ಕಾಗುವುದಿಲ್ಲವಲ್ಲಾ? ಅದೇ ಸಮಸ್ಯೆ.
***********
ಎಂಟು ವರ್ಷಗಳ ಬೆಂಗಳೂರು ವಾಸದಲ್ಲಿ ನಾನು ಇಂಥಹಾ ಅದೆಷ್ಟೋ ಜನರನ್ನು ಕಂಡಿದ್ದೇನೆ. ಒಮ್ಮೆ ಹೀಗಾಯಿತು. ಕನ್ನಡ ಸಂಘವೊಂದು ಆಯೋಜಿಸಿದ್ದ ಸ್ಪರ್ಧೆಯೊಂದರಲ್ಲಿ ಬಹುಮಾನ ಪಡೆದಿದ್ದ ನಾನು ಅದರ ಸಮಾರಂಭಕ್ಕೆ ಹೋಗಿದ್ದೆ. ಪ್ರಶಸ್ತಿಪ್ರದಾನ, ಭಾಷಣಗಳೆಲ್ಲಾ ಮುಗಿದಮೇಲೆ ಅಲ್ಲಿ ಸಭೆಯ ಮಧ್ಯೆ ಕೂತಿದ್ದವನೊಬ್ಬ ಊಟದ ವೇಳೆಗೆ ನನ್ನತ್ನ ನಡೆದುಬಂದ. ಬಹುಮಾನಿತ ಎಂದ ಮೇಲೆ ನಮ್ಮನ್ನು ಉಳಿದವರೆಲ್ಲರೂ ಮೆಚ್ಚುಗೆಯಿಂದ ನೋಡುವುದು ಸಾಮಾನ್ಯ. ಆದರೆ ಈತನೇಕೋ ನನ್ನ ಬಗ್ಗೆ ಕೊಂಚ ಹೆಚ್ಚಿನ ಮೆಚ್ಚುಗೆಯನ್ನೇ ವ್ಯಕ್ತಪಡಿಸಿದ. ನನ್ನಂಥಹಾ ಮಹಾನ್ ಚಿಗುರು ಪ್ರತಿಭೆಗಳಿಗೆ ಕಥೆ, ಕಾದಂಬರಿಗಳನ್ನು ಬರೆಯಲಿಕ್ಕೆ ಸಾಕಷ್ಟು ಬಿಡುವಿನ ಸಮಯ ಬೇಕೆಂದೂ, ನನ್ನ ಔದ್ಯೋಗಿಕ ಬದುಕಿನಲ್ಲಿ ಅದು ಲಭ್ಯವಿಲ್ಲವೆಂದೂ ನನ್ನ ಉದ್ಯೋಗವನ್ನು ದೂರಿದ. ಅವನೊಟ್ಟಿಗೆ ಮಾತನಾಡಿದ ಹತ್ತೇ ನಿಮಿಷದಲ್ಲಿ ನನಗೇಕಿನ್ನೂ ಜ್ಞಾನಪೀಠ ದೊರೆತಿಲ್ಲವೆಂಬ ಯೋಚನೆಯೊಂದು ನನ್ನ ತಲೆಯೊಳಗೆ ಪ್ರತ್ಯಕ್ಷವಾಯಿತು. ಇಷ್ಟೆಲ್ಲಾ ಹೊಗಳಿದ ಅವನು ಕೊನೆಯಲ್ಲಿ ನನ್ನ ನಂಬರ್ರನ್ನು ಪಡೆದುಕೊಂಡು ಜನರ ಗುಂಪಿನೊಳಗೆ ಮರೆಯಾದ.
ಅದಾಗಿ ನಾಲ್ಕೇ ದಿನಕ್ಕೆ ನನಗವನಿಂದ ಫೋನು ಬಂತು. ಹಿಂದಿನ ಭೇಟಿಯಲ್ಲಿ ಎಲ್ಲಿಗೆ ನಿಲ್ಲಿಸಿದ್ದನೋ ಅಲ್ಲಿಂದ ಅವನು ಭಾಷಣ ಮುಂದುವರೆಸಿದ. ನಡುವೆ ಇಬ್ಬರೂ ಒಟ್ಟಿಗೇ ಏನೋ ಹೇಳಲು ಬಾಯ್ತೆರೆದಾಗ ನಾನು ನೀವು ಮೊದಲು ಹೇಳಿ ಎಂದದ್ದನ್ನೇ ಹಿಡಿದುಕೊಂಡು ‘ನೋಡಿ, ಎಲ್ಲರಿಗೂ ತಾವಷ್ಟೇ ಮಾತನಾಡಬೇಕು, ಉಳಿದವರು ಬರೀ ಕೇಳಿಸಿಕೊಳ್ಳಬೇಕು ಎಂದಿರುತ್ತದೆ. ನೀವು ಹಾಗಲ್ಲ. ನಿಮ್ಮಲ್ಲಿ ಬೇರೆಯವರ ಮಾತನ್ನು ಕೇಳಿಸಿಕೊಳ್ಳುವ ಗುಣ ಇದೆ. ಇದು ಬೆಳವಣಿಗೆಯ ಸಂಕೇತ’ ಎಂದೆಲ್ಲಾ ಹೊಗಳಿದ. ನನಗೇ ಗೊತ್ತಿಲ್ಲದ ಈ ನನ್ನ ಮಹಾಗುಣವನ್ನು ಕೇಳಿ ನನಗಂತೂ ರೋಮಾಂಚನವೇ ಆಯಿತು. ಮತ್ತೊಂದಿಷ್ಟು ಪೀಠಿಕೆಗಳ ತರುವಾಯ ಕೊನೆಗೂ ಅವನು ತನ್ನ ಚೈನ್ ಲಿಂಕ್ ವ್ಯವಹಾರದಲ್ಲಿ ತೊಡಗಿಕೊಳ್ಳುವಂತೆ ನನ್ನನ್ನು ಆಹ್ವಾನಿಸಿದ. ಭಯಾನಕ ಬರಹಗಾರನಾದ ನಾನು ಈ ಬ್ಯುಸಿನೆಸ್ ಗೆ ಸೇರಿಕೊಂಡರೆ ಸಿಕ್ಕಾಪಟ್ಟೆ ಬಿಡುವು ಹಾಗೂ ಹಣ ದೊರೆಯುವುದರಿಂದ ಕೆಲವೇ ವರ್ಷಗಳಲ್ಲಿ ಮೂರ್ನಾಲ್ಕು ಮಹಾಕಾವ್ಯಗಳನ್ನು ಗೀಚಿ ಬಿಸಾಕಬಹುದೆಂದು ಪುಸಲಾಯಿಸಿದ! ಆದರೆ ಈ ಮೊದಲು ಇಂಥದ್ದೇ ಒಂದು ಕೊಂಡಿ ವ್ಯವಹಾರಕ್ಕೆ ಸಿಲುಕಿ ಗುಂಡಿ ಹರಿದುಕೊಂಡಿದ್ದ ನಾನು ಇಂತಿಷ್ಟು ದಿನಗಳ ಬಳಿಕ ಯೋಚಿಸಿ ತಿಳಿಸುವೆನೆಂದು ಪರೋಕ್ಷವಾಗಿ ನನ್ನ ಅಸಮ್ಮತಿಯನ್ನು ಪ್ರಕಟಿಸಿ ಫೋನಿಟ್ಟುಬಿಟ್ಟೆ.
ಆದರೂ ಛಲ ಬಿಡದ ಆತ ನಾನು ತಿಳಿಸಿದ ದಿನಕ್ಕೆ ಸರಿಯಾಗಿ ಕರೆಮಾಡುತ್ತಿದ್ದ. ಅವನ ಸತತ ಪ್ರಯತ್ನವನ್ನು ನೋಡಿ ಪಾಪ ಎನ್ನಿಸಿತಾದರೂ ಹಳೆಯ ಗಾಯಗಳೇ ಇನ್ನೂ ಹಸಿಯಾಗಿದ್ದರಿಂದ ಅವನ ಆಹ್ವಾನವನ್ನು ನಯವಾಗಿ ತಿರಸ್ಕರಿಸಿ ಬಚಾವಾದೆ.
**********
ಚೈನ್ ಲಿಂಕ್ ವ್ಯವಹಾರಗಳಲ್ಲಿ ಹಲವಾರು ಥರಗಳಿವೆ. ಒಂದೊಂದು ಟೊಪ್ಪಿಯ ಬಣ್ಣವೂ ಬೇರೆಬೇರೆ. (ಎಲ್ಲವನ್ನೂ ಟೊಪ್ಪಿ ಎನ್ನಲಾಗುವುದಿಲ್ಲ). ಪ್ರೊಡಕ್ಟ್ ಗಳನ್ನು ಮಾರಾಟ ಮಾಡುವುದು, ಯಾವುದೋ ರೆಸಾರ್ಟ್ ಗೆ ಪ್ರವಾಸಿಗರಾಗಿ ಹೋಗಿರೆಂದು ನಮ್ಮವರನ್ನು ಪುಸಲಾಯಿಸುವುದು, ಯಾವ್ಯಾವುದೋ ವೃತ್ತಿಪರ ಕೋರ್ಸ್ ಗಳಿಗೆ ವಿದ್ಯಾರ್ಥಿಗಳನ್ನು ಹುಡುಕಿಕೊಡುವುದು, ಇದ್ಯಾವುದೂ ಅಲ್ಲದೆ ನಾವು ಮೊದಲು ಒಂದಷ್ಟು ಹಣ ಕಟ್ಟಿ, ನಂತರ ನಮ್ಮಂತೆಯೇ ಹಣ ಕಟ್ಟುವವರನ್ನು ಹಿಡಿದುಕೊಡುವುದು.. ಹೀಗೆ ಥರಹೇವಾರಿ ಚೈನ್ ಲಿಂಕ್ ಗಳಿವೆ. ಇವುಗಳ ಪೈಕಿ ಹಲವುಗಳಲ್ಲಿ ನಾವೇ ಮೊದಲು ಹಣ ಕಟ್ಟಿ ಬಕ್ರಾ ಆಗಿರುತ್ತೇವಾದ್ದರಿಂದ ಕಳೆದ ಹಣವನ್ನು ಸಂಪಾದಿಸುವುದಕ್ಕಾಗಿ ನಾವು ಮತ್ತಷ್ಟು ಜನರನ್ನು ಅದಕ್ಕೆ ಸೇರಿಸುವುದು ಅನಿವಾರ್ಯವೇ ಆಗುತ್ತದೆ. ಅವನಿಂದ ನಾನು, ನನ್ನಿಂದ ನನ್ನ ಗೆಳೆಯರು- ಬಂಧುಗಳು-ಅಣ್ಣತಮ್ಮ, ಅವರಿಂದ ಅವರ ಗೆಳಯರು ಹೀಗೆ ಒಬ್ಬರಿಗೊಬ್ಬರು ಕೊಂಡಿಯಾಗುತ್ತಾ ಆ ಸಂಸ್ಥೆಯ ವ್ಯವಹಾರ ಲಕ್ಷಕೋಟಿಗಳ ದಾಟುತ್ತದೆ.
*************
ಆಗಾಗ ಬಂದೆರಗುತ್ತಿದ್ದ ಇಂಥಹಾ ಕೊಂಡಿಗಳೆಲ್ಲದರಿಂದ ಅದು ಹೇಗೋ ಪಾರಾಗಿ ಬದುಕಿಕೊಂಡಿದ್ದ ನನಗೆ ಅದೊಂದು ದಿನ ನನ್ನ ಹಳೆಯ ಕಂಪನಿಯ ಕೊಲೀಗೊಬ್ಬನಿಂದ ಕರೆ ಬಂತು. ಸಾಕಷ್ಟು ಆತ್ಮೀಯನೇ ಆಗಿದ್ದ ಅವನು ನಾನು ಸಂಜೆ ಯಾವ ಹೊತ್ತಿಗೆ ಕಛೇರಿಯಿಂದ ಮರಳಿಬರುತ್ತೇನೆಂದು ಕೇಳಿ, ಆ ಹೊತ್ತಿಗೆ ನನ್ನನ್ನು ಭೇಟಿಯಾಗಲು ಬರುವುದಾಗಿ ಹೇಳಿದ. ಎಂದೂ ಇಲ್ಲದವನು ಇಂದೇಕೆ ಬರುವೆನೆಂದಿರಬಹುದು? ಲವ್ ಫೇಯ್ಲೂರಾಗಿ ದುಃಖ ಹೇಳಿಕೊಳ್ಳಬೇಕೆನಿಸಿರಬಹುದಾ? ಹಠಾತ್ತಾಗಿ ಮದುವೆಯೇನಾದರೂ ನಿಶ್ಚಯವಾಗಿರಬಹುದಾ? ಇಲ್ಲಾ ಸಾಲ ಕೇಳಲಿಕ್ಕಿರಬಹುದಾ? ಹೀಗೆಲ್ಲಾ ಯೋಚಿಸಿ ಸೋತ ನಾನು ಕೊನೆಗೆ ಗೆಳೆಯನಾದವನಿಗೆ ಭೇಟಿಯಾಗಲು ಬರಲಿಕ್ಕೆ ಕಾರಣವಾದರೂ ಏಕೆ ಬೇಕೆಂದುಕೊಂಡು ಅವನ ಮಾತಿಗೆ ಸಮ್ಮತಿಸಿದೆ.
ಆದರೆ ಆ ದಿನ ದಿನಭವಿಷ್ಯವನ್ನು ಓದದೇ ಇವನಿಗೆ ಓಕೆ ಎಂದಿದ್ದು ನನ್ನ ಪಾಲಿಗೆ ಮಾರಕವಾಗಿತ್ತು. ಸಂಜೆ ಎಲ್ಲೋ ದೂರದಲ್ಲಿರುವ ಆಫೀಸಿನಿಂದ ನನ್ನ ರೂಮಿಗೆ ಬಂದವನ ಜೊತೆಗೆ ಟಿಪ್ ಟಾಪಾಗಿ ಡ್ರೆಸ್ ಮಾಡಿಕೊಂಡ ಇನ್ನಿಬ್ಬರಿದ್ದರು. ಸಾಲದ್ದಕ್ಕೆ ಅವರು ಮೂವರೂ ಭರ್ಜರಿ ಕಾರೊಂದರಲ್ಲಿ ಬಂದಿದ್ದರು! ಇದನ್ನೆಲ್ಲಾ ನೋಡಿ ಮತ್ತಿನ್ಯಾವ ಹೊಸ ಸರಪಳಿ ಬಿಗಿಯಲಿದೆಯಪ್ಪಾ ಎಂದು ಕಂಗಾಲಾಗಿ ನಿಂತಿದ್ದ ನನ್ನನ್ನು ತುಂಬಿಕೊಂಡ ಆ ಕಾರು ಮುಂದಕ್ಕೆ ಸಾಗಿತು.
ಹೆಚ್ಚಾಗಿ ಜನರು ಓಡಾಡದ ನಿರ್ಜನ ಏರಿಯಾವೊಂದಕ್ಕೆ ಹೋಗಿನಿಂತ ಆ ಕಾರನ್ನು ಡ್ರೈವ್ ಮಾಡುತ್ತಿದ್ದವನು ನನ್ನತ್ತ ತಿರುಗಿ ನಮಸ್ಕಾರ ಸರ್ ಎಂದ. ಫಾರಿನ್ ಡೆಲಿಗೇಟ್ಸ್ ಗಳ ಮೀಟಿಂಗ್ ಒಂದರಿಂದ ಮಧ್ಯಕ್ಕೇ ಎದ್ದು ಬಂದವನಂತಿದ್ದ ಅವನ ಕೈಯಲ್ಲಿ ಒಂದು ನೋಟ್ ಬುಕ್ಕೂ, ಪೆನ್ನೂ ಇದ್ದವು. ಇವರ ಹೆಸರು ಇದು, ಅವನ ಹೆಸರು ಅದು, ಇವರಿಬ್ಬರೂ ನಿಮ್ಮ ಜೊತೆ ಮಾತನಾಡಬೇಕಂತೆ ಎಂದು ಅವರಿಬ್ಬರನ್ನು ನನಗೆ ಪರಿಚಯ ಮಾಡಿಸಿದ ನನ್ನ ಗೆಳೆಯ ನನ್ನನ್ನು ಬೋನಿನೊಳಕ್ಕೆ ದಬ್ಬಿ ತಾನು ಸುಮ್ಮನೆ ಆಟ ನೋಡುವವನಂತೆ ಕುಳಿತುಬಿಟ್ಟ.
“ಯು ಸೀ ಸರ್, ಯಾರಿಗೂ ಅವರವರ ಸಂಬಳ ಸಾಕಾಗುವುದಿಲ್ಲ, ಎಲ್ಲರೂ ಅಡೀಶನ್ ಇನ್ಕಂ ಗಾಗಿ ಹುಡುಕತ್ತಲೇ ಇರುತ್ತಾರೆ….”
ಕಳೆದುಹೋದ ಹಳೆಯ ಟೇಪ್ ರೆಕೆರ್ಡೊಂದು ಮತ್ತೆ ಸಿಕ್ಕಿ ಆನ್ ಆದಂತೆ ಅವರು ಮಾತನಾಡುತ್ತಾ ಹೋದರು. ನನ್ನ ಬರೆಯುವ ಪ್ರವೃತ್ತಿಯ ಬಗ್ಗೆ ಒಂದಷ್ಟು ಮೆಚ್ಚುಗೆ ಸೂಚಿಸಿ, ನನಗೆ ಬರುವ (ಇನ್ನೂ ಬರದಿರುವ!) ಪ್ರಶಸ್ತಿಗಳ ಬಗ್ಗೆ ಒಂದಷ್ಟು ಕಥೆಹೇಳಿ ಕೊನೆಗೆ ನನಗೆ ಬರುತ್ತಿರುವ ಸಂಬಳಕ್ಕೆ ಸಂತಾಪ ಸೂಚಿಸುವಲ್ಲಿ ಅವರ ಪೀಠಿಕೆ ಅಂತ್ಯವಾಯಿತು. ನನ್ನ ಬದುಕಿನಲ್ಲಿ ಇವೆಯೆಂದು ಅವರೇ ಎತ್ತಿ ತೋರಿಸಿದ್ದ ಸಮಸ್ಯೆಗಳಿಗೆ ಪರಿಹಾರವೂ ಅವರ ಬಳಿಯೇ ಇತ್ತು:
ಚೈನ್ ಲಿಂಕ್ ಬ್ಯುಸಿನೆಸ್!
“ನೀವೀಗ ಹದಿನಾಲ್ಕು ಸಾವಿರ ಕಟ್ಟಿ ನಮ್ಮ ಸಂಸ್ಥೆಗೆ ಮೆಂಬರ್ರಾಗಿ. ನಿಮ್ಮನ್ನು ನಾವು ಉಚಿತವಾಗಿ(!) ಗೋವಾ ಟ್ರಿಪ್ಪಿಗೆ ಕರೆದುಕೊಂಡು ಹೋಗುತ್ತೇವೆ. ನಂತರ ನೀವು ನಿಮ್ಮ ಗೆಳೆಯ, ಸಂಬಂಧಿಕ, ಕೊಲೀಗುಗಳನ್ನು ನಮಗೆ ಪರಿಚಯಮಾಡಿಕೊಡಿ. ನಾವು ಅವರ ಜೊತೆ ಮಾತಾಡುತ್ತೇವೆ. ಅವರನ್ನೂ ಇದಕ್ಕೆ ಸೇರಿಸಿ ಗೋವಾಗೆ ಕಳಿಸೋಣ. ಒಬ್ಬೊಬ್ಬರು ಸೇರಿದಾಗಲೂ ನಿಮಗೆ ಇಂತಿಷ್ಟು ಹಣ ಬರುತ್ತದೆ!”
ಸುತ್ತಿ, ಬಳಸಿ, ಎಳೆದು, ಜಗ್ಗಿ, ಇಲ್ಲದ ಉದಾಹರಣೆ, ಉಪಮೆ, ಅಲಂಕಾರಗಳನ್ನೆಲ್ಲಾ ಕೊಟ್ಟು ಅವರು ಹೇಳಿದ ಮಾತಿನ ಒಟ್ಟಾರೆ ಸಾರಾಂಶ ಇದಾಗಿತ್ತು. ಇಷ್ಟನ್ನು ಹೇಳಲಿಕ್ಕೆ ಅವರು ಸರಿಸುಮಾರು ಒಂದೂವರೆ ಗಂಟೆ ವ್ಯಯ ಮಾಡಿದ್ದರು. ಯಾವ್ಯಾವುದೋ ಗಾದೆ, ಒಗಟು, ಘೋಶವಾಕ್ಯ ಹಾಗೂ ಪಂಚ್ ಡೈಲಾಗ್ ಗಳನ್ನೆಲ್ಲಾ ಹೇಳಿದ್ದರು. ಮೊದಲ ಮಾತಿನಲ್ಲೇ ಇವರ ಸಂಚೇನೆಂಬುದು ಗೊತ್ತಾಗಿದ್ದ ನನಗಂತೂ ಇವರ ಮಾತಿಗೆಲ್ಲ ಹೂಂ ಎಂದೂ ಎಂದೂ ಕಣ್ಣು, ಕುತ್ತಿಗೆ, ಮೆದುಳೆಗಳಲ್ಲೆಲ್ಲಾ ಅಸಾಧ್ಯ ನೋವು ಆರಂಭವಾಗಿತ್ತು.
ಇಷ್ಟಕ್ಕೇ ಬಿಡದ ಅವರು ತಮ್ಮ ಮೊಬೈಲ್ ತೆರೆದು ತಮ್ಮೀ ಬ್ಯುಸಿನೆಸ್ ಗೆ ಕೈಜೋಡಿಸಿ ಹಣ ಮಾಡಿರುವವರ ಅಸಂಖ್ಯಾತ ಫೋಟೋಗಳನ್ನು ತೋರಿಸತೊಡಗಿದರು. ಅದರಲ್ಲಿ ಕೋಟು, ಬೂಟು ತೊಟ್ಟ ಅಪರಿಚಿತರನೇಕರು ಹೊಸ ಕಾರಿನ ಕೀ ಪಡೆದುಕೊಳ್ಳುತ್ತಾ ಫೋಸುಕೊಟ್ಟಿರುವ ಫೋಟೋಗಳಿದ್ದವು. ಇವರಂತೆಯೇ ನಾನೂ ಕಾರಿನ ಕೀ ಹಿಡಿದು ಹಲ್ಲುಕಿರಿಯುವ ಫೋಟೋ ಬರಬೇಕೆಂದರೆ ನಾನೂ ಹದಿನಾಲ್ಕು ಸಾವಿರ ತೆತ್ತು ಅವರ ಕಂಪನಿಯ ಸದಸ್ಯನಾಗಬೇಕೆಂದು ಹೇಳಿ ಅಂತೂ ಇಂತೂ ನಾನು ಕೋಮಾ ತಲುಪುವುದರೊಳಗೆ ಈ ಸುಧೀರ್ಘ ಚರ್ಚೆಯನ್ನು ಪರಿಸಮಾಪ್ತಿ ಮಾಡಿದರು. ಇದಕ್ಕೆ ನಾನು ಎಂದಿನಂತೆ “ಯೋಚಿಸಿ ಹೇಳುತ್ತೇನೆ” ಎಂದು ಜಾರಿಕೊಂಡೆನಾದರೂ ಮುಂದೊಮ್ಮೆ ಬೇರಿನ್ಯಾವುದೋ ಕೆಲಸಕ್ಕೆ ಅದೇ ಗೆಳೆಯನ ರೂಮಿಗೆ ಹೋಗಿದ್ದಾಗ ಈ ಅಸಾಸುರರು ಅಲ್ಲಿಯೂ ಪ್ರತ್ಯಕ್ಷವಾಗಿ ನನ್ನ ಮೆದುಳಿಗೆ ಕೈಹಾಕಿದರು. ಹೇಗೋ ಅವರಿಂದ ತಪ್ಪಿಸಿಕೊಂಡ ನಾನು ಭ್ರಮಾವಸ್ಥೆಯಲ್ಲಿ ಅಲ್ಲಿಂದ ಓಡಿ ಪಾರಾದೆ.
***********
ಒಬ್ಬ ವ್ಯಕ್ತಿಯನ್ನು ತನ್ನ ವ್ಯವಹಾರದೊಳಕ್ಕೆ ಎಳೆದುಕೊಳ್ಳುವುದು ಹೇಗೆ ಎಂಬುದನ್ನು ಕಲಿಸುವುದಕ್ಕಾಗಿಯೇ ಅದೆಷ್ಟೋ ತರಬೇತಿ ಸಂಸ್ಥೆಗಳಿವೆ. ಅವರು ಲಕ್ಷಾಂತರ ರೂಪಾಯಿ ವೆಚ್ಛಮಾಡಿ ಸ್ಕಿಲ್ ಡೆವಲಪ್ಪಿಂಗ್ ಸಂಸ್ಥೆಗಳ ಜೊತೆ ಒಪ್ಪಂದಮಾಡಿಕೊಂಡಿರುತ್ತಾರೆ. ಎದುರಿರುವ ವ್ಯಕ್ತಿಯ ಜೊತೆ ಹೇಗೆ ಮಾತನ್ನು ಆರಂಭಿಸಬೇಕು, ಆ ಹೊತ್ತಿಗೆ ನಾವು ಹೇಗೆ ಬಟ್ಟೆ ತೊಟ್ಟಿರಬೇಕು ಎಂಬುದರಿಂದ ಹಿಡಿದು ವ್ಯವಹಾರದ ವಿಷಯವನ್ನೇ ಎತ್ತದೆಯೂ ಹೇಗೆ ಎಲ್ಲವನ್ನೂ ವಿವರಿಸಬೇಕು ಎಂಬುದರ ತನಕ ಅವರು ನುರಿತ ತರಬೇತಿಯನ್ನು ನೀಡುತ್ತಾರೆ. ಇಂಥವುಗಳಲ್ಲಿ ಕೆಲವು ನಮ್ಮ ವ್ಯಕ್ತಿತ್ವ ವಿಕಸನಕ್ಕೂ ಇಂಬು ನೀಡುತ್ತವೆ. ಆದರೆ ನಾನೀಗ ಹೇಳಹೊರಟಿರುವುದು ಅಂಥವುಗಳ ಬಗ್ಗೆ ಅಲ್ಲ.
ಈ ಹಿಂದೆ ಪ್ರತಿಷ್ಠಿತ ಸಂಸ್ಥೆಯೊಂದು ಆಯೋಜಿಸಿದ್ದ ಇಂಥದೇ ಕಾರ್ಯಕ್ರಮವೊಂದಕ್ಕೆ ಪರಿಚಯಸ್ಥರೊಬ್ಬರ ಒತ್ತಾಯದ ಮೇರೆಗೆ ಹೋಗಿದ್ದ ನನಗೆ ಇಲ್ಲಿನ ಕಾರ್ಯವೈಖರಿಗಳ ನೋಡಿ ಅಚ್ಚರಿಯಾಗಿತ್ತು. ಇಲ್ಲಿ ಒಬ್ಬ ವ್ಯಕ್ತಿ ತಿಂಗಳಿಗೆ ಎಷ್ಟು ದುಡಿಯುತ್ತಾನೆ ಎನ್ನುವುದರ ಮೇಲೆ ಗೋಲ್ಡ್, ಡೈಮಂಡ್, ಪ್ಲಾಟಿನಂ ಎಂದೆಲ್ಲಾ ವಿಭಾಗಿಸಿರುತ್ತಾರೆ. ಇವರೆಲ್ಲರೂ ತಿಂಗಳಿಗೆ ಲಕ್ಷದ ಲೆಕ್ಕದಲ್ಲಿ ಸಂಪಾದಿಸುವವರು! ಅಂದು ಯಾವುದೋ ಲಡಬೂಸಿ ಪ್ಯಾಂಟು, ಗುಂಡಿ ಅಂಗಿ ತೊಟ್ಟು ಗಮಾರನಂತೆ ಅಲ್ಲಿಗೆ ಹೋಗಿ ನಿಂತಿದ್ದ ನನ್ನ ಬಳಿಗೆ ಅದೆಷ್ಟೋ ಜನ ಗೋಲ್ಡ್, ಸಿಲ್ವರ್ ಗಳು ಬಂದು ಕೈ ಕುಲುಕಿದ್ದರು! ಅಂಥಹಾ ಮಹಾನ್ ವ್ಯಕ್ತಿಯೊಬ್ಬರು ಎದುರು ನಿಂತು ‘ನೀನೂ ಸೇರಿಕೋ’ ಎಂಬಂತೆ ಆತ್ಮೀಯವಾಗಿ ಕೈಕುಲುಕಿದರೆ ಯಾವ ಗಮಾರ ತಾನೇ ಇಲ್ಲ ಎಂದಾನು? ಅವರ ರೀತಿ, ನೀತಿ ಹಾಗೂ ಅವರು ಬೆಳೆದ ಕಥೆಗಳಿಗೆ ಮಾರುಹೋದ ನಾನೂ ಅದರ ಸದಸ್ಯನಾಗಲು ನಿರ್ಧರಿಸಿದೆ.
ಅದಾಗಿ ಕೆಲ ದಿನಗಳಿಗೇ ನನ್ನ ರೂಮಿಗೆ ಕೊಂಚ ಸಮೀಪದಲ್ಲಿ ವಾಸವಾಗಿದ್ದ, ಸಾಕ್ಷಾತ್ ಗೋಲ್ಡ್ ಲೆವೆಲ್ ನಲ್ಲಿದ್ದ ವ್ಯಕ್ತಿಯೊಬ್ಬರು ನನ್ನನ್ನು ತಮ್ಮ ಮನೆಗೆ ಕರೆದದ್ದಲ್ಲದೇ, ಆ ದಿನ ಸಂಜೆ ನಡೆಯಲಿರುವ ಸಕ್ಸಸ್ ಮೀಟಿಂಗ್ ಗೆ ನನ್ನೊಟ್ಟಿಗೆ ಬನ್ನಿ ಎಂದು ಅಹ್ವಾನಿಸಿದರು. ಹೇಳೀಕೇಳೀ ಅವರು ಐಐಟಿಯ ವೈದ್ಯಕೀಯ ವಿಭಾಗದಲ್ಲಿ ಕೆಲಸಮಾಡುತ್ತಿದ್ದವರು! ಅಂಥಹವರ ಮಾತನ್ನು ತಿರಸ್ಕರಿಸುವುದಾದರೂ ಹೇಗೆ? ನಾನು ಅವರು ಹೇಳಿದ ಸಮಯಕ್ಕೆ ಸರಿಯಾಗಿ ಅವರ ಮನೆ ತಲುಪಿದೆ. ಸಾಕಷ್ಟು ಮರ್ಯಾದೆಯೊಂದಿಗೆ ನನ್ನನ್ನು ಬರಮಾಡಿಕೊಂಡ ಅವರು ಇಂಗ್ಲೀಷಿನ ಬುಕ್ಕೊಂದನ್ನು ನನಗೆ ಕೊಟ್ಟು “ನೋಡಿ, ಇದು ಬಹಳ ಅಪರೂಪದ ಪುಸ್ತಕ. ನಾನಿದನ್ನು ಬಹಳ ಕಷ್ಟಪಟ್ಟು ಖರೀದಿಸಿದೆ. ಈ ಬ್ಯುಸಿನೆಸ್ ಮಾಡುವವರಿಗೆ ಇದು ಭಗವದ್ಗೀತೆ ಇದ್ದಂತೆ. ಇದನ್ನು ಓದಿ ಜೋಪಾನವಾಗಿ ನನಗೆ ಹಿಂದಿರುಗಿಸಿ” ಎಂದರು. ನಂತರ ಅವರದೇ ಕಾರಿನಲ್ಲಿ ನನ್ನನ್ನು ಮೀಟಿಂಗ್ ನಡೆಯಲಿರುವ ಜಾಗಕ್ಕೆ ಕರೆದೊಯ್ದರು. ದಾರಿಯುದ್ದಕ್ಕೂ ಆ ಬ್ಯುಸಿನೆಸ್ ಮಾಡಿ ಕೋಟ್ಯಾಧಿಪತಿಯಾದ ಕೊರಿಯಾದವನೊಬ್ಬನ ಸಂದರ್ಶನದ ಧ್ವನಿಸುರುಳಿಯನ್ನು ಹಾಕಿ ‘ಇದನ್ನು ಆಲಿಸಿ’ ಎಂದರು. ಏನೆಂದೇ ತಿಳಿಯದ ಆ ಸಂಭಾಷಣೆಯನ್ನು ಆಲಿಸುತ್ತಾ ನಾನು ಎಲ್ಲವೂ ಅರ್ಥವಾಗುತ್ತಿರುವಂತೆ ನಟಿಸುತ್ತಾ ಕುಳಿತೆ.
ನಾನು ಇದುವರೆಗೆ ಕೇಳಿಯೇ ಇಲ್ಲದ ಏರಿಯಾವೊಂದರ ಭವ್ಯ ಸಭಾಭವನದಲ್ಲಿ ಆಯೋಜಿಸಿದ್ದ ಆ ಸಕ್ಸಸ್ ಮೀಟ್ ನಲ್ಲಿ ಪಾಲ್ಗೊಂಡ ನಾನು ಗಮನಿಸಿದ ಒಂದು ಅಂಶವೆಂದರೆ ಇಲ್ಲಿ ಗೋಲ್ಡ್, ಡೈಮಂಡ್, ಪ್ಲಾಟಿನಂಗಳಾಗಿ ನಿಂತಿರುವವರೆಲ್ಲರೂ ಮೂಲತಃ ಸಿರಿವಂತರೇ. ತಳಮಟ್ಟದ ಕುಟುಂಬವರ್ಗದಿಂದ ಅಥವಾ ಬಡ ಹಿನ್ನೆಲೆಯಿಂದ ಬಂದವರು ಇಲ್ಲಿ ಕಡಿಮೆ. ಅಂಗಡಿಗಳಲ್ಲಿ ಸಿಗುವ ಮಾಮೂಲು ವಸ್ತುಗಳಿಗಿಂತ ಹೆಚ್ಚಿನ ಬೆಲೆ ಹೊಂದಿರುವ ಈ ಚೈನ್ ಲಿಂಕ್ ಉತ್ಪನ್ನಗಳನ್ನು ಮಾರುವುದು ಪ್ರಾಯಶಃ ಸಿರಿವಂತ ಬಂಧು-ಸ್ನೇಹಿತರಿಂದಲೇ ಸುತ್ತುವರಿದಿರುವ ಇವರಿಗೆ ಕಷ್ಟವಾಗಿರುವುದಿಲ್ಲ. ಆದರೆ ಹತ್ತು ರೂಪಾಯಿಗೆ ಮೂರು ಬರುವ ಚೋರ್ ಬಜಾರುಗಳನ್ನೇ ಹುಡುಕಿ ಓಡುವ ನಾವು ಈ ಐಶಾರಾಮಿ ಉತ್ಪನ್ನಗಳನ್ನು ಮಾರುವುದಾದರೂ ಯಾರಿಗೆ?
ಲೆಕ್ಕಾಚಾರದ ಚೈನ್ ಹಾಗೆ ತುಂಡಾಗಿತ್ತು.
***********
ಹಲವಾರು ವರ್ಷಗಳಿಂದ ಪತ್ತೆಯೇ ಇಲ್ಲದ ಗೆಳೆಯನೊಬ್ಬ ಈಗ ಇದ್ದಕ್ಕಿದ್ದಂತೆ ಕರೆಮಾಡಿದನೆಂದರೆ ಒಂದೋ ಅವನಿಗ ಮದುವೆ ನಿಶ್ಚಯವಾಗಿದೆ, ಇಲ್ಲಾ ಅವನು ಚೈನ್ ಲಿಂಕ್ ಬ್ಯುಸಿನೆಸ್ ಮಾಡುತ್ತಿದ್ದಾನೆ! ಈ ವ್ಯವಹಾರಕ್ಕೆ ಇನ್ನೊಬ್ಬರನ್ನು ಸೆಳೆಯಲು ಹೊರಟವನು ಮೊದಲನೆಯದಾಗಿ ತಾನು ಬಹಳ ಸಿರಿವಂತನಾಗಿರುವುದಾಗಿ ತೋರಿಸಿಕೊಳ್ಳಬೇಕಾಗುತ್ತದೆ. ಆನಂತರ ‘ನಿಮಗೂ ಇಂಥದೇ ಸಿರಿವಂತಿಕೆ ಬೇಕೆಂದರೆ ನನ್ನ ಬ್ಯುಸಿನೆಸ್ ಗೆ ಬನ್ನಿ’ ಎಂದು ಕರೆಯುವುದು ಅವನಿಗೆ ಸುಲಭವಾಗುತ್ತದೆ. ಕೆಲವು ದಿನಗಳ ಕೆಳಗೆ ಹೀಗೇ ಆಯಿತು. ಸಹಪಾಠಿಯಾಗಿದ್ದಾಗಲೇ ಸರಿಯಾಗಿ ಮಾತನಾಡದಿದ್ದ ಡಿಗ್ರಿ ದಿನಗಳ ಗೆಳೆಯನೊಬ್ಬ ಇದ್ದಕ್ಕಿದ್ದಂತೆ ಫೇಸ್ಬುಕ್ಕಿನಲ್ಲಿ ಮೆಸೇಜ್ ಮಾಡಿ ನನ್ನ ನಂಬರ್ ಪಡೆದುಕೊಂಡ. ತನ್ನ ನಂಬರನ್ನೂ ಕೊಟ್ಟು ಸೇವ್ ಮಾಡಿಕೊಳ್ಳುವಂತೆ ಹೇಳಿದ. ಕೆಲ ದಿನಗಳ ಕಾಲ ತಾನು ಕೊಂಡ ಐಶಾರಾಮಿ ಬೈಕಿನದ್ದೂ, ಹೋಗುವ ಜಾಲಿ ಟ್ರಿಪ್ ಗಳದ್ದೂ ಫೋಟೋವನ್ನು ಸ್ಟೇಟಸ್ ನಲ್ಲಿ ಹಾಕುತ್ತಿದ್ದ ಅವನು ಕೊನೆಗೊಂದು ದಿನ ನನಗೆ ಕರೆಮಾಡಿಯೇಬಿಟ್ಟ. ಅಷ್ಟಾಗಿ ಬಳಕೆಯಿಲ್ಲದ ಅವನೊಂದಿಗೆ ಏನು ಮಾತನಾಡುವುದೆಂದು ನಾನು ಯೋಚಿಸುತ್ತಿದ್ದರೆ ಅವನು ಸಂಬಳಕ್ಕೆ ದಿನವಿಡೀ ಮಾಡುವ ನೈನ್ ಟೂ ಸಿಕ್ಸ್ ಉದ್ಯೋಗದ ಬಾಧಕಗಳ ಬಗ್ಗೆಯೇ ಹೇಳತೊಡಗಿದ. ಅಲ್ಲದೆ ಮತ್ತೆ ಮತ್ತೆ ‘ನಾನು ಮೊದಲು ಜಾಬ್ ಮಾಡುವಾಗ ಬಹಳ ತೊಂದರೆಯಾಗುತ್ತಿತ್ತು, ಈಗ ಪರವಾಗಿಲ್ಲ. ಅರಾಮವಾಗಿದ್ದೇನೆ’ ಎಂಬ ಮಾತನ್ನು ಒತ್ತಿ ಒತ್ತಿ ಹೇಳುತ್ತಿದ್ದ. ನಾನು ಯಾವ ವಿಷಯದ ಬಗ್ಗೆ ಮಾತನಾಡಿದರೂ ಅವನು ಸುತ್ತೀ ಬಳಸೀ ಅಲ್ಲಿಗೇ ಬರುತ್ತಿದ್ದ. ಈಗ ತಾನು ಮಾಡುತ್ತಿರುವ ಚೈನ್ ಲಿಂಕ್ ವ್ಯವಹಾರವು ತನಗೆ ಭಾರೀ ಬಿಡುವನ್ನೂ, ಹಣವನ್ನೂ ಕೊಟ್ಟಿದೆ ಎಂದು ಪರೋಕ್ಷವಾಗಿ ಹೇಳುವ ಮೂಲಕ ನನ್ನನ್ನು ಅದರತ್ತ ಸೆಳೆಯುವುದು ಅವನ ಉದ್ದೇಶವಾಗಿತ್ತು. ಮೊದಲ ಮಾತಿನಲ್ಲೇ ಅವನ ಸಂಚನ್ನು ಅರ್ಥಮಾಡಿಕೊಂಡ ನಾನು ಏನೋ ನೆಪ ಹೇಳಿ ಪಾರಾದೆ.
ನನ್ನಂತೆಯೇ ಇತರ ಗೆಳೆಯರಿಗೂ ಅವನು ಹೀಗೇ ಬೆನ್ನುಹತ್ತಿದ್ದನೆಂಬುದು ನನಗೆ ನಂತರ ತಿಳಿಯಿತು. ಇವನಿಂದ ಪಾರಾಗಲೆಂದು ನನ್ನ ಇನ್ನೊಬ್ಬ ಗೆಳಯ ತಾನೀಗ ಬೆಂಗಳೂರಿನಲ್ಲಿ ಇಲ್ಲವೆಂದೂ, ಅಸಲು ಭಾರತದಲ್ಲೇ ಇಲ್ಲವೆಂದೂ ಬುರುಡೆ ಬಿಟ್ಟಿದ್ದ! ಇತ್ತೀಚೆಗೆ ಅವನನ್ನು ಎಲ್ಲೇ ಕಂಡರೂ ಅವನ ಉಳಿದ ಗೆಳೆಯರು ಕಾಂಪೌಂಡ್ ಹಾರಿ ಪರಾರಿಯಾಗುತ್ತಿದ್ದಾರು ಎಂಬ ಸಂಗತಿಯೂ ನನ್ನ ಕಿವಿಗೆ ಬಿತ್ತು. ಆದರೂ ತಲೆಕೆಡಿಸಿಕೊಳ್ಳದ ಆತ ಕೈಗೆ ಸಿಕ್ಕವರನ್ನೆಲ್ಲಾ ಹಿಡಿದು ತನ್ನ ಬ್ಯುಸಿನೆಸ್ ಗೆ ಸೇರಿಸಿ ಸಾವಿರಗಟ್ಟಲೆ ಕಕ್ಕಿಸಿದ್ದ. ಇದನ್ನು ಕೇಳಿ ಈಗಾಗಲೇ ನಾನು ವಾಸವಾಗಿರುವ ಏರಿಯಾ ಯಾವುದೆಂದು ಅವನಿಗೆ ಹೇಳಿದ್ದ ನನಗೆ ಆಚೆ ಹೋಗಲಿಕ್ಕೇ ಭಯವಾಗತೊಡಗಿತು, ಅವನು ಯಾವ ದಿಕ್ಕಿನಿಂದ ನುಗ್ಗಿಬಂದು ಚೈನ್ ಲಿಂಕ್ ಬಗ್ಗೆ ಭಾಷಣ ಬಿಗಿದು ಹಣ ಪೀಕಿಸುತ್ತಾನೋ ಎಂದು!
ಈಗೀಗ ಉದ್ಯೋಗಿಗಳು ಮಾತ್ರವಲ್ಲದೆ ತಾನೂ ಗಂಡನಿಗೆ ಆದಾಯದಲ್ಲಿ ನೆರವಾಗಬೇಕೆಂದು ಹಂಬಲಿಸುವ ಹೌಸ್ ವೈಫ್ ಗಳನ್ನೂ ಈ ಚೈನ್ ಲಿಂಕ್ ಗುರಿಯಾಗಿಸಿಕೊಂಡಿದೆ. “ಮೊದಲು ಐದು ಸಾವಿರ ಕಟ್ಟಿ ಮೆಂಬರ್ರಾಗಿ, ನಂತರ ನಮ್ಮ ಕೆಳಗೆ ಐದು ಜನರನ್ನ ಸೇರಿಸಿದರೆ ಸಾಕಂತೆ ಕಣ್ರೀ. ನಮ್ಮ ಹಣ ವಾಪಾಸ್ ಬರುತ್ತಂತೆ. ಜೊತೆಗೆ ವರ್ಷಕ್ಕೆ ಎರೆಡು ಸೀರೆಗಳನ್ನ ಡಿಸ್ಕೌಂಟ್ ನಲ್ಲಿ ಕೊಡುತ್ತಾರಂತೆ. ನಾನು ಯಜಮಾನ್ರಿಗೆ ಹೇಳದೇ ಮೆಂಬರ್ ಆದೆ. ನೀವೂ ಆಗ್ರೀ” ಎಂದೆಲ್ಲಾ ಮಾತನಾಡಿಕೊಳ್ಳುವ ಗೃಹಿಣಿಯರೇನೂ ಕಡಿಮೆಯಿಲ್ಲ. ಎಲ್ಲವನ್ನೂ ಮೋಸ ಎನ್ನಲಾಗುವುದಿಲ್ಲವಾದರೂ, ಪ್ರತಿಯೊಂದರಲ್ಲೂ ಅಸಲಿ-ನಕಲಿ ಎರೆಡೂ ಇರುತ್ತವಾದರೂ, ಈ ಚೈನ್ ಲಿಂಕ್ ಎಂದು ಹತ್ತಿರ ಬರುವವರನ್ನು ಜನ ನೋಡುವ ರೀತಿಯೇ ಬೇರೆ. ‘ಉತ್ಪಾದಕರಿಂದ ನೇರ ಬಳಕೆದಾರರ ಕೈಗೆ’ ಎಂಬ ಹಣೆಪಟ್ಟಿ ಹೊತ್ತು ಬರುತ್ತವಾದರೂ ಈ ಉತ್ಪನ್ನಗಳ ದರ ಬಹಳ ಜಾಸ್ತಿಯಾಗಿರುವುದೇ ಸಮಾನ್ಯ ಜನ ಇದರ ಹೆಸರು ಕೇಳಿ ಬೆಚ್ಚಿ ಬೀಳುವುದಕ್ಕೆ ಕಾರಣ.
ಧನ್ಯವಾದಗಳೊಂದಿಗೆ,
ವಿನಾಯಕ ಅರಳಸುರಳಿ,