ನಿಜವಾಗಿಯೂ ಒಂದು “ಸಸ್ಪೆನ್ಸ್” ಚಿತ್ರ ಗ್ರೇಟ್ ಅನ್ನಿಸಿಕೊಳ್ಳುವುದು ಯಾವುದರಿಂದ? ಅಂತ್ಯವನ್ನು ನಾವು ಊಹಿಸಲು ಆಗದಿರುವುದೇ ಅತೀ ದೊಡ್ಡ ಮಾನದಂಡವಾ? ಅಥವಾ ಚಿತ್ರದುದ್ದಕ್ಕೂ ಹೆಚ್ಚು ಹೆಚ್ಚು ತಿರುವುಗಳಿದ್ದು ನಮ್ಮನ್ನು ಥ್ರಿಲ್ ಮಾಡಿತ್ತು ಅನ್ನುವುದರ ಮೇಲೆ ನಿರ್ಧಾರವಾಗಿದೆಯಾ? ಹೀಗೇ ಅಂತ ನಿಖರವಾಗಿ ಹೇಳಲು ಆಗುವುದಿಲ್ಲ. ಸುಳಿವುಗಳು ಹೆಚ್ಚಿದ್ದರೆ ನಾವು ಪರಿಹಾರವನ್ನು ಕಂಡುಹಿಡಿದ ಸಂತೃಪ್ತಿ ಸಿಗುವುದಿಲ್ಲ, ಕಮ್ಮಿ ಇದ್ದರೆ ಚಿತ್ರದೊಂದಿಗೆ ಬಂಧ ಬೆಸೆಯುವುದಿಲ್ಲ. ಈ ಸಂತುಲನವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ. ನನ್ನ ಪ್ರಕಾರ ಒಂದು ಅತ್ಯುತ್ತಮ “ಸಸ್ಪೆನ್ಸ್” ಚಿತ್ರ ಎರಡನೆಯ ಮತ್ತು ಮುಂದಿನ ವೀಕ್ಷಣೆಗಳಲ್ಲೂ ನಮ್ಮ ಅಷ್ಟೇ ಹಿಡಿದಿಡುತ್ತದೆ. ಕೇವಲ ಅಂತ್ಯದ ಮೇಲೆ ಅವಲಂಬಿತವಾಗಿರದೆ, ಪಾತ್ರಗಳು ಸನ್ನಿವೇಶಗಳು ಕೂಡ ನಮ್ಮನ್ನು ಆಕರ್ಷಿಸಿರುತ್ತವೆ! ಈ ಎಲ್ಲಾ ಅಂಶಗಳನ್ನೂ ಯಶಸ್ವಿಯಾಗಿ ಒಳಗೊಂಡಿರುವ ಚಿತ್ರ 1974ರಲ್ಲಿ ಬಿಡುಗಡೆಯಾದ ಜಾಕ್ ನಿಕೋಲ್ಸನ್ ಮತ್ತು ಫೇಯ್ ಡನವೆ ಅಭಿನಯದ, ರೋಮನ್ ಪೊಲನ್ಸ್ಕಿ ನಿರ್ದೇಶನದ “ಚೈನಾಟೌನ್”.
ಜೆ ಜೆ ಗಿಟ್ಟೆಸ್, ಲಾಸ್ ಎಂಜಲೀಸ್ ನ ಒಬ್ಬ ಪ್ರೈವೇಟ್ ಇನ್ವೆಸ್ಟಿಗೇಟರ್. ಒಂದು ದಿನ ಎವೆಲಿನ್ ಮುಲ್ರೆ ಅನ್ನುವಾಕೆ ಇವನ ಆಫೀಸಿಗೆ ಬರುತ್ತಾಳೆ. ತನ್ನ ಗಂಡ ಹಾಲಿಸ್ ಮುಲ್ರೆ ಗೆ ಇನ್ನೊಬ್ಬಳ ಜೊತೆ ಸಂಬಂಧವಿರುವುದರ ಬಗ್ಗೆ ತನಗೆ ಅನುಮಾನವಿರುವುದಾಗಿ ಹೇಳಿ, ಅವನನ್ನು ಹಿಂಬಾಲಿಸುವ ಕೆಲಸಕ್ಕೆ ಗಿಟ್ಟಿಸ್ ಅನ್ನು ನೇಮಿಸುತ್ತಾಳೆ. ವಾಟರ್ ಡಿಪಾರ್ಟ್ಮೆಂಟಿನ ಮುಖ್ಯ ಇಂಜಿನಿಯರ್ ಆಗಿರುವ ಹಾಲಿಸ್ ಆ ಊರಲ್ಲಿ ಹೊಸ ಅಣೆಕಟ್ಟನ್ನು ಕಟ್ಟುವುದರ ಬಗ್ಗೆ ಅಸಮ್ಮತಿ ಹೊಂದಿರುತ್ತಾನೆ. ನೆರಳಿನಂತೆ ಹಿಂಬಾಲಿಸುವ ಗಿಟ್ಟೆಸ್, ಹಾಲಿಸ್ ಒಬ್ಬ ಹುಡುಗಿಯನ್ನು ಗುಟ್ಟಾಗಿ ಭೇಟಿಯಾದಾಗ, ಅವರಿಬ್ಬರ ಫೋಟೋ ತೆಗೆದು ಎವೆಲಿನ್ ಗೆ ತಲುಪಿಸುತ್ತಾನೆ.
ಮರುದಿನ ಈ ಫೋಟೋಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ. ಗಿಟ್ಟೆಸ್ ಆಫೀಸಿಗೆ ಇನ್ನೊಬ್ಬ ಹೆಂಗಸು ಬಂದು ತಾನೇ ನಿಜವಾದ ಎವೆಲಿನ್, ನನ್ನ ಗಂಡನ ಹೆಸರನ್ನು ಹೀಗೆ ಹಾಳು ಮಾಡಿದ್ದಕ್ಕಾಗಿ ನಿಮ್ಮನ್ನು ಕೋರ್ಟಿಗೆ ಎಳೆಯುತ್ತೇನೆ ಅಂತ ಧಮಕಿ ಹಾಕಿದಾಗ ಗಿಟ್ಟೆಸ್ ಗಲಿಬಿಲಿಗೊಳ್ಳುತ್ತಾನೆ. ಅದೇ ದಿನ ಜಲಾಶಯದಲ್ಲಿ ಹಾಲಿಸ್ ಹೆಣ ಸಿಗುತ್ತದೆ, ಅವನ ಜೊತೆ ಫೋಟೋದಲ್ಲಿದ್ದ ಆ ಹುಡುಗಿ ನಾಪತ್ತೆ ಆಗಿರುತ್ತಾಳೆ. ತನ್ನನ್ನು ಮೋಸದಿಂದ ಬಳಸಿಕೊಂಡವರೇ ಹಾಲಿಸ್ ಅನ್ನು ಕೊಂದಿದ್ದಾರೆ ಅಂತ ಗಿಟ್ಟೆಸ್ ಗೆ ಮನವರಿಕೆಯಾಗುತ್ತದೆ. ಈ ಸನ್ನಿವೇಶದ ಬಗ್ಗೆ ಆಳವಾಗಿ ತಿಳಿಯುವ ಸಲುವಾಗಿ ವಾಟರ್ ಡಿಪಾರ್ಟ್ಮೆಂಟಿಗೆ ಹೋದಾಗ, ಹಾಲಿಸ್ ಮತ್ತು ಎವೆಲಿನ್ ತಂದೆ “ನೋವ ಕ್ರಾಸ್” ಮುಂಚೆ ಬಿಸಿನೆಸ್ ಪಾರ್ಟ್ನರ್ಸ್ ಆಗಿದ್ದರು, ಆದರೆ ಈಗ ಎವೆಲಿನ್ ಮತ್ತು ಕ್ರಾಸ್ ಒಬ್ಬರೊಡನೆ ಇನ್ನೊಬ್ಬರು ಮಾತೂ ಆಡದಷ್ಟು ದೂರವಾಗಿದ್ದಾರೆ ಅಂತ ತಿಳಿಯುತ್ತದೆ.
ತನ್ನ ತನಿಖೆಯ ಅವಧಿಯಲ್ಲಿ ಗಿಟ್ಟೆಸ್ ಕ್ರಾಸ್ ಅನ್ನು ಭೇಟಿಯಾದಾಗ, ಹಾಲಿಸ್ ಗೆಳತಿಯನ್ನು ಹುಡುಕಿಕೊಡುವ ಕೆಲಸಕ್ಕೆ ಎರಡರಷ್ಟು ಫೀಸನ್ನು ಕೊಡುವುದಾಗಿ ಕ್ರಾಸ್ ಹೇಳುತ್ತಾನೆ. ಅದೇ ವೇಳೆಗೆ, ಸುತ್ತಮುತ್ತಲಿನ ದೊಡ್ಡ ಪ್ರಮಾಣದ ಭೂಮಿಯ ಮಾಲೀಕತ್ವ ತೀರ ಇತ್ತೀಚಿನ ದಿನಗಳಲ್ಲಿ ಹಸ್ತಾಂತರ ಆಗಿರುವುದು ಗಿಟ್ಟೆಸ್ ಗಮನಕ್ಕೆ ಬರುತ್ತದೆ. ಹೊಸ ಮಾಲೀಕತ್ವವೆಲ್ಲಾ ಬೇನಾಮಿ. ಗಿಟ್ಟೆಸ್ ಗೆ ಎವೆಲಿನ್ ಜೊತೆಗಿನ ಸಲುಗೆ ಹೆಚ್ಚಾಗುತ್ತಿರುತ್ತದೆ, ಆದರೆ ಹಾಲಿಸ್ ನ ಗೆಳತಿ ಕಾಣೆಯಾಗುವುದರ ಹಿಂದೆ ಎವೆಲಿನ್ ಕೈವಾಡ ಇದೆ ಅನ್ನುವ ಅನುಮಾನವೂ ಗಾಢವಾಗುತ್ತಾ ಹೋಗುತ್ತದೆ. ಈ ನಿಗೂಢ ಕೊಲೆಯ ಬಗ್ಗೆ ಕಂಡುಹಿಡಿಯಲು ಹೋದಂತೆಲ್ಲಾ ಎಲ್ಲಾ ಎಳೆಗಳೂ ಇನ್ನೂ ಗೋಜಲುಗೋಜಲಾಗುತ್ತಾ ಹೋಗುತ್ತವೆ!
ಚಿತ್ರದ ಗ್ರೇಟ್ನೆಸ್ ಇರುವುದು ಸರಳವಾದ ಕಥೆಯಲ್ಲೇ ಕುತೂಹಲವನ್ನು ಕಾಯ್ದಿಟ್ಟುಕೊಂಡಿರುವುದರಲ್ಲಿ. ಚಿತ್ರದಲ್ಲಿ ಮುಖ್ಯವಾಗಿ ಇರುವುದು ಕೇವಲ ಐದಾರು ಪಾತ್ರಗಳು. ಹಾಗಾಗಿ ಅನುಮಾನವನ್ನು ಒಬ್ಬರಿಂದ ಒಬ್ಬರಿಗೆ ವರ್ಗಾಯಿಸುವಂತಹ ನಿರೂಪಣೆಯನ್ನು ಹೆಣೆಯಲು ಆಗುವುದಿಲ್ಲ. ಬೇರೆ ಎಷ್ಟೋ ಚಿತ್ರಗಳಲ್ಲಿ ಆ ಕ್ಷಣಕ್ಕೆ ವಾಹ್ ಅನ್ನಿಸಿದ್ದರೂ, ಮತ್ತೆ ನೋಡಿದಾಗ ಪಾತ್ರ ನಡೆದುಕೊಂಡ ರೀತಿ ಅಸಮಂಜಸ ಅನ್ನಿಸುತ್ತದೆ. ಆದರೆ ಈ ಚಿತ್ರದಲ್ಲಿ ಚಿತ್ರಕಥೆ ಎಷ್ಟು ಗಟ್ಟಿಯಾಗಿದೆ ಅಂದರೆ, ಒಮ್ಮೆಯೂ ಹಾಗೆ ಅನ್ನಿಸುವುದಿಲ್ಲ. ಮೊದಲ ವೀಕ್ಷಣೆಯಲ್ಲಿ ಪಾತ್ರಗಳ ಪ್ರೇರಣೆ ಕೆಲವೊಮ್ಮೆ ಸ್ಪಷ್ಟವಾಗದಿದ್ದರೂ, ಸಸ್ಪೆನ್ಸ್ ಗೊತ್ತಾದ ನಂತರ ಪ್ರತೀ ಪಾತ್ರವೂ ಪ್ರತೀ ಸನ್ನಿವೇಶದಲ್ಲೂ ನಡೆದುಕೊಳ್ಳುವ ರೀತಿಗೆ ಸಮರ್ಥನೆ ಸಿಗುತ್ತದೆ.
ಬಹಳಷ್ಟು ಚಿತ್ರಗಳು ಮುಖ್ಯ ಕಥೆಯ ಜೊತೆಗೆ ಹಲವಾರು ಥೀಮ್ ಗಳನ್ನು ಒಳಗೊಂಡಿರುತ್ತವೆ. ಅವುಗಳಲ್ಲಿ ಕೆಲವು ಕಥೆಗೆ ಸಂಬಂಧವಿಲ್ಲದೆ ಪ್ರತ್ಯೇಕವಾಗಿ ಉಳಿದುಹೋದರೆ, ಇನ್ನು ಕೆಲವಕ್ಕೆ ಸಂಪೂರ್ಣವಾಗಿ ನ್ಯಾಯ ಸಲ್ಲಿಸಲು ಹೊರಟರೆ ಕಥೆಯ ವೇಗಕ್ಕೆ, ಆಶಯಕ್ಕೆ ಧಕ್ಕೆ ಉಂಟಾಗುತ್ತದೆ. ಆದರೆ ಈ ಚಿತ್ರದಲ್ಲಿ ಎಲ್ಲಾ ಪದರಗಳ ಸಮ್ಮಿಲನ ಪರಿಪೂರ್ಣವಾಗಿದೆ. ಚಿತ್ರ ಮುಖ್ಯವಾಗಿ ಮೂರು ಪದರಗಳಲ್ಲಿ ಸಾಗುತ್ತದೆ. ಮೊದಲನೆಯದು ಹಾಲಿಸ್ ಕೊಲೆ. ಈ ಕೊಲೆ ಯಾಕಾಯಿತು, ಮಾಡಿದವರು ಯಾರು ಅನ್ನುವ ಮರ್ಡರ್ ಮಿಸ್ಟರಿ. ಎರಡನೆಯದು ಕುಟುಂಬದ ಕಥೆ – ಹಾಲಿಸ್ ಮತ್ತು ಕ್ರಾಸ್ ಬಿಸಿನೆಸ್ ಯಾಕೆ ಮುರಿದು ಬಿತ್ತು, ಹಾಲಿಸ್ ಗೆಳತಿ ಯಾರು, ಎವೆಲಿನ್ ತನ್ನ ತಂದೆಯ ಜೊತೆ ಯಾಕೆ ಮಾತಾಡುವುದಿಲ್ಲ ಅನ್ನುವ ವಿಚಾರಗಳು. ಮೂರನೆಯದು – ನೀರಿನ ವಿಷಯದಲ್ಲಿ ನಡೆಯುವ ಅಕ್ರಮಗಳು. ಆಣೆಕಟ್ಟು ಕಟ್ಟುವ ವಿಚಾರ, ಅದರಿಂದ ರೈತರ ಮೇಲೆ ಉಂಟಾಗುವ ಪರಿಣಾಮಗಳು ಇತ್ಯಾದಿ.
ಚಿತ್ರದ ಪ್ರಮುಖವಾದ ಥೀಮ್ “ನೀರು”. ಚಿತ್ರದುದ್ದಕ್ಕೂ ನೀರನ್ನು ಬಳಸಿಕೊಂಡಿರುವ ರೀತಿ ಅದ್ಭುತ. ಕೊಲೆಯಾಗುವವ ವಾಟರ್ ಡಿಪಾರ್ಟ್ಮೆಂಟಿನ ಇಂಜಿನಿಯರ್. ಸಾಯುವುದು ನೀರಿನಲ್ಲಿ ಮುಳುಗಿ. ನೀರಿನ ವಿಷಯದಲ್ಲಿ ನಡೆಯುವ ಅಕ್ರಮ ವ್ಯವಹಾರಗಳು ಕಥೆಗೆ ತಿರುವನ್ನು ಕೊಡುತ್ತದೆ. ಕಡೆಗೆ ಗಿಟ್ಟೆಸ್ ಗೆ ಕೊಲೆಗಾರರ ಬಗ್ಗೆ ನಿಜವಾದ ಸುಳಿವು ಸಿಗುವುದೂ ನೀರಿನಿಂದಲೇ!
ಇಷ್ಟಕ್ಕೂ ಈ ಚಿತ್ರಕ್ಕೆ “ಚೈನಾಟೌನ್” ಅಂತ ಯಾಕೆ ಹೆಸರು ಅಂದ್ರಾ? ಚಿಕ್ಕದಾಗಿ ಉತ್ತರಿಸುತ್ತೀನಿ – ಚಿತ್ರ ನೋಡಿ!
*****