ಚೈತ್ರಳೆಂಬ ಚಿಗುರೆ ಮರಿ ಚಿಗುರಿದ ಹೊತ್ತು: ಷಡಕ್ಷರಿ ತರಬೇನಹಳ್ಳಿ


ಕಳೆದ ಕೆಲವು ತಿಂಗಳುಗಳಿಂದ ನಮ್ಮ ಮನೆಯಲ್ಲಿ ಯಾರು ಮಾತನಾಡಿದರೂ ಅವಳು ಗರ್ಭದರಿಸಿದ ಬಗ್ಗೆಯೇ ಚರ್ಚೆ. ಅವಳು ನಮ್ಮ ಮನೆಗೆ ಬಂದು ಎಷ್ಟು ತಿಂಗಳುಗಳಾದವು? ಆದರೂ ಯಾಕೆ ಅವಳು ಇನ್ನೂ ಮರಿ ಹಾಕಲಿಲ್ಲ? ಎಂಬೆಲ್ಲ ಅನೇಕರ ತೀರದ ಕುತೂಹಲಗಳಿಗೆ ಉತ್ತರವೆಂಬಂತೆ ಅವಳು ಗರ್ಭದರಿಸಿದ ಸೂಚನೆ ನೀಡಿ ನಮ್ಮೆಲ್ಲರ  ಪ್ರಶ್ನೆಗಳಿಗೆ ಉತ್ತರಿಸಿದ್ದಳು.

ಅವಳು ನಮ್ಮ ಮನೆಗೆ ಬಂದ ಮೊದಲ ದಿನಗಳ ನೆನಪು ಇನ್ನೂ ಹಸಿರಾಗಿದೆ. ಇವಳ ಅಕ್ಕ ನನ್ನವಳ ತವರೂರಿನಿಂದ ಬಂದ ಶ್ವೇತ ನಮ್ಮ ತೋಟದಲ್ಲಿ ಅಂಡಲೆದು ಹಸಿರುಕ್ಕುವ ಸೊಪ್ಪು ಸೆದೆ ತಿಂಡುಂಡು ಪೋತರಾಜ, ಡಾಲಿ,ಡಬಿ ಎಂಬ ಮೂರು ಮರಿ ಮಕ್ಕಳನ್ನು ಹೆತ್ತವಳಾದಳು. ಒಮ್ಮೆಗೇ ಅವಳ ಹೆಚ್ಚಿದ ಸಂಸಾರದೊಂದಿಗೆ ನಮ್ಮ ಹಸು ಚಿನ್ನು ಹಟಕ್ಕೆ ಬಿದ್ದವಳಂತೆ ವರ್ಷಕ್ಕೊಂದರಂತೆ ಹೆತ್ತು ಕೊಟ್ಟ ಸೀಮ, ಸ್ವೀಟಿ, ಗೌರಿ ಜೊತೆಗೆ ಕರ್‍ಕಿ ಎಂಬ ೫ ವಯಸ್ಸಿಗೆ ಬಂದ ಹಸುಗಳಾದಾಗ ನನ್ನವಳಿಗೆ ಇವರೆಲ್ಲರ ಸಂಸಾರ ಸಾಗರದೊಡನೆ ಈಜುವುದು ಕಷ್ಟ ಕಷ್ಟವೆನಿಸಿತ್ತು.

ಹಾಗಾಗಿ ಹದಿಹರೆಯಕ್ಕೆ ಬಂದು ಗರ್ಭದರಿಸಿದ್ದ ಕರ್‍ಕಿ, ಸೀಮ,ಸ್ವೀಟಿ ಎಲ್ಲರನ್ನೂ ಅವರ ತವರು ಮನೆಯಂತಿದ್ದ ನಮ್ಮ ಮನೆಯಿಂದ ಅವರೆಲ್ಲರನ್ನೂ ಬೀಳ್ಕೊಟ್ಟೆವು. ಈ ಶ್ವೇತಳ ಇಡೀ ಸಂಸಾರವನ್ನೂ ಕೂಡ ನಮ್ಮೂರ ಸಂತೆಗೆ ಬೆಂಗಳೂರಿನಿಂದ ಬಂದ ಸಾಬರು ಕೊಂಡೊಯ್ದರು. ನಮ್ಮ ಮನೆಯಲ್ಲಿ ಈಗ ಉಳಿದವರು ಹಾಲುಕೊಡುತ್ತಿದ್ದ ಚಿನ್ನು ಮತ್ತು ಅವಳ ಎದೆಹಾಲು ಕುಡಿಯುತ್ತಿದ್ದ ಎಳೆಗರು ಗೌರಿ ಮಾತ್ರ.

ಚಿನ್ನು ಆ ಶ್ವೇತಳ ಇಡೀ ಸಂಸಾರಕ್ಕೆ ಎಷ್ಟು ಹೊಂದಿಕೊಂಡಿದ್ದಳೆಂದರೆ, ಅವರಲ್ಲಿ ಯಾರಾದರೂ ಅವಳ ಕಣ್ಣಿಗೆ ಕ್ಷಣಕಾಲ ಕಾಣದಿದ್ದರೆ ಕೂಗು ಹಾಕಿ ನಮ್ಮನ್ನು ಎಚ್ಚರಿಸುತ್ತಿದ್ದಳು. ಅವಳಷ್ಟು ಎಚ್ಚರಿಕೆಯಿಂದ ಅವರೆಲ್ಲರ ಚಲನವಲನಗಳ ಬಗ್ಗೆ ನಿಗಾ ವಹಿಸಿರುತ್ತಿದ್ದಳು. ಆ ಶ್ವೇತಳ ಸಂಸಾರಸ್ಥರೂ ಹಾಗೆಯೇ ಇವಳಿಗೆ ಹೊಂದಿಕೊಂಡಿದ್ದರು. ನಾವೇನಾದರೂ ಚಿನ್ನು ಒಬ್ಬಳನ್ನು ಮೇಯಲು ಬಿಟ್ಟರೆ ನಮ್ಮನ್ನೂ ಅವಳ ಜೊತೆ ಯಾಕೆ ಬಿಟ್ಟಿಲ್ಲ? ಎಂದು ಒಂದೇ ಸಮನೇ ಗಲಾಟೆಯೆಬ್ಬಿಸುತ್ತಿದ್ದರು.

ಇವರ ಆರ್ಭಟ ಕೇಳಲಾರದೇ ನನ್ನವಳು ಅಯ್ಯೋ ಸ್ವಲ್ಪ ಲೇಟಾಯ್ತು ಅಷ್ಟಕ್ಕೇ ಇಷ್ಟೋಂದು ಗಲಾಟೆಯಾ? ತಡೀರೀ ನಿಮ್ಮನ್ನೂ ಅವಳೊಂದಿಗೇ ಕಳಿಸುತ್ತೇನೆ ಎನ್ನುತ್ತಾ ಅವರೆಲ್ಲರನ್ನೂ ಸಮಾಧಾನಿಸುತ್ತಾ ಹಗ್ಗ ಬಿಚ್ಚಿ ಬಿಡುಗಡೆಗೊಳಿಸುತ್ತಿದ್ದಳು. ಇವರನ್ನು ಬಿಟ್ಟ ತಕ್ಷಣವೇ ಎಲ್ಲರೂ ತಮ್ಮ ತಮ್ಮ ಉದ್ದುದ್ದ ಕಿವಿಗಳನ್ನು ಜೋಲಾಡಿಸಿಕೊಳ್ಳುತ್ತಾ ಸರ್ವತಂತ್ರ ಸ್ವತಂತ್ರಗೊಂಡ ಖುಷಿಯಿಂದ ಶಿಳ್ಳೇ ಹಾಕುತ್ತಾ ಚಿನ್ನು ಇದ್ದೆಡೆಗೆ ನಾಗಾಲೋಟದಿಂದ ಧಾವಿಸುತ್ತಿದ್ದರು.

ನಾವು ಇವರಲ್ಲಿ ಯಾರಾದರೂ ತೋಟದಲ್ಲಿ ಮೇಯುವುದು ಕಣ್ಣಿಗೆ ಕಾಣದಿದ್ದರೆ ಮೊದಲು ಹುಡುಕುತ್ತಿದ್ದುದು ಚಿನ್ನು ಇರುವ ಜಾಗವನ್ನು. ದೊಡ್ಡದಾಗಿದ್ದ ಅವಳು ಕಂಡರೆ ಅವಳ ಸುತ್ತ ಮುತ್ತ ನೆಗೆದಾಡುತ್ತಾ ಶ್ವೇತಳ ಇಡೀ ಸಂಸಾರ ಮೇಯುತ್ತಿರುತ್ತಿತ್ತು. ಹಾಗಾಗಿ ಇವರಿಬ್ಬರ ಸಂಸಾರದಲ್ಲಿ ನಾವು ಯಾರೊಬ್ಬರನ್ನು ಹುಡುಕಬೇಕಾದರೂ ಇವರಿಬ್ಬರಲ್ಲಿ ಯಾರೊಬ್ಬರನ್ನು ಕಂಡು ಹಿಡಿದರೆ ಸಾಕಿತ್ತು ಮತ್ತೆಲ್ಲರನ್ನೂ ಸುಲಭವಾಗಿ ಪತ್ತೆಮಾಡಲು.

ಆದರೆ ಶ್ವೇತಳ ಇಡೀ ಸಂಸಾರ ನಮ್ಮ ಮನೆಯಿಂದ  ಒಮ್ಮೆಲೆ ಕಣ್ಮರೆಯಾದಾಗ ನೋಡಬೇಕಿತ್ತು ನಮ್ಮ ಚಿನ್ನುವಿನ ಒಳಗಿನ ಸಂಕಟ. ಅವಳು ಬಾಯ್ಬಿಟ್ಟು ಹೇಳಿಕೊಳ್ಳಲಾರಳೂ, ಆದರೂ ಅವರೆಲ್ಲರ ಅನುಪಸ್ಥಿತಿಯ ಶೂನ್ಯದ ಭಾವವನ್ನು ನಮಗೆ ದಾಟಿಸದೇ ಇರಲಾರದಾದಳು.ನಮಗೂ ಇವಳ ಒಳಗಿನ ಬೇಗುದಿ, ಸಂಕಟ, ತುಮುಲಗಳ ಅರಿವಿರಲಿಲ್ಲವೇನಂತಲ್ಲ. ಆದರೂ ನಮ್ಮ ಮನೆಯ  ಸದಸ್ಯರ ನಿರ್ವಹಣೆಯ ಮಿತಿ ಮೀರಿದ ಪರಿಸ್ಥಿತಿಯ ಸಂಧರ್ಭಕ್ಕೆ ಸ್ಪಂದಿಸಲೋಸುಗ ನನ್ನವಳು ಮಾಡಿದ ನಿರ್ಧಾರದ ಮುಂದೆ ನಾವೆಲ್ಲ ತಲೆಬಾಗಿದ್ದೆವು.

ಸ್ವಲ್ಪ ಸಮಯ ಕಳೆಯುವುದರೊಳಗೆ ನನ್ನವಳೇ ಚಿನ್ನುವಿನ ಶೂನ್ಯ ಮನಸ್ಕತನ, ಅವಳು ಮೇಯುವಾಗೆಲ್ಲಾ ಕತ್ತೆತ್ತಿ ಕೂಗುವುದು, ಮೇಯುವುದು ಬಿಟ್ಟು ಶ್ವೇತಳ ಸಂಸಾರ ಎಲ್ಲಿ ಕಳೆದು ಹೋಯ್ತೋ ಎಂದು ಹುಡುಕುತ್ತಾ ತೋಟದ ತುಂಬೆಲ್ಲಾ ಅಲೆಯುವುದು, ಮತ್ತೆ ಮತ್ತೆ ಅವರನ್ನೆಲ್ಲಾ ಕಟ್ಟುತ್ತಿದ್ದ ಜಾಗಕ್ಕೆ ಬಂದು ನಿಂತು ಮೂಸಿರಿಯುತ್ತಿದ್ದುದು ನೋಡಲಾರದಾದಳು.  ಚಿನ್ನುವಿನ ಈ ಪ್ರೀತಿಯ ಹುಚ್ಚು ಎಷ್ಟು ಭಾದಿಸಲಾರಂಬಿಸಿತೆಂದರೆ ಅವಳು ಹೊಟ್ಟೆತುಂಬಾ ಮೇಯುವುದನ್ನೇ ಬಿಟ್ಟು ಬಿಟ್ಟಿದ್ದಳು. ಅವಳ ಎಳೆ ಮಗಳು ಗೌರಿಯನ್ನೂ ಅಷ್ಟು ಹಚ್ಚಿಕೊಳ್ಳಲಾರದಷ್ಟು ಸ್ನೇಹಿತೆಯ ನೆನಪಲ್ಲಿ ಕಳೆದು ಹೋಗಿದ್ದಳು.
ದೂರದಲ್ಲಿದ್ದ ನನಗೆ ನನ್ನವಳು ಪ್ರತೀದಿನದ ವರದಿ ಒಪ್ಪಿಸುವಾಗ ಮೇಲಿನ ಎಲ್ಲಾ ಸವಿವರಗಳಿರುತ್ತಿದ್ದವು. ನನಗೂ ಒಳಗೊಳಗೇ ಸಂಕಟವಿದ್ದರೂ ಅವಳಿಗೆ ಯಾವುದೇ ಸಲಹೆ ಕೊಡಲಾರದವನಾಗಿದ್ದೆ. ಯಾಕಂದರೆ ಇಂಥಹಾ ಮಾನವ / ಮಾನವೇತರ ಸಂಬಂಧಗಳ ನಿರ್ವಹಣೆಯ ವಿಷಯಗಳಲ್ಲಿ ನನ್ನವಳು ಹಳ್ಳಿಯ ಪರಿಸರದಲ್ಲಿ ನನಗಿನ್ನ ಸಾವಿರಪಟ್ಟು ಹೆಚ್ಚು ಅನುಭವ ಹೊಂದಿದ್ದಳು. ಹಾಗಾಗಿ ನಾನೂ ನಿರಾಳವಾಗಿದ್ದೆ. ಅವಳೇ ಏನಾದರೂ ಒಂದು ಪರಿಹಾರ ಕಂಡುಕೊಳ್ಳುತ್ತಾಳೆ ಎಂಬ ಧೃಡವಾದ ನಂಬಿಕೆಯಿಂದ.

ನಾನು ಕೆಲತಿಂಗಳ ಹಿಂದೆ ವಾರಾಂತ್ಯದಲ್ಲಿ ಮನೆಗೆ ಹೋದಾಗ ಬೆಳಗಿನ ಕಾಫಿಯೊಂದಿಗೆ ಶ್ವೇತಳನ್ನು ಕಟ್ಟುತ್ತಿದ್ದ ಜಾಗದತ್ತ ನಡೆದರೆ ಏನಾಶ್ಚರ್‍ಯ! ಸೇಮ್ ಟು ಸೇಮ್ ಶ್ವೇತಳಂತೆಯೇ ಇರುವ ಇವಳನ್ನು ನೋಡಿ ಮತ್ತೆ ಮತ್ತೆ ಕಣ್ಣುಜ್ಜಿಕೊಂಡಿದ್ದೆ. ಬೆಳಗೆದ್ದು ನಾನಿನ್ನೂ ಕಣ್ಣು ಸರಿಯಾಗಿ ಬಿಟ್ಟಿಲ್ಲವೇನೋ ಎಂಬ ಅನುಮಾನಗೊಂಡವನು ಮತ್ತೊಮ್ಮೆ ಕಾಫಿ ಹೀರಿ ನಾನು ಎಚ್ಚರಗೊಂಡಿದ್ದೇನೆ ಎಂದು ನಂಬಿಕೊಂಡೇ ಇವಳ ಸಮೀಪ ಹೋದೆ. ಇದನ್ನೆಲ್ಲಾ ಮನೆಯೊಳಗಿನ ಕಿಟಕಿಯಲ್ಲಿ ನಿಂತು ತಮಾಶೆ ನೋಡುತ್ತಿದ್ದ ನನ್ನವಳು ಜೋರಾಗಿ ಕೇಳಿದ್ದಳು, ಹೇಗಿದ್ದಾಳೆ? ನಮ್ಮ ಹುಡುಗೀ! ನಮ್ಮೂರಿಂದ ಬಂದಿಳಿದ ಬೆಡಗೀ!

ನನ್ನವಳು ಚಿನ್ನುವಿನ ಪ್ರತೀ ದಿನದ ಸಂಕಟ ನೋಡಲಾರದೇ ಅವಳ ತೌರಿನಿಂದ ಮತ್ತೆ ಶ್ವೇತಳಂತೆಯೇ ಇರುವ ಅವಳದೇ ವಯಸ್ಸಿನ ಮತ್ತೊಂದು ಮೇಕೆಯನ್ನು ತಂದು ಅದೇ ಜಾಗಕ್ಕೆ ಕಟ್ಟಿದ್ದಳು. ಅಂದಿನಿಂದ ಚಿನ್ನು ಮತ್ತೆ ಮಾಮೂಲಿಯಂತಾಗಿದ್ದಳು. ಅವಳ ಮೇಯುವಿಕೆಯಲ್ಲಿ ಇವಳೊಂದಿಗೆ ಜೊತೆಯಾಗಿ ತೋಟದ ತುಂಬೆಲ್ಲ ಸುತ್ತರಿಯುತ್ತಾ ಹೊಟ್ಟೆತುಂಬಾ ಮೇಯುತ್ತಾ ಖುಷಿಯಾಗಿದ್ದಳು. ಇಬ್ಬರೂ ಮತ್ತೆ ಮೊದಲಿನಂತೆಯೇ ಒಬ್ಬರನ್ನು ಬಿಟ್ಟು ಮತ್ತೊಬ್ಬರು ಬದುಕಲಾರರೇನೋ ಎಂಬಂತೆ ಅನೇಕ ತಿಂಗಳುಗಳು ಬರೀ ಕ್ಷಣಗಳೆಂಬಂತೆ ಕಳೆದು ಹೊಗಿದ್ದವು.

ಅವಳು ನಮ್ಮ ಮನೆಗೆ ಬಂದು ತಿಂಗಳು ಆರಾದರೂ ಇವಳ ಹೊಟ್ಟೆ ಮೇಲೇರಲೇ ಇಲ್ಲಾ, ಮೊಲೆ ಬಿಗಿದು ಜೋಲು ಬೀಳಲೇ ಇಲ್ಲ. ನಮ್ಮ ಮನೆಯಲ್ಲಿ ಹೊರಗಿನಿಂದ ಬಂದವರೆಲ್ಲರ ಕಣ್ಣು  ಇವಳ ಮೇಲೆಯೇ. ಇವಳಿಗೆ ಎಷ್ಟು ವಯಸ್ಸು? ಮರಿ ಹಾಕಿದ್ದಾಳಾ? ಒಳ್ಳೇ ಹಾಲು ತುಪ್ಪ ತಿಂದುಂಡು ಮೈ ಕೈ ತುಂಬಿಕೊಂಡು ಕಣ್ಣು ಕುಕ್ಕುವಂತಿರುವ ಮದುವೆಗೆ ಬಂದ ಹೆಣ್ಣು ಕಂಡಂತೆ ಕಂಗೊಳಿಸಲಾರಂಬಿಸಿದ್ದ ಇವಳನ್ನು ನೋಡದೇ ಹೋದ ಪಾಪಿ ಕಣ್ಣುಗಳೇ ಇಲ್ಲವೆನ್ನಬಹುದು.

ನಮಗೂ ಬಂದವರೆಲ್ಲರಿಗೂ ಉತ್ತರಿಸಿ ಉತ್ತರಿಸಿ ಸಾಕಾಗಿತ್ತು. ಮನೆಯಲ್ಲಿ ಎಲ್ಲರಿಗೂ ಇವಳು ಗರ್ಭವತಿಯಲ್ಲವೆಂಬುದಂತೂ ಖಾತ್ರಿಯಾಗಿತ್ತು. ಕೊನೆಗೆ ನಮ್ಮ ಪಕ್ಕದ ತೋಟದ ಮಡಿವಾಳರ ಸೋಮಣ್ಣನೇ ಒಮ್ಮೆ ನಮ್ಮ ಮನೆಗೆ ಕುಡಿಯುವ ನೀರೊಯ್ಯಲು ಬಂದವನು ಯಾಕಕ್ಕಾ ಇದು ಇನ್ನೂ ಗರ್ಭ ಕಟ್ಟಿಲ್ಲಾ? ನಮ್ಮ ವಾತನ ಜೊತೆಗಾದರೂ ಬಿಡೋದಲ್ವಾ? ಎಂದಾಗ ನಾವೆಲ್ಲಾ ಒಪ್ಪಿ ನಮ್ಮ ಇವಳನ್ನು ಅವನ ಮೇಕೆಯ ಮಂದೆಯೊಂದಿಗೆ ಕಳಿಸಲು ಒಪ್ಪಿಕೊಂಡೆವು.

ಅವನು ಬೆಳಗೆದ್ದು ಅವನ ಮೇಕೆ ಮಂದೆಯೊಂದಿಗೆ ಇವಳನ್ನೂ ಕರೆದೊಯ್ಯಲು ಒಂದು ದಿನ ಬಂದ. ಅವಳ ಜಾತಿಮತಸ್ಥರನ್ನ ಗುರುತಿಸಿದ ಈಕೆ  ಅವರೆಲ್ಲರ ಜೊತೆ ಖುಷಿಯಿಂದ ನಮ್ಮ ಗೇಟಿನಿಂದ ಹೊರ ಹೋದವಳೇ ಮತ್ತೆ ಏನನ್ನೋ ನೆನಪಿಸಿಕೊಂಡವಳಂತೆ ಬಿರುಗಾಳಿಯಂತೆ ವಾಪಸ್ಸು  ಬಂದು ಚಿನ್ನುವಿನೊಂದಿಗೆ ನಿಂತುಕೊಂಡಿದ್ದಳು. ಹಠ ಬಿಡದ ಸೋಮಣ್ಣ ಮತ್ತೆರಡು ದಿನ ಪಟ್ಟ ಪ್ರಯತ್ನ ವ್ಯರ್ಥವಾದಾಗ ಕೊನೆಗೆ ಅವನೇ ಮತ್ತೊಂದು ಉಪಾಯ ಹೂಡಿದ್ದ.

ಬೆಳಗೆದ್ದು ಅವನೆಲ್ಲ ಮೇಕೆಗಳನ್ನೂ ಹೊರಕ್ಕೆ ಕಟ್ಟಿದ ನಂತರ ಬರೀ ಅವನ ಮಂದೆಯ ಒಂಟಿ ಸಲಗನಂತಿದ್ದ ಹೋತನೊಂದಿಗೆ ನಮ್ಮ ಇವಳನ್ನು ಗುಡಿಸಲಿನಲ್ಲಿ ಕೂಡಿಹಾಕಿ ಬಾಗಿಲು ಮುಚ್ಚಿ ಹೊರಗಿನಿಂದ ಚಿಲಕಹಾಕಿ ಬಿಡುತ್ತಿದ್ದ. ಹೊರಗೆ ನಾನು ನಮ್ಮ ಮಕ್ಕಳೊಂದಿಗೆ ಕುತೂಹಲದಿಂದ ಒಳಗೆ ನಡೆಯಬಹುದಾದ ಕದನ ಊಹಿಸಿಕೊಂಡು ಗಾಬರಿಗೊಂಡು ಆತಂಕದಿಂದ ಕಾಯುತ್ತಿದ್ದೆ. ಒಳಗೆ ಅವನ ಗಂಡು ಧನಿಯ ಗುಟುರು ಹಾಕುವಿಕೆ, ನೆಲವನ್ನು ಕಾಲ್ಗಳಲ್ಲಿ ಕೆರೆಯುತ್ತಾ ಧೂಳೆಬ್ಬಿಸುವ ಸದ್ದು, ಇವಳ ಮೇಲೇರಿ ಹೋಗಲು ಆ ಇಡೀ ಗುಡಿಸಲು ಅದುರಿ ಅಲ್ಲಾಡಿ ಬಿದ್ದು ಹೋಗುವಂತೆ ಅವರಿಬ್ಬರೂ ಸುತ್ತು ಹೊಡೆಯುತ್ತಿರುವುದು ಕೇಳುತ್ತಿತು. ನಮ್ಮ ಕಣ್ಣಿಗೆ ಕಾಣದಿದ್ದರೂ  ಇವಳ ಭಯ ಬೀತಿಯ ಆಕ್ರಂದನದ ಜೊತೆಗೆ ಅವನು ಇವಳನ್ನು ಮಣಿಸಲು ಹರ ಸಾಹಸ ಪಡುತ್ತಿರುವುದು ಗೊತ್ತಾಗುತ್ತಿತ್ತು.

ಕೊನೆಗೆ ೪೦ ರಿಂದ ೫೦ ನಿಮಿಷ ಕಳೆದ ನಂತರ ಗುಡಿಸಲಿನ ಚಿಲಕ ತೆಗೆದರೆ ಸಾಕೆಂಬಂತೆ ಕಾದಿದ್ದ ಇವಳು ಒಮ್ಮೆಲೆ ಚಂಗನೆ ಹಾರಿ ನಮ್ಮ ಕೈಗೂ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದಳು. ಅವನೋ ಸಂತೃಪ್ತಗೊಂಡಿಲ್ಲದವನಂತೆ, ಬರಗೆಟ್ಟವನಂತೆ, ಇವಳ ಹಿಂದೆಯೇ ಬೆನ್ನತ್ತಿ ನಮ್ಮ ತೋಟಗಳಲ್ಲಿ ಕಣ್ಮರೆಯಾಗಿಬಿಡುತ್ತಿದ್ದ. ಮತ್ತೆ ನಮಗೆ ಈ ಇಬ್ಬರನ್ನೂ ಹುಡುಕಿಕೊಂಡು ಬಂದು ಕಟ್ಟಿ ಹಾಕಲು ಹಲವು ಗಂಟೆಗಳ ಸಮಯ ವ್ಯರ್ಥವಾಗುತ್ತಿತ್ತು.ಇವಳ ಹಠದ ಮುಂದೆ ಸೋತ ಸೋಮಣ್ಣನಿಗೆ ಈ ಪ್ರಯೋಗವೂ ಫಲಕಾರಿಯಲ್ಲವೆಂಬುದು ಅರಿವಿಗೆ ಬಲು ಬೇಗನೇ ಬಂತು. ಹಾಗಾಗಿ ಕೊನೆಗೆ ಮತ್ತೆ ಜಿದ್ದಿಗೆ ಬಿದ್ದ ಸೋಮಣ್ಣನೇ ಮತ್ತೊಂದು ಉಪಾಯ ಮಾಡಿದ.

ಈ ಬಾರಿ ಬೆಳ್ಳಂಬೆಳಗ್ಗೆ ಎಳೇ ಬಿಸಿಲಿನಲಿ ಅವನ ಹಟ್ಟಿಯ ಮುಂದಿನ ಬಯಲಿನಲ್ಲಿ ಇವಳನ್ನು ಒಬ್ಬಂಟಿಯಾಗಿ ಕಟ್ಟಿ ಹಾಕಿದ್ದ. ಮಿಕ್ಕೆಲ್ಲ ಆಡುಗಳನ್ನೂ ಗುಡಿಸಲಿನ ಒಳಗೇ ಕೂಡಿಹಾಕಿ,  ಅವನನ್ನು ಮಾತ್ರಾ ಮುಕ್ತ ಮುಕ್ತವಾಗಿ ಇವಳೊಬ್ಬಳೊಂದಿಗೆ ಬಿಟ್ಟು ಬಿಟ್ಟಿದ್ದ. ಉಸಿರು ಬಿಗಿ ಹಿಡಿದು ಮುಂದೇನಾಗಬಹುದೋ ಎಂದು ಕಾದಿದ್ದ ನಮಗೆ ಇವನ ಕಾಮುಕತೆಯ ಘಾಡತೆಯ ಪರಿಚಯವಾಯಿತ್ತು. ಅವಳ ಮೈ ಮೇಲೇರಿ ಹೋಗುವ ಮುನ್ನ ಅವಳ ಮೈಗೆ ಇವನು ಮೈ ಉಜ್ಜುವುದರ ಬಿರುಸಿಗೆ ಅವರಿಬ್ಬರ ಮೈ ಕೂದಲು ತುಪ್ಪಳ ತುಪ್ಪಳವಾಗಿ ಉದುರುತ್ತಿತ್ತು. ಹಿಂದೆಯೇ ಅವಳ ಮುಖದ ಬಳಿಗೆ ಅವನ ಮುಖ ಇಟ್ಟು ಧೀರ್ಘವಾಗಿ ಬಿಸಿಯುಸಿರು ಬಿಡುತ್ತಿದ್ದ. ಆಗಾಗ್ಗೆ ಅವನಾಕುತ್ತಿದ್ದ ಗುಟುರು ಕೇಳಿದರೆ ನಮ್ಮ ಮೈಯೆಲ್ಲ ಬೆವೆತು ಹೋಗುವಂತಿತ್ತು.

ಅವಳೂ ಸಾಕಷ್ಟು ಗಟ್ಟಿಗಿತ್ತಿಯಂಥವಳೇ. ಬಂಧಿಸಲ್ಪಟ್ಟಿದ್ದಕ್ಕೆ ರೋಷಗೊಂಡಂತಿದ್ದ ಅವಳು ಮಾತ್ರ ಇವನ ಯಾವ ಮೇಲಾಟಕ್ಕೂ ಆಸ್ಪದವೀಯದೇ ಸುತ್ತು ತಿರುಗುತ್ತಾ ಇದ್ದಳು. ಸುಲಭಕ್ಕೆ ಬೇಧಿಸಲಾಗದ ಸುಭದ್ರ ಕೋಟೆಯಂತಾಗಿದ್ದ ಅವಳು ಒಮ್ಮೆಯೂ ಅವನ ಪ್ರಯತ್ನ ಫಲಪ್ರದವಾಗಲು ಅವಕಾಶವೀಯಲೇ ಇಲ್ಲ. ಕೊನೆಗೆ ಇವಳ ಹಠ ನೋಡಿ ಸೋಲೊಪ್ಪಿಕೊಂಡ ಸೋಮಣ್ಣ ನನ್ನ ಕೈಲಾಗಲ್ಲ ಕಣಣ್ಣಾ, ಸುಮ್ಮನೇ ಇದುನ್ನ ಮುಂದಿನ ಸೋಮ್ವಾರ ಸಂತೇಲಿ ಮಾರಿ ಬೇರೆ ಯಾವುದಾದ್ರೂ ಒಳ್ಳೇ ಸಾಧು ಆಡು ತಗಂಬರನ ಬಿಡಣ್ಣೋ ಅಂದಿದ್ದ.

ನಂತರದ ದಿನಗಳಲ್ಲಿ ನಾನು ಮತ್ತು ನನ್ನವಳು ಮಾತನಾಡಿ ಕೊನೇ ಪ್ರಯತ್ನವಾಗಿ ನಾವು ಸೋಮಣ್ಣನಿಗೆ ನಮ್ಮ ತೋಟದೊಳಗೇ ಅವನ ಆಡಿನ ಹಿಂಡು ಬಿಡಲು ಕೇಳಿಕೊಂಡೆವು. ಆ ಪ್ರಯೋಗದ ಫಲಿತಾಂಶಕ್ಕೆ ನಾವೆಲ್ಲಾ ಕುತೂಹಲದಿಂದ ಕಾಯ್ದಿದ್ದೆವು. ಮೊದಲ ದಿನ ಇವಳು ಯಾರನ್ನೂ ಹತ್ತಿರ ಬಿಟ್ಟುಕೊಳ್ಳಲೇ ಇಲ್ಲಾ. ನಮಗೋ ನಮ್ಮ ಪ್ರಯೋಗ ಫಲಕಾರಿಯಾಗಲಿಲ್ಲವಲ್ಲಾ ಎಂಬ ನಿರಾಸೆ. ಆದರೂ ನನ್ನ ಪ್ರಯೋಗದ ಮೇಲಿನ ನಂಬುಗೆಯಿಂದ ನಾನು ಮತ್ತೆ ಸೋಮಣ್ಣನನ್ನು ಇನ್ನೂ ಎರಡು ಮೂರು ದಿನ ಬಿಡಲು ಕೇಳಿಕೊಂಡಿದ್ದೆ.

ನಾನು ನನ್ನ ಕೆಲಸದ ನಿಮಿತ್ತ ದೆಹಲಿಯಲ್ಲಿದ್ದೆ. ಮೂರನೇ ದಿನ ಸೋಮಣ್ಣ ಬೆಳ್ಳಂ ಬೆಳಗ್ಗೆ ನಮ್ಮ ತೋಟದಿಂದ ನನಗೆ ಪೋನಾಯಿಸಿದ್ದ. ಮುಂದೇನು ಹೇಳಲಿರುವನೋ ಎಂದು ನನಗೆ ಸಕತ್ತ್ ಟೆನ್ಷನ್,. ಅವನು ನನ್ನ ಪ್ರಯೋಗವೇ ಯಶಸ್ವಿಯಾದದ್ದನ್ನು ತುಂಬಾ ಖುಷಿಯಿಂದ ಸಂಭ್ರಮಿಸುತ್ತಾ ಹೇಳಿದ್ದ.  ಅಣ್ಣಾ ನಿನ್ನ ಎಕ್ಸಪೆರಿಮೆಂಟೇ ಸಕ್ಸಸ್ಸು ಕಣಣ್ಣಾ! ಅಷ್ಟಿಲ್ಲದೇ ನಮ್ಮೂರಲ್ಲಿ ಜನ ನಿನ್ನುನ್ನ ಸೈಂಟಿಸು ಅಂಥಾ ಸುಮ್ಮ ಸುಮ್ಮನೇ ಅಂತಾರೇಣಣ್ಣಾ, ಬಟ್ ಕೊನೆಗೂ ಒಂಥರದಲ್ಲಿ ಅವಳೇ ಗೆದ್ಲು ಕಣಣ್ಣಾ! ಆ ಲೌಡಿ ಸಕತ್ತಾಗಿದ್ದ ಅವನನ್ನ ಮಾತ್ರ ಹತ್ತೋಕೆ ಬಿಟ್ಕಳ್ಳಿಲ್ಲಾ ಕಣಣ್ಣಾ, ಅದೇ ಅದ್ಯಾವುದೋ ತ್ಯಾಪು ಮೋರೆ ಮಗಂದು ಹತ್ತಿಸಿಕೊಂಡ್ಲು. ಆ ಮುದಿ ಹೋತನ ತಳಿಯ ಮರಿ ಸರಿಯಾಗಿ ಬರೋದು ಡೌಟೇ ಕಣಣ್ಣೋ! ಎಂದಿದ್ದ. 

ನಮಗೆ ಒಳ್ಳೇ ಸುದ್ದಿ?! ಕೊಡೋದರೊಂದಿಗೆ ಅದರ ತಳಿಯ ಬಗ್ಗೆ ಅಪಸ್ವರವೆತ್ತಿದ್ದು ನಮಗೆ ಯಾಕೋ ಸರಿ ಕಂಡಿರಲಿಲ್ಲ. ಆದರೂ ಮನೆಯಲ್ಲಿ ಎಲ್ಲರಿಗೂ ಈ ಘಟನೆ ನಡೆದ ನಂತರ ಇವಳ ಚಲನವಲನ, ಮೇಯುವಿಕೆ, ಮಲಗುವಿಕೆ, ಸ್ರವಿಸುವಿಕೆ, ಎಲ್ಲದರ ಕೂಲಂಕುಶ ಅಧ್ಯಯನ ಎಲ್ಲರಾದಿಯಾಗಿ ನಡೆದಿತ್ತು. ಅವಳ ಹೊಟ್ಟೆಯೇಕೋ ಉಬ್ಬಿದಂತೆ ಕಂಡಿದ್ದು, ಅವಳ ಬಾಲದಲ್ಲಿ ಅವಳ ಸ್ರವಿಸುವಿಕೆಯ ಉಳಿಕೆಯ ಪತ್ತೆಯಾಗಿದ್ದು ಮನೆಯಲ್ಲಿ ಖುಷಿಯ ಅಲೆಗಳನ್ನೇ ಎಬ್ಬಿಸಿತ್ತು. ಮಕ್ಕಳನ್ನು ಮಡಿವಾಳರ ಮನೆಗೆ ಓಡುಗಳಿಸಿ ಸೋಮಣ್ಣನನ್ನು ಕರೆಸಿದ್ದಾಯ್ತು. ಅವನು ಉಸಿರುಗಟ್ಟಿ ಬಂದವನೇ ಅವಳ ಬಾಲ ಮೇಲೆತ್ತಿ ಪರೀಕ್ಷಿಸಿದವ ಇನ್ನೂ ಆಗಿಲ್ಲಾ ಕಣಕ್ಕಾ ಎಂದು ಎಲ್ಲರನ್ನೂ ಪೆಚ್ಚಾಗಿಸಿದ್ದ!  ನಮ್ಮ ಮನೆಯಲ್ಲಿ ಎಲ್ಲರ ಖುಷಿಯ ಬಲೂನಿಗೆ ಸೂಜಿ ಚುಚ್ಚಿದ ಸದ್ದು.

ಕೊನೆಗೆ ಮತ್ತೆ ಮಡಿವಾಳರ ಮಂಜಣ್ಣನ ಮಡದಿ ಮಂಜಕ್ಕಳ ತಾಂತ್ರಿಕ ಸಲಹೆ ಪಡೆಯುವುದೆಂದು ತೀರ್‍ಮಾನವಾಯ್ತು. ಮಕ್ಕಳು ಕರೆದುಕೊಂಡು ಬಂದಾಗ ಮಂಜಕ್ಕ ಏ ಅದಕ್ಯಾಕೆ ಅಷ್ಟೋಂದು ಬೇಜಾರಾಗ್ತೀರಾ ಬಿಡಕ್ಕ, ಎಲ್ಲಿ ಅವಳು ಎಂದು ಕೊಟ್ಟಿಗೆಯೊಳಹೊಕ್ಕು ಕೆಲ ನಿಮಷದ ನಂತರ ತನ್ನ ತೋರು ಬೆರಳು ಮತ್ತು ಹೆಬ್ಬೆಟ್ಟುಗಳಲ್ಲಿ ಅಂಟಂಟುತ್ತಿದ್ದ ದ್ರವದಂಥದ್ದನ್ನು ತೋರಿಸುತ್ತಾ ಆಚೆ ಬಂದಳಂತೆ. ಏ ಗಬ್ಬಾಗೌಳೆ ಕಣವ್ವಾ, ನೋಡಿಲ್ಲಿ ಅವಳ ಮೊಲೆಯಿಂದ ಆಗ್ಲೇ ಹಾಲು ಅಂಟಂಟಾಗಿ ಬರ್ತಾ ಐತೆ, ತಲೇ ಕೆಡಿಸ್ಕೋ ಬ್ಯಾಡಾ. ಇನ್ನ ಒಂದು ತಿಂಗಳೊಳಗೆ ಮರಿ ಹಾಕ್ತಾಳೆ. ಮತ್ತೇನೂ ಎಕ್ಸಪೆರಿಮೆಂಟ್ ಮಾಡೋದು ಬೇಡ್ವಂತೆ ಅಂತಾ ಹೇಳು ಅಣ್ಣಯ್ಯನಿಗೆ ಎಂದು ಕಿಸುಕ್ ಎಂದು ನಕ್ಕಿದ್ದಳಂತೆ.

ಅವತ್ತಿನಿಂದಾ ಇವಳಿಗೆ ರಾಜ ಮರ್ಯಾದೆ. ಅವಳಿಗೆ ತಂಪು ತಂಪು ನೀರು, ತಂಪು ಹೊತ್ತಿನಲ್ಲಿ ಮಾತ್ರಾ ಮೇಯಲು ಮನೆಯ ಬಳಿಯೇ ಬಿಡೋದು, ಅವಳು ತಿನ್ನುವ ಸೊಪ್ಪಿನ ಜೊತೆಗೆ ನಮ್ಮ ತೋಟದಲ್ಲಿ ಬೆಳೆದ ಅನೇಕ ಕಾಳು ಕಡ್ಡಿಗಳ ಮಿಶ್ರಣದ ಊಟ, ಒಂದೇ ಎರಡೇ ಅವಳ ಆರೈಕೆಯ ಖುಷಿಗಳು ನನ್ನವಳಿಗೆ.

ಕೆನೆಗೂ ನಾವೆಲ್ಲರೂ ಕಾತುರದಿಂದ ಕಾಯುತ್ತಿದ್ದ ಆ ದಿನವೂ ಬಂದೇ ಬಿಟ್ಟಿತ್ತು. ಅವತ್ತು ಅವಳನ್ನು ಮೇಯಲು ಗೂಟಕ್ಕೆ ಕಟ್ಟಿದ್ದ ಹಗ್ಗ ಬಿಚ್ಚಿ ಬಿಟ್ಟರೆ ಹೊರಗೆ ಹೋಗದೆ ಮತ್ತೆ ಕೊಟ್ಟಿಗೆಯ ಒಳಗೇ ಸೇರಿಕೊಂಡಿದ್ದಾಳೆ. ನನ್ನವಳಿಗೆ ಅಂದು ಅವಳು ಮರಿ ಹಾಕುವುದು ಖಚಿತವಾಗಿದೆ. ಹಾಗಾಗಿ ಅವಳಿದ್ದಲ್ಲಿಗೇ ಸೊಪ್ಪು, ಕಾಳು ಕಡ್ಡಿ ತಂದು ತಿನ್ನಿಸಿದ್ದಾಳೆ ಮತ್ತು ನೀರಿಟ್ಟಿದ್ದಾಳೆ. ಅವತ್ತು ಬೆಳಗ್ಗೆಯಿಂದ ಕಣ್ಣಲ್ಲಿ ಕಣ್ಣಿಟ್ಟು ಇವಳನ್ನು ನನ್ನವಳು ಕಾಯ್ದಿದ್ದಾಳೆ. ಸಾಯಂಕಾಲ ೪ ಘಂಟೆಗೆ ಸರಿಯಾಗಿ ಚೈತ್ರಮಾಸ, ಚಿತ್ರಾ ನಕ್ಷತ್ರದ ಶುಭ ಗಳಿಗೆಯಲ್ಲಿ! ನಮ್ಮ ಮನೆಯ ಕೊಟ್ಟಿಗೆಯ ಶುಭ ದಿಕ್ಕಿನಲ್ಲಿ! ಹೆಣ್ಣು ಮರಿಗೆ ಜನ್ಮವಿತ್ತಿದ್ದಾಳೆ.  
ಹೆರಿಗೆ ಮಾಡಿದ ಕೈ ತೊಳೆದುಕೊಂಡು ತಕ್ಷಣ ಫೋನಾಯಿಸಿದ ನನ್ನಾಕೆ ರೀ ಅವಳಿಗೆ ಹೆಣ್ಣು ಮಗೂ ರೀ, ತುಂಬಾ ಮುದ್ದು ಮುದ್ದಾಗಿದ್ದಾಳೆ, ದುಂಡು ದುಂಡುಗೆ, ಎರಡೂ ಬಣ್ಣ ಮಿಕ್ಸ್, ಒಳ್ಳೇ ಚಿಗರೆ ಮರಿ ನೋಡಿದಂತಿದ್ದಾಳೆ, ಸಕತ್ತು ಖುಷಿಯಾಗ್ತಿದೆ, ಅಂತೂ ಇಂತೂ ನಿಮ್ಮ ಎಕ್ಸಪೆರಿಮೆಂಟ್ ಔಟ್ಕಮ್ಮು ಬಂದಾಯ್ತು, ಜನರಿಂದ ಸೈಂಟಿಸ್ಟು ಅನ್ನಿಸಿಕೊಂಡಿದ್ದಕ್ಕೂ ಸಾರ್ಥಕವಾಯ್ತು ಬಿಡ್ರೀ, ಇನ್ನೇನು ಕೆಲಸ ಇವಳಿಗೂ ಒಂದು ಚೆಂದನೆ ಹೆಸರಿಡೋಕೆ ಶುರು ಮಾಡ್ಕೊಳ್ರೀ ಎಂದು ಪೋನಿಟ್ಟಳು.

ನಾನು ನನ್ನ ವಾಲಿನ ಮೇಲೆ ಇವಳಿಗೊಂದು ಹೆಸರಿಡಲು ನಿಮ್ಮನ್ನ ಕೇಳಿಕೊಂಡಿದ್ದೆ. ಅವುಗಳಲ್ಲಿ ತುಂಬಾ ಹಿಡಿಸಿದ ಕೆಲವು ಹೆಸರುಗಳು ಹೀಗಿವೆ, ಕುಶಿ, ಚಂದನ,ಚೈತ್ರ,ಚಿತ್ರ,ಗುಲಾಬಿ,ಗೋಟಮ್ಮ,ಶ್ರಾವಣಿ,ಲಕುಮೀ,ಮಂಗಳಾ,ಇನ್ನೂ ಬರುತ್ತಲೇ ಇವೆ. ನನಗೂ ನನ್ನ ಮಕ್ಕಳಿಗೆ  ಕೇಳಬೇಕೆನಿಸಿ ಈ ಮೇಲಿನ ಹೆಸರಲ್ಲಿ ಯಾವ ಹೆಸರು ನಿಮಗೆ ಹಿಡಿಸಿತೋ? ಎಂದಾಗ ಇಬ್ಬರೂ ಒಮ್ಮೆಗೆ ಚೈತ್ರಾ ಸೂಪರ್ರಾಗಿದೆ ಕಣಪ್ಪಾ ಎಂದಿದ್ದರು. ನಮ್ಮಿಬ್ಬರ ಮಧುರ ಮಿಲನದ ಮಧುರ ನೆನಪಾಗಿ ಇತಿಹಾಸದ ಪುಟವೊಂದರೊಳಗೆ ಸೇರಿದ್ದ ಚೈತ್ರ ಮಾಸದಲ್ಲೇ ಹುಟ್ಟಿ ನಮ್ಮ ಮನೆಯಲ್ಲಿ ಕುಶಿಯ ಅಲೆಯೆಬ್ಬಿಸಿದ ಅವಳಿಗೆ ಈ ಹೆಸರೇ ಸೂಕ್ತವೆನಿಸಿತ್ತು, ಯಾಕೋ ಗೊತ್ತಿಲ್ಲಾ, ನನಗೂ ಕೂಡಾ!

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
laxmivenkatesh
10 years ago

'ಚೈತ್ರ', 'ಚಿತ್ರ', ಸಕತ್ತಾದ ಹೆಸರುಗಳು. ಇಡಿ ಮತ್ತೆ ಜೋರಾಗಿ ಕೂಗಿ ಕರೀರಿ ಸ್ವಾಮಿ !

shadakshari.Tarabenahalli
shadakshari.Tarabenahalli
10 years ago
Reply to  laxmivenkatesh

Thanks @laxmivenkatesh…. 
Even i liked the same and we are happy to call her "CHAITRA"…. 
thanks again for your reading and liking the names …

warm regards

shadakshari.tarabenahalli.

padma bhat
padma bhat
10 years ago

channaagide sir ….:)

amardeep.ps
amardeep.ps
10 years ago

chennagide sir.

4
0
Would love your thoughts, please comment.x
()
x