ಮನುಷ್ಯನಿಗೆ ಸಮಯ ಅನ್ನೋದು ಅಮೂಲ್ಯ. ಈ ಕ್ಷಣ ಕಳೆದುಕೊಂಡರೆ ಅದನ್ನು ಮತ್ತಿನ್ನೆಂದೂ ಪಡೆಯಲು ಸಾಧ್ಯವಿಲ್ಲ. ಬಹಳಷ್ಟು ಸಾಧಕರು ಸಮಯವನ್ನು ತಮ್ಮ ತಮ್ಮ ಕೌಶಲ್ಯ, ಕ್ರಿಯೇಟಿವಿಟಿಗೆ, ನೈಪುಣ್ಯತೆಗೆ ಓರೆ ಹಚ್ಚುವ ಗೀಳಿಗೆ ಹಠಕ್ಕೆ ಬಿದ್ದು ಬಳಸಿಕೊಳ್ಳುತ್ತಾರೆ. ಇರುವ ಇಪ್ಪತ್ನಾಲ್ಕು ಗಂಟೆಯಲ್ಲಿ ಹದಿನೆಂಟು ತಾಸು ಕೆಲಸ ಮಾಡುತ್ತಲೇ, ಓದು, ಬರಹ, ಸಂಗೀತ, ಸುತ್ತಾಟ, ಗೆಳೆಯರು, ಹರಟೆ ಎಲ್ಲವನ್ನೂ ಹದವಾಗಿ ಅನುಭವಿಸಿ ಖುಷಿಯಿಂದಿರುವ ಎಷ್ಟು ಜನರಿಲ್ಲ ಹೇಳಿ?
ಬಾಲ್ಯದಲ್ಲಿ ನನ್ನದೊಂದು ಅಂದಾಜೇ ಇರದ ದಿನಗಳಿದ್ದವು. ಆ ಸಮಯದಲ್ಲಿ ನನ್ನ ಮನಸ್ಸಿಗೆ ನೋವಾಗುವಂಥ ಅಥವಾ ದು:ಖವಾಗುವಂಥ ಸನ್ನಿವೇಶ ಎದುರಾದಲ್ಲಿ “ ನನಗೂ ಒಂದು ಟೈಂ ಬರುತ್ತೆ….” ಅಂದುಕೊಂಡು ಸುಮ್ಮನಾಗುತ್ತಿದ್ದೆ. ನೋಡ ನೋಡುತ್ತಲೇ ಬಾಲ್ಯ ಕಳೆಯಿತು. ಹರೆಯಕ್ಕೆ ಕಾಲಿಟ್ಟ ಹೊಸತು. ಓದಿನ ಅನಿವಾರ್ಯ, ದುಡಿಮೆಯ ದರ್ದು. ಮಧ್ಯೆದಲ್ಲೇ ಹಾಗೆ ಬಂದು ಹೀಗೆ ಮುಖ ಸವರಿ ಹೋದ ಗಾಳಿಯಂಥ ಪ್ರೀತಿ. ಮತ್ತೆ ಖಾಲಿ ಖಾಲಿ ….. ಆಗಲೂ “ ನಂಗೂ ಒಂದು ಟೈಂ ಬರುತ್ತೆ…” ಅಂದುಕೊಂಡೆ.
ನೌಕರಿಗೆ ಸೇರಿದ ಹೊಸದು. ಹಿರಿಯ ನೌಕರರಿದ್ದ ಕಛೇರಿ. ನಾನೊಬ್ಬನೇ ಇಪ್ಪತ್ತೂ ದಾಟದ ಹುಡುಗ. ನನಗಿಂತ ಹದಿನೈದಿಪ್ಪತ್ತು ವರ್ಷ ದೊಡ್ಡವರಿದ್ದರೇನಂತೆ? ಹರಟೆ, ಸಲಹೆ ಸಲೀಸು ಸಲೀಸು. ಅದರಲ್ಲೊಬ್ಬರಿಗೆ ಪದೇ ಪದೇ ಗಡಿಯಾರ ನೋಡುವ ಅಭ್ಯಾಸವೇನಿದ್ದಿಲ್ಲ. ಆದರೆ, ಅದರೆ, ಅವರು ಗಡಿಯಾರ ನೋಡಿದಾಗೊಮ್ಮೆ ಸಮಯ 4.20 ಆಗಿರುತ್ತಿತ್ತು. ಆಕಸ್ಮಿಕವೂ ಹೌದು, ಕೆಲಸದ ನಡುವೆ ಯಾರಿಗಾದರೂ ಕರೆ ಮಾಡುವ, ಬರ ಹೇಳುವ, ಅಥವಾ ಇನ್ನಾವುದಕ್ಕೋ ನೋಡಿದಾಗೊಮ್ಮೆ 11.20, 12.20, 1.20, 3.20, 4.20 ಕೊನೆಗೆ ಇನ್ನೇನು ಮನೆಗೆ ಹೊರಡಬೇಕಲ್ಲಾ ಎಂದು ನೋಡಿದರೆ 5.20.. ಹೀಗೆ.
ಅವರು ಅದನ್ನು ಹೇಳಿ “ನೋಡಪ್ಪಾ 420 ಮಂದಿಗೆ ಮಾತ್ರ 4.20 ಟೈಂ.. ಕಾಣುತ್ತೆ.” ಅನ್ನೋರು; ತಮಾಷೆಗೆ. ಹಂಗಾಗಿ ಆಗಿನಿಂದ ಅವರನ್ನು 4.20 ಮಂದಿ ಅನ್ನಲು ಶುರುವಾಯಿತು. ಬರಬರುತ್ತಾ ಆ ಚಾಳಿ ನನಗೂ ಬಿದ್ದಿತು. ಬರೀ ಆ ಚಾಳಿ ರೂಢಿ ಆಯಿತಷ್ಟೇ ಅಲ್ಲ. ಬದಲಾಗಿ 4.20 ಸಮಯಕ್ಕೆ ನನ್ನ ಲಕ್ಕೋ ಏನೋ ಸಾಕಷ್ಟು ಸಲ ಒಳ್ಳೊಳ್ಳೇ ಕೆಲಸಗಳಾಗಿವೆ. ಅದೊಮ್ಮೆ ಕಛೇರಿಯಲ್ಲೊಬ್ಬ ನೌಕರರು ತಮ್ಮ ಮೇಲಿದ್ದ ಆರೋಪಗಳನ್ನು ಮರೆಮಾಚಲು ಒಂದು ಗುಂಪು ಜನರನ್ನು ನನ್ನನ್ನು ಹೊಡೆಸಲು ಕರೆಸಿದ್ದರು. ಅದೇ ಸಮಯಕ್ಕೆ ನನ್ನ ಗೆಳೆಯನೊಬ್ಬ ಬಂದನೆಂದು ಟೀ ಕುಡಿಯಲು ಎದ್ದು ಹೋಗಿದ್ದೇ ಬಂತು. ಆ ಗುಂಪಿನ ಬಾಯಿಗೆ ಕೈಯಿಂದ ಸಿಗದೇ ತಪ್ಪಿಸಿಕೊಂಡ ಲಕ್ಕು…. ಆಗ ಸಮಯ ಸಂಜೆ 4.20…. ತುಂಬಾ ಸೂಕ್ಷ್ಮದ ಸಂಧರ್ಭ, ಒಂದು ಮಾತು ಆಡಿದರೆ ಹೆಚ್ಚು ಇನ್ನೊಂದಾಡಿದರೆ ಕಡಿಮೆ. ಅಂಥ ಕಛೇರಿಯಲ್ಲಿ ಸಮಯದಲ್ಲಿ ಮಾತೇ ಆಡದೇ, ಕೇವಲ ಕಡತಗಳೊಂದಿಗೆ ಮಾತಾಡಿಸಿ ಗೆದ್ದ ಸಮಯಗಳೆಷ್ಟೋ. ಸಿಬ್ಬಂದಿಗೋ, ಸ್ನೇಹಿತರಿಗೋ ಏನಾದರೊಂದು ಸಲಹೆ, ಕೆಲಸ, ಒಳ್ಳೆಯದಾಗಿದ್ದ ಮಾತಿನ ಹುಸಿನಗೆಯಲ್ಲಿ “ನಮ್ಮಂಥ 4.20 ಮಂದಿಯಿಂದ ಇನ್ನೇನಾಗೋದಿಕ್ಕೆ ಸಾಧ್ಯ ಹೇಳ್ರಿ….” ಅಂದುಬಿಡುತ್ತಿದ್ದೆ. ಡಕೋಟಾ ಎಕ್ಸಪ್ರೆಸ್ ನಂತಾಗಿದ್ದ 96ರ ಮಾಡೆಲ್ ಬಜಾಜ್ ಸ್ಕೂಟರ್ ರಿಪೇರಿಗೆ ದಬ್ಬಿಕೊಂಡು ಗ್ಯಾರೇಜ್ ಹತ್ತಿರ ಹೋದರೆ ಸಾಕು, ದೂರದಿಂದಲೇ ಅಡ್ಡಬೀಳುತ್ತಿದ್ದ ಮೆಕಾನಿಕ್ ಗಳ ಭಯ ಭಕ್ತಿಗೆ ಮನಸೋತು ಕೊನೆಗೆ 2012ರಲ್ಲಿ ಬೈಕ್ ಖರೀದಿಸಿ ರಿಜಿಸ್ಟ್ರೇಷನ್ ಮಾಡಿದರೆ ಸಿಕ್ಕ ನಂಬರ್ರು- 2120. ಆ ಬೈಕ್ ಸಹ ಬರೋಬ್ಬರಿ ಸಾಥ್ ನೀಡುತ್ತಿದೆ; ನನ್ನ ತಿರುಗಾಟ, ಫೋಟೋಗ್ರಫಿ, ಮತ್ತೆಲ್ಲಕ್ಕೂ.
ಅದೊಮ್ಮೆ ಬಾಡಿಗೆ ಮನೆಯಿಂದ ಸ್ವಂತ ಮನೆ ಕಟ್ಟಿಸುವ ಯೋಚನೆ ಹೊಳೆದದ್ದೇ ತಡ. ಕೈಯಲ್ಲಿ ಐವತ್ತು ರುಪಾಯಿಗಿಂತ ಒಂದೇ ಒಂದು ರುಪಾಯಿಯೂ ಇಲ್ಲದೇ ಹೆಂಡತಿಯನ್ನು ಕೂಡಿಸಿಕೊಂಡು ಸೈಟ್ ನೋಡಲು ಬೈಕ್ ಸ್ಟಾರ್ಟ್ ಮಾಡಿದೆ. ನೋಡುತ್ತೇನೆ; ಸಮಯ ಸಂಜೆ 4.20. ಕಟ್ಟಿದ ಮನೆ ಖರೀದಿಸಲು ನಿರ್ಧರಿಸಿದ ನಂತರ ಟೊಕನ್ ಅಡ್ವಾನ್ಸ್ ಕೋಡಿದಿಕ್ಕೆ ಅಂತ ಕರೆಸಿ ಹತ್ತು ಸಾವಿರ ಮನೆ ಓನರ್ ಕೈಗಿಟ್ಟು ಒಂದು ಕಪ್ಪು ಚಹಾ ಕುಡಿದು ನೋಡುತ್ತೇನೆ, ಸಮಯ ಸಂಜೆ 7.20. ಮುಂದೆ ಹಳೆಯ ಸೈಟು ಕೊಟ್ಟು ಬಂದ ದುಡ್ಡಿಗೆ ಬ್ಯಾಂಕ್ ಸಾಲ ಜೋಡಿಸಿ ಮನೆ ಖರೀದಿಸಿದೆ. ಆ ಹಳೇ ಎರಡು ಸೈಟುಗಳನ್ನು ಮಾರಾಟ ಮಾಡಿ ಸಬ್ ರಿಜಿಸ್ಟ್ರಾರ್ ಆಫೀಸಲ್ಲಿ ಥಂಬ್ ಇಂಪ್ರೆಷನ್ ಕೊಡುವಾಗಮ್ಮೊ ಸಮಯ ನೋಡಿದೆ ಸಮಯ 4.20. ಆಹಾ… 4.20 ಎಂಬ ಸಮಯವೇ?
ಇದಿಷ್ಟು ನನ್ನ ಪಾಲಿಗೆ 4.20 ಸಮಯ ಒಲಿದ ಮಾತಾಯಿತು. ಇನ್ನು ನನ್ನ ಮೇಲೆ ಕತ್ತಿ ಮಸೆದು, ಶಪಿಸಿ, ಆರೋಪ ಹೊರಿಸಿ, ಮೂಗರ್ಜಿ ಬರೆದು ಮುಖ್ಯಮಂತ್ರಿಗಳಿಗೆ, ಸೆಕ್ರಟರಿಯೇಟ್ ಗೆ, ಇಲಾಖೆಗೆ, ಅಕ್ಕಪಕ್ಕದ ಜಿಲ್ಲೆಯ ನಮ್ಮದೇ ಕಛೇರಿಗಳಿಗೆ ಇರುಮುಡಿ ಕಟ್ಟಿಕೊಂಡ ಅಯ್ಯಪ್ಪಸ್ವಾಮಿ ಭಕ್ತರಂತೆ ನನ್ನದೇ ಹೆಸರನ್ನು ಮಾತಿಗೊಮ್ಮೆ ನೆನೆಸಿಕೊಳ್ಳುತ್ತಾ ದೂರಿದವರು, ಪೂಜೆ, ಹೋಮ ಹವನ ಮಾಡಿದವರ ಸಮಯವನ್ನೂ ಒಂದಿಷ್ಟು ಹೇಳಬೇಕಿದೆ.
ಪವರ್ ಫುಲ್ ದೇವಿ ಬಳ್ಳಾರಿ ದುರುಗಮ್ಮ, ಹುಲಿಗೆಮ್ಮ, ಸೌದತ್ತಿ ಎಲ್ಲಮ್ಮ ಎಲ್ಲರಿಗೂ ಭಕ್ತಿಯಿಂದ ನಮಿಸಿ ನಿಂಬೆಹಣ್ಣು ಮಂತ್ರಿಸಿಕೊಂಡು, ಗಿಣಿಶಾಸ್ತ್ರ ಕೇಳಿ ಪಾವನರಾಗಿ “ನೋಡ್ರಿ, ಅವನ್ನ ಏನ್ಮಾಡ್ಬಿಡ್ತೀವಿ…..” ಅಂತೆಲ್ಲಾ ಅಬ್ಬರಿಸಿ ಬೊಬ್ಬಿರಿದವರ ಹಿಂದೆ ಯಾವ ಬಳ್ಳಾರಿ ದುರುಗಮ್ಮ, ಹುಲಿಗೆಮ್ಮ ಸೌದತ್ತಿ ಎಲ್ಲಮ್ಮಂದಿರು ಸೊಪ್ಪು ಹಾಕಲಿಲ್ಲ. ಬದಲಾಗಿ ಬೊಬ್ಬಿರಿದವರ ಕೈಯಲ್ಲಿ ಚಾಟಿ ಕೊಟ್ಟು ತಮ್ಮ ಎಮ್ಮೆ ಚರ್ಮದ ಮೈಗೆ ತಾವೇ ಬೀಸಿಕೊಳ್ಳುವಂತೆ ಕರುಣೆ ತೋರಿದರು. ಯಾವ ದೇವರು ಮುಹೂರ್ತ ನೋಡಿ ಕೈ ಮುಗಿ ಎನ್ನುವುದಿಲ್ಲ. ಇನ್ನೊಬ್ಬರಿಗೆ ಕೇಡು ಬಯಸಿ ಹರಕೆ ತೀರಿಸೆಂದು ಆಗ್ರಹಿಸುವುದಿಲ್ಲ. ಮನುಷ್ಯನ ಗುಣ, ಮನಸ್ಸಿನ ಕನ್ನಡಿ ಎನ್ನಬಹುದು. ಮನಸಿನಂತೆ ಮಹಾದೇವ ಎಂದ ಹಳಬರು ದಡ್ಡರಲ್ಲ. ನಾವು ಒಬ್ಬರಿಗೆ ಕೇಡು ಬಯಸಿದರೆ ನಮಗೆ ಇನ್ನೊಂದು ಬಗೆಯಲ್ಲಿ ಕೇಡಾಗಿರುತ್ತದೆ.
ಬಿಡಿ, ಈಗೊಂದಿಷ್ಟು ತಮಾಷೆಗೆ ಬರೋಣ. ನನ್ನ ಮದುವೆ ಮಟ ಮಟ ಮಧ್ಯಾಹ್ನ “ಅಭಿಜನ್ ಲಗ್ನ” ದ ಮೂಹೂರ್ತ 12.20ರ ವೇಳೆ ತಾಳಿ ಕಟ್ಟಿದೆ. ಗೇಲಿ ಮಾಡುವವರು “ಆತ್ ನೋಡಪಾ….. ಇನ್ಮೇಲೇ ಹೀಂಗೇ ಧಗಾ ಧಗಾ…..ಅಂತ ಮನೇಲಿ ಇಬ್ರೂ ಉರಿಯದಿದ್ರೆ ಸಾಕು” ಅಂದಿದ್ರು. ಮದುವೆ ನಡೆದದ್ದು ಸಿಟಿಯ ಮಧ್ಯೆ ಭಾಗದಲ್ಲಿ. ಮದುವೆಗೆ ಬಂದ ಆಹ್ವಾನಿತರು ಹತ್ತಿರವಿದ್ದ ಗಿಫ್ಟ್ ಸೆಂಟರ್ ಗೆ ಹೋಗೋದು ಒಂದೊಂದು ಗಿಫ್ಟ್ ತರೋದು….. ಪ್ರೆಸೆಂಟ್ ಮಾಡೋರು… ಮದುವೆ ಮುಗಿದ ಮೇಲೆ ಬಂದಿರೋ ಗಿಫ್ಟ್ ಪ್ಯಾಕ್ ಎಲ್ಲವನ್ನು ಬಿಚ್ಚುತ್ತಿದ್ದರೆ “ ನನ್ ಟೈಂ…. ಈಗ ಕೂಡಿ ಬಂದಿದೆ” ಅನ್ನಿಸಿದ್ದು ಸುಳ್ಳಲ್ಲ. ಯಾಕೆ ಗೊತ್ತಾ? ಬಂದ ಸುಮಾರು ಗಿಫ್ಟ್ ಗಳಲ್ಲಿ ಕನಿಷ್ಟವೆಂದರೂ ಇಪ್ಪತ್ತೈದು ವಾಲ್ ಕ್ಲಾಕ್ ಗಳು. ಅಪ್ಪಿತಪ್ಪಿ ವರ್ಷದಲ್ಲಿ ಒಮ್ಮೆ ಕೈ ಜಾರಿ ಬೀಳಿಸಿದೆ ಅಂದ್ಕಂಡ್ರೂ ಕನಿಷ್ಟ ಪಕ್ಷ ಇಪ್ಪತ್ತೈದು ವರ್ಷಕ್ಕಾಗುವಷ್ಟು ವಾಲ್ ಕ್ಲಾಕ್ ಗಳಿದ್ದವು. ಅದರಲ್ಲಿ ಚೆನ್ನಾಗಿದ್ದದ್ದನ್ನು ಮನೆಯ ಗೋಡೆಗೆ ಶೆಲ್ ಹಾಕಿ ನೇತಾಕಿದೆನು. ಬಾಕಿ ಇದ್ದವಲ್ಲ? ಅವನ್ನೇನು ಮಾಡೋದು? ಆಗಾಗ ಯಾರದಾದರೂ ಸಣ್ಣ ಬರ್ತಡೆ. ಬೀಳ್ಕೊಡುಗೆ ಇಂತಹ ಕಾರ್ಯಕ್ರಮಗಳಲ್ಲಿ ಗಿಫ್ಟ್ ಕೊಟ್ಟು ಸುಮ್ಮನಾದೆ. ಆದರೆ, ನನ್ನ ಗೆಳೆಯನೊಬ್ಬ ಸೀರಿಯಸ್ಸಾಗಿ ನಮ್ಮ ಮದುವೆ ಆದ ವರ್ಷಗಳ ನಂತರ ಫೋನ್ ಮಾಡಿ ಅದೊಮ್ಮೆ “ದೀಪು…. ನಿಮ್ಮದುವೆಯಲ್ಲಿ ಗಿಫ್ಟ್ ಬಂದಿದ್ವಲ್ಲಾ? ಗಡಿಯಾರಗಳು ಇದಾವ?“ ಅಂತ ಕೇಳಿದ್ದಲ್ಲದೇ ಖುದ್ದಾಗಿ ಬಂದು ತಮಾಷೆ ಮಾಡುತ್ತಲೇ ಒಂದು ಪೀಸ್ ತೆಗೆದುಕೊಂಡು ಹೋಗಿದ್ದ.
ನಾನು ತೆಗೆದ ಕೆಲವು ಫೋಟೋಗಳು ಪತ್ರಿಕೆಗಳಲ್ಲಿ ಬಂದವು. ನನ್ನ ಲೇಖನಗಳು ಪ್ರಕಟವಾದವು. ನಾನು ಒಂದಷ್ಟು ವಾರಗಳು ತೋಚಿದ್ದನ್ನು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆದೆ. ನನ್ನ ಫೋಟೋಗ್ರಫಿ ಹವ್ಯಾಸದ ಬಗ್ಗೆ ಪತ್ರಕರ್ತ ಮಿತ್ರರು ವರದಿ ಮಾಡಿದರು. ಆಗೆಲ್ಲಾ ಅವನ್ನೆಲ್ಲಾ ನನ್ನ ಹೆಂಡತಿಗೆ ತೋರಿಸಿದರೆ, “ಪೇಪರ್ನವ್ರಿಗೆ ನಿಮ್ ಬಗ್ಗೆ ಗೊತ್ತಿಲ್ಲ…. ನೀವು ಬರೀ 4.20 ಅಲ್ಲ… 8.40 ಅಂತ ನಾನೇ ಹೇಳ್ತೀನಿ ಇರಿ” ಎನ್ನುತ್ತಾ ಕಿಸಕ್ಕನೇ ನಗುತ್ತಾಳೆ. ಬಿಜಾಪುರದ ಸಿದ್ದೇಶ್ವರ ಸ್ವಾಮೀಜಿ, ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ಭಾಷಣಗಳನ್ನು ಕೇಳುತ್ತಿದ್ದರೆ, “ ಈ ಟೈಂ ಅನ್ನೋದ್ ಏನದಾ……” ಎನ್ನುತ್ತಾ ಶುರು ಮಾಡಿ ಮನುಷ್ಯನ ಜೀವನ, ಗುಣಾವಗುಣಗಳನ್ನು ವಿಮರ್ಶೆ, ತರ್ಕ, ಫಜೀತಿ, ಅನಿವಾರ್ಯಗಳಿಂದ ಕೂಡಿಸಿ, ಕೊನೆಗೆ ಒಂದು ಉದಾಹರಣೆ, ಉಪಸಂಹಾರದೊಂದಿಗೆ ಮುಗಿಸುವ ಮಾತಿನಲ್ಲಿ ಒಂದಿಷ್ಟು ವಿಚಾರಗಳಿರುತ್ತವೆ; ಅರ್ಥ ಮಾಡಿಕೊಳ್ಳಲು. ಆಗೆಲ್ಲಾ ನನ್ನ 4.20 ಸಮಯದ ಕತೆ ಹೇಳಬೇಕೆನ್ನಿಸ್ಸಿದ್ದು ತಮಾಷೆಗೆ ಮಾತ್ರವಲ್ಲ…..
ಮೊನ್ನೆ ಮನೆಗೆ ಬಂದ ಬ್ಯಾಂಕ್ ಉದ್ಯೋಗಿಯೊಬ್ಬರು ಒಂದು ಚೆಂದನೆಯ ವಾಲ್ ಕ್ಲಾಕ್ ನೀಡಿ ಹೋದರು… ಅದನ್ನು ಅವರ ಬ್ಯಾಂಕಿನವರು ಕೊಟ್ಟಿದ್ದರಂತೆ. “ಯಪ್ಪಾ, ಈ ಟೈಂ ಓಡೋದ್ ನೋಡಿ ನೋಡಿ ಸಾಕಾಗೈತಿ..” ಅಂದುಕೊಂಡೆ. ಹಳೆಯ ಹಿರಿಯ ಸಹುದ್ಯೋಗಿಗಳು, ನನಗೊದಗಿದ್ದ ಕೆಟ್ಟ ಸಮಯಗಳು, ಮತ್ತದನ್ನು ನಿವಾರಿಸಿಕೊಂಡ ಸಂತಸಗಳು, 4.20 ಸಮಯ. ಆ ಸಮಯಕ್ಕೆ ನನಗಾದ ಒಳ್ಳೆಯ ಕೆಲಸಗಳು,ಈಗಲೂ ನನ್ನನ್ನು ಕೆಲವರು, 4.20 ಸರ್ ಅಂದೇ ಕೀಟಲೆ ಮಾಡುವ ನನ್ನ ಸಿಬ್ಬಂದಿ ನೆನಪಾಗಿ ಇಷ್ಟು ಬರೀಬೇಕಾಯ್ತು…… ಅಂದಹಾಗೆ ಈಗ ಸಮಯ ರಾತ್ರಿ 8.40…..
–ಅಮರದೀಪ್.ಪಿ.ಎಸ್.
ತುಂಬಾ ಕಾಮಿಡಿ ಮತ್ತು ಸೊಗಸಾದ ಬರವಣಿಗೆ.. ಎಲ್ಲೂ ಬೆಸವಾಗಲ್ಲ.
8-20 ಗೆ ಕಮೆಂಟ್ಸ ಬರೆದದ್ದು.. ಅದಕ್ಕೆ ಅಕ್ಷರ ತಪ್ಪಾಯ್ತು.. ಬೇಸರವಾಗಲ್ಲ ಅನ್ನೋದರ ಬದಲಿಗೆ ಬೆಸವಾಗಲ್ಲ ಅಂತ ಟೈಪ್ ಆಗೋಯ್ತು…
Super sir 🙂