ಲೇಖನ

ಚುಟುಕಗಳು: ಹೇಮಲತಾ ಪುಟ್ಟನರಸಯ್ಯ

ಉಗುರುಗಳದು ನೆನಪಿನದು ,

ಕತ್ತರಿಸಿದಷ್ಟು ವೇಗದಲಿ ಮೂಡುವುದು ,

ಸಿಬಿರಾಗಿ ನಿಂತು ಚುಚುತ್ತಲೇ ಇರುವುದು

********************

ನೀ ಕೊಟ್ಟ ನೋವಿನ

ವಿಷವನ್ನು  ಗಟಗಟನೆ ಕುಡಿದೂ

ಸಾಯದೆ ಉಳಿಯಲು

ನಾನೇನು ನೀಲಕಂಠನಲ್ಲ

ಒಳಗೆ ಸತ್ತಿರುವೆ

ಆದರು ಇನ್ನು ಬದುಕೇ ಇರುವೆ

***************

ಅವನ ಗಂಡಸುತನವ

ದಿಕ್ಕರಿಸಿದ ನನ್ನ

ಹೆಣ್ತನ

ಕದವಿಕ್ಕಿ ಅಳುತ್ತಿತ್ತು

ಒಳಗೆ

**********

ಇಂಚಿಂಚು ಕೊಂದಿರುವೆ

ಚುಚ್ಚಿ ಚುಚ್ಚಿ

ಹುಡುಕಲು ನಿನ್ನ

ಬಿಂಬವನ್ನು ಚೂರುಗಳಲ್ಲಿ

ನಾನೇನು ಕನ್ನಡಿಯಲ್ಲ

**********

ನವಿಲಿಗೆ ಕುಣಿವುದೇ ಧರ್ಮ

ಕೆಂಬೂತದ ಸಹವಾಸಕ್ಕೆ

ಕುಣಿವುದ ಮರೆತರೆ

ಸುಮ್ಮನಿದ್ದಿತೆ ಅದರೆದೆ

***********

ಉರುಳಾಗಿ ಕೊರಳಿಗೆ …

ನರಳಿ

ಬಿಗಿಯಾಗಿ ಬೆರಳಿಗೆ

ಬೆವರಿ..

ಸರಪಳಿಯ ಬಿಡಿಸಿದೆ

ಬಂಧ ಮುಕ್ತಗೊಳಿಸಿದೆ

*********

ನಿನ್ನ ನೆನಪು

ಪೂರ ಮರೆಯದ

ಪೂರ ನೆನಪೂ ಇರದ

ಹಾಡೊಂದು,

ಗಕ್ಕನೆ ಎದ್ದು

ಗಂಟಲೊಳಗೆ  ಸಿಲುಕಿ

ಹೊರಗೂ ಬಾರದೆ,

ಒಳಗೂ ಸುಮ್ಮನಿರದೆ

ಇಡಿ ದಿನ ಭಾದಿಸುವಂತೆ

ನಿನ್ನ ಗುಂಗು

ನಿನ್ನ ನೆನಪು !!!

 

ಮರೆಯಲೆಂದೇ , ನೆನಪಿಟ್ಟುಕೊಂಡು

ಸ್ಮೃತಿ  ಪೆಟ್ಟಿಗೆಗೆ ನೂಕಿ

“ಮರೆತ” ಬೀಗವ ಜಡಿದರು

ಕಳೆದು ಕೊಳ್ಳಲಾಗದ

‘ಬೀಗದ ಕೈ’ ನಂತೆ

ನಿನ್ನ ನೆನಪು !!!

 

ಬೇಡ ಬೇಡವೆಂದೇ

ಮತ್ತೆ ಮತ್ತೆ ಮಾಡುವ

ಮೊದಲ ತಪ್ಪಿನಂತೆ

ನಿನ್ನ ನೆನಪು !!!

****************

ವ್ಯವಹಾರ

ನೀಡಿ ಜೀವದಾನ

ಕೊಂಡುಕೊಳ್ಳಬಯಸಿದೆ

ಕೃತಜ್ಞತೆಯಲ್ಲಿ

ಇಡೀ ನನ್ನ  ಜೀವಮಾನ

 

ಪ್ರೀತಿಸುವೆ ನಿನ್ನ

ಅನುವು ಮಾಡಿಕೊಡು

ಮೊದಲು

ಪ್ರೀತಿಸಿಕೊಳ್ಳಲು ನನ್ನ

***********

ರಾತ್ರಿಯಲ್ಲೂ ಒಡಾಡುತ್ತಿದ್ದರು

ತಾವಿಬ್ಬರು ರಧಾಕೃಷ್ಣರೆ ಎಂದುಕೊಂಡು

ಈಗೀಗ ರಾಧೆಯೊಬ್ಬಳೆ

ಅಲೆಯುತ್ತಿದ್ದಾಳೆ

ಮಾಯವಿ ಕೃಷ್ಣನ

ಹುಡುಕಿಕೊಂಡು

*************

ಅವನನ್ನು

ದೇವರೆಂದುಕೊಂಡು

ಆರಾಧಿಸಿದೆ

ಅದಕ್ಕೆ ಇರಬೇಕು

ಬಲಿ ಕೇಳಿದ

***************

ಸುಟ್ಟರು

ಬಸ್ಮವಾಗದೆ

ಉಳಿದಿರೋದು ಅಂದ್ರೆ

ಈ ಹೃದಯ ಒಂದೇ

************

ಕನಸಿಗೆ ಬಾ ಎಂದರು

ಬರುತ್ತಿರಲ್ಲಿಲ್ಲ ಆಗ,

ಕನಸು ಕಾಣಲು

ಮನಸ್ಸು ಮಾಡಿದ್ದೆ

 

ಮರೆಯಲು ಯತ್ನಿಸಿದಷ್ಟು

ಕನಸಿಗೆ ಬಂದೇಕೆ ಕಾಡುತ್ತಿರುವೆ  ಈಗ,

ಬದುಕುವುದ್ದಕ್ಕೆ

ಶುರು  ಮಾಡಿರುವೆ.

***********

ನಲ್ಲ,

ನಿನ್ನ ರೀತಿಗೆ

ಯಾವ ಹೋಲಿಕೆ ??

ಸಿಗಬಹುದು ಹಲವು

ಗೆದ್ದ ಪ್ರೀತಿಗೆ

 

ಹೀಗೆನ್ನಲೆ??

 

ಹಾಲಿನೊಳಗೆ ಕಂಡೂಕಾಣದ

ಬೆಣ್ಣೆಯ ರೀತಿ

ಹೊರತೆಗೆಯಲು ಹೋದರೆ

ಒಡೆದು ಹೋಗುವುದು

ಸಜ್ಜನಿಕೆ ಎಂಬ

ಭೀತಿ

***************

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಚುಟುಕಗಳು: ಹೇಮಲತಾ ಪುಟ್ಟನರಸಯ್ಯ

  1. ಸುಂದರ ಚುಟುಕುಗಳು….

  2. Adbuta adbuta Hema avre..nanna ondu sanna chutuka. "Maathu Maathagiddare sneha, maathu maathagiddare sneha, maathu maunavaadare preeti".hegide???

Leave a Reply

Your email address will not be published. Required fields are marked *