೧. ವಿರಹ
ನೋಡಲು ನಿನ್ನನೆ ಪುನಃ
ಕಾಡಿದೆ ಮನಸು ವಿನಃ
ಬರಲು ನಾ ನಿನ್ನ ಸನಿಹ
ತಡೆದಿದೆ ಈ ವಿರಹ
೨. ಬೇಸ್ತು
ಅದು ಕೂಡ blade ಕಂಪನಿ
ಎಂದು ತಿಳಿದು ಬಂದಾಗ
ಹಣ ಕಳೆದುಕೊಂಡ ಸ್ನೇಹಿತರ ಕಂಡು
ಬಿದ್ದು ಬಿದ್ದು ನಕ್ಕಿದ್ದ ಗುಂಡ ದೊಡ್ಡದಾಗಿ..
ನಂತರ ಬಾಯಿ ಬಡಿದುಕೊಳ್ಳತೊಡಗಿದನು
ತಾನೂ ಅಲ್ಲೇ ಹಣ ಇಟ್ಟಿದ್ದು ನೆನಪಾಗಿ!
೩. ಶುದ್ಧ-ಅಶುದ್ಧ
ಶುದ್ಧವಾಗಿದ್ದರೆ
holy..
ಕೆಟ್ಟು ಹೋಗಿದ್ದರೆ
ಪೋಲಿ!
೪. ತರಲೆ
ಪಕ್ಕದ್ಮನೆ ಹುಡುಗಿ
ತುಂಬಾ ತರಲೆ,
ಹಾಕಿ ನನ್ನಂಗಿಯೊಳಗೆ
ಜಿರಲೆ,
ಕೇಳಿದಳು
’ಸಹಾಯಕ್ಕೆ ಬರಲೆ?!’
೫. ಹಣ-ಹಸಿವು
ಹಣ ಹಸಿವ
ಹೋಗಲಾಡಿಸಬಲ್ಲದಾದರೆ
ಯಾರೂ ಯಾಕೆ
ಅದ ತಿನ್ನುತ್ತಿಲ್ಲ?!
೬. ವಾಸ್ತವ
ಸಿನಿನಟರು
ಬಡವರಿಗೆ ನೆರವಾದದ್ದು
ಮಾನವೀಯ..
ಆದರೆ ಅಷ್ಟಕ್ಕೆ
ದೊಡ್ಡ ಪ್ರಚಾರ ಪಡೆದದ್ದು ಮಾತ್ರ
ಸಿನಿಮೀಯ!
೭. ಗುಡಿಸಲು
ಏನೇ ಹೇಳಿ..
ಗುಡಿಸಲೇ ವಾಸಿ
ಅರಮನೆಗಿಂತ
ಶ್ರಮವಿಲ್ಲದೆ ಗುಡಿಸಲು!!
೮. guಲಾಭಿ
ಪ್ರಿಯೆಗೆ
ಓಕೆ
ಪುಢಾರಿಗೆ
ಯಾಕೆ
ಗುಲಾಬಿ?!
೯. ಹನಿ
ಪ್ರಿಯೆ ನಿನ್ನ
ಪಾದ ಕಮಲ
ಚರಣಗಳಿಗೆ
ಬಿದ್ದು ಸಾಯೋ ಆಸೆ
ನನ್ನೀ
ಕಣ್ಣ ಹನಿಗಳಿಗೆ..!
೧೦. ದಾಸ
ಒಂದಿರುಳು ರಸ್ತೆಯಲಿ ಅವಳೆದುರಾದಾಗ
ಭ್ರಮೆಯೆಂದು ತಿಳಿದೂ
ಮಾತನಾಡಿಸ ಹೋದವನಿಗೆ ಪದಗಳೇ ಸಿಗದೆ
ಮನಸು ತೊದಲಿ ತಿಣುಕಾಡಿತು..
’ನಿನ್ನೀ ಸ್ಥಿತಿಗೆ ಕಾರಣ ನಾನಲ್ಲ’
ಹರಿದಂಗಿಯ ಜೇಬಿನೊಳಗಿಂದ ಸೀಸೆಯ ಸದ್ದು
ಟುಣಕ್ಕೆಂದು ತುಳುಕಾಡಿತು!
೧೧. ನಿಶೆ
ಆಗಸದಿ
ಅಸಂಖ್ಯ ಮೊಡವೆಗಳು
ಇದ್ದರೂ ಹೊಳೆವಳು ನಿಶೆಯು
ಬಿಂದಿಯ ತೊಟ್ಟು!
೧೨. ಕಲೆ
ಆ ಗುಳಿಗೆನ್ನೆಯ
ಮೇಲಿನ ಕಲೆಗೆ
ಬಿದ್ದ ಕಲೆಗಾರ
ಕಲೆಯ ಮರೆತ
******
ಚೆನ್ನಾಗಿದೆ,,, ಹೀಗೆಯೇ ಬರೀತಾ ಇರ್ರಿ….
ಶ್ರೀವಲ್ಲಭ ಕುಲಕರ್ಣಿ