೧
ನಾನು ನಿನಗೆ
ಪ್ರೀತಿಸುವುದು
ಹೇಗೆಂದು
ಹೇಳಿ ಕೊಟ್ಟೆ.
ನೀನದನು
ಇನ್ನೊಬ್ಬನಲಿ
ಪ್ರಯೋಗಿಸಿ ಬಿಟ್ಟೆ
೨
ಚುಚ್ಚಿ ಗಾಯಗೊಳಿಸುವ
ದರ್ಜಿಯ ಸೂಜಿಗೆ,
ಎರಡನೊಂದಾಗಿಸುವ
ಹಿರಿಗುಣವೂ ಇದೆ.
೩
ಬಿಳಿ ಕಾಗದ ಮೇಲೆ
ದುಂಡಾಗದೆಯೇ
ಸತಾಯಿಸಿದ ನನ್ನ
ಅಕ್ಷರಗಳು,
ನಿನ್ನ ಕೆನ್ನೆ, ತುಟಿ ಮೇಲೆ
ಬರೆದಾಕ್ಷಣವೇ
ಸಾಲು ಮುತ್ತಾದವು
೪
ಹರಯದ
ಅವಸರಕ್ಕೆ
ಮೊಳೆತ
ಭ್ರೂಣಕೆ,
ದವಾಖಾನೆ
ದಾದಿಯರ
ಕೈಗವುಸುಗಳದ್ದೇ
ಭಯ
೫
ಗೆಳತೀ..
ನನ್ನ ಪಾಲಿಗೆ ;
ನಿನ್ನ ನೆನಪುಗಳೇ
ಹರಿತ ಆಯುಧ.
ಅದು ಕೊಂದ
ನಿದಿರೆಗಳೆಷ್ಟೋ..
ಲೆಕ್ಕವಿಟ್ಟಿಲ್ಲ
೬
ನಿನ್ನ ಹುಬ್ಬಕೊಡೆಯ
ಕೆಳಗೆ ನಿಂತು
ನೆನಪ ಮಳೆಗೆ ತೊಯ್ದ
ನನ್ನ ಮನಸ ಒಣಗಿಸುತ್ತಿದ್ದೆ
ಕಣ್ಣ ಕೊಳದಿ ಜಾರಿ ಬಿದ್ದು
ಮತ್ತೆ ಒದ್ದೆಯಾದೆ
೭
ಅಂದು-
ನೀ ನನ್ನ ತಿರಸ್ಕರಿಸಿ
ಹೊರಟು ಹೋದಾಗ
ಇಲ್ಲಿ, ನಿಲ್ಲದ
ಜೋರು ಮಳೆ ಇತ್ತು.
ಈಗ, ಮಳೆ ನಿಂತಿದೆ.
ಹನಿ ಇನ್ನೂ ನಿಂತಿಲ್ಲ;
ಮರದಲ್ಲೂ-ಕಣ್ಣಲ್ಲೂ
೮
ವಂಚನೆ ' ಪದಕೆ
ಅರ್ಥ ಹುಡುಕಿ
ಸುಸ್ತಾಗಿದ್ದೆ ಅಂದು ನಾನು
'ನಾನಿದ್ದೇನೆ' ಅಂತ
ಸಮಾಧಾನಿಸಿ
ಯಾಮಾರಿಸಿದೆ ನೀನು
೯
ಹಾಳೆ, ಲೇಖನಿ ನಡುವೆ
ಸದಾ ಪ್ರಣಯ ಕದನ
ಮಸಿಭ್ರೂಣ ಮೈದಳೆಯೆ
ಅಕ್ಷರಗಳ ಸಂತಾನ
೧೦
ನನ್ನ ನಿನ್ನ ಹಾಲಿನಂತಹ
ಪ್ರೀತಿಗೆ
ನಮಗಾಗದವರು
ಹುಳಿ ಹಿಂಡಿದರು.
ಪಾಪ, ಅವರಿಗೇನು
ಗೊತ್ತಿತ್ತು?
ನಮ್ಮಿಬ್ಬರಿಗೂ ಇಷ್ಟವಾದದ್ದು;
ಕೆನೆಮೊಸರು
೧೧
ನನ್ನ ಮಿತ್ರನೊಬ್ಬ
ಬ್ಯಾಂಕೊಂದರಲ್ಲಿ
ಲೆಕ್ಕಿಗ.
ತನ್ನ ಹುಡುಗಿಗೆ
ಕೊಟ್ಟ ಮುತ್ತಿಗೂ
ಬಡ್ಡಿ ಪಡೆಯುತ್ತಾನೆ
ಅವನಲ್ಲವೇ
'ಲಕ್ಕಿ'ಗ
೧೨
ತುಂಬು
ಸಡಿಲಗೊಂಡ
ಹಣ್ಣೆಲೆಯ ಕಣ್ಣಲ್ಲಿ
ಮರದ ಬೇರಿಗೆ
ಗೊಬ್ಬರಾಗಿ
ಋಣ ತೀರಿಸುವ
ಹಂಬಲ
೧೩
ಕೆಲವೊಮ್ಮೆ,
ಅಪಾರ್ಥವಾಗುತ್ತದೆ
ದಿನಪತ್ರಿಕೆಯ ಸುದ್ದಿಯಿಂದ.
ಒಂದು ತಲೆಬರಹ ನೋಡಿ;
'ಐಶ್ವರ್ಯ ರೈ ಗೆ ಹೆಣ್ಣು ಮಗು'
(ನಮ್ಮ ಪ್ರತಿನಿಧಿಯಿಂದ )
೧೪
ಸಾಲ ಮಾಡಿ
ತುಪ್ಪ ತಿನ್ನಲು
ಅವನದು, ಎತ್ತಿದ ಕೈ.
ಅಸಲು ಕೂಡ
ತೀರಿಸಲಾಗದೆ
ಒಮ್ಮೆ ಎತ್ತಿದ, ಕೈ.
೧೫
ಕನ್ನಡದ ಸಾಹಿತಿಯೊಬ್ಬರನು
ಭೇಟಿಯಾಗಿ, ಒಂದು ಸರ್ತಿ
ಇಂಗ್ಲಿಷಿನಲ್ಲಿ ಕೇಳಿದೆನವರ;
'ಯು ಆರ್ ಅನಂತಮೂರ್ತಿ?'
೧೬
ಒಂದು ಮಗು
ಹೆತ್ತು ಕೊಡು
ಸಾಕು ಎಂದೆ
ಅವಳಿಗೆ.
ಅವಳ ಆಸೆ
ಎರಡು ಪಟ್ಟು
ಹಂಬಲಿಸುವಳು
'ಅವಳಿ'ಗೆ
೧೭
ಶ್ರೀಯುತರು
ನಿಧನರಾದರು
ಸಾಲ ಮಾಡಿದ
ಚಿಂತೆಗೆ
ತುಂಬಲಾರದ
ನಷ್ಟವಂತೆ
ಸಾಲ ನೀಡಿದ
ಬ್ಯಾಂಕಿಗೆ
೧೮
ಮೌನ
ಮತ್ತು
ಮಾತಿಗೆ
ಸೂಕ್ತವಾದ
ಹೋಲಿಕೆ;
ನಾನು
ಮತ್ತು
ನನ್ನಾಕೆ
೧೯
'ಎಲೆ, ಕುಸುಮ
ನೀನೆಷ್ಟು
ಕೋಮಲೆ '
ಎಂದದ್ದು
ನಿನಗಲ್ಲ ಗೆಳತಿ.
ಮನೆಯ ಮುಂದಣ
ಹೂ, ಎಲೆಯ
ಬಣ್ಣಿಸುವುದು
ನನ್ನ ಪದ್ಧತಿ.
೨೦
ಮಚ್ಚು ಹಿಡಿದು
ದೇಶ ಆಳಬೇಕು
ಎಂದು ಹೊರಟವನಿಗೆ,
ಕಣ್ಣ ಮುಂದೆ ಕಂಡದ್ದು;
ಅಚ್ಚಬಿಳಿ ಸೀರೆಯುಟ್ಟ
ಬೋಳು ಹಣೆಯ
ಹೆಂಡತಿಯ ಚಿತ್ರ
******
ಬೋರಿಗಿಯವರೇ, ಹನಿಗವನಗಳು ತುಂಬಾ ಚೆನ್ನಾಗಿವೆ. ಬಹಳ ಇಷ್ಟವಾದ್ವು … ಅಭಿನಂದನೆಗಳು..
ಎಲ್ಲವೂ ಸೂಪರ್ ಸಾರ್ /…
ಭಲೇ ಇಷ್ಟ ಆದವು
ನಂಗೆ ನಿಮ್ಮ ಬರಹಗಳು -ಬೀ ಆರ್ ಎಲ್ , ಡುಂಡಿ ರಾಜ್ ಅವರ ಶೈಲಿ ನೆನಪಿಸಿದವು ..!!
ನಿಮಗೆ ಒಳ್ಳೆ ಭವಿಷ್ಯವಿದೆ ..
ಒಳ್ಳೆ ಪ್ರತಿಭೆ ಇದೆ .. ಅದು ಬೆಳಕಿಗೆ ಬರಲಿ ..
ಶುಭವಾಗಲಿ
\।/
ವೆಂಕಟೇಶ ಮಡಿವಾಳ ಬೆಂಗಳೂರು
ಚೆನ್ನಾಗಿವೆ ಸರ್
ತುಂಬಾ ಚೆನ್ನಾಗಿವೆ ಚುಟುಕಗಳು ಸರ್. ಮನಸಿಗೆ ಹಿಡಿಸಿದವು….
ಸಾರ್ , ತುಂಬಾ ಚೆನ್ನಾಗಿ ಹನಿಗವನಗಳು ಬಂದಿವೆ ..