ಚಿನುಅ ಅಚಿಬೆಯ Things Fall Apart- ವಸಾಹತು ಸಂಸ್ಕೃತಿಯ ದಬ್ಬಾಳಿಕೆಯ ಅನಾವರಣ: ನಾಗರೇಖಾ ಗಾಂವಕರ

1959ರಲ್ಲಿ ಪ್ರಕಟವಾದ ಚಿನುಅ ಅಚಿಬೆಯ Things Fall Apart ಕಾದಂಬರಿ ವಸಾಹತು ಪೂರ್ವದ ನ್ಶೆಜೀರಿಯಾದ ಜನಜೀವನ ಮತ್ತು ಬ್ರೀಟಿಷ್ ಆಗಮನದ ನಂತರದ ಅಲ್ಲಿಯ ಸಾಂಸ್ಕೃತಿಕ ಕಗ್ಗೊಲೆ, ಕ್ರೈಸ್ತ ಮಿಷನರಿಗಳಿಂದ ಮೂಲ ಇಗ್ಬೋ ಜನಾಂಗ ಮತಾಂತರದ ಮುಷ್ಠಿಯಲ್ಲಿ ನರಳಿದ್ದು, ಎಲ್ಲವನ್ನೂ ಹೊರಜಗತ್ತಿಗೆ ತೆರೆದಿಟ್ಟಿತು. ಇಂಗ್ಲೀಷನಲ್ಲಿ ಮೂಡಿ ಬಂದ ಆಧುನಿಕ ಆಫ್ರಿಕನ್ ಕಾದಂಬರಿ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ತೀವೃ ಚರ್ಚೆಗೆ ಒಳಗಾದ ಕಾದಂಬರಿ.

ಕಾದಂಬರಿಯ ತಲೆಬರಹವು W. B. Yeats ಕವಿಯ The Second Coming ಎಂಬ ಕವಿತೆಯಲ್ಲಿಯ ಸಾಲಾಗಿದ್ದು, ಆ ಕವಿತೆಯೂ ಸಾಂಸ್ಕೃತಿಕ ವಿನಾಶದ ಕುರಿತೇ ಬರೆಯಲ್ಪಟ್ಟಿತ್ತು. ಕವಿ ಐರ್ಲೆಂಡಿನ ಈಸ್ಟರ ದಂಗೆ, ಜಾಗತಿಕ ಯುದ್ಧಗಳ ಕರಾಳತೆಗೆ ನೊಂದು ಬರೆದ ಈ ಕವಿತೆಯಲ್ಲಿ ಕವಿ ಜಗತ್ತು ಬದಲಾಗುತ್ತಿರುವದನ್ನು ಉಲ್ಲೇಖಿಸುತ್ತಾನೆ. ಸದ್ ಚಿಂತನೆಗಳ ಕೊರತೆ, ನೈತಿಕ ಮೌಲ್ಯಗಳ ಅಧಃಪತನ, ಮಿತಿ ಮೀರಿದ ಹಿಂಸೆಗಳು ಅಂದು ವಿಜೃಂಬಿಸುತ್ತಿದ್ದು ಹತಾಶನಾದ ಕವಿ ಅದನ್ನು ಕವನದ ಮೂಲಕ ವ್ಯಕ್ತಗೊಳಿಸುತ್ತಾನೆ. ಅದನ್ನು ಅಚೀಬೆ ತಮ್ಮ ಕಾದಂಬರಿಯ ಶಿರ್ಷಿಕೆಯನ್ನಾಗಿಟ್ಟುಕೊಂಡು ನ್ಶೆಜೀರಿಯಾದಂತಹ ದೇಶದ ಉಚ್ಛ ಸಂಸ್ಕೃತಿ ಹೇಗೆ ದಮನಕ್ಕೊಳಗಾಗಿ ಮತಾಂತರದ ತಾಣವೂ ಆಗಿ ತನ್ನ ಮೌಲ್ಯ ಕಳೆದುಕೊಂಡಿತು ಎಂಬುದನ್ನು ವಿವರಿಸುತ್ತಾರೆ.
ಉಮೋಫಿಯಾದ ಒಂಬತ್ತು ಹಳ್ಳಿಗಳು ಒಂದೇ ಬುಡಕಟ್ಟಿನ ಮೊದಲ ತಂದೆಯ ಒಂಬತ್ತು ಮಕ್ಕಳಿಂದ ಕಟ್ಟಲ್ಪಟ್ಟಿದ್ದವು. ಆ ಇಗ್ಬೋ ಬುಡಕಟ್ಟಿನ ಒಕೊಂಕೊ ಆ ಜನಾಂಗದ ಪ್ರಸಿದ್ಧ ಯುವಕ. ತನ್ನ ಮಲ್ಲಯುದ್ಧದ ಪಟ್ಟುಗಳಿಂದ ಉಮೋಫಿಯಾದ ಒಂಬತ್ತು ಹಳ್ಳಿಗಳಿಗೆ ಹೆಸರುವಾಸಿಯಾಗಿದ್ದ. ಆತನ ತಂದೆ ಯುನೋಕಾ, ದುಡಿಮೆಯ ಮೌಲ್ಯ ಅರಿಯದೇ ಬದುಕಿನಲ್ಲಿ ಸೋತಿದ್ದ. ಹೆಂಡತಿ ಮಕ್ಕಳ ಸಾಕಲಾಗದ ಸೋಂಬೇರಿ ಎನ್ನಿಸಿಕೊಂಡಿದ್ದ. ಸಾಲಗಾರನೆಂಬ ಬಿರುದು ಪಡೆದಿದ್ದ. ಇವೆಲ್ಲವೂ ಒಕೆಂಕೊ ತಾನು ತಂದೆಯಂತಿರದೇ ಬದುಕನ್ನು ಗೆಲ್ಲಬೇಕೆಂಬ, ಪ್ರಸಿದ್ಧ ಪುರುಷನಾಗಬೇಕೆಂಬ ಹಂಬಲವನ್ನು ಸೃಷ್ಟಿಸಿದವು. ತಂದೆ ಯುನೋಕಾ ಅದ್ಯಾವುದೋ ಊತದ ರೋಗಕ್ಕೆ ಬಲಿಯಾಗಿದ್ದ. ಆ ರೋಗಿಗಳನ್ನು ಭೂಮಿಯಲ್ಲಿ ಹೂಳುತ್ತಿರಲಿಲ್ಲ. ಕಾಡಿಗೆ ಕರೆದೊಯ್ದು ಹಾಗೇ ಮರಕ್ಕೆ ಕಟ್ಟಿಹಾಕಿ ಬರುತ್ತಿದ್ದರು. ಯುನೋಕಾಗೆ ಅದೇ ಸಾವು ಕಾದಿತ್ತು. ತಂದೆಯ ನಿಕೃಷ್ಟ ಬದುಕು. ಅಸಹ್ಯವಾದ ಸಾವು ಒಕೊಂಕೆ ತಂದೆಯಂತಾಗಬಾರದೆಂದು ನಿಶ್ಚಯಿಸಲು ಕಾರಣವಾಗಿತ್ತು.ಹಾಗಾಗಿ ಆತ ಕಷ್ಟದ ಬದುಕನ್ನು ಕಟ್ಟಿಕೊಳ್ಳುತ್ತಾನೆ. ಸ್ವಂತ ಪ್ರಯತ್ನ ಮುಖೇನ ಸಮಾಜ ಗುರುತಿಸುವಂತಾಗುತ್ತಾನೆ.

ತನ್ನ ಹದಿನೆಂಟನೆ ವಯಸ್ಸಿಗೆ ಬೆಕ್ಕು ಎಂದು ಹೆಸರು ಗಳಿಸಿದ್ದ ಆಮಲಿಂಜ್ ಎಂಬ ಪ್ರಸಿದ್ಧ ಪಹಿಲ್ವಾನನ ಸೋಲಿಸಿ ಗೆದ್ದು ಬರುತ್ತಾನೆ. ಮೂವರು ಪತ್ನಿಯರ ಗಂಡನಾಗುತ್ತಾನೆ. ಒಕೊಂಕೆ ಸ್ವಂತವಾಗಿ ತನ್ನ ಸಂಪತ್ತನ್ನು ಗಳಿಸಿಕೊಂಡಿದ್ದಾನೆ. ತಂದೆ ಮಾಡಿಟ್ಟ ಸಾಲ ತಾಯಿ ಮತ್ತಿಬ್ಬರು ತಂಗಿಯರು ಜವಾಬ್ದಾರಿಯನ್ನು ಹೊತ್ತುಕೊಂಡ. ಬದುಕಿನಲ್ಲಿ ಹೊಂದಾಣಿಕೆಗೆ ಅವಕಾಶವೇ ಇಲ್ಲದಂತೆ ದುಡಿಯತೊಡಗಿದ. ಇದ್ದ ಮೂವರು ಪತ್ನಿಯರು ಮತ್ತವರ ಮಕ್ಕಳನ್ನು ಜೋಪಾನ ಮಾಡುತ್ತಲೇ ಉಮೋಫಿಯಾದ ಜನರೆದುರು ಗಟ್ಟಿಗನೆಂದು ಹೆಸರಾಗಿದ್ದ. ಆಗಾಗ ಹೆಂಡತಿ ಮಕ್ಕಳನ್ನು ಬಾರಿಸುತ್ತಿದ್ದ. ತನ್ನ ನೆರೆಹೊರೆಯವರಿಗೆ ಕಠೋರವಾಗಿದ್ದ. ಹಳ್ಳಿಯ ಮುಖಂಡನೆನ್ನಿಸಿಕೊಂಡಿದ್ದ.

ಬೇರೆ ಬುಡಕಟ್ಟಿನ ಮಬೈನೊದ ಇಕೆಮೆಫೂನಾನ ತಂದೆ ಮಬೈನೊದ ಸಂತೆಗೆ ಬಂದ ಉಮೋಫಿಯಾದ ಹೆಣ್ಣು ಮಗಳಾದ ಒಗಬಾಫಿ ಉದೋನ ಹೆಂಡತಿಯ ಕೊಲೆಗೆ ಕಾರಣನಾಗುತ್ತಾನೆ. ಹಾಗಾಗಿ ಉಮೋಫಿಯಾ ಮತ್ತು ಮಬೈನಾದ ನಡುವೆ ಉಂಟಾದ ಸಂಧಾನ ಮಾತಿಕತೆಗೆ ಹಿರಿಯರ ಸಮ್ಮತಿ ಪಡೆದು ಹೋದ ಒಕೊಂಕೆ ಇಕೆಮೆಫುನಾ ಮತ್ತು ಒಬ್ಬ ಹುಡುಗಿಯೊಂದಿಗೆ ಮರಳುತ್ತಾನೆ. ಆ ಹುಡುಗಿ ಸತ್ತ ಉದೋನ ಹೆಂಡತಿಯ ಸ್ಥಾನ ತುಂಬುವಂತೆ ಮತ್ತು ಇಕೆಮೆಫುನಾ ಒಕೊಂಕೆಯ ಮನೆಯಲ್ಲಿಯೇ ಇರುವಂತೆ ತೀರ್ಮಾನವಾಗುತ್ತದೆ. ಇಕೆಮೆಫೂನಾ ಒಕೊಂಕೆಯನ್ನು ಅಪ್ಪನೆಂದು ಕರೆಯಲಾರಂಭಿಸುತ್ತಾನೆ. ಕ್ರಮೇಣ ತನ್ನ ಮಗ ನೋಯೆಗಿಂತ ಆತನಲ್ಲಿ ಒಕೊಂಕೆಗೆ ಹೆಚ್ಚು ಪ್ರೀತಿ ಬಲಿಯುತ್ತದೆ. ಆದರೆ ಗಿರಿಗವ್ವರದ ದೇವತೆಯ ದೇವವಾಣಿಯಂತೆ ಇಕೆಮೆಫುನಾನನ್ನು ಕೊಲೆಗೈಯಬೇಕು. ಆದರೆ ಹಳ್ಳಿಯ ಹಿರಿಯ ಒಗ್ಬಾಫಿ ಎಜಿಯೂಡು ಒಕೊಂಕೆಗೆ ಇಕೆಮೆಫೂನಾನ ಕೊಲೆಯಲ್ಲಿ ಭಾಗವಹಿಸಬೇಡವೆಂದು ಬುದ್ಧಿ ಹೇಳುತ್ತಾನೆ. ಕಾರಣವೆಂದರೆ ಇಕಮೆಫುನಾ ಒಕೊಂಕೆಯನ್ನು ಅಪ್ಪ ಎಂದು ಕರೆಯುತ್ತಿದ್ದ. ಆದರೆ ದುರಾದೃಷ್ಟಕ್ಕೆ ತಾನು ಹೆಣ್ಣುಹೇಡಿ ಎಂದು ಜನ ತಿಳಿದಾರೆಂದು ಭಾವಿಸಿ, ಉಮೋಫಿಯಾ ಮಂದಿ ಇಕೆಮೆಫುನಾ ಮೇಲೆ ಧಾಳಿ ಮಾಡಿದಾಗ ‘ಅಪ್ಪ ‘ಎಂದು ರಕ್ಷಣೆಗೆ ತನ್ನತ್ತ ಓಡುತ್ತ ಬಂದ ಇಕೆಮೆಫುನಾನನ್ನು ಒಕೊಂಕೆ ಕತ್ತಿಯಿಂದ ಕತ್ತರಿಸಿಬಿಡುತ್ತಾನೆ. ಆದರೆ ಕ್ರಮೇಣ ಆತ ತಪ್ಪಿತಸ್ಥ ಭಾವನೆಯಿಂದ ತತ್ತರಿಸುತ್ತಾನೆ.

ಅದೂ ಅಲ್ಲದೇ ಇಕೆಮೆಫುನಾ ಕೊಲೆಯ ನಂತರ ಒಕೊಂಕೆಯ ಬದುಕಿನಲ್ಲಿ ದುರಾದೃಷ್ಟಗಳು ಹೆಣಕಿಹಾಕುತ್ತವೆ. ಆತನ ಪ್ರೀತಿಯ ಮಗಳು ಎಜಿನ್ಮಾ ಕಾಯಿಲೆ ಬೀಳುತ್ತಾಳೆ. ಒಗ್ ಬಾಫಿ ಎಜಿಯೂಡು ಮರಣಹೊಂದುತ್ತಾನೆ. ಆತನ ಶವಸಂಸ್ಕಾರಕ್ಕೆ ಹೋದ ಒಕೊಂಕೆಯ ಗನ್ನಿಂದ ಗುಂಡು ಆಕಸ್ಮಿಕವಾಗಿ ಹಾರಿ ಎಜಿಯೂಡು ಮಗನ ಸಾವಿಗೆ ಕಾರಣವಾಗುತ್ತದೆ. ತನ್ನದೇ ವಂಶದ ವ್ಯಕ್ತಿಯ ಸಾವಿಗೆ ಕಾರಣನಾದ ಸಲುವಾಗಿ ಒಕೊಂಕೆ ಎಳುವರ್ಷಗಳ ಗಡಿಪಾರು ಶಿಕ್ಷೆ ನೀಡಲಾಗುತ್ತದೆ. ಒಕೊಂಕೆ ತನ್ನತಾಯಿಯ ಊರಾದ ಮಬಾಂಟಕ್ಕೆ ಹೊರಟುಹೋಗುತ್ತಾನೆ.

ಒಕೊಂಕೆ ಬಹಿಷ್ಕಾರಕ್ಕೆ ಒಳಗಾದ ಸಮಯದಲ್ಲಿ ಉಮೋಫಿಯಾಕ್ಕೆ ಆಗಮಿಸಿದ ಬ್ರಿಟಿಷ ಜನರು ಉಮೋಫಿಯಾದ ಬುಡಕಟ್ಟು ಸಂಸ್ಕೃತಿಯ ಮೇಲೆ ತಮ್ಮ ಕ್ರೈಸ್ತ ಧರ್ಮವನ್ನು ಹೇರಲು ನಡೆಸುತ್ತಿರುವ ಹುನ್ನಾರಗಳು ತಿಳಿಯುತ್ತವೆ. ಬ್ರಿಟಿಷ ಕಪಿಮುಷ್ಠಿಗೆ ಸಿಲುಕಿದ ಉಮೋಫಿಯಾ ಕ್ರಮೇಣ ತನ್ನತನವನ್ನು ಕಳೆದುಕೊಳ್ಳತೊಡಗುತ್ತದೆ. ಮಿಷನರಿಗಳ ಆಗಮನದಿಂದ ಮಬಾಂಟ ಕೂಡಾ ತೀವೃವಾದ ಚಟುವಟಿಕೆಯಲ್ಲಿ ಮುಳುಗಿತ್ತು. ಆದರೂ ಪರಂಗಿಯೊಬ್ಬನನ್ನು ಬುಡಕಟ್ಟು ಜನ ಕೊಂದು ಹಾಕಿದ್ದರು. ಆದರೂ ಅವರು ಮತಾಂತರದ ಕೆಲಸವನ್ನು ನಿಲ್ಲಿಸಿರಲಿಲ್ಲ. ಸ್ವತಃ ಒಕೊಂಕೆಯ ಹಿರಿಯ ಮಗ ನೋಯೆ ಕ್ರೈಸ್ತ ಮತದಲ್ಲಿ ಆಸಕ್ತನಾಗತೊಡಗಿದ. ತನ್ನ ಹೆಸರನ್ನು ಇಸಾಕ್ನೆಂದು ಬದಲಾಯಿಸಿಕೊಂಡಿದ್ದು ಒಕೊಂಕೆಗೆ ನುಂಗಲಾರದ ತುತ್ತಾಗಿತ್ತು.

ಬಹಿಷ್ಕಾರದಿಂದ ಮರಳಿ ಬಂದ ಒಕೊಂಕೆ ತನ್ನ ಹಳ್ಳಿಯಲ್ಲಿ ಬಿಳಿಯರ ಆಗಮನದ ಬದಲಾವಣೆಗಳಿಂದ ರೋಸಿಹೋದ. ಉಮೋಫಿಯಾ ಮಬಾಂಟಗಳಲ್ಲಿ ತಮ್ಮ ಇಗರ್ಜಿಗಳನ್ನು ಕಟ್ಟಿಕೊಂಡ ಬಿಳಿಯರು ಬಹಳಷ್ಟು ಬುಡಕಟ್ಟುಗಳನ್ನು ಮತಾಂತರಿಸಿದ್ದರು. ಈ ಮಧ್ಯೆ ಒಕೊಂಕೆಯ ನೇತ್ರತ್ವದಲ್ಲಿ ಬುಡಕಟ್ಟು ಜನರೆಲ್ಲ ಸೇರಿ ಕ್ರೈಸ್ತರ ಚರ್ಚನ್ನು ನೆಲಸಮಗೊಳಿಸಿದರು. ಒಕೊಂಕೆ ಮತ್ತು ಹಳ್ಳಿಯ ಪ್ರಮುಖ ಹಿರಿಯರನ್ನು ಬಿಳಿಯರು ಸೆರೆಗೆ ಒಯ್ದರು. ಅಮಾನವೀಯವಾಗಿ ಬರ್ಬರವಾಗಿ ತಳಿಸಿದರು. ಹುಟ್ಟಿನಿಂದಲೇ ಶೌರ್ಯವನ್ನೆ ಉಸಿರಾಡುತ್ತಿದ್ದ ಒಕೊಂಕೆ ಬ್ರಿಟಿಷರ ವಿರುದ್ಧ ದಂಗೆ ಏಳುತ್ತಾನೆ. ತನ್ನ ಜನರ ಗುಂಪು ಕಟ್ಟುವ ಕಾರ್ಯದಲ್ಲಿರುವಾಗ ಬ್ರಿಟಿಷರ ಸಂದೇಶ ಹೊತ್ತು ತಂದ ಒಲೇಕಾರನನ್ನು ಕೋಪದಲ್ಲಿ ಒಕೊಂಕೆ ಕಡಿದುಹಾಕುತ್ತಾನೆ. ಆದರೆ ಕೊನೆಯಲ್ಲಿ ಆತನ ಬುಡಕಟ್ಟುಗಳೇ ಬ್ರಿಟಿಷರ ವಿರುದ್ಧದ ಆತನ ಹೋರಾಟಕ್ಕೆ ಬೆಂಬಲ ನೀಡದೇ ಇದ್ದಾಗ ಆತ ನಿರಾಶನಾಗುತ್ತಾನೆ. ತನ್ನ ಶ್ರೇಷ್ಠ ಸಂಸ್ಕೃತಿಯು ಅನ್ಯ ಸಂಸ್ಕೃತಿಯ ಪ್ರಭಾವದಲ್ಲಿ ಬದಲಾಗುತ್ತಿರುವುದು ಆತನಿಗೆ ಜೀರ್ಣಿಸಿಕೊಳ್ಳಲಾಗುವುದಿಲ್ಲ. ಒಕೊಂಕೆಯ ವಿರುದ್ಧ ದೂರಿಗಾಗಿ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಆತನನ್ನು ಕರೆದೊಯ್ಯಲು ಬಂದಾಗ ಆತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಇಗ್ಬೋ ಸಂಸ್ಕೃತಿ ಎಂದೂ ಒಪ್ಪಿಕೊಳ್ಳದ ಆತ್ಮಹತ್ಯೆಯನ್ನು ಸ್ವತಃ ಇಗ್ಬೋ ಮುಖಂಡನಾದ ಒಕೊಂಕೆ ಮಾಡಿಕೊಂಡದ್ದು, ಇದರಿಂದ ಇಗ್ಬೋ ಜನರ ಕಣ್ಣಲ್ಲಿ ಆತನ ಬಗೆಗೆ ಇರುವ ಎಲ್ಲ ಖ್ಯಾತಿ ಹೆಸರುಗಳು ಮೌಲ್ಯ ಕಳೆದುಕೊಳ್ಳುತ್ತವೆ.

ಕಾದಂಬರಿಯ ಪ್ರಮುಖ ಪಾತ್ರ ಒಕೊಂಕೆ ಹತ್ತು ಮಕ್ಕಳು ಹಾಗೂ ಮೂವರು ಪತ್ನಿಯರ ಕೂಡಾ ತನ್ನ ಗಂಡಸ್ತನದಲ್ಲಿ ಅಪಾರ ನಂಬಿಕೆಯುಳ್ಳವ ಆದರೆ ಮಗ ನೋಯೆ ಮಾತ್ರ ಮೃದು ಸ್ವಭಾವ ಹೊಂದಿದ್ದು, ಭಾವನಾತ್ಮಕ ವ್ಯಕ್ತಿತ್ವ ಹೊಂದಿದ್ದ. ಒಕೊಂಕೆಯ ಎರಡನೆ ಹೆಂಡತಿ ಎಕ್ವೇಫಿ ಆತನ ಪ್ರೀತಿ ಪಾತ್ರಳಾಗಿದ್ದು, ಬೇರೆ ವಿವಾಹವಾಗಿದ್ದು, ಮೊದಲ ಗಂಡನ ತ್ಯಜಿಸಿ ಕುಸ್ತಿಪಟುವಾಗಿದ್ದ ಒಕೊಂಕೆಯ ಹಿಂದೆ ಓಡಿಬರುತ್ತಾಳೆ. ಆಕೆಯ ಮಗಳು ಎಜಿನ್ಮಾ ತಾಯಿಯಂತೆ ಸುಂದರಿಯೂ ತಂದೆಯಂತೆ ಧೈರ್ಯಸ್ಥೆ ಆಗಿದ್ದು, ಒಕೊಂಕೆ ಆಗಾಗ ನೊಯೆ ಬದಲಿಗೆ ಆಕೆ ಗಂಡಾಗಬಾರದಿತ್ತೆ ಎಂದು ಹಲವು ಬಾರಿ ಪರಿತಪಿಸುತ್ತಾನೆ,
ಕಾದಂಬರಿಯ ಉದ್ದಕ್ಕೂ ಅಚಿಬೆ ಇಗ್ಬೋ ಸಮಾಜದ ರೀತಿ ರಿವಾಜುಗಳನ್ನು, ಜೀವನ ಶೈಲಿಯನ್ನು ಶ್ರೀಮಂತವಾಗಿ ಚಿತ್ರಿಸುತ್ತಾರೆ.ಮೂವರು ಪತ್ನಿಯರ ಹೊಂದಿದ್ದ ಒಕೊಂಕೆ ತನ್ನ ಗುಡಿಸಲು ‘ಓಬಿ’ಯ ಹಿಂಭಾಗದಲ್ಲಿ ಆತನ ಮೂವರು ಹೆಂಡತಿಯರ ಗುಡಿಸಲಿದ್ದು, ಪುರುಷ ಪ್ರಾಧಾನ್ಯತೆಯ ಇಗ್ಬೋ ಸಂಸ್ಕೃತಿಯನ್ನು ತೋರಿಸುತ್ತದೆ.ಇಗ್ಬೋ ಸಮಾಜ ಮತ್ತು ಅದರಲ್ಲಿಯ ಅನೇಕ ಕಟ್ಟುಪಾಡುಗಳು, ಮೌಢ್ಯದ ಆಚರಣೆಗಳು ಆ ಸಂಸ್ಕೃತಿಯ ಅವನತಿಗೆ ಕಾರಣವಾದ ವಿಚಾರವನ್ನು ಅಚೀಬೆ ಎತ್ತಿ ಹೇಳುತ್ತಾರೆ. ಸಹೋದರನಂತಿದ್ದ ಇಕೆಮೆಫುನಾನ ಕೊಲೆಯ ಸಂಗತಿ ಮುಗ್ಧ ಮನಸ್ಸಿನ ಎಳೆಯ ನೋಯೆಯ ಮೇಲೆ ಎಳೆದ ಬರೆ ಆತನಲ್ಲಿ ಬುಡಕಟ್ಟು ಆಚಾರಗಳ ಬಗ್ಗೆ ಆತ ತದನಂತರ ಮೂಡಿಸಿಕೊಳ್ಳುವ ಅನಾದರ ಹಾಗೂ ಜಿಗುಪ್ಸೆಗೆ ಕಾರಣ. ಅವಳಿ ಮಕ್ಕಳು ಹುಟ್ಟಿದ ಕಾರಣಕ್ಕೆ ಮಕ್ಕಳನ್ನು ಎಸೆದು ಬರುವ ಅನಾಗರಿಕ ಪರಂಪರೆ ಅದನ್ನು ಕಿರಸ್ತಾನಿನವರು ವಿರೋಧಿಸುತ್ತಿರುವುದು, ಅಸ್ಪೃಷ್ಯತೆಯನ್ನು ಬಿಳಿಯರು ಪ್ರೇರೆಪಿಸದೇ ಇರುವುದು, ಬಹುದೇವ ಆರಾಧನೆಯನ್ನು ಖಂಡಿಸಿ ಏಕ ದೇವನನ್ನು ಆರಾಧಿಸುವಂತೆ ಪ್ರೇರೆಪಿಸಿದ್ದು ಇದೆಲ್ಲವೂ ಕ್ರೈಸ್ತ ಧರ್ಮವನ್ನು ಅಲ್ಲಿಯ ಯುವಜನಾಂಗ ಬೆಂಬಲಿಸಲು ಕಾರಣವಾಗಿತ್ತು. ಇನ್ನು ಇಗ್ಬೋ ಜನರಲ್ಲಿಯ ಸಂಘಟನೆಯ ಕೊರತೆಯೂ ಕೂಡಾ ಅನ್ಯದೇಶಿಯರು ಅಲ್ಲಿಯ ಆಡಳಿತ ಚುಕ್ಕಾಣಿ ಹಿಡಿಯಲು ಹೇಗೆ ಕಾರಣವಾಯ್ತು ಎಂಬುದನ್ನು ಕೃತಿ ಪರಿಚಯಿಸುತ್ತದೆ.

ಅದರೊಂದಿಗೆ ದೇವನೊಬ್ಬನೇ ಎನ್ನುತ್ತ ಕ್ರೈಸ್ತನನ್ನು ಆರಾಧಿಸುವಂತೆ ಮುಗ್ಧ ಬುಡಕಟ್ಟುಗಳ ಮನಸ್ಸನ್ನು ಮರಳುಮಾಡಿದ ಬ್ರಿಟಿಷ ಸಾಮ್ರಾಜ್ಯಶಾಹಿ ಧೋರಣೆ,ಅಹಂಕಾರದ ವರ್ತನೆಯನ್ನು ತಮ್ಮ ಕ್ಷಕಿರಣದೃಷ್ಠಿಯಿಂದ ಜಗಕ್ಕೆ ತೋರ್ಪಡಿಸುತ್ತಾರೆ. ಬೌದ್ಧಿಕ ಕಪಟತೆಗೆ ಹೆಸರಾದ ಬ್ರೀಟಿಷರಿಂದ ನೈಜೀರಿಯಾದಂತಹ ಮುಗ್ಧ ದೇಶಗಳ ಅಶಿಕ್ಷಿತ ಜನಾಂಗ ಹೇಗೆ ದಮನಕ್ಕೊಳಗಾಯಿತು ಎಂಬದಕ್ಕೂ ಕಾದಂಬರಿ ಸಾಕ್ಷಿಯಾಗುತ್ತದೆ.

ನಾಗರೇಖಾ ಗಾಂವಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x