ಚಿಗುರಿನ ಮುನ್ನ: ಮಂಜು ಹೆಗಡೆ

“ನಂಗೆ ನಿನ್ನಿಂದ ಒಂದು ಮಗು ಬೇಕು, ಪ್ಲೀಸ್ ಇಲ್ಲ ಅನ್ನಬೇಡ. ನಾನು ಜೀವನದಲ್ಲಿ ಒಂಟಿ ಆಗ್ಬಿಡ್ತೀನಿ. ನೆಮ್ಮದಿ, ನನ್ನ ಜೀವನಕ್ಕೆ ಭರವಸೆಗಾದ್ರು ಬೇಕು. ಇದು ಕೋನೆಯ ಆಸೆ, ಇಲ್ಲ ಅನ್ನಬೇಡಿ. ” ಅಂತ ಗಾಯತ್ರಿ ಗೋಗರಿತಾ ಇದ್ದಾಗ ರಾಘವ ಮೌನವಾಗಿದ್ದ.

‘ಇಲ್ಲ ಕಣೆ ಏನ್ ಹೇಳಬೇಕು ತಿಳಿತಿಲ್ಲ, ನಿನ್ನ ಮಾತು ಒಮ್ಮೆಲೆ ಬಾಂಬ್ ಬಿದ್ದಾಗೆ ಆಗಿದೆ. ‘ ಏಕಾಂತದಲ್ಲೂ ವೈರುಧ್ಯದ ಭಾವ.
‘ಹಾಗಲ್ಲ ರಾಘವ 7ವರ್ಷ ಆಯ್ತು ನಂದು ನಿಂದು ಪರಿಚಯ, ಮದುವೆ ಆದಾಗಿಂದ ನಾನು ಪಟ್ಟ ಕಷ್ಟ, ತೊಂದ್ರೆ ನಿಂಗು ಗೊತ್ತು, ನೀನು ತುಂಬಾ ಸಹಾಯ ಮಾಡಿದ್ದೀಯ. ಗೌತಮ ಗಂಡನಾಗಿ ಹೆಸರಿಗಷ್ಟೆ ಆಗಿದ್ದಲ್ವಾ? ಸುಳ್ಳು ಹೇಳಿ ಮದ್ವೆ ಮಾಡಿ ನಂಗೆ ಆಗಿರೋ ಮೋಸದ ಬಗ್ಗೆ ಯಾರಿಗೂ ಪಶ್ಚಾತ್ತಾಪ, ಕನಿಕರ ಇಲ್ಲದೇ ಇದ್ದಾಗ ನೀನು ತೋರಿಸಿದ ಕಾಳಜಿ, ಪ್ರೀತಿ ಬೆಂಬಲಕ್ಕೆ ನಾನು ಯಾವತ್ತು ಋಣಿ. ಹಿಂದೆ ಯಾವತ್ತು ನಾನು ದೈಹಿಕ ಭಾವಗಳ ಹೇಳಿಲ್ಲ, ಈಗ್ಲೂ ದೈಹಿಕ ಸುಖ ಬಯಸ್ತಿಲ್ಲ. ಒಂದು ನನ್ನದು ಅಂತ ಮಗು ಬೇಕು, ಮುಂದೆ ಬದುಕೋಕೆ ಒಂದು ಮೋಹ ಇರಬೇಕು ಅನಿಸ್ತಿದೆ ಸೋ ಇಲ್ಲ ಅನ್ನಬೇಡ’

“ನಿಜಾ ಆದ್ರೆ ಸಮಾಜ ಒಪ್ಪಲ್ಲಾ ಅಲ್ವಾ? ನಾನು ಈ ಸಮಾಜದಲ್ಲಿ ನನ್ನದೇ ಆದ ಪ್ರತಿಷ್ಟೆ, ಸ್ಥಾನ ಮಾನ ಗಳಿಸ್ಕೊಂಡಿದ್ದಿನಿ, ಈಗ ನಿನ್ನ ಆಸೆ ಈಡೇರಿಸೊಕೆ ಹೋದ್ರೆ ನಾನು ಮಾತನಾಡೋ ನೈತಿಕತೆ ಕಳಕೊಳ್ತೀನಿ, ಬೆಕ್ಕು ಕಣ್ಮುಚ್ಕೊಂಡು ಹಾಲು ಕುಡಿದ್ರೆ ಜಗತ್ತಿಗೆ ಗೊತ್ತಾಗಲ್ವಾ?”.
‘ಹಾಗಲ್ಲಾ ಇಷ್ಟು ದಿನ ನೀನು ನಂಗೆ ಸಪ್ಪೊರ್ಟ ಮಾಡಿದಾಗ, ಹೆಲ್ಪ ಮಾಡಿದಾಗ, ನನ್ನ ಜೊತೆ ಟೀ ಕುಡ್ಯೊದನ್ನ ನೋಡಿದಾಗ್ಲೂ ಈ ಸಮಾಜ ಅಂದಿದ್ದೇನು? ಆ ಪವಿತ್ರ ಸ್ನೇಹ ಸಂಬಂಧಕ್ಕೂ ಅಂಟಿಸಿದ ಕಳಂಕ ಯಾವುದು? ನಿಂಗೂ ಗೊತ್ತಿಲ್ವಾ? ಆವತ್ತು ನೀ ಅದನ್ನು ಕೇರ ಮಾಡಿದ್ಯಾ? ಈಗ ಯಾಕೆ ಹೀಗೆ ವಿಚಾರ ಮಾಡ್ತಿಯಾ? ಹೀಗೆ ಹೇಳೋದು? ಇದು ನನ್ನ ಆಸೆ, ಕನಸು ನಿರಾಕರಿಸ್ಬೇಡ’.
“ಆವತ್ತು ನಾ ತಪ್ಪು ಮಾಡಿಲ್ಲ ಅನ್ನೋ ವಿಶ್ವಾಸ ಇತ್ತು, ಆತ್ಮ ಪರಿಶುದ್ದವಾಗಿತ್ತು ಅದಕ್ಕೆ ಯಾರ ಏನಂದ್ರು ಕೇರ ಮಾಡಿಲ್ಲ. ನಾನು, ನೀನು ಸರಿ ಇದ್ವಲ್ವಾ? ಅಂದಮೇಲೆ ಯಾರ ಮಾತಿಗೂ ಅಂಜೋ ಪ್ರಶ್ನೆ ಇರ್ಲಿಲ್ಲ”.

‘ ನೀನು ಗಂಡಸು ಹೌದೋ? ಅಲ್ವೊ? ನಿಂಗೆ ಯಾಕೇ ನನ್ನಂತ ಒಂದು ಹೆಣ್ಣು ಬಂದು ಅಂಗಲಾಚಿದ್ರು ಸೇರೋಕೆ ಆಗಲ್ವಾ? ನಿನ್ನಲ್ಲೆ ಏನೋ ಇದೆ, ಗೊತ್ತಾಯ್ತು’ ಏರಿದ ದನಿಯ ಅಬ್ಬರಕ್ಕೆ ಬೆಚ್ಚಿಬಿದ್ದಿದ್ದ ರಾಘವ, ಎಷ್ಟೋ ದಿನದಿಂದ ಸುಪ್ತವಾಗಿದ್ದ ಕಾಮದ ಭಾವ ಭುಗಿಲೆದ್ದ ಹೊಡೆತಕ್ಕೆ ಹಾಗೆ ಒಮ್ಮೆಲೆ ಆಕ್ರೋಶ ವ್ಯಕ್ತಪಡಿಸಿದ್ದಳು. ಅದು ಅವಳಿಗೆ ಸಹಜವೇ ಆಗಿತ್ತು. ಆದರೇ ರಾಘವ ಅವಾಕ್ಕಾಗಿದ್ದ. ಏಳು ವರ್ಷಗಳಲ್ಲಿ ಮೊದಲ ಬಾರಿ ಗಾಯತ್ರಿನ ಹೀಗೆ ನೋಡಿದ್ದ. ನಿಜಕ್ಕೂ ಕಂಗಾಲಾಗಿ ಗಾಯತ್ರಿನ ನೋಡೋಕೆ ಆಗದೆ ಮುಖ ತಿರುಗಿಸಿದ್ದ. ಗಾಯತ್ರಿಗೂ ಮರುಕ್ಷಣಕ್ಕೆ ತನ್ನ ಬಗ್ಗೆಯೆ ಅಸಹ್ಯವಾಗಿ ರಾಘವ ನ ಮನೆಯಿಂದ ಲಘುಬಗೆಯಲ್ಲಿ ಹೊರಟಿದ್ದಳು, ರಾಘವ ತಿರುಗಿ ನೋಡುವಷ್ಟರಲ್ಲಿ ಅವಳು ಮಸುಕಾದ ಮುಸ್ಸಂಜೆಯಲಿ ಕರಗಿಹೊಗಿದ್ದಳು.

ಮನೆಗೆ ಬಂದವಳೆ ಬೆಡ್ ರೂಮಿನ ಬಾಗಿಲು ಧಡ್ ಅಂತ ಹಾಕಿ ಬೆಡ್ ಮೇಲೆ ಕೂರುವಷ್ಟರಲ್ಲಿ ಅಳುವಿನ ಕಟ್ಟೆಯೊಡೆದಿತ್ತು. ಮದುವೆಯ ಮೊದಲ ರಾತ್ರಿಯಷ್ಟೆ ತಾಜತನ ತುಂಬಿದ್ದ ಕೋಣೆ ಅವಳ ಅಣಕಿಸುತ್ತಿತ್ತು, ಆವತ್ತು ಹೀಗೆ ಅಲ್ಲವೇ ಅವಳೊಬ್ಬಳೆ ಕಣ್ಣಿರ ಹನಿಗಳ ಬಿಸಿಯಲ್ಲಿ ನಡುಗುವ ದೇಹವನ್ನು ನಿಯಂತ್ರಿಸಿಕೊಂಡಿದ್ದು.

***

ಅಪ್ಪ ಡಿಗ್ರಿ ಮುಗಿಸಿ ಕಂಪ್ಯೂಟರ ಓದುತ್ತಿದ್ದ ನನಗೆ ಒಂದುದಿನ
“ಇನ್ನೆಷ್ಟು ತಿಂಗಳು ನಿನ್ನ ಕ್ಲಾಸ, ನನಗೂ ಹಾರ್ಟಪ್ರಾಬ್ಲೆಮ್, ನಿನ್ನ ಮದುವೆ ಅಂತ ಆದ್ರೆ ನೆಮ್ಮದಿಯಿಂದ ಕಣ್ಮುಚ್ಚಿಬಿಡ್ತೇನೆ”
‘ಬೇಡಪ್ಪಾ ಒಂದು ವರ್ಷ ಬಿಟ್ಟು ಮದುವೆ ಮಾಡೋದಾದ್ರೆ ನಾನು ರೆಡಿ, ನಾ ಒಂದಾರು ತಿಂಗಳು ಎಲ್ಲಾದ್ರು ಕೆಲಸ ಮಾಡ್ತೀನಿ, ಅಲ್ಲಿವರೆಗೆ ಕಾಯ್ತಿಯಾ?’
‘ಹಾಗೆ ಅನ್ನಬೇಡ, ಒಂದೊಳ್ಳೆ ಸಂಬಂಧ ಬಂದಿದೆ, ಅವರು ನಿನ್ನ ನೋಡಿಯೆ ನಮ್ಮ ಬ್ರೋಕರ್ ಶಿವಣ್ಣ ಹತ್ತಿರ ಕೇಳೋಕೆ ಹೇಳಿದ್ದಾರಂತೆ. ನೀ ಒಪ್ಕೊಂಡ್ರೆ ಮುಂದಿನದು ಸಲೀಸು. ‘

ಆವತ್ತು ಕಂಪ್ಯೂಟರ್ ಕ್ಲಾಸಗೆ ಹೋದರು ಅಪ್ಪನ ಮಾತು ಅವಳನ್ನು ಅನ್ಯಮನಸ್ಕಳನ್ನಾಗಿಸಿತ್ತು. ಮದುವೆ, ಮನೆ ಮಕ್ಕಳು ಹೀಗೆ ಒಂದಿಷ್ಟು ಕನಸು ಅವಳಲ್ಲೂ ಇತ್ತು. ಅಪ್ಪ ಯಾವತ್ತು ನನ್ನ ಇಷ್ಟಕ್ಕೆ ವಿರುದ್ದವಾಡಿದವರಲ್ಲ. ಆದರೂ ಮೊದಲ ಬಾರಿ ಅವರಿಷ್ಟವನ್ನೆ ಒಪ್ಪಿಕೊಳ್ಳಲೇ? ಅಂತ ಗೊಂದಲದಿದ್ದವಳಿಗೆ ಮದುವೆಯಾಗಲು ಒಪ್ಪುವ ಮನಸ್ಸು ಮಾಡಿದ್ದಳು.
“ಆಯ್ತಪ್ಪ ನಿನ್ನಿಷ್ಟ, ನೀನು ಅವರಿಗೆ ತಿಳಿಸು, ಅವರು ನನ್ನ ನೋಡೋಕೆ ಯಾವಾಗ ಬರ್ತಾರೆ ಕೇಳು”.

‘ಇಲ್ಲಮ್ಮ ಅವರು ನೋಡೋ ಶಾಸ್ತ್ರ ಮಾಡಲ್ಲಂತೆ, ನೋಡಿ ಆಗಿದ್ಯಂತೆ. ನೇರವಾಗಿ ನಿಶ್ಚಿತಾರ್ಥ ಇಟ್ಕೊಳ್ಳೋನ ಹುಡಗಿ ಒಪ್ಪಿದ್ರೆ ಅಂದಿದಾರಂತೆ’.
“ಹೌದಾ! ಮತ್ತೆ ವರದಕ್ಷಿಣೆ, ವರೋಪಚಾರ? ಮಾತುಕತೆ ಏನಿಲ್ವಾ? ನಾನು ಅವರ ನೋಡ್ಬೇಕಿತ್ತು” ನಾಚಿಕೆಯಿಂದ ಕಾಲ ಹೆಬ್ಬೆರಳಲ್ಲೆ ರಂಗೋಲಿ ಬಿಡಿಸುತ್ತಿದ್ದಳು.
‘ಕಳ್ಳಿ ! ಗೊತ್ತಾಯ್ತು, ಆಸೆ ನೋಡು. ಮದ್ವೆ ಬೇಡ ಅಂತಿದ್ದೆ. ಈಗಾ ಹುಡಗನ್ನಾ ನೋಡ್ಬೇಕಾ?, ಸರಿ ಸರಿ ನಾನು ಶಿವಣ್ಣಂಗೆ ಈಗ್ಲೇ ಫೋನ್ ಮಾಡ್ತೀನಿ. ನಿಶ್ಚಿತಾರ್ಥ ಇಟ್ಕೊಬೇಕಲ್ವಾ? ನೀನು ನಿನ್ನ ಕ್ಲಾಸ ಮುಗಸ್ಕೊ ಬಾ’

“ಸರಿ ನಾನು ನನ್ನ ಫ್ರೆಂಡ್ಸ್ ಗೆಲ್ಲಾ ಹೇಳಲಾ? ಅವರು ಬಂದ್ರೆ ನಂಗೆ ಮೇಕಪ್, ಡ್ರೆಸ್ ಗೆಲ್ಲಾ ಹೆಲ್ಪ್ ಮಾಡ್ತಾರೆ” ಅಪ್ಪನ ಕಡೆ ನೋಡಿದ್ಲು.
‘ಹುಚ್ಚು ಹುಡುಗಿ ಎಷ್ಟೊಂದು ಆಸೆ ಕಾಣತಿದೆ ನೋಡು ನಿನ್ನ ಕಣ್ಣಲ್ಲಿ, ಮದುವೆ ಅಂದಾಗ್ಲೇ ಮುಖದ ಕಳೆನೆ ಬೇರೆ ಆಗ್ಬಿಟ್ಟಿದೆ’.
“ಹೋಗಿಪ್ಪ, ರೇಗಿಸ್ಬೇಡಿ”ಅಂತ ಹುಸಿ ಮುನಿಸು ತೋರುತ್ತಾ ಹೊರಗೆ ಹೆಜ್ಜೆ ಇಟ್ಟಳು ಸಾಂಡಲ್ ಮೆಟ್ಟಿಕೊಳ್ತಾ.

***

ಮದುವೆ ಆಗೋಯ್ತು, ಹುಡುಗನ ಜೊತೆ ಮಾತು ಕತೆ ಹರಟೆ ಸುತ್ತಾಟ ಇಲ್ಲದೆ. ಅವನನ್ನ ಸರಿಯಾಗಿ ನೋಡೋಕು ಆಗಿಲ್ಲ ಅನ್ನೊ ಅಸಮಾಧಾನ ಬೇರೆ. ಮದುವೆ ಮನೆಯಿಂದ ಅಪ್ಪ ಹೊರಟಿದ್ದ.
“ಅಳಬೇಡ ನೀನು, ಅವರು ಚೆನ್ನಾಗಿ ನೋಡ್ಕೊಳ್ತಾರೆ. ನಾನು ಹೇಳಿದ್ದೀನಿ. ನಾನು ಒಂಟಿ ಅಲ್ಲ, ಅಲ್ಲಿ ನಿನ್ನ ಅಮ್ಮ ನನ್ನ ಜೊತೆ ಕಾಣಲ್ಲ ಅಷ್ಟೆ, ಆದ್ರೆ ಕಾಲು ಸುತ್ತತಾ ಓಡಾಡ್ತಾ ಇರ್ತಾಳೆ. ನೀನೇನು ಯೋಚನೆ ಮಾಡಬೇಡ”.

‘ಅಪ್ಪಾ ಯೋಚನೆ ಏನಿಲ್ಲ, ಅವರನ್ನ ಸರಿ ನೋಡೋಕು ಬಿಟ್ಟಿಲ್ಲ, ಯಾವಾಗ್ಲೂ ಅಪ್ಪ, ಅಮ್ಮನ ನೆರಳಲ್ಲೆ ಇರ್ತಾರೆ, ಮಾತು ಆಡಿದ್ದು ನೋಡಿಲ್ಲ. ನನ್ನ ಜೊತೇನು ಮಾತಾಡದಿದ್ರು ಪರ್ವಾಗಿಲ್ಲ, ನಿಮ್ಮ ಜೊತೆನು ಮಾತಾಡಿದಾಂಗೆ ಇಲ್ಲ ಅಲ್ವಾ?. ”
‘ಹಾಗಲ್ಲಾ ಯೋಚಿಸ್ಬೇಡ, ಅವರು ಸಂಪ್ರದಾಯಸ್ಥರಂತೆ. ಅವರಿನ್ನು ಹಳೆಯ ಕಾಲದಲ್ಲೇ ಇದ್ದಾರೆ, ಮಗನ್ನು ಹಾಗೆ ಬೆಳಸಿದಾರಂತೆ. ಶಿವಣ್ಣ ಹೇಳಿದ್ದ ನನ್ ಹತ್ರ’.
“ಸರಿ, ನೀವು ಆಗಾಗ ಬರ್ತಾ ಇರಿ, ನಾವು ಬರ್ತೀವಿ. ಊಟ, ತಿಂಡಿ ಹೊತ್ತೊತ್ತಿಗೆ ಮಾಡಿ, ಆರೋಗ್ಯದ ಬಗ್ಗೆ ಕಾಳಜಿ ಇರ್ಲಿ”. ಅಂತ ತಬ್ಬಿ ಅಳೋಕೆ ಪ್ರಾರಂಭ ಮಾಡಿದಳು. ಸಮಾಧಾನ ಮಾಡೋಕೆ ಅಪ್ಪ ಎಷ್ಟು ಪ್ರಯತ್ನ ಪಟ್ಟರು ಅವಳು ಅಳತಾ ಇದ್ದಳು, ಅಂತೂ ಹೇಗೋ ಸಮಾಧಾನಿಸಿ ಹೊರಡೊವಲ್ಲಿಗೆ ಸಾಕು ಸಾಕಾಗಿತ್ತು. ಗಾಯತ್ರಿಗೂ ಹೊಸ ಮನೆ, ಜನ ಸುಮ್ಮನೆ ಒಂಟಿಯಾಗಿ ರೂಮು ಸೇರಿದ್ದಳು. ಮನೆಯಲ್ಲಿ ಮದುವೆ ಸಂಭ್ರಮ ಕರಗುತ್ತಿತ್ತು ರಾತ್ರಿಯಾಗುತ್ತಿದ್ದಂತೆ. ಗಾಯತ್ರಿಯೊಳಗೆ ಮೊದಲ ರಾತ್ರಿಯ ಆಸೆ ಅರಳುತ್ತಿತ್ತು. ಮೈಯಲ್ಲಿ ಪುಳಕ. ಅಷ್ಟರಲ್ಲಿ

“ಗಾಯತ್ರಿ ಊಟಕ್ಕೆ ಬಾ”ಅಂತ ದನಿ ಕೇಳಿ ಹೊರಗೆ ಬಂದು ತಲೆ ತಗ್ಗಿಸಿ ಊಟಕ್ಕೆ ಕುಳಿತು ಊಟದ ಶಾಸ್ತ್ರ ಮುಗಿಸಿದ್ದಳು. ಅಷ್ಟರಲ್ಲಾಗಲ್ಲೆ ಉಂಡ ಬಟ್ಟಲ ಲೆಕ್ಕ ಗಂಡನಿಗೆ ಊಟವಾಗಿದ್ದನ್ನು ಹೇಳುತ್ತಿತ್ತು.
ಕೈತೊಳೆದು ಡೈನಿಂಗ್ ಹಾಲಗೆ ಬಂದಾಗ ಅತ್ತೆ
‘ನೊಡಮ್ಮ ನೀನು ಅಳಕೊದು ಸಹಜವೇ, ನಾವೆಲ್ಲ ನಿನ್ನ ಚೆನ್ನಾಗಿ ನೋಡ್ಕೊಳ್ತೇವೆ. ನೀನೆನು ಅಂದ್ಕೊಳ್ಳಬೇಡ. ನಿನಗೇ ಯಾವ ಕೊರತೆ ಆಗಲ್ಲ. ನೀನು ಸ್ವಲ್ಪ ಹೊಂದ್ಕೊಂಡು ಹೋಗು ಆಯ್ತಾ’.
“ಸರಿ”ಅಂತ ತಲೆ ಅಲ್ಲಾಡಿಸಿದ್ದಳು. ಅವಳಲ್ಲಿ ಮೊದಲ ರಾತ್ರಿಯ ಬಗ್ಗೆ ಕಾದಂಬರಿಗಳಲ್ಲಿ ಓದಿದ ಪುಟಗಳೆಲ್ಲ ಮತ್ತೆ ಕಣ್ಮುಂದೆ ಬರುತ್ತಿದ್ದವು, ಕೈ ಆಗಲೇ ನಡುಗಲಾರಂಭಿಸಿತ್ತು.
“ಹಾಲು ತಗೋ, ರಮೇಶಗೂ ಕೊಟ್ಟು ಕುಡಿ, ನಿನಗೂ ಸುಸ್ತಾಗಿರುತ್ತೆ”

ಗಾಯತ್ರಿ ನೋಟ ಅರ್ಥವಾದವಳಂತೆ ಮಾತು ಮುಂದುವರೆಸಿ” ಎಲ್ಲ ಗಣೇಶ ಅಂತ ಕರಿತಾರೆ, ಬಟ್ ನಾವು ಮನೇಲಿ ಚಿಕ್ಕೊನಿದ್ದಾಗಲಿಂದಾನು ರಮೇಶ ಅಂತಾನೆ ಕರೆಯೋದು”.
‘ಹೋ ಹೌದಾ!’ ಅಂತ ಸಮಾಧಾನದ ನಗೆಯೊಂದಿಗೆ ರೂಮಿಗೆ ಹೋಗಿದ್ದಳು.

ರೂಮಿನ ಬಾಗಿಲು ತಳ್ಳಿ ಒಳಗೆ ಕಾಲಿಟ್ಟರೆ, ಅಲ್ಲಿ ಮೊದಲ ಬಾರಿ ಗಂಡನ ನೋಡಿದ್ದಳು. ಅವನು ಸುಮ್ಮನೆ ಕುಳಿತಿದ್ದ, ಹತ್ತಿರ ಹೋಗಿ ಹಾಲಿನ ತಟ್ಟೆ ನೀಡಿ ಪಕ್ಕ ಕುಳಿತಳು. ಆಗಲೂ ಗೋಡೆ ನೋಡುತ್ತಿದ್ದ.
“ರೀ” ಮಾತಾಡ್ರಿ ಅಂತ ನಾಚಿ ತಲೆತಗ್ಗಿಸಿದಳು.
ಆಗಲೂ ಮೌನವೇ ಉತ್ತರ.
‘ಯಾಕ್ರಿ ನಿಮಗೂ ನಾಚಿಕೇನ’.
“ನಾನ್ಯಾಕೇ ನಾಚಿಕೆ ಪಡಬೇಕು? ನೀನು ನನ್ನ ಹೆಂಡತಿನಾ? ನೀನು ಜೊತೆನೆ ಇರ್ತಿಯಂತೆ ಹೌದಾ?” ಚಿಕ್ಕ ಮಗುವಿನಂತೆ ಅಂಗಿಯ ಕಾಲರ್ ಕಚ್ಚುತ್ತ ಮಾತನಾಡುವಾಗ ಆಕಾಶವೇ ಕಳಚಿ ಬಿದ್ದಂಗೆ ಆಗಿತ್ತು. ದಿಂಬು ಹಿಡಿದು ಗಟ್ಟಿಯಾಗಿ ಅಳೋದಕ್ಕೆ ಆರಂಭ ಮಾಡಿದಳು.

***

ಅದೇ ಆವತ್ತಿನದೇ ಹೂವು ಇನ್ನೂ ಬಾಡಿದಂತೆ ಅನಿಸುತ್ತಿಲ್ಲ ಗಾಯತ್ರಿಗೆ, ಏಳು ವರ್ಷಕಳೆದ್ದಿದ್ದಷ್ಟೆ. ಭಾವನೆಗಳ ಜೊತೆ ಯುದ್ದಮಾಡಿದ್ದೆ ಹೆಚ್ಚು.

***

ಮೂರು ವರ್ಷಗಳ ನಂತರ…

ಕಾಲಿಂಗ್ ಬೆಲ್ ಸದ್ದು ಕೇಳಿ ಬಾಗಿಲು ತೆರೆದಳು ಗಾಯತ್ರಿ.
“ಕ್ಷಮಿಸು ಗಾಯತ್ರಿ ” ಅನ್ನೊ ಪರಿಚಿತ ದನಿಗೆ ಮುಖ ನೋಡದೇಯೇ ಗುರುತು ಸಿಕ್ಕಿತ್ತು. ಮಾತು ಬರದ ಮೂಕರಂತೆ ಎದುರುಬದುರಾಗಿದ್ದರು. ಹೇಗೂ ಯಾರ ಬಳಿಯೋ ಕೇಳಿ ಗಾಯತ್ರಿಯ ವಿಚ್ಚೇದಿತ ಹೊಸ ಬದುಕಿನ ವಿಳಾಸ ಕೇಳಿ ಬಂದಿದ್ದ ರಾಘವ.
“ಏನು ಕುಡಿತಿರಾ? ಟೀ, ಕಾಫಿ? ನೀರು ಕೊಡಲಾ ಮೊದಲು?”
‘ಏನು ಬೇಡ ಮಾತಾಡು, ನಾನು ನಿನ್ನ ಮೂರು ವರ್ಷದಿಂದ ಕಳಕೊಂಡು ತುಂಬಾ ಕಷ್ಟಪಟ್ಟಿದಿನಿ. ಅರ್ಥ ಆಗಿದೆ ಕಣೆ ನೀನು ಎಷ್ಟು ಮುಖ್ಯ ಅಂತ’.

“ಹಂ! ಹೋಗ್ಲಿ ಬಿಡಿ, ಏನೇನು ಆಗಬೇಕೊ ಎಲ್ಲ ಆಗೋಗುತ್ತೆ. ಕಾಲದ ಚಕ್ರ ಅಲ್ವಾ? ಉರುಳುತ್ತೆ, ಉರುಳುತ್ತಾನೆ ಇರುತ್ತೆ. ನಾವು ಬಯಸಿದ್ದು ಬಯಸೋದು ಎಲ್ಲ ನಮ್ಮಷ್ಟಕ್ಕೆ ಅಲ್ವಾ?”.
‘ಯಾಕೆ ಹೀಗೆ ಮಾತಾಡ್ತಿದ್ದಿಯಾ? ಏನಾಗಿದೆ ನಿನಗೇ? ಎಷ್ಟೋ ಸಲ ನಿನ್ನ ಭೇಟಿ ಮಾಡಿ ಮಾತಾಡೋಣ ಅಂದ್ರು ಯಾಕೋ ಕನಸು ಒಪ್ಲಿಲ್ಲಾ. ಆವತ್ತು ನಾನು ತಪ್ಪು ಮಾಡಿದೆ ಕಣೆ. ಅದೆ ಅಪರಾಧಿ ಪ್ರಜ್ನೆ ಕಾಡಿತ್ತು. ಹೇಗೋ ಕಷ್ಟಪಟ್ಟು ಹೊರಗೆ ಬಂದಿದ್ದೀನಿ. ಅದಕ್ಕೆ ಇವತ್ತು ಬರೋ ಹಾಗಾಯ್ತು. ಮಾತಾಡು. ‘
“ಮಾತಿಗಿಂತಾನೂ ಮೌನ ನು ಎಷ್ಟೋ ಮಾತಾಡುತ್ತೆ ಅಲ್ವಾ? ಆಡದೇ ಇರೋ ಎಷ್ಟೋ ಮಾತು ಕೇಳ್ಸುತ್ತೆ ಅಂದ್ಕೊಳ್ತೀನಿ. ”

‘ನೋಡು ಒಗಟಾಗಿ ಮಾತಡಬೇಡ, ಇನ್ನೂ ಕೋಪ ಹೋಗಿಲ್ವಾ? ಅವತ್ತಿನ ದಿನ ಅಳಿಸಿಹಾಕು. ಇವತ್ತು ಕೂಡ ನಮ್ಮದೇ ತಾನೇ. ನಾನು ನಿನ್ನ ಆಸೆ ಪೂರೈಸೊ ತಿರ್ಮಾನ ಮಾಡಿ ಬಂದಿದ್ದೀನಿ’.
“ಯಾವ ತೀರ್ಮಾನಾ?ಯಾವ ಆಸೆ? ಬರಡು ಭೂಮಿಲಿ ಏನು ಚಿಗುರೊಲ್ಲ. ಒಂದು ಹುಲ್ಲು ಕಡ್ಡಿ ಚಿಗುರೋಕು ಮಣ್ಣು, ನೀರು ಎಲ್ಲ ಬೇಕು. ಯಾವ್ದೊಂದರಿಂದ ಆಗಲ್ಲ. ಬಿಡಿ, ಏನು ಕುಡಿತೀರಾ?ತಿಂಡಿ ಆಗಿದ್ಯಾ? ಕಾಳಜಿ ಅದೇ, ಒಂದಿಷ್ಟು ವಿಶ್ವಾಸದ ಮಾತು, ಏನೋ ಅಡಗಿಸಿ ಮಾತಾಡ್ತಿರೋದು ಕಾಣತಿತ್ತು, ಆದ್ರೇ ಅದೇ ಗಾಯತ್ರಿ!.
ರಾಘವ ಗೆ ವಿಚಿತ್ರ ಅನಸ್ತಿತ್ತು, ಗಾಯತ್ರಿ ಮೊದಲ ಬಾರಿ ಬಿಡಿಸಲಾರದ ಒಗಟು ಎನಿಸಿದ್ದಳು.

ಗಾಯತ್ರಿಗೆ ಒಳಗೊಳಗೆ ಸಂಕಟ, ಆಸೆ ತೀರುವ ಘಳಿಗೆ ಬಂದರೂ ಅಂತಹ ಅವಕಾಶ ಕಳೆದುಕೊಂಡಾಗಿತ್ತು.
ಅರ್ಥವಾಗದ ಭಾಷೆ, ಮೌನ, ಅರ್ಥವಾಗದ ಭಾವಗಳು ಒಂದೊಂದು ಹನಿ ಕಣ್ಣೀರ ಜೊತೆ.
“ದೀಪ ಹಚ್ಚಬೇಕು ಕುತ್ಕೊಂಡಿರಿ” ಎಂಬ ದನಿ, ಗಾಯತ್ರಿ ಎದುರಿಲ್ಲ.
ಕಾಯ್ತಿದ್ದಾನೆ ರಾಘವ

ಮಂಜು ಹೆಗಡೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x