ಚಿಕ್ಕ ಬಿಲಗುಂಜಿಯ ಕಮಲೇಶ್ವರ ದೇವಸ್ಥಾನ: ಪ್ರಶಸ್ತಿ

prashasti

ಹೋಗೋದು ಹೇಗೆ ? 
ಸಾಗರ ತಾಲ್ಲೂಕಿನ ಸುತ್ತಮುತ್ತಲಿರೋ ಕೆಳದಿ,ಇಕ್ಕೇರಿ,ಕಲಸೆ, ಹೊಸಗುಂದ ಮುಂತಾದ ಇತಿಹಾಸ ಪ್ರಸಿದ್ಧ ತಾಣಗಳ ಬಗ್ಗೆ ಕೇಳಿರುತ್ತೀರಿ. ಆದರೆ ಸಾಗರಕ್ಕೆ ಹತ್ತಿರದಲ್ಲೇ ಹನ್ನೊಂದನೇ ಶತಮಾನದ ದೇವಸ್ಥಾನವೊಂದಿದೆ ಅನ್ನೋದು ಹೆಚ್ಚಿನವರಿಗೆ ತಿಳಿದಿರಲಾರದು. ಅದೇ ಸಾಗರದಿಂದ ಸುಮಾರು ೨೦ ಕಿ.ಮೀ ದೂರದಲ್ಲಿರುವ ಚಿಕ್ಕ ಬಿಲಗುಂಜಿಯ ಕಮಲೇಶ್ವರ ದೇವಸ್ಥಾನ. ಸಾಗರದಿಂದ ಚಿಕ್ಕಬಿಲಗುಂಜಿಗೆ ಹೋಗೋಕೆ ಎರಡು ಮಾರ್ಗಗಳಿವೆ. ಸಾಗರದಿಂದ ಶಿವಮೊಗ್ಗಕ್ಕೆ ಹೋಗೋ ಮಾರ್ಗದಲ್ಲಿ ಸಿಗೋ ತ್ಯಾಗರ್ತಿ ಕ್ರಾಸಿನಲ್ಲಿ ಹೋಗೋದು ಮೊದಲನೇ ಮಾರ್ಗವಾದರೆ ನಂತರ ಸಿಗೋ ಕಾಸ್ಪಾಡಿ ಎಂಬ ಊರಿನ ಬಳಿ ಎಡಕ್ಕೆ ತಿರುಗಿ ಹೋಗೋದು ಎರಡನೇ ಮಾರ್ಗ. ಹೊಸತಾಗಿ ಬರುವವರಿಗೆ ಎರಡನೇ ಮಾರ್ಗ ಸುಲಭದ್ದಾಗಿದೆ. ಸಾಗರದಿಂದ ಶಿವಮೊಗ್ಗಕ್ಕೆ ಹೋಗುವಾಗ ಸಿಗುವ ಉಳ್ಳೂರನ್ನು ದಾಟಿ ಸುಮಾರು ಎರಡು ಕಿ.ಮೀ ಹೋಗೋ ಹೊತ್ತಿಗೆ ಸಿಗುವುದು ಕಾಸ್ಪಾಡಿ ಕೆರೆ ಏರಿ. ಅದನ್ನು ದಾಟುವ ಹೊತ್ತಿಗೆ ಎಡಭಾಗಕ್ಕೆ ಹೋಗೋ ರಸ್ತೆಯೊಂದು ಸಿಗುತ್ತದೆ. "ಹುತ್ತೇದಿಂಬ ದೇವರ ಕಾಡು" ಎಂಬ ಬೊರ್ಡಿರುವ ಆ ರಸ್ತೆಯಲ್ಲಿ ಸುಮಾರು ಏಳು ಕಿ.ಮೀ ಸಾಗೋ ಹೊತ್ತಿಗೆ ಸಿಗೋ ಊರೇ ಚಿಕ್ಕಬಿಲಗುಂಜಿ. ಅಲ್ಲಿಂದ ಮೇಲೆ ಸಾಗೋ ರಸ್ತೆಯಲ್ಲಿ ಸಾಗಿ, ನಂತರ ಸಿಗೋ ಕವಲಿನಲ್ಲಿ ಎಡ ಕವಲನ್ನು ಹಿಡಿದು ಸಾಗಿದರೆ ಸಿಗುವುದೇ ಚಿಕ್ಕಬಿಲಗುಂಜಿ ಕಮಲೇಶ್ವರ ದೇವಸ್ಥಾನ. 

????????????????????????????????????
????????????????????????????????????
????????????????????????????????????
????????????????????????????????????

ದೇವಸ್ಥಾನದ ಇತಿಹಾಸ:
ದೇವಸ್ಥಾನದ ವಾಸ್ತುಶಿಲ್ಪವನ್ನು ಗಮನಿಸಿದರೆ ದೇಗುಲದ ಗರ್ಭಗುಡಿ ಮತ್ತು ಹೊರಭಾಗದ ಕೆತ್ತನೆಗಳಲ್ಲಿ ಭಿನ್ನತೆಯಿರುವುದನ್ನು ಕಾಣಬಹುದು. ಇದರ ಬಗ್ಗೆ ವಿವರಿಸುವ ಇಲ್ಲಿನ ಅರ್ಚಕರು ಗರ್ಭಗುಡಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಮುಂದಿನ ಅಂಕಣವನ್ನು ೧೧ನೇ ಶತಮಾನದಲ್ಲಿ ಕಟ್ಟಿದ್ದೆಂದೂ ಉಳಿದ ಭಾಗಗಳನ್ನು ೧೬ನೇ ಶತಮಾನದಲ್ಲಿ ಕಟ್ಟಿದ್ದೆಂದೂ ಹೇಳುತ್ತಾರೆ. ಆದರೆ ಈ ದೇಗುಲ ಯಾವ ರಾಜರ ಕಾಲದಲ್ಲಿ ಕಟ್ಟಲ್ಪಟ್ಟಿದ್ದು, ಶುರುವಾದ ಮತ್ತು ಮುಗಿದ ಇಸವಿ ಮುಂತಾದ ಕಾಲ ನಿರ್ಣಯಕ್ಕೆ ಸಹಕಾರಿಯಾಗುವಂತಹ ಯಾವ ಶಿಲಾಶಾಸನ, ತಾಮ್ರ ಶಾಸನಗಳೂ ಇಲ್ಲಿನ ಪರಿಸರದಲ್ಲಿ ದೊರಕಿಲ್ಲ. ಇಲ್ಲಿಂದ ಸುಮಾರು ಎರಡು ಕಿ.ಮೀ ದೂರದಲ್ಲಿರುವ ವೀರಭದ್ರ ದೇವಸ್ಥಾನದಲ್ಲಿ ಶಿಲಾಶಾಸನಗಳು ದೊರಕಿದ್ದರೂ ಅದರಲ್ಲಿ ಸಮೀಪದಲ್ಲೇ ಇರುವ ಕಮಲೇಶ್ವರ ದೇಗುಲದ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲದಿರುವುದು ಅಚ್ಚರಿಯ ಸಂಗತಿ ! ಇಲ್ಲಿಗೆ ಆಗಮಿಸಿದ್ದ ವಾಸ್ತುಶಿಲ್ಪ ಸಂಶೋಧನಾ ಇಲಾಖೆಯ ನಿರ್ದೇಶಕರಾಗಿದ್ದ ಡಾ| ಗುರುರಾಜ ಭಟ್ ಅವರು ಇಲ್ಲಿಗೆ ಬಂದಾಗ ಈ ದೇಗುಲದ ವಾಸ್ತುಶಿಲ್ಪ ಮತ್ತು ಅದರಲ್ಲಿನ ರಚನೆಗಳನ್ನು ಗಮನಿಸಿ ಇದರ ಗರ್ಭಗುಡಿಯ ಕಾಲ ೧೧ನೇ ಶತಮಾನದ್ದು, ಹೊರಾಂಗಣದ್ದು ೧೬ನೇ ಶತಮಾನದ ಆಸುಪಾಸಿರಬಹುದೆಂದು ಅಂದಾಜಿಸಿದ್ದಾರೆ. ಇಡೀ ದೇಗುಲವನ್ನು ಒಂದೇ ಸಲ ಕಟ್ಟಿದ್ದಲ್ಲ, ಕಟ್ಟಿದ್ದಾದರೆ ಅದರ ವಾಸ್ತು ಹೀಗೆ ಬರುವುದಿಲ್ಲ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದರು ಎಂದು ಸ್ಥಳೀಯರು ತಿಳಿಸುತ್ತಾರೆ. ದೇಗುಲದ ಮುಖಮಂಟಪ, ನಂದಿ ಮಂಟಪ ಮತ್ತು ಗರ್ಭಗುಡಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವುಗಳ ರಚನೆಯಲ್ಲಿನ ಭಿನ್ನತೆಗಳು ಗೋಚರಿಸುತ್ತವೆ. ನಂದಿಮಂಟಪವನ್ನೇ ತೆಗೆದುಕೊಂಡರೆ ಅದು ದೇಗುಲದ ಗರ್ಭಗುಡಿಗಿಂತ ಎತ್ತರದಲ್ಲಿದೆ ! ಸಾಮಾನ್ಯವಾಗಿ ಗರ್ಭಗುಡಿ ಮತ್ತು ನಂದಿಮಂಟಪ ಒಂದೇ ಎತ್ತರದಲ್ಲಿರುತ್ತವೆ. ಗರ್ಭಗುಡಿಯ ಪ್ರವೇಶದ್ವಾರ ಮತ್ತು ನಂದಿ ಮಂಟಪದೆದುರ ಪ್ರವೇಶದ್ವಾರದ ರಚನೆಯಲ್ಲೂ ವ್ಯತ್ಯಾಸಗಳಿವೆ(ಬಾಗಿಲ ಚೌಕಟ್ಟಿನ ಅಗಲ ಮತ್ತು ರಚನೆಗಳು). ದೇಗುಲದ ಎದುರೇ ಇರುವ ಪುಷ್ಕರಿಣಿ ಮತ್ತು ಅದಕ್ಕೆ ಹೊಂದಿಕೊಂಡಿರುವ ದೇಗುಲದ ಎದುರಿಗಿರೋ ಮತ್ತೊಂದು ಸಣ್ಣ ಕೊಳದ ರಚನೆಗಳೂ ಒಂತರಾ ವಿಚಿತ್ರವೆನಿಸುತ್ತವೆ. 

ನಿಂತಿರೋ ಬಸವ ಮತ್ತು ಸ್ವಯಂಭೂ ಲಿಂಗ: 
ಇಲ್ಲಿನ ದೇಗುಲದ ಪಕ್ಕದಲ್ಲೇ ಇರುವ ಮತ್ತೊಂದು ಚಿಕ್ಕ ಗುಡಿಯಲ್ಲಿ ನಿಂತಿರುವ ಬಸವ ಮತ್ತು ಸ್ವಯಂಭೂ ಲಿಂಗವಿದೆ. ಸಾಮಾನ್ಯವಾಗಿ ಶಿವಾಲಯವೊಂದರಲ್ಲಿ ಇರುವಂತೆ ದೇಗುಲದ ಎದುರು ಭಾಗದಲ್ಲಿರುವ ನಂದಿ ಮಂಟಪ ಇಲ್ಲೂ ಇದೆ. ಆದರೆ ಪಕ್ಕದಲ್ಲೇ ಇನ್ನೊಂದು ನಂದಿ ಅದೂ  ನಿಂತಿರುವ ನಂದಿ ಇಲ್ಲಿರುವ ವಿಶೇಷತೆ. ಇದು ದೇಶದಲ್ಲಿರುವ ಈ ತರದ ೧೩ ನಂದಿಗಳಲ್ಲಿ ಒಂದು ಎನ್ನುತ್ತಾರೆ. ಪಕ್ಕದಲ್ಲೇ ಸುಮಾರು ಐದಡಿ ಎತ್ತರದ ಲಿಂಗವಿದೆ. ಇದಕ್ಕೆ ಸ್ವಯಂಭೂ ಲಿಂಗವೆಂದು ಹೆಸರು. 

ಕಾಶೀ ನೀರಿನ ಕೊಳ: 
ದೇಗುಲದ ಹಿಂಭಾಗದಲ್ಲೇ ಒಂದು ನೀರಿನ ಒರತೆಯಿರುವ ಕೊಳವಿದೆ. ಅದಕ್ಕೆ ನೀರು ಕಾಶಿಯಿಂದ ಬರುತ್ತೆ ಎನ್ನೋದು ಇಲ್ಲಿನ ಜನರ ನಂಬಿಕೆ. ಕಾಶಿಯೆಲ್ಲಿ ಚಿಕ್ಕಬಿಲಗುಂಜಿ ಅಂದಿರಾ ? ಅದಕ್ಕೆ ಇಲ್ಲಿನ ಜನ ಕೊಡುವ ತರ್ಕ ಈ ರೀತಿಯಿದೆ. ಸಾಮಾನ್ಯವಾಗಿ ಬಿಲ್ವ ಪತ್ರೆಯನ್ನು ಯಾವ ನೀರಿಗಾದರೂ ಹಾಕಿದರೆ ಅದು ಆ ನೀರಲ್ಲಿ ಮುಳುಗುತ್ತದೆ. ಆದರೆ ಕಾಶಿಯ ನೀರಿನಲ್ಲಿ ಬಿಲ್ವಪತ್ರೆ ಮುಳುಗುತ್ತದೆಯಂತೆ. ಅದೇ ರೀತಿ ಇಲ್ಲಿಯ ನೀರಲ್ಲೂ ಬಿಲ್ವಪತ್ರೆ ಮುಳುಗುತ್ತದೆಯಾದ್ದರಿಂದ ಇಲ್ಲಿಗೆ ನೀರು ಕಾಶಿಯಿಂದ ಬರುತ್ತದೆ ಎಂಬುದು ಇಲ್ಲಿನವರ ನಂಬುಗೆ. ಇಲ್ಲಿಗೆ ಬರೋ ಜನರು ಭಕ್ತಿಯಿಂದ ಬಿಲ್ಪಪತ್ರೆ , ನಾಣ್ಯಗಳನ್ನು ಎಸೆಯುತ್ತಾರೆ. ಬಿಲ್ವ ಪತ್ರೆ ಎಸೆಯುವುದೇನೋ ಸರಿ. ಆದರೆ ನಾಣ್ಯಗಳು ಕಿಲುಬಿ ಅದರಿಂದ ಇಲ್ಲಿನ ಪರಿಸರ ಹಾಳಾಗೋ  ಸಾಧ್ಯತೆಯಿದೆ. ವರ್ಷಕ್ಕೊಮ್ಮೆ ಈ ಕೊಳವನ್ನು ಸ್ವಚ್ಛಗೊಳಿಸೋ ಸಂದರ್ಭದಲ್ಲಿ ಈ ರೀತಿ ಬಿದ್ದ ನಾಣ್ಯಗಳನ್ನೂ ತೆಗೆದು ಕೊಳವನ್ನು ಚೆಂದವಿಡುವುದಾಗಿ ಇಲ್ಲಿನ ಸ್ಥಳೀಯರು ತಿಳಿಸುತ್ತಾರೆ. ಇಲ್ಲಿನ ನೀರು ಸ್ಪಟಿಕದಂತೆ ಶುಭ್ರವೂ , ಸ್ವಚ್ಛವೂ ಆಗಿದ್ದು ಇಲ್ಲೇ ಮೇಲಿಟ್ಟುರುವ ತಂಬಿಗೆಯಲ್ಲಿ ಮೊಗೆದು ಕುಡಿಯಬಹುದು . 

ಇಲ್ಲಿ ನೋಡಲು ಇನ್ನೇನಿದೆ: 
ದೇಗುಲದ ಒಳಗೆ ನಮ್ಮ ಎಡಗಡೆ ಗಣಪತಿ, ಬಲಗಡೆ ವೀರಭದ್ರ ಮೂರ್ತಿಗಳಿವೆ. ಇಲ್ಲಿನ ಗಣಪತಿಯ ನಂತರ ಸಿಗೋ ಪ್ರವೇಶದ್ವಾರವನ್ನು ಒಮ್ಮೆ ಗಮನಿಸಿದರೆ ಇದರ ವೈಶಿಷ್ಟ್ಯವನ್ನು ಗಮನಿಸಬಹುದು. ಸಾಮಾನ್ಯವಾಗಿ ದ್ವಾರದ ಚೌಕಟ್ಟಿಗೆ ನಾಲ್ಕೂ ಕಡೆಯಿಂದ ಆಧಾರಗಳಿರುತ್ತದೆ. ಆದರೆ ಇದಕ್ಕೆ ಕೆಳಗಿನಿಂದ ಮಾತ್ರ ಕೀಲು ಕೊಟ್ಟು ನಿಲ್ಲಿಸಿರುವುದನ್ನು ಗಮನಿಸಬಹುದು ! ಮೇಲೆ , ಮೂಲೆಗಳಲ್ಲಿ ಅತ್ತಿತ್ತ ವಾಲದಂತೆ ಯಾವುದೇ ಕೊಂಡಿ, ಆಧಾರಗಳಿಲ್ಲ. ಇಲ್ಲಿನ ದೇಗುಲದಲ್ಲಿ ದ್ವಾರಪಾಲಕರಿಲ್ಲ. ಸಾಮಾನ್ಯವಾಗಿ ಶಿವದೇಗುಲವೆಂದರೆ ನಂದೀಶ್ವರ , ಭೃಂಗೀಶ್ವರರನ್ನು ದ್ವಾರಪಾಲಕರನ್ನಾಗಿ ಕಾಣಬಹುದು. ಆದರೆ ಇಲ್ಲಿನ ದೇಗುಲದಲ್ಲಿ ಅಂತಹ ಯಾವ ರಚನೆಗಳೂ ಇಲ್ಲ ! ಇಲ್ಲಿನ ಮೇಲ್ಚಾವಣಿಯಲ್ಲಿ ಅಷ್ಟ ದಿಕ್ಪಾಲಕರಾಗಲಿ, ದೇವರ ಕೆತ್ತನೆಗಳಾಗಲೀ ಇಲ್ಲ. ಇಲ್ಲಿರುವ ಪುಷ್ಪಗುಚ್ಛಗಳಲ್ಲಿ ಒಂದು ಪುಷ್ಪಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಇಲ್ಲಿನ ಕಾರ್ತೀಕದ ಸಮಯದಲ್ಲಿ ಬಂದರೆ ಆ ದೀಪಗಳ ಬೆಳಕಿನಲ್ಲಿ ದೇವರನ್ನು ನೋಡೋದೇ ಒಂದು ಖುಷಿ. 

ಮುಗಿಸೋ ಮುನ್ನ:
ನಿನ್ನೆಯ ಕಾರ್ತೀಕದಲ್ಲಿ ಭಾಗಿಯಾಗಿದ್ದ ಮತ್ತು ಮಾಹಿತಿ  ನೀಡಿದ ರಾಜ ಭಟ್ಟರು ಮತ್ತು ಅವರ ಅಣ್ಣನ ಮನೆಯವರು, ಭವ್ಯಕ್ಕ, ಕಾವ್ಯಕ್ಕ, ವಸಂತಣ್ಣ ಮತ್ತು ನೀಚಡಿ ಗ್ರಾಮಸ್ಥರಿಗೆ ಈ ಮೂಲಕ ವಂದಿಸುತ್ತಾ ಸದ್ಯಕ್ಕೊಂದು ವಿರಾಮ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x