ಚಿಕ್ಕಮಗಳೂರ ಟ್ರಿಪ್ಪು: ಪ್ರಶಸ್ತಿ ಪಿ.

ಮುಳ್ಳಯ್ಯನ ಗಿರಿಗೆ ಹೋಗ್ಬೇಕನ್ನೋದು ಬಹುದಿನದ ಕನಸು. ಆದ್ರೆ ಬೆಂಗ್ಳೂರಿಂದ ೨೫೦ ಚಿಲ್ರೆ ಕಿಲೋಮೀಟ್ರು ಅನ್ನೋ ಕಾರಣಕ್ಕೆ ಮತ್ತೆ ಒಂದಿನ ಅದೊಂದಕ್ಕೇ ಹೋಗ್ಬರೋಕಾಗಲ್ಲ. ಎರಡು ದಿನಕ್ಕೆ ಬೆಂಗ್ಳೂರಿಂದ ಗಾಡಿ ಮಾಡಿಸ್ಕೊಂಡೋದ್ರೆ ಬರೀ ಹೋಗ್ಬರೋ ಚಾರ್ಜೇ ಜಾಸ್ತಿ ಆಗತ್ತೆ, ಎರಡು ದಿನಕ್ಕೆ ಯಾರು ಬರ್ತಾರೋ, ಯಾರು ಬರೋಲ್ವೋ ಅನ್ನೋ ಹಲವು ಸಂದೇಹಗಳಲ್ಲೇ ಕನಸು ಮುರಿದುಬೀಳ್ತಿತ್ತು. ಕೊನೆಗೂ ಹರಿ ಹರಿ ಅಂತ ಸಡನ್ನಾಗಿ ಶುಕ್ರವಾರ ಸಂಜೆ ಪ್ಲಾನು ಪಕ್ಕಾ ಆಗಿ ಶುಕ್ರವಾರ ರಾತ್ರೆ ಒಂದೂಮುಕ್ಕಾಲಿಗೆ ಮುಳ್ಳಯ್ಯನಗಿರಿಗೆ ಹೊರಟೇಬಿಟ್ವಿ. ಚಿಕ್ಕಮಗಳೂರು ಅಂದ್ರೆ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಬಾಬಾ ಬುಡನ್ ಗಿರಿ, ಮಾಣಿಕ್ಯ ಧಾರಾ ಫಾಲ್ಸು, ಹೆಬ್ಬೆ ಫಾಲ್ಸು, ಕೆಮ್ಮಣ್ಣಗುಂಡಿ, z ಪಾಯಿಂಟು, ಕಲ್ಲತ್ತಗಿರಿ, ದೇವಿರಮ್ಮನ ಬೆಟ್ಟ, ಸಮೀರ್ ಅಹ್ಮದ್ ಫಾಲ್ಸು, ಹಿಂಗೆ ಸುಮಾರಷ್ಟು ಜಾಗಗಳಿವೆ .  ಸೀತಾಳಯ್ಯನಗಿರಿಯಿಂದ ಶುರು ಮಾಡಿ ಮತ್ತೆ ನೀಟಾಗಿ ಪ್ಲಾನ್ ಮಾಡಿ ಅಂತ ಚಿಕ್ಕಮಗಳೂರಿನ ಚಿಕ್ಕ ಗೆಳತಿ ಹೇಳಿದ್ಲು ಮುಂಚೇನೆ. ಹಂಗಾಗಿ ನಿದ್ರೆಗಣ್ಣಲ್ಲಿದ್ದ ಡ್ರೈವರಿಗೆ ಮಧ್ಯ ಮಧ್ಯ ಅರ್ಧ ಘಂಟೆ ಮಲಗೋಕಂತ ಬ್ರೇಕ್ ಕೊಡುತ್ತಾ, ಸೂರ್ಯೋದಯ, ಮಂಜಿನ ಫೋಟೋ ಶೂಟ್ ಮಾಡುತ್ತಾ ಮುಳ್ಳಯ್ಯನಗಿರಿಗೆ ಹಾಗೇ ಯಾಕೆ ಹೆಸರು ಅಂತ ತಿಳಿಯೋ ಕುತೂಹಲದಿಂದ ಏಳೂವರೆ, ಎಂಟರ ಹೊತ್ತಿಗೆ ಚಿಕ್ಕಮಗಳೂರಿಗೆ ತಲುಪಿದ್ವಿ. 

ಇವೆಲ್ಲಾ ಸ್ಥಳಗಳು ದೂರದ ಲೆಕ್ಕದಲ್ಲಿ ಹೇಳೋದಾದ್ರೆ ಹತ್ರದಲ್ಲೇ ಇದೆ. ಆದ್ರೆ ಒಂದ್ಕಡೆಯಿಂದ ಮತ್ತೊಂದು ಕಡೆಗೆ ಟ್ರೆಕ್ಕಿಂಗ್ ಹೋಗ್ತೀವಿ ಅಂದ್ರೆ ಸ್ವಲ್ಪ ಸಮಯ ಬೇಕಷ್ಟೇ. ಕಾರಲ್ಲೇ ಎಲ್ಲಾ ತಿರುಗ್ತೀವಿ ಅಂದ್ರೆ ಒಂದೇ ದಿನಗಲ್ಲಿ ಐದಾರು ಸ್ಥಳಗಳ ಮುಗ್ಸಿಬಿಡಬಹುದಷ್ಟು ಹತ್ರ ಇವು !. ಆದ್ರೆ ಈ ಮಲೆನಾಡ ಬೆಟ್ಟಗಳ ಚಾರಣವೇ ಒಂದು ಸುಖ. ಮೊದಲು ಚಿಕ್ಕಮಗಳೂರಿನ ಸೌಂದರ್ಯ ರೆಸಿಡೆನ್ಸಿಯೆಂಬೋ ಉಪಹಾರ ಗೃಹದಲ್ಲಿ ತಿಂಡಿ ತಿಂದು ಸೀತಾಳಯ್ಯನಗಿರಿಯತ್ತ ಹೊರಟೆವು. ಚಿಕ್ಕಮಗಳೂರಿಂದ ಬರ್ತಾ ಒಂದು ಕಡೆ ಬಲಕ್ಕೆ ತಿರುಗಿದರೆ ಕಲ್ಲತ್ತಗಿರಿ ಹತ್ತು ಕಿ.ಮೀ ಎಡಕ್ಕೆ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ ಅನ್ನೋ ಬೋರ್ಡ್ ಸಿಗತ್ತೆ. ಆ ರಸ್ತೆಯಲ್ಲಿ ಎಡಕ್ಕೆ ತಿರುಗಿ ಹತ್ತು ರೂಗಳ ಟೋಲ್ ಕಟ್ಟಿ ಒಂದು ಕಾಲು ಘಂಟೆ ಹೋಗೋದ್ರಲ್ಲಿ ಮತ್ತೊಂದು ಕವಲು ದಾರಿ. ಅದರಲ್ಲಿ ಬಲಕ್ಕೆ ಹೋದ್ರೆ ಸೀತಾಳಯ್ಯನಗಿರಿ.  ಬಲಗಡೆ ಸೀದಾ ರಸ್ತೆಯಲ್ಲಿ ಹೋಗೋ ಬದ್ಲು ಸ್ವಲ್ಪ ಮುಂದೆ ಹೋದ್ರೆ ಮೇಲೆ ಸಾಗೋ ಮೆಟ್ಟಿಲುಗಳು ಸಿಗುತ್ತೆ. ಅದರಲ್ಲಿ ಹೋದ್ರೆ ಸೀದಾ ಒಂದು ಕಿ.ಮೀ ಮೇಲಿರೋ ಸೀತಾಳಯ್ಯನಗಿರಿಯ ದೇಗುಲದ ಬಾಗಿಲಿಗೆ ಹೋಗಬಹುದು. ಇಲ್ಲಾಂದ್ರೆ ರಸ್ತೆಯಲ್ಲಿ ಸಾಗೂ ಸೀತಾಳಯ್ಯನಗಿರಿಯ ದೇವಸ್ತಾನಕ್ಕೆ ತೆರಳಬಹುದು. ಅಲ್ಲೊಂದು ಮಲ್ಲಿಕಾರ್ಜುನ ದೇವಸ್ಥಾನ. ಅಲ್ಲೊಮ್ಮೆ ಅಡ್ಡಬಿದ್ದ ನಾವು ಪ್ರಯಾಣ ಶುಭಾಕರವಾಗಲೆಂದು ಬೇಡಿ ಮುಂದೆ ಹತ್ತೋಕೆ ಶುರು ಮಾಡಿದ್ವಿ. ಅಲ್ಲಿಂದ ಮುಳ್ಳಯ್ಯನಗಿರಿಗೆ ಎರಡು ಕಿ.ಮೀ. ಅನ್ನೋ ಬೋರ್ಡು. ಅಲ್ಲೇ ಎದುರಿನ ಬೆಟ್ಟ ಏರಿ ಮುಳ್ಳಯ್ಯನ ಗಿರಿಗೆ ಹೋಗ್ಬಹುದು. ಇಲ್ಲಾ ಗಾಡಿಯಲ್ಲಿ . ಕಾಲುದಾರಿ ಚೆನ್ನಾಗೇ ಇರೋದ್ರಿಂದ, ನಮ್ಮ ಜೊತೆ ಜೊತೆ ಇನ್ನೊಂದು ಕಾಲೇಜಿನ ದೊಡ್ಡ ಗುಂಪೂ ಬಂದಿದ್ರಿಂದ ಅಲ್ಲಿಂದ್ಲೇ ಚಾರಣಕ್ಕೆ ಶುರು ಹಚ್ಚಿದ್ವಿ. 

ನಾನು, ರೋಭ, ಇಬ್ರು ಹರಿ, ವಿನಾಯಕ, ಗುಂಡ, ಆದಿತ್ಯಣ್ಣ. ಹೀಗೆ ಏಳು ಜನರ ಗುಂಪು ಮಾತಾಡ್ತಾ, ಕಾಲೆಳಿತಾ ಹತ್ತೋಕೆ ಶುರು ಮಾಡಿದಾಗ ಮೊದಲ ಬೆಟ್ಟದ ತುದಿ ಬಂತು. ಮೊದ ಮೊದಲು ಉಮೇದಿನಿಂದ ಹತ್ತುತ್ತಿದ್ದ ಕಾಲೇಜು ಹುಡುಗ್ರು ಯಾಕೋ ಮುಂದೆ ಬರೋ ತರ ಕಾಣ್ತಿರಲಿಲ್ಲ. ನಿಧಾನಕ್ಕೆ ಬರಲಿ ಅವ್ರು ಅಂತ ನಾವು ಆ ಬೆಟ್ಟ ಇಳ್ಯಕ್ಕೆ ಮುಂದಾದ್ವಿ. ಅದನ್ನು ಇಳೀತಿದ್ದಂಗೆ ಮತ್ತೊಂದು ಬೆಟ್ಟ. ಎದುರಿಗೆಲ್ಲಾ ಬೆಟ್ಟಗಳ ಸಾಲು. ಕಾಲುದಾರಿಯ ನೋಡಿ, ಅಲ್ಲಲ್ಲಿ ಬಿದ್ದಿದ್ದ ಗುಟ್ಕಾ ಪ್ಯಾಕೇಟ್, ಕೆಲವೆಡೆ ಇದ್ದ ಹೆಜ್ಜೆ ಗುರುತು, ನಾವು ಹೋಗಬೇಕಾದ ದಿಕ್ಕಿನ ಗುರುತಿನ ಮೇಲೆ ಮುಂದೆ ಮುಳ್ಳಯ್ಯನಗಿರಿಯತ್ತ ಸಾಗಿದ್ವಿ. ಹೀಗೆ ಎರಡು ಬೆಟ್ಟ ಹತ್ತಿಳಿದ ಮೇಲೆ ಮತ್ತೆ ಸೀತಾಳಯ್ಯನಗಿರಿಯಿಂದ ಹೊರಟಿದ್ದ ಟಾರು ರೋಡು ಸಿಕ್ಕಿತು. ಹಿಂದೆ ತಿರುಗಿ ನೋಡಿದ್ರೆ ಬೆಟ್ಟ ಹತ್ತಿ ಬರೋರ್ಗಿಂತ ಕಾರಲ್ಲಿ, ರೋಡಲ್ಲಿ ಬರೋರೇ ಜಾಸ್ತಿ ಇರೋ ತರ ಕಾಣ್ತಿತ್ತು! ಲೋಕೇ ಭಿನ್ನರುಚಿಃ ಬಿಡಿ!. ಟಾರ್ ರಸ್ತೆಯೂ ಒಂದೆಡೆ ಕೊನೆಯಾಗುತ್ತೆ. ಮುಳ್ಳಯ್ಯನಗಿರಿಯ ತಪ್ಪಲಲ್ಲಿ ಒಂದಿಷ್ಟು ಮೆಟ್ಟಿಲುಗಳು ಶುರುವಾಗತ್ತೆ. ಅದನ್ನ ಏರೇ ಸಾಗ್ಬೇಕು. ಆ ಮೆಟ್ಟಿಲುಗಳ ಪ್ರಾರಂಭಕ್ಕೊಂದು ಸ್ವಾಗತ ಕಮಾನು. ಅಲ್ಲಿಂದ "ಸರ್ಪದಾರಿ" ಅಂತ ಕರೀತಾರಂತೆ. ದೂರದಿಂದ ನೋಡಿದವರಿಗೆ ಮೂರು ತಿರುವುಗಳಾಗಿ ಹಾವು ಅಡ್ಡಡ್ಡ ಬಿದ್ದಂತೆ ಕಾಣೋದ್ರಿಂದ ಅದಕ್ಕೆ ಆ ಹೆಸರಿರಬಹುದು. ಆ ಮೆಟ್ಟಿಲುಗಳ ಹತ್ತಿದ್ರೆ ಶ್ರೀಗುರು ಮುಳ್ಳಪ್ಪಸ್ವಾಮಿಗಳ ಗದ್ದುಗೆ ಸಿಗುತ್ತೆ. ಅವರಿಂದಲೇ ಕರ್ನಾಟಕದ ಅತೀ ಎತ್ತರದ ಬೆಟ್ಟಕ್ಕೆ ಆ ಹೆಸರು. ಆ ದೇಗುಲದ ಪ್ರಶಾಂತ ವಾತಾವರಣದಲ್ಲಿ, ತಣ್ಣನೆಯ ಜಗುಲಿಯಲ್ಲಿ ಕೂತರೆ ಅಬ್ಭಾ.. ನಡೆದ ನೋವೆಲ್ಲಾ ಮಾಯ. ಅಲ್ಲೇ ಒಂದರ್ಧ ಘಂಟೆ ಕೂತುಬಿಡೋಣ್ವೇ, ಏಳೊದೇ ಬೇಡ್ವೆ ಅನಿಸಿಬಿಡುವಷ್ಟು ಮುದಕೊಡೋ ವಾತಾವರಣ ಅದು.

ಅಲ್ಲಿಂದ ಹೊರಬಂದು ಮತ್ತೊಂದಿಷ್ಟು ಫೋಟೋ ಶೂಟು. ಅಲ್ಲಿಂದ ಮಾಣಿಕ್ಯಧಾರಾ ಫಾಲ್ಸಿಗೆ ನಡೆದುಹೋಗಬಹುದಂತೆ. ಗದ್ದುಗೆಯಿಂದ ಸೀದಾ ಎದುರಿಗೆ ಕಾಣೋ ಟೀವಿ ಟವರೇ ದಿಕ್ಕು. ಗದ್ದುಗೆಯ ಹಿಂಬದಿಯಿಂದ ಶುರುವಾಗೋ ಕಾಲುಹಾದಿಯೇ ದಾರಿ. ಇಲ್ಲಿ ಮಾತ್ರ ದಾರಿ ತಪ್ಪದಂತೆ  ಸ್ವಸ್ವಲ್ಪ ದೂರಕ್ಕೆ ಪೇಂಟಿನ ಸರಿ ಗುರುತುಗಳನ್ನು , ಹಾದಿ  ಕವಲೊಡೆಯುವ ಕಡೆ ಸರಿಯಾದ ಕಡೆ ಸರಿ ಗುರುತನ್ನ, ತಪ್ಪು ದಾರಿಗೆ ಇಂಟು ಗುರುತನ್ನು ಹಾಕಿದ್ದಾರೆ. ಹಾಕಾಗಿ ದಾರಿ ತಪ್ಪೋ ಅಪಾಯ ಕಮ್ಮಿಯೇ. ಇಲ್ಲಿಯ ಬೆಟ್ಟಗುಡ್ಡಗಳನ್ನು ಹತ್ತಿಳಿಯುತ್ತಾ ಪ್ರಕೃತಿಯ , ಮೋಡಗಳ ಬಗೆ ಬಗೆಯ ಚಿತ್ತಾರ ಕಾಣುತ್ತಾ , ಅಪರೂಪದ ಹೂಗಳ ಚಿತ್ರ ತೆಗೆಯುತ್ತಾ ಸಾಗೋದೇ ಒಂದು ಆನಂದ. ಹೀಗೇ ನಡೆ ನಡೆದು ಕವಿಕಲ್ ಗುಂಡಿ ಎಂಬೋ ಸ್ಥಳದ ಅರಣ್ಯ ಇಲಾಖಾ ಚೆಕ್ ಪೋಸ್ಟಿನವರೆಗೆ ಸಾಗಬಹುದು. ಕವಿಕಲ್ಗುಂಡಿಯ ಮೇಲೊಂದು ವಿವೇಕಾನಂದರ ಆಳೇತ್ತರದ ಚಿತ್ರ ಇದೆ. ಸಂಜೆಯ ಹೊತ್ತಿಗಾದರೆ ಅದೊಂದು ಸೂರ್ಯಾಸ್ತದ ಸ್ಪಾಟು. ಅಲ್ಲೇ ಕೆಳಗಿಳಿದ್ರೆ ಚೆಕ್ ಪೋಸ್ಟು ಮತ್ತೊಂದು ಚಿಕ್ಕ ಆಂಜನೇಯನ ಗುಡಿ. ಮುಳ್ಳಯ್ಯನಗಿರಿಯಿಂದ ಸುಮಾರು ಆರೇಳು ಕಿಲೋಮೀಟರ್ ಆಗ್ಬಹುದು ಕವಿಕಲ್ ಗುಂಡಿ. ಅಲ್ಲಿಂದ ಕಾಲ್ನಡಿಗೆಯಲ್ಲೇ ಒಳದಾರಿಯಲ್ಲಿ ಸಾಗಿದ್ರೆ ಮಾಣಿಕ್ಯಧಾರಾ ಫಾಲ್ಸಿಗೆ ಮೂರೇ ಕಿಲೋಮೀಟರ್. ಆದ್ರೆ ಮುಳ್ಳಯ್ಯನಗಿರಿಯ ಬಿಸಿನಲ್ಲಿ, ಚಾರಣದ ಸುಸ್ತಲ್ಲಿ ಮುಂದೆ ನಡೆಯೋ ಮನಸ್ಸು ಕಮ್ಮಿಯಾಗತೊಡಗಿತ್ತು. ಕವಿಕಲ್ ಗುಂಡಿಯ ಚೆಕ್ ಪೋಸ್ಟ್ ಹತ್ತಿರ ಮತ್ತೆ ಮುಳ್ಳಯ್ಯನಗಿರಿಯಿಂದ ಬಂದ ದಾರಿಯೇ ಸೇರುತ್ತೆ. ಅಲ್ಲಿಂದ ಬಂದು ಕಾಯುತ್ತಿದ್ದ ನಮ್ಮದೇ ಟವೇರಾದಲ್ಲಿ ಮಾಣಿಕ್ಯಧಾರಾ ಕಡೆಗೆ ಸಾಗಿದೆವು. ಗಾಡಿಯಲ್ಲಾದ್ರೆ ಸುತ್ತೀ ಬಳಸಿ ಸಾಗೋ ಆ ದಾರಿಗೆ ೧೨ ಕಿ.ಮೀ !.

ಮಾಣಿಕ್ಯಧಾರಾಕ್ಕೆ ಸಾಗೋ ಹೊತ್ತಿಗೇ ಮಧ್ಯಾಹ್ನವಾಗಿತ್ತು. ಮಧ್ಯ ಅದೆಂತದೋ  ಗುಂಡಿ  ಅನ್ನೋ ಊರು. ಅಲ್ಲೊಂದು ರಸ್ತೆ ಬದಿಯಲ್ಲೇ ಧುಮಿಕುತ್ತಿದ್ದ ನೀರ ಧಾರೆ. ಅದನ್ನೇ ಫಾಲ್ಸು ಅನ್ನೋ ತರ ಭಾವಿಸಿ ಧುಮುಕೋ ಜನಗಳು !. ಬಹುಷಃ ಅವರಿನ್ನೂ ಕಲ್ಲತ್ತಗಿರಿ, ಶಾಂತಿ ಫಾಲ್ಸನ್ನು ಹೊಕ್ಕಿರಲಿಲ್ಲ ಅನ್ಸುತ್ತೆ. ಆದ್ರೂ ಬೆಳಗಿಂದ ನಡೆದ ಬಿಸಿಲಿಗೆ(ಬಿಸಿಲದಿನಗಳಲ್ಲಿ ಚಾರಣ ಮಾಡೋರಿಗೆ) ಇದೊಂತರ ರಿಲೀಫೇ. ಆ ಗುಂಡಿ ಊರಲ್ಲೊಂದು ವೆಜ್ ಕ್ಯಾಂಟೀನ ಹುಡುಕಿ ಹೊಟ್ಟೆ ತುಂಬಿಸಿ ಮಾಣಿಕ್ಯಧಾರಾಕ್ಕೆ ಹೊರಟೆವು. ಮಾಣಿಕ್ಯಧಾರಾ ತಲುಪೋ ಹೊತ್ತಿಗೆ ಮೂರು ಮೂರೂವರೆ. ಅಲ್ಲಿನ ಎಂಟ್ರಿ ಫೀ ಒಂದು ರೂ !!! . ಒಂದು ರೂಗೂ ಬೆಲೆ ಇದೆ ಪರ್ವಾಗಿಲ್ಲ ಅಂತ ಖುಷಿ ಪಟ್ಟು ಕೆಳಗಿಳಿದವರಿಗೆ ನಿರಾಸೆ . ಫಾಲ್ಸೆಂದರೆ ಭೋರ್ಗರೆಯೋ ಒಳ್ಳೆಯ ನೀರಿರಬಹುದೆಂಬ ನಿರೀಕ್ಷೆಯಲ್ಲಿದ್ದೋರಿಗೆ ದೂರದಿಂದ ಸಣ್ಣಗೆ ಬೀಳ್ತಿದ್ದ ನೀರ ಕಂಡು ನಿರಾಸೆ. ಸಿಕ್ಕಾಪಟ್ಟೆ ಜನ ಬೇರೆ. ಮುಂಚೆ ಅಲ್ಲಿ ಸ್ನಾನ ಮಾಡಿದ ಬಟ್ಟೆಗಳನ್ನು ಕಂಡಲ್ಲಿ ಬಿಸಾಡೋ ಮೂಡನಂಬಿಕೆಗಳಿದ್ದವಂತೆ. ಅದೇ ಕಾರಣಕ್ಕೆ ಮೂಡನಂಬಿಕೆಗಳ ಪ್ರೋತ್ಸಾಹಿಸಬೇಡಿ, ಕೆಳಗಿರೋ ಬೆಂಕಿಗೇ ಬಟ್ಟೆ ಬಿಸಾಕಿ ಅಂತ ಬೋರ್ಡು ಹಾಕುವಂತಾಗಿದೆ ಅಲ್ಲಿ. ಅಂತೂ ಜನ ಸ್ವಲ್ಪ ಖಾಲಿಯಾದರೂ ನೀರಿಗಿಳಿಯೋ ಮೂಡಿರಲಿಲ್ಲ. ಚಿಕ್ಕಮಗಳೂರ ಚಳಿ ಶುರುವಾಗಿತ್ತು. ಬೆಳಗ್ಗೆ ಸೀತಾಳಯ್ಯನಗಿರಿ ಹತ್ರ ಮೈ ನಡುಗಿಸಿದ ಚಳಿ ಬಿಟ್ರೆ ಆಮೇಲೇ ಬರೀ ಗಾಳಿಯೇ ಹೊರತು ಚಳಿ ಕಂಡಿರಲಿಲ್ಲ. ಅಂತೂ ಧೈರ್ಯ ಮಾಡಿ ನೀರಿಗೆ ಕಾಲಿಟ್ಟರೆ .. ಯಪ್ಪಾ ಐಸ ಮೇಲೆ ಕಾಲಿಟ್ಟಂತೆ ! ಮುನ್ನಾರ ಚಳಿಯಲ್ಲಿ ಮೈಕೊರೆಯೋ ಚಳಿಯಲ್ಲಿ ನೀರಿಗಿಳಿದಿದ್ದು ಬಿಟ್ರೆ ಈ ಪಾಟೀ ಐಸ್ ಕೋಲ್ಡ್ ನೀರ ಕಂಡಿದ್ದು ಇಲ್ಲೇ. ಕಾಲೆಲ್ಲಾ ನಡುಗುತ್ತಿದ್ರೆ ತಡೆಯೋಕಾಗ್ಲಿಲ್ಲ. ಸೀದಾ ನೀರಿಗೆ ತಲೆಯೊಡ್ಡಿದ್ದೇ. ದಪ ದಪ ಮೈಮೇಲೇ ನೀರು ಬೀಳೋಕೆ ಶುರುಆದಾಗ ಸಣ್ಣ ಹನಿಗಳಂತೆ ಕಾಣ್ತಿದ್ದ ನೀರ ಧಾರೆಯಲ್ಲಿ ಎಷ್ಟೊಂದು ರಭಸ ಇದೆ ಅನ್ನೋದು ಗೊತ್ತಾಗೋದು. ನೀರೆಂದ್ರೆ ತಲೆ, ಮೈಯೊಡ್ಡಬಹುದಷ್ಟೇ ಇಲ್ಲಿ .ಉಳಿದ ಫಾಲ್ಸಗಳಲ್ಲಿದ್ದಂತೆ ಆಡೋಕಾಗದಿದ್ದರೂ ಅತಿಶೀತ ನೀರಿನದೇ ಒಂತರಾ ಮಜ. ಬೆಳಗ್ಗಿನಿಂದ ನಡೆದ ಕಾಲು ನೋವೆಲ್ಲಾ ಮಾಯ.

ನೀರ ಮೇಲೆ ಬಂದ್ರೆ ಅಲ್ಲೊಂದಿಷ್ಟು ಊಟ ತಿಂಡಿಗಳ, ಗಿಡಮೂಲಿಕೆಗಳ ಅಂಗಡಿಗಳು. ಪ್ಯೂರ್ ವೆಜ್ಜನ್ನುವವರಿಗೆ ಇಲ್ಲೇನೂ ದಕ್ಕೋದು ಕಷ್ಟವೇ. ಸೂರ್ಯಾಸ್ತ ವೀಕ್ಷಣೆಗೂ ಇದೊಂದು ಪ್ರಶಸ್ತ ಸ್ಥಳ. ಅಲ್ಲಿಂದ ಕೆಳಗಿಳಿದು ಹಿಂದೆ ಸಾಗಿದ್ರೆ ಮತ್ತೊಂದಿಷ್ಟು ಸೂರ್ಯಾಸ್ತ ವೀಕ್ಷಣೆ ಸ್ಥಳಗಳು, ವಾಸದ ಕಾಟೇಜುಗಳು. ಹಾಗೇ ಕೆಳಗಿಳಿದು ಸಾಗಿದ್ರೆ ದತ್ತಪೀಠ, ಬಾಬಾಬುಡನ್ಗಿರಿ ಗುಹೆ ಸಿಗುತ್ತೆ. ಸಿಕ್ಕಾಪಟ್ಟೆ ಬಂದೋಬಸ್ತಿರೋ ಈ ಗುಹೆಯೊಳಗೆ ಫೋಟೋಗ್ರಫಿ, ವೀಡಿಯೋಗ್ರಫಿಗೆ ನಿಷೇಧ. ದತ್ತಪೀಠ, ಸಮಾಧಿಗಳು ಹೇಗಿವೆ, ಒಳಗೇನಿದೆ ಅಂತ ಬರೆಯೋಕಿಂತ ಅಲ್ಲಿ ಹೋಗಿ ನೋಡಿ ಬರುವುದೇ ಒಳ್ಳೇದು ಅನಿಸತ್ತೆ. 

ಕೆಮ್ಮಣ್ಣಗುಂಡಿಯಲ್ಲಿದ್ದ ವಸತಿಗೃಹಗಳ ನವೀಕರಣ ನಡೆಯುತ್ತಿದ್ದು ಕರೆಂಟೂ ಇಲ್ಲವೆಂಬ ಮಾಹಿತಿ ಇತ್ತು. ಇಲ್ಲವೆಂದರೆ ಒಂದು ರಾತ್ರೆ ಉಳಿಯೋಕೆ ಅದರಂತ ಪ್ರಶಸ್ಥ ಸ್ಥಳ ಚಿಕ್ಕಮಗಳೂರಲ್ಲಿ ಸಿಗಲಾರದೇನೋ. ಕೆಮ್ಮಣ್ಣಗುಂಡಿಯ ಆಯ್ಕೆ ಇಲ್ಲವಾದ್ದರಿಂದ ಚಿಕ್ಕಮಗಳೂರ ಸೌಂದರ್ಯ ರೆಸಿಡೆನ್ಸಿಯಲ್ಲೇ ರಾತ್ರೆ ಕಳೆಯೋ ಭಾಗ್ಯ. ಸ್ವಲ್ಪ ಪೇಟೆ ಸುತ್ತಿದ್ರೂ ಯಾಕೋ ನಿದ್ರೆ ಕಣ್ಣೆಳೆಯುತ್ತಿದ್ದರಿಂದ ಬೇಗ ಹಾಸಿಗೆಗೆ ಮರಳಿದ್ವಿ. ಬೆಂಗಳೂರಿನಿಂದ ಬಂದ ನಮಗೆ ಇಲ್ಲಿ ಒಂಭತ್ತು ಒಂಭತ್ತೂವರೆ ಮೇಲೆ ಊಟ ಸಿಗೋಲ್ಲ. ಬೆಂಗಳೂರಂತೆ ಮಧ್ಯರಾತ್ರಿವರೆಗೆ ಅಂಗಡಿಗಳು ತೆಗೆದಿರಲ್ಲ. ಹುಷಾರು ಎಂಬ ಎಚ್ಚರಿಕೆಯೂ ಸಿಕ್ಕಿತ್ತು !! ಆದ್ರೆ ಏಳು ಘಂಟೆ ಹೊತ್ತಿಗೇ ಅಂಗಡಿಗಳು ಬಾಗಿಲು ಹಾಕೋ ಕೊಡಗು, ಏಳೂವರೆ, ಎಂಟಕ್ಕೆ ರಾತ್ರಿ ಊಟ ಮುಗಿಸಿ ಮಲಗಬೇಕಾದ ಅನಿವಾರ್ಯತೆಯ ನಮ್ಮುರ ಬದಿಯ ಕರೆಂಟಿಲ್ಲದ ಹಳ್ಳಿಗಳ ನೊಡಿದವರಿಗೆ ಈ ಒಂಭತ್ತೂವರೆ ಅನೋದು ತೀರಾ ವಿಶೇಷವೆನಿಸಲಿಲ್ಲ. 

ಮಾರನೇ ದಿನ ಹೊರಟಿದ್ದು ಕೆಮ್ಮಣ್ಣಗುಂಡಿಗೆ. ಕೆಮ್ಮಣ್ಣಗುಂಡಿಗೆ ಹೋಗೋಕೆ ಮತ್ತೆ ಎರಡು ದಾರಿ. ಹಿಂದಿನ ದಿನ ಬಂದ ದಾರಿಯಲ್ಲೇ ಸಾಗಿ "ಘಾಟಿ ರಸ್ತೆ" ಅನ್ನೋ ರಸ್ತೆಯಲ್ಲಿ ಸಾಗಿದ್ರೆ ೧೩ ಕಿ.ಮೀ. ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದ್ರೂ ಈ ಘಾಟಿ ರಸ್ತೆಯಲ್ಲಿ ದಕ್ಕೋ ಪ್ರಕೃತಿ ಸೌಂದರ್ಯಕ್ಕೆ ಅದೇ ಸಾಟಿ. ಕೈ ಮರ ಅಂತ ಇರೋ ಮತ್ತೊಂದು ಚೆನ್ನಾಗಿರೋ ರಸ್ತೆಯಲ್ಲೂ ಬರಬಹುದಂತೆ. ಅದು ಮತ್ತೆ ೧೨ ಕಿ.ಮೀ ಜಾಸ್ತಿ ಅನ್ನೋದು ಒಂದು ಕಾರಣ ಆದ್ರೆ ಬರೀ ರಸ್ತೆಯಲ್ಲಿ ಸಾಗೋದೂ ಅಷ್ಟು ಮಜಾ ಕೊಡಲ್ಲ. ಈ ಘಾಟಿ ರಸ್ತೆಯಲ್ಲಿ ಔಷಧಿವನ, ಹೆಬ್ಬೆ ಫಾಲ್ಸ್ ಸಿಗೋದು. ಹೆಬ್ಬೆ ಫಾಲ್ಸಿಗೆ ದಾರಿ ಅನ್ನೋ ಬೋರ್ಡುಗಲ್ಲನ್ನೇ ತಿರುಚಿ ಹಾಕಲಾಗಿದೆ ಇಲ್ಲಿ ! ಹತ್ತಿರ ಬಂದು ನೊಡೋ ತನಕ, ಇಲ್ಲಾ ಇಲ್ಲಿಗೆ ಮುಂಚೆ ಬಂದಿರೋ ತನಕ ಇಲ್ಲೊಂದು ಫಾಲ್ಸಿಗೆ ದಾರಿಯಿತ್ತು ಅನ್ನೋದೇ ಗೊತ್ತಾಗಲ್ಲ. ನಮ್ಮ ಗಾಡಿಯ ಹಿಂಬಾಗಿಲು ತೆಗೆದು ಬ್ಯಾಗುಗಳೆಲ್ಲಾ ಬಿದ್ದು ಅದನ್ನು ಹೆಕ್ಕಲೆಂದು ಕೆಳಗಿಳಿದದ್ದಕ್ಕೆ ರಸ್ತೆಯ ಎಡಬದಿಯ ದೊಡ್ಡ ರಸ್ತೆ, ಅದಕ್ಕೆ ಹಾಕಿರೋ ಬೇಲಿ, ಅದಕ್ಕೆ ಎದುರಾಗಿ ಇದ್ದ ತಿರುಚಿದ ಬೋರ್ಡು.. ಕಂಡಿದ್ದು. ಹುಲಿ ಅಭಯಾರಣ್ಯ ಅಂತ ಮಾಡಿ, ಹೈ ಕೋರ್ಟು ತಡೆಯಾಜ್ನೆ ಕೊಟ್ಟು ಇಲ್ಲಿನ ಚಾರಣ ನಿಷೇಧಿಸಿದೆಯಂತೆ. ಆದರೂ ಹೋಗ್ಬೇಕು ಅಂದ್ರೆ ಹತ್ತಿರದ ಫಾರೆಸ್ಟ್ ಚೆಕ್ ಪೋಸ್ಟಿನಲ್ಲಿ ತಲಾ ೨೦೦ ಶುಲ್ಕ ಮತ್ತು ಗೈಡಿಗೆ ೫೦೦ ಕೊಟ್ಟು ೬ ಕಿ.ಮೀ ನಡೆಯಬೇಕು. ಗಾಡಿಯಾದ್ರೆ ನಮ್ಮ ಗಾಡಿ ಹೋಗೋಲ್ಲ. ಫಾರೆಸ್ಟಿನ ಜೀಪಿನಲ್ಲಿ ಹೋಗೋದಾದ್ರೆ ತಲಾ ೩೦೦ ಮತ್ತೆ !!. ಒಟ್ಟು ಒಂದು ಫಾಲ್ಸಿಗೆ ೫೦೦ ಕೊಡೋದು ದುಬಾರಿ ಅನ್ಸಿದ್ದು ಮತ್ತು ಅಲ್ಲೇ ಒಂದು ದಿನ ಕಳೆದುಹೋಗೋದು ಯಾಕೋ ಇಷ್ಟವಾಗಲಿಲ್ಲ. ಹಾಗೇ ಮುಂದೆ ಹೊರಟು ಕೆಮ್ಮಣ್ಣಗುಂಡಿಯ ಕೃಷ್ಣರಾಜೇಂದ್ರ ಗಿರಿಧಾಮ ತಲುಪಿದ್ವಿ. ಇಲ್ಲಿನ ಉದ್ಯಾನ, ಮೇಲಿನ ಗೋಪುರ, ಹತ್ತಿರದ ಗುಡ್ಡಗಳು ಮತ್ತೆ ಸೂರ್ಯಾಸ್ತ ಸೂರ್ಯೋದಯದ ತಾಣಗಳೇ. ಅದರ ನಂತರ ಹಾಗೇ ಕೆಳಗಿಳಿದ್ರೆ ಎಡಗಡೆಗೆ ಶಿಲೋದ್ಯಾನ ಅನ್ನೋ ಬೋರ್ಡ್ ಕಾಣುತ್ತೆ. ಆ ಬೋರ್ಡಿನಿಂದ ಸುಮಾರು ಒಂದು ಕಿಲೋಮೀಟರ್ ಸಾಗಿದ್ರೆ ಶಿಲೋದ್ಯಾನ ಸಿಗುತ್ತೆ. ಅಲ್ಲಿರೋ ಶಿವಲಿಂಗ, ಋಷಿ, ರಾಮಾಯಣದ ಮೂರ್ತಿಗಳ ಸುತ್ತ ಹುಲ್ಲು ಬೆಳೆಯುತ್ತಾ ಯಾಕೋ ನಿರ್ವಹಣೆಯ ಕೊರತೆಯಾಯಿತಾ ಅನಿಸುವಂತೆ ಮಾಡಿದ್ರೂ ಒಮ್ಮೆ ನೋಡಲಡ್ಡಿಲ್ಲ. ಶಿಲೋದ್ಯಾನದಿಂದ ಹಾಗೇ ಮುಂದೆ ಸಾಗಿದ್ರೆ ಸಿಗೋ ಸ್ತಳಗಳೇ ಶಾಂತಿ ಫಾಲ್ಸ್ ಮತ್ತು z ಪಾಯಿಂಟ್. ಶಿಲೋದ್ಯಾನದಿಂದ ಶಾಂತಿ ಫಾಲ್ಸ್ ಹತ್ತಿರದವರೆಗೂ ಗಾಡಿಗಳು(ಜೀಪು, ಬೈಕು) ಹೋಗತ್ತೆ. ಶಿಲೋದ್ಯಾನದ ಬಳಿ ಗಾಡಿ ನಿಲ್ಲಿಸಿ ನಡೆದ್ರೂ ಆ ಮರಗಳ ನೆರಳಲ್ಲಿ ನಡೆಯೋ ಸುಸ್ತು ಗೊತ್ತಾಗಲ್ಲ. ಹಾಗೇ ಒಂದು ಒಂದೂವರೆ ಕಿಲೋಮೀಟರ್ ನಡೆದ್ರೆ ಶಾಂತಿ ಫಾಲ್ಸ್. ಫಾಲ್ಸಂದ್ರೆ ಬೆಟ್ಟದ ತಪ್ಪಲಲ್ಲಿ ಬೀಳೋ ಜಲಧಾರೆ. ತೀರಾ ಎತ್ತರದಲ್ಲಿಲ್ಲದಿದ್ದರೂ ಬೆಟ್ಟದ ಬುಡದ ನೀರಧಾರೆ ಸುಸ್ತು ಪರಿಹರಿಸಲು, ಮುದನೀಡಲು ಒಳ್ಳೇ ಆಯ್ಕೆ.

ಶಾಂತಿ ಫಾಲ್ಸಿಗೆ ಇಳಿದ್ರೆ  z ಪಾಯಿಂಟಿಗೆ ಹೋಗೋ ಮನಸ್ಸಾಗಲಿಕ್ಕಿಲ್ಲ ಅಂತ ಅಲ್ಲಿ ಬರೀ ಕಾಲು ನೆನೆಸಿ z ಪಾಯಿಂಟಿನ ಕಡೆಗೆ ಹತ್ತೋಕೆ ಶುರು ಮಾಡಿದ್ವಿ. ಬೆಟ್ಟದ ತಪ್ಪಲಿನ ಕಡಿದಾದ ಹಾದಿಯಿದು. ಬೆಟ್ಟಗಳ ಹತ್ತುವುದಕ್ಕಿಂತ ಆ ಮೇಲಿಂದ ಕಾಣೋ ದೃಶ್ಯವನ್ನು ಕಂಡವರಿಗೆ , ಪನೋರಮವನ್ನು ಕಂಡವರಿಗೆ, ಮೋಡಗಳ ಮುತ್ತಿಕ್ಕುವಿಕೆಯ ಕಂಡವರಿಗೆ ಅಲ್ಲಿ ಹತ್ತದಿದ್ದರೆ ಎಷ್ಟೊಳ್ಳೆ ದೃಶ್ಯಗಳು ಮಿಸ್ಸಾಗುತ್ತಿತ್ತು ಅನ್ನೋ ಅನುಭವ ಸಿಗೋದು. ಅದ ಪದಗಳಲ್ಲಿ ಬರೆಯೋದು ಕಷ್ಟ. ಮಜಾದ ವಿಷಯ ಅಂದ್ರೆ ಅಲ್ಲಿಗೆ ಕಷ್ಟಪಟ್ಟು ಹೋದ ಮೇಲೂ ಅದಕ್ಕೆ z ಪಾಯಿಂಟ್ ಅಂತ ಯಾಕೆ ಕರೆಯುತ್ತಾರೆ ಅಂತ ಗೊತ್ತಾಗಲ್ಲ. ಆ ಜೆಡ್ ಆಕಾರ ಕಾಣಬೇಕು ಅಂದ್ರೆ ನಾವು ಮತ್ತೆ ಆ ಬೆಟ್ಟ ಕೆಳಗಿಳಿದು ಎದುರಿಗಿನ ಕೆಮ್ಮಣ್ಣಗುಂಡಿಯ ಉಪಹಾರದರ್ಶಿನಿಯ  ಬಳಿ ಬರಬೇಕು. 

Z ಪಾಯಿಂಟಿನಿಂದ ಕೆಳಗಿಳಿದ ಮತ್ತೆ ಶಾಂತಿ ಫಾಲ್ಸ ಕಂಡವರಿಗೆ ನೀರಿಗಿಳಿಯದೇ ಇರೋಕೆ ಆಗಲಿಲ್ಲ. ಅಲ್ಲಿ ಆಡಿ ಮತ್ತೆ ಶಿಲೋದ್ಯಾನದವರೆಗೆ ನಡೆಯೋ ಹೊತ್ತಿಗೆ ಮಧ್ಯಾಹ್ನ. ಕೆಮ್ಮಣ್ಣಗುಂಡಿಯಲ್ಲಿ ಮತ್ತೆ ಮಾಂಸಾಹಾರದ ಮಧ್ಯೆ ತಿನ್ನೋ ಮನಸ್ಸಾಗದೇ ಕಲ್ಲತ್ತಗಿರಿಗೆ ಸಾಗಿದೆವು. ಅಲ್ಲಿ ಮತ್ತೆ ಸಸ್ಯಾಹಾರಿ ಊಟ ಕಂಡು ಮೂರೂವರೆ ಘಂಟೆ ಆದ್ರೂ ಅದೇನೋ ಖುಷಿ. ಊಟದ ನಂತ್ರ ಮತ್ತೆ ಕಲ್ಲತ್ತಗಿರಿಯ ನೀರಿಗಿಳಿದೆವು. ಅಲ್ಲಿ ಬರೀ ಸಣ್ಣ ನೀರು ಅಂದುಕೊಂಡಿದ್ದವರು ಮೇಲೋನೋ ನೀರಿದೆ ಅಂತ ಕಂಡು ಮೇಲೆ ಹತ್ತಿದ್ವಿ. ಅಲ್ಲಿ ಮತ್ತೊಂದು ಫಾಲ್ಸು. ಅಲ್ಲೊಂದಿಷ್ಟು ನೀರಲ್ಲಾಟ. ಕೊನೆಗೆ ಇನ್ನೂ ಮೇಲೆ ಹತ್ತುತ್ತಿದ , ಇಳಿಯುತ್ತಿದ್ದವ್ರು ಕಂಡ್ರು ! ನೀರಾಟದ ನಂತರ ಮೇಲೆ ಹತ್ತಿದಷ್ಟೂ ಮಿನಿ ಮಿನಿ ಫಾಲ್ಸುಗಳೇ.  ಸುಮಾರು ಐದು ಫಾಲ್ಸು ಹತ್ತಾಯ್ತು. ಇನ್ನೂ ಹತ್ತಿದ್ರೆ ಇನ್ನೆಷ್ಟು ಮೇಲ್ಮೇಲೆ ಕಲ್ಲತ್ಗಿರಿ  ಫಾಲ್ಸುಗಳಿದ್ವೋ ಗೊತ್ತಿಲ್ಲ. ಐದನೇಯದರಲ್ಲಿ ಮತ್ತೆ ಆಡಿ ದೇಗುಲಕ್ಕೆ ಮರಳಿದ್ವಿ. ಅವತ್ತಿಡೀ ಒಂತರಾ ನೀರೇ ನೀರ ಆಟ. ದೇವರ ದರ್ಶನ ಪಡೆದು ಮತ್ತೆ ಕಲ್ಲತ್ತಗಿರಿ ಪೇಟೆ ಸೇರಿದಾಗ ಊರಿಗೆ ಮರಳೋ ಸಮಯ. ಸುಂದರ ಹೂಗಳಿಗೆ, ಮಧುರ ಪಯಣಕ್ಕೆ ಮುಕ್ತಾಯ ಹಾಡೋ ಸಮಯ. ಆದ್ರೆ ಟ್ರಿಪ್ಪ ಖುಷಿ ಅನ್ನೋದು ದಾರಿಯ ಕಾಮತ್ ಉಪಚಾರಿನಲ್ಲೂ, ಅರೆಗಣ್ಣ ನಿದ್ರೆಯಲ್ಲೂ, ಬಿಸಿಲಿಗೆ ಸುಟ್ಟ ಮುಖ ಸಿಪ್ಪೆ ಬಿಟ್ಟು ಸರಿಯಾಗಲು ಬೇಕಾದ ನಾಲ್ಕೈದು ದಿನಗಳಲ್ಲೂ ಮುಂದುವರೆದಿತ್ತು. ಈ ಸುಂದರ ಪಯಣದಲ್ಲಿ ಜತೆಯಾದ ಸ್ನೇಹಿತರಿಗೆಲ್ಲಾ ಧನ್ಯವಾದ ಹೇಳುತ್ತಾ ಪಯಣದ ನೆನಪಿಗೊಂದು ವಿರಾಮ.  ಮುಂದೊಮ್ಮೆ ಹೆಬ್ಬೆ ಫಾಲ್ಸು, ದೇವಿರಮ್ಮನ ಬೆಟ್ಟ, ಕುದುರೆಮುಖಗಳನ್ನು ನೋಡಲೆಂದೇ ಚಿಕ್ಕಮಗಳೂರಿಗೆ ಬರೋ ಮೂಡಿದೆ. ಪ್ರತಿಯೊಂದೂ ಒಂದೊಂದು ದಿನದ ಪಯಣಗಳಂತೆ. ನೋಡಬೇಕು. ಎಂದು ಯೋಗಾಯೋಗಗಳು ಕೂಡುತ್ತೆ ಅಂತ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Utham Danihalli
9 years ago

Chenagidhe lekana nanu chickmaglurale erovnadarinda odoke kushi aythu

Maithri
Maithri
9 years ago

Pravasi priyarige priyavada lekhana!

2
0
Would love your thoughts, please comment.x
()
x