ಎಷ್ಟೋ ಬಾರಿ ಚಿಕ್ಕಪುಟ್ಟ ವಿಷಯಗಳು ಅರ್ಥವಾಗುವುದೇ ಇಲ್ಲ. ಎಲ್ಲದರ ನಡುವೆ ಇದ್ದುಕೊಂಡೇ ಏನೂ ಗೊತ್ತಿಲ್ಲದ, ಅಭಿವ್ಯಕ್ತಿ ಪಡಿಸಲಾಗದ ರೀತಿಯಾಗಿಬಿಡುತ್ತದೆ.. ನಮ್ಮನ್ನು ಅವರು ಅರ್ಥ ಮಾಡ್ಕೋಬೇಕು, ಇವರು ಅರ್ಥಮಾಡಿಕೋಬೇಕು ಎಂದು ಹಂಬಲಿಸುವ ನಾವೇ ಯಾಕೆ ಬೇರೆಯವರನ್ನು ಅರ್ಥ ಮಾಡಿಕೊಳ್ಳುವಲ್ಲಿ ಮೂಕರಾಗುತ್ತೇವೆಯೋ ಪ್ರಶ್ನಿಸಿಕೊಳ್ಳಬೇಕಿದೆ. ಪ್ರೀತಿಯ ನಡುವೆ, ಪ್ರೀತಿಸುವ ಜನರ ನಡುವೆ ನಾವೂ ಪ್ರೀತಿಯ ಜೀವಿಯಾಗಿದ್ದರೇ ಚಂದ. ಎಲ್ಲವನ್ನೂ ಹಗುರವಾಗಿ, ಸಡಿಲವಾಗಿ ತೆಗೆದುಕೊಳ್ಳುವಾಗ ಒಂದೆರಡು ನಿಮಿಷವಾದರೂ ಆ ವ್ಯಕ್ತಿಯ ಬಗ್ಗೆಯೋ, ಆ ವಿಷಯದ ಬಗ್ಗೆಯೋ ಯೋಚಿಸಿದರೆ ಒಳಿತು. ಒಂದು ಮೆಸೇಜ್ ಗೆ ಪ್ರತಿಯುತ್ತರ ನೀಡುವುದರಿಂದ ಹಿಡಿದು, ಸ್ನೇಹಿತನಿಗಾಗಿ ಯಾವುದೋ ಕಾರ್‍ಯಕ್ರಮದಲ್ಲಿ ನಮ್ಮ ಪಕ್ಕದಲ್ಲಿ ಸೀಟು ಹಿಡಿದುಕೊಳ್ಳುವವರೆಗಿನದ್ದೂ ಒಂದು ರೀತಿಯಲ್ಲಿ ಕಾಳಜಿಯೇ ಸರಿ.. ನಾವೆಷ್ಟೋ ಬಾರಿ ನಿಷ್ಕಾಳಜಿಯಿಂದ ಛೇ ಅದೇನು ದೊಡ್ಡ ವಿಷಯನಾ? ಅಂತ ಹೇಳಿದಾಗ, ಇನ್ನೊಂದು ಕಡೆ ಅದೇ ಕಾಳಜಿಗಾಗಿ ಹಂಬಲಿಸುವ ಮನಸ್ಸು ಕೂಡ ಇರುತ್ತದೆ..
ನನ್ನನ್ಯಾಕೋ ಇತ್ತೀಚಿಗೆ ನೀನು ಸರಿಯಾಗಿ ಮಾತನಾಡಿಸ್ತಾ ಇಲ್ಲ. ಮೊದಲೆಲ್ಲ ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡುತ್ತ ಕುಳಿತಿರುತ್ತಿದ್ದವಳು ಈಗ ಅಪರೂಪಕ್ಕಾದರೂ ಹೇಗಿದ್ದೀಯಾ ಅಂತಾನೂ ಕೇಳೋದಿಲ್ಲ ಎಂದು ಸ್ನೇಹಿತೆಯೊಬ್ಬಳು ಹೇಳಿದಾಗಲೇ ಗೊತ್ತಾಗಿದ್ದು, ನನಗೇ ಅರಿವಿಲ್ಲದಂತೆಯೇ ನಾನು ಮಾತನಾಡುವುದನ್ನು ಕಡಿಮೆ ಮಾಡಿಬಿಟ್ಟಿದ್ದೇನೆ.. ನನಗೆ ಅದ್ಯಾವ ವಿಷಯವೇ ಆಗಿಲ್ಲದೇ ಇರಬಹುದು. ಆದರೆ ನನ್ನನ್ನು ಮೊದಲಿನಿಂದಲೂ ಹಚ್ಚಿಕೊಂಡ ಅವಳಿಗೆ ನನ್ನ ಮೇಲೆ ಬೇಸರ. ಕಾರಣವಿಷ್ಟೇ ಪ್ರತೀಯೊಬ್ಬರೂ ಅವರು ನಮಗೆ ತೋರಿಸುವ ಕಾಳಜಿಯ ಸ್ವಲ್ಪ ಭಾಗವಾದರೂ ಬೇರೆಯವರು ಹಿಂತಿರುಗಿ ತೋರಿಸಲಿ ಎಂದು ಬಯಸುತ್ತಾರೆ. ಇಲ್ಲಿ ಸ್ವಾರ್ಥವೋ, ನಿಸ್ವಾರ್ಥವೋ ಆದರೆ ನಮಗಾಗಿ ತುಡಿಯುವ ಮನಸ್ಸಿಗೆ, ಬೇಸರಿಸದಿರುವಂತೆ ನೋಡಿಕೊಳ್ಳುವುದು ನಮ್ಮ ಕೆಲಸ.
ಜೀವನದ ಒಂದೊಂದು ಮಜಲನ್ನು ಏರುತ್ತಾ ಏರುತ್ತ, ಹಿಂತಿರುಗಿ ನೋಡದೇ ಸಾಗಿಬಿಟ್ಟರೆ ಒಂದಷ್ಟು ಬದುಕಿನ ಪಯಣದಲ್ಲಿ ಜೊತೆಗೆ ಬಂದ ಪಯಣಿಗರನ್ನು ಮರೆಯದಿರುವುದು ಮುಖ್ಯವೇ ಸರಿ. ಫೋನ್ ಮಾಡಿಲ್ಲ, ಮೆಸೇಜ್ ಮಾಡಿಲ್ಲ ಅಂದರೆ ನಿನ್ನ ಬಗ್ಗೆ ಕಾಳಜಿ ಇಲ್ಲವೆಂದಲ್ಲ. ಮೆಸೇಜ್ ಲ್ಲಿ ಏನಿದೆ ಎಂದು ನಮ್ಮ ತನವನ್ನು ಸಮರ್ಥಿಸಿಕೊಳ್ಳುವುದು ಎನ್ನುವುದನ್ನು ಬಿಟ್ಟರೆ, ಅಷ್ಟು ಚಿಕ್ಕ ವಿಷಯವನ್ನು ಮರೆತುಬಿಟ್ಟಿದ್ದೇವಲ್ಲ ಎಂದು ನಮ್ಮ ಮನಸ್ಸಿಗೇ ಗೊತ್ತಿರುತ್ತದೆ. ಬರೀ ನೆನಪಿದ್ದರೆ ಸಾಲದು. ಜೊತೆಯಾಗಿ ಹಂಚಿಕೊಳ್ಳುವುದು ಮುಖ್ಯ. ಜೀವನದಲ್ಲಿ ಚಿಕ್ಕಪುಟ್ಟ ವಿಷಯಗಳೇ ದೊಡ್ಡದಾಗಿ ಪರಿಣಮಿಸುತ್ತದೆ. ಹಾಗಂತ ಬೇಕೂ ಅಂತಲೇ ನಾವು ಅವರಿಂದ ದೂರವಾಗುತ್ತಿರುವುದಿಲ್ಲ. ನಮ್ಮ ನಿಷ್ಕಾಳಜಿಯ ರೀತಿಗೆ ಎಷ್ಟೋ ಚಿಕ್ಕ ಪುಟ್ಟ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇರುವುದಿಲ್ಲ ಎನ್ನುವುದಕ್ಕಿಂತ ಸೂಕ್ಷ್ಮ ವಿಚಾರಗಳೆಲ್ಲ ನಮಗೆ ಅರ್ಥವಾಗುವ ಹೊತ್ತಿಗೆ ನಮ್ಮ ಪ್ರೀತಿ ಪಾತ್ರರು ನಮ್ಮಿಂದ ದೂರವಾಗುತ್ತ ಹೋಗುತ್ತಿರುತ್ತಾರೆ.
ಜೀವನದಲ್ಲಿ ಅರ್ಥಮಾಡಿಕೊಳ್ಳುವುದರಲ್ಲೇ ಎಡವಿಬಿಡುತ್ತೇವೆ. ನಮಗಾಗಿ ಪ್ರೀತಿಸುವ, ಕಾಳಜಿ ವಹಿಸುವ ಜೀವಕ್ಕೆ ಹಿಂತಿರುಗಿ ಒಂದಷ್ಟಾದರೂ ಬೊಗಸೆಯಷ್ಟು ಪ್ರೀತಿಯನ್ನು ಕೊಡಲೇಬೇಕು. ಪುಟ್ಟ ಗೆಲುವಿಗೆ, ಬೇಡವಾದ ಸೋಲುಗಳಿಗೆ, ದೊಡ್ಡದಾದ ನಗುವಿಗೆ, ಅಳುವಿಗೆ ಎಲ್ಲಕ್ಕೂ ನಮ್ಮ ಪ್ರೀತಿ ಪಾತ್ರರು ಬೇಕೇ ಬೇಕು.. ಗೆದ್ದಾಗ ಸಂಭ್ರಮ ಪಡುವವರು, ಸೋತಾಗ ಸಾಂತ್ವನ ಹೇಳುವವರು ನಮಗಾಗಿ ವಹಿಸುವ ಚಿಕ್ಕಪುಟ್ಟ ಕಾಳಜಿಯೂ ಕೂಡ ದೊಡ್ಡದಾಗಿಯೇ ಕಾಣುತ್ತದೆ.. ಕಳೆದು ಹೋದ ಸಂಬಂಧಗಳನ್ನು ಹಿಂತಿರುಗಿ ಪಡೆಯುವುದು ಕಷ್ಟದ ಕೆಲಸ. ಆದರೆ ಇರುವ ಸಂಬಂಧಗಳನ್ನು, ತೋರಿಸುವ ಪ್ರೀತಿಯನ್ನು ಪರಿಪೂರ್ಣವಾಗಿ ಮೇಂಟೇನ್ ಮಾಡಿಕೊಂಡು ಹೋಗುವುದರಲ್ಲಿ ನಾವು ಮುಖ್ಯ ಪಾತ್ರ ವಹಿಸಲೇಬೇಕು.
ನಿನ್ನ ಹುಟ್ಟು ಹಬ್ಬಕ್ಕೆ ವಿಶ್ ಮಾಡುವುದನ್ನೇ ಮರೆತೆ, ನಿನ್ನ ಗೆಲುವಿಗೆ ಕಂಗ್ರಾಟ್ಸ್ ಹೇಳಬೇಕೆಂದುಕೊಂಡಿದ್ದೆ ಅಷ್ಟರಲ್ಲಿ ಮತ್ಯಾವುದೋ ಕೆಲಸದ ನಡುವೆ ಮರೆತುಬಿಟ್ಟೆ.. ಊಹೂಂ..ಇದು ಚಿಕ್ಕ ವಿಷಯವೇ ಆಗಿರಬಹುದು.. ಆದರೆ ಹುಟ್ಟುಹಬ್ಬದ ದಿನ ನಮ್ಮ ವಿಶ್‌ಗಾಗಿ ಕಾಯುತ್ತಿರುವ ಗೆಳೆಯನಿಗೆ ಆ ದಿನ ಪರಿಪೂರ್ಣ ಎಂದೆನಿಸಲಾರದು. ನಾವೂ ಬೇಕಂತಲೇ ಮರೆತಿರುವುದಿಲ್ಲ. ಆದರೆ ಮರೆತಿರುತ್ತೇವೆ ಎನ್ನುವುದಂತೂ ಸತ್ಯ. ಇಲ್ಲಿ ಯಾಕೆ ಮರೆತೆ ಎಂಬ ಕಾರಣಕ್ಕಿಂತ, ಯಾಕೆ ನೆನಪಿಸಿಕೊಂಡಿಲ್ಲ ಎಂಬುದು ಮುಖ್ಯವಾಗಿಬಿಡುತ್ತದೆ. ನಮ್ಮದು ಎಷ್ಟೋ ದೊಡ್ಡ ಕೆಲಸವಿರಬಹುದು, ಸಮಯವಿಲ್ಲದೇ ಇರಬಹುದು. ಆದರೆ ನೆನಪು ಮಾಡಿಕೊಂಡು ಬೇರೆಯವರ ನಗುವಿಗೆ ನಾವು ಕಾರಣರಾಗುವುದೂ ಒಂದು ದೊಡ್ಡ ಕೆಲಸವೇ ಸರಿ.
*****
super..