ಚಿಂತೆ ಬಿಡಿ..ರಿಲ್ಯಾಕ್ಸ್ ಪ್ಲೀಸ್..: ಬಿ.ರಾಮಪ್ರಸಾದ್ ಭಟ್

ನೀವು ಸದಾ ಲವಲವಿಕೆಯಿಂದ, ಅತ್ಯುತ್ಸಾಹದಿಂದ ಇರಲು ಬಯಸುವುದು ನಿಜವೇ ಆದರೆ ವೃಥಾ ಚಿಂತಿಸುವುದನ್ನು ಕೈ ಬಿಡಬೇಕು. ಒಂದು ವೇಳೆ ಯಾವುದೇ ರೋಗಕ್ಕೆ ತುತ್ತಾದಾಗಲೂ ಸಹ ಕಳವಳಗೊಳ್ಳದೆ 'ಅಯ್ಯೋ ಈ ರೋಗ ಬಂದಿದೆಯಲ್ಲಪ್ಪಾ,ಏನು ಮಾಡುವುದು? ಹೇಗೆ? ವಾಸಿಯಾಗುವುದೋ ಇಲ್ಲವೋ?' ಎಂದು  ಪೇಲವ ಮುಖ ಮಾಡಿಕೊಂಡು ಚಿಂತೆಗೀಡಾಗದೆ ನೆಮ್ಮದಿಯಾಗಿ ಸಾವಧಾನ ಚಿತ್ತದಿಂದ ಇದ್ದರೆ ಆ ನೆಮ್ಮದಿಯ ಭಾವನೆಯೇ ನಮ್ಮ ದೇಹದ ಜೀವಕೋಶಗಳ ಮೇಲೆ ಪ್ರಭಾವ ಬೀರಿ ನಮ್ಮ ರೋಗಗಳನ್ನು ಕಡಿಮೆಗೊಳಿಸುವುದು. ಅಲ್ಲದೆ ಆರೋಗ್ಯದಲ್ಲಿನ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ.

ಪ್ರತಿಯೊಬ್ಬ ಮನುಷ್ಯನ ದೇಹದ ಆರೋಗ್ಯವು ಬರೀ ಔಷಧಿ,ಮಾತ್ರೆಗಳಿಂದಲೇ ಗುಣಮುಖವಾಗುತ್ತದೆ ಎಂದುಕೊಳ್ಳುವುದು ತಪ್ಪು. ನಮ್ಮ ದೇಹವು ತಾನಾಗಿಯೇ ಗುಣ ಹೊಂದುವ ಸಾಮರ್ಥ್ಯವನ್ನು ಪಡೆದಿದೆ ಎಂಬುದು ವೈಜ್ಞಾನಿಕ ಸತ್ಯ.ನಮ್ಮ ದೇಹಕ್ಕೆ ಅಂಟಿಕೊಂಡಿರುವ ರೋಗವು ಖಂಡಿತವಾಗಿಯೂ ಗುಣಮುಖವಾಗುತ್ತದೆ ಎಂಬ ಭಾವನೆಯನ್ನು ಸಂಪೂರ್ಣವಾಗಿ ನಂಬಿದರೆ ಎಂತಹ ರೋಗವೇ ಆಗಲಿ ಶೀಘ್ರವಾಗಿ ಗುಣವಾಗಿ ಬಿಡುತ್ತದೆ. ಆದುದರಿಂದಲೇ ನಿಮ್ಮ ಆರೋಗ್ಯ ಹದಗೆಟ್ಟಾಗ ಚಿಂತೆಗೊಳಗಾಗದೆ ನಿಮ್ಮ ಮನಸ್ಥಿತಿಯನ್ನೂ ಉತ್ಸಾಹದಿಂದ ಇರುವಂತೆ ನೋಡಿಕೊಳ್ಳಿ.

ಬಹುಪಾಲು ಪಾಲಕರು ತಮ್ಮ ಮಕ್ಕಳು ಅತಿ ಕಟ್ಟುನಿಟ್ಟು,ಶಿಸ್ತಿನಿಂದ ಇರಬೇಕೆಂದು ಹಂಬಲಿಸುತ್ತಾರೆ. ಹಾಗೊಂದು ವೇಳೆ ಇಲ್ಲವಾದರೆ ದಂಡಿಸುವುದು ಮಾಡುತ್ತಾರೆ. ಇದರಿಂದ ಮಕ್ಕಳು ಮತ್ತಷ್ಟು ಖಿನ್ನರಾಗುತ್ತಾರೆ.ಕೆಲವು ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ತಮ್ಮ ತಂದೆ-ತಾಯಿ ಬಯ್ಯುತ್ತಾರೆ,ಹೊಡೆಯುತ್ತಾರೆ  ಎಂಬ ಭಯದಿಂದ ಸದಾ ಚಿಂತೆ ಮತ್ತು ಆತಂಕಗೊಳ್ಳುತ್ತಾರೆ.
'ಆದುದರಿಂದ ನಿಮ್ಮ ಮಕ್ಕಳ ಬಳಿ ನೀವು ಸ್ನೇಹಿತರಂತೆ,ಆತ್ಮೀಯರಂತೆ ನಡೆದುಕೊಳ್ಳಿ.ನಿಮ್ಮನ್ನು ಕಂಡರೆ ಅವರು ಭಯಪಡುವಂತಹ ಮನಸ್ಥಿತಿಯನ್ನು ಅವರಿಂದ ದೂರಮಾಡಿ.ಯಾವುದೇ ಸಂಕೋಚ,ಆತಂಕಗಳಿಲ್ಲದೆ ಅವರು ನಿಮ್ಮೊಡನೆ ನಿರಾತಂಕವಾಗಿ ಮಾತನಾಡುವ ಹಾಗೂ ನಿಮ್ಮಲ್ಲಿ ಬೆರೆಯುವ ಅವಕಾಶಗಳನ್ನು ಅವರಿಗೆ ಕಲ್ಪಿಸಿ ಕೊಡಿ' ಎನ್ನುತ್ತಾರೆ  ತಜ್ಞರು.

ಕೇವಲ ಚಿಂತೆ, ಆತಂಕಗಳಿಂದಲೇ ಹೃದಯಬೇನೆಗಳು, ಅರ್ಬುದ ರೋಗಗಳು ಕಾಣಿಸಿಕೊಳ್ಳಬಹುದು. ತಲೆನೋವು, ಕೀಲುಗಳ ನೋವು,ಸಣ್ಣ ವಯಸ್ಸಿನಿಂದಲೇ ವೃದ್ಧಾಪ್ಯ ಸೂಚನೆಗಳು ಹಾಗೂ ಉದರಕ್ಕೆ ಸಂಬಂಧಿಸಿದಂತಹ ಕಾಯಿಲೆಗಳು ಕೇವಲ ಚಿಂತೆಯಿಂದಲೇ ತೀವ್ರಗೊಳ್ಳುತ್ತದೆ. ನಿಮ್ಮ ದೇಹಕ್ಕೆ ಅನಾರೋಗ್ಯವಾಗಲಿ ಅಥವಾ ಇನ್ನಿತರ ಯಾವುದೇ ಸಮಸ್ಯೆಗಳು ಬರಲಿ ಅದರ ಬಗ್ಗೆ ಅನಾವಶ್ಯಕವಾಗಿ ಚಿಂತಿಸುವುದನ್ನು ಬಿಡಿ. ಸಂಪೂರ್ಣ ನಂಬಿಕೆಯಿಂದ,ದೃಢವಾದ ಆತ್ಮವಿಶ್ವಾಸದಿಂದ ಇದ್ದರೆ ಎಲ್ಲವೂ ಸರಿಹೋಗಿಬಿಡುತ್ತದೆ ಎಂಬ ನಂಬಿಕೆಯಲ್ಲಿ ಬದುಕನ್ನು ಸಾಗಿಸಿ.ಕಷ್ಟಗಳು, ಸಮಸ್ಯೆಗಳು ತಾವೇ ತಾವಾಗಿ ಪರಿಹಾರ ಕಂಡುಕೊಳ್ಳುತ್ತವೆ.

ನಂಬಿಕೆ ಹಾಗೂ ಚಿಂತಾರಹಿತ ಭಾವನೆಯೊಂದಿಗೆ ನಿಮ್ಮ ಮನಸನ್ನು, ಶರೀರವನ್ನು ಸ್ವಸ್ಥ ಸ್ಥಿತಿಯಲ್ಲಿಟ್ಟುಕೊಳ್ಳಲು ಕೆಲವು ಆಹಾರ ಕ್ರಮಗಳನ್ನು ಅನುಸರಿಸಬೇಕಾದ ಅಗತ್ಯವಿದೆ.

ಬೆಳಗಿನ ಉಪಹಾರಕ್ಕೆ ಬ್ರೆಡ್ಡನ್ನು ಅಥವಾ ಗೋಧಿ ರೊಟ್ಟಿಯನ್ನು ಉಪಯೋಗಿಸಿ. ಇದಕ್ಕೆ ಎಣ್ಣೆಯ ಬಳಕೆಯ ಪ್ರಮಾಣ ತೀರಾ ಕಡಿಮೆಯಿದ್ದರೆ ಒಳಿತು. ಗೋಧಿಯ ಉಪ್ಪಿಟ್ಟನ್ನು ಸೇವಿಸಿರಿ. ಪಾಲಿಷ್ ಮಾಡದ ಧಾನ್ಯ ಪದಾರ್ಥಗಳ ಸೇವನೆಯಿಂದಾಗಿ ಮೆದುಳಿನ ಕಾರ್ಯ ನಿರ್ವಹಣೆ ಸಮಸ್ಥಿತಿಯಲ್ಲಿರುತ್ತದೆ. ಮೆದುಳು ಮತ್ತು ಮನಸ್ಸು ಯಾವುದೇ ಒತ್ತಡಕ್ಕೊಳಗಾಗದೆ ನೆಮ್ಮದಿಯಾಗಿದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ತಾನೇ ತಾನಾಗಿ ವೃದ್ಧಿಗೊಳ್ಳುತ್ತದೆ.

ಆಗಾಗ್ಗೆ ಕಿತ್ತಳೆಹಣ್ಣುಗಳನ್ನು ತಿನ್ನುತ್ತಿದ್ದರೆ ಒಳ್ಳೆಯದು. ಇದರಲ್ಲಿರುವ ಪೊಟ್ಯಾಷಿಯಂ ಲವಣಾಂಶವು ಮೆದುಳಿಗೆ ನಿರಂತರವಾಗಿ ಸಂದೇಶಗಳನ್ನು ಕಳುಹಿಸಿ ನರಗಳ ಮೇಲೆ ಪ್ರಭಾವವನ್ನು ಬೀರಿ ತನ್ನ ಹಿಡಿತವನ್ನು ಸಾಧಿಸುತ್ತದೆ. ಪದೇ ಪದೇ ಆತಂಕ ಹಾಗೂ ಚಿಂತೆ ಮೂಡಿಸುವ ಸಂದೇಶಗಳನ್ನು ಇದು ತಡೆಹಿಡಿಯುತ್ತದೆಯಾದ್ದರಿಂದ ಮನಸ್ಸನ್ನು ಸದಾ ಶಾಂತವಾಗಿರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.

–ಬಿ.ರಾಮಪ್ರಸಾದ್ ಭಟ್.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x