ಪ್ರಶಸ್ತಿ ಅಂಕಣ

ಚಳಿಗೆ ಮುರುಟಿದ ಮನಕ್ಕೊಂದು ಹೊದಿಕೆ ಹೊಚ್ಚುತ್ತಾ: ಪ್ರಶಸ್ತಿ


ಚಳಿಯೆಂದ್ರೆ ವಿಪರೀತ ಚಳಿ ಕಣೋ ಬೆಂಗ್ಳೂರಲ್ಲಿ ಅಂದ್ರೆ ದೆಲ್ಲೀಲಿ ಕೂತ ಫ್ರೆಂಡು ನಗ್ತಾ ಇದ್ದ. ಅಲ್ಲಿ ಅಬ್ಬಬ್ಬಾ ಅಂದ್ರೆ ಹದಿನೆಂಟೂ ಇಪ್ಪತ್ತೋ ಆಗಿರಬಹುದಷ್ಟೆ. ಅಷ್ಟಕ್ಕೇ ಚಳಿಯೆನ್ನೋ ನೀನು ಇಲ್ಲಿನ ಮೈನಸ್ಸುಗಳಿಗೆ ಬಂದ್ರೆ ಸತ್ತೇ ಹೋಗಬಹುದೇನೋ ಅಂದ. ಅರೆ ಹೌದಲ್ವಾ ಅನಿಸ್ತು. ಊರಲ್ಲಿ ಎರಡು ಕಂಬಳಿ, ಮೂರು ಕಂಬಳಿ ಚಳಿಯಂತ ಹೇಳುತ್ತಿದ್ದ, ಸ್ವೆಟರಿಲ್ಲದೆ ಹೊರಗಲ್ಲ ಮನೆಯೊಳಗೂ ಕೂರಲಾಗದಿದ್ದ ನಮ್ಮೂರೆಲ್ಲಿ ಬೆಳಗ್ಗೆ ಎಂಟಕ್ಕೇ ಆಫೀಸಿಗೆ ಬರೋ ಪರಿಸ್ಥಿತಿಯಿದ್ರೂ ಸ್ವೆಟರುಗಳೆಲ್ಲಾ  ಧೂಳು ಹೊಡೆಯುತ್ತಿರುವ ಬೆಂಗಳೂರೆಲ್ಲಿ ಅಂತನೂ ಒಮ್ಮೆ ಅನಿಸಿದ್ದು ಸುಳ್ಳಲ್ಲ.ಇಷ್ಟರ ಮಧ್ಯೆವೂ ಈ ಚಳಿ, ಸೆಖೆ ಅನ್ನುವೆಲ್ಲಾ ಭಾವಗಳು ಒಂದು ಮಾನಸಿಕ ಅವಸ್ಥೆ, ಭ್ರಮೆ ಅನ್ನೋ ಬುದ್ದಿಜೀವಿಯಾಗಲೇಕೋ ಮನಸೊಪ್ಪಲಿಲ್ಲ. ಬೆಳಬೆಳಗ್ಗೆ ಆಫೀಸಿಗೆ ಹೊರಟಾಗ ಕೊಂಚ ಹೆಚ್ಚೇ ಅನಿಸಿದ ಚಳಿಯಿಂದ ರೋಮಗಳೆಲ್ಲಾ ನಿಮಿರಿ ನಿಂತ ಸಮಯದಲ್ಲಿ ತನುವು ಬಿಸಿಲರಸತೊಡಗಿದ್ರೆ ಮನವೊಂದಿಷ್ಟು ಬೆಚ್ಚನೆಯ ನೆನಪುಗಳ ಮಡಿಲಲ್ಲಿ ಮತ್ತೆ ಮಲಗಲು ಹವಣಿಸುತ್ತಿತ್ತು.  
 
ಈ ಚಳಿ , ಚಳಿಗಾಲ ಅನ್ನೋದು ಬರೀ ಮೈಯ, ಮನದ ಭಾವವಲ್ಲ. ಹಲವು ಸಂಸ್ಕೃತಿಗಳ, ಆಚಾರ ವಿಚಾರಧಾರೆಗಳಲ್ಲಿ ಭಿನ್ನ ರೂಪ ತಳೆದ ಕಾಲದ ಪರಿಯೇ ಅನ್ನಿಸುತ್ತೆ ಒಮ್ಮೊಮ್ಮೆ. ಉದಾಹರಣೆಗೆ ಕ್ರಿಸ್ಮಸ್ಮಿಗೆ ಸಾಂತಾಕ್ಲಾಸ್ ಬರ್ತಾನೆ, ಗಿಫ್ಟ್ ಕೊಡ್ತಾನೆ ಅನ್ನೋ ಕಲ್ಪನೆಗಳೆಲ್ಲಾ ನನ್ನ ಕನಸ ಹೊಕ್ಕಲೂ ಯಾಕೋ ನಿರಾಕರಿಸುವಂತಿದ್ದವು ನನ್ನ ಬಾಲ್ಯದಲ್ಲಿ. ಪಟ್ಟಣದ ಇಂಗ್ಲೀಷ್ ಕಾನ್ವೆಂಟಿಗೆ ಹೋಗದೇ ಹಳ್ಳಿ ಬಾಲ್ಯ ಕಳೆದಿದ್ದರ ಪ್ರಭಾವವಿದ್ದಿರಬಹುದು ಅದು .ಅಲ್ಲಿ ಗಿಫ್ಟು ಅಂದ್ರೆ ನೆನಪಾಗುತ್ತಿದ್ದುದು ಕ್ಯಾಲೆಂಡರ್ ಹೊಸವರ್ಷ (ಜನವರಿ ಒಂದು) ಅಥವಾ ಹೊಸವರ್ಷ(ಯುಗಾದಿಯ) ಸಂದರ್ಭದಲ್ಲಿ ನಡೆಸುತ್ತಿದ್ದ ಚೀಟಿ ವಿನಿಮಯ. ಈಗ ನೀವೆನ್ನೋ ಸೀಕ್ರೆಟ್ ಸಂತನ ಮಾದರಿಯಲ್ಲಿ ಎಲ್ಲರ ಹೆಸರುಗಳ ಬರೆದು ಒಂದು ಡಬ್ಬಿಯಲ್ಲಿ ಹಾಕಿ ಪರಸ್ಪರ ಆರಿಸೋದು. ನಾವೆತ್ತಿದ ಚೀಟಿಯಲ್ಲಿ ಯಾರ ಹೆಸರು ಬರುತ್ತಿತ್ತೋ ಅವರಿಗೆ ಗಿಫ್ಟು ಕೊಡುವುದು. ಇಲ್ಲಿ ನಮಗೆ ಗಿಫ್ಟ್ ಕೊಡೋರು ಯಾರು ಅನ್ನೋ ಕುತೂಹಲ ಅಷ್ಟೇನಿರದಿದ್ದರೂ ಏನು ಕೊಡಬಹುದು ಅನ್ನೋ ಕುತೂಹಲ ಖಂಡಿತಾ ಇರುತ್ತಿತ್ತು. ಅದಕ್ಕಿಂತಲೂ ಹೆಚ್ಚಾಗಿ ನನಗೆ ಚೀಟಿ ಸಿಕ್ಕಿರೋ ವ್ಯಕ್ತಿಗೆ ಏನಾದ್ರೂ ಚೆನ್ನಾಗಿರೋದು ಕೊಡಬೇಕು ಅನ್ನೋ ಬಯಕೆಯೂ ಖಂಡಿತಾ ಇರುತ್ತಿತ್ತು. ಆಗೆಲ್ಲಾ ಗಿಫ್ಟುಗಳೆಂದ್ರೆ ಗ್ರೀಟಿಂಗ್ ಕಾರ್ಡು, ಪೆನ್ನೋ, ಬಣ್ಣದ ಪೆನ್ಸಿಲ್ಲೋ, ಸ್ಕೆಚ್ ಪೆನ್ನಿನ ಬಾಕ್ಸೋ, ಗ್ಲಿಟ್ಟರ್ ಪೆನೋ ಆಗಿದ್ದರೂ ಅದರ ಖುಷಿಯೇ ಬೇರೆ. ಹೊಸ ವರ್ಷ ಅನ್ನೋದೇ ಒಂದು ಖುಷಿಯ ದಿನವಾಗಿ ಬಿಡ್ತಿತ್ತು. ಅಂದು ರಜೆ ಅಂತಲ್ಲ. ಶಾಲಾ ಯೂನಿಫಾರ್ಮ್ ಬದ್ಲು ಕಲರ್ ಬಟ್ಟೆ ಧರಿಸಬಹುದೆಂದಲ್ಲ. ನಮಗೆ ಏನೋ ಗಿಫ್ಟು ಸಿಗತ್ತೆ ಅಂತ್ಲೂ ಅಲ್ಲ. ಹಿಂದಿನ ದಿನ ಅಥವಾ ದಿನಗಳಿಂದ ಅಂಗಡಿ ಅಂಗಡಿಗಳಿಗೆ ಅಲೆದು ಆರಿಸಿದ ಎಲ್ಲಾರಿಗಿಂತ್ಲೂ ಚೆನ್ನಾಗಿರೋ ನನ್ನ ಗಿಫ್ಟನ್ನು ನನ್ನ ಗೆಳೆಯನಿಗೆ ಕೊಡ್ಬೇಕು ಅನ್ನೋ ಕಾತುರದ ಖುಷಿಯದು ! ಎಲ್ಲಾ ಹುಡುಗ ಹುಡುಗಿಯರ ಮನದಲ್ಲೂ ಎಲ್ಲರಿಗಿಂತ್ಲೂ ಸುಂದರ ಗಿಫ್ಟು ನಾನು ಕೊಡುತ್ತಿರೋದೇ ಎಂಬ ಭಾವ ಮೂಡುತ್ತಿದ್ದುದು ದೊಡ್ಡ ರಹಸ್ಯವೇನಲ್ಲ ಬಿಡಿ 🙂
 
ಗ್ರೀಟಿಂಗ್ ಕಾರ್ಡಿನಲ್ಲಿ ಸಾಧ್ಯವಾದಷ್ಟು ಹೆಚ್ಚು ಬಣ್ಣಗಳನ್ನು, ಕೆಲವರು ಹೂವಿನ ಎಸಳು, ಎಲೆಗಳನ್ನು ಹೀಗೆ ಹಲವು ವಸ್ತುಗಳನ್ನು ಬಳಸಿ ಸಿಂಗರಿಸುವುದ್ರಲ್ಲಿ, ಹೊಸ ವರ್ಷದ ಶುಭಾಶಯ ಅಂತ ಬರೆಯೋದ್ರಲ್ಲಿ ಏನೋ ಖುಷಿ. ಹೊಸ ವರ್ಷದ ದಿನ ಮೈಕೊರೆಯೋ ಚಳಿಯಿದ್ರೂ ಬೇಗನೇ ಎದ್ದು ರೆಡಿಯಾಗಿ ಶಾಲೆಗೆ ಓಡೋ ಹಂಬಲ. ಯಾಕೆ ಅಂದ್ರಾ ? ಹೊಸ ವರ್ಷದ ದಿನ ಲೇಟಾದ್ರೆ ವರ್ಷಪೂರ್ತಿ ಲೇಟಾಗತ್ತೆ ಅನ್ನೋ ನಂಬಿಕೆ  ಇತ್ತಲ್ಲ! ಬೇಗ ಏಳೋದು ಅಂದಾಕ್ಷಣ ಮನಃಪಟಲದಲ್ಲಿ ನೆನಪಾಗುತ್ತಿರುವ ಇನ್ನೊಂದು ಘಟನೆ ಕುಮಾರ ಪರ್ವತ ಚಾರಣ. ಕುಮಾರ ಪರ್ವತಕ್ಕೆ ಹತ್ತೋ ಹೊತ್ತಿಗೆ ಅಲ್ಲಿನ ಚಳಿಯ ಆರ್ಭಟ ಗೊತ್ತಾಗಿರಲಿಲ್ಲ. ಅಲ್ಲಿನ ಶಿಖರ ಮುಟ್ಟಿದ ಮೇಲೆ ನೋಡಿ. ದೇಹದ ಮೂಳೆಗಳೆಲ್ಲಾ ಇಂತಲ್ಲೇ ಇವೆ ಎನ್ನುವಂತೆ ನಡುಕ ಹುಟ್ಟಿಸೋ ಚಳಿಯಲ್ಲಿ. ಸಿಕ್ಕಿದ ಕಡ್ಡಿಗಳನ್ನು ಒಟ್ಟುಗೂಡಿಸಿ ಬೆಂಕಿಹಾಕಿ ಅದರ ಶಾಖದಲ್ಲಿ ಮೈ ಬಿಸಿಯಾಗುತ್ತಿದ್ದಂತೆಯೇ ಟೆಂಟು ಹಾಕಿ ಅದರ ಒಳಸೇರಿ ಮಲಗಿಬಿಟ್ಟಿದ್ದೆವು. ಸ್ವೆಟರಿಲ್ಲದೇ ಹೋಗಿದ್ರೂ ಸ್ಲೀಪಿಂಗ್ ಬ್ಯಾಗ್ ಮತ್ತು ಟೆಂಟುಗಳ ಹೊತ್ತು ಹೋಗಿದ್ದು ಸಖತ್ ಒಳ್ಳೆಯ ನಿರ್ಧಾರವಾಗಿತ್ತು. ಟೆಂಟಿಲ್ಲದೇ ಹೋಗಿದ್ರೆ ಅಲ್ಲಿನ ಇಬ್ಬನಿಯಲ್ಲಿ, ಕೊರೆವ ಚಳಿಯಲ್ಲಿ ಅದೆಷ್ಟು ಸ್ವೆಟರುಗಳಿದ್ರೂ ವ್ಯರ್ಥವೇ ಅನ್ನೋ ತೀರ್ಮಾನಕ್ಕೆ ಬರೋ ಹೊತ್ತಿಗೆ ನಾವೆಲ್ಲಾ ನಿದ್ದೆಗೆ ಜಾರಿದ್ದೆವು.
 
ಬೆಳಗ್ಗೆ ನಾಲ್ಕರ ಸುಮಾರಿಗೆ ಎಬ್ಬಿಸಿದನಪ್ಪ ಗೆಳೆಯ ಸೂರ್ಯೋದಯ ನೋಡೋಣ ಅಂತ. ಸಮಯ ಎಷ್ಟಾಯ್ತು ಅಂತಲೂ ನೋಡದೇ ಎದ್ದು ಟೆಂಟು ಮುಸುಕ ಸರಿಸಿ ಒಂದು ಹೆಜ್ಜೆ ಹೊರಗಿಟ್ಟಿದ್ದಷ್ಟೆ. ಹುಲ್ಲ ಮೇಲೆ ಬಿದ್ದಿದ್ದ ಇಬ್ಬನಿಯ ಮೇಲೆ ಕಾಲಿಟ್ಟಿದ್ದೆ. ಹೊರಗಿನಿಂದ ಬೀಸುತ್ತಿದ್ದ ಶೀತ ಗಾಳಿಗೆ ನನ್ನೊಡ್ಡಿಕೊಂಡಿದ್ದೆ. ಹೋ. ಬೆಚ್ಚಗೆ ಒಳಗಿದ್ದವನ ಮೇಲೆ ಐಸು ಸುರಿದ ಭಾವ. ಸೂರ್ಯ ಹೇಗಿದ್ರೂ ಅಲ್ಲೇ ಇರುತ್ತಾನಲ್ಲ. ಆಮೇಲೆ ನೋಡಿದ್ರಾಯ್ತು ಅಂತ ಮತ್ತೆ ಮಲಗಿ ಬಿಟ್ಟೆ. ಆದ್ರೆ ಒಮ್ಮೆ ಎಚ್ಚರವಾದ ಮೇಲೆ ಮತ್ತೆ ಮಲಗಿರಲು ಮನಸು ಬಿಡಬೇಕಲ್ಲ. ಸ್ಲೀಪಿಂಗ್ ಬ್ಯಾಗನ್ನೇ ಶಾಲಂತೆ ಹೊದ್ದು, ಕಾಲಿಗೆ ಶೂ ಹಾಕಿಕೊಂಡು ಹೊರ ಹೊರಡಲು ಧೈರ್ಯ ಒಗ್ಗೂಡಿಸಿಕೊಂಡೆ. ಹೊರಗೆ ಒಂದೆರಡು ಮಾತುಗಳು ಕೇಳುತ್ತಿತ್ತು. ಏನಾದ್ರಗಲಿ ಅಂತ ಹೊರಗೆ ಕಾಲಿಟ್ಟೆ. ಮೊದಲೆರೆಡು ಹೆಜ್ಜೆಗಳು ಏನೂ ಅನಿಸಲಿಲ್ಲ. ಆಮೇಲೆ ಮತ್ತೆ ಚಳಿಯ ವರಾತ. ಸ್ಲೀಪಿಂಗ್ ಬ್ಯಾಗನ್ನು ಗೋಣಿ ಕೊಪ್ಪೆಯಂತೆ ತಲೆಯಿಂದ ಬೋರಲು ಹಾಕಿ ಹೊದ್ದಿದ್ರೂ ಅದು ಕಾಲಿನ ತಂಕ ಸಾಕಾಗುತ್ತಿರಲಿಲ್ಲ. ಬೀಸುತ್ತಿದ್ದ ತಣ್ಣನೆ ಗಾಳಿ ಮುಖಕ್ಕೆ , ಜೀನ್ಸಿನ ಒಳಗಿದ್ದ ಕಾಲುಗಳಿಗೆ,ಶೂಗಳ ಒಳಗಿದ್ದ ಪಾದಕ್ಕೆ ತಾಗಿ ತಾಗಿ ತನ್ನ ಇರುವಿಕೆಯ ಸಾರುತ್ತಿತ್ತು.ಬೀಳೋ ಅಪಾರ ಮಂಜಲ್ಲಿ ಆಗಿನ ಅರುಣೋದಯದ ಸಿರಿಯ ಫೋಟೋಗಳಲ್ಲಿ ಸೆರೆ ಹಿಡಿಯಲು ಕಷ್ಟಕರವಾಗಿದ್ರೂ  ಅದು ಕಣ್ಣು, ಮೈಮನಗಳಲ್ಲಿ ತುಂಬಿ ಕೂತು ಬಿಟ್ಟಿತ್ತು.   
 
ಆ ಚಳಿಗೆ ಸೂರ್ಯನೂ ಸೋಂಬೇರಿಯಾಗಿ ಬಿಟ್ಟಿದ್ದನಾ ಗೊತ್ತಿಲ್ಲ. ಆತ ಕೊನೆಗೂ ನಮ್ಮ ಮುಖ ತೋರಲು ಮನಸ್ಸು ಮಾಡೋ ಹೊತ್ತಿಗೆ ಘಂಟೆ ಆರರ ಮೇಲಾಗಿತ್ತು. ವಾರಾಂತ್ಯದಲ್ಲಿ ಬೆಚ್ಚನೆ ಹೊದ್ದು ಮಲಗೋ ಬದಲು ಇಷ್ಟೆಲ್ಲಾ ಒದ್ದಾಡಿ ಸೂರ್ಯೋದಯವ ನೋಡಬೇಕಾ ಅನಿಸಿತ್ತಾಗ. ಮುಂದೆ ಇದೇ ತರ ಸ್ಕಂಧ ಗಿರಿಗೆ ರಾತ್ರಿಯೇ ಹತ್ತಿ ಅಲ್ಲಿನ ಮುಂಜಾವಿನ ಚಳಿಯಲ್ಲಿ ನಡುಗಿ ಅಂದು ಸೂರ್ಯನ ದರ್ಶನವೇ ಆಗದ ಪ್ರಸಂಗಕ್ಕೆ ಹೋಲಿಸಿದ್ರೆ ಈ ಸೂರ್ಯೋದಯ ನಿಜಕ್ಕೂ ಚೆನ್ನಾಗಿತ್ತು ಅಂತ ಆಮೇಲೆ ಅನಿಸಿದ್ದು ಬಿಡಿ. ಶಾಲಾ ದಿನಗಳಿಂದಲೂ ಈ ಚಳಿ, ಮುಂಜಾನೆ, ಸೂರ್ಯೋದಯ ಅಂದ್ರೆ ಏನೋ ಖುಷಿ. ಐದೂವರೆಗೆ ರೆಡಿಯಾಗಿ ಆಫೀಸಿಗೆ ಹೊರಡಬೇಕಾಗಿದ್ದ ದಿನಗಳು, ಮುನ್ನಾರ್ ಟ್ರಿಪ್ಪು, ಶನಿವಾರ ಏಳೂಮುಕ್ಕಾಲಿಗೆ ಶಾಲೆ ಶುರುವಾಗುತ್ತಿದ್ದ ದಿನಗಳು.. ಹೀಗೆ ಮನಸೋ ಇಚ್ಚೆ ಬೀಳುತ್ತಿದ್ದ ಮಂಜ ನಡುವೆ , ಹತ್ತು ಮೀಟರಿನಾಚೆ ಕಾಣದ ಹಾದಿಯಲ್ಲಿ ಹಾದಿ ಹುಡುಕಿ ನಡೆಯುತ್ತಿದ್ದ ದಿನಗಳ ನೆನೆಸಿಕೊಂಡ್ರೆ ಏನೋ ರೋಮಾಂಚನ. ದೇಶ ಸುತ್ತೋಕೆ, ಓದೋಕೆ, ೧೦ಕೆ ಓಟಕ್ಕೆ ತಯಾರಾಗೋಕೆ  ಅಂತ ಬೆಳಬೆಳಗ್ಗೆಯೇ ಎದ್ದು ಓಡುತ್ತಿದ್ದ ಜೀವವ ನೆನೆದು ಈಗಿನ ವಾಸ್ತವ ಬೇಸರಿಸುತ್ತಿದೆ. ಎರಡು ಭಾನುವಾರಗಳಾದ್ರೂ ರೂಮ ಬಿಟ್ಟು ಎಲ್ಲೂ ಹೊರಹೊರಡದ ಬಗ್ಗೆ ಶಪಿಸುತ್ತಿದೆ. ನೋಡಬೇಕಿದೆ ಹೊಸ ಸೂರ್ಯೋದಯವ.ಹೊಸ ಸ್ಥಳದಲ್ಲಿ ಅದು ಕಟ್ಟಿ ಕೊಡುವ ಸೌಂದರ್ಯವ ಮನತುಂಬಿಸಿಕೊಳ್ಳಲು. ಅದರೊಟ್ಟಿಗಿರುವ ಹಲವು ಭಾವ, ಸಂಸ್ಕೃತಿ, ಆಚಾರಗಳ ಸೊಗಡ ಮೈತುಂಬಿಕೊಳ್ಳಲು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *