ಮೊನ್ನೆ ಆಕಸ್ಮಿಕವಾಗಿ ಗೆಳೆಯನೊಬ್ಬನನ್ನು ಭೇಟಿಯಾದೆ. ಹೇಗಿದೆ ಶಾಲೆ ? ಕ್ಲಾಸಸ್ ಎಲ್ಲಾ ಚೆನ್ನಾಗಿ ನಡೀತಿದೆಯೋ ಎಂದು ವಿಚಾರಿಸಿದೆ. ಅವನು ಸಪ್ಪೆ ಮುಖದಿಂದ ಇಲ್ಲಾ ಕಣೋ ಎರಡು ದಿನದಿಂದ ಜ್ವರ, ಶೀತ ಆಗಿ ಶಾಲೆಗೆ ಹೋಗಿಲ್ಲ ಎಂದು ಹೇಳಿದ. ನಾನು ಅವನಿಗೆ ಆರೋಗ್ಯದ ಮೇಲೆ ನಿಗಾ ಇಡು, ಹಾಗೇ ಶಾಲೆಯನ್ನು ತಪ್ಪಿಸಬೇಡ ಎಂದು ಬುದ್ಧಿ ಹೇಳಿದೆ.
ಮೈ ಕೊರೆಯುವ ಚಳಿ :
ಈ ಕಾಲದಲ್ಲಂತೂ ಕಳೆಗುಂದಿದ ವಾತಾವರಣ, ಹೊರಗೆ ಕಾಲಿಟ್ಟರೆ ಸಾಕು ಮೈ ಕೊರೆಯುವ ಚಳಿ, ಬೆಳಿಗ್ಗೆ ಹಾಸಿಗೆ ಬಿಟ್ಟು ಏಳಲು ಸ್ವಲ್ಪ ಹಿಂಜರಿಕೆ ಆದರೂ ಮನಸ್ಸು ಮಾಡಿ ಸ್ವಲ್ಪ ಬೇಗ ಎದ್ದು ನಿಯಮಿತವಾಗಿ ಯೋಗ, ವ್ಯಾಯಾಮಗಳನ್ನು ಮಾಡುತ್ತಾ ಬೆಳಗಿನ ಹೊತ್ತನ್ನು ಕಳೆಯುವುದರಿಂದ ಇಡೀ ದಿನವನ್ನ ಚೈತನ್ಯದಿಂದ ಹಾಯಾಗಿ ಕಳೆಯಬಹುದು. ಇವೆಲ್ಲದುದರ ನಡುವೆ ಆಹಾರ ಹಾಗೂ ವಿಹಾರಗಳ ಬಗ್ಗೆ ಸ್ವಲ್ಪ ಗಮನ ನೀಡಿದರೆ ಚಳಿಗಾಲ ನಿಜಕ್ಕೂ ಚೇತೋಹಾರಿಯಾಗುತ್ತದೆ.
ನಿಯಮಿತ ಆಹಾರ :
ಚಳಿಗಾಲದಲ್ಲಿ ತುಂಬಾ ಹಸಿವಾಗುತ್ತದೆ. ಹಾಗೆಂದು ಸಿಕ್ಕಿದ್ದನ್ನೆಲ್ಲಾ ತಿಂದು ನಿಮ್ಮ ಆಹಾರವನ್ನು ಕೆಡಿಸಿಕೊಳ್ಳಬೇಡಿ. ಲಘು ಉಪಾಹಾರ ಮಾಡಿ ಆರೋಗ್ಯದಾಯಕವಾದ ಕಿತ್ತಳೆ ಹಣ್ಣನ್ನು ನಿಯಮಿತವಾಗಿ ಸೇವಿಸಿ. ರಾತ್ರಿ ಊಟ ಮಾಡಿದ ನಂತರ ಸ್ವಲ್ಪ ಹೊತ್ತು ಓಡಾಡಿ. ಇದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ದೇಹದ ಉಷ್ಣತೆಗೆ ತಕ್ಕಂತೆ ಆಹಾರ ಸೇವಿಸಿ. ಐಸ್ ಕ್ರೀಮ್, ತಂಪು ಪಾನೀಯಗಳನ್ನು ಹಾಗೂ ಫ್ರಿಡ್ಜ್ ನಲ್ಲಿಟ್ಟಂತಹ ತಿನಿಸುಗಳು ಬೇಡವೇ ಬೇಡ.
ಉಡುಪುಗಳಿಂದ ಚರ್ಮ ರಕ್ಷಿಸಿ :
ನೀವು ಎಲ್ಲಾದರೂ ಹೊರಗೆ ಹೋಗುವಾಗ ಉಣ್ಣೆಯ ಬಟ್ಟೆ ಧರಿಸುವುದು ಅವಶ್ಯಕ. ಈಗಂತೂ ಜ್ವರ, ಶೀತ, ಕೆಮ್ಮು, ನೆಗಡಿ ಹಾಗೂ ಮೈಕೈ ನೋವು ಬರುವುದು ಹೆಚ್ಚು. ಅದಕ್ಕಾಗಿ ಬೆಳಿಗ್ಗೆ ಶೀತಗಾಳಿ ಬೀಸಬಾರದೆಂದು ಮುಖಕ್ಕೆ ಕಿವಿಗೂ ಸೇರಿದಂತೆ ತೆಳುವಾದ ಬಟ್ಟೆಯನ್ನು ಸುತ್ತಿಕೊಳ್ಳಿ. ಇದರಿಂದ ನಿಮ್ಮ ಮುಖವನ್ನು ರಕ್ಷಿಸಬಹುದು. ಚಳಿಗಾಲದಲ್ಲಿ ತ್ವಚೆ ಒಣಗುವುದರಿಂದ ಹಾಲಿನಾಂಶ ಇರುವ ಉತ್ತಮ ಗುಣಮಟ್ಟದ ಕ್ರೀಮ್ ಗಳನ್ನು ಹಚ್ಚಿಕೊಳ್ಳಿ. ದೇಹವು ಬಿರುಸಾಗುವುದನ್ನು ತಪ್ಪಿಸಲು ಸೂಪ್, ಕಾಫೀ, ಟೀ ಇತ್ಯಾದಿ ಬೆಚ್ಚಗಿನ ಪಾನೀಯಗಳನ್ನು ನಿಯಮಿತವಾಗಿ ಸೇವಿಸಿ. ಕಾಯಿಸಿ ಆರಿಸಿದ ನೀರನ್ನೇ ಕುಡಿಯಿರಿ. ಆಹಾರದಲ್ಲಿ ಹೆಚ್ಚಾಗಿ ಮೆಣಸು ಮತ್ತು ಖಾರ ಸೇವಿಸುವುದರಿಂದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಬಹುದು.
ಈ ಚಳಿಗಾಲವು ಅತ್ಯಂತ ಆನಂದದಾಯಕವಾಗಿರಬೇಕೆಂದರೆ ನಿಮ್ಮ ಆರೋಗ್ಯವನ್ನು ಸರಿಯಾಗಿ ನೋಡಿಕೊಂಡು ವೈದ್ಯರಿಂದ ಆದಷ್ಟು ಅಂತರದಲ್ಲಿರಬೇಕು.
ಗಣೇಶ್.ಹೆಚ್.ಪಿ.
10ನೇ ತರಗತಿ
ಸರಕಾರಿ ಪ್ರೌಢ ಶಾಲೆ ಗಿಲ್ಲೇಸೂಗೂರು
ತಾ.ಜಿ.ರಾಯಚೂರು
*****