ಒಂದು ಭಯಂಕರ ದಟ್ಟ ಜಂಗಲ್ ಇತ್ತು. ಆಲ. ಹಲಸು, ಹುಣಸೆ, ಮಾವು ಸೊಗೆ, ದೊಡ್ಡ ದೊಡ್ಡ ಮರ ಇದ್ವು. ಅದೆಷ್ಟು ದಟ್ಟ ಇತ್ತಂದರ. ಮಟಾ ಮಟಾ ಮಧ್ಯಾಹ್ನದಾಗು ಸೂರ್ಯನ ಬೆಳಕಿಗೂ ಒಳಗ ಬರಲಿಕಕ್ಕೆ ಜಾಗ ಇದ್ದಿಲ್ಲ. ಆ ಕಾಡಿನ ತುಂಬ ಪ್ರಾಣಿಗಳು ಭಾಳ ಇದ್ವು. ಕಾಡಿಗೆ ಹಚ್ಚಿ ಇನ್ನೊಂದು ಕಡೆ ಸುಂದರ ಸರೋವರ ಇತ್ತು. ಸರೋವರದ ಇನ್ನೊಂದು ಕಡೆ ಒಂದು ಪುಟ್ಟ ಹಳ್ಳಿ ಇತ್ತು. ಅಲ್ಲಿಯ ಜನ ಯಾವಾಗಲೂ ಕಾಡಿನ ಭಯದಿಂದ ಜೀವ ಕೈಯ್ಯೊಳಗ ಹಿಡಕೊಂಡನ ಜೀವನ ನಡೆಸ್ತಿದ್ರಂತ.
ಆ ಹಳ್ಳಿಯೊಳಗ ಒಬ್ಬಾಕಿ ಅಜ್ಜಿ ಇದ್ಲಂತ. ಆಕಿ ಯಾವಾಗ್ಲು ಎನರೆ ಒಂದು ಕೆಲಸ ಮಾಡ್ಕೋತ, ಹುರುಪಿನಿಂದ ಇರ್ತಿದ್ಲಂತ. ಆಕಿಗೆ ಒಬ್ಬಾಕಿ ಮಗಳಿದ್ಲಂತ. ಮಗಳದು ಮದುವಿ ಆಗಿ ಗಂಡನ ಮನಿಗೆ ಹೋಗಿದ್ಲಂತ. ಕಾಡಿನ ಇನ್ನೊಂದ ಕಡೆ ಊರಾಗ ಮಗಳ ಮನಿ ಇತ್ತಂತ. ಅಜ್ಜಿಗೆ ಮಗಳ ನೆನಪಾದಾಗೆಲ್ಲ ಮಗಳ ಮನಿಗೆ ಹೋಗಿ, ಇದ್ದು, ಊಂಡುತಿಂದು ಸುಖದಿಂದ ಇದ್ದು ಬರ್ತಿದ್ಲಂತ. ಹಿಂಗಿದ್ದಾಗ ಅಜ್ಜಿಗೆ ಮೂರ್ನಾಲ್ಕ ದಿನದಿಂದ ಭಾಳ ಮಗಳ ನೆನಪಾಗ್ಲಿಕತ್ತಿತ್ತಂತ. ಅಷ್ಟನಿಸಿದ್ದಾ ತಡಾ, ಅಜ್ಜಿ ಕೈಚೀಲದೊಳಗ ತನ್ನವು ಒಂದಿಷ್ಟ ಅರಿವಿ, ದಾರಿಗುಂಟ ತಿನಲಿಕ್ಕೆಂತ ತಿನಸಾ ತುಂಬಕೊಂಡು, ಆಜುಬಾಜು ಮನಿಯವರಿಗೆ “ಅಪ್ಪಗೊಳರ್ಯಾ, ನಾ ಮಗಳ ಕಡೆ ಹೊಂಟೆನಿ, ನನ್ನ ಮನಿ ಕಡೆ ಒಂಚೂರ ಲಕ್ಷ ಇರಲಿ ಅಂತ ಹೇಳಿ ಹೋಂಟೆಬಿಟ್ಲು.
ಹಂಗ ನಡಕೋತ ನಡಕೋತ ಕಾಡಿನ ದಾರಿಯೊಳಗ ಬಂದ್ಲು. ದಟ್ಟ ಕಾಡಿನೊಳಗ ಸ್ವಲ್ಪ ದೂರ ಹೊಂಟಾಗ, ಅಚಾನಕ್ ಎದುರಿಗೆ ಒಂದು ದೊಡ್ಡ ಹುಲಿ ಬಂದು ಅಜ್ಜಿ ಮುಂದ ನಿಂತಂತ. ಆ ಹುಲಿ ಅಜ್ಜಿನ್ನ ನೋಡಿ, “ ಏ ಮುದುಕಿ ಎಲ್ಲಿ ಹೊಂಟಿ, ನಂಗೀಗ ಕವಾ ಕವಾ ಹಸಿವ್ಯಾಗೆದ, ನಾ ಇಗ ನಿನ್ನ ತಿಂತೇನಿ” ಅಂತಂತ. ಅದನ್ನ ಕೇಳಿ ಅಜ್ಜಿಗೆ ಭಾಳ ಹೆದ್ರಿಕಿ ಆತಂತ, ಆದ್ರು ಸಂಭಾಳಿಸಿಕೊಂಡು ಧೈರ್ಯಾದಿಂದ ಆ ಹುಲಿಗೆ, “ ಹಮ್ ತಿನ್ನಬೆಕನಿಸದರ ತಿನ್ನೊ ಮಾರಾಯಾ, ಅಷ್ಟಕ್ಕು ನಂದೇನದ, ನಾಳೆ ಸಾಯಾಕಿ ಇವತ್ತ ಸಾಯ್ತೇನಿ ಅಷ್ಟ. ನನ್ನ ತಿನ್ನೊದ್ರಿಂದ ನಿಂಗ ಸಮಾಧಾನ ಆಗ್ತದ ಅಂದ್ರ, ನಂಗು ಖುಷಿ ಅದ. ಆದ್ರ ಈಗ ನನ್ನ ತಿಂದ್ರ ನಿನಗ ಎನು ಮಜಾ ಇರುದಿಲ್ಲ.” ಅಂತ, ಅದಕ್ಕ ಹುಲಿ, ಏ ಎನರೇ ಮಾಡಿ ನನ್ನ ಫಸಾಯಿಸಿ ತಪ್ಪಿಸ್ಕೊಬೇಕಂತ ಮಾಡಿ ಎನ ” ಅಂತು, ಅದಕ್ಕ ಅಜ್ಜಿ “ಇಲ್ಲೊ ಮಾರಾಯಾ ನಿನ್ನಯಾಕ ಫಸಾಯಿಸಲಿ, ಇಗ ತಿಂದ್ರ ನನ್ನ ದೇಹದಾಗ ಎನ ಸಿಗ್ತದ ನಿಂಗ, ಬರೆ ಎಲಬು-ಚಕ್ಕಳ. ಅದರ ಬದ್ಲಿ ನಾಲ್ಕ ದಿನ ತಡಿ, ಮಗಳ ಮನಿಗೆ ಹೋಂಟೆನಿ,ಛೊಲೊ ಛೊಲೊ ರುಚಿ-ಕಟ್ಟು ತಿಂತೇನಿ, ಭಕ್ರಿ-ಬೆಣ್ಣಿ ತಿಂತೇನಿ(ಜೋಳದ ರೊಟ್ಟಿ=ಭಕ್ರಿ), ಮಸ್ತ ಲಠ್ಠ-ಟುಮ್ ಟುಮ್ ಆಗಿ ಬರ್ತೇನಿ ಆವಾಗ ನನ್ನ ತಿನ್ನು” ಅಂತ ಹೇಳಿದ್ಲು. ಅಜ್ಜಿ ಮಾತು ಹುಲಿಗೆ ಖರೆ ಅನ್ನಿಸ್ತು. ಆವಾಗ ಅದು “ ಹಾಂ ಹಾಂ ಆತು ಆತು, ಇಗ ಹೋಗಿ ಲಗೂ ಬಾ, ನಾ ಇಲ್ಲೆ ನಿನ್ನ ದಾರಿ ಕಾಯ್ತೇನಿ, ನನ್ನಿಂದ ತಪ್ಪಿಸ್ಕೊಳ್ಳಿಕ್ಕೆ ನೋಡಬ್ಯಾಡ ಮತ್ತ, ಗೊತ್ತಿಲ್ಲೊ ನಾ ಯಾ ಅಂತ” ಅಂತಂದು ಅಜ್ಜಿ ಗೆ ಹೋಗಲಿಕ್ಕೆ ಬಿಡ್ತು. ಅಜ್ಜಿನು ಹೂಂ ಅಂದು ಲಗು ಲಗು ಮುಂದ ಸಾಗಿ ಹೋದ್ಲು.
ಹಂಗ ಮುಂದ ಸಾಗಬೇಕಾದ್ರ ಅಲ್ಲೊಂದು ತೋಳ ಕೂತಿತ್ತು. ಅದು ಈ ಅಜ್ಜಿನ್ನ ನೋಡಿ, “ಭಾಳ ದಿನ ಆತು ಮನಷ್ಯಾರ ಮಾಂಸ ತಿಂದಿಲ್ಲ “ ಮುದುಕಿ ಮುಂದ ಹೋಗಿ ನಿಂತು ಒದರಿದ್ರಾ ಸಾಕು, ಹೆದರಿ ಸತ್ತಾ ಹೋಗ್ತಾಳ. ಈಕಿನ್ನ ಬಿಡಬಾರದು ಅಂತ, ಅಜ್ಜಿ ಮುಂದ ಹೋಗಿ ನಿಂತು ಜೋರಾಗಿ ಒದರತು. “ ಏ ಮುದುಕಿ ನೀ ಬಂದಿ ಛೊಲೊ ಆತು, ನಾ ಈಗ ನಿನ್ನ ತಿಂತೇನಿ” ಅಂತು. ಅದಕ್ಕ ಅಜ್ಜಿ ಹೆದರದ, ಹುಲಿಗೆ ಹೇಳಿದಂಗ ಹೇಳಿದ್ಲು, ಇಗ ತಿಂದ್ರ ನನ್ನ ದೇಹದಾಗ ಎನ ಸಿಗ್ತದ ನಿಂಗ, ಬರೆ ಎಲಬು-ಚಕ್ಕಳ. ಅದರ ಬದ್ಲಿ ನಾಲ್ಕ ದಿನ ತಡಿ, ಮಗಳ ಮನಿಗೆ ಹೋಂಟೆನಿ,ಛೊಲೊ ಛೊಲೊ ರುಚಿ-ಕಟ್ಟು ತಿಂತೇನಿ, ಭಕ್ರಿ-ಬೆಣ್ಣಿ ತಿಂತೇನಿ(ಜೋಳದ ರೊಟ್ಟಿ=ಭಕ್ರಿ), ಮಸ್ತ ಲಠ್ಠ-ಟುಮ್ ಟುಮ್ ಆಗಿ ಬರ್ತೇನಿ ಆವಾಗ ನನ್ನ ತಿನ್ನು” ಅಜ್ಜಿ ಮಾತು ತೋಳಕ್ಕು ಖರೆ ಅನ್ನಿಸ್ತು. ಆವಾಗ ಅದು “ ಹಾಂ ಹಾಂ ಆತು ಆತು, ಇಗ ಹೋಗಿ ಲಗೂ ಬಾ, ನಾ ಇಲ್ಲೆ ನಿನ್ನ ದಾರಿ ಕಾಯ್ತೇನಿ.” ಅಂತಂದು ಅಜ್ಜಿ ಗೆ ಹೋಗಲಿಕ್ಕೆ ಬಿಡ್ತು.
ಅಜ್ಜಿನು ಹೂಂ ಅಂದು ಲಗು ಲಗು ಮುಂದ ಸಾಗಿ ಮಗಳ ಊರಿಗೆ ಹೋಗಿ ಸೆರ್ಕೊಂಡ್ಲು. ಮಗಳಿಗೂ ಅವ್ವ ಬಂದಿಂದ ನೋಡಿ ಭಾಳ ಖುಷಿ ಆತು. ಅಜ್ಜಿ ಮಗಳ ಮನ್ಯಾಗ ಭಾಳ ಖುಷಿಯಿಂದ ಇದ್ಲು, ರುಚಿ ರುಚಿ ತಿಂದು, ಆರಾಮ ತಗೊಂಡು ಆರೋಗ್ಯದಿಂದ ಮೈಕೈ ತುಂಬಕೊಂಡು ಗುಂಡ ಗುಂಡಗಾದ್ಲು. ಒಂದಿನ ಮಗಳನ್ನ ಕರದು “ ಮಗಳ ನಾ ಬಂದು ಭಾಳ ದಿನ ಆತು ನಾ ಇನ್ನ ಊರಿಗೆ ಹೋಗ್ತೇನಿ, ನೋಡೊಣು ಜೀವಂತ ಆದ್ರ ಮತ್ತ ಭೆಟ್ಟಿ ಆಗೋಣು “ ಅಂದ್ಲು. ಅದಕ್ಕ ಮಗಳು “ಹಿಂಗ್ಯಾಕಂತಿಯವ್ವ ಏನಾತು, ನೀ ಹಿಂಗ ಮಾತಾಡಿದ್ರ ನಂಗ ಭಾಳ ದಃಖ ಆಗ್ತದ ಅಂದ್ಲು. ಅದಕ್ಕ ಅಜ್ಜಿ ಕಾಡಿನ್ಯಾಗ ನಡೆದ ೆಲ್ಲ ಹಕಿಕತ್ತನು ಮಗಳಿಗೆ ಹೆಳಿದ್ಲು. ಅದನ್ನ ಕೇಳಿ ಮಗಳು, “ ಹೇ ಥತ್ತೆರಿಕಿ,, ಇಷ್ಟಕ್ಕೆಲ್ಲಾ ಯಾಕ ಹೇದರತಿಯವ್ವ ತಡಿ ಅಂತ ಹಿತ್ತಲಿಗೆ ಹೋಗಿ, ಒಂದ ದೊಡ್ಡ ಕುಂಬಳಕಾಯಿ ತಂದು ಅಕ್ಕ ತೂತು ತೆಗೆದು, ತಿರುಳೆಲ್ಲ ಖಾಲಿ ಮಾಡಿ ಅದರೊಳಗ ಅಜ್ಜಿನ್ನ ಕೂಡಿಸಿ ಕಳಿಸಿಕೊಟ್ಲು. ಮಗಳು ಎಷ್ಟ ಛೋಲೊ ಉಪಾಯ ಮಾಡ್ಯಾಳ ಅಂತ ಖುಷಿಲೇ ಅಜ್ಜಿ, “ಚಲರೇ ಭೋಪಳ್ಯಾ ಟುಣಕ್-ಟುಣಕ್…….
ಚಲರೇ ಭೋಪಳ್ಯಾ ಟುಣಕ್-ಟುಣಕ್ “ ಅಂತ ಅನ್ಕೋತ ಹೊಂಟ್ಲಂತ. ಹಿಂಗ ಕಾಡದಾರಿಯೊಳಗ ಹೊಂಟಾಗ ಎದುರಿಗೆ ತೋಳಪ್ಪ ನಿಂತಿದ್ನಂತ. ಕುಂಬಳಕಾಯಿ ಮಾರಿ ನೋಡಿ ವಿಚಿತ್ರ ಆಗಿ ಕೇಳ್ತಂತ, “ ಏ ಏ ಅಲ್ಲೆ ಎಲ್ಲರೆ ಮುದುಕಿನ್ನ ನೋಡಿದೇನ?? ಅಂತ ಕೇಳ್ತಂತ. ಅದಕ್ಕ ಆ ಅಜ್ಜಿ, “ ಮುದುಕಿ ಗೊತ್ತಿಲ್ಲ, ಪದಕಿ ಗೊತ್ತಿಲ್ಲ, ಚಲರೇ ಭೋಪಳ್ಯಾ ಟುಣಕ್-ಟುಣಕ್” ಅಂತ ಮುಂದ ಓಡಕೋತ ಹೊಂಟ್ಲಂತ. ಆಕಿ ಹಿಂದ ತೋಳಪ್ಪನು ಬೆನ್ನ ಹತ್ತಿದ್ನಂತ. ಹಂಗ ಮುಂದ ಓಡಿ ಓಡಿ ಬರಬೇಕಾದ್ರ, ಎದುರಿಗೆ ಹುಲಿಯಪ್ಪ ನಿಂತಿತ್ತಂತ. ಅದಕ್ಕೂ ಕುಂಬಳಕಾಯಿ ಮಾರಿ ನೋಡಿ ವಿಚಿತ್ರ ಆಗಿ ಕೇಳ್ತಂತ, “ ಏ ಏ ಅಲ್ಲೆ ಎಲ್ಲರೆ ಮುದುಕಿನ್ನ ನೋಡಿದೇನ?? ಅಂತ ಕೇಳ್ತಂತ. ಅದಕ್ಕ ಆ ಅಜ್ಜಿ, “ ಮುದುಕಿ ಗೊತ್ತಿಲ್ಲ, ಪದಕಿ ಗೊತ್ತಿಲ್ಲ, ಚಲರೇ ಭೋಪಳ್ಯಾ ಟುಣಕ್-ಟುಣಕ್” ಅಂತ ಮುಂದ ಓಡಕೋತ ಹೊಂಟ್ಲಂತ. ಆದ್ರ ಹುಲಿಯಪ್ಪ “ ಏ ಏ ನಿಂದ್ರು, ನೀ ಯಾರು ಅಂತ ಅಡ್ಡಗಟ್ಟಿ ನಿಂತಂತ. ಈಗ ಅಜ್ಜಿಗೆ ಮುಖವಾಡ ತೆಗಿಯಬೇಕಾತು. ಅಜ್ಜಿನ್ನ ನೋಡಿ ಹುಲಿ, “ ಏ ನನಗ ಮೋಸಾ ಮಾಡಿ ಹೊಂಟಿಯೆನು” ಅಂತಂತ.
ಅದಕ್ಕ ಅಜ್ಜಿ, “ ಇಲ್ಲಪ್ಪ ನಾ ಯಾಕ ನಿಂಗ ಮೊಸಾ ಮಾಡ್ಲಿ. ನಾ ಮಾತ ಕೊಟ್ಟಂಗ ನಾಲ್ಕ ದಿನಕ್ಕ ಬಂದೇನಿ. ಈಗ ಈ ತೋಳಪ್ಪ ನು ನನ್ನ ತಿನ್ನಾವಂತ, ನೀನು ನನ್ನ ತಿನಬೇಕಂತಿ, ಈಗ ನಿವಿಬ್ಬರು ನಿರ್ಧಾರ ಮಾಡ್ರಿ ನನ್ನ ಹ್ಯಾಂಗ ತಿಂತೀರಿ ಅಂತ. ಮೊದಲ ನನ್ನ ತಲಿ ಯಾರ ತಿನ್ನೊವರು, ಕಾಲು ಯಾರ ತಿನ್ನೊವರು. ಹೇಳ್ರಿ ಅಂದ್ಲು. ಅದನ್ನ ಕೇಳಿ ಹುಲಿ ಅಂತು, ಹೇ ಯಾರೇನ ಕೇಳೊದು, ನಾ ದೊಡ್ಡಾಂವ ಇದ್ದೆನಿ ರಾಜಾ ಇದ್ದೇನಿ ನಾನಾ ತಲಿ ತನ್ನಾಂವಾ ಅಂತು. ಅದಕ್ಕ ತೋಳ, ಹೇ ಹೇ ಹೇ ನಾ ಯಾಕ ಕಾಲು ತಿನ್ಲಿ. ನಾನೂ ತಲಿನ ತಿನ್ನಾಂವಾ ಅಂತು. ಹಿಂಗ ತೋಳ ಮತ್ತ ಹುಲಿ ಜಗಳಾಡಲಿಕತ್ತಾಗ ಸಮಯಸಾಧಿಸಿ ಅಜ್ಜಿ ದುಡು ದುಡು ಓಡಿ ಹೋಗಿ ತನ್ನ ಮನಿ ಸೇರ್ಕೊಂಡಬಿಟ್ಲಂತ…
## ಅಪಾಯ ಬಂದಾಗ ಉಪಾಯದಿಂದ ಪಾರಾಗಬೇಕು##
******
ವಿ.ಸೂ.: ಮಕ್ಕಳಿಗಾಗಿಯೇ ವಿಶೇಷವಾಗಿ ರೆಕಾರ್ಡ್ ಮಾಡಿರುವ ಸುಮನ್ ದೇಸಾಯಿಯವರ ಧ್ವನಿಯಲ್ಲಿರುವ ಈ ಕತೆ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಈ ಲಿಂಕ್ ನ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ save as ಆಪ್ಷನ್ ನಿಂದ ನಿಮ್ಮ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಕತೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com
super .. naanu nimma dhwaniyalliye kelide.. mundina kathegaagi kaaytaa iddeeni 🙂
EXCELLENT
Thank u Anitha….
hun desayara Lai Bhaari
ಹೊಸಾ ಪ್ರಯೋಗ!
ಸುಮನ್ ಅಕ್ಕ ಕತಿ ಮಸ್ತ್ ಐತಿ… 🙂