ಕಥಾಲೋಕ

ಚದುರಂಗ: ಡಾ. ಗವಿಸ್ವಾಮಿ


ಇಂಟರ್ ಕಾಲೇಜ್ ಚೆಸ್ ಪಂದ್ಯಾವಳಿಯ ಅಂತಿಮ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗುವುದರಲ್ಲಿತ್ತು.
ಆಗಲೇ ಆಸೀನನಾಗಿದ್ದ ಎದುರಾಳಿಯ ಕೈಕುಲುಕಿ ನನ್ನ ಛೇರಿನ ಮೇಲೆ ಕುಳಿತೆ.
ಗಾಂಭೀರ್ಯದ ಉಳಿಯಿಂದ ಕೆತ್ತಿದಂತೆ ಕಾಣುತ್ತಿದ್ದ ಅವನ ಮುಖಚರ್ಯೆ ನನ್ನಲ್ಲಿ ದಿಗಿಲು ಹುಟ್ಟಿಸಿತು. ಸೋಲಿನ ಭಯ ಆವರಿಸಿತು.

ನೀನು ಫೈನಲ್ಲಿಗೆ ತಲುಪಿರುವುದೇ ದೊಡ್ಡ ಸಾಧನೆ.. ಯುವ್ ಹ್ಯಾವ್ ನಥಿಂಗ್ ಟು ಲೂಸ್.. ಗೋ ಎಂಡ್ ಎಂಜಾಯ್ ಯುವರ್ ಗೇಮ್
ಎಂದು ನಮ್ಮ ಲೆಕ್ಚರರ್ ಹೇಳಿದ್ದು ಮನಸ್ಸಿನಲ್ಲಿತ್ತು.

ಹೌದು.ನಾನು ಕಳೆದುಕೊಳ್ಳುವುದು ಏನೂ ಇರಲಿಲ್ಲ. ಇತರರನ್ನು ಮೆಚ್ಚಿಸುವುದಕ್ಕಾಗಿ ಗೆಲ್ಲುವ ಉಮೇದೂ ನನಗಿರಲಿಲ್ಲ.

ಆದರೆ ಅವನೊಬ್ಬನಿಗಾಗಿ ಈ ಪಂದ್ಯವನ್ನು ಗೆಲ್ಲಬೇಕು ಎಂಬ ಛಲ ನನ್ನನ್ನು ಮುಂದಕ್ಕೆ ನೂಕುತ್ತಿತ್ತು.ಮನಸ್ಸಿನ ತಳಮಳ ತಕ್ಕಮಟ್ಟಿಗೆ ತಿಳಿಯಾಯಿತು.

ನನ್ನ ಎದುರಾಳಿ ಬಿಳಿಕುದುರೆಯನ್ನು ನೆಗೆಸುವುದರ ಮೂಲಕ ಫೈನಲ್ಸಿಗೆ ಚಾಲನೆ ನೀಡಿದ.

ನನ್ನ ಗೆಳೆಯನೂ ಸಹಾ ಕುದುರೆ ಹಾರಿಸುವುದರ ಮೂಲಕವೇ ದಂಡಯಾತ್ರೆ ಆರಂಭಿಸುತ್ತಿದ್ದ!

*****

ನಾನು ವಸತಿ ಶಾಲೆಯಲ್ಲಿ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನಮ್ಮ ಹಾಸ್ಟೆಲಿನ ಹುಡುಗರಿಬ್ಬರು ಮೇಣದ ಬತ್ತಿ ಬೆಳಕಿನಲ್ಲಿ ಕಪ್ಪುಬಿಳುಪು ಚೌಕಗಳ ರಟ್ಟಿನ ಮೇಲೆ ತರಾವರಿ ಆಕಾರದ ಕಾಯಿಗಳನ್ನು ಅತ್ತಿತ್ತ ಸರಿಸುತ್ತಿದ್ದರು.

ಕಬ್ಬಡಿಯಲ್ಲಿ ಔಟಾದವರ ಹಾಗೆ ಏಳೆಂಟು ಕಾಯಿಗಳು ಬಾರ್ಡರಿನಲ್ಲಿ ಬಿದ್ದಿದ್ದವು.

ಪಗಡೆಯಾಟವನ್ನು ನೋಡಿದ್ದೆ. 
ಇದ್ಯಾವುದಪ್ಪ ಹೊಸ ಆಟ..ಕುತೂಹಲದಿಂದ ನೋಡತೊಡಗಿದೆ.

ಅವರು ಇನ್ನೊಂದಷ್ಟು ಕಾಯಿಗಳಿಗೆ ಮೋಕ್ಷ ನೀಡಿ ಬೌಂಡರಿಯಾಚೆ ಮಲಗಿಸಿದರು.

ಕೊನೆಗೆ ಒಬ್ಬ ತನ್ನ ಮೂರು ಕಾಯಿಗಳನ್ನು ಇನ್ನೊಬ್ಬನ ಒಂಟಿಕಾಯಿಯ ಹಿಂದೆ ಛೂ ಬಿಟ್ಟು ಅದನ್ನು ಮೂಲೆಗೆ ಸಿಕ್ಕಿಸಿ, ಅದಕ್ಕೆ ಗತಿ ಕಾಣಿಸುವುದರ ಮೂಲಕ ಆಟವನ್ನು ಸಮಾಪ್ತಿಗೊಳಿಸಿದ.ಐದಾರು ದಿನಗಳಲ್ಲಿ ಈ ಆಟದ ಐಡಿಯಾ ತಿಳಿಯಿತು.

ಬೇಸಿಗೆ ರಜೆಯಲ್ಲಿ ಊರಿಗೆ ಬಂದಿದ್ದಾಗ ಊರಿನ  ಗೆಳೆಯರಿಗೆ ಈ ಆಟವನ್ನು ಕಲಿಸಬೇಕೆಂದು ನಿರ್ಧರಿಸಿದೆ.ಇದರಲ್ಲಿ ಸ್ವಾರ್ಥವೂ ಅಡಗಿತ್ತು;ನನಗೂ  ಟೈಂಪಾಸ್ ಆಗುತ್ತಿತ್ತು. ಸ್ಲೇಟೊಂದರ ಮೇಲೆ ಬಳಪದಿಂದ ಬೋರ್ಡು ಬರೆದೆ. ಅಂಗಡಿಯಿಂದ ಸೀಮೆಸುಣ್ಣಗಳನ್ನು ತಂದು ಬಿಲೇಡಿನಿಂದ ಕಾಯಿಗಳನ್ನು ಕೊರೆದೆ. ಉಗಾದಿ ಹಬ್ಬದಲ್ಲಿ ಎತ್ತುಗಳಿಗೆ ತಂದಿದ್ದ ಬಣ್ಣದಲ್ಲಿ ಒಂಚೂರು ಮಿಕ್ಕಿತ್ತು. ಅದನ್ನು ಎಲ್ಲಾ ಕಾಯಿಗಳ ತಲೆಗೆ ಸವರಿ ಅಲಂಕಾರ ಮಾಡಿದೆ.

ಬೋರ್ಡು ಪಾನ್ಸುಗಳೇನೋ ರೆಡಿಯಾದವು. ಆದರೆ ನನ್ನ ಗೆಳೆಯರಾರು ಈ ಆಟವನ್ನು ಕಲಿಯುವ ಆಸಕ್ತಿ ತೋರಲಿಲ್ಲ. ಚಿನ್ನಿದಾಂಡು ಆಡುವುದಕ್ಕೋ ಅಥವಾ ಮಾವಿನ ತೋಪಿನಲ್ಲಿ ಮರಕೋತಿ ಆಡುವುದಕ್ಕೋ ಹೊರಟುಬಿಡುತ್ತಿದ್ದರು. 
ನನಗೆ ಒಬ್ಬಂಟಿಯಾದಂತೆನಿಸಿತು.
ಆಗ ಕೆರೆ ಮಾಳದಲ್ಲಿ ಮುದುಕರ ಸಂಗಡ ಎಮ್ಮೆಗಳನ್ನು ಮೇಯಿಸುತ್ತಾ ಕೂತಿರುತ್ತಿದ್ದ  ನನ್ನ ಇನ್ನೊಬ್ಬ  ದೋಸ್ತು ರವಿಯ ಮನವೊಲಿಸಿ ಆಟದಲ್ಲಿ ತೊಡಗಿಸಿಕೊಂಡೆ. 
ನಾವು ಏರಿ ಕೆಳಗಿನ ಹೊಂಗೆ ಮರದಡಿಯಲ್ಲಿ ಆಡಲು ಶುರು ಮಾಡಿದೆವು. ಚುರುಕು ಬುದ್ಧಿಯ ರವಿಗೆ ಆಟ ಕಲಿಸಲು ಕಷ್ಟವಾಗಲಿಲ್ಲ. 
ಆಟದ ನಿಯಮಗಳನ್ನು ಮೊದಲ ದಿನವೇ ಕಲಿತುಕೊಂಡ.

ಎರಡನೇ ದಿನ, ಆಟದ ಅಆಇಈ ಕಲಿಯುತ್ತಿದ್ದ ನನ್ನ ಗೆಳೆಯನ ಎದುರು ನನ್ನ ಚಮತ್ಕಾರವನ್ನು ಪ್ರದರ್ಶಿಸಬೇಕೆಂಬ ಚಪಲವಾಯಿತು.
ನಾಲ್ಕು ಸ್ಟೆಪ್ಪಿನಲ್ಲೇ ಚೆಕ್ ಮೇಟ್ ಹೇಳಿ ಅವನನ್ನು  ಬೆರಗುಗೊಳಿಸಿದ್ದೆ!

ನನ್ನ ಈ ಚಮತ್ಕಾರ ಹೆಚ್ಚು ದಿನ ನಡೆಯಲಿಲ್ಲ. ಅವನು ನನಗೇ ತಿರುಮಂತ್ರ ಹಾಕುವಷ್ಟು ಮಟ್ಟಿಗೆ ಕಲಿತುಬಿಟ್ಟ.

ಗೆದ್ದಾಗ ಅವನ ಮೊಗದಲ್ಲಿ ಮೂಡುತ್ತಿದ್ದ ನಿಗರ್ವದ ನಗುವಿನಲ್ಲಿ ಮುಗ್ಧ ಸಂಭ್ರಮವಿರುತ್ತಿತ್ತು.

ಸಂಜೆಯ ವೇಳೆ ಪಡಸಾಲೆಯ ಮೇಲೆ ನಾವಿಬ್ಬರೂ ಆಡ್ತಾ  ಕೂತಿದ್ರೆ ದೊಡ್ಡವ್ರು ಚಿಕ್ಕವ್ರು ಅನ್ನದೇ ಎಲ್ಲರೂ  ಗುಂಪುಗೂಡಿ ನೋಡುತ್ತಿದ್ದರು.
ಸುತ್ತಲೂ  ಕುಳಿತಿರುತ್ತಿದ್ದ ದೋಸ್ತುಗಳು, ಏಯ್ ಅಲ್ಲಿ ಆನ ಅದ.. ಮಂತ್ರಿ ತಪ್ಪಸ್ಗ .. ಕುದ್ರ ನಡಸು ಎನ್ನುತ್ತಾ ತುಣ್ಕುಮಿಣ್ಕು ಸೂಚನೆಗಳನ್ನು ಕೊಡುತ್ತಿದ್ದರೆ ಆಟಕ್ಕೆ ಕಳೆಕಟ್ಟುತ್ತಿತ್ತು.

*****

ಈ ಬುದ್ಧಿಜೀವಿ ದೊಡ್ಡ ವ್ಯೂಹವನ್ನೇ ರಚಿಸುತ್ತಿರುವಂತೆ ಕಾಣಿಸುತ್ತಿದೆ.
ಈತ ಕಾಲಾಳನ್ನು ಆಫರ್ ಮಾಡಿದಾಗ ಹಿಂದೆಮುಂದೆ ನೋಡದೇ ಕಬಳಿಸಿದ್ದೆ.
ಮೂರು ನಡೆಗಳ ನಂತರ ಇದರ ಮರ್ಮ ಅರಿವಾಗುತ್ತಿದೆ.
ನನ್ನ ಒಂಟೆ ಅಥವಾ ಕುದುರೆ ಎರಡರಲ್ಲಿ ಒಂದನ್ನು ಕಳೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ನನಗೆ ಫ್ರೆಂಚ್ ಡಿಫೆನ್ಸ್ ,ಸಿಸಿಲಿಯನ್ ಡಿಫೆನ್ಸ್ ಇನ್ನಿತರ ತಂತ್ರಗಳ ಹೆಸರುಗಳು ಮಾತ್ರ ಗೊತ್ತಿದ್ದವು. 

ನನ್ನ ಎದುರಾಳಿ ಇದೇ ರೀತಿಯ ಯಾವುದೋ ತಂತ್ರವನ್ನು ಕರಗತ ಮಾಡಿಕೊಂಡು ನನ್ನ ಮೇಲೆ ಪ್ರಯೋಗಿಸುತ್ತಿದ್ದಾನೇನೋ ಅನ್ನಿಸುತ್ತಿತ್ತು !

ಹೆದರಿದರೆ ಹೊಗೆ ಹಾಕಿಸಿಕೊಳ್ಳುವುದು ಗ್ಯಾರಂಟಿ ಅನ್ನಿಸಿತು. ರಕ್ಷಣಾತ್ಮಕ ಆಟಕ್ಕೆ ರೆಸ್ಟು ನೀಡಿ ನನ್ನ ನ್ಯಾಚುರಲ್ ಗೇಮ್ ಆಡಲು ಶುರು ಮಾಡಿದೆ.

ಮಂತ್ರಿಯ ಎಡಬಲಕ್ಕೆ ಆನೆ ಕುದುರೆಗಳನ್ನು ಬಿಟ್ಟುಕೊಂಡು   ಹರಹರ ಮಹಾದೇವ ಎನ್ನುತ್ತಾ ಎದುರಾಳಿಯ ಕೋಟೆಯ ಮೇಲೆ ಮುಗಿಬಿದ್ದೆ !

*****

ಬೇಸಿಗೆ ರಜೆ ಮುಗಿಯಲು ಮೂರೋ ನಾಲ್ಕೋ ದಿನಗಳು ಬಾಕಿಯಿದ್ದವು. 
ಆವತ್ತು ಬೇಸಿಗೆಯ ಬಿಸಿಲು ನೆತ್ತಿಯ ಮೇಲೆ ಖಾರ ಅರೆಯುತ್ತಿತ್ತು.

ಜೋಳದ ಹೊಲದೊಳಗೆ ರವಿಯ ಅವ್ವ ನೊರೆ ಉಗುಳುತ್ತಾ ಬಿದ್ದಿದ್ದಳು .
ಹುಬ್ಬಿನ ಮೇಲೆ ಹಾವಿನ ಹಲ್ಲುಗಳ ಗುರುತಿನಿಂದ ರಕ್ತ ಜಿನುಗುತ್ತಿತ್ತು.
ಅವಳನ್ನು ಹಕೀಮ್ ಸಾಬರ ಮನೆಯ ಮುಂದಕ್ಕೆ  ತಂದು ಮಲಗಿಸುವುದಕ್ಕೂ , ಗುಟುಕು ಸೂಲು ಹೋಗುವುದಕ್ಕೂ ಸರಿಯಾಯಿತು.

ಜೀವಕ್ಕೆ ಜೀವ ಆಗಿದ್ದಂತ ಅವ್ವಳಿಗೆ  ಹೂಮುಡಿಸಿ ಕೆನ್ನೆಗೆ ಅರಿಷಿಣ ಬಳಿದು  ಮಲಗಿಸಿದ್ದಾಗ , ರವಿಯು  ದೊಡ್ಡ  ಬಿಂದಿಗೆ ತಕ್ಕಂಡು ಕೈಪಂಪಿನಿಂದ ನೀರು ತಂದು ತೊಟ್ಟಿಗೆ  ತುಂಬಿಸ್ತಿದ್ದ.ಅವನನ್ನು ನೀ ಯಾರಾ ಎನ್ನುವವರಿರಲಿಲ್ಲ.

ಆಗ  ಒಬ್ಬ ಪುಣ್ಯಾತ್ಮನಿಗೆ  ಕಳ್ಳು ಚುರ್ಗುಟ್ಬಿದಂತಾಗಿ ಅವನ ಕೈನಿಂದ ಬಿಂದಿಗೆ ಕಿತ್ಗೊಂಡ. ಆಗ ನನ್ನ ತಬ್ಬಲಿ ಗೆಳೆಯ ತನ್ನವ್ವಳ  ಕಾಲ್ದೆಸೆಯಲ್ಲಿ  ಕುಳಿತುಕೊಂಡ .

ಅವ್ವಳನ್ನು ದಿಟ್ಟಿಸುತ್ತಾ ಕೂತವನ ಕಣ್ಣುಗಳಲ್ಲಿ ಒಂದು ಹನಿಯೂ ಇಣುಕಲಿಲ್ಲ. ಅವನ ಕಣ್ಣೀರೆಲ್ಲವೂ ಎದೆಯೊಳಕ್ಕೆ ಇಂಗುತ್ತಿದೆಯೇನೋ ಅನ್ನಿಸುತ್ತಿತ್ತು.

ಚಟ್ಟ ಎತ್ತುವಾಗ ನಾನು ರವಿಯ ಪಕ್ಕದಲ್ಲಿ ನಿಂತಿದ್ದೆ. ನನಗೆ ತಡೆಯಲಾಗದೆ ಅವನ ಕೈಹಿಡಿದು ಅತ್ತುಬಿಟ್ಟೆ. ಅಯ್ಯೋ, ನನ್ನ ಹೆಗಲು ಇನ್ನೊಂದಿಷ್ಟು ಎತ್ತರ ಇರಬಾರದಿತ್ತೇ,ನನಗೂ ತಾಯಿಯಂತಿದ್ದ ರವಿಯ ತಾಯಿಯನ್ನು ಒಂದಿಷ್ಟು ದೂರ ಹೊರಬಹುದಿತ್ತು ಅನ್ನಿಸಿತು.

ಹೆಂಡತಿ ಸತ್ತ ಮೇಲೆ ರವಿಯ ಅಪ್ಪ ಮಿಂಡಗಾತಿ ಮನೆಯಲ್ಲಿ ಖಾಯಮ್ಮಾಗಿ ಮುಳುಗೇಳತೊಡಗಿದ.
ರವಿಗೆ ಆಸರೆಯಾಗಿ ಉಳಿದವಳು ಅಜ್ಜಿ ಒಬ್ಬಳೇ. ಅಪ್ಪ ಆಗಾಗ್ಗೆ ಮನೆಗೆ ಬಂದು ಮುದುಕಿಯ ಕೈಗೆ ಒಂದಿಷ್ಟು ತುರುಕಿ ಹೋಗುತ್ತಿದ್ದ.

*****

"ದೆರ್ ಇಸ್ ಎ ಮೆಥಡ್ ಇನ್ ಮ್ಯಾಡ್'ನೆಸ್" ಎನ್ನುತ್ತಾರೆ.

ನನ್ನ ಮಿಂಚಿನ  ದಾಳಿಯಲ್ಲಿಯೂ ಕೂಡ ನನಗರಿವಿಲ್ಲದ ಯಾವುದೋ ತಂತ್ರ ಅಡಗಿರಲೇಬೇಕು.

ಇಲ್ಲದಿದ್ದರೆ ನನ್ನ ಎದುರಾಳಿ ಆ ಮಟ್ಟಿಗೆ ತತ್ತರಿಸಿ ಹೋಗುತ್ತಿರಲಿಲ್ಲ!

ನೋಡ ನೋಡುತ್ತಿದ್ದಂತೆಯೇ ಆತನ ಕೋಟೆಯನ್ನು ಛಿದ್ರಗೊಳಿಸತೊಡಗಿದೆ.

*****

ರವಿಯ ಅವ್ವ ಸತ್ತು ಮೂರು ವರ್ಷಗಳಾಗಿದ್ದವು.
ಭರಣಿ ಮಳೆಯ ಅಬ್ಬರಕ್ಕೆ ನಮ್ಮೂರಿನ ಕೆರೆ ಕೋಡಿ ಒಡೆದಿತ್ತು .
ಅಂದು  ಮುಂಜಾನೆ ಕೆರೆಯ ಒಳಗಿನಿಂದ ರವಿಯನ್ನು ಹೊತ್ತು ತಂದು ಏರಿಯ ಕೆಳಗೆ ಮಲಗಿಸಿದ್ದರು. ಆಗ ಅವನ ಮುಖದಲ್ಲಿ ಹೂನಗೆ ಅರಳಿತ್ತು.

ತಪ್ಪಿಸಿಕೊಂಡಿದ್ದ ಎಮ್ಮೆಯನ್ನು ಹುಡುಕಲು ಹೋಗಿ ಕತ್ತಲಲ್ಲಿ ಕಾಲು ಜಾರಿ ಕೆರೆಗೆ ಬಿದ್ದನಂತೆ ಎಂಬುದು ಬೀದಿಯಲ್ಲಿ ಕೇಳಿಬರುತ್ತಿದ್ದ ಮಾತು.

ಅವನ ಅಪ್ಪ ಕುಡಿದ ಮತ್ತಿನಲ್ಲಿ ಕಪಾಳಕ್ಕೆ ಹೊಡೆದಾಗ ಒಂದೇ ಏಟಿಗೆ ವಸ್ತು ಹೋಯ್ತಂತೆ, ಆಮೇಲೆ ರಾತ್ರೋರಾತ್ರಿ….ಎಂಬುದು ನಾಲ್ಕು ಗೋಡೆಗಳ ನಡುವಿನ ಗುಸುಗುಸು ಮಾತು.

ಯಾರೂ ಜೋರಾಗಿ ಆಡಲೊಲ್ಲರು, ಮೊದಲೇ ಅವನು ಕಟುಕ.

*****

ಎದುರಾಳಿಯ ಪಡೆಯನ್ನು ಧೂಳೀಪಟ ಮಾಡಿ ಬಾರ್ಡರಿನಲ್ಲಿ ಗುಡ್ಡೆ ಹಾಕಿದೆ .

ಬಟಾಬಯಲಿನಲ್ಲಿ ಒಬ್ಬಂಟಿಯಾಗಿ  ಸಿಕ್ಕಿಕೊಂಡ ರಾಜನನ್ನು ನನ್ನ ಪಾಳೆಯದೊಳಕ್ಕೆ ಎಳೆದು ತಂದು ಚೆಕ್'ಮೇಟ್ ಹೇಳಿದೆ.

ಎಲ್ಲರೂ ಕೈ ಕುಲುಕಿ, ಬೆನ್ನು ತಟ್ಟಿ ಅಭಿನಂದಿಸತೊಡಗಿದರು.

ನನ್ನ ಗೆಳೆಯನ ನೆನಪು ಒತ್ತರಿಸಿ ಬರುತ್ತಿತ್ತು. ಅವನಿದ್ದಿದ್ದರೆ ಅದೆಷ್ಟು ಸಂಭ್ರಮಿಸುತ್ತಿದ್ದನೋ. ಕಣ್ಣ ಹನಿಗಳನ್ನು ತಡೆಯಲಾಗಲಿಲ್ಲ.

ಅವನಿಲ್ಲದೇ ನನ್ನ ಗೆಲುವು ಅನಾಥವಾಗಿದೆ ಅನ್ನಿಸುತ್ತಿತ್ತು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

18 thoughts on “ಚದುರಂಗ: ಡಾ. ಗವಿಸ್ವಾಮಿ

  1. ಡಾಕ್ಟ್ರೇ … ಕಥೆ ಸೂಪರ್…..ನಿರೂಪಣೆಯಲ್ಲೇ ಸೊಗಸಿದೆ…

  2. ಕಥೆಯ ನಿರೂಪಣೆಯ ವಿಭಿನ್ನ ಶೈಲಿ ಇಷ್ಟವಾಯಿತು 🙂

     

  3. ಸೂಪರ್.. ಅಂದ ಹಾಗೆ ಚೆಸ್ ನನ್ನ ಜೊತೆ ಪದೇ ಪದೇ ಸೋಲುತ್ತಿದ್ದನ್ನು ಬರೆದಿಲ್ಲ!!!!!

  4. Balya nenapisuva kathe chennagi moodide. Kateyalli naijatheyide, novide. Chikkandinalli kaalu jaari biddu jeeva kaLedukondidda MURULI emba nanna geLeyena nenapaayitu. Nanninda chess kalitu nannanne solisivu mattakke belididda geLeyarige pattanada professional academy gaLu sikkiddare avaru eega yelli iruttiddaro?

Leave a Reply

Your email address will not be published. Required fields are marked *