ಕಥಾಲೋಕ

ಚಕ್ರ: ಡಾ. ಗವಿಸ್ವಾಮಿ


''ತಾಯವ್ವಾ''

''ಇನ್ನೂ ಆಗಿಲ್ಲ ಕ ನಿಂಗಿ ..  ತಿರ್ಗಾಡ್ಕಂಡ್ ಬಾ ಹೋಗು''

''ಆಗಿದ್ದದೇನೋ ಅಂದ್ಕಂಡು ಕೇಳ್ದಿ ಕನ್ನೆವ್ವಾ … ಇಲ್ಲೇ ಕೂತಿರ್ತಿನಿ ತಕ್ಕಳಿ''

ಒಳಗೆ ಪೇಪರ್ ಒದುತ್ತಾ ಕೂತಿದ್ದವನು ನಿಂಗಿಯ ಸದ್ದು ಕೇಳಿ ಆಚೆ ಬಂದೆ.

ಆವತ್ತು ಗೌರಿ ಹಬ್ಬ.
ಹಬ್ಬಹರಿದಿನಗಳಂದು ಹೊಲಗೇರಿಯ ನಿಂಗಿ ನಮ್ಮ ಕೇರಿಯ ಮನೆಗಳಿಗೆ ಬಂದು ಊಟ ತಿಂಡಿ ಹಾಕಿಸಿಕೊಂಡು ಹೋಗುವುದು ಮಾಮೂಲು.

ಆವತ್ತು ಎಂದಿನಂತೆ ಅದೇ ಹಳೆಯ 
ಬಿದಿರಿನ ಪುಟ್ಟಿಯೊಂದಿಗೆ ಪಡಸಾಲೆಯ ಕೆಳಗಿನ ಮೆಟ್ಟಿಲುಗಳ ಮೇಲೆ ಕೂತಿದ್ದಳು.

ಚಪ್ಪಲಿಗಳನ್ನು ಅಡ್ಡಾದಿಡ್ಡಿಯಾಗಿ ಬಿಟ್ಟಿದ್ದರಿಂದ , ಜಾಗವಿಲ್ಲದೇ ಮುದುರಿಕೊಂಡು ಕೂತಿದ್ದಳು.

ಮೆಟ್ಟಿಲುಗಳನ್ನು ಇಳಿದು ಬಂದು, ಕಾಲಿನಲ್ಲಿ ಚಪ್ಪಲಿಗಳನ್ನೆಲ್ಲಾ ಒಂದು ಬದಿಗೆ ತಳ್ಳಿದೆ.

ಅವಳಿಗೆ ಕೂತುಕೊಳ್ಳಲು ಜಾಗವಾಯಿತು.

''ಅಪ್ಪಾ.. ಚಿಲ್ರ ಕಾಸಿದ್ರ ತತ್ತನೆಪ್ಪ''
ಅಂದಳು.

ಹಾಗೆ ಕೇಳುವಾಗ ಆ ಮುದುಕಿಯ ಕಣ್ಣುಗಳಲ್ಲಿ ಕಾಣುತ್ತಿದ್ದ ದೈನ್ಯತೆ ನನ್ನನ್ನು ಸುಡುವಂತಿತ್ತು.

ನಮ್ಮ ಅವ್ವ ಹೊರಗೂ ಒಳಗೂ ತಿರುಗಾಡುತ್ತಿದ್ದಳು .
ನಮ್ಮವ್ವಳಿಗೆ ಕಾಣದಂತೆ ಹತ್ತರ ನೋಟನ್ನು ಕೊಟ್ಟೆ.
ಅದನ್ನವಳು ಒಮ್ಮೆ ಕಣ್ಣಿಗೊತ್ತಿಕೊಂಡು ಸೆರಗಿಗೆ ಗಂಟು ಹಾಕಿಕೊಂಡಳು.

ಅವಳ ವಿನಯ, ನಿಯತ್ತು , ಭಯ-ಭಕ್ತಿಯಿರುವುದು ನನ್ನನ್ನು ಚಕಿತಗೊಳಿಸಿತು.

ನಮ್ಮ ಮನೆಯ ನಾಯಿ ಕೂಡ ಹೊಸ್ತಿಲ ಬಳಿ ಬಂದು ಒಳಗೆ ಇಣುಕುತ್ತದೆ.
ಆದರೆ ಇವಳು ಮಾತ್ರ ಅಂದಿನಿಂದಲೂ ಕೆಳಗಿನ ಮೆಟ್ಟಿಲಿನಿಂದ ಮೇಲಿನ ಬಂದದ್ದನ್ನು ನಾವು ನೋಡಲೇ ಇಲ್ಲ. 
ತಾನು ಕೀಳು ಜಾತಿಯವಳು ಎಂಬ 
ಪ್ರಜ್ಞೆ ಅವಳ ಅಂತರಾಳದಲ್ಲಿ ಬೇರು ಬಿಟ್ಟಿತ್ತು. 

ನಿಂಗಿಯ ಗಂಡನ ಅಸಲಿ ಹೆಸರು ಅದೇನೋ ನನಗೆ ಗೊತ್ತಿಲ್ಲ .
ನಾನು ಹುಟ್ಟುವ ಮೊದಲೇ ಆತ  ಸತ್ತು ಹೋಗಿದ್ದ.
ಅವನನ್ನು ಊರ ಜನ ಚಕ್ರ ಎನ್ನುತ್ತಿದ್ದರಂತೆ.

ಚಕ್ರನ ಕುಟುಂಬ ಲಾಗಾಯ್ತಿನಿಂದಲೂ ಊರಿನಲ್ಲಿ ಸತ್ತ ದನಗಳನ್ನು ಎತ್ತುತ್ತಾ ಬಂದಿದೆ . 
ಆತ ಸತ್ತ ಮೇಲೆ ಆ ಜವಾಬ್ದಾರಿ ನಿಂಗಿಯ ಹೆಗಲಿಗೆ ಬಿತ್ತು.

ನನಗಿನ್ನೂ ನೆನಪಿದೆ ,ನಾನು ಆಗ ಎರಡನೇ ಕ್ಲಾಸಿನಲ್ಲಿ ಓದುತ್ತಿದ್ದೆ .
ಆವತ್ತು ನಮ್ಮ ಮನೆಯ ಎಮ್ಮೆ ಕರು ಸತ್ತು ಹೋಗಿತ್ತು .
ಆವತ್ತು ನಿಂಗಿ ತನ್ನ ಮಗನೊಂದಿಗೆ ಬಂದು ಎಮ್ಮೆ ಕರುವನ್ನು ಮಂಕರಿಗೆ ಹಾಕಿಕೊಂಡು ಒಯ್ದಿದ್ದಳು.

ಈಗ ಅವಳ ಮಗನಿಗೆ ಮದುವೆಯಾಗಿ ಮಕ್ಕಳಿವೆ.
ಸರಕಾರದವರು ಚಕ್ರನಿಗೆ ಒಂದೆಕರೆ ಜಮೀನು ನೀಡಿದ್ದರಂತೆ.
ಈಗ ಅದು ಮಗನಿಗೆ ಬಂದಿದೆ . 
ಆದರೆ ಆತ ಅದನ್ನು ಎಂದೋ ಮಾಳ ಕೆಡವಿ, ಯಾರದೋ ತೆಂಗಿನ ತೋಟದಲ್ಲಿ ಹೆಂಡ ಇಳಿಸುವ ಕಸುಬು ಶುರುಮಾಡಿದ್ದಾನೆ.
ಇಳಿಸಿದ್ದರಲ್ಲಿ ತಾನೇ ಅರ್ಧ ಬಗ್ಗಿಸುಕೊಳ್ಳುತ್ತಾನೆ. ಉಳಿದದ್ದು ಗಿರಾಕಿಗಳಿಗೆ.

ಯಾರಾದ್ರೂ ನನ್ನ ಮಗನಿಗೆ ಬುದ್ಧಿ ಹೇಳಿ ಎಂದು ಕಂಡ ಕಂಡವರ ಅಲವತ್ತುಕೊಳ್ಳುತ್ತಿರುತ್ತಾಳೆ ನಿಂಗಿ.

ಆದರೆ , ಊರಿನಲ್ಲಿ ತೊಂಭತ್ತು ಭಾಗ ಕುಡುಕರೇ ಇರುವಾಗ ಒಬ್ಬ ಕುಡುಕ ಇನ್ನೊಬ್ಬನಿಗೆ ಅದ್ಹೇಗೆ ಬುದ್ಧಿಮಾತು ಹೇಳಲು ಸಾಧ್ಯ ?!

ಆದ್ರೆ ಆತ ಒಂದು ಕೆಲಸವನ್ನು ಮಾತ್ರ ತುಂಬಾ ನಿಯತ್ತಾಗಿ ಶಿಸ್ತಾಗಿ ಮಾಡುತ್ತಾನೆ.

ಊರಿನ ಸೊಸೈಟಿಗೆ ಅಕ್ಕಿ-ಸೀಮೆಣ್ಣೆ ಬಂದಾಗ , ಹಬ್ಬ ಹರಿದಿನಗಳಂದು ಉತ್ಸವ ನಡೆವಾಗ ಪ್ರತಿ ಕೇರಿಗಳಿಗೂ ಹೋಗಿ ಏರುದನಿಯಲ್ಲಿ ಸಾರಿ ಸುದ್ದಿ ಮುಟ್ಟಿಸುತ್ತಾನೆ.
ಇದೂ ಕೂಡ ಇವರ ಕುಲಕಸುಬು .

ಮೊದಲೆಲ್ಲಾ ನಮ್ಮೂರಲ್ಲಿ ನ್ಯಾಯಪಂಚಾಯ್ತಿಗಳು ಹೆಚ್ಚಿಗೆ ನಡೆಯುತ್ತಿದ್ದವು.
ಆಗ ನಿಂಗಿ ದಿನಾಲೂ ಸಾರಬೇಕಾದ ಸನ್ನಿವೇಶವಿತ್ತು.  

ಈಗಂತೂ ನ್ಯಾಯಪಂಚಾಯ್ತಿಗಳು ಅತಿ ಕಡಿಮೆ ಅನ್ನಬಹುದು .

ಹಾಗಂತ ನಮ್ಮೂರಲ್ಲಿ ವ್ಯಾಜ್ಯಗಳೇ ಇಲ್ಲವೆಂದಲ್ಲ.
ಮೊದಲಿಗಿಂತಲೂ ದುಪ್ಪಟ್ಟಾಗಿವೆ.

ಲಾ ಪಾಯಿಂಟು ಹಾಕುವ ಹೆಡ್ಲಾಂಗುಗಳು ಜಾಸ್ತಿಯಾಗಿರುವುದರಿಂದ , 
ಛೇರ್ಮನ್ರು ಗೌಡಿಕೆಯವರ ಸಮ್ಮುಖದಲ್ಲಿ ನಡೆಯುತ್ತಿದ್ದ ಪಂಚಾಯ್ತಿಗಳು  ಸೀದಾ ಪೋಲೀಸ್ ಠಾಣೆಗಳಿಗೆ ಶಿಫ್ಟಾಗುತ್ತಿವೆ.

ಈಗಿನ ಛೇರ್ಮನ್ನರು ಮತ್ತು ಗೌಡಿಕೆಯವರು ಜೂಜು ಕುಡಿತಕ್ಕೆ ಬಿದ್ದು ಮೊದಲಿನವರಿಗಿದ್ದ ಗತ್ತು-ಗಾಂಭೀರ್ಯವನ್ನು ಕಳೆದುಕೊಂಡಿರುವುದು ಇನ್ನೊಂದು ಕಾರಣವಿರಬಹುದು.

ಒಹ್ ! ಮರೆತೇ ಬಿಟ್ಟಿದ್ದೆ !
ಇನ್ನೇನು ನನ್ನ ಸ್ನೇಹಿತ ಬರುವವನಿದ್ದಾನೆ. 
ಅವನು ನನ್ನ ಚೆಡ್ಡಿದೋಸ್ತು .
ನಮ್ಮಿಬ್ಬರ ನಡುವಿನ ಗೆಳೆತನ ಇಪ್ಪತ್ತು ವರ್ಷಗಳಷ್ಟು ಹಳೆಯದು .
ಇಬ್ಬರೂ ಒಂದೇ ವಸತಿ ಶಾಲೆಯಲ್ಲಿ ಓದಿದೆವು.
ಒಂದೇ ಕಾಲೇಜಿನಲ್ಲಿ ಓದಿದೆವು.

ನಮ್ಮಿಬ್ಬರ ನಡುವಿನ ಗೆಳೆತನ ಗಟ್ಟಿಯಾಗುವುದಕ್ಕೆ ಒಂದು ಘಟನೆ ಕಾರಣ .
ಸುಮಾರು ಹದಿನೆಂಟು ವರ್ಷಗಳ ಹಿಂದೆ ನಡೆದದ್ದು .
ನಾವು ಆಗ ವಸತಿ ಶಾಲೆಯಲ್ಲಿ ಏಳನೇ ಕ್ಲಾಸಿನಲ್ಲಿ ಓದುತ್ತಿದ್ದೆವು.
ನಾವು ಒಂದಿಷ್ಟು ಹೈಕಳು ಗುಂಪು ಕಟ್ಟಿಕೊಂಡು ಪ್ರತಿ ಭಾನುವಾರದಂದು ಕಾಂಪೌಂಡ್ ಹಾರಿ ಕಾಡಿಗೆ ನುಗ್ಗಿಬಿಡುತ್ತಿದ್ದೆವು . 
ಹಾದಿಯಲ್ಲಿ ಸಿಗುತ್ತಿದ್ದ ತೊರೆಗಳಲ್ಲಿ ಮುಳುಗಿ ಆಟವಾಡುತ್ತಿದ್ದೆವು.
ಆಮೇಲೆ ಬೇಲದ ಕಾಯಿ, ನೆಲ್ಲಿಕಾಯಿಗಳ ಬೇಟೆಗೆ ಇಳಿಯುತ್ತಿದ್ದೆವು.
ಆ ಗುಂಪಿನಲ್ಲಿ ನಾವಿಬ್ಬರೂ ಮರ ಹತ್ತುವುದರಲ್ಲಿ ನಿಸ್ಸೀಮರು.
ಹಾಗಾಗಿ ಮೇಲೆ ಹತ್ತಿ ಉದುರಿಸುವುದು ನಮ್ಮ ಕೆಲಸವಾಗಿತ್ತು .. ಉಳಿದವರು ಕೆಳಗೆ ನಿಂತು ಆಯ್ದುಕೊಳ್ಳುತ್ತಿದ್ದರು.

ಆವತ್ತು ಹೀಗೇ ನಾವಿಬ್ಬರೂ ಬೇಲದ ಮರ ಹತ್ತಿ ಬೇಲದ ಕಾಯಿ ಉದುರಿಸುತ್ತಿದ್ದಾಗ , ಇದ್ದಕ್ಕಿದ್ದ ಹಾಗೆ ಕಾಡಿನ ಮೌನ ಕದಡಿದಂತಾಯಿತು.

ಕೆಳಗೆ ಕೂತಿದ್ದ ಹಕ್ಕಿಗಳು ಚಟರಪಟರ ಸದ್ದು ಮಾಡುತ್ತಾ  ಮೇಲೆ ಹಾರಿದವು. 
ಐದಾರು ಮಂಗಗಳು ವಿಕಾರವಾಗಿ ಸದ್ದು ಮಾಡುತ್ತಾ ಮರಕ್ಕೆ ಆತುಕೊಂಡವು.

ಅಷ್ಟರಲ್ಲಿ ಕೆಳಗೆ ನಿಂತಿದ್ದ ನಮ್ಮ ಸ್ನೇಹಿತರು ''ಹುಲಿ ಹುಲಿ ಓಡ್ರುಡೋ''ಎಂದು ಒಂದೇ ಸಮನೇ ಅರಚುತ್ತಾ ಪೇರಿ ಕಿತ್ತರು.

ನನಗೆ ಕೈಕಾಲು ನಡುಗಲು  ಶುರುವಾಯಿತು .
ಅವನ ಮುಖ ನೋಡಿದೆ .
ಆಗ ಅವನು, ತನ್ನ ಬಾಯಿಯ ಮೇಲೆ ಬೆರಳಿಟ್ಟು ''ಶ್'' ಎಂದು ಸನ್ನೆ ಮಾಡಿದ.

ಅಲ್ಲಿ ಹರಿಯುತ್ತಿದ್ದ ಸಣ್ಣ ಝರಿಯತ್ತ ತೋರ್ಬೆರಳಿನಿಂದ ಸನ್ನೆ ಮಾಡಿ ತೋರಿಸಿದ.

ಒಂದು ಭರ್ಜರಿ ಪಟ್ಟೆ ಹುಲಿ ನಮ್ಮ ಕಡೆಗೆ ಬೆನ್ನು ಮಾಡಿಕೊಂಡು ನೀರು ಕುಡಿಯುತ್ತಿತ್ತು.

ನನ್ನ ಸ್ನೇಹಿತ ದೈರ್ಯಶಾಲಿಯಾಗಿರುವುದು ನನಗೆ ಒಂಚೂರು ನೆಮ್ಮದಿ ಮೂಡಿಸಿತು.

ಹುಲಿ ಬಡ್ಡೀಮಗಂದು ನೀರು ಕುಡಿದ ಮೇಲೆ ಕಳಚಿಕೊಳ್ಳದೇ, ಝರಿಯೊಳಗೆ ಮುಳುಗಿ ಆಟವಾಡತೊಡಗಿತು.
ಮರದ ಮೇಲೆ ಕೂತಿದ್ದ ನಮಗೆ ಪ್ರಾಣ ಸಂಕಟ ಶುರುವಾಯಿತು .
ನಮ್ಮನ್ನು ಅರ್ಧ ಗಂಟೆ ಸತಾಯಿಸಿದ ಹುಲಿಯು ಕೊನೆಗೆ ಅಲ್ಲಿಂದ ಕದಲಿತು.
ಅದು ಹಳ್ಳದಗುಂಟ ನಡೆದು ಹೋಗಿ ದೂರದಲ್ಲಿ ಪೊದೆಯೊಳಗೆ ಮರೆಯಾಯಿತು.

ಮೆಲ್ಲಗೆ ಕೆಳಗಿಳಿದೆವು . ಅಷ್ಟೊತ್ತಿಗಾಗಲೇ ಹೃದಯ ಬಾಯಿಗೆ ಬಂದಂತಾಗಿತ್ತು.
ಒಂದಷ್ಟು ದೂರ ಮೆಲ್ಲಗೆ ನಡೆದೆವು.
ಆಮೇಲೆ ಓಡಿದೆವು.ಓಡಿದೆವು.ಓಡಿದೆವು.
ಹೃದಯವನ್ನು ಕೈಯಲ್ಲಿ ಹಿಡಿದು ಓಡಿದೆವು.
ಕಾಂಪೌಂಡ್ ಗೋಡೆ ಕಾಣಿಸಿಕೊಳ್ಳುವವರೆಗೂ ಒಂದೇ ಸಮನೇ ಓಡಿದೆವು.
ಕಾಂಪೌಂಡಿನ ಒಳಗೆ ನೆಗೆದು ಒಬ್ಬರ ಮುಖ ಒಬ್ಬರು ನೋಡುತ್ತಾ ಸುಧಾರಿಸಿಕೊಳ್ಳತೊಡಗಿದೆವು.
ಆವತ್ತಿನಿಂದ ನಮ್ಮ ಗೆಳೆತನ ಗಟ್ಟಿಯಾಯಿತು.

ಅಲ್ಲಿ ಓದು ಮುಗಿಸಿ ಡಿಗ್ರಿ ಕಾಲೇಜಿಗೆ ಸೇರಿದೆವು .
ನಮ್ಮ ಸ್ಕೂಲಿನಲ್ಲಿ ಅನುಭವಕ್ಕೆ ಬಾರದಿದ್ದ ಜಾತಿ-ತಾರತಮ್ಯ , ಮೇಲು-ಕೀಳು ಎಂಬುದು ನಮಗೆ ಆಗ ಪರಿಚಯವಾಗತೊಡಗಿತು. ಇದರ ಹೊರತಾಗಿಯೂ ನಮ್ಮ ಸ್ನೇಹಕ್ಕೆ ಯಾವುದೇ ಚ್ಯುತಿ ಬರಲಿಲ್ಲ . ಏಕೆಂದರೆ ಅದರ ಬುನಾದಿ ಹಾಗಿತ್ತು .

ನಮ್ಮಿಬ್ಬರಿಗೂ ಹೈಸ್ಕೂಲ್ ಶಿಕ್ಷಕರ ಕೆಲಸ ಸಿಕ್ಕಿತು.

ವಿಷಯ ಅದಲ್ಲ.
ಈ ನಿಂಗಿ ಇನ್ನೂ ಕದಲದೇ ಕೂತಿರುವುದು ನನ್ನನ್ನು ಚಿಂತೆಗೀಡುಮಾಡುತ್ತಿದೆ.

ಇನ್ನೇನೋ ನನ್ನ ಸ್ನೇಹಿತಬರುವವನಿದ್ದಾನೆ.
ಆನ್ ದ ವೇ ಎಂದು ಮೇಸೇಜ್ ಬಂದಿದೆ .
ಇವಳು ಚಪ್ಪಲಿ ಬಿಡುವ ಜಾಗದಲ್ಲಿ ಕೂತಿರುವುದನ್ನು ಅವನು  ನೋಡಿಬಿಟ್ಟರೆ ನನ್ನ ಬಗ್ಗೆ ಅವನಿಗೆ ಕೆಟ್ಟ impression ಬರುವುದು ಗ್ಯಾರಂಟಿ .

ನಮ್ಮವ್ವ ಇನ್ನೂ ಒಂದು ಒಬ್ಬೆ ಇಡ್ಲಿ ಯನ್ನೂ ಇಳುಕಿಲ್ಲ. 
ಇವಳಿಗೆ ಬೇಗ ತಿಂಡಿ ಕೊಟ್ಟು ಕಳುಹಿಸಿಬಿಡಬಾರದೇ ಎಂದು ಕೈ  ಹಿಸುಕಿಕೊಳ್ಳುತ್ತಿದ್ದೇನೆ.

ತಿಂಗಳ ಹಿಂದೆ, ನನ್ನ ಇನ್ನೊಬ್ಬ ಸ್ನೇಹಿತನ ಮದುವೆಯಿತ್ತು.

ಅದರ ಹಿಂದಿನ ರಾತ್ರಿ ಲಾಡ್ಜಿನಲ್ಲಿ ನಾನೂ ನನ್ನ ಚೆಡ್ಡಿದೋಸ್ತೂ ಎಣ್ಣೆ ಹಾಕುತ್ತಾ ಕುಳಿತಿದ್ದೆವು.

ಟಿವಿಯಲ್ಲಿ ಒಂದು ಸುದ್ದಿ ಫ್ಲ್ಯಾಶ್ ಆಯ್ತು .
ಕಾಲೇಜಿನಲ್ಲಿ ಓದುತ್ತಿದ್ದ ಲಿಂಗಾಯಿತರ ಹುಡುಗ ದಲಿತರ ಹುಡುಗಿಯನ್ನು  ಪ್ರೀತಿಸಿ , ಮದುವೆ ಮಾಡಿಕೊಂಡು ಮನೆಗೆ ಕರೆದುತಂದಿದ್ದಾನಂತೆ.
ಮದುವೆಯನ್ನು ಒಪ್ಪದ ಹುಡುಗನ ಅಪ್ಪ ಇಬ್ಬರನ್ನೂ ಮನೆಯಿಂದ ಆಚೆ ಇಟ್ಟಿದ್ದಾನಂತೆ.
ಹುಡುಗನ ತಾಯಿಯಂತೂ ಎರಡು ದಿವಸದಿಂದ ಅನ್ನ-ನೀರು ಬಿಟ್ಟು ಮೂರ್ಛೆ ಹೋಗುವ ಹಂತಕ್ಕೆ ತಲುಪಿದ್ದಾಳಂತೆ.
ಅವಳನ್ನೀಗ ಆಸ್ಪತ್ರೆಗೆ ಒಯ್ಯುತ್ತಿದ್ದಾರಂತೆ.

ನಾನು ಚಾನೆಲ್ ಬದಲಾಯಿಸಲು ನೋಡಿದೆ. ಆದರೆ ಅವನು ,ಇರಲಿ ಬಿಡು ಅಂದ.

ಆಗಲೇ ಇಬ್ಬರೂ ಒಂದೊಂದು ಕ್ವಾರ್ಟರ್ ಏರಿಸಿಯಾಗಿತ್ತು.

ನಾವು ಯಾವಾಗಲೂ ಜಾತಿಯ ಬಗ್ಗೆ ಚರ್ಚೆ ಮಾಡಿದ್ದೇ ಇಲ್ಲ , ಎಣ್ಣೆ ಹಾಕಿದಾಗಲೂ ಸಹಾ.

ಆದರೆ ಆವತ್ತು ಅವನೇ ಕೇಳಿದ .
''ನಮ್ಮ ಸಮಾಜ ಇನ್ನೂ ಬದಲಾಗಿಲ್ವಲ್ಲಾ , ಏನಂತೀಯಣ್ಣ ಇದಕ್ಕೆ ?'''

ಆಗ ಅವನು ನನಗೆ ಎದುರಾಳಿಯಂತೆ ಕಾಣತೊಡಗಿದ!

ಎದುರಾಳಿಯ ಮಾತುಗಳಲ್ಲಿ ಸತ್ವ ಇದ್ದಾಗ , ಸತ್ಯ ಇದ್ದಾಗ , ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಯಾವುದೇ ಬಲವಾದ ಕಾರಣ ಸಿಗದೇ ಹೋದಾಗ ವಿತಂಡವಾದಕ್ಕಿಳಿದುಬಿಡುತ್ತೇನೆ.

ಹಾಗಂತ ಇದು ನನ್ನ ಕೆಟ್ಟ ಗುಣ ಅಲ್ಲ . ಆತ ಹೇಳುತ್ತಿರುವುರು ಸತ್ಯ ಎಂಬುದು ನನಗೆ ಗೊತ್ತಿದೆ. ನಾನು ಮನದಲ್ಲಿ ಸೋಲೊಪ್ಪಿಕೊಂಡಾಗಿದೆ.
ಆದರೆ ಹೊರಗೆ ಸೋಲಬಾರದು ಎಂಬ ಹುಂಬತನದಿಂದ ವಿತಂಡವಾದಕ್ಕಿಳಿದುಬಿಡುತ್ತೇನೆ.!

ಆವತ್ತೂ ಅದೇ ವಿತಂಡವಾದಕ್ಕಿಳಿದೆ.

''ನೀವೂ ಸಹಾ ಲೆಫ್ಟಿನವರೊಂದಿಗೆ ಕೊಡೋದು ಕೊಳ್ಳೋದು ಮಾಡಲ್ವಲ್ಲ.. ಅದಕ್ಕೇನಂತೀಯಣ್ಣ?''

ಎಂದು ಹೇಳಿ ಉತ್ತರಕ್ಕೆ ಕಾದೆ.

''ನಮ್ಮಲ್ಲೂ ತಪ್ಪಿದೆ, ಒಪ್ಗತೀನಿ.. ಆದ್ರೆ ಅದಕ್ಕೂ ಇದಕ್ಕೂ ತಳಕು ಹಾಕೋದ್ರಲ್ಲಿ  ಅರ್ಥವಿಲ್ಲ ಅಲ್ವಾ?''

'' ಅರ್ಥ ಇದೆ.. ಅಂಬೇಡ್ಕರ್ ಜಯಂತಿ ದಿವ್ಸ ನಿಮ್ ಬೀದೀಲಿ ಸೀರಿಯಲ್ ಸೆಟ್ ಹಾಕ್ಕೊಂಡು , ಮೈಕ್ ಸೆಟ್ ಹಾಕ್ಕೊಂಡು ಕೂಗುಸ್ತೀರಿ.. ಆದ್ರೆ ಅದೇ ಪಕ್ಕದ ಬೀದಿಲಿರೋ ಜಗಜೀವನ್ ರಾಮ್ ಬೋರ್ಡಿಗೆ atleast ಒಂದು ಹಾರ ಹಾಕಲ್ಲ ನೀವು .. ofcourse ಬಾಬುಜಿ ಜಯಂತಿ ದಿನ ಇದು viceversa repeat ಆಗುತ್ತೆ ಅನ್ನೂ..
ನಿಮ್ಮಲ್ಲೇ ಈ ಜಿದ್ದು ಯಾಕೆ?''
ಚಿಕ್ಕನಾಯಕನ ಹಳ್ಳಿ ಕಡೆ ಎಡಗೈನಲ್ಲಿ ಒಂದು ಸಬ್ಕಾಸ್ಟ್ ಇದೆಯಂತೆ, ಅವರನ್ನು ದಕ್ಕಲಿಗರು ಅಂತಾ ಕರೀತಾರಂತೆ .. ಅವರ ನೆರಳು ಸೋಕಿದರೂ ಎಡಗೈನವರು ಸ್ನಾನ ಮಾಡ್ತಾರಂತೆ.
ಹಾಗಾಗಿ ಆ ಸಮುದಾಯದವರು ಬೆಳಗಿನ ಸಮಯದಲ್ಲಿ ಕಾಣಿಸಿಕೊಳ್ಳುವುದೇ ಇಲ್ವಂತೆ.
ಅವರು ನಿಶಾಚರಿಗಳ ರೀತಿ ರಾತ್ರಿ ಹೊತ್ತು ತಿರುಗಾಡ್ತಾರಂತೆ..''

ಅದಕ್ಕವನು , '' ನೋಡಣ್ಣ , ನೀನು ಎಲ್ಲಿಂದೆಲ್ಲಿಗೋ ಗಂಟ್ಹಾಕ್ತಿದ್ದೀಯಾ .. . ಆದ್ರೆ ನಾನು ಒಂದು ಮಾತು ಹೇಳ್ತೀನಿ ಕೇಳು.. ನೀನು ಹೊಲೆಯನಾಗಿ ಹುಟ್ಟಿದ್ರೆ ನಿನಗೆ ನಮ್ಮ ಕಷ್ಟ ಅರ್ಥ ಆಗಿರೋದು.. ಟೌನಲ್ಲಿ ನಿಮ್ಮವರು ನನಗೆ ಬಾಡಿಗೆ ಮನೆ ಕೊಡ್ಲಿಲ್ಲ ಗೊತ್ತಾ ಗುರು ?
ಈಗ ನಾನು ಬಾಡಿಗೆಗಿರೋದು ನಮ್ಮವರ ಮನೇಲಿ..
ಅದೆಲ್ಲಾ ಬಿಡು, ನಾನು ಡ್ಯೂಟಿ ಮಾಡೋ ಊರಿನ ಮಂದಿಗೂ ನನ್ನ   ಜಾತಿ ಅದ್ಹೇಗೋ ಗೊತ್ತಾಗಿದೆ.. ಮಾತು ಮಾತ್ರ ಬೆಣ್ಣಯಿಂದ ಕೂದಲು ತೆಗೆದಂಗೆ ನಾಜೂಕಾಗಿ ಮಾತಾಡ್ತಾರೆ.. ಆದ್ರೆ ಪ್ಲಾಸ್ಟಿಕ್ ಗ್ಲಾಸಲ್ಲಿ ಟೀಕಾಫಿ ಕೊಡ್ತಾರೆ … ನಾನು ದಿನಾ ಸ್ನಾನ ಮಾಡ್ತೀನಿ ಗುರು.. ನೋಡು ನಾನು ಹಾಕಿರೋ ಬಟ್ಟೆ ಚೆನ್ನಾಗಿಲ್ವ, ನಾನು ವಾಸ್ನೆ ಹೊಡೀತಿದೀನಾ.. ಆದ್ರೂ ಯಾಕೆ ನೀವ್ಗಳು ನಿಮ್ಮ ಬುದ್ಧಿ ಬಿಡಲ್ಲ..  ಇಷ್ಟೇ ಅಲ್ಲ ಗುರೂ.. ಹಳೇದನ್ನೆಲ್ಲ ಗ್ಯಾಪಿಸ್ಕೊಳೋದು ಯಾಕೆ ಬಿಡು''

ನನಗೆ ಆಗ ವಿತಂಡ ವಾದ ಸರಿಯಲ್ಲ ಅನ್ನಿಸಿತು .
ಪ್ರಾಮಾಣಿಕ ದನಿಯಲ್ಲಿ ಮಾತನಾಡಿದೆ.

''ನೋಡಣ್ಣ, ಹಳಬರನ್ನು ಬದಲಾಯಿಸಲು ಸಾಧ್ಯವಿಲ್ಲ ಬಿಡು.
ಅದು ಅವರ ಹಣೆಬರಹ , ಅವರು ಹೀಗೇ ಆಡ್ತಾ ಸಾಯ್ತಾರೆ .
ನಮ್ಮ ತಲೆಮಾರಿನಿಂದ ಬದಲಾವಣೆ ತ�ರೋಣ ಬಿಡು .
ಭರವಸೆ ಕಳ್ಕೋಬೇಡ.''

ಅವನಾಗಲೇ ನಿದ್ರೆಗೆ ಜಾರಿದ್ದ.

ನನ್ನ ಸ್ನೇಹಿತ ಒಮ್ಮೆಯೂ ನನ್ನ ಮನೆಗೆ ಬಂದಿರಲಿಲ್ಲ.
ಅವನನ್ನು ಮನೆಗೆ ಕರೆಯಬೇಕು. ನಮ್ಮ ಮನೆಯ ವಾತಾವರಣ ತೋರಿಸಿ ಅವನನ್ನು ಮೆಚ್ಚಿಸಬೇಕು ಎಂಬ ಹಂಬಲ ಆವತ್ತು ಶುರುವಾಯಿತು .
ಅದರ ಫಲವಾಗಿ ಇವತ್ತು ಗೌರಿ ಹಬ್ಬದ ದಿನ ನಮ್ಮ ಮನೆಗೆ ಬರುತ್ತಿದ್ದಾನೆ.

ಅಯ್ಯೋ ಬಂದೇ ಬಿಟ್ಟ!
ನಿಂಗಿ ಇನ್ನೂ ಮೆಟ್ಟಿಲ ಮೇಲೆ ಕೂತಿದಾಳೆ!

ಅವನು ಶೂ ಕಳಚುತ್ತಿದ್ದರೆ, ಇದ್ಯಾರೋ ಹೊಸ ಸಾಹೇಬರು ಬಂದಿದ್ದಾರಲ್ಲ ಎಂಬಂತೆ ಅವನನ್ನೇ ನೋಡುತ್ತಿದ್ದಳು ನಿಂಗಿ.

ಅವನು ಮೆಟ್ಟಿಲು ಏರುವಾಗ ಅವಳ ಪುಟ್ಟಿಯನ್ನು ಎತ್ತಿ ತೊಡೆ ಮೇಲೆ ಮಡಗಿಕೊಂಡು ಮುದುರಿ ಕುಳಿತು ಅವನಿಗೆ ದಾರಿ ಮಾಡಿಕೊಟ್ಟಳು.

ಆಗ ನನ್ನ ಸ್ನೇಹಿತ ನನ್ನನ್ನೊಮ್ಮೆ ನೋಡಿದ.

ಆ ನೋಟದಲ್ಲಿ ವ್ಯಂಗ್ಯವಿರಲಿಲ್ಲ, ಗೆಲುವಿನ ಅಹಮ್ಮೂ ಇರಲಿಲ್ಲ .

ಆ ನೋಟ ನನ್ನ ಅಂತರಾಳವನ್ನು ಇರಿಯುತ್ತಿತ್ತು.

ಹಜಾರದಲ್ಲಿ ಚಾಪೆಯ ಮೇಲೆ ಇಬ್ಬರೂ ಕುಳಿತೆವು.

ಆಗ ನಮ್ಮವ್ವ ಅಡುಗೆ ಮನೆಯಿಂದ ಹೊರ ಬಂದು ಒತ್ತಾಯದ ಮುಗುಳ್ನಗೆ ತಂದುಕೊಂಡು ನನ್ನ ಸ್ನೇಹಿತನನ್ನು ಸ್ವಾಗತಿಸಿ ಒಳ ಹೋದಳು.

ಎರಡು ಬಾಳೆ ಎಲೆ ಹಾಕಿ ಇಬ್ಬರಿಗೂ ಇಡ್ಲಿ ಬಡಿಸಿ, ಇಡ್ಲಿ ತುಂಬಿದ್ದ ಪಾತ್ರೆ ಹಿಡಿದು ಆಚೆ ಹೋದಳು.

ಇಡ್ಲಿ ಹಾಕುತ್ತಿದ್ದಾಗ ನಿಂಗಿಯ ಪಾತ್ರೆ ಸೋಕಿಬಿಟ್ಟಿರಬೇಕು ಅನ್ನಿಸುತ್ತೆ .
ನಮ್ಮವ್ವ ನಿಂಗಿಯನ್ನು ಗದರುತ್ತಿರುವುದು ಕೇಳಿಸುತ್ತಿತ್ತು.

ನನಗೆ ಬಾಯಿಯಲ್ಲಿ ಕಡುಬಿನ ಬದಲಿಗೆ ಎಕ್ಕಡ ಕಡಿಯುತ್ತಿರುವ ಹಾಗೆ ಅನುಭವವಾಯಿತು.

ನನ್ನ ಸ್ನೇಹಿತನನ್ನು ಒಮ್ಮೆ ಓರೆಗಣ್ಣಿನಿಂದ ನೋಡಿದೆ.

ಅವನು ಕೇಳಿಯೂ ಕೇಳಿಸಿಕೊಳ್ಳದವನಂತೆ ತುಂಬಾ ಘನತೆಯಿಂದ , ಗಾಂಭೀರ್ಯದಿಂದ ತಲೆ ಬಗ್ಗಿಸಿಕೊಂಡು ಇಡ್ಲಿ ತಿನ್ನುತ್ತಿದ್ದ.

ಎಲೆಯಲ್ಲಿದ್ದ ಇಡ್ಲಿಗಳನ್ನು ಖಾಲಿ ಮಾಡುವಷ್ಟರಲ್ಲಿ ಕಲ್ಲನ್ನು ಕಡಿದು ನುಂಗಿದ ಅನುಭವವಾಗಿತ್ತು.

ನಮ್ಮವ್ವಳ ಕಣ್ಣು  ಸನ್ನೆಯಂತೆ ಎಲೆಗಳನ್ನು ಗೋರಿ ತಿಪ್ಪೆಗೆ ಎಸೆದು ಬಂದೆ.

ನಮ್ಮಪ್ಪನೂ ಬಂದ .
ಒಂದಷ್ಟು ಹೊತ್ತು  ಉಭಯಕುಶಲೋಪರಿ ನಡೆದ ಮೇಲೆ ನನ್ನ ಸ್ನೇಹಿತ ಹೊರಡಲನುವಾದ.

ನನಗೆ ಬಾಯಿಗೆ ಬೀಗ ಹಾಕಿದಂತಾಗಿತ್ತು.
ಕಣ್ಣುಗಳಲ್ಲೇ ಮಾತನಾಡಿಸಿ , ಅವನನ್ನು ಬೀಳ್ಕೊಟ್ಟೆ.

ಆಮೇಲೆ ಹೊಲದ ಕಡೆ ಹೋಗಿ ಒಬ್ಬನೇ ಕುಳಿತು ಯೋಚಿಸತೊಡಗಿದೆ.

ನನ್ನ ಸ್ನೇಹಿತ ಆವತ್ತು ಹೇಳಿದ ಮಾತೊಂದು ಚುಚ್ಚುತ್ತಿತ್ತು.

ಅವನು ಹೇಳಿದ್ದು, '' ಅಂಬೇಡ್ಕರ್ ಬಗ್ಗೆ ನೀವ್ಯಾಕೆ ಇಷ್ಟು Possesive ಅಂತೀರಲ್ಲ .. ಅಂಬೇಡ್ಕರರನ್ನು ಯಾಕೆ  ಅಷ್ಟು ಬಿಗಿಯಾಗಿ ಅಪ್ಪಿಕೊಂಡಿದ್ದೀರಿ , ಅವರಿಗೆ ಉಸಿರುಕಟ್ಟುವುದಿಲ್ವಾ ಅಂತಾ ಟೀಕಿಸ್ತೀರಲ್ಲ…

ನಾನು ಹೇಳ್ತೀನಿ ಕೇಳು . ಅದು ಕೇವಲ ಅಭಿಮಾನದ ಅಪ್ಪುಗೆಯಲ್ಲ , ಅದು ಸಾಂತ್ವನ ಬೇಡುವ ಅಪ್ಪುಗೆ..

ಅವರ ಹೆಗಲಿಗೆ ಒರಗಿ ನಾವು ಶತಶತಮಾನಗಳ ನೋವಿನ ಕಥೆ ಹೇಳಿಕೊಳ್ಳುತ್ತಿದ್ದೇವೆ, ನಮ್ಮ ಕಥೆ ಇನ್ನೂ ಮುಗಿದಿಲ್ಲ''

ನಿಜ ಅನ್ನಿಸಿತು .

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ಚಕ್ರ: ಡಾ. ಗವಿಸ್ವಾಮಿ

  1. You have expressed the agony in this unextinct national shame and represented new gen ambiguity in such inexorable situations.
    Very good writing.

Leave a Reply

Your email address will not be published. Required fields are marked *