ಘಟ್ಟ ಉಳಿಸುವ ವರದಿಗೆ ಅಗ್ನಿಸ್ಪರ್ಷ: ಅಖಿಲೇಶ್ ಚಿಪ್ಪಳಿ


ಭಾನುವಾರ ರಜಾದಿನ. ಬಂಧುಗಳೊಬ್ಬರ ಮನೆಯಲ್ಲಿ ಅದೇನೋ ವಿಶೇಷ ಕಾರ್ಯಕ್ರಮವಿತ್ತು, ಮುಗಿಸಿಕೊಂಡು ಬರುವಾಗ ಸಂಜೆ ೫ ಗಂಟೆ. ಪೇಟೆ ಸುಮಾರು ೫ ಕಿ.ಮಿ. ದೂರವಿತ್ತು. ಬರುವ ರಸ್ತೆಯಲ್ಲಿ ವಿಪರೀತ ಹೊಗೆ ತುಂಬಿಕೊಂಡಿತ್ತು. ನಮ್ಮ ಮುಂದೆ ಸಾಗುತ್ತಿದ್ದ ಕಾರು ಮುಂದೆ ರಸ್ತೆ ಕಾಣದೆ ನಿಂತಿತ್ತು. ನೋಡಿದರೆ, ರಸ್ತೆಯ ಪಕ್ಕದ ಕಾಡಿಗೆ ಬೆಂಕಿ ಹಚ್ಚಿದ್ದರು. ಗಾಳಿಯಿಲ್ಲದ ಕಾರಣ ಹೊಗೆ ನಿಧಾನಕ್ಕೆ ಮೇಲ್ಬಾಗದ ರಸ್ತೆಯಲ್ಲಿ ತುಂಬಿಕೊಂಡು ರಸ್ತೆಯನ್ನೇ ಬಂದ್ ಮಾಡಿ ಹಾಕಿತ್ತು. ಅಪಾಯವೇನು ಇರಲಿಲ್ಲವಾದರೂ, ರಸ್ತೆಯೇ ಕಾಣುತ್ತಿರಲಿಲ್ಲ. ಬೈಕಿನಲ್ಲಿ ಮುಂದೆ ಸಾಗಿದವನಿಗೆ ಉಸಿರು ಕಟ್ಟಿತು. ಸುಮಾರು ೧೦೦ ಅಡಿಗಳಷ್ಟು ದೂರ ಹೊಗೆ ಕವಿದಿತ್ತು. ಹೊಗೆಯನ್ನು ದಾಟಿ ಬಂದವನಿಗೆ ಸಾಮಾಜಿಕ ಪ್ರಜ್ಞೆ ಜಾಗೃತವಾಯಿತು. ಅದೊಂದು ರಾಜ್ಯ ಹೆದ್ದಾರಿ, ನೂರಾರು ವಾಹನಗಳು ತಿರುಗಾಡುವ ಈ ರಸ್ತೆಯಲ್ಲಿ ಅಪಘಾತವಾಗುವ ಸಾಧ್ಯತೆಯಿತ್ತು. ಪರಿಹಾರಾರ್ಥವಾಗಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ, ಅವರಿಗೆ ವಿಳಾಸ ಮತ್ತು ಮೊಬೈಲ್ ನಂಬರ್ ಕೊಟ್ಟು ಮನೆಗೆ ಹೋಗುವಷ್ಟರಲ್ಲಿ, ಅನಾಮಧೇಯ ಕರೆಯೊಂದು ಬಂತು. 

ಗುಜರಾತ್, ಮಹಾರಾಷ್ಟ್ರ, ಗೋವ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಹೀಗೆ ಆರು ರಾಜ್ಯಗಳ ವ್ಯಾಪ್ತಿಯಲ್ಲಿ ೧,೨೯,೦೩೭ ಚದರ ಕಿ.ಮಿ. ಹರಡಿಕೊಂಡಿದೆ ಪಶ್ಚಿಮಘಟ್ಟ. ಜಗತ್ತಿನ ೮ ಸೂಕ್ಷ್ಮಾತಿಸೂಕ್ಷ್ಮ ಪ್ರದೇಶಗಳಲ್ಲಿ ಈ ಪಶ್ಚಿಮಘಟ್ಟವೂ ಒಂದಾಗಿದೆ. ಆರು ರಾಜ್ಯಗಳ ೨೫ ಕೋಟಿ ಜನ ಇದರ ಬುಡದಲ್ಲಿ ತಮ್ಮ ಬದುಕು ಕಂಡುಕೊಂಡಿದ್ದಾರೆ. ಗೋದಾವರಿ, ನೇತ್ರಾವತಿ, ಕೃಷ್ಣಾ, ಕಾವೇರಿ ಹೀಗೆ ಹಲವು ಪಶ್ಚಿಮಘಟ್ಟಗಳಲ್ಲೇ ಹುಟ್ಟುತ್ತವೆ. ೧೯೨೦ರಿಂದ ೧೯೯೦ರ  ನಡುವೆ ೭೦ ವರ್ಷಗಳಲ್ಲಿ ೪೦% ಹಸಿರುಚಾವಣಿ ಮಾನವ ಕೇಂದ್ರಿತ ಅಭಿವೃದ್ಧಿಗಾಗಿ ನಾಶವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪಶ್ಚಿಮಘಟ್ಟಗಳ ಸ್ಥಿತಿಗತಿ ಅರಿಯಲು ಪಶ್ಚಿಮ ಘಟ್ಟ ಪರಿಸರ ಎಕ್ಸ್‌ಪರ್ಟ್ ಸಮಿತಿಯನ್ನು ಪ್ರೊ:ಮಾಧವ ಗಾಡ್ಗಿಳ್ ನೇತೃತ್ವದಲ್ಲಿ ರಚಿಸಿತು. ಈ ಸಮಿತಿಯು ೩೧ ಆಗಸ್ಟ್ ೨೦೧೧ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಸ್ಥಳೀಯ ಜನರು ಮತ್ತು ಜನಪ್ರತಿನಿಧಿಗಳನ್ನು ಕೇಳದೇ ಈ ವರದಿಯನ್ನು ತಯಾರಿಸಲಾಗಿದೆ ಹಾಗೂ ಈ ವರದಿಯು ಪಶ್ಚಿಮಘಟ್ಟಗಳಲ್ಲಿ ವಾಸಿಸುವ ಜನರ ಜೀವನದ ದೃಷ್ಟಿಯಲ್ಲಿ ಪಕ್ಷಪಾತಿಯಾಗಿತ್ತು ಎಂಬ ಕೂಗು ಕೇಳಿಬಂತು. ಜನರ ಮತ್ತು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ೧೭ ಆಗಸ್ಟ್ ೨೦೧೨ರಂದು ಬಾಹ್ಯಾಕಾಶ ತಜ್ಞರಾದ ಡಾ:ಕಸ್ತೂರಿರಂಗನ್ ನೇತೃತ್ವದಲ್ಲಿ ಮತ್ತೊಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು. ಈ ಸಮಿತಿಯು ೧೩ ಏಪ್ರಿಲ್ ೨೦೧೩ರಂದು ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಈ ವರದಿಯಲ್ಲಿ ಮುಖ್ಯವಾಗಿ ಗೋವಾದ ೯೯, ಗುಜರಾತ್‌ನ ೬೪, ಕರ್ನಾಟಕದ ೧೫೭೬, ಕೇರಳದ ೧೨೩, ಮಹಾರಾಷ್ಟ್ರದ ೨೧೫೯ ಮತ್ತು ತಮಿಳುನಾಡಿನ ೧೩೫ ಹಳ್ಳಿ ಹೀಗೆ ಒಟ್ಟು ೪,೧೫೬ ಹಳ್ಳಿಗಳನ್ನು ಪಾರಿಸಾರಿಕ ಸೂಕ್ಷ್ಮ ಹಳ್ಳಿಗಳೆಂದು ಘೋಷಿಸಿತು. ಪಶ್ಚಿಮಘಟ್ಟಗಳನ್ನು ಯಾವುದೇ ಕಾರಣಕ್ಕೂ ಹೆಚ್ಚುವರಿಯಾಗಿ ಒತ್ತುವರಿ ಮಾಡುವುದು ಸಲ್ಲ ಎಂಬುದೇ ೨ ವರದಿಗಳ ಒಟ್ಟೂ ಸಾರಾಂಶ.

ಪಶ್ಚಿಮಘಟ್ಟದ ಪ್ರದೇಶವೆಂದರೆ ಹೆಚ್ಚೂ-ಕಡಿಮೆ ಭುವಿಯಲ್ಲಿನ ಸ್ವರ್ಗವೆಂದೇ ಹೇಳಬಹುದು. ಇಲ್ಲಿನ ಅರಣ್ಯಗಳು ಆಮ್ಲಜನಕ ಉತ್ಪಾದಿಸುವ ಅತಿದೊಡ್ಡ ಕಾರ್ಖಾನೆಗಳಂತಿವೆ. ಇವು ನಮಗೆ ಉಚಿತವಾಗಿ ಶುದ್ಧ ಆಮ್ಲಜನಕವನ್ನು ನೀಡುತ್ತವೆ. ಇಲ್ಲಿನ ಘಟ್ಟಪ್ರದೇಶದ ದಟ್ಟಾರಣ್ಯಗಳು ಇಲ್ಲಿನ ಜನರ ಮತ್ತು ಅವಲಂಬಿತ ಪ್ರಾಣಿ-ಪಕ್ಷಿಗಳ ಜೀವಜಲದ ಖಜಾನೆಯಾಗಿದೆ. ಪಶ್ಚಿಮಘಟ್ಟಗಳ ಪಾರಿಸಾರಿಕ ಸೇವೆಯನ್ನು ಹಣದ ರೂಪದಲ್ಲಿ ಅಳೆಯಲು ಯಾವ ಆರ್ಥಿಕ ತಜ್ಞನಿಗೂ ಸಾಧ್ಯವಿಲ್ಲ. ಸದಾ ಹರಿಯುವ ಅಬ್ಬಿನೀರು, ನದಿಗಳು ಇಡೀ ಪ್ರದೇಶದ ಜೀವನಾಡಿಯಂತಿವೆ. ಪಶ್ಚಿಮಘಟ್ಟಗಳ ಮಹತ್ವವನ್ನು ಅರಿಯಬೇಕಾದರೆ ಇಲ್ಲೊಂದು ಉದಾಹರಣೆ ನೀಡುವುದು ಸೂಕ್ತ. ಒಬ್ಬ ಮನುಷ್ಯ ಒಂದು ದಿನದಲ್ಲಿ ೩ ಸಿಲಿಂಡರ್‌ನಷ್ಟು ಆಮ್ಲಜನಕವನ್ನು ಉಸಿರಾಡಲು ಬಳಸುತ್ತಾನೆ. ಇವತ್ತಿನ ದರದಂತೆ ಒಂದು ಆಮ್ಲಜನಕ ಸಿಲಿಂಡರ್ ಬೆಲೆ ರೂ.೭೦೦/- ಅಂದರೆ ಒಬ್ಬ ಮನುಷ್ಯ ಒಂದು ದಿನದಲ್ಲಿ ರೂ.೨೧೦೦ ನಷ್ಟು ಆಮ್ಲಜನಕವನ್ನು ಉಸಿರಾಡುತ್ತಾನೆ. ಮರ-ಗಿಡಗಳಿಂದ ನಮಗೆ ಉಚಿತವಾಗಿ ಆಮ್ಲಜನಕ ದೊರಕದಿದ್ದರೆ, ನಾವೇ ಕೃತಕವಾಗಿ ಉತ್ಪಾದಿಸಿದರೆ, ವರ್ಷಕ್ಕೆ ೭೬೬೫೦೦ ರೂಪಾಯಿಗಳು ಬೇಕಾಗುತ್ತವೆ. ನಮ್ಮಲ್ಲಿ ಅಷ್ಟು ಹಣವಿದೆಯೇ?. ಇದೊಂದು ಕಾರಣ ಸಾಕಲ್ಲವೇ ಪಶ್ಚಿಮಘಟ್ಟಗಳನ್ನು ಉಳಿಸಿಕೊಳ್ಳಲು.

ಮನುಷ್ಯ ಮೂಲತ: ಸ್ವಾರ್ಥಿ ಹಾಗೂ ದೂರದೃಷ್ಟಿಯಿಲ್ಲದವನು ಎಂದು ಹೇಳಲಾಗುತ್ತದೆ. ಪಶ್ಚಿಮಘಟ್ಟಗಳನ್ನು ಇನ್ನಷ್ಟು ದ್ವಂಸ ಮಾಡಿದರೆ ಅಪಾಯ ತಪ್ಪಿದ್ದಲ್ಲ ಎಂದು ಪರಿಸರ ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ. ಪ್ರತೀ ಪಂಚಾಯ್ತಿಗಳಲ್ಲೂ ಸಭೆ ಸೇರಿಸಿ ಡಾ:ಕಸ್ತೂರಿರಂಗನ್ ವರದಿ ಜಾರಿಯಾದರೆ, ಜನಸಾಮಾನ್ಯರ ಬದುಕು ನಾಶವಾಗುತ್ತದೆ ಎಂದು ಬಿಂಬಿಸುತ್ತಿರುವುದು ಜನಪ್ರತಿನಿಧಿಗಳು ಹಾಗೂ ಪುಡಿ ರಾಜಕಾರಣಿಗಳು. ಇವರಿಗೆ ಯಾವ ವರದಿಯ ಬಗ್ಗೆಯೂ ಜ್ಞಾನವಿಲ್ಲ. ಪಶ್ಚಿಮಘಟ್ಟಗಳ ಮಹತ್ವದ ಅರಿವೂ ಇಲ್ಲ. ಇಂತಹ ರಾಜಕಾರಣಿಗಳ ಹಿಂದೆ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿರುವವರು ಯಾರೆಂದು ಕೇಳಿದರೆ, ಅದೇ ಭೂಕಬಳಿಕೆದಾರರು, ನಾಟ ಕಂಟ್ರಾಕ್ಟರುಗಳು, ಬ್ಯೂರೋಕ್ರಸಿಯ ಅಧಿದೇವತೆಗಳಾದ ಅಧಿಕಾರಿಗಳು ಸೇರಿ ಜನಸಾಮಾನ್ಯರನ್ನು ಹಾದಿತಪ್ಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. 

ಆ ಅನಾಮಧೇಯ ಕರೆ ಅಗ್ನಿಶಾಮಕ ದಳದವರ ಕರೆಯಾಗಿತ್ತು. ಆ ಕಡೆ ದ್ವನಿಯಲ್ಲಿ ಅಸಮಧಾನವಿತ್ತು. ಎಲ್ಲೀದ್ದೀರಿ ಎಂದು ಕೇಳಿತು. ಮನೆಗೆ ಬಂದಾಯಿತು ಎಂದು ಉತ್ತರಿಸಿದೆ. ತಕ್ಷಣ ಬನ್ನಿ ಎಂಬ ಆದೇಶ ಬಂತು. ನೋಡಿ ಬೆಂಕಿ ಹತ್ತಿದ ಸ್ಥಳದಿಂದ ಸುಮಾರು ಹದಿನಾರು ಕಿ.ಮಿ. ದೂರದಲ್ಲಿದ್ದೇನೆ, ಈಗ ಬರುವುದು ಕಷ್ಟ ಎಂದೆ. ಅದಕ್ಕವರು ನೋಡಿ ಅಗ್ನಿಶಾಮಕ ದಳಕ್ಕೆ ಕರೆ ಮಾಡುವಾಗ ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಿ, ಇಲ್ಲಿ ಬೆಂಕಿ ಎಲ್ಲಿದೆ? ಪಕ್ಕದಲ್ಲಿ ಬೋರ್‌ವೆಲ್ ಕೊರೆಯುತ್ತಿದ್ದಾರೆ, ಅದರಿಂದ ಬಂದ ದೂಳಿನಿಂದ ರಸ್ತೆಗೆ ಅಡಚಣೆಯಾಗಿದೆ ಎಂದು ದಬಾಯಿಸಿದರು. ಬೆಂಕಿಯ ಹೊಗೆ ಯಾವುದು ಅಥವಾ ಬೋರ್‌ವೆಲ್‌ನಿಂದ ಬರುವ ದೂಳು ಯಾವುದು ಎಂಬ ವ್ಯತ್ಯಾಸ ಗೊತ್ತಿಲ್ಲದಷ್ಟು ನನ್ನ ಬುದ್ಧಿಗೆ ಮಂಕು ಕವಿಯಿತೆ ಎಂದುಕೊಂಡೆ. ಮನಸ್ಸು ತಡೆಯದೇ ಮತ್ತೆ ಹದಿನಾರು ಕಿ.ಮಿ. ವಾಪಾಸು ಅದೇ ಜಾಗಕ್ಕೆ ಹೋದೆ. ರಸ್ತೆಯಲ್ಲಿ ಯಾವುದೇ ರೀತಿಯ ಹೊಗೆ ಮುಸುಕು ಹಾಕಿಕೊಂಡಿರಲಿಲ್ಲ. ಹೊಗೆ ಬರುವ ದಿಕ್ಕಿನಿಂದ ವಿರುದ್ಧ ದಿಕ್ಕಿನಲ್ಲಿ ರಸ್ತೆಯ ಪಕ್ಕದಿಂದ ಸುಮಾರು ೫೦೦ ಅಡಿ ದೂರದಲ್ಲಿ ಬೋರ್‌ವೆಲ್ ರಿಗ್ ಸದ್ದು ಮಾಡುತ್ತಿತ್ತು. ಕಾಡಿಗೆ ಬೆಂಕಿ ಹಾಕಿದವರು ಅಪಾಯವನ್ನು ಗ್ರಹಿಸಿ ಪರಾರಿಯಾಗಿದ್ದರು. ಬೆಂಕಿಯ ಕುರುಹುಗಳು ಕಾಣದಂತೆ ಮಣ್ಣಿನಿಂದ ಮುಚ್ಚಿಹಾಕಿದ್ದರು. ಆದರೆ ಸುಟ್ಟ ಕಮಟು ವಾಸನೆಯಿತ್ತು. ಇದಾದ ಮೇಲೆ ಅಗ್ನಿಶಾಮಕ ದಳದವರಿಗೂ ನನಗೂ ಫೋನಿನಲ್ಲೇ ಶರಂಪರ ಜಗಳವಾಯಿತು. ನನ್ನ ಈ ವರ್ತನೆಯನ್ನು ನಿರೀಕ್ಷೆ ಮಾಡಿರದ ಅಗ್ನಿಶಾಮಕ ದಳದ ಮಾತನಾಡುವ ಶೈಲಿಯೇ ಬದಲಾಯಿತು. ತಮ್ಮ ವೃತ್ತಿಯ ಸಂಕಟಗಳನ್ನು ತೋಡಿಕೊಂಡು ಪ್ರಕರಣಕ್ಕೊಂದು ತೇಪೆ ಹಾಕಿದರು. ಮರುದಿನದ ತನಿಖೆಯಿಂದ ತಿಳಿದು ಬಂದ್ದಿದ್ದೇನೆಂದರೆ, ಭೂಮಾಫಿಯಾದವರು ಹಳ್ಳಿಯವರನ್ನು ಬಿಟ್ಟು ಕಾಡನ್ನು ಸುಡಿಸುತ್ತಿದ್ದರು. ರಸ್ತೆಬದಿಯಲ್ಲಿರುವ ಸರ್ಕಾರಿ ಜಾಗದಲ್ಲಿರುವ ಕಾಡನ್ನು ಸುಟ್ಟು, ಅಲ್ಲಿ ಜೋಳವನ್ನೋ, ಶುಂಠಿಯನ್ನೋ ಬೆಳೆದು, ದರಖಾಸ್ತು ಅರ್ಜಿ ಹಾಕಿಸಿ, ಕಂದಾಯ ಇಲಾಖೆಗೆ, ಅರಣ್ಯ ಇಲಾಖೆಗೆ ಅಷ್ಟಿಷ್ಟು ಮೇಯಿಸಿ, ಜಾಗವನ್ನು ಖಾತೆ ಮಾಡಿಸಿಕೊಳ್ಳುವುದು. ಆಮೇಲೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಜಾಗವನ್ನು ಭೂಮಾಫಿಯಾದವರಿಗೆ ಮಾರುವುದು, ಇದು ಒಳಹುನ್ನಾರ. ಇದಕ್ಕೆ ನಮ್ಮ ಘನಜನಪ್ರತಿನಿಧಿಗಳ ಭರಪೂರ ಪ್ರೋತ್ಸಾಹವೂ ಸಿಗುತ್ತದೆ. ನಿಷ್ಠಾವಂತ ಅಧಿಕಾರಿಯೇನಾದರೂ ತಕಾರಾರು ತೆಗೆದರೆ, ಇದ್ದೇ ಇದೆಯಲ್ಲ ವರ್ಗಾವಣೆಯೆಂಬ ಅಸ್ತ್ರ.

ಹೀಗೆ ದಿನನಿತ್ಯ ಪಶ್ಚಿಮಘಟ್ಟಗಳ ಕಾಡುಗಳನ್ನು ಸುಟ್ಟು ಹಾಕಲಾಗುತ್ತಿದೆ. ಕೆಲವು ಹಳ್ಳಿಗಳಲ್ಲಿ ಅರಣ್ಯ ಪ್ರದೇಶವನ್ನು ತಮ್ಮ ಆಜನ್ಮ ಶತ್ರು ಎಂಬಂತೆ ನೋಡುತ್ತಾರೆ. ರಾತ್ರಿ ಬೆಳಗಾಗುವುದರೊಳಗಾಗಿ ಕಾಡಿಗೆ ಕಾಡನ್ನೇ ಸುಟ್ಟು ಹಾಕಲಾಗುತ್ತಿದೆ. ಯಾರೂ ಯಾರನ್ನೂ ಕೇಳುವ ಹಾಗಿಲ್ಲ. ಅರಣ್ಯ, ಜೀವಿವೈವಿಧ್ಯ, ಜೀವಜಲ, ಶುದ್ಧಗಾಳಿ, ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ವಾದ ಮಾಡುವವರನ್ನು ಸಮಾಜದ್ರೋಹಿಗಳೆಂದು ಬಿಂಬಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಆಳುವವರ ದಬ್ಬಾಳಿಕೆಯಿಂದ ಅರಣ್ಯ ರಕ್ಷಿಸುವ ಇಲಾಖೆಯೂ ಗಾಂಧಾರಿಯಂತೆ ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿದೆ. ಈಗ ಲಭ್ಯವಿರುವ ೬೯ ಲಕ್ಷ ಹೆಕ್ಟೆರ್ ಅರಣ್ಯ ಪ್ರದೇಶದಲ್ಲಿ ೮.೩೫ ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮಾತ್ರ ದಟ್ಟಾರಣ್ಯವಿದೆ. ೨೦ ಲಕ್ಷ ಹೆಕ್ಟರ್‌ಗಳು ಏಕಜಾತಿಯ ನೆಡುತೋಪುಗಳಿಂದ ಕೂಡಿದೆ. ಅರಣ್ಯವೆಂದು ಕರೆಯಲ್ಪಡುವ ಉಳಿದ ಪ್ರದೇಶದಲ್ಲಿ ಅರಣ್ಯಗಳು ವಿರಳವಾಗಿವೆ.

ಚಿಕ್ಕಮಗಳೂರು ಜಿಲ್ಲೆಯ ಪಂಡರಾಪುರದಲ್ಲಿ ಕೆಲವು ದಿನಗಳ ಹಿಂದೆ ವ್ಯಾಘ್ರವೊಂದು ಮಹಿಳೆಯೊಬ್ಬರನ್ನು ಕೊಂದು ಹಾಕಿತು. ಜನ ಆಕ್ರೋಶಗೊಂಡರು. ಅರಣ್ಯ ಇಲಾಖೆ ಹರಸಾಹಸಪಟ್ಟು ನರಭಕ್ಷಕವೆಂದು ಕರೆಯಲಾಗುವ ಹುಲಿಯನ್ನು ಹಿಡಿದು ದಾಂಡೇಲಿಗೆ ದಟ್ಟಾರಣ್ಯಕ್ಕೆ ಬಿಟ್ಟರಾದರೂ, ಅಲ್ಲಿನ ಜನ ತಮ್ಮ ಕಾಡಿನಲ್ಲಿ ಹುಲಿಯನ್ನು ಬಿಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಯಾವುದೇ ವನ್ಯಪ್ರಾಣಿ ಮನುಷ್ಯನ ವಸತಿಪ್ರದೇಶಕ್ಕೆ ಬಂದು ದಾಳಿ ಮಾಡುತ್ತದೆ ಎಂದರೆ, ಅದಕ್ಕೆ ಕಾಡಿನಲ್ಲಿ ಆಹಾರದ ಕೊರತೆಯಿದೆ ಎಂದೇ ಅರ್ಥೈಸಬೇಕಾಗುತ್ತದೆ. ಕಾಡಿನ ವ್ಯಾಪ್ತಿ ಕಡಿಮೆಯಾದಂತೆ, ವನ್ಯಜೀವಿಗಳ ಜೀವಭದ್ರತೆಯೂ ಅಪಾಯಕ್ಕೆ ಸಿಲುಕುತ್ತದೆ. ಒಂದೋ ಕಾಡಿನಲ್ಲಿ ಆಹಾರವಿಲ್ಲದೇ ಸಾಯುತ್ತವೆ. ಇಲ್ಲವೇ ಮನುಷ್ಯ ವಸತಿ ಪ್ರದೇಶಕ್ಕೆ ದಾಳಿಯಿಡುವ ಅಪಾಯಕಾರಿ ಮಾರ್ಗ ಹಿಡಿದು ಅವಸಾನ ಹೊಂದುತ್ತವೆ. ಪ್ರತಿನಿತ್ಯ ಮಾನವ-ವನ್ಯಜೀವಿ ಸಂಘರ್ಷಗಳ ಘಟನೆಗಳು ವರದಿಯಾಗುತ್ತವೆ. ಇದೀಗ ದಾಂಡೇಲಿಯ ಕಾಡಿಗೆ ಬಿಡಲಾದ ಹುಲಿಯನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಅಲ್ಲಿನವರು ಒತ್ತಡ ಹೇರುತ್ತಿದ್ದಾರೆ. ಮತ್ತೆ ಆ ಹುಲಿಯನ್ನು ಹಿಡಿಯಲು ಅರಿವಳಿಕೆಯನ್ನು ಪ್ರಯೋಗ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹುಲಿಯೇನಾದರೂ ಸತ್ತರೆ, ಆ ಸಾವಿಗೊಂದು ಕಾನೂನಿನ ಮಾನ್ಯತೆ ಸಿಗುತ್ತದೆ. ಹೇಗಿದೆ ನೋಡಿ ನಮ್ಮ ವನ್ಯಪ್ರಾಣಿಗಳೆಡೆಗಿನ ತಾರತಮ್ಯ.

ಜಪಾನ್, ಜರ್ಮನ್‌ನಂತಹ ದೇಶಗಳಿಗೆ ನಮ್ಮ ಪಶ್ಚಿಮಘಟ್ಟಗಳ ಮಹತ್ವದ ಅರಿವಿದೆ. ಇದನ್ನು ಉಳಿಸಲು ಈ ಹಿಂದೆ ಬೇಕಾದಷ್ಟು ಹಣ ಸಹಾಯವನ್ನು ಮಾಡಿದ್ದಾರೆ. ಯುನೆಸ್ಕೂ ಪಶ್ಚಿಮಘಟ್ಟಗಳನ್ನು ವಿಶ್ವಪಾರಂಪಾರಿಕ ಪಟ್ಟಿಯಲ್ಲಿ ಸೇರಿಸಿದೆ. ಹೀಗೆ ಇಡೀ ವಿಶ್ವಕ್ಕೆ ಅನಿವಾರ್ಯವಾದ ಈ ಘಟ್ಟಗಳನ್ನು ನಮ್ಮವರು ಎಗ್ಗಿಲ್ಲದೆ ದ್ವಂಸ ಮಾಡುತ್ತಿದ್ದಾರೆ. ರಾಜಕಾರಣಿಗಳಂತೂ ಓಟಿಗಾಗಿ ಏನೂ ಮಾಡಲು ಸಿದ್ಧ ಎಂಬಂತೆ ವರ್ತಿಸುತ್ತಿದ್ದಾರೆ. ದುರಾಸೆಯ ಕಾರ್ಪೊರೇಟ್ ವಲಯ, ದುರಾಲೋಚನೆಯುಳ್ಳ ಆಡಳಿತ ಚುಕ್ಕಾಣಿ, ದೂರದೃಷ್ಟಿಯಿಲ್ಲದ ಜನತೆಯಿಂದಾಗಿ ಪಶ್ಚಿಮಘಟ್ಟಗಳು ನಲುಗುತ್ತಿವೆ. ಪಶ್ಚಿಮಘಟ್ಟವೆಂಬ ಚಿನ್ನದ ಕೋಳಿಯನ್ನು ಕೊಯ್ಯಲು ಎರಡಲುಗಿನ ಚೂರಿಯನ್ನು ಕೇಂದ್ರ ಮತ್ತು ರಾಜ್ಯಸರ್ಕಾರಗಳು ಮಸೆಯುತ್ತಲೇ ಇವೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಗುರುಪ್ರಸಾದ ಕುರ್ತಕೋಟಿ

ಪ್ರಿಯ ಅಖಿಲೇಶ್, ಲೆಖನ ಚೆನ್ನಾಗಿದೆ! ದೂರದೃಷ್ಟಿಯಿಲ್ಲದ ಮನುಷ್ಯ ಪ್ರಾಣಿಗಳ ಈ ವರ್ತನೆ ತುಂಬಾ ದುರದೃಷ್ಟಕರ! 

1
0
Would love your thoughts, please comment.x
()
x