ಗಿರೀಶ ಕಾಸರವಳ್ಳಿಯ “ಘಟಶ್ರಾದ್ಧ” ನನ್ನ ಕತೆಯ ಜೊತೆ ಅತ್ಯಂತ ನಿಕಟವಾದ ಸಂಬಂಧ ಇಟ್ಟುಕೊಂಡಿದೆ. ನಾನು ಬೆಳೆದ ಪರಿಸರ ಗಿರೀಶ ಕಾಸರವಳ್ಳಿ ಬೆಳೆದ ಪರಿಸರಗಳ ನಡುವೆ ಅನೇಕ ಸಾಮ್ಯಗಳಿವೆ. ಒಬ್ಬ ಹುಡುಗ ಬೆಳೆದು ದೊಡ್ಡವನಾಗುವ ಕಷ್ಟ, ಮುಗ್ಧತೆ ಕಳೆದುಕೊಳ್ಳಬೇಕಾದ ಅನಿವಾರ್ಯ, ಅದರ ಸಂಕಟ, ನೈತಿಕ ಪ್ರಜ್ಞೆ ಬೆಳೆಸುವ ಮಾನವೀಯ ಸಂಬಂಧಗಳಲ್ಲಿ ಹುಟ್ಟುವ ತೊಡಕುಗಳು – ಇಂಥ ವಿಷಯಗಳಲ್ಲಿ ನನ್ನ ಅನುಭವಗಳೆಲ್ಲ ತನ್ನ ಸ್ವಂತ ಅನುಭವಗಳು ಎನ್ನುವಂತೆ ಗಿರೀಶ ಕಾಸರವಳ್ಳಿ “ಘಟಶ್ರಾದ್ಧ ” ಮಾಡಿದ್ದಾರೆ. – ಯು.ಆರ್.ಅನಂತಮೂರ್ತಿ
ಸಾರ್ವಕಾಲಿಕವಾದದ್ದು ಯಾವಾಗ ಕಂಡರೂ, ಕಾಣಿಸಿದರೂ ಹೊಸ ವೇದನೆಯೊಂದಕ್ಕೆ ಪ್ರತ್ಯುತ್ತರವಾಗಿ, ಪ್ರಶ್ನೆಯಾಗಿ, ತಾತ್ಕಾಲಿಕ ಶಮನದ ಚಿಕಿತ್ಸೆಯಾಗಿ, ಬಿಡುಗಡೆಯ ಬುನಾದಿಯಾಗಿ ತನ್ನ ಚಲುವನ್ನು ಸ್ವಾರಸ್ಯವನ್ನೂ ಸೂಸುತ್ತಲಿರುತ್ತದೆ. ಕಲಾಕೃತಿಯೊಂದರ ಬಹುಗುಣದ ವ್ಯಾಪ್ತಿಯು ಬಹು ಆಯಾಮದ ನೋಟಗಳು ಮತ್ತೆ ಮತ್ತೆ ಕಾಡಲಾರಂಭಿಸುತ್ತವೆ. ಕುರೊಸವ, ಬರ್ಗಮನ್, ಸತ್ಯಜಿತ್ ರೇ, ಜಾಫರ್ ಫನಾಹಿಯ, ಡೇವಿಡ್ ಲೀನ್, ಋತ್ವಿಕ್ ಘಟಕ್ ಇಂಥದೇ ಸದಭಿರುಚಿಯ ನಿರ್ದೇಶಕರ ದೊಡ್ಡದೊಂದು ದಂಡು ಸಿನೆಮಾದ ಸಾಧ್ಯತೆಗಳ ಕುರಿತು ಅಧ್ಯಯನ ನಡೆಸಿದೆ. ಅಂಥವರ ಸಾಲಿನಲ್ಲಿ ಕನ್ನಡದ ಕೆಲವು ನಿರ್ದೇಶಕರೂ ಇದ್ದಾರೆ. ಸಿನೆಮಾ ಬರೀ ಕಲೆಯಲ್ಲ ಅದು ವಿಜ್ಞಾನ, (ಟೂರಿಂಗ್ ಟಾಕೀಸ್) ದೃಶ್ಯ, ವಿನ್ಯಾಸ, ಜೋಡಣೆಗಳ ವಿಜ್ಞಾನವೆ ಹೌದು. ಕನ್ನಡದಲ್ಲಿ ಅಂಥ ಸಿನಿಮಾ ಧ್ಯಾನಿ ಎಂದರೆ ಗಿರೀಶ ಕಾಸರವಳ್ಳಿಯವರು. ನೂರು ವರ್ಷಗಳಲ್ಲಿ ಬಂದಿರುವ ಜಗತ್ತಿನ ಅತ್ಯುತ್ತಮ ಇಪ್ಪತ್ತು ಚಿತ್ರಗಳಲ್ಲಿ ಅವರ ಘಟಶ್ರಾದ್ಧ ಕೂಡ ಒಂದಾಗಿ ಜಾಗತಿಕ ಮನ್ನಣೆ ಪಡೆದಿದೆ. ಘಟಶ್ರಾದ್ಧ ಕತೆಯ ಕಾಲ ಸ್ವಾತಂತ್ರ್ಯಪೂರ್ವದ 1920ರ ದಶಕದ್ದು.
ಉಡುಪರ ಮಗಳು ಯಮುನಕ್ಕ ಬಾಲ ವಿಧವೆ. ಆಕೆ ಕಳ್ಳ ಸಂಬಂಧದಲ್ಲಿ ಬಸುರಿಯಾಗಿದ್ದಾಳೆ. ಪ್ರಿಯಕರ ಶಾಲಾ ಮಾಸ್ತರ ಆ ಗರ್ಭ ತೆಗೆಸಲು ಏರ್ಪಾಡು ಮಾಡಿಸುತ್ತಾನೆ. ಆದರೆ ಆ ಸುದ್ದಿ ಊರೆಲ್ಲ ಹಬ್ಬಿ ತಂದೆಗೂ ತಿಳಿಯುತ್ತದೆ. ಆಕೆಯನ್ನು ಜಾತಿಭ್ರಷ್ಟಳನ್ನಾಗಿಸಿ, ಆಕೆ ಬದುಕಿದ್ದಾಗಲೇ ಶ್ರಾದ್ಧ ಮಾಡುವ ಕೆಟ್ಟ ಸಂಪ್ರದಾಯದ ಕತೆ ಘಟಶ್ರಾದ್ಧ. ಮಂತ್ರಘೋಷ, ವಿವಾಹದ ವಿಧಗಳ ವಿಶ್ಲೇಷಣೆ, ಶಾಸ್ತ್ರೀ ಆರತಿ ತಟ್ಟೆಯಿಂದ ದುಡ್ಡು ತಗೆಯುವ, ಯಮುನಳ ಆರೋಗ್ಯ ಸರಿಯಿಲ್ಲದ್ದನ್ನು ಗೋದಕ್ಕ ಕೇಳುವುದು, ಶಾಸ್ತ್ರಿ ಗಣೇಶನಿಗೆ ಬಿಸಿಮುಟ್ಟಿಸುವುದು, ಉಡುಪರು ಗೋದಕ್ಕನ ಮಾತಿಗೆ ಪ್ರತ್ಯುತ್ತರವಾಗಿ ನೋಡುವುದು, ಸುಡುವ ತಂಬಿಗೆಯಲ್ಲಿ ನೀರು ಕೊಟ್ಟು ತಮಾಷೆ ನೋಡುವ ವಯಸ್ಸಿನ ಮಂಗಬುದ್ದಿಯ ಹುಡುಗಾಟಿಕೆ ಹೀಗೆ ಆರಂಭದಲ್ಲಿ ಇಷ್ಟೆಲ್ಲ ಶಾಟ್ ಗಳು ಚಿತ್ರದ ಒಳಗಿನ ಹೂರಣಕ್ಕೆ ನಾಂದಿಯಾಗಿವೆ.
ಕಥಾನಾಯಕನಾದ ನಾಣಿ ಅಲ್ಲಿಗೆ ಬರುವ ಮೊದಲೆ ಆ ಪರಿಸರದ ಸ್ಥಿತಿ ಇಂತಿರಲು ಕೂಡುಮಲ್ಲಿಗೆ ಶ್ಯಾಮಭಟ್ಟರು ಹೊಳೆ ಆಚೆಯಿಂದ ತಮ್ಮ ಮಗನನ್ನು ಉಡುಪರ ಪಾಠಶಾಲೆಗೆ ಕರೆತರುತ್ತಾರೆ. ಈ ಪಯಣದಲ್ಲಿ ಹೊಸ ಜಗತ್ತಿನೊಂದಿಗೆ ಮುಖಾಮುಖಿಯಾಗುವ ನಾಣಿ ಕುತೂಹಲಿಯಾಗಿದ್ದಾನೆ. ಒಂದು ಆವರಣದಿಂದ ಜಿಗಿದು ಮತ್ತೊಂದು ಆವರಣದಲ್ಲಿ ಹೊಂದಿಕೊಳ್ಳುತ್ತ ಹೋಗುವ ನಾಣಿಯ ಕಣ್ಣಿಗೆ ಯಮುನಕ್ಕನ ಹೊರತಾದ ಉಳಿದೆಲ್ಲರೂ ಬ್ರಹ್ಮರಾಕ್ಷಸರ ಹಾಗೆ ಗೋಚರಿಸುತ್ತಾರೆ. ಆತ ಯಮುನಕ್ಕನ ಸಲುವಾಗಿ ಸುಳ್ಳು ಹೇಳುತ್ತಾನೆ. ನಾಗರಕಲ್ಲು ಮುಟ್ಟಿ ಭಯಗೊಳ್ಳುತ್ತಾನೆ, ಶಾಲೆಯನ್ನು ಕಿಟಕಿಯಲ್ಲಿ ಗಮನಿಸುತ್ತಾನೆ. ಚಾಕಪೀಸ್ ತರುತ್ತಾನೆ, ಬ್ರಹ್ಮರಾಕ್ಷಸ ಮನೆ ಸುತ್ತುವ ಕತೆಕೇಳುತ್ತಾನೆ, ಹೀಗೆ ಮನೆಯದಲ್ಲದ ಪರಿಸರದಲ್ಲಿ ಮೂಕನಾಗುತ್ತ ಮೂಢ ಸಮಾಜವನ್ನು ಗ್ರಹಿಸುವ ನಾಣಿ ತನ್ನದಲ್ಲದ ಮತ್ತೊಬ್ಬರ ಖಾಸಗಿ ಬದುಕಿನ ಚಿತ್ರಗಳನ್ನು ಮುಗ್ಧವಾಗಿಯೇ ಗ್ರಹಿಸುತ್ತ ಹೋಗುತ್ತಾನೆ. ದೊಡ್ಡವರಾಗುವ ಹೊತ್ತಿನ ಎಲ್ಲರ ಬಾಲ್ಯದ ಕಥನದಂತೆಯೇ ಇಲ್ಲೂ ನಾಣಿ ಪೊರೆ ಕಳಚಿಕೊಳ್ಳುತ್ತ ಹೆಚ್ಚು ಮಾನವೀಯನಾಗಿ ತುಡಿಯುವ ಸಂದರ್ಭದಲ್ಲಿ ಸಂಪ್ರದಾಯದ ಸಂಕುಚಿತ ಆವರಣದಲ್ಲಿ ಸಿಕ್ಕಿಕೊಳ್ಳುತ್ತಾನೆ. ಆಪತ್ಬಾಂಧವನಾಗುತ್ತ ಯಮುನಕ್ಕಳ ಕತ್ತಲಕೋಣೆಯಲ್ಲಿ ಪ್ರವೇಶಪಡೆದು ವಿಧವೆಯೊಬ್ಬಳ ಮಾನಸಿಕ ಯಾತನೆಯ ಹಾದಿಯಲ್ಲಿ ತನಗೆ ಗೊತ್ತಿಲ್ಲದೆ ಜೊತೆಯಾಗುತ್ತಾನೆ. ಹಾವು ಕಂಡರೆ ಹೆದರುವ, ಕತ್ತಲಿಗೆ ಅಂಜುವ ಅಂಜುಕುಳಿ ಹುಡುಗ ಕಟೀರನೊಟ್ಟಿಗೆ ಆ ರಾತ್ರಿ ಯಮುನಕ್ಕನನ್ನು ಹುಡುಕಿಕೊಂಡು ಹೋಗುವಷ್ಟು ಧೈರ್ಯಶಾಲಿಯಾಗುತ್ತಾನೆ. ಪರ್ಬುವಿನ ಮನೆಯಲ್ಲಿ ಆಕೆಗೆ ಆಗುವ ಹಿಂಸೆಗೆ ತಲ್ಲಣಿಸುತ್ತಾನೆ. ನಾಣಿ ಕಾಣುವ ಬದುಕಿನ ಚಿತ್ರಗಳು ನಾಣಿಯ ಕಣ್ಣಿನ ಕ್ಯಾಮರದಲ್ಲಿ ಮೂಡುತ್ತವೆ. ದೊಡ್ಡವರ ಕಟ್ಟಪ್ಪಣೆಗಳಿಗೆ ಒಳಪಡುವ ಮೊದಲು ಅಂತಃಕರಣದ ಮಿಡಿಯುವ ಹುಡುಗನಾಗಿ ಇರಲು ಬಯಸುತ್ತಾನೆ. ಉಡುಪರ ಪಾಠಶಾಲೆಯಿಂದ ಉಳಿದ ವಿದ್ಯಾರ್ಥಿಗಳು ಹೊರಟು ಹೋಗುವಾಗ ನಾಣಿ ಯಮುನಕ್ಕಳ ಜೊತೆಗೆ ಉಳಿಯುತ್ತಾನೆ. ಹೀಗೆ ನಾಣಿಯ ಮೂಲಕ ಪ್ರೇಕ್ಷಕನೊಳಗೊಳ್ಳುವ ಕಾರಣದಿಂದ ಚಿತ್ರದ ನೈಜತೆ ಆಪ್ತವಲಯದ್ದಾಗುತ್ತದೆ.
ಕೂಡುಮಲ್ಲಿಗೆ ಶ್ಯಾಮಭಟ್ಟರು ಯಮುನಳ ಸುದ್ದಿ ತಿಳಿದು ಮಗನನ್ನು ಮರಳಿ ಕರೆದುಕೊಂಡು ಹೋಗಲು ಬಂದಾಗ ಮೊದಲು ಭೆಟ್ಟಿಯಾಗಿದ್ದ ರಾಮಭಟ್ಟ ಮತ್ತೆ ಕಾಣಿಸಿಕೊಳ್ಳುತ್ತಾರೆ. ಅವರ ಮಗಳನ್ನು ಶ್ಯಾಮಭಟ್ಟರಿಗೆ ತೋರಿಸುವ ಮೂಲಕ ಇನ್ನೊಂದು ಮಗ್ಗುಲಿನ ಅವಸ್ಥೆಯ ಮುನ್ಸೂಚನೆ ಅಲ್ಲಿ ಸಿಗುತ್ತದೆ. ತನ್ನದಲ್ಲದ ಮತ್ತೊಂದು ಪರಿಸರದ ವಿದ್ಯಮಾನಗಳನ್ನು ತೀರ ಹತ್ತಿರದಿಂದ ಕಾಣುತ್ತ ಬೆಳೆಯುವ ಬಾಲ್ಯವನ್ನು ಮಾ.ಅಜಿತ ಸೊಗಸಾಗಿ ಅಭಿನಯಿಸಿರುವುದು ಚಿತ್ರದ ಶಕ್ತಿಯಾಗಿದೆ. ಯಮುನಕ್ಕಳ ಅಶಾಂತ ಮನಸ್ಸಿನ ಮೌನವನ್ನು ಮಾರ್ಮಿಕವಾಗಿ ದೃಶ್ಯಗೊಳಿಸಿರುವ ಕಲ್ಪನೆ ಸಿನಿಮಾದ ಮಹತ್ವದ ಪ್ರತಿಮೆ ಆಗಿದೆ. ತಲೆಬೋಳಿಸಿಕೊಂಡಿರುವ, ಬದುಕಿರುವಾಗಲೇ ಶ್ರಾದ್ಧ ಮಾಡಿಸಿಕೊಂಡು ಜಾತಿಭ್ರಷ್ಟಳಾಗಿರುವ ಯಮುನಕ್ಕನನ್ನು ಕಡೆಯ ಸಲ ಕಂಡಾಗ.. ಊರ ಹೊರಗಿನ ಮರದ ಕೆಳಗೆ ಆಕೆ ಕುಳಿತಿದ್ದಾಳೆ. ಮುಂಡನ ಮಾಡಿ ಆಕೆಯನ್ನೂ ವಿರೂಪಗೊಳಿಸಲಾಗಿದೆ. ಆಕೆಯ ಅಳುವಿಗೆ ನಾಣಿ ಜೀವ ತುಡಿಯುತ್ತದೆ. ಆದರೆ ದೊಡ್ಡವರ ಕಾವಲಿನ ಬೇಲಿಯಲ್ಲಿ ಆ ಎಳೆತನ ಬಂಧಿಯಾಗಿರುವ ಕಾರಣದಿಂದ ಅಸಹಾಯಕ ಮನಸ್ಸಿನಲ್ಲಿ ಶ್ಯಾಮಭಟ್ಟರು ನಾಣಿಯನ್ನು ಕರೆದುಕೊಂಡು ಹೋಗುತ್ತಾರೆ. ದೂರ ಕ್ರಮಿಸುವ ಆ ಲಾಂಗಶಾಟ್ ಮಧ್ಯದಲ್ಲಿ ಖಾಲಿಯಾಗುಳಿವ ಪ್ರೇಕ್ಷಕನೂ ಮೌನಿಯಾಗಬೇಕು. ಜೀವಂತಿಕೆಯ ಲಕ್ಷಣಗಳೆಲ್ಲವೂ ದೂರ ಹೋಗುವಂತೆ ಭಾಸವಾಗುವ ಮೂಲಕ ಕತೆ ಮುಕ್ತಾಯವಾಗುತ್ತದೆ.
ಸಿನಿಮಾಟೋಗ್ರಾಫರ್ ಎಸ್.ರಾಮಚಂದ್ರರವರ ಚಿತ್ರಿಕ ಶಕ್ತಿ, ಸುಬ್ಬಣ್ಣನವರ ಸಂಭಾಷಣೆ ಮತ್ತು ಬಿ.ವಿ.ಕಾರಂತರ ಹಿನ್ನೆಲೆ ಸಂಗೀತ ಸಿನೆಮಾದ ಜೀವಾಳವಾಗಿದೆ. ದೃಶ್ಯ-ಶ್ರವ್ಯಗಳೆರಡರಲ್ಲೂ ಕಾವ್ಯವಾಗಿ ಮೂಡಿದ ಕಾಸರವಳ್ಳಿಯವರ ಮೊದಲ ಚಿತ್ರ ಘಟಶ್ರಾದ್ಧ. ಚಿತ್ರದ ಪ್ರತಿ ಕ್ಷಣದಲ್ಲೂ ಪ್ರತಿಮೆಗಳು ಚೌಕಟ್ಟಿನೊಳಗಿಂದ ಹೊರಬರಲು ಕಾತರವಾಗಿರುವ ಹಾಗೂ ವಿಷಾದದ ನೋಟಗಳನ್ನು ಪ್ರಸ್ತುತಪಡಿಸುತ್ತವೆ. ಸಂಗೀತದ ಪೂರಕ ಆಶಯ,ಕತೆ ಮತ್ತು ಚಿತ್ರಕತೆಗಳು ಒಂದಕ್ಕೊಂದು ಪೂರಕವಾಗಿ ಮೇಳೈಸಿಕೊಂಡಿರುವ ದೆಸೆಯಿಂದಾಗಿ ಘಟಶ್ರಾದ್ಧ ಇಂದಿಗೂ ಶ್ರೇಷ್ಟ ಚಿತ್ರವಾಗಿಯೇ ಉಳಿದಿದೆ.
ಕನ್ನಡಲೋಕದ ಘಟಾನುಘಟಿಗಳು ಸೇರಿಕೊಂಡು ಆಗಿನ ಕಾಲದಲ್ಲಿಯೇ ರೂಪಿಸಿದ ಅಧ್ಯಯನಯೋಗ್ಯ ಚಿತ್ರವೆಂದರೆ ಸುಳ್ಳಲ್ಲ ! ಇಂದಿಗೂ ಈ ಚಿತ್ರವನ್ನು ನೋಡಿದಾಗಲೊಮ್ಮೆ ವಿವಿಧ ವಿಚಾರಗಳನ್ನು ಹೊರಹೊಮ್ಮಿಸುವ multidimension ಇರುವ ಈ ಸಿನೇಮಾ ರಾತ್ರಿವೇಳೆಯಲ್ಲಿ ಚಾನೆಲ್ ಬದಲಿಸುತ್ತಿರುವಾಗ ಪ್ರಸಾರವಾಗುತ್ತಿದ್ದರೆ ಮುಗಿಯುವ ತನಕ ಮಲಗದೇ ನೋಡಿಸಿಕೊಳ್ಳುವ ಶಕ್ತಿಯನ್ನುಳ್ಳ ಈ ಚಿತ್ರದ ಕುರಿತು ಮಾದೇವಣ್ಣ ಆಳಕ್ಕಿಳಿದು ವಿಶ್ಲೇಷಣೆ ಮಾಡಿರುವುದು ಅವರ ಅಧ್ಯಯನಶೀಲತೆಗೆ ಹಿಡಿದ ಕನ್ನಡಿಯಾಗಿದೆ. ಧನ್ಯವಾದಗಳು ಮಹಾದೇವಣ್ಣ…ನಿಮ್ಮಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತೇವೆ….ಶುಭದಿನ
ನಾನು ಈ ಚಿತ್ರವನ್ನು ನೋಡಿಲ್ಲ..ಅದರೆ ಈ ಕಥೆಯನ್ನು ಓದಿದ್ದೇನೆ..ಒ೦ದು ವಾಸ್ತವತೆಯ ಪರಿಧಿಯಲ್ಲಿ ಸುತ್ತುತ್ತಾ ಸಾಗುವ ಕಥೆಯಲ್ಲಿ ಸಮಾಜದ ಸ್ಥಿತಿಗತಿಯ ಚಿತ್ರಣವನ್ನು ಅ೦ದರೆ ಒ೦ದು ವರ್ಗದ ರೀತಿಯನ್ನು ಅನ೦ತಮೂರ್ತಿಯವರು ಬಹು ಸು೦ದರವಾಗಿ ವರ್ಣಿಸಿದ್ದಾರೆ…ಕಥೆಯನ್ನು ಓದುತ್ತಾ ಹೋಗುವಾಗ ನಾವು ಕಳೆದುಹೋಗಿಬಿಡುತ್ತೇವೆ
ಧನ್ಯವಾದಗಳು.,..ನಿರೂಪಣೆ ಸೊಗಸಾಗಿದೆ..
ಇಂತಹ ಕತೆಗಳು/ಚಿತ್ರಗಳೆಲ್ಲ ಕನ್ನಡ ಸಿನಿಮಾ/ಸಾಹಿತ್ಯದ ಹೆಜ್ಜೆಯ ಗುರುತುಗಳು. ಆದರೆ ಅಂತಹ ಸಾಹಿತಿಗಳು ನಂತರ ತಮ್ಮ ಪರಿದಿಯಿಂದ ಹೊರಬರುವುದೆ ಇಲ್ಲ ಅನ್ನುವುದು ತುಸು ಬೇಸರ.
nice
ಘಟಶ್ರಾದ್ಧ ಒಂದು ಉತ್ತಮ ಚಿತ್ರ ಅನ್ನೋದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ನನಗೆ ಆ ಚಿತ್ರ ಎಷ್ಟು ಇಷ್ಟ ಆಯಿತೋ ನಿಮ್ಮ ಬರವಣಿಗೆನೂ ಅಷ್ಟೇ ಇಷ್ಟ ಆಯಿತು. . ಒಂದು ಉತ್ತಮ ಲೇಖನ ಬರೆದ, ಮಹದೇವ, ನಿಮಗೆ ಧನ್ಯವಾದಗಳು.