ಬೆಂಗಳೂರಿನ ಹೊರವಲಯದಲ್ಲಿ ಮಾನವನ ದೌರ್ಜನ್ಯಕ್ಕೆ ತುತ್ತಾಗಿ ಕಾಲುಮುರಿದುಕೊಂಡು ಜೀವನ್ಮರಣಗಳ ನಡುವೆ ಒದ್ದಾಡುತ್ತಿರುವ ಸಿದ್ಧ ಎಂಬ ಹೆಸರಿನ ನಡುಹರಯದ ಆನೆಯನ್ನು ಕಡೆಗೂ ಜನರ ಒತ್ತಾಯಕ್ಕೆ ಮಣಿದು ಇಲಾಖೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ ಹೊತ್ತಿನಲ್ಲೆ, ಏನೇ ಆದರೂ 800 ಚಿಲ್ಲರೆ ಮರಗಳನ್ನು ಕಡಿದು ಉಕ್ಕಿನ ಸೇತುವೆ ನಿರ್ಮಾಣ ಮಾಡಿಯೇ ಸಿದ್ಧ ಎಂದು ಹಠ ಹಿಡಿದು ಸರ್ಕಾರ ಗಟ್ಟಿ ನಿಲುವು ತಳೆದ ಹೊತ್ತಿನಲ್ಲೇ, ಜನರ ಅಭಿಪ್ರಾಯವನ್ನು ಕಡೆಗಣಿಸಿ ಯಾವುದೇ ಯೋಜನೆಯನ್ನು ಅದರಲ್ಲೂ ಉಕ್ಕಿನ ಸೇತುವೆಯನ್ನು ನಿರ್ಮಾಣ ಮಾಡಲು ಬಿಡುವುದಿಲ್ಲವೆಂದು ಪಟ್ಟು ಹಿಡಿದ ಸಾರ್ವಜನಿಕರ ಆಕ್ರೋಶ ಮಡುಗಟ್ಟುತ್ತಿರುವ ಹೊತ್ತಿನಲ್ಲೇ – ದೂರದ ಆಸ್ಟ್ರೇಲಿಯಾ ಖಂಡದ ಮುಕುಟ ಮಣಿಯೆಂದು ಖ್ಯಾತಿ ಪಡೆದ ಹವಳದ ದ್ವೀಪ ಸಮೂಹಗಳು ಅವಸಾನ ಹೊಂದಿದೆ ಎಂದು ಅಂತಾರಾಷ್ಟ್ರೀಯ ಪತ್ರಿಕೆಗಳು ಸಂತಾಪ ಸೂಚಿಸಿವೆ. ಭೂಮಿಯ ಮೇಲೆ ಅತ್ಯಂತ ಸುಂದರವಾದ, ನಯನಮನೋಹರವಾದ ಇಂಗ್ಲಂಡ್ ದೇಶಕ್ಕಿಂತಲೂ ದೊಡ್ಡದಾಗಿ ಹರಡಿಕೊಂಡಿರುವ ಅಪರೂಪದಲ್ಲೇ ಅಪರೂಪದ ಈ ಹವಳದ ಸಮೂಹ ಅಳಿವಿಗೆ ಕಾರಣ ಹವಾಮಾನ ವೈಪರೀತ್ಯ ಹಾಗೂ ಸಮುದ್ರದ ನೀರಿನಲ್ಲಿ ಹೆಚ್ಚಾದ ಹುಳಿಯಂಶ. ಅಂತರಿಕ್ಷದಿಂದಲೂ ಬರಿಗಣ್ಣಿಗೆ ವಿವಿಧ ವರ್ಣಗಳೊಂದಿಗೆ ನೋಡಬಹುದಾಗಿದ್ದ ಗ್ರೇಟ್ ಬ್ಯಾರಿಯರ್ ರೀಫ್ ಸತ್ತು ಹೋಗಿದೆ ಎಂಬುದನ್ನು ಅರಗಿಸಿಕೊಳ್ಳುವುದು ಕಷ್ಟ ಸಾಧ್ಯ.
ವಿಜ್ಞಾನಿಗಳ ಪ್ರಕಾರ ಈ ಹವಳದ ಸಮೂಹ ರೂಪುಗೊಂಡಿದ್ದು 25 ಲಕ್ಷ ವರ್ಷಗಳ ಹಿಂದೆ. ಇಷ್ಟು ದೊಡ್ಡ ಜೀವ ಸಮೂಹ ಹೊಂದಿದ ಪ್ರದೇಶ ಪ್ರಪಂಚದ ಬೇರಾವ ಭಾಗದಲ್ಲೂ ಇರಲಿಲ್ಲ. 19ನೇ ಪೂರ್ವಾದ್ಧದಲ್ಲೂ ಈ ಹವಳದ ಸಮೂಹಗಳು ಆರೋಗ್ಯವಾಗಿಯೇ ಇದ್ದವು. 1400 ಮೈಲಿ ಉದ್ದದ ಹಾಗೂ 2900 ಹವಳದ ದಿಬ್ಬದ ಜೊತೆಗೆ 1050 ದ್ವೀಪಗಳು ಈ ಸಮೂಹಗಳಲ್ಲಿವೆ. ಇಲ್ಲಿನ ಜೀವಿವೈವಿಧ್ಯ ಇಡೀ ಯೂರೋಪು ಖಂಡದ ಜೀವಿವೈವಿಧ್ಯದ ಒಟ್ಟಾರೆ ಸಂಖ್ಯೆಗಿಂತ ಹೆಚ್ಚಾಗಿದ್ದು, 1625 ಜಾತಿಯ ಮೀನುಗಳು 3000 ವಿವಿಧ ಜಾತಿಯ ಮೃದ್ವಂಗಿಗಳು, 450 ಜಾತಿಯ ಹವಳಗಳು, 220 ಜಾತಿಯ ಹಕ್ಕಿಗಳು 30 ಜಾತಿಯ ತಿಮಿಂಗಿಲ ಹಾಗೂ ಡಾಲ್ಪಿನ್‍ಗಳ ತವರಾದ ಈ ಸಮೂಹ 2016ನೇ ಇಸವಿಯಲ್ಲಿ ಕೊನೆಯುಸಿರೆಳೆಯಿತು ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ಈಗ 25 ಲಕ್ಷ ವರ್ಷಗಳ ಹಿಂದಿನ ಮಯೋಸಿನ್ ಯುಗದಲ್ಲಿ ರೂಪುಗೊಂಡ ಈ ಹವಳದ ಸಮೂಹಗಳಿಗೆ ಆಪತ್ತು ಶುರುವಾಗಿದ್ದು 1960ನೇ ಇಸವಿಯಲ್ಲಿ. ಕ್ವೀನ್ಸ್‍ಲ್ಯಾಂಡ್ ಸರ್ಕಾರ ಈ ಹವಳದ ಸಮೂಹದಲ್ಲಿ ತೈಲ ಹಾಗೂ ಗಣಿಗಾರಿಕೆಗಾಗಿ ಅನುಮತಿ ನೀಡಿತು. ಬೃಹತ್ ಗಾತ್ರದ ಯಂತ್ರಗಳು ಅಲ್ಲಿ ಕಾರ್ಯಾರಂಭಿಸುತ್ತಿದ್ದಂತೆ ಇದರ ಅವಸಾನದ ಕತೆಯೂ ಪ್ರಾರಂಭವಾಯಿತು. ಆಗ ಅಲ್ಲಿಯ ಜನ ಎಚ್ಚೆತ್ತರು. ಹವಳದ ಸಮೂಹ ಉಳಿಸಿ ಹೋರಾಟ ಶುರುವಾಯಿತು. ಈ ಹೋರಾಟದ ಫಲದಿಂದ 1975ರಲ್ಲಿ ಅಲ್ಲಿನ ಸರ್ಕಾರ “ಗ್ರೇಟ್ ಬ್ಯಾರಿಯರ್ ರೀಫ್ ಮ್ಯಾರೀನ್ ಪಾರ್ಕ್” ರಚಿಸಿತು. ಈ ಪಾರ್ಕಿನಲ್ಲಿ ಮೀನುಗಾರಿಕೆಯಾಗಲಿ, ಹಡಗು ಸಾಗಾಣಿಕೆಯಾಗಲಿ ಮಾಡುವಂತಿಲ್ಲ, ಗಣಿಗಾರಿಕೆಗೆ ಅವಕಾಶವಿಲ್ಲ, ತೈಲ ತೆಗೆಯುವುದಕ್ಕೂ ನಿಷೇಧ ಹೇರಿತು. 1981ರಲ್ಲಿ ಯುನೆಸ್ಕೊ ಈ ಪ್ರದೇಶವನ್ನು “ಪ್ರಪಂಚದ ಅತ್ಯಂತ ಸುಂದರವಾದ ಸ್ಥಳ” ಎಂದು ವಿಶ್ವ ಪಾರಂಪಾರಿಕ ತಾಣ ಪಟ್ಟಿಗೆ ಸೇರಿಸುವಷ್ಟರಲ್ಲಿ ಈ ದ್ವೀಪ ಸಮೂಹ ಹವಳದ ದಿಬ್ಬಗಳು ಸಾಮೂಹಿಕವಾಗಿ ಕರಗಲು ಆರಂಭಿಸಿದ್ದವು. ಹವಳದ ದಿಬ್ಬಗಳು ಜೀವಂತವಾಗಿರಲು ಸಮುದ್ರದ ಪಾಚಿಯ ನೆರವು ಪಡೆಯುತ್ತವೆ. ಪಾಚಿಗಳು ಹವಳದ ಮೇಲೆ ಹರಡಿಕೊಂಡು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸಿ ಸಕ್ಕರೆಯ ಅಂಶವನ್ನು ಉತ್ಪಾದಿಸುತ್ತವೆ. ಈ ಸಕ್ಕರೆ ಅಂಶವನ್ನು ಹೀರಿಕೊಳ್ಳುವ ಹವಳಗಳು ಹಲವು ಬಣ್ಣಗಳನ್ನು ಹೊಂದಿಕೊಂಡು ಬದುಕುತ್ತವೆ. ನೀರಿನಲ್ಲಿ ಬಿಸಿ ಹೆಚ್ಚಾದಾಗ ಇದೇ ಪಾಚಿಗಳು ಹೆಚ್ಚಿನ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಈ ಹೆಚ್ಚಿನ ಆಮ್ಲಜನಕ ಹವಳಗಳಿಗೆ ವಿಷಕಾರಿಯಾಗುತ್ತವೆ. ಈ ವಿಷಕಾರಿ ಆಮ್ಲಜನಕದಿಂದ ಬಿಡುಗಡೆ ಪಡೆಯಬೇಕೆಂದರೆ ಹವಳಗಳು ಪಾಚಿಗಳನ್ನು ದೂರ ಮಾಡಬೇಕು. ಪಾಚಿಯನ್ನು ದೂರ ಮಾಡಿದರೆ, ತನ್ನ ಆಹಾರವನ್ನೇ ದೂರ ಮಾಡಿದಂತೆ. ಹೀಗೆ ದೂರ ಮಾಡಿದಾಗ ಆಹಾರವಿಲ್ಲದೆ ಸೊರಗುವ ಹವಳಗಳು ಎಲುಬಿನ ಬಣ್ಣವನ್ನು ಪಡೆಯುತ್ತವೆ. ಹಾಗೆಯೇ ನೀರು ಮತ್ತೆ ಮೊದಲಿನ ಸ್ಥಿತಿಗೆ ಬಂದಲ್ಲಿ ಹವಳಗಳು ಮತ್ತೆ ಪಾಚಿಗಳನ್ನು ಆಕರ್ಷಿಸಿ ಬದುಕಬಲ್ಲವು. ನೀರಿನ ಬಿಸಿ ಹೆಚ್ಚಾಗುತ್ತಲೇ ಇದ್ದರೆ ಕೆಲವೇ ತಿಂಗಳುಗಳಲ್ಲಿ ಸತ್ತು ಹೋಗುತ್ತವೆ. 1981ರಲ್ಲೂ ಆಗಿದ್ದು ಹೀಗೆ. ಆಗ ಮೂರನೇ ಎರಡು ಭಾಗದ ಹವಳ ಸಮೂಹ ಕರಗಿ ನಾಶವಾಯಿತು.
ಹೀಗೆ 1997-98, 2001-02 ಹಾಗೂ 2005-06ರಲ್ಲೂ ಹವಳ ಸಮೂಹದ ನೀರು ಬಿಸಿಯಾಗಿತ್ತು ಜೊತೆಗೆ ಸಮುದ್ರಗಳು ವಾತಾವರಣದಲ್ಲಿನ ಹೆಚ್ಚು-ಹೆಚ್ಚು ಇಂಗಾಲಾಮ್ಲವನ್ನು ಹೀರಿಕೊಂಡವು. ಹೀಗೆ ಪ್ರಪಂಚದ ಇತರೆ ಭಾಗಗಳಲ್ಲಿ ಇಂಗಾಲಾಮ್ಲದ ಪ್ರಮಾಣ ಹೆಚ್ಚಾದಂತೆ ಒಟ್ಟಾರೆ ಸಮುದ್ರದ ಇಂಗಾಲಾಮ್ಲ ಹೀರಿಕೊಳ್ಳುವ ಮಟ್ಟವೂ ಹೆಚ್ಚಿತು. ಇದರಿಂದ ಸಮುದ್ರದಲ್ಲಿ ಹುಳಿಯಂಶ ಜಾಸ್ತಿಯಾಯಿತು. ಇದೂ ಕೂಡ ಹವಳದ ದಂಡೆಗಳ ವಿನಾಶಕ್ಕೆ ಕಾರಣವಾಯಿತು. ವಿಜ್ಞಾನಿಗಳು ಘೋಷಿಸಿದ ಈ ವಿನಾಶವನ್ನು ಅರಗಿಸಿಕೊಳ್ಳುವುದಕ್ಕೆ ಅಲ್ಲಿನ ಸರ್ಕಾರ ಮಾತ್ರ ಇನ್ನೂ ತಯಾರಿಲ್ಲ. ಅತ್ಯಂತ ವಿಶಿಷ್ಟವಾದ, ತೆರ-ತೆರನಾದ ಬಣ್ಣಗಳಿಂದ ಕೂಡಿದ ಆ ಜೀವಂತ ಹವಳ ದ್ವೀಪಗಳು ಪ್ರವಾಸೋಧ್ಯಮಕ್ಕೆ ಭಾರಿ ಲಾಭ ತಂದುಕೊಡುವ ಪ್ರದೇಶವಾಗಿದೆ. ಈಗ ಏಕಾಏಕಿ ಇಡೀ ದ್ವೀಪ ಸಮೂಹವೇ ನಾಶವಾಗಿದೆ ಎಂದರೆ ಇಡೀ ಪ್ರವಾಸೋದ್ಯಮ ಮಗುಚಿ ಬೀಳುತ್ತದೆ. ಸತ್ತದ್ದನ್ನು ನೋಡಲು ಯಾರು ಇಷ್ಟ ಪಡುತ್ತಾರೆ. ಅಲ್ಲಿನ ಹಣಕಾಸು ವಹಿವಾಟೇ ಬುಡಮೇಲಾಗುತ್ತದೆ. ಇದನ್ನು ನಂಬಿಕೊಂಡೇ ಬದುಕುತ್ತಿರುವ ಸಾವಿರಾರು ಕುಟುಂಬಗಳು ಬೀದಿಗೆ ಬರಬೇಕಾದ ಪರಿಸ್ಥಿತಿ ಏರ್ಪಡುತ್ತದೆ. ಹಾಗಾಗಿ ಇನ್ನೂ ಅಧಿಕೃತ ಘೋಷಣೆ ಅಲ್ಲಿನ ಸರ್ಕಾರದಿಂದ ಬಂದಿಲ್ಲ. ಮುಂದುವರೆದ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾದ ಅಮೆರಿಕಾದ ಪಾರಿಸಾರಿಕವಾಗಿ ಆರೋಗ್ಯವೂ ಹದಗೆಡುತ್ತಲೇ ಇದೆ. ಇದರ ಒಂದು ಝಲಕನ್ನೂ ಇಲ್ಲಿ ನೋಡೋಣ.
ಅಮೆರಿಕಾದ ಪ್ಲೋರಿಡಾ ಭಾಗದಲ್ಲಿ ಚಂಡಮಾರುತಗಳು ಹೆಚ್ಚು ಉದ್ಭವವಾಗುತ್ತಿವೆ. ಚಂಡಮಾರುತಗಳ ಹೊಡೆತಕ್ಕೆ ಅಲ್ಲಿನ ಜನ-ಜೀವನ ಅಸ್ತವ್ಯಸ್ತವಾಗಿದೆ. ಎಷ್ಟೊತ್ತಿಗೆ ಸರ್ಕಾರದಿಂದ ಎಚ್ಚರಿಕೆಯ ಸಂದೇಶ ಬರುತ್ತದೆಯೋ ಎಂಬ ಆತಂಕದಲ್ಲೆ ಅಲ್ಲಿನ ಜನ ಕಳೆಯುವಂತಾಗಿದೆ. ಚಂಡಮಾರುತದಿಂದ ಬಚಾವಾಗಲು ಜನ ನೆಲಮನೆಯನ್ನು ಸೇರಬೇಕು. ಚಂಡಮಾರುತದ ಅವಧಿ ಮುಗಿದ ನಂತರವೇ ಜನ ಮನೆಯಿಂದ ಹೊರಬರಬೇಕು. ಇಂತಹ ಕಟ್ಟೆರಿಕೆಯನ್ನು ಅಲ್ಲಿನ ಸರ್ಕಾರ ಟಿ.ವಿಗಳ ಮೂಲಕ, ಮೊಬೈಲ್ ಹೀಗೆ ವಿವಿಧ ಮಾಧ್ಯಮಗಳಲ್ಲಿ ನಿರಂತರವಾಗಿ ಬಿತ್ತರಿಸಲಾಗುತ್ತದೆ. ಇದೀಗ ಹೊಸದೊಂದು ಆಪತ್ತು ಪ್ಲೋರಿಡಾವನ್ನು ಆವರಿಸಿಕೊಂಡಿದೆ. ಹಳದಿ ಕಣ್ಣಿನ ನೊಣದ ರೂಪದಲ್ಲಿರುವ ಕೀಟವೊಂದು ಅಲ್ಲಿನ ಸಾಕುಪ್ರಾಣಿಗಳನ್ನು ಜೀವಂತವಾಗಿ ತಿಂದು ಹಾಕುತ್ತಿದೆ. ಸ್ಕ್ರೂವರ್ಮ್ (ನಾವು ಬೈರಿಗೆ ನೊಣವೆಂದು ಕರೆಯೋಣ) ಎಂದು ಕರೆಯಲಾಗುವ ಈ ಪರಾವಲಂಬಿ ಕೀಟ ಬಿಸಿರಕ್ತದ ಪ್ರಾಣಿಗಳ ದೇಹವನ್ನು ಥೇಟ್ ಬೈರಿಗೆಯಂತೆ ಕೊರೆದು ಆರೋಗ್ಯವಂತ ಮಾಂಸಖಂಡಗಳಲ್ಲಿ ಮೊಟ್ಟೆಯಿಡುತ್ತದೆ. ಈ ಮೊಟ್ಟೆಗಳು ಮರಿಯಾಗಿ ಮತ್ತಷ್ಟು ಮಾಂಸಖಂಡಗಳನ್ನು ತಿಂದು ದೊಡ್ಡದಾಗುತ್ತವೆ. ಇದು ತೀರಾ ನೋವು ಕೊಡುವ ಕೀಟಗಾಳಾಗಿದ್ದು, ಸಾಕು ಹಾಗೂ ಕಾಡು ಪ್ರಾಣಿಗಳ ಬದುಕು ಯಾತನಾಮಯವಾಗಿದೆ.
ಈಗಾಗಲೇ ಪ್ಲೋರಿಡಾದ 30 ಅಪರೂಪದ ನಾಯಿಯಷ್ಟು ದೊಡ್ಡದಾದ ಜಿಂಕೆಗಳು ಈ ಬೈರಿಗೆ ನೊಣಕ್ಕೆ ತುತ್ತಾಗಿ ಸಾವನ್ನಪ್ಪಿವೆ. ಅಲ್ಲದೆ ಈ ಪೀಡೆ ಇನ್ನೂ ಮುವತ್ತು ಜಿಂಕೆಗಳನ್ನು ಬಲಿತೆಗೆದುಕೊಳ್ಳುವ ಹಂತದಲ್ಲಿದೆ. ಅಲ್ಲಿನ ಜಿಂಕೆಗಳಿಗೀಗ ಬೆದೆ ಸಮಯ. ಹೆಣ್ಣಿನ ಮೇಲೆ ಪ್ರಭುತ್ವ ಸಾಧಿಸಲು ಗಂಡು ಜಿಂಕೆಗಳು ಪರಸ್ಪರ ಕಾದಾಟ ನಡೆಸಿ ಗೆದ್ದು ಹೆಣ್ಣನ್ನು ಪಡೆಯಬೇಕಾಗುತ್ತದೆ. ಇದೀಗ ಗಾಯಗೊಂಡ ಜಿಂಕೆಗಳೇ ಈ ಬೈರಿಗೆ ನೊಣಕ್ಕೆ ಬಲಿಪಶುಗಳಾಗುತ್ತಿರುವುದು. 50 ವರ್ಷಗಳ ಹಿಂದೆಯೇ ಪತ್ತೆಯಾದ ಈ ನೊಣದ ಪೀಡೆಯನ್ನು ತೊಡೆದು ಹಾಕಲಾಗಿತ್ತು. ಮತ್ತೆ ಈ ಬಾರಿ ಬೈರಿಗೆ ನೊಣಗಳು ಪೀಡೆಗೆ ಕಾರಣ ಇನ್ನೂ ವಿಜ್ಞಾನಿಗಳಿಗೆ ಗೊತ್ತಾಗಿಲ್ಲ. ಎಲ್ಲಿಂದ ಬಂದವು ಹೇಗೆ ಬಂದವು ಎಂಬುದಿನ್ನೂ ಪತ್ತೆಯಾಗಬೇಕು. ಇಲ್ಲಿ ಒಂದು ಸಂತೋಷದ ಸಂಗತಿಯೆಂದರೆ, ಈ ನೊಣಗಳು ಬಹಳ ದೂರ ಹಾರಲಾರವು ಹಾಗೂ ಅಪಾಯಕಾರಿ ಸಂಗತಿಯೆಂದರೆ ಪ್ರಾಣಿಗಳ ಮೂಲಕ ಎಲ್ಲಿಂದೆಲ್ಲಿಗೂ ತಲುಪಬಲ್ಲವು. ಅಲ್ಲಿನ ಜೀವ ವಿಜ್ಞಾನಿಗಳು ಬೈರಿಗೆ ನೊಣದ ನಿವಾರಣೆಗಾಗಿ ಹೊಸದೊಂದು ತಂತ್ರವನ್ನೇ ಹೆಣೆದಿದ್ದಾರೆ. ಹೆಣ್ಣು ಬೈರಿಗೆ ನೊಣ ತನ್ನ ಜೀವಿತಾವಧಿಯಲ್ಲಿ ಒಂದೇ ಬಾರಿ ಮೊಟ್ಟೆಯಿಡುವುದು. ಅಲ್ಲಿಗೆ ಹೆಣ್ಣು ನೊಣಗಳು ಇಡುವ ಮೊಟ್ಟೆಯನ್ನೇ ಬಂಜೆ ಮಾಡಿದರೆ ಹೇಗೆ? ಇಂತಹ ಪ್ರಯೋಗ ನಡೆಸಲಾಗುತ್ತಿದೆ. ಗಂಡು ನೊಣಗಳ ವೀರ್ಯವನ್ನೇ ವಿಕಿರಣ ಹಾಯಿಸಿ ಬಂಜೆ ಮಾಡಲಿರುವ ಒಂದು ಪ್ರಯತ್ನವಿದು. ಇಂತಹ 1 ಲಕ್ಷ ಬಂಜೆ ಗಂಡು ಬೈರಿಗೆ ನೊಣಗಳನ್ನು ತಯಾರು ಮಾಡಿ ಮೊನ್ನೆ ಅಕ್ಟೋಬರ್ 11 ರಂದು ಪರಿಸರಕ್ಕೆ ಬಿಟ್ಟಿದ್ದಾರೆ. ಜೊತೆಗೆ ಪ್ಲೋರಿಡಾದಿಂದ ಆಚೆ ಬೈರಿಗೆ ನೊಣಗಳು ಪಸರಿಸದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನೂ ಅಲ್ಲಿನ ಆಡಳಿತ ನಡೆಸಿದೆ. ಪ್ಲೋರಿಡಾದಿಂದ ಹೊರಗೆ ಹೋಗುವ ಪ್ರತಿಯೊಂದು ವಾಹನಗಳನ್ನೂ ತಪಾಸಣೆ ಮಾಡಲಾಗುತ್ತದೆ. ವಾಹನದಲ್ಲಿ ಸಾಕು ಪ್ರಾಣಿಗಳು ಇದ್ದರೆ ಅವುಗಳಿಗೆ ಬೈರಿಗೆ ನೊಣಗಳ ಭಾದೆಯಿದೆಯೇ ಎಂದು ಪರೀಕ್ಷಿಸಲಾಗುತ್ತದೆ. ಪ್ಲೋರಿಡಾದ ಪ್ರತಿಯೊಬ್ಬ ಪ್ರಜೆಗೂ ಈ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಬೈರಿಗೆ ನೊಣಗಳ ವಿಪತ್ತು ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ಕಾಡುಪ್ರಾಣಿಗಳಿಗೆ ಈ ನೊಣಗಳ ಸೋಂಕು ಆದ ಅನುಮಾನ ಬಂದರೂ ಸಾಕು, ತಕ್ಷಣದಲ್ಲಿ ಇದಕ್ಕಾಗಿಯೇ ಕಾದಿರಸಲಾದ ದೂರವಾಣಿಗೆ ಸಂಪರ್ಕಿಸಿ ಎಂದು ಜನರಲ್ಲಿ ಮನವಿ ಮಾಡಲಾಗಿದೆ. ಜಾನುವಾರುಗಳನ್ನು ಪ್ರತಿನಿತ್ಯ ತಪಾಸಣೆ ಮಾಡಲೇ ಬೇಕು ಎಂಬ ನಿಯಮ ತರಲಾಗಿದೆ. ಚಿಕ್ಕ ಅನುಮಾನ ಬಂದರೂ ಅಲ್ಲಿನ ಜಾನುವಾರು ವೈದ್ಯರನ್ನು ಕಳುಹಿಸಲಾಗುತ್ತಿದೆ. ಹೀಗೆ ಬೈರಿಗೆ ನೊಣವನ್ನು ನಿರ್ನಾಮ ಮಾಡಲು ಸಮರೋಪಾದಿಯಲ್ಲಿ ಅಲ್ಲಿನ ಆಡಳಿತ ಸಜ್ಜಾಗಿದೆ. ಪ್ರತಿವಾರ ಲಕ್ಷಾಂತರ ಬಂಜೆ ಗಂಡು ನೊಣಗಳನ್ನು ಬಿಡಲಾಗುತ್ತಿದೆ.
ಹೀಗೆ ಪೀಡೆಯಾದ ಬೈರಿಗೆ ನೊಣಗಳ ನಿವಾರಣೆಗಾಗಿ ಆಧುನಿಕ ವಿಜ್ಞಾನ ಟೊಂಕ ಕಟ್ಟಿ ನಿಂತಿದೆ. ನಮ್ಮಲ್ಲಿ ಸಿದ್ಧನಿಗೆ ಚಿಕಿತ್ಸೆ ನೀಡಿದರೂ ಫಲ ಸಿಗುತ್ತಿಲ್ಲ, ದಯಾಮರಣವೊಂದೇ ದಾರಿಯೆಂದು ಇಲಾಖೆ ಅಥವಾ ಸರ್ಕಾರ ಕೈಚೆಲ್ಲಬಹುದಾದ ಸಂದರ್ಭ ಇದೆ. ಆದರೆ ಈಗಾಗಲೇ ನಾಶವಾದ ಹವಳದ ದಂಡೆಗಳನ್ನು ಮರುಸೃಷ್ಟಿ ಮಾಡಲಾಗಲೀ ಅಥವಾ ತಕ್ಷಣದಲ್ಲಿ ಸಮುದ್ರದಲ್ಲಿನ ಬಿಸಿ ಮತ್ತು ಹುಳಿಯಂಶವನ್ನು ನಿವಾರಣೆ ಮಾಡುವುದಾಗಲೀ ಈಗಿನ ವಿಜ್ಞಾನಕ್ಕೂ ಅಸಾಧ್ಯ. ಸಂತಾಪ ಸೂಚಿಸುವುದಷ್ಟೇ ನಮಗುಳಿದಿರುವ ಏಕೈಕ ಮಾರ್ಗ.