ಗೌರ್ಮೆಂಟ್ ಇಸ್ಕೂಲು..!: ಪ.ನಾ.ಹಳ್ಳಿ.ಹರೀಶ್ ಕುಮಾರ್


ಪಾರಿ  ಶಾಲೆ ಕಡೆಯಿಂದ ಯಾರನ್ನೋ  ಬೈಯ್ದುಕೊಳ್ಳುತ್ತಾ  ಬರ್ತಿರೋದು ನೋಡಿ ಅವಳನ್ನ ತಡೆದು ನಿಲ್ಲಿಸಿದ ಸಿದ್ಧ ಕೇಳಿದ, ‘ಯಾಕಮ್ಮೀ, ಎತ್ತಕಡೆಯಿಂದ ಬರ್ತಿದ್ದೀ ?’
ಅದಕ್ಕೆ ಏದುಸಿರು ಬಿಡುತ್ತಿದ್ದ ಪಾರಿ, ‘ಏ.. ಕಾಣಕಿಲ್ವಾ.. ಇಸ್ಕೂಲ್ತಾಕೆ ಹೋಗಿದ್ದೆ.’ ಅಂದಳು.
ಅವರೀರ್ವರ ಮಾತುಕತೆ ಹೀಗೇ ಮುಂದುವರೆಯುತ್ತದೆ.
‘ ಇಸ್ಕೂಲ್ತಾಗೆ ಏನಿತ್ತವೀ ನಿಂದು ಅಂತಾ ಕೆಲ್ಸಾ..?’ 
‘ ಏ..ನಂದೇನಿದ್ದತು ಬಿಡು. ಆ ನಮ್ಮ  ಮೂದೇವಿ ಐತಲ್ಲಾ. ವೆಂಕಟೇಸ ಅಂತಾ..ಅದುನ್ನ ಒಳಿಕ್ಕೆ ಕೂಡಿ ಬರೋಕೆ ಹೋಗಿದ್ದೆ.’
‘ ಯಾಕಂತೆ ಪಾರವ್ವ, ಅವುನ್ಗೆ ಇಸ್ಕೂಲು ಬ್ಯಾಡಂತೇನು ?’
‘ ಯಾವನಿಗ್ಗೊತ್ತು, ಮುಂಡೇಮಗಂದು..ಇಸ್ಕೂಲ್ಗೆ ಹೋಗ್ಲ ಅಂದ್ರೆ, ನಾನೂ ಕೆರೆತಾಕೆ ಹೋಗ್ತೀನಿ ಅಂತದೆ ಮುಂಡೇದು. ಅದುಕ್ಕೆ ಚೆನ್ನಾಗಿ ಎಳ್ಡು ಗದ್ಮಿ, ಮೇಸ್ಟ್ರುತಾವ ಬಿಟ್ ಬಂದೀನೀ..’


‘ಅವ್ನಾರ ಏನ್ ಮಾಡ್ತನೆ ಬಿಡು ಅಲ್ಲೋಗಿ.., ಪಾಪ ನಿಂಜೊತಿಗಾರ ಬಂದಿದ್ರೆ, ಕೆಲ್ಸನಾರ ಕಲ್ಕೋಮಾವ.’
‘ಏ ಸಾಕ್ ಬಿಡು ಸಿದ್ದಣ್ಣಾ….ನೋಡ್ತಾ ಇಲ್ವಾ ನಮ್ ಐಭೋಗಾನ..ಅವ್ನರ ಓದು ಕಲೀಲಿ, ದೊಡ್ಡ ಸಾಯೇಬಾ ಆಗ್ಲಿ..’
‘ಅಲ್ಲಬೇ,,ಸಾಯೇಬುನ್ನ ಮಾಡೋಳು ಗೌವ್ರ್ಮೆಂಟ್ ಇಸ್ಕೂಲ್ಗೆ ಯಾಕ್ ಬಿಟ್ ಬಂದೆ. ಯಾವ್ದರ ಪ್ರೈವೇಟ್ ಇಸ್ಕೂಲ್ ಗೆ ಸೇರ್ಸ ಬೇಕಿತ್ತು’
‘ಯಾಕಣ್ಣಾ ಇಂಗಂತಿದೀ..?. ಆಟೋಂದು ದುಡ್ಡು ನಮ್ತಾಕೆಲ್ಲೈತಣ್ಣಾ..?.ಇದ್ರಾಗಾದ್ರೆ ಎಲ್ಲಾ ಪುಕ್ಸಟ್ಟೆ ನಡೀತದೆ.’
‘ ಅಲ್ಲೇ ನೋಡಮೀ ..ಎಡವಟ್ಟಾಗಿರೋದು..!’
‘ ಯಾಕ್ ಸಿದ್ದಣ್ಣಾ.. ಏನ್ ಎಡವಟ್ಟಾಗದೇ ಅದ್ರಗೇ..? ‘


‘ ಗೌರ್ಮೆಂಟ್ನೋರು  ಮುಂಜಾನೆಕ್ಕೆ ಹಾಲೂ, ಮದ್ಯಾನ್ಕೆ ಬಿಸಿಊಟಾ, ವರ್ಸಾ ಎರೆಡ್ಜೊತೆ ಬಟ್ಟೆ, ಬುಕ್ಕು, ಕಾಲಕ್ಷಿಪ್ಪು, ಹೊಲಕ್ಕೆ ಹಿಟ್ಟು ತಾಂಡೋಗಕೇ ಸೈಕಲ್ಲು, ಅಂತೆಲ್ಲಾ  ಕೊಡ್ತಾರ್ವಲ್ಲಾ.. ಆ ಕೆಲ್ಸಾನೆಲ್ಲಾ ಮಾಡೋರು ಯಾರು ಅಂದ್ಕಂಡೆ..?’
‘ಯಾರು ಮಾಡ್ತಾರಣ್ಣಾ..?’
‘ಇಸ್ಕೂಲ್ ಮೇಸ್ಟ್ರೇ ಕಣಮ್ಮೀ..!’
‘ಇದೇನಣ್ಣಾ..! ಇಂಗಂದ್ಬಿಟ್ಟೆ..?. ಅಡ್ಗೇ ಮಾಡೋಕೆ ಹೆಣ್ಣಾಳು ಇದಾರಲ್ಲಣ್ಣಾ ಇಸ್ಕೂಲ್ನಾಗೆ..’
‘ಅವ್ರೊಂದಿಬ್ರು ಕೈಲಿ ಏನಾಗ್ತದೆ ಬಿಡು ಪಾರವ್ವ..ಅದುಕ್ಕೆ ಹೆಣ್ಮಕ್ಳು ಟೀಚರೆಲ್ಲಾ ತರಕಾರಿ ಹಚ್ಕೊಡದು, ಸೊಪ್ಪು ಸೋಸದು,ಅಕ್ಕಿ ಸಾರ್ಸದು ಮಾಡ್ತರೆ..ಇನ್ನು ಮೇಸ್ಟ್ರುಗುಳು ಒಲಿಗೆ ಕಟ್ಟಿಗೆ ಸೀಳದು, ನೀರು ತಂದಾಕದು ಮಾಡ್ಕಂತರೆ. ಇನ್ನು ಹೆಡ್ಮಾಸ್ಟ್ರು ಇವರ್ದೆಲ್ಲಾ ಲೆಕ್ಕಾ ಬರೀತರೆ..ಇದು ದಿನಾಗ್ಲೂ ಇರೋದೇ..ಇದ್ರು ಮದ್ಯುದಾಗೆ ಏನಾರ ಟೈಂ ಸಿಕ್ರೆ..ಮಕ್ಕಳಗಣತಿ, ಮತದಾರರ ಪರಿಷ್ಸರಣೆ, ಜನಗಣತಿ, ಜಾತಿಗಣತಿ,ಆರ್ಥಿಕ ಗಣತಿ,ಮನೆಗಣತಿ ಅಂತಾ ಮಾಡ್ತಿರ್ತಾರೆ..’
‘ಅಂಗಾರೆ ನಮ್ ಹೈಕ್ಳಿಗೆ ಕಲ್ಸಾರು ಯಾರಣ್ಣಾ..?’


‘ಹೊಗೋ ಇವ್ನಾ ಮಂಜಾಳಾಗಾ..ಈಗ ಹೈಕ್ಳಿಗೆ ಯಾರು ಕಲ್ಸೋದು ಬೇಕಿಲ್ಲಮೀ..ಅವ್ರ ಪಾಡಿಗೆ ಅವ್ರೇ ಓದ್ಕೋತಾರೆ..’
‘ಅದೆಂಗಣ್ಣಾ..,..?’
‘ನೋಡು ಪಾರವ್ವಾ.. ಸಣ್ಣ ಹೈಕ್ಳಿಗೆ ‘ನಲಿಕಲಿ’ ಅಂತಾ ಬಂದಾದೆ..ಅದ್ರು ಪ್ರಕಾರ ಬುಕ್ಕು ಗಿಕ್ಕು ಅಂತಾ ಏನಿಲ್ಲಾ..ಅವ್ರಿಸ್ಟುಕ್ಕೆ ಅವ್ರೇ ಕಲ್ಕಣಾದು..ಅವ್ರ ಸಹಾಯಕ್ಕೆ ಅಂತಾ ಕಾರ್ಡು, ಮೆಟ್ಳು, ತಟ್ಟೆ, ಅಂತಾ ಮಾಡ್ಯಾರೆ..ಇನ್ನು ವಸೀ ದೊಡ್ಡವಾದ್ಮೇಲೇ ‘ಸ್ವಕಲಿಕೆ’ ಅಂತಾರೆ, ಅಂದ್ರೆ ನಾವು ಸಣ್ಣರಿದ್ದಾಗಾ ಮಾನಿಟ್ರು ಅಂತಾ ಮಾಡಿ ಅವನ್ಕಡೆಯಿಂದಾ ನಮ್ಗೆಲ್ಲಾ ಕಲುಸ್ತಿದ್ರಲ್ಲಾ..ಹಂಗೇನೇ..ಹೈಕ್ಳು ತಾವೇ ಸ್ವಂತ ಕಲ್ಕಣದು..ಇದುಕ್ಕೆ ಮೇಸ್ಟ್ರು ಬೇಕಾಗೇ ಇಲ್ಲಾ..!’
‘ಇದೇನಣ್ಣಾ ಅನ್ಯಾಯಾ.., ಇದುನ್ನಾ ಕೇಳಾರು ಯಾರೂ ಇಲ್ವಾ..? ಇದುಕ್ಕೆ ಪರಿಹಾರಾನೇ ಇಲ್ವೇನಣ್ಣಾ..?!’


‘ಯಾಕಿಲ್ಲಮೀ..ಇದುಕ್ಕೂ ಒಬ್ರು ಮಿನಿಸ್ಟ್ರು ಅವ್ರೆ, ಆದ್ರೆ ಅವ್ರು ಮೇಸ್ಟ್ರು ಕೆಲ್ಸಾನಾ ಕಮ್ಮಿ ಮಾಡ್ತೀನಿ ಅಂತಾ ಹೇಳೀ.. ಹೇಳೀ..ಸುಮ್ನಾಗಿ ಬಿಡ್ತಾರೆ. ಅವ್ರು ಸುಮ್ನಾಗೋದು ನೋಡಿ ಇವ್ರ ಸಂಘ ಸಂಸ್ಥೆಗಳು ಸುಮ್ನಾಗ್ಬಿಡ್ತವೆ..ಗೌರ್ಮೆಂಟ್ನೋರು ಏನೂ ಪರಿಹಾರ ಮಾಡಂಗಿಲ್ಲಾ ಅಂತಾನೇ ಎಲ್ಲಾ ಬುದ್ಧಿವಂತ್ರೂ  ತಾವೇ ಪರಿಹಾರ ಕಂಡ್ಕೊಂಡು ತಮ್ಮ ಹೈಕ್ಳುನೆಲ್ಲಾ ಪ್ರೈವೇಟ್ ಇಸ್ಕೂಲ್ ಗೆ ಸೇರುಸ್ತಿದಾರೆ..ಎಲ್ಲಿವರೆಗೂ ಗೌಮೆಂಟ್ನೋರು ಮೇಸ್ಟ್ರು ಗೆ ‘ಕಲಿಸೋ ಭಾಗ್ಯ’ ಕೊಡಲ್ವೋ ಅಲ್ಲೀವರ್ಗೂ ಗೌರ್ಮೆಂಟ್ ಇಸ್ಕೂಲು ಹಣೇಬರಹ ಬದಲಾಗಲ್ಲಾ..!’
‘ಹಂಗಾದ್ರೆ..ಗೌರ್ಮೆಂಟ್ನೋರು ಕೊಟ್ಟಿರೋ ‘ ಸಾಲಭಾಗ್ಯ ‘ ದಾಗೆ ನಾನೂ ಸಾಲ ಮಾಡಿಯಾದ್ರೂ ನಮ್ ವೆಂಕಟೇಸುನ್ನಾ ಪ್ರೈವೇಟ್ ಶಾಲೆಗೆ ಸೇರುಸ್ತೀನಿ ಬುಡಣ್ಣಾ..’

-ಪ.ನಾ.ಹಳ್ಳಿ.ಹರೀಶ್ ಕುಮಾರ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x