ಗೌರಿ ಗಣೇಶ:ವಾಸುಕಿ ರಾಘವನ್


ನಿಜಕ್ಕೂ ಒಳ್ಳೆಯ ಸಿನಿಮಾ ಅಂದರೆ ಯಾವುದು? ಅದನ್ನು ಅಳೆಯಲು ಬೇಕಿರುವ ಮಾನದಂಡಗಳು ಯಾವುವು? ಈ ಪ್ರಶ್ನೆಗೆ ನಿಖರವಾದ ಉತ್ತರ ನನ್ನಲ್ಲಿಲ್ಲ.  ಆದರೆ ಒಂದು ಮಾತ್ರ ಹೇಳಬಲ್ಲೆ. ನೀವು ನೋಡಿದ ಒಂದು ಚಿತ್ರ ಎಷ್ಟೋ ವರ್ಷಗಳಾದ ಮೇಲೂ ನಿಮ್ಮ ನೆನಪಿನಲ್ಲಿ ಉಳಿದಿದದ್ದರೆ, ಅದು ಒಳ್ಳೆಯ ಚಿತ್ರ!

ನಾನು ಗೆಳೆಯ ಬೆಳ್ಳೂರ್ ಮನೆಗೆ ಮೊದಲ ಸಲ ಹೋಗ್ತಿದ್ದೆ. ಮನೆಯ ವಿಳಾಸ, ಡೈರೆಕ್ಷನ್ ಎಲ್ಲಾ ಕೇಳಿಕೊಂಡು ಸರಿಯಾಗಿ ಬಂದು ತಲುಪಿದೆ. ಅಪಾರ್ಟ್ ಮೆಂಟ್ ನಂಬರ್ ಏನು ಅಂತ ಕೇಳಿದಾಗ “ನೂರಾ ಎರಡು” ಅಂದ ಬೆಳ್ಳೂರ್. ನಾನು ಸೀರಿಯಸ್ ಆಗಿ “ಓಹ್ ಹೌದಾ, ನೂರಾ ನಾಲ್ಕರಲ್ಲಿ ಮತ್ತೆ ನೂರಾ ಆರರಲ್ಲಿ ಯಾರಿದ್ದಾರೆ?” ಅಂತ ಕೇಳಿದೆ. ಇಬ್ಬರೂ ಜೋರಾಗಿ ನಗಕ್ಕೆ ಶುರು ಮಾಡಿದ್ವಿ. ನಿಮಗೂ ಆ ಜೋಕ್ ಏನು ಅಂತ ಗೊತ್ತಾಗಿರಬೇಕು ಆಲ್ವಾ? ರಿಲೀಸ್ ಆಗಿ ಇಪ್ಪತ್ತೆರಡು ವರ್ಷ ಆದ ಮೇಲೂ “ಗೌರಿ ಗಣೇಶ” ಚಿತ್ರ ಇನ್ನೂ ನಮ್ಮ ನೆನಪಿನ ಅಂಗಳದಿಂದ ಆಚೆ ಹೋಗೇ ಇಲ್ಲ, ಬಹುಷಃ ಹೋಗೋದೂ ಇಲ್ಲ ಅನ್ಸುತ್ತೆ.

ಒಂದೇ ಚಿತ್ರದಿಂದ ಅತೀ ಹೆಚ್ಚು ಪಾತ್ರಗಳನ್ನ ಜ್ಞಾಪಿಸಿಕೊಳ್ಳಿ ನೋಡಣ – ಇದರಿಂದ ಹೇಳೋದಾದ್ರೆ ಲಂಬೋದರ, ರತ್ನಾಕರ, ಸರಸೂ, ಎ.ಗಣೇಶ್, ಎಂ.ಗಣೇಶ್, ಚಂದ್ರಮೌಳಿ, ಗೌರಿ, ಆನಂದರಾಯ, ಮಧುಸೂಧನ – ಥಟ್ ಅಂತ ಇಷ್ಟೊಂದು ಹೆಸರುಗಳು  ಇನ್ಯಾವ ಕನ್ನಡ ಚಿತ್ರದಲ್ಲೂ ನಂಗೆ ನೆನಪಿಗೆ ಬರಲ್ಲ. ಈ ಚಿತ್ರದ ಎಷ್ಟು ಲೈನ್ ಗಳು ಇವತ್ತಿಗೂ ನೆನಪಿನಲ್ಲಿ ಇದೆ ನೋಡಿ – “ವಿಕ್ಟೋರಿಯಾ-ಬೌರಿಂಗ್-ಬೌರಿಂಗ್-ವಿಕ್ಟೋರಿಯಾ”, “ಪಂಜಾಬ್ ಅಲ್ಲಿ ಭಯೋತ್ಪಾದಕರ ಕಾಟ ಕಣಪ್ಪ”, “ಮಕ್ಕಳಿಗೆ ಲಿಫ್ಟ್ ಆಟ ಆಡೋದು ಅಂದ್ರೆ ತುಂಬಾ ಇಷ್ಟ”, “ಹ್ಹಾಹ್ಹಾ, ಸೂಪರ್ ಸೂಪರ್” ಇತ್ಯಾದಿ ಇತ್ಯಾದಿ.

ಎಂಬತ್ತು ತೊಂಬತ್ತರ ದಶಕಗಳು ಕಳಪೆ ಚಿತ್ರಗಳ ಮಹಾಪೂರವೇ ಇದ್ದ ಕಾಲ. ಆ ಸಮಯವನ್ನು ನಮಗೆ ಸಹನೀಯವಾಗಿಸಿದ್ದು ಅನಂತ್ ನಾಗ್ ನಟನೆಯ ಮಧ್ಯಮವರ್ಗದ ಕಾಮಿಡಿ ಚಿತ್ರಗಳು, ಅದರಲ್ಲೂ ಮುಖ್ಯವಾಗಿ ಫಣಿರಾಮಚಂದ್ರ ಅವರ ನಿರ್ದೇಶನದ ಚಿತ್ರಗಳು. ‘ಗಣೇಶನ ಮದುವೆ’, ‘ಗೌರಿಗಣೇಶ’, ‘ಗಣೇಶ ಸುಬ್ರಹ್ಮಣ್ಯ’ ನೋಡಿರದ ಕನ್ನಡಿಗರೇ ಇಲ್ಲ ಅಂತ ಹೇಳಬೇಕು. ಈ ಮೂರರಲ್ಲೂ ‘ಗೌರಿಗಣೇಶ’ ಅತ್ಯುತ್ತಮ ಚಿತ್ರ! ಅದೆಷ್ಟು ಸಲ ನೋಡಿದರೂ ಸ್ವಲ್ಪವೂ ಬೋರಾಗದ ರಂಜನೀಯ ಚಿತ್ರ ಇದು.

‘ಗೌರಿಗಣೇಶ’ ನೋಡಬೇಕಾದರೆ ನಿಮಗೆ ಈ ಪ್ರಶ್ನೆಗಳು ಬಂದಿದ್ವಾ? ಜನ ಮನೆಯಿಂದ ಆಚೆಯೇ ಬರಲಾರದಷ್ಟು ಭಯೋತ್ಪಾದಕರ ಕಾಟ ಇತ್ತಾ ಪಂಜಾಬ್ ಅಲ್ಲಿ? ಅಮೆರಿಕಾದ ಒಬ್ಬ ಬುಸಿನೆಸ್ಸ್ಮನ್, ಕೋಲ್ಕೊತ ಅಲ್ಲಿ ನೆಲೆಸಿರುವ ಒಬ್ಬ ಉದ್ಯಮಿ ಹತ್ತು ವರ್ಷದಲ್ಲಿ ಒಂದು ಸಲವೂ ಇಂಡಿಯಾಗೆ ಬರಕ್ಕೆ ಅಗಿರಲ್ವಾ? ಹಾಸ್ಪಿಟಲ್ ಅಲ್ಲಿ ಏನು ಎತ್ತ ಅಂತ ಚೆಕಪ್ ಮಾಡದೇ ಆಪರೇಷನ್ ಥಿಯೇಟರ್ ಗೆ ಕರ್ಕೊಂಡು ಹೋಗ್ತಾರಾ ಪೇಶಂಟ್ಸ್ ನ? ಆನಂದರಾಯ ತನ್ನ ಆಫೀಸ್ ಅಲ್ಲಿ ಕೆಲಸ ಮಾಡುವ ಎಲ್ಲಾ ಹೆಣ್ಣುಮಕ್ಕಳನ್ನು ಅನುಭವಿಸುತ್ತಿದ್ದ ಅಂದರೆ, ಈ ಅನಿವಾರ್ಯತೆಗೆ ಎಲ್ಲಾ ಹೆಣ್ಣುಮಕ್ಕಳೂ ಸಿಕ್ಕಿಬೀಳ್ತಾ ಇದ್ರು ಅಂದ್ರೆ, ಆ ಕಾಲದಲ್ಲಿ ಬೇರೆಕಡೆ ಕೆಲಸ ಸಿಗುವುದು ಅಷ್ಟೊಂದು ಕಷ್ಟಕರ ಆಗಿತ್ತಾ? ಉಹೂಂ, ನಾವು ಈ ರೀತಿ ಪ್ರಶ್ನೆಗಳನ್ನ ಕೇಳೇ ಇರಲ್ಲ. ಕಾರಣ ನಾವೆಲ್ಲರೂ “ಸಸ್ಪೆನ್ಶನ್ ಆಫ್ ಡಿಸ್ಬಿಲೀಫ್” ಮೊರೆ ಹೋಗಿರ್ತೀವಿ. ಬೇರೆಲ್ಲಾ ವಿಷಯಗಳು ನಮಗೆ ತುಂಬಾ ಇಷ್ಟವಾದಾಗ, ಸಿನಿಮಾ ನಮ್ಮನ್ನು ತನ್ನ ನಿರೂಪಣೆಯಲ್ಲಿ ಹಿಡಿದಿಟ್ಟುಕೊಂಡಾಗ, ಮನಸ್ಸು ಇವನ್ನೆಲ್ಲ ಕಡೆಗಣಿಸಿಬಿಡುತ್ತದೆ.

ನನ್ನ ಪ್ರಕಾರ ಸಿನಿಮಾದ ಯಶಸ್ಸಿಗೆ ಮುಖ್ಯ ಕಾರಣ ಅದರ ಪಾತ್ರವರ್ಗ. ಅನಂತ್ ನಾಗ್, ವಿನಯಾ ಪ್ರಸಾದ್, ಮಾಸ್ಟರ್ ಆನಂದ್, ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ, ರಮೇಶ್ ಭಟ್, ಸಿಹಿಕಹಿ ಚಂದ್ರು, ರತ್ನಾಕರ – ಇವರೆಲ್ಲರ ನಟನೆಯಿಂದಲೇ ಈ ಚಿತ್ರ ಇಷ್ಟು ಚನ್ನಾಗಿ ಮೂಡಿ ಬಂದಿರಲು ಸಾಧ್ಯವಾಗಿರೋದು. ಬೇರೆ ಯಾವ ತಾಂತ್ರಿಕ ಕಾರಣಗಳಿಂದ ಅಲ್ಲ. ಕನ್ನಡ ಚಿತ್ರರಂಗದಲ್ಲಿ ಮೊದಲಿಂದಲೂ ಅಷ್ಟೇ, ಅದ್ಭುತ ಎನ್ನುವಂತ ಛಾಯಾಗ್ರಹಣಕಾರರು, ಸಂಕಲನಕಾರರು, ನಿರ್ದೇಶಕರು ಇದ್ದದ್ದಕ್ಕಿಂತ ಜಾಸ್ತಿ ಪ್ರಭಾವಶಾಲಿಯಾಗಿ ಇದ್ದದ್ದು ಪೋಷಕನಟರು – ಅಶ್ವಥ್, ಲೋಕನಾಥ್, ಬಾಲಕೃಷ್ಣ, ನರಸಿಂಹರಾಜು, ಪಂಡರಿಬಾಯಿ, ಲೀಲಾವತಿ, ಲೋಕೇಶ್ – ಮುಂತಾದವರೆಲ್ಲಾ ಕಥೆ, ಪಾತ್ರ, ನಿರ್ದೇಶಕರು ಇವೆಲ್ಲದರ ಸಾಧಾರಣತೆಯನ್ನು ಮೀರಿದ ಅಭಿನಯ ಕೊಡ್ತಾ ಇದ್ರು!

‘ಗೌರಿಗಣೇಶ’ ಚಿತ್ರದ ಸಂಗೀತ ನಿರ್ದೇಶಕರು ಯಾರು ಗೊತ್ತಾ? ಗೊತ್ತಿಲ್ವಾ? ರಾಜನ್-ನಾಗೇಂದ್ರ! ಅಂತಹ ಸುದೀರ್ಘ ಮತ್ತು ಯಶಸ್ವೀ ಕೆರಿಯರ್ ಬಗ್ಗೆ ಹೇಳುವಾಗ ಈ ಚಿತ್ರದ ಪ್ರಸ್ತಾಪ ಯಾರೂ ಮಾಡಲ್ಲ. ಬಹುಷಃ ‘ಗಣೇಶನ ಮದುವೆ’ ಮತ್ತು ‘ಗೌರಿಗಣೇಶ’ ಅವರ ಕಡೆಯ ಯಶಸ್ವೀ ಚಿತ್ರಗಳು ಅನಿಸುತ್ತೆ. ಸಂಗೀತ ಬಹಳ ಸರಳವಾಗಿದ್ದರೂ, ಅವರ ಮಟ್ಟಿಗೆ ಒಂದು ವಿಭಿನ್ನ ಪ್ರಯತ್ನ ಇದು. ಎಲ್ಲರೂ ಸುಲಭವಾಗಿ ಗುನುಗಿಕೊಳ್ಳುವ ಗುಣವಿರುವುದರಿಂದಲೋ, ಅಥವಾ ತಮಾಷೆ ಲಿರಿಕ್ಸ್ ಇಂದಲೋ ಈ ಹಾಡುಗಳು ಇನ್ನೂ ನೆನಪಿನಲ್ಲಿ ಉಳಿದಿವೆ. “ನಿಮ್ಮ ಮಗುವು ನಗುತಿರುವ”, “ಡ್ಯಾಡಿ ಡ್ಯಾಡಿ ಡ್ಯಾಡಿ, ನಾನು ನೀನು ಜೋಡಿ” ಹಾಡುಗಳು ನನಗೆ ಈಗಲೂ ನಗು ತರಿಸುತ್ತವೆ.

ಅನಂತ್ ನಾಗ್ ನನ್ನ ಅತ್ಯಂತ ಮೆಚ್ಚಿನ ಕನ್ನಡ ನಟ. ನಾಟಕೀಯ ಶೈಲಿಯ ನಟನೆ ಇದ್ದ ಸಮಯದಲ್ಲಿ, ಸಹಜ ಅಭಿನಯದಿಂದ ನಟನೆಗೆ ಒಂದು ಹೊಸ ಅರ್ಥ ಕೊಟ್ಟ ಅಸಾಧಾರಣ ಪ್ರತಿಭೆ. ಲಂಬೋದರ ಮೂಲತಃ ಮೋಸಗಾರ, ಅವನು ಮೋಸದಿಂದ ದುಡ್ಡುಮಾಡುತ್ತಿರುವುದು ತಂಗಿಯ ಮದುವೆ ಮಾಡಲೋ, ತಾಯಿಯ ಚಿಕಿತ್ಸೆಗಾಗೋ ಅಲ್ಲ. ಅವನು ತನ್ನ ಜೀವನೋಪಾಯಕ್ಕೆ ಈ ಸುಲಭ ಮಾರ್ಗ ಆಯ್ದುಕೊಂಡಿದ್ದಾನೆ ಅಷ್ಟೇ, ಆದರೂ ನಾವು ‘ಲಂಬೋದರ’ನಿಗೆ ಚಿಯರ್ ಮಾಡ್ತೀವಿ. ಅಯ್ಯೋ ಅವನು ಸಿಕ್ಕಿಹಾಕೊಂಡರೆ ಅಂತ ಆತಂಕ ಪಡ್ತೀವಿ, ಅವನು ಸಿಕ್ಕಿಬೀಳದೆ ತಪ್ಪಿಸಿಕೊಂಡಾಗ ಸಿಕ್ಕಾಪಟ್ಟೆ ಖುಷಿ ಪಡ್ತೀವಿ. ಈ ತರಹದ ಪಾತ್ರ ಮಾಡಲು ಕೇವಲ ಅನಂತ್ ನಾಗ್ ಅವರಿಗೆ ಮಾತ್ರ ಸಾಧ್ಯ.

ಅನಂತ್ ನಾಗ್ ನಮಗೆ ಅಷ್ಟೊಂದು ನಗುತರಿಸುವ ಚಿತ್ರಗಳನ್ನು ಕೊಟ್ಟಿದ್ದಾರೆ ಎನ್ನುವುದು ಎಷ್ಟು ಸಂತೋಷದ ವಿಚಾರವೋ, ಅಂತಹ ದೈತ್ಯಪ್ರತಿಭೆಗೆ ಸವಾಲೊಡ್ಡುವ ಪಾತ್ರಗಳನ್ನು ಕೊಡುವುದರಲ್ಲಿ ನಮ್ಮ ಚಿತ್ರರಂಗ ಬಹುತೇಕ ವಿಫಲವಾಗಿದೆ ಅನ್ನುವುದು ಅಷ್ಟೇ ಬೇಜಾರಿನ ವಿಷಯ!

 

 

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
ವೆಂಕಟೇಶ ಮಡಿವಾಳ ಬೆಂಗಳೂರು
ವೆಂಕಟೇಶ ಮಡಿವಾಳ ಬೆಂಗಳೂರು
10 years ago

ನಿಜ , ಆ ಚಿತ್ರ ಯಾವತ್ತು ಕಲ್ಟ್  ಕ್ಲಾಸಿಕ್ .. 
ನಕ್ಕು ನಕ್ಕು ಸುಸ್ತಾಗಬೇಕು .. 
ಅನಂತ್ ನಾಗ್ ಅವರನ್ನು ನಮ್ಮ ಚಿತ್ರ  ರಂಗ ಸರಿಯಾಗಿ ಉಪಯೋಗಿಸಿಕೊಂಡಿಲ್ಲ  ಎನ್ನುವ ಭಾವ ನನಗೂ ಇದೆ . ;((
ಎಲ್ಲ ಪಾತ್ರ ವರ್ಗ ಸೂಪರ್ , ಅದ್ರಲ್ಲಿ ಮಾ : ಆನಂದ್ … ;() ಸೂಪರ್ರೋ ಸೂಪರ್ 
 
ಚಿತ್ರವನ್ನು ಮತೊಮ್ಮೆ ನೆನಪಿಸಿದಿರಿ .. 
ನನ್ನಿ 
 
 
ಶುಭವಾಗಲಿ 
ವೆಂಕಟೇಶ ಮಡಿವಾಳ ಬೆಂಗಳೂರು 
\।/

Sumathi Deepa Hegde
10 years ago

ಯಾವತ್ತು ಎರಡು ಎರಡೂವರೆ ಘಂಟೆ ಒಂದೆಡೆ ಕೂತು ಫಿಲ್ಮ್ ನೋಡೋ ತಾಳ್ಮೆ ಇಲ್ಲದ ನನಗೆ ಈ ಗೌರಿ ಗಣೇಶ, ಗಣೇಶನ ಮದುವೆ, ಗಣೇಶ ಸುಬ್ರಮಣ್ಯ   ತುಂಬಾ ಇಷ್ಟವಾದ ಚಿತ್ರಗಳು… everytime i enjoy these movies…

Utham Danihalli
10 years ago

Chenagidhe nimma lekana

GAVISWAMY
10 years ago

i hv watched this muV many times..
timeless comedy..
ananth nag sir is my favourite also..
tnq.

 

4
0
Would love your thoughts, please comment.x
()
x