ಸರ್ವ ಮಂಗಳ ಮಾಂಗಲ್ಯೇ
ಶಿವೇ ಸರ್ವಾರ್ಥ ಸಾಧಿಕೇ
ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೇಃ
ವಕ್ರತುಂಡ ಮಹಾಕಾಯ
ಕೋಟಿಸೂರ್ಯ ಸಮಪ್ರಭ
ನಿರ್ವಿಘ್ನಂ ಕುರುಮೇ ದೇವ
ಸರ್ವ ಕಾರ್ಯೇಶು ಸರ್ವದಾ…..
ಗಣೇಶ, ಗೌರಿ ಹಬ್ಬ ಎಂದರೆ ಮಕ್ಕಳಿಂದ ದೊಡ್ಡವರೆಗೂ ತುಂಬಾ ಸಡಗರದಿಂದ ಹಬ್ಬ. ಗಣೇಶ ಗಂಡು ಮಕ್ಕಳ ಹಬ್ಬವಾದರೆ, ಗೌರಿ ಹೆಣ್ಣುಮಕ್ಕಳ ಹಬ್ಬ, ಗೌರಿ ವ್ರತ ಹೆಣ್ಣು ಮಕ್ಕಳಿಗೆ ಇರುವ ಮಹತ್ತರ ವ್ರತ,ಗೌರಿ ತನಗೆ ಶಿವನನ್ನು ಪಡೆಯಲು ಬಹು ಭಕ್ತಿ ಶ್ರದ್ದೆಯಿಂದ ಈ ಪೂಜೆ ಮಾಡಿದಳಂತೆ, ಇದರಿಂದಾಗಿಯೇ ಮದುವೆಯಾಗದ ಹೆಣ್ಣು ಮಗಳು ತನಗೆ ಶಿವನಂತ ಪತಿ ದೊರಕಲಿ ಎಂದು ಗೌರಿ ಮೂರ್ತಿ ಇಟ್ಟು ಉಪವಾಸವಿದ್ದು ಭಕ್ತಿ ಶ್ರದ್ದೆಯಿಂದ ಗೌರಿಯನ್ನು ಪೂಜಿಸುತ್ತಾಳೆ ಈ ಪದ್ಧತಿಗೆ ಹರಿತಾಳ ಎಂದು ಹೆಸರು. ಇನ್ನು ಮುತ್ತೈದೆಯರು ಗೌರಿ ಮೂರ್ತಿ ಇಟ್ಟು ಪೂಜಿಸಿ, ಬಾಗಿನ ನೀಡಿ, ಮದುವೆಯಾಗಿ ಹೋದ ಹೆಣ್ಣುಮಗಳನ್ನು ಕರೆಸಿ ಸೀರೆಯುಡಿಸಿ ಕಳಿಸುತ್ತಾರೆ ಇದಕ್ಕೆ ಸ್ವರ್ಣಗೌರಿ ವ್ರತ ಎನ್ನುತ್ತಾರೆ. ಒಂದೊಂದು ಕಡೆ ಒಂದೊಂದು ರೀತಿ ಈ ಗೌರಿ ಹಬ್ಬವನ್ನು ಆಚರಿಸುತ್ತಾರೆ. ತವರನ್ನು ತೊರೆದ ಹೆಣ್ಣು ಮಗಳಿಗೆ ಈ ಹಬ್ಬ ಒಂದು ವರದಂತೆ. ತಾಯಿ ಮಗಳನ್ನು ಸೇರಿಸುವ ಅಪೂರ್ವ ಹಬ್ಬ ಗೌರಿ ಹಬ್ಬ. ಇನ್ನು ಮಾರನೇ ದಿನವೇ ಗಣೇಶನ ಹಬ್ಬ ಇದು ಮನೆಯಲ್ಲೇ ಅಲ್ಲದೇ ಹಾದಿ ಬೀದಿಗಳಲ್ಲೂ ಆಚರಿಸೋ, ಗಂಡು ಮಕ್ಕಳಿಗೆ ಹೇಳತೀರದ ಸಡಗರ. ತಿಂಗಳಿಂದಲೇ ಗಣೇಶನ ಮೂರ್ತಿಗಾಗಿ ಮನೆ ಮನೆಗಳಿಂದ ಚಂದಾ ವಸೂಲಿಮಾಡಲು ಡಬ್ಬ ಹಿಡಿದು ತಿರುಗುತ್ತಾರೆ. ಗಣೇಶನ ಹಬ್ಬ ಭಾರತದಾಂತ್ಯಂತ ಆಚರಿಸುವ ಹಬ್ಬ. ಗಣೇಶ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರಿಗೂ ಪ್ರಿಯ, ಎಲ್ಲಾ ಕಾರ್ಯಗಳಿಗೂ ಮೊದಲ ಪೂಜೆ ವಿಙ್ಞವಿನಾಶಕ, ಸಿದ್ದಿ ಪ್ರದಾಯಕನಾದ ಅವನಿಗೆ. ಗಣೇಶ ಹುಟ್ಟಿದ ದಿನವೇ ಗಣೇಶ ಚತುರ್ಥಿ. ಈ ಕಥೆ ಕೇಳಲು ಸೊಗಸು,
ಪಾರ್ವತಿ ಒಮ್ಮೆ ಸ್ನಾನ ಮಾಡಬೇಕಿತ್ತಂತೆ, ಕಾವಲಿಗೆ ಯಾರು ಇಲ್ಲದ ಕಾರಣ ತನ್ನ ಬೆವರಿನಿಂದರೆ ಒಂದು ಮೂರ್ತಿ ಮಾಡಿ ಅದಕ್ಕೆ ಜೀವವಿತ್ತು ಕಾವಲು ಕಾಯಲು ಹೇಳಿದಳಂತೆ, ಅಂತೆಯೆ ಬಾಲಕ ಕಾವಲು ಕಾಯುತ್ತಿರಬೇಕಾದರೆ ಪಾರ್ವತಿಯನ್ನು ಕಾಣಲು ಬಂದ ಶಿವನನ್ನು ತಡೆದನಂತೆ, ಬಹಳ ವಾಗ್ವಾದದ ನಂತರ ಶಿವನಿಗೆ ಕೋಪ ಬಂದು ಗಣೇಶನ ಶಿರಶ್ಚೇದಿಸಿದನಂತೆ, ನಂತರ ಮಗನೆಂದು ತಿಳಿದ ಮೇಲೆ ಆನೆಯ ಮುಖ ತಂದು ಜೀವ ಇತ್ತನಂತೆ ಹೀಗೆ ಗಣೇಶ ಗಜಮುಖನಾದ ಕತೆ ಎಲ್ಲರಿಗೂ ತಿಳಿದಿರುವಂತದ್ದೆ. ಈ ದಿನವನ್ನು ದೇಶದ ಎಲ್ಲೆಡೆಯೂ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಮುಂಬೈ ಮತ್ತು ಹೈದರಾಬಾದಿನಲ್ಲಿ ಆಚರಿಸುವ ಗಣೇಶನ ಹಬ್ಬ ಬಹಳ ಪ್ರಸಿದ್ಧಿ, ತುಂಬಾ ಎತ್ತರವಾದ ದೊಡ್ಡದಾದ ಗಣೇಶನ ಮೂರ್ತಿ ಇಡುತ್ತಾರೆ ಅಲ್ಲಿ. ಇನ್ನು ಎಲ್ಲಾ ಕಡೆಯೂ ವಿಶಿಷ್ಟವಾದ, ವಿವಿಧ ಶೈಲಿಯ ಗಣೇಶನ ಮೂರ್ತಿಗಳನ್ನಿಡುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಗಣೇಶ ಫುಲ್ ಮಾಡರ್ನ್ ಆಗಿರುತ್ತಾನೆ. ಆಯಾ ವರ್ಷದಲ್ಲಿ ಯಾವ ಚಿತ್ರ ಪ್ರಖ್ಯಾತವಾಗಿದೆಯೋ, ಯಾವ ವಿಚಿತ್ರ ವಸ್ತು ಸದ್ದು ಮಾಡಿದೆಯೋ ಆ ರೀತಿಯ ಗಣೇಶಗಳು ಆ ವರ್ಷದ ಹೈಲೈಟ್, ಹೋದ 'ಈಗ' ಗಣೇಶ ಬಂದಿತ್ತು ತೆಲುಗಿನಲ್ಲಿ ಪ್ರಸಿದ್ಧವಾಗಿದ್ದ ಈಗ ಚಿತ್ರದ ನೊಣದ ಆಕಾರದ ಗಣೇಶ ಬಂದಿತ್ತು, ಈ ವರ್ಷಕ್ಕೆ 'ಉಪ್ಪಿ2' ಗಣೇಶ ಎಂದು ತಲೆಗೆಳಗಾಗಿರುವ ಗಣೇಶನ ಮೂರ್ತಿ ಬಂದಿದೆಯಂತೆ. ಕಾರ್ಟೂನ್ ಗಣೇಶ, ಕ್ರಿಕೆಟ್ ಗಣೇಶ, ಡಿಸ್ನಿ ಗಣೇಶ, ಡ್ಯಾನ್ಸಿಂಗ್ ಗಣೇಶ, ಹೀಗೆ ಗಣೇಶನಿಗೂ ಹಲವಾರು ಹೆಸರುಗಳಿವೆ. ಒಟ್ಟಿನಲ್ಲಿ ಯಾವುದೇ ಮೂರ್ತಿ ಮಾಡಿದರೂ ಗಣೇಶನ ಮುಖವೊಂದಿಟ್ಟರೆ ಮುಗಿಯಿತು ಎಂಬಂತೆ ಆಗಿ ಹೋಗಿದೆ ಈಗ. ಇನ್ನು ಈ ಮೂರ್ತಿಗಳಿಗೊಂದಷ್ಟು ಬಗೆ ಬಗೆಯ ರಾಸಾಯನಿಕ ಬಣ್ಣ ಬಳಿದು, ಅದನ್ನು ನೀರಿಗೆ ಬಿಟ್ಟು ಯಥೇಚ್ಛವಾಗಿ ಜಲಮಾಲಿನ್ಯ ಮಾಡುತ್ತಾರೆ.
ಒಟ್ಟು ಶಾಂತಿಯಿಂದ ಆಚರಿಸಬೇಕಾದ ಹಬ್ಬದ ಹೆಸರಿನಲ್ಲಿ ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯ ಹೆಚ್ಚಾಗುತ್ತಿವೆ. ಗಣೇಶನ ಹಬ್ಬ ಬಂದರೆ ಮೂರು ದಿನಗಳ ಕಾಲ ರಸ್ತೆಯೆಲ್ಲ ಪೂರ್ತಿ ಗಲಭೆ, ಇನ್ನು ಕೊನೆಯ ದಿನವಂತೂ ಮೆರವಣಿಗೆಯ ಹೆಸರಲ್ಲಿ ಪಟಾಕಿ ಮದ್ದು ಸಿಡಿಸಿ ರಸ್ತೆ ಪೂರ್ತಿ ಮಲಿನಗೊಳಿಸುತ್ತಾರೆ ಇದನ್ನು ಸ್ವಚ್ಛ ಮಾಡಲೂ ಕಾರ್ಪೋರೇಷನ್ನಿನವರಿಗೆ ವಾರ ಬೇಕು. ಇಷ್ಟೆ ಅಲ್ಲದೇ ರಸ್ತೆಗೊಂದು ಬಳಗ ಮಾಡಿಕೊಂಡು ಗಣೇಶ ಕೂರಿಸಿ ಜಗಳ ಬೇರೆ ಆಡುತ್ತಾರೆ. ಇದನ್ನೆಲ್ಲ ಸ್ವಲ್ಪ ಮಟ್ಟಿಗೆ ತಡೆಯಲು ಈ ಬಾರಿ ಎಕೋ ಗಣೇಶ ಎಂಬ ಪರಿಸರ ಸ್ನೇಹಿ ಗಣೇಶನನ್ನು ಪರಿಚಯಿಸಿದ್ದಾರೆ. ಪೂರ್ತಿ ಮಣ್ಣಿನಿಂದ ಮಾಡಿದ ಈ ಗಣೇಶ ಯಾವುದೇ ಸುಣ್ಣ ಬಣ್ಣವಿಲ್ಲದೇ ಸ್ವಾಭಾವಿಕವಾಗಿ ನೀರಿನಲ್ಲಿ ಕರಗುತ್ತದೆ. ಎಲ್ಲರೂ ಈ ಪುಟ್ಟ ಗಣೇಶನನ್ನು ತಮ್ಮ ತಮ್ಮ ಮನೆಯಲ್ಲಿ ಪೂಜಿಸಿ ಮನೆಯಲ್ಲಿರುವ ನೀರಿನಲ್ಲೆ ವಿಸರ್ಜನೆ ಮಾಡಿ ಆ ನೀರನ್ನು ಗಿಡಗಳಿಗೆ ಹಾಯಿಸಬಹುದು. ಈ ಪದ್ದತಿ ಅನುಸರಿದಲ್ಲಿ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ. ಆದರೆ ಯುವಜನರು ಇದಕ್ಕೆ ಮನಸ್ಸು ಮಾಡಬೇಕು, ಏಕೆಂದರೆ ಬಣ್ಣವಿಲ್ಲದ ಸ್ವಾಭಾವಿಕವಾದ ಮಣ್ಣಿನ ಮೂರ್ತಿ ಇಡಲು ಎಲ್ಲರೂ ಇಚ್ಛಿಸುವುದಿಲ್ಲ ಅಲ್ಲವೇ…
ಇನ್ನೂ ಗಣೇಶ ಭಕ್ಷ್ಯ ಪ್ರಿಯ, ತರಹೇವಾರಿ ತಿಂಡಿಗಳೆಂದರೆ ಆತನಿಗೆ ಬಹು ಇಷ್ಟ. ಅವನಿಗೆ ಮಾಡುವ ಮೋದಕ,ಕಡುಬು, ಕರ್ಜಿಕಾಯಿಗಳು ನಮಗೂ ಪ್ರಿಯವೇ. ಗಣೇಶನ ಮೂರ್ತಿ ಇಟ್ಟಮೇಲೆ ಇವಗಳೆಲ್ಲ ಇಡುವುದು ಕಡ್ಡಾಯವೇ ಹೀಗಾಗಿ ಹೆಂಗಸರಿಗೆ ಒಂದು ದಿನ ಅಡಿಗೆಮನೆಯಲ್ಲೇ ವಾಸ. ಈ ಗಣೇಶನ ಹಬ್ಬದಲ್ಲಿ ಇನ್ನೊಂದು ಪ್ರತೀತಿ ಇದೆ ಅಂದು ಯಾರು ಚಂದ್ರನನ್ನು ನೋಡಬಾರದು ಎಂದು. ಈ ಕಥೆಯು ಜನಜನಿತವೇ, ಗಣೇಶನ ವಾಹನ ಇಲಿ ಅರ್ಥಾತ್ ಮೂಷಿಕ, ಇದೊಂದು ರೀತಿಯ ತಮಾಷೆಯ ವಿಷಯವೇ ಗಣೇಶ ಎಂದರೆ ದಢೂತಿ ದೇಹದ ಹೊಟ್ಟೆ ದಪ್ಪವಿರುವ ಭಾರಿ ಕಾಯ, ಇನ್ನು ಇಲಿ ಅತಿ ಚಿಕ್ಕ ಪ್ರಾಣಿ, ಇಂಥ ಪ್ರಾಣಿಯ ಮೇಲೆ ಗಣೇಶ ಒಮ್ಮೆ ವಾಯುಮಾರ್ಗದಲ್ಲಿ ಸವಾರಿ ಹೊರಟಿದ್ದನಂತೆ ಇದ್ದಕ್ಕಿದ್ದಂತೆ ಸರ್ಪಗಳು ಅಡ್ಡ ಬಂದವಂತೆ, ಅದನ್ನು ನೋಡಿ ಭಯಗೊಂಡ ಮೂಷಿಕ ಮೂರ್ಛೆ ಹೋಗಲು ಗಣೇಶ ಜಾರಿ ಬಿದ್ದನಂತೆ, ಬಿದ್ದದ್ದೇ ಹೊಟ್ಟೆ ಎರಡಟಯಿತಂತೆ, ತಕ್ಷಣ ಅಲ್ಲೇ ಇದ್ದ ಸರ್ಪವೊಂದನ್ನು ಹೊಟ್ಟೆಗೆ ಸುತ್ತಿಕೊಂಡನಂತೆ, ಇದರಿಂದಲೇ ಗಣೇಶನ ಹೊಟ್ಟೆಯ ಮೇಲೆ ಸರ್ಪ ಸುತ್ತಿರುತ್ತದೆ. ಈ ದೃಶ್ಯ ನೋಡಿದ ಚಂದ್ರ ಜೋರಾಗಿ ನಕ್ಕುಬಿಟ್ಟನಂತೆ. ಕೋಪ ಬಂದ ಗಣೇಶ ಚಂದ್ರನಿಗೆ ಶಾಪವಿತ್ತನಂತೆ. " ನನ್ನ ಚತುರ್ಥಿಯಂದು ಯಾರು ನಿನ್ನನ್ನು ನೋಡಬಾರದು, ಹಾಗೇ ನೋಡಿದವರು ಕಳ್ಳತನದ ಅಪರಾಧ ಹೊಂದುತ್ತಾರೆ ಎಂದು. ಆಗಿನಿಂದ ಯಾರು ಹಬ್ಬದಂದು ಚಂದ್ರನ ನೋಡುವುದಿಲ್ಲವಂತೆ. ಹೀಗೆ ನೋಡಿದ ಕೃಷ್ಣನು ಶಮಂತಕ ಮಶಿಯನ್ನು ಕದ್ದ ಅಪರಾಧಕ್ಕೆ ಗುರಿಯಾದನಂತೆ. ಹೀಗಾಗಿ ಅಮ್ಮ ಚಿಕ್ಕಂದಿನಲ್ಲಿ ನಮ್ಮನ್ನು ರಾತ್ರಿಯಾದರೆ ಹೊರಗೆ ಬಿಡುತ್ತಿರಲಿಲ್ಲ. ನಾವು ಕದ್ದು ಹೋಗಿ ನೋಡುತ್ತದ್ದೆವು, ಆದರೆ ಆ ಚಂದ್ರ ಎಲ್ಲುರುತ್ತಿದ್ದನೋ ಏನೋ ಅಂದು ಕಣ್ಣಿಗೆ ಬೀಳುತ್ತಿರಲಿಲ್ಲ.
ಒಟ್ಟಿನಲ್ಲಿ ಒಂದೊಂದು ಹಬ್ಬದ ಹಿಂದೆಯೂ ಒಂದೊಂದು ಕಥೆಗಳಿವೆ. ಅವು ನಿಜವೋ ಸುಳ್ಳೋ ಎಂದು ನಮಗೆ ತಿಳಿದಿಲ್ಲ. ಆದರೆ ಈ ಹಬ್ಬಗಳ ಆಚರಣೆ ಮಾತ್ರ ನಮ್ಮ ಯಾಂತ್ರಿಕ ಬದುಕಿಗೊಂದು, ವಿಶ್ರಾಮ, ಉತ್ಸಾಹ, ಹುಮ್ಮಸ್ಸು ಕೊಡುತ್ತವೆ ಅಲ್ಲವೆ….
*****