ಗೋವಿನ ಹಾಡು: ಆಶಾ ಜಗದೀಶ್..

ಪಕ್ಕದ ಮನೆಯ ಹಸು ಉಸ್ಸು ಬುಸ್ಸು ಎಂದು ನಿಟ್ಟುಸಿರಿಡುತ್ತಾ ಅಲ್ಲಿಯವರೆಗೂ ಮೇಯ್ದದ್ದನ್ನು ಕೂತು ಮೆಲುಕು ಹಾಕುತ್ತಿತ್ತು. ಅತ್ತಲಿಂದ ಬಂದ ಹಸೀನ, ಇಮ್ತಿಯಾಜ಼್ ಆಂಟಿಗೆ ಹಸುವನ್ನು ತೋರಿಸುತ್ತಾ “ಪಾಪ ನೋವು ತಿಂತಾ ಇದೆ… ನಾವು ಮನುಷ್ಯರಾದ್ರೆ ಇಷ್ಟೊತ್ತಿಗೆ ಆಸ್ಪತ್ರೆ ಆ್ಯಂಬುಲೆನ್ಸು ಅಂತ ಓಡ್ತಿದ್ವಿ… ಆದ್ರೆ ಪಾಪ ಮೂಕ ಪ್ರಾಣಿಗಳಿಗೆ ಅದೆಲ್ಲ ಏನೂ ಇಲ್ಲ…” ಅಂದಳು. ಅಲ್ಲಿಯವರೆಗೂ ದಿನನಿತ್ಯ ನೋಡುತ್ತಿದ್ದ ಆ ಹಸು ಗಬ್ಬಾಗಿದೆ ಎಂದು ನನಗೆ ತಿಳಿದಿರಲೇ ಇಲ್ಲ! ಸೋ ಕಾಲ್ಡ್ ನಗರಗಳಲ್ಲಿ ಹುಟ್ಟಿ ಬೆಳೆದ ನಮ್ಮಂಥವರಿಗೆ ಇಂತವೆಲ್ಲ ಅರ್ಥವೇ ಆಗುವುದಿಲ್ಲವಲ್ಲ ಎಂದು ಅಚ್ಚರಿಗೆ ಬಿದ್ದೆ. ಮತ್ತೆ ಅವಳ ಮಾತು ಕಾಡತೊಡಗಿತು. ಮನುಷ್ಯರಿಗಾದರೆ ಒಂದು, ಪ್ರಾಣಿಗಳಿಗಾದರೆ ಇನ್ನೊಂದು ಎನ್ನುವ ಮನುಷ್ಯನ ಧೂರ್ತ ಇಬ್ಬಗೆ ನೀತಿಯ ಬಗ್ಗೆ ಪಿಚ್ಚೆನ್ನಿಸಿತು.

ಪಕ್ಕದ ಮನೆಯ ಅಕ್ಕ ಹುಲ್ಲು ಹಾಕಲು ಹೊರಬಂದಾಗ “ಅಕ್ಕ ಹಸು ಗಬ್ಬಾಗಿದೆಯಾ” ಎಂದು ಕೇಳಿದೆ. “ಹೌದು ಇನ್ನೇನು ರಾತ್ರಿಯೋ ಬೆಳಗ್ಗೆಯೋ ಈಯಬಹುದು” ಎಂದರು. “ಅಕ್ಕ ಹಸುಗಳ ಗರ್ಭಾವಸ್ಥೆಯ ಅವಧಿ ಎಷ್ಟು ತಿಂಗಳು” ಕೇಳಿದೆ. ಅವರಿಗೆ ಇವಳೇನು ಹೀಗೆ ಕೇಳುತ್ತಿದ್ದಾಳೆ, ಅಷ್ಟು ಗೊತ್ತಿಲ್ಲವಾ… ಎಂದುಕೊಂಡರಾ ಗೊತ್ತಿಲ್ಲ. “ಅವುಗಳಲ್ಲಿಯೂ ಒಂಭತ್ತು ತಿಂಗಳೇ ಮನುಷ್ಯರ ಹಾಗೆ ” ಎಂದರು. ಥಟ್ಟನೆ ಹಿಂದೆ ಜೀವಶಾಸ್ತ್ರದಲ್ಲಿ ಓದಿದ್ದು ನೆನಪಿಗೆ ಬಂದು ತುಟಿಕಚ್ಚಿಕೊಂಡೆ. ಪಾಪ ಹಸು ಸುಸ್ತಾಗಿದ್ದಂತೆ ಕಂಡಿತು. ಹಸುವಿನ ಬಗ್ಗೆ ಕರುಣೆ ಉಕ್ಕಿತು. ಪಕ್ಕದ ಮನೆಯಲ್ಲಿದ್ದರೂ ಹಸು ಗಬ್ಬಾಗಿದೆ ಎನ್ನುವ ಸಣ್ಣ ಸೂಕ್ಷ್ಮ ನನಗೆ ತಿಳಿಯಲಿಲ್ಲವಲ್ಲ ಎಂದು ತುಸು ನಾಚಿಕೆಯೂ ಆಯಿತು.

ನಾನು ಚಿಕ್ಕಂದಿನಲ್ಲಿ ಒಮ್ಮೆ ಅಜ್ಜನ ಮನೆಯ ಆಕಳು ಕರು ಹಾಕಿದ್ದನ್ನು ಬಿಟ್ಟರೆ ಇನ್ಯಾವ ಪ್ರಾಣಿ ಮರಿ ಹಾಕುವುದನ್ನೂ ನೋಡಿರಲಿಲ್ಲ. ಅವತ್ತು ಕಣದಲ್ಲಿ ಹಸು ಈಯುತ್ತಿದೆ ಎಂದು ತಿಳಿದು ನಾವೆಲ್ಲ ಮನೆ ಮಕ್ಕಳು ಕಣಕ್ಕೆ ಓಡಿದ್ದೆವು. ಅಲ್ಲಿ ಆಗಲೇ ಅಜ್ಜಯ್ಯ, ಅಜ್ಜಿ, ಮತ್ತೆ ಇನ್ನೊಂದಷ್ಟು ಜನ ಸೇರಿಯಾಗಿತ್ತು. ಅಜ್ಜಿಯನ್ನು ಹೊರತುಪಡಿಸಿ ಅಲ್ಲಿ ಸೇರಿದ್ದವರೆಲ್ಲ ಬರೀ ಗಂಡಸರೇ. ಹಸು ನೋವಿನಿಂದ ಕಿರುಚುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಅದರ ಯೋನಿಯಿಂದ ಬಲೂನಿಂತದ್ದೇನೋ ಬಂತು. ಅದರೊಳಗೆ ಕರುವಿನ ಕಾಲುಗಳು ಕಾಣುತ್ತಿದ್ದವು. ಅಷ್ಟೇ ಅಜ್ಜಯ್ಯ ಇನ್ನು ಹೆಚ್ಚು ಹೊತ್ತು ಅಲ್ಲಿ ನಿಲ್ಲಲು ಬಿಡಲಿಲ್ಲ. ನಮ್ಮನ್ನೆಲ್ಲ ಮನೆಗೆ ಓಡಿಸಿಬಿಟ್ಟಿದ್ದರು. ಸಾಧ್ಯವಾದರೆ ಪಕ್ಕದ ಮನೆಯ ಈ ಹಸು ಈಯುವುದನ್ನು ನೋಡಬೇಕೆಂದುಕೊಂಡೆ. ಆದರೆ ಅದು ಸಾಧ್ಯವಾಗಲಿಲ್ಲ. ಮರುದಿನ ಬೆಳಗ್ಗೆ ಏಳುವಷ್ಟರಲ್ಲಿ ಅಂಗಳದಲ್ಲಿ ತಾಯಿ ಮಗಳ ಮಮತೆ ಕಾಣುವಂತಾಯಿತು. ಹಸು ತನ್ನ ಕರುವನ್ನು ಇನ್ನಿಲ್ಲದಂತೆ ನೆಕ್ಕುತ್ತಾ ನಿಂತಿತ್ತು. ಒಂದಷ್ಟೂ ಆಯಾಸ ನೋವು ಅದರ ಕಣ್ಣಲ್ಲಿ ಕಾಣಲಿಲ್ಲ. ಕರು ಓಡಾಡಲು ತಡವರಿಸುತ್ತಾ ಒಂದಷ್ಟು ಹೊತ್ತಿನಲ್ಲೇ ನಡೆಯಲು ಶುರು ಮಾಡಿತು. ಹಸಿವಾದಾಗ ತಾಯಿಯ ಕೆಚ್ಚಲನ್ನು ಗೂರುತ್ತಾ ಹಾಲನ್ನು ಉಣ್ಣತೊಡಗಿತು. ನಾನಂತು ಕೆಲಸ ಬೊಗಸೆ ಬಿಟ್ಟು ಮೈಮರೆತು ಆ ಕ್ಷಣಗಳನ್ನು ಕಣ್ತುಂಬಿಕೊಂಡೆ.

ಪ್ರಾಣಿಗಳಲ್ಲಿ ಈ ಕ್ರಿಯೆ ಎಷ್ಟು ಸುಲಭವಾಗಿ ಸಹಜವಾಗಿ ನಡೆಯುವಾಗ ಈ ಮನುಷ್ಯನದೇಕಿಷ್ಟು ಸಂಕೀರ್ಣ ಅನಿಸುತ್ತಿರುತ್ತದೆ ನನಗೆ. ಬಹುಶಃ ಅವನ ಯೋಚನೆ ಮಾಡುವ ಶಕ್ತಿಯೇ, ಮಾನವ ಮನುಷ್ಯತ್ವ ಎನ್ನುವುದನ್ನೆಲ್ಲಾ ಅಸ್ತ್ರವಾಗಿಸಿಕೊಂಡು ಸಹಜತೆಯನ್ನು ಸಂಕೀರ್ಣವಾಗಿಸಿಕೊಳ್ಳುತ್ತಾ ಹೋಗುತ್ತದೇನೋ. ಜೊತೆಗೆ ಪ್ರಾಣಿಯಲ್ಲವಾ ಸತ್ತರೂ ತೊಂದರೆಯಿಲ್ಲ ಆದರೆ ಮನುಷ್ಯನ ವಿಷಯ ಹಾಗಲ್ಲ. ಕುಟುಂಬ ಸಂಬಂಧಗಳು ಅವಲಂಬನೆ ಎಂಬೆಲ್ಲ ಜೇಡರ ಬಲೆ. ಮತ್ತೆ ಕೊಂಡಿ ಕಳಚಿದರೆ ಮುಂದೇನು?! ಎನ್ನುವ ಭವಿಷ್ಯದ ಚಿಂತೆ.. ಯಾವ ಪ್ರಾಣಿಗೆ ಇಂತಹ ಚಿಂತೆ ಭಯವಿರಲಿಕ್ಕಿದೆ ಹೇಳಿ ಮನುಷ್ಯನನ್ನಲ್ಲದೆ….

ಪ್ರಾಣಿಗಳ ದೈಹಿಕ ಸಾಮರ್ಥ್ಯಕ್ಕೆ ಹೋಲಿಸಿದರೆ ಮನುಷ್ಯನ ದೈಹಿಕ ಸಾಮರ್ಥ್ಯ ಬಹಳ ಕಡಿಮೆ. ಮನುಷ್ಯನಿಗೆ ಹೋಲಿಸಿದರೆ ಪ್ರಾಣಿಗಳ ಆಹಾರ ಪದ್ಧತಿ ಇನ್ನೂ ಅಷ್ಟೊಂದು ಹಾಳಾಗಿಲ್ಲ. ಏನಾದರೂ ಅಲ್ಪ ಸ್ವಲ್ಪ ಹಾಳಾಗಿದೆ ಎನ್ನುವುದಾದರೆ ಅದು ಮನುಷ್ಯನ ಹಸ್ತಕ್ಷೇಪದಿಂದಾಗಿ. ಆದರೆ ಮನುಷ್ಯನಂತೂ ತನ್ನ ಮೂಲ ಆಹಾರ ಪದ್ಧತಿಯಿಂದ ಬಹಳ ದೂರ ಸರಿದು ಬಿಟ್ಟಿದ್ದಾನೆ. ಅವನ ದೈಹಿಕ ಸಾಮರ್ಥ್ಯ ಕುಂದಲು ಇದೂ ಒಂದು ಕಾರಣ. ಹಿಂದೆಲ್ಲ ನಮ್ಮ ಹೆಣ್ಣುಮಕ್ಕಳು ಯಂತ್ರದಂತೆ ಹತ್ತು ಹನ್ನೆರೆಡು ಹೆರುತ್ತಿದ್ದರು. ಆದರೆ ಈಗ ಎರೆಡು ಹೆರುವ ಸಾಮರ್ಥ್ಯವೂ ಇಲ್ಲದಂತಾಗುತ್ತಿದೆ. ಏನಾದರಿರಲಿ ಈ ಬಸಿರು ಬಾಣಂತನ ಮನುಷ್ಯನ ಜೀವನದಲ್ಲಿ ಅದರಲ್ಲೂ ಹೆಣ್ಣುಮಕ್ಕಳ ಬದುಕಲ್ಲಿ ಬಹುದೊಡ್ಡ ಬದಲಾವಣೆ ತರುತ್ತದೆ. ತಾಯಾಗುವ ಹೆಣ್ಣು ಮಾನಸಿಕವಾಗಿ ಮತ್ತು ದೈಹಿಕವಾಗಿಯೂ ಸಾಕಷ್ಟು ಬದಲಾಗುತ್ತಾಳೆ.

ಗರ್ಭಾವಸ್ಥೆ ಹೆಣ್ಣಿಗೆ ತನ್ನೊಳಗಿನ ಇನ್ನೊಂದು ಚೆಹರೆಯನ್ನು ಪರಿಚಯಿಸುವ ಬಹುಮುಖ್ಯ ಹಂತ. ಇಲ್ಲಿಯವರೆಗೂ ಇದು ನನ್ನ ದೇಹ, ಇದರ ಪ್ರಕೃತಿ ನನಗೆ ಗೊತ್ತು ಎಂದುಕೊಳ್ಳುತ್ತಿದ್ದವಳಿಗೆ ಗರ್ಭಾವಸ್ಥೆ ಮತ್ತೊಂದೇ ಅನುಭವಕ್ಕೆ ಅವಳನ್ನು ತೆರೆದು ಕೂರಿಸಿಬಿಡುತ್ತದೆ. ಗರ್ಭಾವಸ್ಥೆಯ ಒಂದೂವರೆಯಿಂದ ಮೂರು ತಿಂಗಳಲ್ಲಿ ಬಹಳಷ್ಟು ಹೆಣ್ಣುಮಕ್ಕಳಲ್ಲಿ ಅರುಚಿ, ವಾಂತಿ, ತಲೆ ಸುತ್ತು, ನಿಶ್ಯಕ್ತಿ, ಏನನ್ನು ಕಂಡರೂ ವಾಕರಿಕೆ ಊಟ ಸೇರದಿರುವುದು ಇನ್ನು ಏನೇನೋ ಒಬ್ಬೊಬ್ಬರಿಗೆ ಒಂದೊಂದು ಥರ ಕಾಣಿಸಿಕೊಳ್ಳತೊಡಗುತ್ತದೆ. ಬಹಳಷ್ಟು ನಮ್ಮ ಸಿನೆಮಾಗಳು ವಾಂತಿಯನ್ನು ಬಂಡವಾಳ ಮಾಡಿಕೊಂಡೂ ಬಿಟ್ಟಿವೆ. ಗರ್ಭಿಣಿ ಎಂದು ತೋರಿಸಲು ವಾಂತಿ ಮಾಡಿಸಿಬಿಟ್ಟರೆ ಮುಗಿಯಿತು! ಈ ವಾಂತಿ ಸಹಜ ವಾಂತಿಗಳಂತಲ್ಲ ಬೆಳ್ಳಂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿಯೇ ಆಗುವಂತದ್ದು. ಪಿತ್ತವಾದಾಗ ಬರುವ ಹಾಗೆ ಹಳದಿ ಬಣ್ಣದ ನೀರಿನಂತದ್ದೇನೋ ವಾಂತಿಯಾಗಿ ಹೊಟ್ಟೆ ಖಾಲಿಯಾಗುವವರೆಗೂ ವಾಕರಿಕೆ ನಿಲ್ಲುವುದಿಲ್ಲ. ನಂತರ ಒಂದಷ್ಟು ಹೊತ್ತು ಸುಧಾರಿಸಿಕೊಳ್ಳುವಂತಾಗಿಬಿಡುತ್ತದೆ. ಹಲವರಲ್ಲಿ ಈ ವಾಂತಿ ಕೆಲವೇ ದಿನಗಳು ಮಾತ್ರ ಕಾಣಿಸಿಕೊಂಡು ಮಾಯವಾಗಿಬಿಡುತ್ತದೆ. ಮತ್ತೆ ಕೆಲವರಿಗೆ ವಾಂತಿಯೇ ಆಗುವುದಿಲ್ಲ. ಆದರೆ ಒಂದಷ್ಟು ವಿರಳ ಹೆಂಗಸರಲ್ಲಿ ಹೆರಿಗೆಯ ದಿನದವರೆಗೂ ವಾಂತಿ ನಿಲ್ಲುವುದಿಲ್ಲ.

ನನ್ನ ಮಟ್ಟಿಗೆ ಹೇಳುವುದಾದರೆ ನಾನು ವಿರಳರಲ್ಲಿ ಒಬ್ಬಳು. ನನ್ನ ಎರೆಡೂ ಗರ್ಭಾವಸ್ಥೆಯಲ್ಲೂ ವಾಂತಿ ನನ್ನನ್ನು ಪೂರಾ ಒಂಭತ್ತು ತಿಂಗಳು ಕಾಡಿಬಿಟ್ಟಿತ್ತು. ಹೆರಿಗೆಯ ಹೊತ್ತಿಗೆ ಸಾಕಪ್ಪಾ ಈ ಮಕ್ಕಳ ಸಹವಾಸ ಹೆರಿಗೆ ಒಂದ್ ಆಗಿಬಿಟ್ರೆ ಸಾಕೇಸಾಕು ಎಂದುಕೊಳ್ಳುತ್ತಾ ಹೆರಿಗೆಯ ದಿನವನ್ನು ಜಾತಕಪಕ್ಷಿಯಂತೆ ಕಾದುಬಿಟ್ಟಿದ್ದೆ.

ನನಗೆ ನೆನಪಿದ್ದ ಹಾಗೆ ಚಿಕ್ಕಂದಿನಿಂದಲೂ ವಾಂತಿ ನನ್ನನ್ನು ಅಷ್ಟಾಗಿ ಕಾಡಿಯೇ ಇಲ್ಲ. ಎಷ್ಟಾದರೂ ಸುತ್ತು, ಎಲ್ಲಿಗಾದರೂ ಪ್ರಯಾಣ ಮಾಡು, ಏನಾದರೂ ತಿನ್ನು… ವಾಂತಿ ಅಂತ ಮಾತ್ರ ಮಾಡಿಕೊಂಡಿದ್ದೇ ಇಲ್ಲ. ಆದರೆ ನನ್ನ ಗರ್ಭಾವಸ್ಥೆಯಲ್ಲಿ ಹೀಗೇಕಾಯಿತೋ… ಎರೆಡು ಜನ್ಮಕ್ಕಾಗುವಷ್ಟು ವಾಂತಿಯನ್ನ ಆ ಒಂಭತ್ತು ತಿಂಗಳಲ್ಲಿ ಮಾಡಿಕೊಂಡಿದ್ದೇನೆ ಎಂದೆನಿಸುತ್ತಿತ್ತು. ಆದರೂ ಅದ್ಯಾವ ಮೋಹವೋ ಕಾಣೆ ಬಯಸಿ ಬಯಸಿ ಎರೆಡು ಮಕ್ಕಳನ್ನು ಪಡೆದದ್ದು…

ಅದೆಷ್ಟು ಆರೈಕೆ, ಅದೆಷ್ಟು ಮುತುವರ್ಜಿ ಮನೆ ಮಂದಿಯ ಕಾಳಜಿ, ಅಪ್ಪ, ಅಮ್ಮ ಮತ್ತು ಗಂಡನ ತ್ಯಾಗ… ಇದೆಲ್ಲವೂ ಮನೆಗೆ ಸದಸ್ಯನಾಗಿ ಬರುವ ಆ ಹೊಸ ಮಗುವಿಗಾಗಿ… ಮನೆಯಲ್ಲಿ ಹೆಣ್ಣೊಬ್ಬಳು ಗರ್ಭಿಣಿಯಾಗಿಬಿಟ್ಟರೆ ಸಾಕು ಗಂಡ, ಗಂಡನ ಮನೆಯವರು, ತವರಿನವರು ಎಲ್ಲರೂ ಕಾತರರಾಗಿಬಿಡುತ್ತಾರೆ. ಬರುವ ಹೊಸ ಅತಿಥಿಯ ಬಗ್ಗೆ ಎಲ್ಲರಿಗೂ ನಾನಾ ಕನಸುಗಳು. ಅಲ್ಲಿಂದ ಶುರುವಾಗುತ್ತದೆ ಅವಳ ಆರೈಕೆ. ಏನು ತಿನ್ನಬೇಕು, ಏನನ್ನು ತಿನ್ನಬಾರದು ಎನ್ನುವಲ್ಲಿಂದ ಯಾವ ವೈದ್ಯರಲ್ಲಿ ತೋರಿಸಬೇಕು, ಹೆರಿಗೆಗೆ ಯಾವ ಆಸ್ಪತ್ರೆಗೆ ಹೋಗಬೇಕು ಎನ್ನಲ್ಲಿಯವರೆಗೂ ತಯಾರಿಗಳು ನಡೆಯುತ್ತವೆ. ಬರುವ ಮಗುವಿಗಾಗಿ ಕಕ್ಕದ ಬಟ್ಟೆಗಳು, ತೊಡಿಸುವ ಬಟ್ಟೆಗಳು, ಸ್ವೆಟರ್ರು, ಟೋಪಿ, ಹಾಸಿಗೆ, ಹೊದಿಕೆ…. ಅಬ್ಬಬ್ಬಾ ಎಷ್ಟೆಲ್ಲ ತಯಾರಿಗಳು. ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಬೆಚ್ಚಗೆ ಇದ್ದ ಕೂಸು ಹೊರ ಪ್ರಪಂಚಕ್ಕೆ ಬಂದಾಕ್ಷಣ ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಕೆಲವು ತಿಂಗಳುಗಳೇ ಬೇಕಾಗುತ್ತದೆ. ಅಲ್ಲಿಯವರೆಗೂ ಅದನ್ನು ಬೆಚ್ಚಗೆ ಮುತುವರ್ಜಿಯಿಂದ ನೋಡಿಕೊಳ್ಳಬೇಕಾಗುತ್ತದೆ. ನಿಧಾನ ಹೊಂದಿಕೊಳ್ಳುತ್ತಾ, ಬೆಳೆಯುತ್ತಾ ಹೋಗುವ ಮಗುವಿನ ಬೆಳವಣಿಗೆಯ ಹಂತಗಳು ಮೈಲಿಗಲ್ಲುಗಳು ಆಟಪಾಠಗಳನ್ನು ನೋಡುವುದೇ ಒಂದು ಚಂದ.

ಈ ಹಸುಗಳನ್ನು ಸಾಕುವವರು ಸಾಮಾನ್ಯವಾಗಿ ಹಸುಗಳನ್ನು ಪಶುವೈದ್ಯರಲ್ಲಿಗೆ ಒಯ್ದು ಅವುಗಳಿಗೆ ಕೃತಕ ಗರ್ಭದಾರಣೆ (ಸೆಮೆನೇಶನ್) ಮಾಡಿಸಿಕೊಂಡು ಬರುತ್ತಾರಂತೆ. ಒಂದು ಬಾರಿ ವಿಫಲವಾದರೆ ಮತ್ತೊಮ್ಮೆ ಮಾಡಿಸುತ್ತಾರಂತೆ. ಈ ರೀತಿಯಾಗಿ ಒಂದು ಹಸು ಗರ್ಭಧರಿಸುತ್ತದಂತೆ. ಕರುವನ್ನು ಹಾಕಿದ ಎರೆಡು ಮೂರು ತಿಂಗಳ ತಡೆದು ಮತ್ತೊಮ್ಮೆ ಗರ್ಭದಾರಣೆ ಮಾಡಿಸುತ್ತಾರಂತೆ. ಒಂದು ಕಡೆ ಮಗುವನ್ನು ಹೊರಬೇಕು, ಇನ್ನೊಂದು ಕಡೆ ಮಾಲೀಕನ ಹೊಟ್ಟೆ ತುಂಬುವಷ್ಟು ಹಾಲು ಕರೆಯಬೇಕು. ಇನ್ನು ಕರುವೋ ತಾಯಿ ಇದ್ದೂ ಹುಲ್ಲು ತಿಂದು ಬೆಳೆಯಬೇಕು. ಪಾಪದ ಪ್ರಾಣಿಗಳು ಹೀಗೆ ಮನುಷ್ಯರಿಂದ ಶೋಷಿಸಲ್ಪಡುತ್ತವೆ. ಕನಿಷ್ಟ ಅವುಗಳ ಲೈಂಗಿಕ ಜೀವನವನ್ನೂ ಕಿತ್ತುಕೊಂಡು ಅಸ್ವಾಭಾವಿಕವಾಗಿ ಗರ್ಭ ಧರಿಸುವಂತೆ ಮಾಡುವುದು ನೋವಿನ ಸಂಗತಿ. ಆದರೆ ಪ್ರಾಣಿಗಳಲ್ಲಿ ಲೈಂಗಿಕ ಸುಖದ ಕಲ್ಪನೆ ಇರುವುದಿಲ್ಲ. ಅವೇನಿದ್ದರೂ ಸಂತಾನೋತ್ಪತ್ತಿಯ ಕಾರಣಕ್ಕಾಗಿ ಮಾತ್ರ ನಿರ್ದಿಷ್ಠ ಸಮಯದಲ್ಲಿ ಕೂಡುತ್ತವೆ, ಹಾಗಾಗಿ ಇದು ಶೋಶಣೆ ಅಲ್ಲ, ಎನ್ನುವ ವಾದವೂ ಇದೆ. ಆದರೂ ಅಸಹಜವೆನ್ನಿಸುವ ಕೆಲಸವನ್ನು ಅವುಗಳ ಸಹಜ ಕ್ರಿಯೆಯ ವಿರುದ್ಧವಾಗಿ ಮಾಡುತ್ತಿರುವ ದೃಷ್ಟಿಯಿಂದಾರೂ ಇದು ಶೋಷಣೆ ಅಂತಲೇ ನನಗನ್ನಿಸುತ್ತದೆ.

ಹಿಂದೆಲ್ಲ ನಾ ನೋಡಿದಂತೆ ನನ್ನ ಅಜ್ಜ ಹಸುಗಳನ್ನು ಹೋರಿಗಳ ಜೊತೆ ಮೇಯಲು ಮೈದಾನಕ್ಕೆ ಹೊಡೆಯುತ್ತಿದ್ದ. ಕೆಲವು ಹಳ್ಳಿಗಳಲ್ಲಿ ಊರಿನೆಲ್ಲ ಹೋರಿ ಮತ್ತು ಹಸುಗಳನ್ನು ಗೋಮಾಳದಲ್ಲಿ ಮೇಯಲು ಬಿಡುತ್ತಿದ್ದರು. ಇದರ ಹಿಂದೆ ಸಂತಾನೋತ್ಪತ್ತಿಯ ಉದ್ದೇಶವೂ ಇರುತ್ತಿತ್ತು. ಅಜ್ಜಯ್ಯ ನಮ್ಮ ಹಸು ಇನ್ಯಾರದೋ ಹೋರಿಯ ಹತ್ತಿರುವೇ ಹೋಗುತ್ತದೆ ಎನ್ನುವ ವಿಷಯವನ್ನು ಲಘು ಹಾಸ್ಯದಿಂದ ಮಾತಾಡಿರುವ ಮಾತುಗಳನ್ನು ಕೇಳಿದ್ದು ನೆನಪಿದೆ. ಆದರೆ ಅಷ್ಟು ತಾಳ್ಮೆಯನ್ನೂ ಕಳೆದುಕೊಂಡಿರುವ, ನಿರಂತರ ದುಡಿಮೆಯ ಲಾಲಸೆಗೆ ಬಿದ್ದಿರುವ, ಆಧುನಿಕ ಚಿಕಿತ್ಸಾಕ್ರಮಗಳನ್ನು ದುರುಪಯೋಗಪಡಿಸಿಕೊಳ್ಳಲು ಹೊರಟಿರುವ ನಾವು ಪಾಪದ ಪ್ರಾಣಿಗಳನ್ನು ಶೋಷಿಸುತ್ತಿದ್ದೇವೆ ಎನಿಸುತ್ತದೆ.

ಹಾಲು ಹೆಚ್ಚು ಕೊಡುತ್ತವೆ ಎನ್ನುವ ಕಾರಣಕ್ಕೆ ನಮ್ಮ ನೆಲದ ನಾಟಿ ಹಸುಗಳನ್ನು ಬಿಟ್ಟು ಯಾವುದೋ ದೇಶದ ಯಾವುದೋ ವಾತಾವರಣಕ್ಕೆ ಹೊಂದಿಕೊಂಡು ಅಲ್ಲಿನ ಹವಾಮಾನ ವಾಯುಗುಣಕ್ಕೆ ತಕ್ಕ ಹಾಗೆ ಮಾರ್ಪಾಟಾಗಿ ಬೆಳೆದ ಹಸುಗಳನ್ನು ಆಮದು ಮಾಡಿಕೊಂಡು ಸಾಕುವ ನಮ್ಮ ದುರಾಸೆ ಎಂದಿಗೆ ತಾನೆ ತೀರುತ್ತದೆ. ಅನಾಥರಂತೆ ಈ ದೇಶ ಸೇರಿದ ಆ ಹಸುಗಳದು ಒಂದು ಪಾಡಾದರೆ ಇಲ್ಲಿನ ನಾಟಿ ಹಸುಗಳು ಹಾಲು ಕಡಿಮೆ ಕೊಡುತ್ತವೆ ಎನ್ನುವ ಕಾರಣಕ್ಕೆ ಸಾಕುವವರಿಲ್ಲದೆ ಕಸಾಯಿ ಖಾನೆ ಸೇರುವಂತಾಗಿದೆ. ಹಣದ ಲೆಕ್ಕದಲ್ಲಿ ನಾಟಿ ಹಸುಗಳು ಇಪ್ಪತ್ತು ಮುವತ್ತು ನಲವತ್ತು ಸಾವಿರಕ್ಕೆಲ್ಲ ಸಿಕ್ಕಿಬಿಡುತ್ತವೆ. ಆದರೆ ಈ ವಿದೇಶೀ ಹಸುಗಳಿಗೆ ಕಡಿಮೆ ಎಂದರೂ ಒಂದರಿಂದ ಒಂದೂವರೆ ಲಕ್ಷವಾದರೂ ಆಗುತ್ತದೆ. ಈ ವ್ಯತ್ಯಾಸ ನಿಗದಿಯಾಗುವುದೂ ಅವುಗಳ ವಯಸ್ಸು ಮತ್ತು ಹಾಲು ಕೊಡುವ ಸಾಮರ್ಥ್ಯದಿಂದಾಗಿ.

ತಾಯಂತೆ ನಡೆದುಕೊಳ್ಳುವ ಗೋವುಗಳನ್ನು ಅವುಗಳ ಆಯುಷ್ಯ ತುಂಬುವ ಮುನ್ನವೇ ಮರಣಶಯ್ಯೆಗೆ ದೂಡುವ ಮನುಷ್ಯನ ದುರಾಸೆ, ಸ್ವಾರ್ಥ ಕಾಣುವಾಗ ನಾನೂ ಸಹ ಇದೇ ಕುಲದ ಪ್ರತಿನಿಧಿಯಾ… ಇದರಲ್ಲಿ ನನ್ನದೂ ಪಾಲಿದೆಯಾ… ಅವುಗಳೂ ಸಹ ನಮ್ಮಂತೆ ತುಂಬು ಆಯುಷ್ಯದ ಜೀವನವನ್ನು ಸುಖವಾಗಿ ಜೀವಿಸಲಿಕ್ಕೆ ಅಂತ ತಾನೇ ಹುಟ್ಟಿರೋದು… ಎಂದೆಲ್ಲ ಯೋಚನೆ ಬಂದು ಖೇದವೆನಿಸುತ್ತದೆ. ಆದರೆ ತನ್ನ ಮೇಲ್ಮಟ್ಟದ ಮೆದುಳಿನ ಕಾರಣದಿಂದಾಗಿ ಮನುಷ್ಯ ತನ್ನನ್ನು ತಾನು ಅತಿಮಾನುಷನಂತೆ ಬಿಂಬಿಸಿಕೊಳ್ಳುತ್ತಾ ಭೂಮಿಯ ಮೇಲಿನ ಪ್ರತಿಯೊಂದು ಚರಾಚರ, ಜೀವಿ ನಿರ್ಜೀವಿಗಳೆಲ್ಲವೂ ತನ್ನ ಉಪಯೋಗಕ್ಕೆ ಮಾತ್ರ ಇರುವುದು ಎಂಬಂತೆ ವರ್ತಿಸುತ್ತಿರುವುದು ಯಾವ ವಿನಾಶ ಕಾಲದ ವಿಪರೀತ ಬುದ್ಧಿಯೋ…

-ಆಶಾಜಗದೀಶ್..


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x