'ನಾಳೆ ಅಪ್ಪನಿಗೆ ಟೌನಿಗೆ ಹೋಗ್ಲಿಕ್ಕೆ ಹೇಳ್ಬೇಕು.', ಎಂದುಕೊಂಡ ರಾಜಮೂರ್ತಿ.
ಅಪ್ಪ ಗೋವಿಂದಯ್ಯನವರಿಗೆ ಎಂಬತ್ತರ ಆಸುಪಾಸು. ಅವರದು ಮೊದಲಿನಿಂದಲೂ ಸ್ವಲ್ಪ ದುರ್ಬಲ ಶರೀರ. ಶಾರೀರವೂ ಅಷ್ಟೆ, ದುರ್ಬಲ. ಆದರೂ ಅವರದು ಬಿಡುವಿಲ್ಲದ ಓಡಾಟ. ಒಂದೆಡೆ ಸುಮ್ಮನೆ ಕುಳಿತವರಲ್ಲ. ಎಲ್ಲೋ ಒಂದು ಮದುವೆ ಎಂದರೆ ಅಡಿಗೆಗೆ ಸಹಾಯಕ್ಕೆ, ಇನ್ನೆಲ್ಲೋ ಪೂಜೆ ಎಂದರೆ ಅಲ್ಲಿಗೆ 'ಸುಧಾರಿಸಲಿಕ್ಕೆ', ಮತ್ತೆಲ್ಲೋ ಶ್ರಾದ್ಧವೆಂದರೆ ಅಲ್ಲಿಗೂ ಕೆಲಸದಲ್ಲಿ ಕೈ ಜೋಡಿಸಲಿಕ್ಕೆ – ಒಟ್ಟಿನಲ್ಲಿ ಯಾವ ಸಮಾರಂಭವಾದರೂ ಗೋವಿಂದಯ್ಯ ಅಲ್ಲಿರುತ್ತಿದ್ದರು. ಅವರ ಜೀವನವಿಡೀ ಅವರು ಮಾಡಿದ್ದು ಇದನ್ನೇ. 'ಈ ಬಡಕಲು ಬ್ರಾಹ್ಮಣ ಏನು ಮಾಡಿಯಾನು!', ಎಂಬಂಥ ಪ್ರತಿಕ್ರಿಯೆ ಹುಟ್ಟಿಸುವ ದೇಹವನ್ನಿಟ್ಟುಕೊಂಡೇ ಎಲ್ಲವನ್ನು ಮಾಡಿದರು.
ಮಗ ಬ್ಯಾಂಕಿನಲ್ಲೊಂದು ಕೆಲಸ ಹಿಡಿದು ತಕ್ಕಮಟ್ಟಿಗೆ ಸಂಪಾದಿಸುತ್ತಿದ್ದರೂ ಗೋವಿಂದಯ್ಯ ನಿವೃತ್ತಿ ತೆಗೆದುಕೊಳ್ಳಲಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡುವುದನ್ನು ಮುಂದುವರೆಸಿದ್ದರು.
ಹೀಗೆಯೇ ಚಕ್ರ ಕಟ್ಟಿಕೊಂಡು ಓಡುತ್ತಿದ್ದಾಗೊಮ್ಮೆ ಟೌನಿಗೆ ಹೋದವರು ತಲೆ ಸುತ್ತಿ ಬಿದ್ದರು. ಯಾರೋ ಆಸ್ಪತ್ರೆಗೆ ಸೇರಿಸಿದರು. ವಿಷಯ ತಿಳಿದು ರಾಜಮೂರ್ತಿ ಆಸ್ಪತ್ರೆಗೆ ಓಡಿದ. ಒಂದಷ್ಟು ಹಿತೈಷಿಗಳೂ ಬಂದರು. ಕೆಲವರು, 'ಅವ್ರು ಒಬ್ರನ್ನೇ ಎಲ್ಲೂ ಕಳಿಸ್ಬೇಡ. ವಯಸ್ಸಾಯ್ತಲ್ಲ!', ಎಂದು ಬುದ್ಧಿ ಹೇಳಿದರು. ಗೋವಿಂದಯ್ಯನಿಗೂ ಬುದ್ಧಿವಾದ ಹೇಳಿದರು. ರಾಜಮೂರ್ತಿಗೆ ಇದೆಲ್ಲ ಕೆಡುಕೆನಿಸಿತು. ಅಪ್ಪನನ್ನು ಹೊರಗೆ ತಮ್ಮ ಇಚ್ಛೆಯಂತೆ ಓಡಾಡಲು ಬಿಟ್ಟಿದ್ದು ತನ್ನ ಬೇಜವಾಬ್ದಾರಿತನವೇನೋ ಎನಿಸಿತು. 'ಇನ್ನು ಅಪ್ಪನಿಗೆ ಮನೆಯಿಂದ ಹೊರ ಹೋಗಲಿಕ್ಕೆ ಬಿಡಬಾರದು.', ಎಂದು ಅವನು ನಿರ್ಧರಿಸಿದ.
ಅಂದಿನಿಂದ ಗೋವಿಂದಯ್ಯನವರ ಗೃಹಬಂಧನ ಶುರುವಾಯಿತು. ಮನೆಯಲ್ಲಿ ಕುಳಿತು ಏನು ಮಾಡುವುದೆಂದೇ ಅವರಿಗೆ ತೋಚಲಿಲ್ಲ. ಗೋವಿಂದಯ್ಯನವರ ಹೆಂಡತಿ ಸತ್ತು ಐದಾರು ವರ್ಷಗಳಾಗಿತ್ತಾದರೂ, ಯಾವತ್ತೂ ಅವರ ನೆನಪಾಗಿರಲಿಲ್ಲ. ಆದರೆ ಈಗ ಮಾತಾಡಲಿಕ್ಕಾದರೂ ಅವರು ಜೊತೆಗಿರಬೇಕಿತ್ತು ಎಂದುಕೊಂಡರು ಗೋವಿಂದಯ್ಯ. ಮಗ ಕೆಲಸಕ್ಕೆ ಹೋದವನು ಬರುವುದು ಸಂಜೆಗೇ. ಸೊಸೆಯ ಜೊತೆ ಮೊದಲಿನಿಂದಲೂ ಮಾತು ಕಡಿಮೆ. ಈಗ ಹೊಸದಾಗಿ ಅವಳ ಜೊತೆ ಮಾತು ಶುರು ಮಾಡುವಷ್ಟು ಉತ್ಸಾಹ ಅವರಿಗಿರಲಿಲ್ಲ. ಅವಳೂ ಉತ್ಸಾಹ ತೋರಿಸಲಿಲ್ಲ. ಹೊತ್ತು ಹೊತ್ತಿಗೆ ತಿಂಡಿ, ಊಟ, ಕಾಫಿ ಎಲ್ಲವನ್ನೂ ಸರಿಯಾಗಿಯೇ ನೋಡಿಕೊಂಡು ಕರ್ತವ್ಯಕ್ಕೆ ಚ್ಯುತಿಯಿಲ್ಲದೆ ನಡೆದುಕೊಂಡಳಾದ್ದರಿಂದ ಅವಳನ್ನು ಬಯ್ಯುವುದಕ್ಕೂ ಕಾರಣ ಸಿಗಲಿಲ್ಲ. ಕಾರಣವಿಲ್ಲದೆ ಗೊಣಗಾಡಿದರೆ ಸಹಿಸಿಕೊಳ್ಳಲಾದರೂ ಹೆಂಡತಿ ಬದುಕಿರಬೇಕಿತ್ತು ಅನ್ನಿಸಿತು ಗೋವಿಂದಯ್ಯನವರಿಗೆ.
ಒಂದು ಸಂಜೆ ಕರೆಂಟು ಹೋಗಿದ್ದಾಗ, ಸಂಜೆಗತ್ತಲಲ್ಲಿ ಶೂನ್ಯ ದಿಟ್ಟಿಸುತ್ತಾ ಕುಳಿತಿದ್ದ ಗೋವಿಂದಯ್ಯ, 'ವಯಸ್ಸಾಯ್ತು. ಇನ್ನು ನನ್ನಿಂದ ಏನೂ ಆಗುವುದಿಲ್ಲ.', ಎಂದು ಗೊಣಗಿಕೊಂಡರು. ಅದೇ ಸಮಯಕ್ಕೆ ಕರೆಂಟು ಬಂತು. 'ಸತ್ಯ!', ಎಂದು ಉದ್ಗರಿಸಿ ಆ ಕ್ಷಣದಿಂದ ಅದನ್ನೇ ಗಟ್ಟಿಯಾಗಿ ನಂಬಿಕೊಂಡು ಆಗಾಗ ಅದನ್ನೇ ಹೇಳುವುದು ರೂಢಿಯಾಯಿತು.
'ವಯಸ್ಸಾಯಿತು. ಈಗೆಲ್ಲ ಯಾರೂ ನನ್ನ ಮಾತಾಡಿಸೋರಿಲ್ಲ.'
'ವಯಸ್ಸಾಯಿತು. ಈಗೆಲ್ಲ ಮನೆ ಕಡೆ ಯಾರೂ ಬರೋದೇ ಇಲ್ಲ.'
'ವಯಸ್ಸಾಯಿತು. ಇನ್ನು ನನ್ನ ಕೈಲಿ ಏನೂ ಆಗೋದಿಲ್ಲ.'
ಗೃಹಬಂಧನ ಶುರುವಾದ ಎರಡೇ ತಿಂಗಳಿಗೆ ಗೋವಿಂದಯ್ಯ ಹಾಸಿಗೆ ಹಿಡಿದರು. ವೈದ್ಯರು ನಿಃಶಕ್ತಿ ಎಂದು ಮದ್ದು ಬರೆದು ಕೊಟ್ಟರು. ಸೊಸೆ ಹೊತ್ತು ಹೊತ್ತಿಗೆ ಅದನ್ನು ಗೋವಿಂದಯ್ಯನವರಿಗೆ ತಿನ್ನಿಸಿದಳು.
'ವಯಸ್ಸಾಯ್ತು. ಇನ್ನು ಮಾತ್ರೆ ನುಂಗಿ ಜೀವ ಉಳಿಸಿಕೊಳ್ಳಬೇಕಷ್ಟೆ!'
ಒಂದು ಮಧ್ಯಾಹ್ನ ಹುಷಾರು ತಪ್ಪಿ ಬೇಗನೆ ಮನೆಗೆ ಬಂದ ರಾಜಮೂರ್ತಿ. ಸಂಜೆಯವರೆಗೆ ಮಲಗಿಕೊಂಡೇ ಇದ್ದವನು, 'ಥೂ ಹೇಗಪ್ಪ ಜನ್ರು ಇಡೀ ದಿನ ಮನೇಲೇ ಇರ್ತಾರೆ!', ಎಂದು ಗೊಣಗಿಕೊಂಡ. ಹಾಗೆಯೇ ಸುಮ್ಮನೆ ಹೊರಗೆ ಓಡಾಡಿಕೊಂಡು ಬಂದವನು ಅಪ್ಪನನ್ನು ಮನೆಯಲ್ಲೇ ಕೂಡಿ ಹಾಕಿದ್ದರಿಂದಲೇ ಅವರ ಆರೋಗ್ಯ ಇಷ್ಟು ಕೆಟ್ಟಿದೆ ಎಂದು ತೀರ್ಮಾನಿಸಿದ. ಅವರಿಗೆ ಏನಾದರೂ ಒಂದು ಕೆಲಸ ಹಚ್ಚಿ ಅವರನ್ನು ಟೌನಿಗೆ ಕಳಿಸಿದರೆ ಅವರ ಆರೋಗ್ಯ ತಕ್ಷಣವೇ ಸುಧಾರಿಸುತ್ತದೆ ಎಂದೂ ಅನ್ನಿಸಿತು.
'ನಾಳೆ ಅಪ್ಪನಿಗೆ ಟೌನಿಗೆ ಹೋಗ್ಲಿಕ್ಕೆ ಹೇಳ್ಬೇಕು.', ಎಂದುಕೊಂಡ. ಒಮ್ಮೆ ಹೊರಗೆ ಓಡಾಡಿಕೊಂಡು ಬಂದರೆ ಅಪ್ಪ ಮತ್ತೆ ಚುರುಕಾಗುತ್ತಾರೆ ಎಂದು ರಾಜಮೂರ್ತಿಗೆ ಅನ್ನಿಸುವ ಹೊತ್ತಿಗೆ ಗೋವಿಂದಯ್ಯ, 'ವಯಸ್ಸಾಯ್ತು. ಇನ್ನು ಬದುಕಿ ಪ್ರಯೋಜನವಿಲ್ಲ.', ಎಂದುಕೊಳ್ಳುತ್ತಿದ್ದರು.
ಮರುದಿನ ಗೋವಿಂದಯ್ಯನವರಿಗೆ ಬೆಳಕಾಗಲಿಲ್ಲ.