ಪಂಚಾಯ್ತಿ ಮೆಂಬರು ದಾಮು ಹೇಳಿದ ಸುದ್ದಿಯನ್ನ ಗೋಳಿಬೈಲಿನ ವೆಂಕಟರಮಣ ಸ್ಟೋರ್ಸಿನ ಕಿಣಿ ಮಾಮ್ ಯಾತಕ್ಕೂ ನಂಬಲಿಲ್ಲ. ಅವರು ದಾಮು ಕೇಳಿದ ಜಾಫಾ ಕೋಲಾ ತೆಗೆದು ಕೊಟ್ಟು, ಅಂಗಡಿಯ ಗಾಜಿನ ಬಾಟಲುಗಳನ್ನ ಸರಿಯಾಗಿ ಜೋಡಿಸಿ, ಧೂಳು ಹೊಡೆದು, ಊದುಬತ್ತಿ ಹಚ್ಚಿ ಅದನ್ನು ಬಾಲಾಜಿಯ ಫೋಟೋಕ್ಕೆ ಮೂರು ಸುತ್ತು ಸುತ್ತಿಸಿ. ನಿಧಾನ ತಮ್ಮ ಕುರ್ಚಿಯ ಮೇಲೆ ಕುಳಿತು, “ಅದೆಂತ ಸಮಾ ಹೇಳು ಮಾರಾಯಾ” ಅಂದರು. ದಾಮು ಜಾಫಾ ಕುಡಿಯುತ್ತಿದ್ದವನು, ಇದಕ್ಕಾಗೇ ಕಾದಿದ್ದವನ ಹಾಗೆ, ಗಂಟಲು ಸರಿ ಮಾಡಿಕೊಂಡ. “ನೋಡಿ ಕಿಣಿ ಮಾಮ್, ನಂಗೊತ್ತುಂಟು ನೀವೆಂತ ಯೋಚನೆ ಮಾಡ್ತ ಇದ್ದೀರೀಂತ. ಈ ದಾಮುಗೆ ಮಾಡ್ಲಿಕ್ಕೆ ಬೇರೆ ಕೆಲ್ಸ ಇಲ್ಲ. ದಿನಕ್ಕೊಂದು ರೈಲು ಬಿಡ್ತಾನೆ. ಇದು ಸಾ ಹಾಗೇ ಅಂತ ಎಣಿಸಿರ್ತೀರಿ. ಆದ್ರೆ ನಾನು ಹೇಳುದು ದೇವರ್ನಜ ಸತ್ಯ ಮಾಮ್. ಬಿಡಿಸಿ ಹೇಳ್ತೇನೆ ಕೇಳಿ. ನಮ್ಮ ಚಿಕನ್ ಸ್ಟಾಲ್ ಮಹಮದ್ ಕಾಕ ಇದ್ರಲ್ಲ, ಅವರ ಮಗ ರಫೀಕ್ ನಮ್ಮೂರಲ್ಲಿ ಅಪಾರ್ಟ್ ಮೆಂಟ್ ಕಟ್ತಾನಂತೆ. ಅಪ್ಪ ಅಮ್ಮ ಏಕ್ಸಿಡೆಂಟಲ್ಲಿ ಸತ್ತ ಮೇಲೆ ಊರು ಬಿಟ್ಟು ಹೋದ ಅವ ಏಳು ವರ್ಷ ದುಬೈಲಿದ್ದ. ಒಳ್ಳೇ ದುಡ್ಡು ಮಾಡಿದಾನಂತೆ. ಊರಿಗೆ ಬಂದು ತಿಂಗಳಾಯ್ತು, ನಮ್ಮ ಶಾಲೆ ಉಂಟಲ್ಲ, ಅದ್ರ ಪಕ್ಕದಲ್ಲಿ ಇದ್ದ ಡಿಸೋಜ ಪೊರ್ಬುಗಳ ಒಂದೆಕರೆ ಜಾಗ ತಗೊಂಡಿದ್ದಾನೆ. ಅಲ್ಲಿ ಒಂದು ದೊಡ್ಡ ಅಪಾರ್ಟ್ ಮೆಂಟ್ ಕಟ್ತಾನಂತೆ. ಹತ್ತು ಮಾಳಿಗೆದ್ದು, ಇಪ್ಪತ್ತೋ ಮೂವತ್ತೋ ಮನೆ ಇರ್ತದಂತೆ. ನಂಗೆ ಈಗ ಬೆಳಿಗ್ಗೆ ಬೆಳಿಗ್ಗೆ ದೇವಸ್ಥಾನದಲ್ಲಿ ರಫೀಕನ ದೋಸ್ತಿ ತಿಲಕ ಸಿಕ್ಕಿದ್ದ, ಅವ್ನೇ ಇದನ್ನೆಲ್ಲ ಹೇಳಿದ್ದು. ಕೇಳಿ ಮಂಡೆ ಬೆಚ್ಚ ಆಗಿದೆ ಮಾರ್ರೆ. ಅದಕ್ಕೆ ಬೆಳಗ್ಗೆ ಎದ್ದು ಪಸ್ಟು ನಿಮ್ಮಲ್ಲಿಗೇ ಬಂದದ್ದು ನಾನು” ಎಂದು ಮಾತು ನಿಲ್ಲಿಸಿದ ದಾಮು, ಕಿಣಿ ಮಾಮ್ ಏನ್ ಹೇಳಿಯಾರು ಎಂದು ಅವರ ಮುಖವನ್ನೇ ನೋಡುತ್ತಿದ್ದ. ಆದರೆ ಅವರ ಮುಖದಲ್ಲಿ, ಯಾವ ಬದಲಾವಣೆಯೂ ಕಾಣಲಿಲ್ಲ. ಸ್ವಭಾವತಃ ಭಯಂಕರ ಸ್ಥಿತಪ್ರಜ್ಞರಾಗಿರುವ ಎಪ್ಪತ್ತು ವರ್ಷದ ಕಿಣಿ, ಪಕ್ಕದಲ್ಲೇ ಬಾಂಬು ಬಿದ್ದರೂ ತಮ್ಮ ಮುಖಚರ್ಯೆಯನ್ನ ಬದಲಿಸುವುದು ಅನುಮಾನವೇ. ಅದರಲ್ಲೂ,ಪಂಚಾಯ್ತು ಮೆಂಬರಾದರೂ ಎಂ.ಎಲ್.ಎ ತರ ವರ್ತಿಸುವ, ಕಡ್ಡಿಯನ್ನ ಗುಡ್ಡ ಮಾಡುವ ದಾಮುವಿನ ಮಾತಿಗೆ ಬೈಹುಲ್ಲು ಹಾಕುದು ಅಷ್ಟರಲ್ಲೇ ಇತ್ತು. ಹಾಗಾಗೇ “ಮಾಡಿದ್ರೆ ಮಾಡ್ಲಿ ಮಾರಾಯಾ,ಅದ್ರಲ್ಲಿ ಮಂಡೆಬೆಚ್ಚ ಆಗುದೆಂತ ಉಂಟು” ಎಂದು ನೀರಸವಾಗಿ ಉತ್ತರಿಸಿ ಕೂತರು. ದಾಮು, “ಎಂತ ತಲೆಬಿಸಿ ಅಂತ ಈಗ ಗೊತ್ತಾಗುದಿಲ್ಲ, ನೋಡ್ತಾ ಇರಿ” ಎಂದು ದುಡ್ಡನ್ನ ಕುಕ್ಕಿ, ಅಲ್ಲಿಂದ ಎದ್ದು ಹೋದ. ದಾಮು ಹೇಳುವ ಇಂತಹ ಎಷ್ಟೋ ವಿಷಯಗಳು, ಆಮೇಲಷ್ಟೇ ಸತ್ಯ ಎಂದು ಗೊತ್ತಾಗುತ್ತಿದ್ದವು. ಈ ಪ್ರಕರಣದಲ್ಲೂ ಹಾಗೇ ಆಯ್ತು.
ಸಂಜೆಯ ಹೊತ್ತಿಗೆ ಗೋಳಿಬೈಲಿನಲ್ಲಿ ರಫೀಕ ಅಪಾರ್ಟ್ ಮೆಂಟ್ ಕಟ್ಟುತ್ತಾನಂತೆ ಎನ್ನುವ ಸುದ್ದಿ ಪ್ರಚಂಡವಾಗಿ ಹಬ್ಬಿತು. ಜನವರಿಯ ಹದಾ ಸೆಕೆಯಲ್ಲೂ ಸುಬ್ಬಣ್ಣನ ಶ್ರೀದೇವಿ ಹೋಟೆಲಿನ ಗೋಳಿಬಜೆಗಳು ಕೊಂಚ ಹೆಚ್ಚಾಗಿಯೇ ಖರ್ಚಾದವು. ನಲ್ವತ್ತು ಫ್ಲೋರಿದ್ದು ಬಿಲ್ಡಿಂಗ್ ಕಟ್ತಾನಂತೆ, ಒಂದು ಮನೆಗೆ ಒಂದು ಕೋಟಿಯಂತೆ ಎಂಬೆಲ್ಲ ಮಾತುಗಳಿಂದ ತೊಡಗಿ, “ಎಂತ ಇಲ್ಲ ಅವ ಸ್ವಂತಕ್ಕೆ ಮನೆ ಕಟ್ಟುದಂತೆ” ಎಂಬೆಲ್ಲ ಗಾಳಿಮಾತುಗಳು ಊರ ದಾರಿಗಳ ತುಂಬ ತೇಲಾಡಿದವು. ಮಂಗಳೂರಿನಿಂದ ಕೇವಲ ಇಪ್ಪತ್ತು ಕಿಲೋಮೀಟರು ದೂರ ಇರುವ ಗೋಳಿಬೈಲು ಎನ್ನುವ ಅತ್ತ ಹಳ್ಳಿಯೂ ಅಲ್ಲದ, ಇತ್ತ ಪೇಟೆಯೂ ಅಲ್ಲದ ಕಸಿ ಮಾಡಿದ ಊರು. ಮಂಗ್ಳೂರನ್ನ ಎಲ್ಲದಕ್ಕೂ ನಂಬಿಕೊಂಡಿರುವ ಈ ಊರಿನ ಮಂದಿಗೆ ಅಪಾರ್ಟ್ ಮೆಂಟೆಂಬುದು ಹೊಸ ಸಂಗತಿಯಂತೂ ಆಗಿರಲಿಲ್ಲ. ದಿನಾ ಕುಡ್ಲ ಪೇಟೆಗೆ ನೂರರಲ್ಲಿ ಐವತ್ತು ಜನ ಹೋಗಿ ಬರುವವರೇ. ಅಲ್ಲಿನ ನಭದೆತ್ತರದ ಪೆಟ್ಟಿಗೆ ಪೆಟ್ಟಿಗೆ ಮನೆಗಳನ್ನ ಬಹುತೇಕ ಎಲ್ಲ ಕಂಡವರೇ. ಬೇರುಗಳನ್ನ ಇಲ್ಲೇ ಬಿಟ್ಟುಕೊಂಡು ಬೊಂಬಾಯಿ ಬೆಂಗಳೂರಲ್ಲಿ ರೆಂಬೆಕೊಂಬೆ ಚಾಚಿಕೊಂಡಿರುವ ಮಕ್ಕಳ ಮನೆಗಳಲ್ಲಿ ಇದ್ದು ಬಂದವರಂತೂ ಹಲವರಿದ್ದಾರೆ. ಆದರೆ ತಮ್ಮ ಊರಲ್ಲೇ ಯಾರೋ ಅಪಾರ್ಟ್ ಮೆಂಟ್ ಮಾಡುತ್ತೇನೆ ಎಂದಾಗ ಊರು ಸಣ್ಣಗೆ ದಂಗಾದ್ದು ಹೌದು. ಹೋಟೆಲಿನ ಸುಬ್ಬಣ್ಣ ಅಂತೂ, “ಈ ಊರಲ್ಲಿ ಯಾವ ಅಂಡೆದುರ್ಸು ಲಕ್ಷ ಲಕ್ಷ ಖರ್ಚು ಮಾಡಿ ಮನೆ ತೆಕೊಳ್ತಾನೆ? ಇದ್ದ ಮನೆಯ ಒಡೆದ ಹಂಚು ಹಾಕಿಸ್ಲಿಕ್ಕೆ ಗತಿ ಇಲ್ಲದೆ ಮಳೆ ಬಂದರೆ ಒಳಗೆ ತಪ್ಪಲೆ ಇಡುವ ಜನ. ನೇಜಿ ಹಾಕಿದ್ರೆ ನೆಡುವ ಹೆಣ್ಣಾಳಿಗೆ ತಲೆಗೆ ನೂರು ನೂರೈವತ್ತು ಕೊಡ್ಬೇಕು ಅಂತ ಗದ್ದೆಯನ್ನು ಬಿತ್ತುವ ಕಂಜೂಸುಗಳು. ಅದೆಲ್ಲ ಸಾಯ್ಲಿ, ನನ್ನ ಒಟೆಲಿಗೆ ಬಂದು, ಚಾ ತಿಂಡಿ ತಿಂದು ಲೆಕ್ಕ ಪುಸ್ತಕದಲ್ಲಿ ಬರೆಸಿ ನೂರಿನ್ನೂರು ರುಪಾಯಿ ಕೊಡ್ಲಿಕಾಗದೇ ತಲೆ ತಪ್ಪಿಸಿಕೊಂಡು ಓಡಾಡುವ ದರ್ಬೇಸಿಗಳು ಎಷ್ಟು ಜನ ಬೇಕು? ಅಂತಾದ್ರಲ್ಲಿ ಇಲ್ಲಿ ಅವ ಅಪಾರ್ಟ್ ಮೆಂಟು ಮಾಡುದಂತೆ.. ಮಂಗ್ಳೂರಲ್ಲಾದ್ರೆ ಹೌದು, ಅಲ್ಲಿ ಜಾಗ ಇಲ್ಲ. ಈ ಊರಲ್ಲಿ ಎಲ್ಲರತ್ರ ಎಕರೆಗಟ್ಲೆ ಜಾಗ ಉಂಟು, ಗದ್ದೆ ತೋಟ ಉಂಟು. ಗಮ್ಮತ್ತಲ್ಲಿ ಇರುವವರು ಬಂದು ಗೂಡಲ್ಲಿ ಕುತ್ಕೊಳ್ಳಿಕ್ಕೆ ಉಂಟಾ? ಪಾಪ, ಅವ ಮಾಡಿಟ್ಟ ದುಡ್ಡು ಲಗಾಡಿ ತೆಗ್ಯುವ ಅಂತಲೇ ಇಲ್ಲಿಗೆ ಬಂದ ಹಾಗೆ ಉಂಟು. ನಂಗೆ ಅವ್ನ ಪರಿಚಯ ಸಮಾ ಇಲ್ಲ. ಯಾರಾದ್ರೂ ಗೊತ್ತಿದ್ದವ್ರು ಸ್ವಲ್ಪ ಹೇಳಿ ಮಾರ್ರೆ” ಎಂದು ಹೇಳಿ ದೋಸೆ ಮಗುಚಿ ಹಾಕಿದ್ದರು.
ಗೊತ್ತಿದ್ದವರು ತಿಳಿ ಹೇಳುವ ಸ್ಥಿತಿಯೇ ಬರಲಿಲ್ಲ. ಮಾರನೇ ದಿನ ಖುದ್ದು ರಫೀಕನೇ ಊರಲ್ಲಿ ಪ್ರತ್ಯಕ್ಷನಾಗಿ ಹಬ್ಬಿಕೊಂಡಿದ್ದ ಸುದ್ದಿಗೆ ಅಧಿಕೃತವಾಗಿ ಸೀಲು ಹೊಡೆದ. ಮಿರಿ ಮಿರಿ ಮಿಂಚುವ ಬಿಳೀ ಕಾರಲ್ಲಿ ಬಂದವನು, ಸುಬ್ಬಣ್ಣನ ಹೋಟೇಲಲ್ಲೇ ಕೂತು ಮಾತಾಡುತ್ತ, ಅಪಾರ್ಟ್ ಮೆಂಟ್ ಕಟ್ಟಿಸುತ್ತಿದ್ದೇನೆ ಅನ್ನುವುದನ್ನ ಹೇಳಿದ. ಚಾ ಕುಡಿದು ಸಾದಾ ದೋಸೆ ತಿಂದು ತಾನೇನು ಮಾಡುತ್ತಿದ್ದೇನೆ ಎನ್ನುವುದನ್ನ ವಿವರಿಸಿಯೂ ಹೋದ. ಆವತ್ತಿಂದ ಆ ಹೋಟೆಲು, ರಫೀಕನ ಅಪಾರ್ಟ್ಮೆಂಟಿನ ಪ್ರಚಾರ ಕಚೇರಿಯೂ ಆಗಿ ಬದಲಾಯಿತು. ಹಿಂದಿನ ದಿನವಷ್ಟೇ ಅವನ ಮಾನಸಿಕ ಸ್ಥಿತಿ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದ ಸುಬ್ಬಣ್ಣ, ತಾವೇ ಖುದ್ದು ಬಂದವರಿಗೆಲ್ಲ ಅದರ ವಿಶೇಷತೆಗಳನ್ನ ವಿವರಿಸಲು ಶುರು ಮಾಡಿದ್ದರು. ಐದು ಮಹಡಿಯ ಬಿಲ್ಡಿಂಗು,ಒಂದು ಫ್ಲೋರಿಗೆ ನಾಲ್ಕರ ಹಾಗೆ ಒಟ್ಟು ೨೦ ಮನೆಗಳು, ಮುಂದೆ ಗಾರ್ಡನು, ನೆಲಮಾಳಿಗೆಯಲ್ಲಿ ಪಾರ್ಕಿಂಗು ಹಿಂದೆ ಸ್ವಿಮ್ಮಿಂಗ್ ಪೂಲು, ಲಿಫ್ಟು, ಬ್ಯಾಡ್ಮಿಂಟನ್ ಕೋರ್ಟು ಹೀಗೆ ಥರಹೇವಾರಿ ಸೌಲಭ್ಯಗಳ ಬಗ್ಗೆ ಗುಣಗಾನ ಆರಂಭಿಸಿದ್ದರು. ಮುಂದಿನ ವಾರವೇ ಕೆಲಸ ಆರಂಭಗೊಂಡು ಎಂಟರಿಂದ ಹತ್ತು ತಿಂಗಳ ಒಳಗೇ ಅಪಾರ್ಟ್ ಮೆಂಟು ವಾಸಕ್ಕೆ ಸಿದ್ಧವಾಗುತ್ತದೆಯಂತೆ ಎಂಬ ಬ್ರೇಕಿಂಗ್ ನ್ಯೂಸು ಕೂಡ ಎಲ್ಲೆಡೆಗೆ ಹಬ್ಬಿತು. ಎಲ್ಲ ಮುಗಿದ ಮೇಲೆ ಸುಬ್ಬಣ್ಣ ಹೇಳುತ್ತಿದ್ದದ್ದು ರೇಟಿನ ವಿಷಯ. ಒಂದು ಮನೆಗೆ ೧೬ ಲಕ್ಷ ರೇಟು ಫಿಕ್ಸು ಮಾಡಿದ್ದು, ಅದು ಆರಂಭಿಕ ಆಫರಂತೆ, ಆಮೇಲಾದರೆ ೧೮ರಿಂದ ೨೦ ಲಕ್ಷ ಕೊಡಬೇಕು ಎನ್ನುವ ಉಪಸಂಹಾರದೊಂದಿಗೆ ಮಾತು ಮುಗಿಯುತ್ತಿತ್ತು. ಯಾವಾಗ ದುಡ್ಡಿನ ಸುದ್ದಿ ಬಂತೋ, ಆವಾಗ ಕಣ್ಣಗಲಿಸಿ ಕೇಳುತ್ತಿದ್ದವರ ಮುಖ ಚಪ್ಪೆ ಆಗಿ, ಅಷ್ಟಾದರೆ ಕಷ್ಟ ಅಂತ ಹೇಳಿ ಎದ್ದು ಹೋಗುತ್ತಿದ್ದರು. ಸುಬ್ಬಣ್ಣ ಮತ್ತೆ, “ನಾನು ಆವತ್ತೇ ಹೇಳಿದ್ದಲ್ವ? ಇದೆಲ್ಲ ಆಗುದಿಲ್ಲ ಮಾರ್ರೆ” ಎಂದು ಮೂಲೆಯಲ್ಲಿ ಚಾ ಹೀರುತ್ತ ಕುಳಿತವರಿಗೆ ಹೇಳುತ್ತ ತಮಗೆ ತಾವು ಸಮಾಧಾನ ಮಾಡಿಕೊಳ್ಳುತ್ತಿದ್ದರು.
ವಾರದೊಳಗೆ ರಫೀಕ್ ಅಪಾರ್ಟ್ ಮೆಂಟ್ ಕೆಲ್ಸ ಶುರು ಮಾಡಿಸಿಯೇ ಬಿಟ್ಟ. ಅದಾದ ಮಾರನೇ ದಿನವೇ ಗೋಳಿಬೈಲಿನ ತುಂಬ ಅಪಾರ್ಟ್ ಮೆಂಟಿನ ಪ್ಯಾಂಪ್ಲೆಟ್ಟುಗಳು ಹರಿದಾಡಿದವು. “ಮಧ್ಯಮ ವರ್ಗದ ಜನತೆಗೆ ವರದಾನ, ನ್ಯೂ ಲೈಫ್ ಅಪಾರ್ಟ್ ಮೆಂಟ್” ಎಂದು ದಪ್ಪ ಅಕ್ಷರಗಳಲ್ಲಿ ಮುದ್ರಿತ ಕರಪತ್ರಗಳು ಪೇಪರುಗಳಲ್ಲಿ ಕೂತು ಮನೆ ಮನೆ ತಲುಪಿದವು. ಮೊದಲಿಗೆ ಐದು ಲಕ್ಷ ಅಡ್ವಾನ್ಸ್ ಕೊಟ್ಟರೆ ಸಾಕು, ಆಮೇಲೆ ಬ್ಯಾಂಕು ಲೋನು ಸಿಕ್ಕಿದ ಮೇಲೆ ದುಡ್ಡು ಕೊಟ್ಟರೆ ಸಾಕು, ಲೋನು ಸುಲಭಲ್ಲಿ ಸಿಗುತ್ತದೆ. ನಂತರ ಕಂತು ಕಟ್ಟಿದರಾಯ್ತು ಎಂಬಿತ್ಯಾದಿ ವಿವರಗಳು ಅದರಲ್ಲಿತ್ತು. ಇನ್ನೂ ಮನೆಯನ್ನೇ ನೋಡದೇ, ಅದು ಹೇಗಿರುತ್ತದೆ ಎಂದು ಕೂಡಾ ಗೊತ್ತಿಲ್ಲದೇ ದುಡ್ಡು ಕೊಡುವುದು ಹೇಗೆ ಎಂಬುದರಿಂದ ತೊಡಗಿ ರಫೀಕ ಕೈಕೊಟ್ಟು ಮತ್ತೆ ದುಬಾಯಿಗೆ ಓಡಿ ಹೋದರೆ ಎಂತ ಮಾಡುದು, ಭೂಕಂಪ ಆಗಿ ಬಿದ್ರೆ ಪರಿಹಾರ ಸಿಗ್ತದಾ? ಎಂಬೆಲ್ಲ ವಿವಿಧ ಆಯಾಮಗಳ ಚರ್ಚೆಗಳು ಬಾವಿಕಟ್ಟೆಯಲ್ಲಿ ಸಂತೆ ಮಾರ್ಕೆಟಿನಲ್ಲಿ ಸೇಂದಿ ಅಂಗಡಿಯಲ್ಲಿ ಹಾಲು ಡೈರಿಯಲ್ಲಿ ನಡೆದವು. ಒಬ್ಬೇ ಒಬ್ಬನೂ ಮನೆ ತೆಗೆದುಕೊಳ್ಳಲು ಮುಂದೆ ಬರಲಿಲ್ಲ.
ಕರಪತ್ರ ಹೊರಟು ನಾಲ್ಕನೇ ದಿನಕ್ಕೆ ಗೊಂಬೆ ಗೋವಿಂದ ನ್ಯೂ ಲೈಫಲ್ಲಿ ಮನೆ ತಗೊಂಡನಂತೆ ಎಂಬ ವಿಚಾರ ಹೊರಬಿತ್ತು. ಗೊಂಬೆ ಗೋವಿಂದ, ಜಾತ್ರೆ ನಾಟಕ ಕೋಲ ನೇಮ ಸ್ಕೂಲ್ ಡೇ ಯಕ್ಷಗಾನ ಭರತನಾಟ್ಯ ಹೀಗೆ ಎಂಥದೇ ಮನರಂಜನಾ ಪ್ರಕಾರ ಇರಲಿ, ಅದಕ್ಕೆಲ್ಲ ಡ್ರೆಸ್ಸು-ಸಲಕರಣೆ ಸಪ್ಲೈ ಮಾಡುವ ಜನ. ಮೆರವಣಿಗೆಗಳಲ್ಲಿ ಕುಣಿಯುವ ಗೊಂಬೆ ವೇಷ ಬಾಡಿಗೆಗೆ ಕೊಡಲು ಶುರು ಮಾಡಿದ್ದಕ್ಕೆ ಅವನಿಗೆ ಗೊಂಬೆ ಗೋವಿಂದ ಎಂದೇ ಊರ ಮಂದಿ ಅಡ್ಡ ಹೆಸರಿಟ್ಟಿದ್ದರು. ಅವ ಐದು ಲಕ್ಷ ರಫೀಕನ ಕೈಗೆ ಇಟ್ಟು, ಮೊದಲ ಫ್ಲೋರಿನಲ್ಲೇ ಒಂದು ಮನೆ ಬುಕ್ ಮಾಡಿಯಾಗಿದೆ ಎಂಬ ಸುದ್ದಿಯಿಂದಾಗಿ, “ಎಂತ ಅವಸ್ಥೆ, ಅವ ಅಷ್ಟು ದುಡ್ಡು ಮಾಡಿದ್ದು ಗೊತ್ತೇ ಆಗ್ಲಿಲ್ಲ ನೋಡಿ” ಎಂದು ತೀರಾ ಕಿಣಿ ಮಾಮ್ ನಂತಾ ಕಿಣಿ ಮಾಮೇ ಹೇಳಿದರು. ಇದಾಗಿ ಮಾರನೇ ದಿನ ಮೇರಿ ಟೀಚರ್ ಕೂಡ ಮನೆ ತೆಕೊಂಡ್ರಂತೆ ಎಂಬ ಸುದ್ದಿ ಬಂದು ಸುಬ್ಬಣ್ಣನ ಎಣ್ಣೆ ಬಾಣಲೆಗೆ ಪೋಡಿಯ ಜೊತೆಗೆ ಬಿದ್ದು ಮೇಲೆ ಏಳುವಷ್ಟರಲ್ಲಿ ರಿಟೈರ್ಡ್ ಬ್ಯಾಂಕ್ ಉದ್ಯೋಗಿ ಸುಧಾಕರ ಶೆಟ್ರು ಹೋಗಿ ಅಪಾರ್ಟ್ ಮೆಂಟ್ ನೋಡಿ ಬಂದಿದ್ದಾರಂತೆ ಎಂಬ ಬಿಸಿಬಿಸಿ ವಿಷಯವೂ ಗೊತ್ತಾಯಿತು. ಅವರು ಊರಿನ ಗಣ್ಯರಲ್ಲಿ ಒಬ್ಬರು. ಗೋಳಿಬೈಲಿನ ಗುತ್ತಿನ ಮನೆ ಅವರದು. ಅವರನ್ನ ಕೇಳಿದ್ದಕ್ಕೆ, “ನಾನು ಹೋಗಿ ನೋಡಿ ಬಂದದ್ದು ಹೌದು, ನಾವು ಮೂರು ಜನ ಇರುದಲ್ವಾ? ನನ್ನ ಅಮ್ಮನಿಗೆ ವರ್ಷ ತೊಂಬತ್ತು ಆಗ್ತಾ ಬಂತು. ನನ್ನ ಹೆಂಡತಿಗೂ ಕೂಡುದಿಲ್ಲ. ಮಗಳು ಗಂಡ ಮತ್ತೆ ಮಗನೊಟ್ಟಿಗೆ ನಾಸಿಕ್ ಅಲ್ಲಿ ಇರುದು, ಅವ್ಳೇನು ಇನ್ನು ಬರುದಿಲ್ಲ ಈ ಕಡೆಗೆ. ಕೆಲಸಕ್ಕೆ ಜನ ಸಿಗುದಿಲ್ಲ. ನಮ್ಗೂ ವಯಸ್ಸಾಯ್ತಲ್ಲ? ನಾವು ಸತ್ರೆ ಸುದ್ದಿ ಮುಟ್ಟಿಸ್ಲಿಕ್ಕಾದ್ರೂ ಅಕ್ಕ ಪಕ್ಕದಲ್ಲಿ ಜನ ಇರ್ತಾರಲ್ಲ? ಮನೆ ಸ್ವಲ್ಪ ಚಿಕ್ಕದಾಯ್ತಂತ ಕಾಣ್ತದೆ. ಪಡಸಾಲೆ ಜಗಲಿ ಅಡುಗೆಮನೆ ಉಪ್ಪರಿಗೆ ಅಂತ ಓಡಾಡಿಕೊಂಡಿದ್ದವನಿಗೆ ಇದು ಕಷ್ಟ. ಅಮ್ಮನನ್ನ ಒಪ್ಪಿಸುದು ಹೇಗೆ ಅಂತಲೂ ಗೊತ್ತಿಲ್ಲ.ಆದ್ರೆ ದಿನ ಹೋದ ಹಾಗೆ ಇದೇ ಸುಖ ಅಂತ ಕಾಣ್ತದೆ. ಗುತ್ತಿನ ಮನೆ ಅಂತ ಕೂತರೆ ಆಮೇಲೆ ಬದುಕುವುದು ಹೇಗೆ” ಎಂದು ಹೇಳಿದ್ದು ಬಹಳಷ್ಟು ಮಂದಿಯಲ್ಲಿ ಹೊಸದೊಂದು ಯೋಚನೆಯನ್ನಂತೂ ಹುಟ್ಟು ಹಾಕಿದ್ದು ಸುಳ್ಳಲ್ಲ.
ಆದರೆ ಮನೆ ಕೊಳ್ಳಲಿಕ್ಕಾಗದೇ ಇದ್ದವರು, ಅದರ ಅವಶ್ಯಕತೆ ಇಲ್ಲದವರು ರಫೀಕನನ್ನು ಹಳಿದೇ ಹಳಿದರು. “ಊರಿನ ಹಳ್ಳದಲ್ಲೇ ನಮ್ಮ ಹುಡುಗರು ಸ್ನಾನ ಮಾಡ್ಲಿಕ್ಕೆ ಹೋಗುದನ್ನ ಬಿಟ್ಟಿದಾರೆ, ಇನ್ನು ಅಲ್ಲಿ ಸ್ವಿಮ್ಮಿಂಗ್ ಪೂಲು ಯಾವ ಕರ್ಮಕ್ಕೆ?” ಎಂದು ಗ್ಯಾರೇಜಿನ ಶೇಖರ ಹೇಳಿದ್ದಕ್ಕೆ, “ಹೌದಪ್ಪ, ಕೆಳಗಿನ ಮನೆಯಲ್ಲಿ ಮೀನು ಕಾಯಿಸಿದ್ರೆ ಮೇಲ್ಗಡೆ ಮನೆಯವರಿಗೆ ಸಾ ವಾಸನೆ ಬರ್ತದೆ, ಇನ್ನು ಆ ಗೊಂಬೆ ಗೋವಿಂದನಿಗೆ ಮೊದಲೇ ದೊಂಡೆ ದೊಡ್ಡದು, ಅವ ಹೆಂಡ್ತಿಗೆ ಜೋರು ಮಾಡಿದ್ರೆ ಆಚೆ ಮನೆಯ ಮೇರಿ ಟೀಚರಿಗೆ ಕೇಳುದಿಲ್ವಾ” ಎಂದ ನಕ್ಕಿದ್ದು ದೇವಸ್ಥಾನದ ಮೊಕ್ತೇಸರ್ರ ಮಗ ಜನಾರ್ಧನ. ಶಾಲೆ ಗ್ರೌಂಡಲ್ಲೇ ಸಂಜೆ ಆಡ್ಲಿಕ್ಕೆ ಜನ ಇಲ್ಲದಾಗ ಅಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ಯಾವ ಪುರುಷಾರ್ಥಕ್ಕೆ, ಇನ್ನು ಅಷ್ಟು ಮನೆಗೆ ನೀರು ಕೊಡುವ ಬೋರ್ ವೆಲ್ಲು ಕೈ ಕೊಟ್ರೆ ಎಂತ ಕತೆ? ಪೇಪರಲ್ಲಿ ಮೈ ಒರೆಸಿಕೊಳ್ಳುದಾ? ಎಂದೆಲ್ಲ ಕೇಳಿದವರೂ ಇದ್ದರು.
ಯಾರು ಏನೇ ಅಂದರೂ, ನೋಡ ನೋಡುತ್ತಿದ್ದ ಹಾಗೆ ಒಟ್ಟು ಹದಿನೈದು ಮಂದಿ ನ್ಯೂ ಲೈಫ್ ನಲ್ಲಿ ಮನೆ ಕೊಳ್ಳಲು ಮುಂಗಡ ನೀಡಿದ್ದರು. ಬ್ಯಾಂಕಲ್ಲಿ ಫಿಕ್ಸೆಡಾಗಿದ್ದ ಬಹುಮಂದಿಯ ದುಡ್ಡು, ಹೊರ ಬಂದು ಚಲನಶೀಲವಾಯಿತು. ಮಂಗಳೂರಿಗೆ ಹೋಲಿಸಿದ್ರೆ ಗೋಳಿಬೈಲಿನಲ್ಲಿ ಅರ್ಧ ರೇಟಿಗೆ ಮನೆ ಸಿಕ್ಕಿದ ಹಾಗಾಯ್ತು ಎನ್ನುವ ಸುದ್ದಿಯೂ ಜೊತೆ ಜೊತೆಗೇ ಪ್ರಚಾರ ಪಡೆದುಕೊಂಡಿತು. ತಿಂಗಳೊಪ್ಪತ್ತಿಗೆ ಮೊದಲ ಮಹಡಿ ಮುಗಿದು, ಎರಡನೇ ಫ್ಲೋರು ಕಟ್ಟುವ ಕೆಲಸ ಶುರುವಾಯಿತು. ಈಗ ಅಪಾರ್ಟ್ ಮೆಂಟ್ ನೋಡಲು ಬಂದವರಿಗೆ ರಫೀಕನೇ ಖುದ್ದು ಮೊದಲ ಮಹಡಿಯ ಮನೆಗಳನ್ನ ತೋರಿಸಿ ರೂಪುರೇಷೆಗಳನ್ನು ವಿವರಿಸುತ್ತಿದ್ದ. ವಾಸ್ತುವಿನಿಂದ ಹಿಡಿದು ಇಂಟೀರಿಯರ್ ಡಿಸೈನ್ ವರೆಗೆ ಎಲ್ಲ ಅನುಮಾನಗಳನ್ನೂ ಪರಿಹರಿಸುತ್ತಿದ್ದ. ಮನೆ ಬೇಕಿಲ್ಲದೇ ಇದ್ದರೂ, ರಫೀಕ ಏನು ಮಾಡಿದ್ದಾನೆ ನೋಡುವ ಎಂದು ಬರುವವರ ಸಂಖ್ಯೆ ಏನು ಕಡಿಮೆ ಇರಲಿಲ್ಲ. ಅದಕ್ಕೆ ಅವನೇನೂ ಬೇಜಾರು ಮಾಡಿಕೊಳ್ಳಲಿಲ್ಲ. ಊರಿನ ಅಂಗಡಿ ಹೋಟೇಲುಗಳಲ್ಲಿ ಬಿಲ್ಡಿಂಗು ಕಟ್ಟುವ ಕೆಲಸದವರ ಅಕೌಂಟು ಕೂಡ ಶುರುವಾಗಿತ್ತು. ರಫೀಕನ ನ್ಯೂಲೈಪು” ಎಂಬ ಪದಪುಂಜ ಊರಿನ ಲೋಕಲ್ ನುಡಿಗಟ್ಟಲ್ಲಿ ಸೇರಿಕೊಂಡಿತು.
ದೇವಸ್ಥಾನದ ಅರ್ಚಕ ನಾರಾಯಣ ಭಟ್ಟರಿಗೂ ಯಾಕೆ ಒಂದು ಅಪಾರ್ಟ್ ಮೆಂಟು ತೆಕೊಳಬಾರದು ಎಂಬ ಯೋಚನೆ ಕಾಡುತ್ತಿತ್ತು. ಅವರದು ಕೂಡು ಕುಟುಂಬ. ಇಬ್ಬರು ತಮ್ಮಂದಿರು ಕೂಡ ಪೌರೋಹಿತ್ಯ ಮಾಡಿಕೊಂಡೇ ಇದ್ದವರು. ಮಕ್ಕಳಿಲ್ಲದ ಭಟ್ಟರು ಹತ್ತಿಪ್ಪತ್ತು ವರ್ಷಗಳಿಂದ ಒಂದಿಷ್ಟು ಇಡುಗಂಟು ಮಾಡಿಕೊಂಡಿದ್ದರು. ಸುಮ್ಮನೆ ನಿತ್ಯ ಮನೆಯಲ್ಲಿ ಮೂರೂ ಹೆಂಗಸರ ಕಿರಿಕಿರಿ ಕೇಳಿ ರೋಸಿ ಹೋಗಿದ್ದ ಅವರು ಮೆಲ್ಲನೆ ಒಂದು ರಾತ್ರಿ ವೀಳ್ಯದೆಲೆಗೆ ಸುಣ್ಣ ಹಚ್ಚುತ್ತ ಹೆಂಡತಿಗೆ ಯಾಕೆ ನಾವು ಬೇರೆ ಹೋಗಬಾರದು, ಇಲ್ಲಿ ಬೇಕಿದ್ದರೆ ತಮ್ಮಂದಿರೂ, ಅವರ ಹೆಂಡಿರೂ ಇರಲಿ. ನಾವು ನ್ಯೂಲೈಫಲ್ಲಿ ಮನೆ ತಗೊಂಡು ನೆಮ್ಮದಿಯಲ್ಲಿ ಇರುವ ಅಂದಿದ್ದಕ್ಕೆ, ಅವರ ಶಾರದೆಯೆಂಬ ಹೆಸರಿನ ಹೆಂಡತಿ ಚಾಮುಂಡಿಯೇ ಆಗಿಬಿಟ್ಟರು. “ಎಂತ ಅಂತ ಎಣಿಸಿದ್ದೀರಿ ನೀವು? ಮಂಡೆ ಸಮ ಉಂಟಾ? ಐವತ್ತು ವರ್ಷಕ್ಕೆ ಮೆದುಳು ಕಲಸಿ ಹೋಯ್ತಾ? ಆ ಶೂದ್ರರ ಒಟ್ಟಿಗೆಲ್ಲ ನಾವು ಹೇಗೆ ಇರ್ಲಿಕ್ಕಾಗ್ತದೆ? ಮಡಿಯಾ ಮೈಲಿಗೆಯಾ? ಕೋಳಿ,ಮೀನು ತಿನ್ನುವವರೊಟ್ಟಿಗೆ ನಾವು ಇರುದಾ? ಅಷ್ಟಕ್ಕು ನೀವು ಊರಿನ ಪುರೋಹಿತರು. ಮಾಲಿಂಗೇಶ್ವರನ ತಲೆಗೆ ನೀರು ಹಾಕುವವರು. ಕೆಲಸಕ್ಕೆ ಬರ್ತಿದ್ಲಲ್ಲ ಲಚುಮಿ, ಅವಳ ಮಕ್ಕಳು ಬೊಂಬಾಯಲ್ಲಿ ಇದ್ದಾರಲ್ಲ, ಅಮ್ಮನಿಗೆ ಅಂತ ಒಂದು ಮನೆ ತೆಕೊಂಡಿದಾರಂತೆ ಅಲ್ಲಿ. ನಮ್ಮ ಹಿತ್ತಿಲಲ್ಲಿ ಕೂತು ಚಾ ಕುಡೀತಿದ್ದ ಹೆಂಗಸಿನ ಒಟ್ಟಿಗೆ ಬದ್ಕುದಕಿಂತ ಹೊಳೆ ಹಾರಿ ಸಾಯ್ತೇನೆ ಬೇಕಿದ್ರೆ. ಓರಗಿತ್ತೀರ ಜೊತೆಗೆ ಗಲಾಟೆ ಮಾಡಿಕೊಂಡಾದ್ರೂ ಸೈಯೇ, ಆ ಬ್ಯಾರಿಯ ಮನೆಯಲ್ಲಿ ಇರುವ ಗ್ರಹಚಾರ ಬೇಡ” ಎಂದು ಭಟ್ಟರ ಭೂತ ಬಿಡಿಸಿದರು. ಹೆಂಡತಿಯನ್ನ ಹೇಗೆ ರಿಪೇರಿ ಮಾಡುವುದೆಂದು ತಲೆಕೆಡಿಸಿಕೊಳುತ್ತ ಭಟ್ಟರು ರಾತ್ರಿ ಕಳೆದರು.
ಸುಧಾಕರ ಶೆಟ್ರು ಮನೆ ತಗೊಳ್ಳುವ ನಿರ್ಧಾರ ಗಟ್ಟಿ ಮಾಡಿದ್ದರು. ರಫೀಕನಲ್ಲಿ ಹೋಗಿ ಸ್ವಲ್ಪ ದಿನ ವಾಯಿದೆ ಕೇಳಿಕೊಂಡು ಬಂದಿದ್ದೂ ಆಗಿತ್ತು. ಮೂರನೇ ಫ್ಲೋರಿನ ಮನೆಯನ್ನ ಬಾಯಿ ಮಾತಲ್ಲಿ ಕಾದಿರಿಸಿದ್ದರು. ಅವರ ಹೆಂಡತಿಯನ್ನು ಓಲೈಸಲು ಹೆಚ್ಚೇನೂ ಕಷ್ಟವಾಗಿರಲಿಲ್ಲ. ಅಷ್ಟು ದೊಡ್ಡ ಗುತ್ತಿನ ಮನೆಯನ್ನು ಸಂಭಾಳಿಸುವುದಕ್ಕೆ ರತ್ನಕ್ಕನಿಗೆ ಸಾಕು ಸಾಕಾಗುತ್ತಿತ್ತು. ಕೆಲಸದವರಿಲ್ಲದೇ ತೆಂಗಿನ ತೋಟ ಹಾಳು ಬಿದ್ದಾಗಿತ್ತು. ಒಂದು ಕಾಲದಲ್ಲಿ ಕಂಬಳದ ಕೋಣಗಳನ್ನ ಹೊಂದಿದ್ದ ಮನೆಯ ಕೊಟ್ಟಿಗೆ, ಈಗ ಖಾಲಿಯಾಗಿತ್ತು. ಕೊನೆಯ ದನವನ್ನ ಮಾರುವಾಗಲೇ ಅವರಮ್ಮ ಸಕ್ಕುಶೆಡ್ತಿ ಅತ್ತು ಕರೆದು ರಣಾರಂಪ ಮಾಡಿದ್ದರು. ಈಗ ಗುತ್ತಿನ ಮನೆಯನ್ನೇ ಬಿಟ್ಟು ಹೋಗುತ್ತೇವೆ ಎನ್ನುವುದನ್ನ ಹೇಗೆ ತಿಳಿಸಿ ಹೇಳುವುದು ಎಂದು ಶೆಟ್ರು ನಾಲ್ಕೈದು ದಿನ ಪರದಾಡಿದರು. ಕೊನೆಗೊಂದು ದಿನ ಕೂರಿಸಿ ಮೆಲ್ಲ ವಿಷಯ ಹೇಳಿದರು. ಆ ಮುದಿಜೀವ ಕಂಗಾಲಾಗಿ ಹೋಗಿತ್ತು. ಕುಳಿತಲ್ಲೆ ಕಣ್ಣೀರು ಹಾಕಿ, ಅಯ್ಯೋ ಎಂಥ ಮಗನನ್ನು ಹೆತ್ತೆನಪ್ಪಾ ಎಂದು ಜೋರು ದನಿಯಲ್ಲಿ ಅರುವತ್ತೈದರ ಮಗನನ್ನ ಬೈದುಕೊಂಡಿತು. ಗುತ್ತಿನ ಗತ್ತು ಮುಗಿದು ವರುಷಗಳೇ ಆಗಿದೆ ಅನ್ನುವ ಸತ್ಯ ಹಿರಿಜೀವಕ್ಕೂ ಗೊತ್ತಿದ್ದದ್ದೇ. ಆದರೆ ದೈವದೇವರುಗಳನ್ನ, ನಾಗಬನವನ್ನ ತೊರೆದು ಹೋಗುವುದಕ್ಕೆ ಅವರು ಖಂಡಿತಾ ಸಿದ್ಧರಿರಲಿಲ್ಲ. ಕೊನೆಗೆ ಜಮೀನನ್ನು ಮಾರುವುದಿಲ್ಲ, ಆಗಾಗ ಬಂದು ನೋಡಿಕೊಂಡು ಹೋಗುವುದು, ದೈವದೇವರುಗಳ ವಾರ್ಷಿಕ ಕೋಲ ನೇಮ ತಂಬಿಲ ಇತ್ಯಾದಿ ಕಾರ್ಯಗಳನ್ನ ಇಲ್ಲಿಯೇ ನಡೆಸುವುದು ಎಂಬ ಕರಾರಿನ ಮೇಲೆ ಈ ಮನೆಯನ್ನ ಬಿಡುವುದಕ್ಕೆ ಒಪ್ಪಿಕೊಂಡರು.
ಕೆಲವೇ ದಿನಗಳಲ್ಲಿ, ಬೇಕು ಎಂದರು ಕೂಡ ನ್ಯೂ ಲೈಟಿನಲ್ಲಿ ಒಂದು ಮನೆಯೂ ಖಾಲಿ ಉಳಿಯಲಿಲ್ಲ. ಹೋಟೇಲಿನ ಸುಬ್ಬಣ್ಣ ತಾನು ಕೂಡ ಮನೆ ತಕ್ಕೊಳ್ಳುವ ಪ್ಲಾನು ಮಾಡಿ, ರಫೀಕನ ಹತ್ತಿರ ಹೋಗಿದ್ದರೂ, ಇದ್ದ ಕೊನೇ ಮನೆಯನ್ನು ಹತ್ತೇ ನಿಮಿಷಕ್ಕೆ ಮುಂಚೆ ಶೀನ ಮೇಸ್ತ್ರಿ ಅಡ್ವಾನ್ಸು ಕೊಟ್ಟು ಬುಕ್ ಮಾಡಿದ್ದನ್ನು ಕೇಳಿ ಹೊಟ್ಟೆ ಹೊಟ್ಟೆ ಉರಿದುಕೊಂಡಿದ್ದರು. ರಫೀಕ ಹೇಳಿದ ಮಾತಿನಂತೆ ಹತ್ತು ತಿಂಗಳೊಳಗೆ ಅಪಾರ್ಟ್ ಮೆಂಟನ್ನ ಕಟ್ಟಿ ನಿಲ್ಲಿಸಿದ್ದ. ಹೋಗಿಬರುವವರೆಲ್ಲ ಕಣ್ಣೆತ್ತಿ ನೋಡಲೇಬೇಕೆಂಬ ಮಟ್ಟಿಗೆ ನ್ಯೂಲೈಫ್ ಮಿಂಚುತ್ತಿತ್ತು. ಅದರ ಟೆರೇಸಿನಲ್ಲಿ ನಿಂತು ನೋಡಿದರೆ ಇಡೀ ಗೋಳಿಬೈಲು ಚಂದ ಕಾಣ್ತದೆ, ಎಂಆರ್ ಪೀಎಲ್ಲಿನ ಲೈಟು ರಾತ್ರಿ ಹೊತ್ತು ಮಿನುಗುವುದು ಸೂಪರಾಗಿ ತೋರ್ತದೆ ಎಂಬುದನ್ನ ಒಂದಿಷ್ಟು ಮಂದಿ ಸಂಶೋಧಿಸಿದ್ದರು. ಅಲ್ಲಿನ ಸ್ವಿಮ್ಮಿಂಗ್ ಪೂಲು ಊರಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಯಿತು.
ಮನೆಯ ಯಜಮಾನರುಗಳಿಗೆ ಕೀಯನ್ನು ಕೊಟ್ಟು ಹಸ್ತಾಂತರಿಸುವ ಸಾಂಕೇತಿಕ ಕಾರ್ಯಕ್ರಮಕ್ಕೆ ಒಂದು ದಿನ ನಿಗದಿಯೂ ಆಯಿತು. ಅಪಾರ್ಟ್ ಮೆಂಟಿಗೆ ದೊಡ್ಡದಾಗಿ ಬಂಗಾರ ಬಣ್ಣದಲ್ಲಿ , ಇಂಗ್ಲೀಷಿನಲ್ಲಿ ನ್ಯೂ ಲೈಫ್ ಎಂದು ಬರೆಸಲಾಗಿತ್ತು. ಉದ್ಘಾಟನೆ ದಿನ ಅದರ ಅಂಗಳಕ್ಕೆ ದೊಡ್ಡ ಶಾಮಿಯಾನ ಬಂತು. ಎಂಎಲ್ ಎ ಸಾಹೇಬರೂ ಬಂದರು. ಮನೆಯ ಮಾಲೀಕರುಗಳನ್ನು ಮೊದಲಿನ ಎರಡು ಸಾಲು ಮೂರು ಸಾಲುಗಳಲ್ಲೇ ಕೂರಿಸಲಾಗಿತ್ತು. ಅವರುಗಳಿಗೆ ಪಂಚಾಯತ್ ಪ್ರೆಸಿಡೆಂಟರು ಮತ್ತು ಎಂಎಲ್ಲೆ ಕೀ ವಿತರಿಸಿದರು. ಹೇಗೆ ನ್ಯೂಲೈಫ್ ಎಂಬ ವಸತಿ ಸಮುಚ್ಚಯ ಗೋಳಿಬೈಲಿನ ಜನರ ಆಶಾಕಿರಣ ಆಗಿದೆ ಎಂಬುದರ ಬಗ್ಗೆ ಅತಿಥಿಗಳು ಮಾತನಾಡಿದರು. ಬಂದವರಿಗೆಲ್ಲ ವಾಹನ ಪಾರ್ಕಿಂಗ್ ಗೆ ಅಂತ ಜಾಗ ಮಾಡಿದ್ದ ನೆಲಮಾಳಿಗೆಯಲ್ಲಿ ಊಟದ ವ್ಯವಸ್ಥೆಯನ್ನೂ ಮಾಡಿದ್ದು, ಆವತ್ತಿನ ಮಟ್ಟಿಗೆ ಸುಬ್ಬಣ್ಣ ನ ಹೋಟೆಲು ಬಂದಾಗಿತ್ತು. ಇಡೀ ಊರಿನ ಜನ ಅಪಾರ್ಟ್ ಮೆಂಟಿನ ಮನೆ ಮನೆಗಳನ್ನೂ ಒಳ ಹೊಕ್ಕು ಅಧ್ಯಯನ ಮಾಡಿದರು. ಲಚುಮಿ ನೇಜಿನಡಲು ತನ್ನ ಜೊತೆ ಬರುವ ಸ್ನೇಹಿತೆಯರಿಗೆ ಮನೆಯನ್ನ ತೋರಿಸಿ ತೋರಿಸಿ ಸಂತಸ ಪಟ್ಟಳು. ಒಳಗೆ ಟಾಯ್ಲೆಟ್ಟಿನಲ್ಲಿ ಫಾರಿನ್ನು ಶೈಲಿಯ ಕಮೋಡನ್ನ ಕಂಡ ಅವಳ ದೋಸ್ತಿ ಇಂದ್ರಕ್ಕ ಪಿಸಿಪಿಸಿ ನಗೆಯಾಡಿ, “ ಇದೆಂತ ಕರ್ಮ ಮಾರಾಯ್ತಿ, ಗುಡ್ಡೆಗೆ ಚೊಂಬು ತಗೊಂಡು ಹೋದ ನಿಂಗೆ ಇದೆಲ್ಲ ಸಮ ಆಗ್ತದ” ಎಂದಿದ್ದಳು. ಆದರೆ ಹಾಗೆ ಹೇಳುತ್ತಿರುವ ಅವಳ ಕಣ್ಣುಗಳಲ್ಲಿ ಮಿನುಗಿದ ಅಸೂಯೆಯನ್ನು ಲಚುಮಿ ಗಮನಿಸದೆ ಇರಲಿಲ್ಲ. ಗೊಂಬೆ ಗೋವಿಂದ ಮನೆಯ ಬಾಗಿಲಿನ ಪಕ್ಕಕ್ಕೆ, ಒಂದು ಬಣ್ಣದ ಮುಖವಾಡ ಕೂರಿಸಿದ್ದ. ಮೇರಿ ಟೀಚರ ಮಗ ಈ ಕಾರ್ಯಕ್ರಮಕ್ಕಂತ ರಿಯಾದ್ ನಿಂದ ಬಂದಿದ್ದರೆ ಲಚುಮಿಯ ಇಬ್ಬರು ಮಕ್ಕಳು ಬೊಂಬಾಯಿಂದ ಬಂದಿದ್ದರು. ಲಾದ್ರು ಪೊರ್ಬುಗಳೂ, ಶೀನ ಮೇಸ್ತ್ರಿಯೂ ಅಹಮ್ಮದು ಬ್ಯಾರಿ ಎಲ್ಲರೂ ಇದು ಅವರದೇ ಕಾರ್ಯಕ್ರಮ ಎನ್ನುವಂತೆ ಓಡಾಡುತ್ತಿದ್ದರು. ಇಪ್ಪತ್ತಕ್ಕೆ ಇಪ್ಪತ್ತು ಮನೆಗಳ ಎಲ್ಲ ಬಲ್ಬು ಫ್ಯಾನು ಹಗಲೇ ಆದರೂ ಚಾಲೇ ಇತ್ತು. ಬೆಳಗಿಂದ ಸಂಜೆ ತನಕ ಊರ ಮಕ್ಕಳು ಲಿಫ್ಟಿನ ಬಟನುಗಳನ್ನು ಒತ್ತಿ ಮೇಲೆ ಕೆಳಗೆ ಹೋಗಿ ಬಂದರು.
ಗೋಳಿಬೈಲಿನಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ ನಾರಾಯಣ ಶೆಟ್ಟರನ್ನು ಅಮೆರಿಕಕ್ಕೆ ಕರೆಸಿಕೊಂಡಿದ್ದ ಮಗ ಸಂಜೀವ, ಊರಲ್ಲಿ ಅಪಾರ್ಟ್ ಮೆಂಟ್ ಆದ ಸುದ್ದಿ ಕೇಳಿ, ರಫೀಕನ ಹತ್ರ ಈ-ಮೇಲಲ್ಲೇ ಎಲ್ಲ ವಿವರ ತರಿಸಿಕೊಂಡು, ಕೂತಲ್ಲೇ ಮನೆ ಖರೀದಿಸಿದ್ದ. ಆವತ್ತು ಅಪ್ಪ ಮಗ ಇಬ್ಬರೂ ಕೊಂಚ ತಡವಾಗಿ ಬ್ಯಾಗು ಸಮೇತ ಬಂದು ಗೋಳಿಬೈಲಿನಲ್ಲಿ ಇಳಿದರು. ಊರಿನ ಮಂದಿಯೆಲ್ಲ ಶೆಟ್ಟರನ್ನ ಮತ್ತೆ ಸ್ವಾಗತಿಸಿದರು. ಸಂಜೀವ ರಫೀಕನ ಹತ್ರ ಮಾತಾಡುತ್ತಾ, “ನೀನು ಈ ಅಪಾರ್ಟ್‌ಮೆಂಟ್ ಕಟ್ಟಿ ಭಾರೀ ಉಪಕಾರ ಮಾಡಿದೆ ಮಾರಾಯ. ಇಲ್ಲದಿದ್ರೆ ಮತ್ತೆ ನಾವು ಊರಿಗೆ ಬರುದೇ ಡೌಟಿತ್ತು. ಇಲ್ಲಿ ಅಪ್ಪ ಒಬ್ಬರನ್ನೇ ಬಿಟ್ಟು ಹೋಗ್ಲಿಕ್ಕೆ ನಂಗೆ ಮನಸ್ಸೇ ಇರ್ಲಿಲ್ಲ. ಹಾಗೆ ಅಲ್ಲಿಗೇ ಬನ್ನಿ ಅಂದಿದ್ದು. ಆದ್ರೆ ಅವ್ರಿಗೆ ಜೀವ ಇಲ್ಲಿಗೇ ಎಳೀತಾ ಇತ್ತು. ಗೋಲಿ ಸೋಡಾ, ನೋವಿನೆಣ್ಣೆ, ಕಾಲಿ ದೋಸೆ, ಗಂಜಿ ಚಟ್ನಿ ಒಣ ಮೀನು, ಕೋಳಿ ಸುಕ್ಕ ಅಂತ ಕೂತದ್ದಕ್ಕೆ ನಿಂತದಕ್ಕೆ ಊರಿನ ಧ್ಯಾನ ಮಾಡ್ತಿದ್ರು.ಎಂತ ಮಾಡುದು ಅಂತ ಧರ್ಮ ಸಂಕಟದಲ್ಲಿದ್ದೆ ನಾನು. ಅಷ್ಟು ಹೊತ್ತಿಗೆ ನೀನು ದೇವರ ಹಾಗೆ ಬಂದಿ. ಇನ್ನು ಮೇಲೆ ನಾನೂ ಬಂದುಹೋಗುತ್ತೇನೆ” ಎಂದು ಹೇಳಿದ್ದನ್ನ ಬಹಳ ಮಂದಿ ಕೇಳಿಸಿಕೊಂಡರು.
ಮಾತಾಡುತ್ತ ನಿಂತಿದ್ದ ರಫೀಕನ ಹತ್ರ, ಅಹಮದು ಬ್ಯಾರಿಯ ಅಪ್ಪ ಬಂದು ಸಣ್ಣದೊಂದು ಗಲಾಟೆ ಎಬ್ಬಿಸಿದ್ದು ಮಾತ್ರ ಆವತ್ತಿನ ಕಪ್ಪು ಚುಕ್ಕೆ. ತಾವು ಮನೆಯ ಇನ್ನೊಂದು ತಿಂಗಳಲ್ಲಿ ಶಿಫ್ಟು ಮಾಡುತ್ತೇವೆ. ಬರುವಾಗ ಜೊತೆಗೆ ತಾವು ಸಾಕಿದ ಕೋಳಿ ತಗೊಂಡು ಬರಬಹುದಾ ಎಂಬುದು ಅವರ ಪ್ರಶ್ನೆಯಾಗಿತ್ತು. “ನೋಡು ರಫೀಕು, ನೀನು ನನ್ನ ದೋಸ್ತಿ ಮಹಮದಾಕನ ಮಗ, ನನ್ನದೊಂದು ಮೂರು ಕೋಳಿಗೆ ಇಲ್ಲಿ ಜಾಗ ಉಂಟಂತ ಗೊತ್ತುಂಟು ನಂಗೆ, ಆದ್ರೆ ಕೇಳುವುದೊಂದು ಕ್ರಮ ಅಲ್ವೋ. ಅದಕ್ಕೆ ಕೇಳಿದ್ದು” ಎಂದರು ಝಕ್ರಿ ಸಾಯ್ಬರು. ಹೀಗೊಂದು ಸಮಸ್ಯೆ ಬರುತ್ತದೆ ಎಂದು ಅವನು ಅಂದುಕೊಂಡಿರಲೂ ಇಲ್ಲ. ಕೋಳಿಗಳಿಗೆಲ್ಲ ಅಪಾರ್ಟ್ ಮೆಂಟಿನಲ್ಲಿ ಜಾಗ ಇಲ್ಲ ಅಂತ ಅವರನ್ನ ಸಮಾಧಾನ ಮಾಡುವಷ್ಟರಲ್ಲಿ ರಫೀಕನಿಗೆ ಸಾಕು ಸಾಕಾಯಿತು. “ಹೀಗೆಲ್ಲ ಉಂಟಂತ ಗೊತ್ತಿದ್ರೆ ಲಕ್ಷ ಲಕ್ಷ ಕೊಟ್ಟು ಮನೆ ಮಾಡುವುದೇ ಬೇಡ ಇತ್ತು” ಎಂದು ಝಕ್ರಿ ಸಾಯ್ಬರು ಬಿಸಿಬಿಸಿ ಮಾತಾಡಿದರು.
ಆವತ್ತು ಸಂಜೆ ಗುತ್ತಿನ ಮನೆಗೆ ಬೀಗ ಹಾಕಿ , ಹೆಂಡತಿ ಮತ್ತು ತಮ್ಮ ವೃದ್ಧೆ ತಾಯಿಯನ್ನ ಕರೆದುಕೊಂಡು, ನ್ಯೂ ಲೈಫ್ ಗೆ ಬಂದ ಸುಧಾಕರ ಶೆಟ್ರಿಗೆ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಆ ಅಜ್ಜಿಮುದುಕಿ ಗಟ್ಟಿದನಿಯಲ್ಲಿ, “ಮಗಾ, ಈ ಜಾಗಕ್ಕೆ ಎಂತ ಹೇಳ್ತಾರೆ” ಎಂದು ಕೇಳಿದರು. “ನ್ಯೂಲೈಫ್” ಎಂದು ಸಟಕ್ಕನೆ ಉತ್ತರಿಸಿದ ಶೆಟ್ರಿಗೆ, ಹಾಗಂದರೆ ಅವರಿಗೆ ಅರ್ಥವಾಗುವುದಿಲ್ಲ ಎಂದು ಅರಿವಾಯಿತು. ಮೆಲ್ಲ ಬಗ್ಗಿ, ಹೊಸಬದುಕು ಎಂದು ಅಮ್ಮನ ಕಿವಿಯಲ್ಲಿ ಗಟ್ಟಿಯಾಗಿ ಹೇಳಿ ಸುಮ್ಮನಾದರು. ಆ ಅಜ್ಜಿ, “ಎಂತಾ ಹೊಸಬದುಕಾ ಏನಾ” ಎಂದು ಕೈಮೇಲೆತ್ತಿ ಗೊಣಗುತ್ತ ಮುಂದಕ್ಕೆ ಹೊರಟರು. ಅವರ ನಿಧಾನ ನಡಿಗೆಯ ಲಯಕ್ಕೆ ಪಕ್ಕದ ಸೈಟಿನಲ್ಲಿ ನ್ಯೂ ಲೈಫ್-೨ ಗೆ ಪಂಚಾಂಗ ಹಾಕಲು ಮಣ್ಣು ಅಗೆಯುತ್ತಿದ್ದ ಸದ್ದು ಹೊಂದಿಕೊಳ್ಳುತ್ತಿತ್ತು.
ಮಾರನೇ ದಿನದ ದಿನಪತ್ರಿಕೆಯೊಂದರ ಕರಾವಳಿ ವಿಭಾಗದಲ್ಲಿ “ಗೋಳಿಬೈಲಿನಲ್ಲಿ ನೂತನ ನ್ಯೂ ಲೈಫ್ ಅಪಾರ್ಟ್ ಮೆಂಟ್ ಆರಂಭ” ಎನ್ನುವ ಸುದ್ದಿ ಬಂದಿತ್ತು. ವರದಿಯ ಜೊತೆಗೆ, ಪತ್ನೀ ಸಮೇತರಾಗಿರುವ ನಾರಾಯಣ ಭಟ್ಟರೂ, ಮಕ್ಕಳ ಸಮೇತ ನಿಂತಿರುವ ಲಚುಮಿಯೂ ಗಣ್ಯರಿಂದ ಕೀ ಪಡೆದುಕೊಳ್ಳುತ್ತಿರುವ ಚಿತ್ರ ಪ್ರಕಟವಾಗಿತ್ತು.
*****
ಚನ್ನಾಗಿದೆ ಬರಹ…ಅಂತೂ ಒಂದು ನ್ಯೂ ಲೈಫ್ ಅಪಾರ್ಟ್ ಮೆಂಟ್ ಇಂದ ಜಾತಿ,ಧರ್ಮ ,ಮೇಲು,ಕೀಳು ಮರೆತು ಒಂದುಕಡೆ ಬಾಳೋ ಹಾಗಾಯ್ತು…