ಗೋಪಾಲಾ …. ಗೋಪಾಲಾ…: ಅಮರ್ ದೀಪ್ ಪಿ.ಎಸ್.

ಬಳ್ಳಾರಿಯ ಕಾಳಮ್ಮ ಬೀದಿಯಿಂದ ಪಶ್ಚಿಮಕ್ಕೆ ಬಂದರೆ, ರಾಜರಾಜೇಶ್ವರಿ ಸಿನೆಮಾ ಥೀಯೇಟರ್.   ಮುಂದೆ ಮೋತಿ ವೃತ್ತ. ಥೀಯೇಟರ್ ಎದುರಿಗೆ ಬಹುಮಹಡಿ ಹೋಟಲ್ಲೊಂದರ ಕಾಮಗಾರಿ ನಡೆಯುತ್ತಿದೆ.  ಸಂಜೆ ಸಿನೆಮಾ ನೋಡಿ ಹೊರ ಬಂದವರು, ಸೆಕೆಂಡ್ ಷೋಗೆ ಹೋಗುವವರ ಜಂಗುಳಿ.  ಕತ್ತಲಲ್ಲಿ ಎದ್ದು ಕಾಣುವಂಥ ಮಲ್ಲಿಗೆಯ ಸರ ತಲೆಯಿಂದ ಎಳೆದು ಎದೆ ಮೇಲೆ ಬಿಟ್ಟುಕೊಂಡು ಒಂದೊಂದೇ ಪಕ್ಕಳೆಯನ್ನು ಕಿತ್ತುತ್ತಾ, ಮುಸುತ್ತಾ ಆಕರ್ಷಿಸುವ ಒಂದಿಷ್ಟು ನಿತ್ಯ ಮುತ್ತೈದೆಯರು.   ಅಲ್ಲಲ್ಲಿ ಕಣ್ಣಾಡಿಸುತ್ತಲೇ ತಿರುಗುವ ವಿಟರು. ಗದ್ದಲದಲ್ಲೇ ಕೈ ಚಳಕ ತೋರಿಸಿ ಜೇಬು ಕತ್ತರಿಸುವ ಕಸುಬುದಾರರು.  ಮಕ್ಕಳನ್ನು ಬೈಕ್ ಮೇಲೆ ಕರೆತಂದು ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಕಟ್ಟಿಸಿಕೊಂಡು ತಿನ್ನಿಸುತ್ತಿರುವ ಪೋಷಕರು, ಮಧ್ಯಮ ವರ್ಗದ ಕುಟುಂಬದಿಂದ ಬಂದ ಸಂಸಾರಸ್ಥರು. ಎಷ್ಟು ಜನರಿರುತ್ತಿದ್ದರಲ್ಲಿ? ದಿನವೂ ಇದ್ದೇ ಇರುತ್ತಾರೆ.  ತಿರುಗಾಡುತ್ತಿರುತ್ತಾರೆ.  ಇವರೆಲ್ಲರನ್ನು ದಿನಕ್ಕೊಮ್ಮೆ, ಹಲವರನ್ನು  ಅಪರೂಪಕ್ಕೊಮ್ಮೆ ದಿಟ್ಟಿಸಿ ಅವರವರ ನಡವಳಿಕೆಯನ್ನು ಸೂಕ್ಷ್ಮವಾಗೇ ಗಮನಿಸುವ ಸಣ್ಣ ಬಂಡಿ ವ್ಯಾಪಾರಿ.    ಅವನದು ಸಂಜೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಹನ್ನೊಂದು ಗಂಟೆವರೆಗೆ ಇಡ್ಲಿ,   ಚಿತ್ರಾನ್ನ ವಡೆ, ಮಿರ್ಚಿ, ಚಾ ಮಾರುವುದು. ಆತನ ಹೆಸರು ಅದ್ಯಾಕೋ ನೆನಪು ಬರುತ್ತಿಲ್ಲ.   ಆತನಿಗೆ ಒಬ್ಬ ಸಹಾಯಕನಿದ್ದ.  ಅವನು ಯಾವಾಗಲೂ ಮೂತಿಯನ್ನು ಚೂಪಾಗಿಸಿಕೊಂಡೇ ಇರುತ್ತಿದ್ದ ಕಾರಣ ಅವನಿಗೆ ಮುಂಗ್ಸಿ ಅಂತ ಕರೆಯುತ್ತಿದ್ದ.  ಸಣ್ಣಗೆ ಗ್ಯಾಸ್ ಸ್ಟವ್ ನ ಬೆಳಕಿನಲ್ಲಿ ಕಾಣುವ ಮುಖಗಳಲ್ಲಿ ಇವು ದುಡ್ಡು ಕೊಟ್ಟು ತಿನ್ನೋ ಮುಖಗಳಾ? ಉದ್ರಿ ಹೇಳಿ ಅಂಡಿಗೆ ಕೈ ಒರೆಸಿಕೊಂಡು ಹೋಗುವವರಾ? ಲೆಕ್ಕ ಕಣ್ಣಲ್ಲೇ ಇರುತ್ತಿತ್ತು.   "ಲೇ ಮುಂಗ್ಸಿ ಇಷ್ಟು ಪಿಲೇಟ್ ಇಡ್ಲಿ ಪಾರ್ಸಲ್ ಕಟ್ಟು, ಇಲ್ಲಿ ನಾಲ್ಕು ಪಿಲೇಟ್ ಚಿತ್ರಾನ್ನ ಕೊಡು" ಅನ್ನುತ್ತಾ ತಾನು ಸ್ಟವ್ ಮುಂದೆ ನಿಂತು ಖಾಲಿಯಾದೊಡನೆ ಇಡ್ಲಿ ಪಿಲೇಟು ತೆಗೆಯುವುದು, ಚಿತ್ರಾನ್ನ ಕಲೆಸುವುದು, ಚಾ ಸೋಸುವುದು ಮಾಡುತ್ತಿದ್ದ.   ರಾತ್ರಿ ಅಲ್ಲೇ ನಮ್ದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಅಲ್ಲಿ ಸಣ್ಣ ಹುಡುಗರು ಬಂದು “ಅಕ್ಕನಿಗೆ” “ಚಿಗವ್ವನಿಗೆ” “ಸುಂದ್ರಮ್ಮನಿಗೆ” ಹೀಗೆ ಒಂದೊಂದು ಹೆಸರು ಹೇಳಿ ಅವರವರ ಇಷ್ಟದ ತಿಂಡಿಯನ್ನು ಕಟ್ಟಿಸಿಕೊಂಡು ಹೋಗುತ್ತಿದ್ದರು. “ಯಾರೆಸ್ರು ತಗಂಡು ನಂಗೇನಾಬಕಾಗೆತಿ, ನನ್ ಯ್ಯಾಪಾರಾದ್ರ ಸಾಕಾಗೆತಿ” ಅನ್ನುವ ಲೆಕ್ಕದಲ್ಲಿ ಡಬ್ಬಿ ಅಂಗಡಿಯವ ಪೊಟ್ಟಣ ಕಟ್ಟಿ ಕೊಡುತ್ತಿದ್ದ. ದಿನಾ ತಿಂದೂ ತಿಂದೂ ಅದೂ ಬ್ಯಾಸರ ಆಯ್ತೆಂದರೆ, ಒಮ್ಮೊಮ್ಮೆ ನಾಲ್ಕಾರು ಬಾಳೆಹಣ್ಣು ತಿಂದುಬಿಡುತ್ತಿದ್ದೆವು.    
 
ಹದಿನೈದು ರುಪಾಯಿ ಕೊಟ್ಟರೆ ಆಂಧ್ರ ಭೋಜನ ಹೋಟಲ್ಲಲ್ಲೇ ಫುಲ್ ಮೀಲ್ಸ್ ತಿಂದು ಬರಬಹುದಾಗಿದ್ದ ದಿನಗಳವು.  ಆದರೂ ಪ್ರತಿವಾರ  ಊರಿಗೆ ಹೋಗಲು ಹಣದ ಲೆಕ್ಕಚಾರ ಮಾಡಿಕೊಂಡು ಎಷ್ಟು ಸಾಧ್ಯವೋ ಅಷ್ಟು ಉಳಿಸಿಕೊಳ್ಳಲು ಚೌಕಾಸಿ ಬದುಕನ್ನು ಅನಿವಾರ್ಯವಾಗಿಯೋ ಅಥವಾ ಅವತ್ತಿನದವತ್ತಿಗೆ ದುಡಿದು ತಿನ್ನುವ ಮಂದಿ ನಡುವೆ ಜೀವನದ   ಅನುಭವಕ್ಕೋಸ್ಕರವಾಗಿಯೋ ಬದುಕುತ್ತಿದ್ದೆವು; ನಾನು ನನ್ನ ಜೊತೆಗಿದ್ದವರು. ಅಡುಗೆ ಮಾಡ್ಕೊಂಡು ತಿನ್ನೋದು, ಮುಸುರೆ ತಿಕ್ಕಿ ತೊಳೆಯೋದು ಒಂಟಿ ಬದುಕಿನಲ್ಲಿ ಕಡೆಗೂ ನಮಗೆ ಅಂಟಲಿಲ್ಲ. ಕಡೇ ಗೂಟಕ್ಕೆ ಕಟ್ಟಬಹುದಾದಂಥ ಸೋಮಾರಿ ಎತ್ತುಗಳಂತೆ ಕಾಲ ಕಳೆಯುತ್ತಿದ್ದೆವು.  ಸಿನೆಮಾ, ಪುಸ್ತಕದ  ಓದು, ವಾರ ಪತ್ರಿಕೆಗಳು, ಎಲ್ಲಾ ಮುಗಿದ ಮೇಲೆ ಇನ್ನೇನು? ಹರಟೆ, ಒಳಾಂಗಣ ಕ್ರೀಡೆಗಳು  ಎಲ್ಲಾ ಮುಗಿದವಾ? ಇಲ್ಲಾ ಬೋರಾದವಾ?  ಇಚ್ಚೆ ಇದ್ದವರು ಜಾಗ ಖಾಲಿ ಮಾಡಿ ಒಬ್ಬಂಟಿಗರ ರೂಮು ಸೇರಿ ಎಲೆ ಹರಡಲು ಅಣಿಯಾಗುತ್ತಿದ್ದರು. ನನಗೂ ಎಲೆಗೂ ಆಗಿಬರುವುದಿಲ್ಲ.  ಹಂಗಾಗಿ ಟೀವಿ ಇಲ್ಲವೇ ಪುಸ್ತಕಕ್ಕೆ ಸೆಟ್ಟಾಗುತ್ತಿದ್ದೆ. ಅತ್ತ  ಎಲೆಹಾಸು ಇತ್ತ ನಾನು “ಮತ್ತೊಂದಕ್ಕೆ” ಫಿಕ್ಸು.  ದಿನ ನಿತ್ಯ ಅರಣ್ಯ  ಇಲಾಖೆ ಕಛೇರಿ ಆವರಣ ನಮ್ಮ ಸಂಜೆ ಅಡ್ಡಾ.  ಎಸ್ ಎಸ್ ಆರ್ ಥಿಯೇಟರ್ ಮುಂದಿನ ಡಬ್ಬಿ ಅಂಗಡಿ  ಇಡ್ಲಿ,ಚಿತ್ರಾನ್ನವೇ ನಮ್ಮ ಪರಮಾನ್ನ. 
 
ಥೀಯೇಟರ್ ಮುಂದೆ ಪೂರ್ವಕ್ಕೆ ನಡೆದರೆ ವಾರ್ಡ್ಲಾ ಶಾಲೆ, ಎದುರಿಗೆ ಪಾಪಯ್ಯ ಹಾಲ್ ಮುಂದೆ ಗ್ಲಾಸ್ ಬಜಾರ್.   ಈ ಪಾಪಯ್ಯ ಹಾಲ್ ಬಹಳ ವರ್ಷಗಳ ಮುಂಚೆ ಹೆಡ್ ಪೋಸ್ಟಾಫೀಸು ಆಗಿತ್ತಂತೆ. ವಾರ್ಡ್ಲಾ ಶಾಲೆ ಮುಂದಕ್ಕೆ  ಕಾಳಮ್ಮ ಬೀದಿ ಕಡೆ ಬಂದು ಎಡಕ್ಕೆ ಹೊಳ್ಳಿದರೆ ಎಲ್ಡೂವರೆ ಅಡಿ ಜಾಗದ ದಾರಿಯ ಇಕ್ಕಟ್ಟಿನ ಸಂದಿಗುಂಟ ಸಾಗುವ ಓಣಿ.  ಉಸುರು ಬಿಟ್ಟರೂ ಹೂಸೇ ಬಿಟ್ಟರೂ ತಟ್ಟಂಥ ಅಕ್ಕಪಕ್ಕದವರಿಗೆ ಸೌಂಡು ರವಾನಿಸುವಂಥ ಹಳೇ ಅಂಟುಗೋಡೆ ಮನೆಗಳು. ಬಂದ ಹೊಸತರಲ್ಲಿ ಆಫೀಸಿಗೆ ಹತ್ತಿರದಲ್ಲೇ ಬೇಕೆಂದು  ತಟಗು ರೂಮು ಹಿಡಿದಿದ್ದೆವು.   ಅದೊಂದು ಮುಸ್ಲಿಂ ಮನೆಗಳೇ ಜಾಸ್ತಿ ಇದ್ದಂಥ ಓಣಿ. ಒಂದೆರಡು ಮನೆಗಳು ಬ್ರಾಂಬ್ರುವು. ಬೀದಿ ನಲ್ಲಿಯಲ್ಲಿ ಹಿಡಿಯೋ ನೀರೇ ಎಲ್ಲಿಂದ ಬಂದಿರುತ್ತೋ ಗೊತ್ತಿಲ್ಲ. ಆದರೆ, ಮಡಿ ಮಾತ್ರ ಅವರ ತಂದ ಕೊಡದ ಮೇಲೇ ಇರ್ತಿತ್ತು. ಮೇಲ್ಚಾವಣಿಯಲ್ಲಿ ನಾಲ್ಕೈದು ಬೆಂಕಿಪೊಟ್ಣ ಸೈಜಿನ ರೂಮುಗಳು, ಒಂದೇ ಟಾಯ್ಲೆಟ್ಟು, ಒಂದೇ ಬಾತು ರೂಮು.  ನಾಲ್ಕು ನೂರು ರುಪಾಯಿ ಬಾಡಿಗೆ; ಒಂದಕ್ಕೆ. ನಾವು ನಾಲ್ಕು ಜನ. ಸೀನ, ರಾಜು, ನಾನು ಮತ್ತು ಸುರೇಶ.  ಸುರೇಶ ಮತ್ತು ರಾಜು ಅರಣ್ಯ  ಇಲಾಖೆಯವರು.  ಸೀನ; ಕಂದಾಯ.   ಮುಖ್ಯವಾಗಿ ಆ ರೂಮುಗಳನ್ನು ನಾವು ನೋಡಿಯೇ ಇರಲಿಲ್ಲ.  ನಮ್ಮ ಕಛೇರಿ ಆವರಣದಲ್ಲಿ ಒಬ್ಬಳಿದ್ದಳು ಹೆಂಗಸು.  ಪುಟ್ಟಮ್ಮ  ಅಂತ. ಬೆಂಗಳೂರಿನ ಕಡೆಯವಳು.  ಯಾವುದೋ ಕಾರಣಕ್ಕೆ ಅಲ್ಲಿಯ ಮೂರು ಜನರು ದುಡಿಮೆಗೆ ಬಳ್ಳಾರಿಗೆ ಬಂದಿದ್ದರು. ಅವರಲ್ಲಿ ಒಬ್ಬಳೀಕೆ. ಇಡೀ ಕಾಂಪೌಂಡಲ್ಲಿ ಬರೀ ಬಾಯಿ ಬಡ್ದು ದಿನಕ್ಕೆ ಕಾಂಪೌಂಡಿನಲ್ಲಿ ಅಲೆವ ಮಂದಿ ಹತ್ತಿರ ಐವತ್ತು ನೂರಿನ್ನೂರು ದುಡ್ಡು ಕಿತ್ಗಂಡು ಕುಬುಸದ ಸಂದಿನಲ್ಲಿ ತುರುಕಿಡುತ್ತಿದ್ದಳು. ಆಕೆಯೊಂದಿಗೆ ಬಂದಿದ್ದ ಉಳಿದಿಬ್ಬರು ಗಂಡಸರು, ಜೈಪಾಲ, ಮಲ್ಲಿ.  ಅವರೂ ಬಲೂ ಅಸಾಧ್ಯ ಕಳ್ನನ್ಮಕ್ಕಳು.  ಹೊಸದಾಗಿ ನೌಕರಿಗೆ ಸೇರಿದ ನಮಗೆ ವರ್ಸೊಪ್ಪತ್ತಿನಲ್ಲಿ ರೂಮುಗಳ  ಅಲೆದಾಟ, ಪರದಾಟ ಸಾಕಾಗಿತ್ತು. ಪುಟ್ಟಮ್ಮ  ಒಂದಿನ  “ಸಾ….. ನೀವಿನ್ನು ಉಡುಗ್ರಾ… ನಿಮ್ಗ್ಯಾಕೆ ದೊಡ್ ಮನಿ, ಇಲ್ಲೇ ಗಿಲಾಸ್ ಬಜಾರ್ನಾಗೆ ಸಣ್ರೂಮ್ಗಳು ಇದವೆ… ಅಡ್ವಾನ್ಸು ಇಲ್ಲ, ಬಾಡ್ಗೆ ಕಮ್ಮಿ, ನೀರು ಓನರ್ರೇ ಪೈಪ್ ಹಚ್ಚಿ ಮೇಲ್ ಬಿಡ್ತರೆ.. ಲೆಟ್ರಿನ್ನು, ಬಾತ್ರೂಮು ಎಲ್ಲಾ ಮೇಲೆ ಅವೆ….ನೋಡ್ರಿ ಸಾ….” ಅಂದು ಪಿಚಕ್ಕಂತ  ಎಲಡ್ಕಿ ತಂಬಾಕು ಉಗುಳಿದ್ದಳು.   ಹೆಸರು ಮಾತ್ರ ಆಕೇದು ಪುಟ್ಟಮ್ಮ, ವಯಸ್ಸು, ಆಕಾರ, ದೊಡ್ಡಮ್ಮನೇ.   ಹಣೆಯಲ್ಲಿ   ಈಗಿನ  ಎರಡು ರುಪಾಯಿ ಕಾಯಿನ್ ಗಾತ್ರದ ಕುಂಕುಮ.  ಗಂಡು ಮುಖದ ಕಳೆ. ತಿಂಗಳು ಸಂಬಳವಾದ ಹತ್ತು ದಿನದವರೆಗೂ ಆಹಾ….!  ಕಣ್ಣು ರಂಗೋ ರಂಗು.    ನಮ್ಮ ಗುಂಪಿನಲ್ಲೇ ಅತಿ ಹೆಚ್ಚು ವಯಸ್ಸಾದವನೆಂದರೇ, ಸೀನ.  ಅವನಿಗಾಗ ಮೂವತ್ತು ವರ್ಷ.   ಉಳಿದ ನಮಗೆ ಇಪ್ಪತ್ತೊಂದು, ಇಪ್ಪತ್ಮೂರು, ಇಪ್ಪತ್ತೈದು ಹಿಂಗೆ… ಯಾವಾಗ ಪುಟ್ಟಮ್ಮ ನಮಗೆ ರೂಮು ಕೊಡ್ಸಿದ್ಳು ಅಂತ ಗೊತ್ತಾಯ್ತೋ? ಜೈಪಾಲ, ಮಲ್ಲಿ ಮುಸಿ ಮುಸಿ ನಕ್ಕಿದ್ದರು. ಜೈಪಾಲಂದು ಥೇಟು ತಮಿಳ್ಗನ್ನಡ. ಮಲ್ಲಿಯದು ಮಂಡ್ಯ ಕನ್ನಡ.  ಒಬ್ಬನಿಗಿಂತ   ಒಬ್ನೂ ಖತರ್ನಾಕ್.
 
ಓಡಾಡೋದಿಕ್ಕೆ ಆಟೋ ಖರ್ಚು ಉಳಿಸಿ, ಅರ್ಜೆಂಟಿಗೆ ಹಿಂಗೇ ಕೊಳ್ಳಾಗ ಬ್ಯಾಗ್ ತಗುಲಾಕ್ಕೊಂಡು ಬಸ್ಟ್ಯಾಂಡಿಗೋ ರೈಲ್ವೆ ಸ್ಟೇಷನ್ನಿಗೋ ಓಡಿ ಹೋಗುದಕ್ಕೆ ಮತ್ತೆ ಆಫೀಸಿಗೂ ನಡ್ಕೊಂಡೇ ಬರಲು ಅನುಕೂಲಕ್ಕೆ ಸಿಕ್ಕ ಕಾರಣಕ್ಕೆ ಅಲ್ಲಿ ರೂಮು ಹಿಡಿದಿದ್ದೆವು.  ನಾವು ರೂಮು ಹಿಡಿದು ಶಿಫ್ಟ್ ಆದ ಮೇಲೆ ಗೊತ್ತಾದದ್ದೆಂದರೇ, ಆ ಪುಟ್ಟಮ್ಮ ಸಹ ಬೆಂಗ್ಳೂರತ್ರ ಯಾವ್ದೋ ಹಳ್ಳಿಯಲ್ಲಿ ಗಂಡ, ಮಕ್ಕಳನ್ನು ಬಿಟ್ಟು ದುಡ್ಮೆಗೆ ಬಳ್ಳಾರಿಗೆ ಬಂದು ಒಬ್ಬಂಟಿಯಾಗಿ ಅದೇ ಸಾಲಿನ ಒಂದು ರೂಮಿಗೆ ಅಡ್ವಾನ್ಸ್ ಕೊಟ್ಟಿದ್ದಳು ಮತ್ತು ನಾವು ಬಂದು ಬಿದ್ದ ನಂತರ ಆಕೆ ಲಗೇಜು ಸಮೇತ ಬಂದು ಬಿದ್ದಳು. ಮೊದಮೊದಲು ಮನೆ ಓನರ್ ತುಂಬಾ ಚೆನ್ನಾಗೇ ಮಾತಾಡಿಸುತ್ತಿದ್ದ.  ಪೈಪ್ ಹಚ್ಚಿ ನೀರು ಬಿಡುತ್ತಿದ್ದ.  ತಿಂಗಳು ಬಾಡಿಗೆ ಸಹ ನಾವು ಹೇಳಿಸಿಕೊಳ್ಳಲಾರದೇ ನಾವು ಕೊಟ್ಟೂ ಬಿಡುತ್ತಿದ್ದೆವು.   ಈ ಕಡೆ ಕೊನೆ ಬೆಂಕಿಪಟ್ಣ ಕೋಣೆಯಲ್ಲಿ ಪುಟ್ಟಮ್ಮ  ಇರುತ್ತಿದ್ದಳಲ್ಲಾ? ನಾವು ರಾತ್ರಿ ರೂಮಿಗೆ ಬರುತ್ತಿದ್ದುದೇ ಹತ್ತು ಗಂಟೆ ನಂತರ. ಬೆಳಿಗ್ಗೆ ಎದ್ದೇಳುತ್ತಿದ್ದುದೇ ಎಂಟು ಗಂಟೆ ನಂತರ. ಹಂಗಾಗಿ  ಆಕೆ ರೂಮಿನ ಹತ್ತಿರ ಹೊರಗೆ  ಕಣ್ಣಿಗೇ ಬೀಳುತ್ತಿರಲಿಲ್ಲ. ನಮ್ಮ ಸೋಮಾರಿ ಮುಖಗಳು ಎದ್ದೇಳುವ ಮುಂಚೇನೇ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ನಡೆದುಬಿಟ್ಟಿರುತ್ತಿದ್ದಳು.  ನಮಗೆ ಕಛೇರಿ ಆವರಣದಲ್ಲೇ  ಆಕೆ ಕಾಣುತ್ತಿದ್ದುದು.  ಎಂಟತ್ತು ತಿಂಗಳಿದ್ದೇವೇನೋ,  ಗಿಲಾಸ್ ಬಜಾರಿನ ಆ ರೂಮುಗಳಲ್ಲಿ.                                                        
ಸಂಜೆ ಹರಟುತ್ತಾ ರೈಲ್ವೆ ಸ್ಟೇಷನ್ನಿನ ಪ್ಲಾಟ್ ಫಾರ್ಮ್ ನಲ್ಲಿ ಸುತ್ತುವುದು, ಬೆಂಗಳೂರು ರಸ್ತೆಯಲ್ಲಿ ತಿರುಗುವುದು, ಹೊಸ ಸಿನಿಮಾ ನೋಡುವುದು,ಹೊಸದಾಗಿ ತೆಲುಗು ಭಾಷೆ ಅರ್ಥ ಮಾಡಿಕೊಂಡು ಕಲಿಯುವುದು, ಅರ್ಧಂಬರ್ಧ ಎಡವಟ್ಟು ಮಾತಾಡಿ ಕ್ಕಿಕ್ಕಿಕ್ಕಿ ನಗುವುದು ನಮಗೆ ಮಾಮೂಲಾಗಿತ್ತು. ಅದೊಂದು ತಿಂಗಳಲ್ಲಿ ನನಗೆ ಆತ್ಮಹತ್ಯೆ ಮಾಡಿಕೊಳ್ಳುವವರ ಕುರಿತು ವಿಚಿತ್ರವಾಗಿ ಯೋಚನೆ, ಕುತೂಹಲ ಬಂದು ಬಿಟ್ಟಿತು.  ಹಿಂದಿನ ದಿನ ಮೋತಿ ವೃತ್ತದ ಬ್ರಿಡ್ಜ್ ಕೆಳಗೆ ಆತ್ಮಹತ್ಯೆ ಮಾಡಿಕೊಂಡ  ಒಂಟಿ ಮಹಿಳೆ ಸುದ್ದಿ ಓದಿದ್ದೆ.  ರೈಲ್ವೆ ಹಳಿಗುಂಟ ನಡೆದು ಆತ್ಮಹತ್ಯೆ ನಡೆದ ಜಾಗದಲ್ಲಿ ನಿಂತೆ. ನಿಜವಾಗಲೂ ಅದು ಆತ್ಮಹತ್ಯೆಯೋ ಹತ್ಯೆಯೋ ಅನುಮಾನದ ಗೆರೆಗಳು ಪೋಲಿಸರಿಗಿರುತ್ತವೆ.  ರಕ್ತದ ಕಲೆ ರೈಲ್ವೆ ಹಳಿ, ಕಲ್ಲು ಮೇಲೆಲ್ಲಾ ಒಣಗಿತ್ತು.  ಮತ್ತೆ ವಾಪಸ್ಸು ಬಂದು ಪ್ಲಾಟ್ ಫಾರ್ಮ್ ನ  ಕೊನೆಗೆ ಕುಳಿತೆ. ಸಂಜೆ ಕತ್ತಲಾಗುತ್ತಿದೆ.   ಕತ್ತಲಾಗುತ್ತಿದ್ದಂತೆ  ಮೋತಿ ವೃತ್ತದಿಂದ ಕೆಳಗೆ ರೈಲ್ವೆ ಸ್ಟೇಷನ್ನಿನ ಕಾಂಪೌಂಡ್ ಗೋಡೆ ದಾಟಿ ದೇವಿನಗರಕ್ಕೆ, ಕೋಟೆಗೆ ಹೋಗುವ ಗೋಡೆ ಒಡೆದ ಕಾಲು ದಾರಿಯಲ್ಲಿ ಭರ್ತಿ ರಂಗು.  ಹೂವಿನದು. ಸೆರಗಿನದು.  ಅಲ್ಲೇ ಕಟ್ಟಿಸಿಕೊಂಡು ಬಂದ ತಿಂಡಿಯನ್ನು ತಿಂದು ತಿನ್ನಿಸಿ ಕತ್ತಲಲ್ಲಿ ತೀಟೆ ತೀರಿಸಿಕೊಂಡ ಮುಲುಕಾಟಗಳು, ಅವಸರದ ಓಡಾಟಗಳು ನಡೆಯುತ್ತಿದ್ದವು. ಟೈಮು ನೋಡಿದೆ.  ಎಂಟೂವರೆಯಾಗಿತ್ತು. ಎಸ್. ಆರ್. ಆರ್. ಥಿಯೇಟರ್ ಮುಂದಿನ ಡಬ್ಬಿ ಅಂಗಡಿ ಕಡೆಗೆ ಕಾಲೆಳೆದು ನಡೆದೆ. 
*****
ಈಗೀಗ  ಓಣಿಯ ಹೆಂಗಸರು ನಮ್ಮನ್ನು ಗುರಾಯಿಸಿಲು ಆರಂಭಿಸಿದ್ದರು.  ನೀರು ಬಂದಾಗ  ಅಪ್ಪಿತಪ್ಪಿ ಕುಡಿಯಲು ಒಂದೆರಡು ಕೊಡ ನೀರು ತುಂಬುವಾಗಲೂ ಹೆಂಗಸರು ತಮ್ಮ ಜನ್ಮಸಿದ್ಧ ಹಕ್ಕಾಗಿರುವ ಪರೋಕ್ಷ ಮಾತಿನ ಧಾಟಿಯಲ್ಲಿ ಕುಕ್ಕರಿಸುವಂತೆ ಕೆಲ ಗಂಡಸರ ಚರ್ಚೆ ಮಾಡುತ್ತಿರುವಂತೆ ನಮಗೆ ಅನುಮಾನ ಕಾಡಲು ಶುರುವಾಯಿತು.  “ಕಂಡೌರ ಇಸ್ಯ ನಮ್ಗ್ಯಾಕ ಬಿಡು”  ಅಂದು ಸುಮ್ಮನಾಗಿಬಿಡುತ್ತಿದ್ದೆವು.  ಆ ದಿನಗಳಲ್ಲಿ ರವಿ ಬೆಳೆಗರೆಯವರ ಹಾಯ್ ಬೆಂಗಳೂರ್ ಪತ್ರಿಕೆ ಹವಾ ಜೋರಾಗಿ ಶುರುವಾಗಿತ್ತು. ಮೂಲತ: ಆರ್. ಬಿ. ಅವರು ಬಳ್ಳಾರಿಯವರೇ. ಅದೇ ಓಣಿಯಲ್ಲಿ ಒಂದು ಆರ್ಕೆಷ್ಟ್ರಾ ತಂಡದ ಕುಟುಂಬವಿತ್ತು. ಅದರ ಮಾಲಿಕನಿಗೂ ಆರ್.ಬಿ. ಗೂ ಒಳ್ಳೆಯ ಗೆಳೆತನವಂತೆ.  ಓಣಿ ಹೆಂಗಸರು ಆಯಪ್ಪನಿಗೆ ಹೇಳಿ ‘ಇಂಥವರ’ ಬಗ್ಗೆ ಬರ್ಸಬೇಕು ನೋಡು” ಅನ್ನುತ್ತಿದ್ದರು. ಇವರು ಯಾವ ವಿಷ್ಯದ ಬಗ್ಗೆ ಮಾತಾಡುತ್ತಿದ್ದಾರೆ? ಯಾರ ಬಗ್ಗೆ ಬರೆಸಬೇಕೆಂದಿದ್ದಾರೆಂಬುದೇ ತಿಳಿವಲ್ಲದಾಗಿತ್ತು.  ನಮ್ಮ ಸೀನ  ಓಣಿಯ ಪೆಟ್ಟಿಗೆ ಅಂಗಡಿಯಲ್ಲಿ ಸಿಗರೇಟು ಸೇದುವ ನೆಪದಲ್ಲಿ ಸಣ್ಣಗೆ ಅಂಗಡಿಯವನನ್ನು ತಗುಲಿಕೊಂಡಾಗ ಕೇಳಿದ ಸುದ್ದಿ ನಮ್ಮನ್ನು ಗಾಬರಿಗೊಳಿಸಿತ್ತು. ಈ ಪುಟ್ಟಮ್ಮ ಓಣಿ ಹೆಂಗಸರೆದುರಿಗೆ ನಾವು ಅಸಭ್ಯರು, ಆಕೆಯನ್ನು ಕಾಮುಕದಿಂದ ನೋಡುತ್ತಿರುವರೆಂದು ನಮ್ಮ ಬಗ್ಗೆ ಚಾಡಿ ಹೇಳಿದ್ದಾಳೆ. ಇಷ್ಟರಲ್ಲೇ ನಮ್ಮ ಗ್ರಹಚಾರ ಬಿಡಿಸಿ ಓಣಿಯಿಂದ ಓಡಿಸುವ ಕಾರ್ಯಕ್ರಮದ  ವಿವರ ದೃಢಪಡಿಸಿಕೊಂಡೆವು.  ಬೇರೆ ಕಡೆ ರೂಮು ನೋಡುತ್ತಲೇ ಇದ್ದೆವು.  ಇನ್ನೂ ಸಿಕ್ಕಿರಲಿಲ್ಲ.  ಆದರೆ, ಓಣಿ ಜನರ, ಬೆಂಕಿಪೊಟ್ಣಗಳ ಕಿಸೆಯೊಡೆವನ ಸಬೂತಿಗೆ ಒಂದಾದರೂ ಸಂಗತಿ ಬೇಕಲ್ಲಾ?  ಅದನ್ನು ಸೂಕ್ಷ್ಮವಾಗಿ ಹೇಳಿಯೇ ಕಾಯುತ್ತಿದ್ದೆವು. 
 
ಅದೊಂದು ದಿನ ಆ ತಿಂಗಳ ಕೊನೆ.  ಸಂಬಳ ಬಂದ ಖುಷಿಗೆ  ಮೋತಿ ಸಿನೆಮಾ ಥಿಯೇಟರ್ ನಲ್ಲಿ ಸಿನೆಮಾ ನೋಡಿ ವಾಪಸ್ಸು ಬರ್ತಾ ಇದ್ದೆವು.  ಥಿಯೇಟರ್ ಗೆ ಅಂಟಿದ ರೈಲ್ವೆ ಇಲಾಖೆಯ ಕಾಂಪೌಂಡಿನ   ಅಂಚಿಗೆ ಕತ್ತಲಲ್ಲಿ ಸಣ್ಣಗೆ ಅಳುವ ಹೆಣ್ಣಿನ ಸದ್ದು.   “ನಾನೇನ್ ಪಾಪ ಮಾಡಿದ್ನೋ ಗೋಪಾಲಾ… ssssssssssssssss”   ಅಂತ. ಯಾವಾಗ್ಲೂ ಇರೋ ಇಂಥ ಸದ್ದಿಗೆ ನಮ್ಮ ಹಣಿ ಯಾಕೆ ಜಜ್ಜಕೋಬೇಕು? ಅದನ್ನು ಅಲ್ಲಿಗೇ ಮರೆತು ರಾತ್ರಿ ವೃತ್ತದಲ್ಲಿ ಹೊಟ್ಟೆಗೊಂದಿಷ್ಟು ತಿಂದು ರೂಮಿನಲ್ಲಿ ಮಲಗಿದ್ದಾಯಿತು.  ಮಧ್ಯೆ ರಾತ್ರಿ ಎರಡು ಗಂಟೆ ಸಮಯದ ಸುಮಾರಿಗೆ ದಪ್ ದಪ್ ಹೆಜ್ಜೆ ಇಡುತ್ತಾ ಯಾರೋ ಬಂದಂತಾಯಿತು.  ಅದು ಹೆಂಗಸಿನ ಚಪ್ಪಲಿಯ ಸಪ್ಪುಳ.  ಬೆಂಕಿಪಟ್ನದಂಥ ರೂಮಿನಲ್ಲಿ ಒಬ್ಬೊಬ್ಬರೇ ಇದ್ದಿದ್ದರಿಂದ ಯಾರೂ ಹೊರಗೆ ಬರಲಿಲ್ಲ.   ಬೆಳಿಗ್ಗೆ ಎಂಟು ಗಂಟೆಗೆ ಎದ್ದು ಆಫೀಸಿಗೆ ಹೋಗುವಷ್ಟರಲ್ಲಿ ಕಛೇರಿ ಆವರಣದಲ್ಲಿ ಪುಟ್ಟಮ್ಮನ ಊದಿಕೊಂಡ ಮುಖ ಕಂಡಿತು. “ಯಾರಾ ರೇತ್ರಿ ದಾರಿಯಲ್ ಬ್ಯಾಂಕಿಂದು ಬಿಡಿಸಿಗೊಂಡ ಸಂಬ್ಲದ ದುಡ್ಡು  ಕಲವು ಮಾಡಿ ಮುಗಕ್ಕೆ ಜಜ್ಜಿದರಾ….”  ಜೈಪಾಲ ತನ್ನ ತಮಿಳುಗನ್ನಡದಲ್ಲಿ ಹೇಳಿದ.  ಪುಟ್ಟಮ್ಮನ ಮುಖದಲ್ಲಿ ರಾತ್ರಿಯ ನಾಗವಲ್ಲಿಯ ಖದರ್ರು ಇನ್ನೂ ಇಳಿದಿದ್ದಿಲ್ಲವಾದ್ದರಿಂದ ನಾವ್ಯಾರೂ ಮಾತಾಡಿಸಲಿಲ್ಲ. 
 
ಅದೇ ದಿನ ರಾತ್ರಿ ರೂಮಿನಲ್ಲಿ ರೂಮಿನ ಮುಸ್ಲಿಂ ಓನರ್  ಚಿಕ್ಕ ಮಗಳು  ಚಾಂದನಿ ಜೊತೆ ಹಿಂದಿ ಹಾಡು ಹೇಳಿಸುತ್ತಾ ನಾವು ಕುಳಿತಿದ್ದೆವು.  ಹಿಂದಿ ಉರ್ದು ಭಾಷೆಯ ತಳಬುಡ ತಿಳಿಯದ ಸೀನ ಬಾಯಿಗೆ ಬಂದದ್ದು ಮಾತಾಡಿ ಒಮ್ಮೊಮ್ಮೆ ಕಾಮಿಡಿ ಪೀಸ್ ನಂತೆ ಮತ್ತೊಮ್ಮೆ  ನಗಿಸುವವನಂತೆ ನಟಿಸುತ್ತಿದ್ದ.   ಪುಟ್ಟಮ್ಮ  ಊದಿದ ಮುಖ  ಇಟ್ಗಂಡೇ ಅತ್ಯಂತ  ಉಮ್ಮೇದಿಯಿಂದ ಬಂದು “ಸಾ… ಇವತ್ತು ಆಂಧ್ರ ಭೋಜನದಿಂದ  ಎಲ್ರಿಗೂ ಇಲ್ಲೇ ಊಟ ತಗಂಬತ್ತೀನಿ,  ಎಲ್ರೂ ಇಲ್ಲೇ ಉಣ್ಣುಮಾ. ಏನಂತೀರಾ?” ಕೇಳಿದಳು. “ಬ್ಯಾಡ ಪುಟ್ಟಮ್ಮ ನೀನೇ ಸಂಬ್ಳ ಕಳ್ಕಂಡು ಕಷ್ಟದಲ್ಲಿದ್ದೀಯ.  ಅದೆಲ್ಲಾ ಏನೂ ಬ್ಯಾಡ, ನಮ್ದಿವತ್ತು ದೋಸ್ತನ ಮನ್ಯಾಗ ಪುಗಸಟ್ಟೆ ಖೂಳು ತಿನ್ನೂದೈತಿ”  ನಿಮ್ದು ನೀವು ತಂದ್ಕಂಡ್ ತಿನ್ನಿ” ಅಂದು ಸಾಗ ಹಾಕಿದೆವು.   ಆಕೆ ಹೋದ  ಎಷ್ಟೋ ಹೊತ್ತಿನವರೆಗೆ ಆಕೆ ಹಚ್ಚಿಕೊಂಡ ಸೆಂಟಿನ ಘಾಟು ಮತ್ತು ಹೊಟ್ಟೆಯೊಳಗಿಳಿಸಿದ ತೀರ್ಥದ ಘಾಟು  ಒಟ್ಟೊಟ್ಟಿಗೆ  ಕಲೇಬಿದ್ದಿದ್ದವು. 
 
ಈಯಮ್ಮ ಮತ್ತೆ ವಾಪಸ್ಸು ಬಂದು  ಎಣ್ಣೆ ಏಟಿನಲ್ಲಿ ಏನಾರ ಗದ್ದಲ ಮಾಡಿದ್ರ ಹೆಂಗೆ? ಹಂಗತಲೇ ಜಾಗ ಖಾಲಿ ಮಾಡಿ ಅದೇ ಎಸ್. ಆರ್. ಆರ್. ಥೀಯೇಟರ್ ಎದುರಿನ ಡಬ್ಬಿ ಅಂಗಡಿಯಲ್ಲಿ  “ಚಿತ್ರಾ…ನ್ನದಾತ” ಸುಖೀಭವ ಅಂದು ರೂಮಿಗೆ ಬರುವ ಸಂದಿ ದಾರಿಯು, ಆಹಾ!  ಜೀರೋ ಟ್ರಾಫಿಕ್ ನಲ್ಲಿ ನಮ್ಮನ್ನು ಕರೆಯುತ್ತಿತ್ತು.  ಅದೇ ಆ ಸಂದಿಗಳನ್ನು ಬೆಳಿಗ್ಗೆ ಒಮ್ಮೆ ಹಾದು ಹೋದರೆ ಸಾಕು, ಅಧ್ಬುತ ದರ್ಶನ. ಮಕ್ಕಳ ಕಕ್ಕ ಮಾಡುವ ಜಾಗ, ಹೆಂಗಸರ ಬಟ್ಟೆ ಒಗೆಯುವ ಜಾಗ, ರಂಗೋಲಿ ಗೆರೆಗಳು ಮುದುರಿ ಮಲಗುವ ಜಾಗ, ಮುಸುರೆ ತಿಕ್ಕುವ ಜಾಗ, ಮನೆ ಮನೆಗಳ ಚಪ್ಪಲಿಗಳ ವಾಸಸ್ಥಾನ, ಶಾಲೆಗೆ ಹೋಗುವ ಮಗಳಿಗೆ ಜಡೆ ಹಾಕುವ ಜಾಗ, ಪುಟ್ಟ ಮಕ್ಕಳಿಗೆ ಸ್ನಾನದ ಜಾಗ ಇತ್ಯಾದಿಯಾಗಿ ಭರ್ತಿಯಾಗಿರುತ್ತದೆ.  ಈಗ ತಣ್ಣಗಿತ್ತು.  ರೂಮುಗಳ ಮೆಟ್ಟಿಲು ಇನ್ನೇನು ಹತ್ತಬೇಕು.  ಸಣ್ಣಗೆ ಮಾತಾಡುವ ಸದ್ದು ಕೇಳಿಸಿತು.  ನಾನು, ಸೀನ, ರಾಜು ಎಲ್ಲರೂ ನಿಧಾನಕ್ಕೆ ಹತ್ತಿದೆವು.   ಕೊನೆ ರೂಮಿನಿಂದ ಧ್ವನಿ ಕೇಳುತ್ತಿತ್ತು.  “ನನ್ ಬಂಗಾರಲ್ಲೇನು ನೀನು, ನನ್ ಊರ್ನಾಗಿದ್ರುವೇ, ಇಲ್ಲಿದ್ರುವೇ ನಿನ್ ಹತ್ರ  ಅಲ್ದಾ ಯಾರತ್ರ ಯ್ಯೇಳೇನು?, ಅವ್ರ ಕೈಗೆ ಕರಿ ನಾಗ್ರ ಕಡಿಯಾ, ಕಿತ್ತೋಗಿರೋ ಚಪ್ಲಿ ತಗಂಡ್ ಬಡಿಯಾ.   ಉಣ್ಣಕೇನ್ ಬಡಿವಾರ?  ಇಸ್ಟಾಪಟ್ಟು ತಗಂಬತ್ತೀನಿ, ಉಣ್ಣಾಕಿಕ್ತೀನಿ ಅಂದ್ರೆ ಬ್ಯಾಡಂತವೆ ಬೇವರ್ಸಿಗಳು. ನಾನ್ ಬರೀ ಉಣ್ಣಾಕ್ ಮಾತ್ರ ಇಕ್ಕತಿದ್ನಾ? ಅಲ್ಲೇನೋ ಗೋಪಾಲಾ…….”  ಅನ್ನುತ್ತಲೇ ಬಿಕ್ಕ ತೊಡಗಿದಳು. ರಾಜು ಕಿಟಕಿಯಲ್ಲಿ ನೋಡಿ ಬಂದ. ಕೃಷ್ಣನ ಚಿಕ್ಕ ಫೋಟೋವೊಂದನ್ನು ಎದೆಗೊತ್ತಿಕೊಂಡಿದ್ದಳಂತೆ.  ಸಡನ್ನಾಗಿ “…………………ಗೋಪಾಲಾ ಡೈಲಾಗು ಎಲ್ಲೋ ಕೇಳ್ದಂಗೈತಲ್ಲಾ?” ಅನ್ನಿಸ್ತು.  ಅಲಾಲಾಲಾ……!  ಸೀನ ನೆನಪಿಸಿದ  “ಲೇ, ಅದೇ ಧ್ವನಿ ಅಲ್ಲೇನಲೇ,,,  ಮೋತಿ ಟಾಕೀಸು, ಸೆಕೆಂಡ್ ಷೋ ಸಿನಿಮಾ, ರೈಲ್ವೆ ಕಾಂಪೌಂಡಿನ ಒಡೆದ ಗೋಡೆಯ ಹಿಂದೆ ಕತ್ತಲಲ್ಲಿ ಅಳೋದು….” ಅಂದಾಗಲೇ ನಾವು ತಣ್ಣಗಾಗಿದ್ದು.
 
ಮೆಟ್ಟಿಲಿಳಿದು ಮಧ್ಯರಾತ್ರಿ ಮಲಗಿದವರನ್ನು ಎಬ್ಬಿಸೋದಾ? ಬೆಳ್ತನಾ ಪುಟ್ಟಮ್ಮನ ಭಜನೆ ಕೇಳೋದಾ? ಅರ್ಥವೇ ಆಗಲಿಲ್ಲ.  ದಡ್ ಅಂತ ಕಬ್ಬಿಣದ ತೆರೆದ  ಬಾಗಿಲು ಮುಂದೆ ದೊಪ್ಪಂತ ಚಾಪೆ, ದಿಂಬು, ಹೊದಿಕೆ ಹೊರಬಿದ್ದವು. ಎರಡಡಿ ಜಾಗದ ಸಜ್ಜಾದ ಮರೆಯಲ್ಲೇ ನಿಂತು ನೋಡಿದೆವು.  ಹತ್ತು ಸೆಕೆಂಡು ಎಲ್ಲರೂ ಥಂಡಾ. ಪುಟ್ಟಮ್ಮ ಪುಟ್ಟಮ್ಮನಾಗಿರಲಿಲ್ಲ.  ಕೂದಲು ಚೆಲ್ಲು ಬಿಟ್ಟು ಎಣ್ಣೆ ಏಟಿಗೆ ಕಣ್ಣು ಕೆಂಪಗೆ, ಒಗರು ಒಗರಾಗಿ ಮಾತಾಡುತ್ತಾ ಎಲಡ್ಕೆ ತುಂಬಿದ ಬಾಯಿ ಕೆಂಪಗೆ, ಅಲ್ಲಿಂದಲೇ ನಮಗೆ ಹಡರುತ್ತಿದ್ದ ಅಗ್ಗದ ಶರಾಬು ವಾಸನೆ, ಅಸ್ತವ್ಯಸ್ತ ಬಟ್ಟೆ.  ನಮ್ಮ ನಮ್ಮ ರೂಮುಗಳ ಬಾಗಿಲಲ್ಲೇ ಚಾಪೇ ಹಾಸಿ ಅಡ್ಡಾಗಿಬಿಟ್ಟಳು. ನಾವು ಇಲ್ಲವೆಂದು ಪುಟ್ಟಮ್ಮ ಈ ರೀತಿ ಕುಡಿದು ಹುಚ್ಚಾಗಿ ಆಡುತ್ತಿರಬಹುದೆಂದು ಭಾವಿಸಿದ್ದೆವು. ಊಹೂಂ, ಆಕೆಗೆ ಯಾರಾ ಪರಿವೂ ಇದ್ದಿಲ್ಲ. ಅಚಾನಕ್ಕಾಗಿ ನಾವು ಕಾಣಿಸಿಕೊಂಡರೂ ಆಕೆಯ ನಡವಳಿಕೆಯಲ್ಲಿ ವ್ಯತ್ಯಾಸವೇನೂ ಕಾಣಲಿಲ್ಲ.    
 
ನಾವು ಇಳಿದು ಕೆಳಗೆ ಪಕ್ಕದ ಮನೆಯ ಗಟಾರದ ಮೇಲಿನ ಕಟ್ಟೆಗೆ ಕೂತು ತಾಸು ಕಳೆದೆವು.   ಮಾತುಗಳು ನಿಂತಿಲ್ಲ.   ಅಕ್ಕಪಕ್ಕದವರ ಮನೆಯ ದೀಪ ಹೊತ್ತಿ ಉರಿಯುತ್ತಿದ್ದರೂ ಒಬ್ರೂ ಹೊರಗೆ ಬರಲು ತಯಾರಿಲ್ಲ. ಬಾಗಿಲು ಬಡಿದು ಎಬ್ಬಿಸಲು ನಮಗೂ ಹಿಂದೇಟು.  ಬೆಳಗಿನ ಜಾವ ಗಂಟೆ ಎಲ್ಡೂವರೆ ಆಗಿತ್ತು,  ಸಾಕಾಯ್ತು. ಆಕೆಯನ್ನು ಗದರಿಸಿ ನಮ್ಮ ನಮ್ಮ ರೂಮಿನಲ್ಲಿ  ಮಲಗಿದರಾಯಿತೆಂದು ತಿರುಗಾ ಮೆಟ್ಟಿಲೇರಿದೆವಷ್ಟೇ. ನಾವು ಗಾಬರಿಯಾಗಿ ಓಡಿ ಬಂದು ರೂಮುಗಳ ಓನರ್ರು, ಅಕ್ಕಪಕ್ಕದ ಮನೆಯವರನ್ನು ಎಬ್ಬಿಸದೇ ಬೇರೆ ದಾರಿಯಿರಲಿಲ್ಲ. ಎದ್ದ ಜನರಲ್ಲಿ ಬರೀ ಹೆಂಗಸರನ್ನೇ ಮೆಟ್ಟಿಲು ಹತ್ತಿಸಿ ಜೊತೆಗೆ ಎರಡು ಕೊಡ ನೀರು ಪೂರೈಸಿದೆವು.   ದಬಾ ದಬಾ ನೀರು ಸುರುವಿದ ಸದ್ದು, ಶುದ್ಧ ಬಳ್ಳಾರಿ ಶೈಲಿಯ ಬೈಗುಳ, ಕೊನೆಗೆ ಅಯ್ಯೋ….   ಇಲ್ಲ ಕನಕ್ಕಾ, ಅಂಗಲ್ಲ ಕನಕ್ಕಾ. ನಂಗೇನೂ ಗೊತ್ತಿಲ್ಲ ಕನಕ್ಕಾ, ಹೌದಾ?… ತಪ್ಪಾತು ಕನಕ್ಕಾ” ಅನ್ನುವ ಮಾತ್ರ ಕೇಳಿತು.  ಮೆಟ್ಟಿಳಿದ ಹೆಂಗಸರು “ಥೂ… ದರಿದ್ರ ಹೆಂಗ್ಸು….” ಅಂದರು. ಅವರವರ ಗಂಡಂದಿರ ಕಿವಿಯಲ್ಲಿ ಪಿಸ್ ಪಿಸಾ ಅನ್ನುತ್ತಲೇ ಮನೆಗಳಿಗೆ ನುಗ್ಗಿ ಬಾಗಿಲ ಅಗುಳಿ ಹಾಕಿದರು.  ಏಕೆಂದರೆ, ಅವರೆಲ್ಲ ನೋಡಿದ್ದು, ಅನ್ಯಮನಸ್ಕಳಾಗಿ ಬಿದ್ದು  “ನೋಡಲಾರದ” ಸ್ಥಿತಿಯಲ್ಲಿದ್ದ ಪುಟ್ಟಮ್ಮನನ್ನು. ಆ ರಾತ್ರಿ ಅಲ್ಲಿ ಮಲಗಲು ನಮಗೂ ಒಂದ್ನಮೂನಿ. ಅಪ್ಪಿತಪ್ಪಿ ಕಾಡು, ಹೊಲ, ಸುಡುಗಾಡು ಬಿಟ್ಟು ಊರೊಳಗೆ ದೆವ್ವಗಳೇನಾದ್ರೂ ಬಂದಿದ್ರೆ ಹುಡಿಕ್ಯಂಡು ಮಾತಾಡಿಸುವವರ ರೇಂಜಿನಲ್ಲಿ ರಸ್ತೆಯಲ್ಲಿ “ಪುಟ್ಟಮ್ಮನ ಪವಾಡ” ನೆನೆದು ಗೊಳ್ಳಂತ ದೊಡ್ಡದಾಗಿ ನಗುತ್ತಾ ಕಡೆಗೆ ಅರಣ್ಯ ಇಲಾಖೆಯ ಗಿಡದ ಬುಡದಲ್ಲಿ ನಿದ್ದೆ ಮಾಡಿ ಬೆಳಿಗ್ಗೆ ಎದ್ದು ಮತ್ತೆ ರೂಮ ಸೇರಿ ಕರ್ಮ ಕ್ರಿಯಾದಿಗಳನ್ನು ಮುಗಿಸಿ ಮಟ್ಟಿಲಿಳಿಯುತ್ತಿದ್ದೆವು.  ಬೆಂಕಿಪೊಟ್ಣದ ಕಿಸೆಯೊಡೆಯನ ಹೆಂಡತಿ ಎದುರಾಗಿ “ಅರೇ ಭಾಯ್ಜಾನ್, ಆ ಹೆಂಗ್ಸು ಸುಭಾ ನಮಾಜ್ ಟೇಮ್ನಲ್ಲಿ ಗಂಟು ತಗೊಂಡು ರೂಮು ಕಾಲಿ ಮಾಡ್ಬಿಟ್ಟೈತೆ,  ಗಯೇ ಮೈನೇ ಕಾ ಬಾಡಾ ಭೀ ನೈ ದಿಯೇ”.. ಅಂದರು.  ನಮ್ಮ ಸೀನ ತನ್ನದೇ ಶೈಲಿಯಲ್ಲಿ “ಅಲ್ಲಮ್ಮಾ, ನಮ್ದು ಬಾಡ್ಗೆ ನಾವ್ ದೇತಾ….. ಗೋಪಾಲಾ ಗೇ ಕ್ಯಾ ಕರ್ತಾ……..?” ಅಂದುಬಿಟ್ಟ.  ಆಮೇಲೆ ಪುಟ್ಟಮ್ಮ ಬಾಡಿಗೆ ಕೊಟ್ಟಳೋ  ಇಲ್ಲವೋ ಗೊತ್ತಾಗಲಿಲ್ಲ.  ಕೆಲವೇ ದಿನಗಳಲ್ಲಿ ನಮಗೆ ಮತ್ತೊಂದು ಕಥೆ ಬರೆಯಲು ಸರಕು ಸಿಗುವಂಥ ದೊಡ್ಡದೊಂದು ಮನೆಗೆ  ನಾವು ಗಂಟು ಕಟ್ಟಿ ನಡೆದೆವು. 
 
ಇವತ್ತಿನ “ಜನ್ಮಜನ್ಮಾಂತರ” ದ ರಹಸ್ಯವನ್ನು ಬಿಚ್ಚಿಡುವ ದಿನಗಳಲ್ಲಿ ಅವತ್ತಿನ ಪುಟ್ಟಮ್ಮ ಈಗೇನಾದ್ರೂ ಸಿಕ್ಕಿದ್ದರೆ ಹೊತ್ತುಕೊಂಡಾದ್ರೂ ಹೋಗಿ ಮಲಗಿಸಿ “ಹ್ಞಾ…. ಒನ್.. ಟೂ ಥ್ರೀ…..ಹೇಳು” ಅಂತ ಗುರೂಜೀಯಿಂದ ಕೇಳಿಸಿ ಸೀದಾ ಆಕೆ ಮೈಯೊಳಗೆ ಕುಳಿತು ಆಡಿಸುತ್ತಿದ್ದ ಆತ್ಮಗಳನ್ನು ಎಳೆದು ಮಾತಾಡಿಸಬಹುದಿತ್ತಲ್ವಾ?

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ವನಸುಮ
9 years ago

ಚೆನ್ನಾಗಿದೆ.

ganesh
ganesh
9 years ago

ಕೆಲವು ಕ್ಷಣ ನಗೆಗಡಲಲ್ಲಿ ತೇಲಿಸಿತು. ಮನಸ್ಸು ಸಂತೋಷವಾಯಿತು.

2
0
Would love your thoughts, please comment.x
()
x