ಅಂದು ಬೆಳಿಗ್ಗೆಯೇ ದತ್ತಣ್ಣಿ ತನ್ನ ಗೆಳೆಯ ದಸ್ತಗೀರನಿಗೆ ಫೋನು ಮಾಡಲು ಎರಡು ಕಾರಣಗಳಿದ್ದವು. ಅಂದು ದಸ್ತಗೀರನ ಹುಟ್ಟಿದಹಬ್ಬ ಅಂತೆಯೇ ನಿನ್ನೆ ಎಲ್ಲ ಟಿವಿ ಚಾನಲಗಳಲ್ಲಿ ಬಂದ ದಸ್ತಗೀರನ ಸಂದರ್ಶನ. ಗೆಳೆಯನ ಉತ್ತರಕ್ಕೂ ಕಾಯದೇ ಭೆಟ್ಟಿಯಾಗಲು ಬರುವುದಾಗಿ ಹೇಳಿ ಫೋನು ಇಟ್ಟ. ಕೇವಲ ಅಸೀೀಪನ ತಂದೆ ಆಗಿದ್ದಕ್ಕಾಗಿ ಅವ ಕೇಳಬಾರದ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕಾಗಿತ್ತು,ಮಾತ್ರವಲ್ಲ ಮಗ ಹೀಗೆ ಮಾಡಿದ ಅದಕ್ಕೆ ನನಗೇಕೆ ಈ ಶಿಕ್ಷೆ ಎಂಬ ಅವನ ಅಳಲು ಮೂಕರೋದನವಾಗಿತ್ತು. ಅಸೀಫನಿಗೆ ದೆಹಲಿಯಿಂದ ಬಂದ ವಿಶೇಷತಂಡದವರು ಅಪರಾತ್ರಿ ಕರಕೊಂಡು ಹೋಗಿದ್ದರು. ಗೋವಾದಲ್ಲಿ ಈ ಹಿಂದೆ ಬಂಧಿತನಾದ ಕಾಸಿಂ ಎಂಬಾತ ಅಸೀಫನ ಹೆಸರೂ ತಗೊಂಡಿದ್ದ. ಕಾಸಿಂ ದೇಶದತುಂಬ ವಿಧ್ವಂಸಕ ಕೆಲಸದ ಪ್ಲಾನ ಮಾಡಿದವರ ಗುಂಪಿನಲ್ಲಿದ್ದ. ಕೆಲದಿನದ ಹಿಂದೆ ಹುಬ್ಬಳ್ಳಿಗೂ ಅವ ಬಂದಿದ್ದ ಹಾಗೆಯೇ ಅಲ್ಲಿಯ ಮಸೀದಿಯಲ್ಲಿ ಅಸೀಫ ಹಾಗೂ ಇತರೇ ಹುಡುಗರ ಜೊತೆ ಭೆಟ್ಟಿಯಾಗಿದ್ದ ಒಂದು ಸ್ಲೀಪರಸೆಲ್ ಹುಬ್ಬಳ್ಳಿಯಲ್ಲೂ ತಯಾರಾಗುವ ಹಂತದಲ್ಲಿತ್ತು ಅಸೀಫ ಅದರ ಮುಖ್ಯಸ್ಥನ ಜವಾಬದಾರಿ ಹೊತ್ತಿದ್ದ ಅಂತ ಚಾನೆಲನಲ್ಲಿ ಬಿತ್ತರವಾದ ಸುದ್ದಿ. ಟಿವಿಯವರು ದಸ್ತಗೀರನಿಗೆ ಸುತ್ತುವರೆದು ಪ್ರಶ್ನೆಗಳ ಕೇಳಿದ್ದರು. ಮಗನ ಈ ಚಟುವಟಿಕೆಗಳ ಬಗ್ಗೆ ಅವನಿಗೆ ಗೊತ್ತಿಲ್ಲ ಎಂಬ ಅವನ ವಿವರಣೆ ಮಾಧ್ಯಮದವರಿಗೆ ತೃಪ್ತಿತಂದಿರಲಿಲ್ಲ. ಸಮಜಾಯಿಶಿ ಕೊಟ್ಟು ಕೊಟ್ಟು ಸುಸ್ತಾದವ ಅಳಲು ತೊಡಗಿದ. ಚಾನಲನಲ್ಲಿ ಗೆಳೆಯ ಅಳುತ್ತಿರುವ ದೃಶ್ಯ ದತ್ತಣ್ಣಿಗೆ ನೋವು ತರಿಸಿತ್ತು. ಕೂಡಲೇ ಫೋನಮಾಡಿ ಗೆಳೆಯನಿಗೆ ಸಮಾಧಾನ ಹೇಳುವ ಅವನ ಆಸೆಗೆ ನೀರುಎರಚಿದ್ದು ಹೆಂಡತಿ ಮತ್ತು ಮಗ ಅನಂತ. ಅನಂತನಿಗೆ ಅಪ್ಪನ ಈ ಗೆಳೆತನ ಮನಸ್ಸಿಗೆ ಬರುತ್ತಿರಲಿಲ್ಲ. ಅನೇಕ ಸಲ ಅಪ್ಪನ ಜೊತೆ ಈ ಬಗ್ಗೆ ವಾದಮಾಡಿದ್ದ. ಆ ಜನರ ಸ್ನೇಹ ಸಹವಾಸ ಬೇಡ ಇದು ಅವನ ವಾದ. ಅವನ ಮಾತು ಮೀರಿ ದತ್ತಣ್ಣಿ ಸ್ನೇಹ ಇಟ್ಟುಕೊಂಡಿದ್ದ. ಹಾಗೆ ನೋಡಿದರೆ ದತ್ತಣ್ಣಿಯ ತಂದೆ ಮತ್ತು ಅಸೀಫನ ತಂದೆಯೂ ಗೆಳೆಯರು,ಇಬ್ಬರೂ ರೇಲ್ವೆವರ್ಕಶಾಪಿನಲ್ಲಿಜೊತೆಗೆ ಕೆಲಸ ಮಾಡುವವರು. ತಮ್ಮ ಮಕ್ಕಳು ಒಂದೇ ಸಾಲೆಯಲ್ಲಿ ಕಲಿಯಲಿ ಎಂಬ ಅವರ ಬಯಕೆ ಕೈಗೂಡಿತ್ತು. ಕನ್ನಡ ಎರಡನೇ ನಂಬರ ಸಾಲೆಯಿಂದ ಹಿಡಿದು ಪಿಯುಸಿ ಎರಡನೇ ವರ್ಷದವರೆಗೂ ದತ್ತಣ್ಣಿ ಮತ್ತು ದಸ್ತಗೀರ ಜೊತೆಯಾಗಿ ಕಲಿತವರು. ದಸ್ತಗೀರನ ತಂದೆ ಕೆಲಸದಲ್ಲಿದ್ದಾಗಲೇ ತೀರಿಕೊಂಡಾಗ ಅನುಕಂಪದ ಆಧಾರದ ಮೇಲೆ ದಸ್ತಗೀರ ನಿಗೆ ರೇಲ್ವೆ ಇಲಾಖೆಯಲ್ಲಿ ಕೆಲಸ ಸಿಕ್ಕಿತು. ದತ್ತಣ್ಣಿಯ ಅವ್ವನಿಗೂ ದಸ್ತಗೀರನ ಮೇಲೆ ಅಭಿಮಾನ..ದೀಪಾವಳಿ ಹಬ್ಬಕ್ಕೆ ಫರಾಳ ತಿನ್ನಲು ಅವ ಹಾಜರಾಗಬೇಕು. "ನೀವು ಬ್ರಾಂಬ್ರು ಭಾರಿ ರುಚಿಯಾಗಿ ಮಾಡತೀರಿ.." ಅಂತ ಹೊಗಳುತ್ತ ಒಂದೆರಡು ಉಂಡಿ ಹೆಚ್ಚಿಗೆಯೇ ಅವ ತಿನ್ನುವುದಿತ್ತು.ಹಂಗ ಮೊಹರಂ ಹಬ್ಬದ ಚೊಂಗೆ, ಈದ್ ಹಬ್ಬದ ಸುರಕುಂಬ, ಬಿರಿಯಾನಿ ಅಂದರೆ ದತ್ತಣ್ಣಿಗೆ ಪಂಚಪ್ರಾಣ.
ಹುಬ್ಬಳ್ಳಿಯ ಉಣಕಲ್ ಕೆರೆ ಅನೇಕಸಲ ಬತ್ತಿ ತುಂಬಿ ತುಳುಕಿತ್ತು. ಊರಲ್ಲಿ ಹಿಂದು ಮುಸ್ಲಿಂರ ದಂಗೆ ನಡೆಯುತ್ತಿದ್ದವು ಅದು ಬಾಬರಿ ಮಸೀದಿಯ ಗಲಾಟೆ ಇರಬಹುದು, ಈದಗಾದ ಝಂಡಾಹಾರಿಸುವ ವಿಚಾರ ಇರಬಹುದು ಅಥವಾ ಪ್ರತಿವರ್ಷ ಹಟಕೂನ ನಡೆಯುವ ಂಗಪಂಚಮಿಯ ಧಾಂಧಲೆ ಇರಬಹುದು ,ಇಡೀ ಊರು ಹೊತ್ತಿ ಉರಿಯುತ್ತಿದ್ದರೂ ಇವರಿಬ್ಬರ ಗೆಳೆತನಕ್ಕೆ ಅದು ಅಡ್ಡಿ ಬಂದಿರಲಿಲ್ಲ.ದತ್ತಣ್ಣಿ ವಾಸವಾಗಿದ್ದುದು ಕಿಲ್ಲೆಯಲ್ಲಿ. ಅವನ ಮನೆಯಿಂದ ಅನತಿ ದೂರದ ಪತ್ಥರಪೋಡ ಗಲ್ಲಿಯಲ್ಲಿ ದಸ್ತಗೀರ ಇರತಿದ್ದ,
ದಸ್ತಗೀರನ ಜೊತೆಗಿನ ದತ್ತಣ್ಣಿಯ ಈ ಗೆಳೆತನ ಕಿಲ್ಲೆಯ ಉಳಿದ ಮಂದಿಗೆ ಸರಿಬಂದಿರಲಿಲ್ಲ. ಹೇಳಿಕೇಳಿ ಕಿಲ್ಲೆದ ಜನ ಸನಾತನವಾದಿಗಳು ಅಂತ ಹೆಸರಾದವರು. ಮನಿಗೆ ಬಂದು ಹೇಳಿಹೋದರು. ಕೆಲವೊಮ್ಮೆ ತಾಕೀತು ಮಾಡಿದರು ಕೂಡ. ದತ್ತಣ್ಣಿ ಕೇಳಿಯೂ ಕೇಳದಂತೆ ಇದ್ದ. ಹಂಗ ಪತ್ಥರಪೋಡ ಗಲ್ಲಿಯ ಹಿರಿಯರಿಗೂ ದಸ್ತಗೀರನ ಈ ಕಾಫಿರನ ಜೊತೆಗಿನ ಸ್ನೇಹ ಸರಿಬಂದಿರಲಿಲ್ಲ. ಅವ ಶುಕ್ರವಾರದ ನಮಾಜಿಗೆ ಹೋದಾಗ ಅವನ ಸುತ್ತುವರಿದು ಬುದ್ಧಿವಾದ ಹೇಳತಿದ್ದರು.ಆದರ ಇಬ್ಬರೂ ಗೆಳೆಯಂದರು ಮಂದಿ ಮಾತಿಗೆ ತಲಿ ಕೆಡಿಸಿಕೊತಿರಲಿಲ್ಲ. ಪ್ರತಿತಿಂಗಳ ಹತ್ತರ ನಂತರ ಗೆಳೆಯರಿಬ್ಬರೂ ದಾಜೀಬಾನ ಪೇಟೆಯ ಬಾರಿನಲ್ಲಿ ಕುಳಿತು ಬೀರ ಕುಡಿಯುತ್ತ ಹರಟೆ ಹೊಡೆಯುತ್ತಿದ್ದರು.ಅನಂತ ಮತ್ತು ಅಸೀಫ ಗೆಳೆತನದ ವಾರಸಾ ಮುಂದುವರೆಸಿಕೊಂಡು ಹೋಗಲಿ ಎಂಬುದು ಅವರ ಮನದಿಂಗಿತ. ಪ್ರತಿ ರಾಖಿ ಹಬ್ಬಕ್ಕ ದಸ್ತಗೀರನ ಮಗಳು ಫಾತಿಮಾ ಅನಂತನಿಗೆ ರಾಖಿಕಟ್ಟಲಿಕ್ಕೆ ಬರತಿದ್ದಳು. ಆದರ ಈ ಫಾತಿಮಾನ ಗೆಳೆಯರ ನಡುವಿನ ಗೋಡೆ ಏಳಲಿಕ್ಕೆ ಅಡಿಪಾಯ ಆಗಬಹುದು ಎಂದೂ ಯಾರು ಊಹಿಸಿರಲಾರರು.
ಪಿಯುಸಿ ಮುಗಿಸಿದ ಫಾತೀಮಾಗ ಮುಂದ ಟೀಚರ ಆಗುವ ಆಸೆ ಅದಕ್ಕೆ ಬೇಕಾದ ಮುಂದಿನ ಓದಿಗೆ ತಯಾರಿ ನಡಸಿದ್ದಳು.ಅಸೀಫಗ ಇದು ಸರಿ ಬರಲಿಲ್ಲ. ಏನು ಕಲತು ನವಕರಿ ಮಾಡುದು ಬೇಡ, ಮದುವೆಯಾಗು ಇದು ಅವನ ಹಟ. ಅವನಿಗೆ ಬೆಂಬಲವಾಗಿ ನಿಂತವಳು ಅವನ ತಾಯಿ.ಮಗ ಮತ್ತು ಹೆಂಡತಿಯ ಮಾತಿಗೆ ಕರಗಿದ ದಸ್ತಗೀರನೂ ಫಾತಿಮಾಳ ಕನಸಿಗೆ ಕಲ್ಲು ಹಾಕಿದ. ಇದನ್ನು ಬೇಡಿರದಿದ್ದ ಅವಳು ಕಂಗೆಟ್ಟಳು ಆಗ ನೆನಪಾದಾವ ಅವಳ ದತ್ತಣ್ಣಿ ಚಾಚಾ. ಅವ ತನ್ನ ಅಬ್ಬಾನಿಗೆ ತಿಳಿಸಿಹೇಳಬಹುದು ಅನ್ನುವ ಆಸೆಯಿಂದ ದತ್ತಣ್ಣಿ ಬಳಿ ಎಲ್ಲ ಹೇಳಿಕೊಂಡಳು. ಮಗಳ ಸಮಾನಳಾದವಳ ಕನಸಿಗೆ ಇಂಬುಕೊಡಲು ಅವ ನಿರ್ಧಾರ ಮಾಡಿದ ಗೆಳೆಯನ ಮನ ಒಲಿಸುವುದಾಗಿ ಹೇಳಿದ. ಅಂದಂತೆ ಅವ ಒಂದು ರವಿವಾರ ದಸ್ತಗೀರನ ಮನೆಗೆ ಹೋದ. ಅಲ್ಲಿ ಅಸೀಫ ಇದ್ದಿದ್ದು ಅನುಕೂಲಾತು ಯಾಕೆಂದರೆ ಫಾತಿಮಾಳ ಪ್ರಕಾರ ತನ್ನ ಅಣ್ಣನದೇ ಪ್ರಬಲ ವಿರೋಧವಿತ್ತು. ಅಸೀಫ ದತ್ತಣ್ಣಿಯ ಮಾತುಗಳನ್ನು ನಡುವೆಯೇ ತುಂಡರಿಸಿದ.ಇನ್ನೂ ಮೀಸೆ ಬಲಿತಿರದವ..ಚಿಕ್ಕವನಿದ್ದಾಗ ಚಾಚಾ ಎಂದು ತೊಡೆಮೇಲೆ ಆಡಿದವ, ಅವನ ಮಾತು ಖಾರವಾಗಿದ್ದವು.
"ಇದು ನಮ್ಮನಿ ವಿಚಾರ..ನಮ್ಮ ಮಂದಿ ಮುಂದ ನಾವು ಗೈರಾಗಲು ತಯಾರಿಲ್ಲ. ಇಷ್ಟಕ್ಕೂ ನೌಕರಿ ಮಾಡುವುದರಿಂದ ಏನಾಗತದ ಹೆಂಗಸೂರು ಏನಿದ್ದರೂ ಸಂಸಾರ ಮಾಡಾಕ ಮಾತ್ರ..ನಾವು ನೋಡಿದ ಹುಡುಗ ಛಲೋ ಅದಾನು ಅಕಿ ರಾಣಿ ಹಂಗ ಇರತಾಳ.." .
"ಆದರ ಅಕಿಗೆ ಕನಸವ ಅಲ್ಲೋ ಅಕಿ ಟೀಚರ ಆಗಬೇಕಂತಾಳ ಅಕಿ ಆಶಾಕ ಕಲ್ಲು ಹಾಕಬ್ಯಾಡರಿ..ದಸ್ತಗೀರ ನೀ ಅಕಿ ತಂದಿ ಇದ್ದೀ ನೀ ನಿರ್ಣಯ ಹೇಳು..'' ದತ್ತಣ್ಣಿ ಗೆಳೆಯ ಮಗ
ಮಾತನಾಡಿದರೂ ಸುಮ್ಮನಿದ್ದುದು ನೋಡಿ ತಿವಿದ.
" ಅಕಿಗೆ ಸಲಿಗಿ ಕೊಟ್ಟು ತಪ್ಪಾಗೈತಿ..ಕಾಫಿರ ಮನಿಗೆ ಹೋಗಿ ಛಾಡಾ ಹೇಳ್ಯಾಳ.." ಅಸೀಫ ಎಲ್ಲರೂ ನೋಡುತ್ತಿದ್ದಂತೆಯೇ ಫಾತಿಮಾಳ ಕೆನ್ನೆಗೆ ಹೊಡೆದ. ದತ್ತಣ್ಣಿಗೆ ಬಹಳ ಕೆಟ್ಟನಿಸಿತು.. ನನ್ನ ಸಲುವಾಗಿ ಅಕಿ ಹೊಡತಾ ತಿನಬೇಕಾತಲ್ಲ ಅಂತ ಅವನಿಗೆ ಸಂಕಟ ಆದರ ಅಕಿ ಅಪ್ಪ ಕಲ್ಲ ಕೂತಂಗ ಸುಮ್ಮನಿದ್ದ. ಇನ್ನು ಅಲ್ಲಿ ಕೂತು ಏನೂ ಉಪಯೋಗವಿಲ್ಲ ಅಂತ ಅನ್ನಿಸಿ ದತ್ತಣ್ಣಿ ಎದ್ದ. ಒಳಗಿನಿಂದ ಫಾತಿಮಾಳ ಅಳುವಿನ ದನಿ ಕೇಳುತ್ತಿತ್ತು.
ಈ ಪ್ರಕರಣ ಗೆಳೆಯರ ನಡುವೆ ಬಿರುಕು ಬಿಡಲು ಬುನಾದಿಯಾಯಿತು. ದತ್ತಣ್ಣಿ ತನ್ನ ಹೆಂಡತಿ ಮುಂದೆ ಎಲ್ಲ ಹೇಳಿಕೊಂಡಿದ್ದ.ಅದು ಅನಂತನ ವರೆಗೂ ತಲುಪಿತ್ತು. ಮಗನಿಂದಲೂ
ಸಿಕ್ಕಿದ್ದು ಭತ್ರ್ಸನೆಯೇ. ಹಂಗ ನೋಡಿದರ ಮಗನಿಂದ ಬೇರೆನೂ ಅಪೇಕ್ಷೆ ಇರಲಿಲ್ಲ. ಅವನಿಗೆ ಅಪ್ಪನ ಗೆಳೆತನ ಮುಂದುವರೆಸುವುದು ಬೇಕಾಗಿರಲಿಲ್ಲ ಆ ಮಂದಿ ದಗಾಕೋರರು, ನಂಬಿಕೆ ಅವರ ಮೇಲೆ ಇಡುವುದು ಮೂರ್ಖತನ ಇದು ಅವನ ವಾದ. ಅನಂತ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದವ. ಹಂಗ ನೋಡಿದರ ಕಿಲ್ಲೆಕ್ಕೂ ಸಂಘಟನೆಗೂ ಹಳೆಯ ನಂಟು. ದತ್ತಣ್ಣಿ ಸಣ್ಣವನಿದ್ದಾಗ ಮರಾಠಿಸಾಲೆಯ ಬಯಲಿನಲ್ಲಿ ಭಗವಾ ಝಂಡ ಹಾರಿಸುತ್ತ ಕವಾಯತು ಮಾಡುತ್ತಿದ್ದರು. ದತ್ತಣ್ಣಿಯ ವಾರಿಗೆಯ ಅನೇಕ ಗೆಳೆಯರು ಅಲ್ಲಿ ಹೋಗುತ್ತಿದ್ದರು ಒಂದೆರಡು ಸಲ ದತ್ತಣ್ಣಿನೂ ಹೋಗಿದ್ದ. ತನಗಿಂತಲೂ ಉದ್ದವಾದ ಲಾಠಿ ತಿರುವುದು ತ್ರಾಸಾಗಿ ಬಿಟ್ಟಿದ್ದ. ಅನಂತ ಪೂರ್ಣಪ್ರಮಾಣದಲ್ಲಿ ಆ ಸಂಘಟನೆಯಲ್ಲಿ ಇನ್ವಾಲ್ವ ಆಗಿದ್ದ.ಅವನ ಗೆಳೆಯಂದಿರು ಆಗೀಗ ಮನೆಗೂ ಬರತಿದ್ದರು. ಹಲವು ಸಲ ಅವರಾಡುವ ಮಾತು ದತ್ತಣ್ಣಿಯ ಕಿವಿಗೂ ಬೀಳುತ್ತಿದ್ದವು. ಆ ಮಾತುಗಳಲ್ಲಿ ಹೆಚ್ಚಾಗಿ ಇರುತ್ತಿದ್ದುದು ಮುಸಲ್ಮಾನರ ಮೇಲಿನ ಕಿಡಿ. ಆವೇಶ ಭರಿತರಾಗಿ ಅವರು ಮಾತಾಡುತ್ತಿದ್ದರು. ಮಗ ಇಂತಹ ತೀವ್ರ ಮಂದಿಯ ಗೆಳೆತನ ಬೆಳೆಸಿದ್ದು ಸರಿ ಬಂದಿರಲಿಲ್ಲ. ಅವನಿಗೆ ತಿಳಿಹೇಳಲು ಪ್ರಯತ್ನಿಸಿ ಸೋತಿದ್ದ. ಅಂತೆಯೇ ಮಗನಿಂದ ಅವನಿಗೆ ಉಪದೇಶವೂ ಸಿಗುತ್ತಿತ್ತು. ಯಾವುದೋ ಪುಸ್ತಕದ ವಸ್ತು ಬಾಯಿಪಾಠ ಮಾಡಿ ಒಪ್ಪಿಸುವವರಂತೆ ಇರುತ್ತಿತ್ತು. ದತ್ತಣ್ಣಿಗೆ ಅಂತಹ ಪುಸ್ತಕಗಳು ಅದರಲ್ಲಿನ ಉಪದೇಶಗಳು ಹೊಸದಲ್ಲ. ಅವ ಯುವಕನಾಗಿದ್ದಾಗ ಯಾರೋ ಒಂದು ಪುಸ್ತಕ ಕೊಟ್ಟು ಓದಿ ಜಾಗೃತರಾಗಲು ಹೇಳಿದ್ದರು. ಒಂದೆರಡು ಪುಟ ಓದುವುದರಲ್ಲಿ ಅದರಲ್ಲಿ ಅಡಕವಾಗಿರೋದು ದ್ವೇಶಬೋಧೆ ಮಾತ್ರ ಅಂತ ಅವನಿಗೆ ಮನದಟ್ಟಾಗಿತ್ತು. ಓದುವುದು ನಿಲ್ಲಿಸಿದ್ದ. ಮಗನಿಗೆ ತಿದ್ದುವ ಅವನ ಪ್ರಯತ್ನ ಹುಸಿಹೋಗುತ್ತಿತ್ತು. ಫಾತೀಮಾಳ ಪ್ರಕರಣದಲ್ಲಿ ಅಪ್ಪ ವಹಿಸಿದ ಹಿತಾಸಕ್ತಿ ಅದಕ್ಕೆ ಸಿಕ್ಕಿದ ಪ್ರತಿಫಲ ಎರಡೂ ಅನಂತ ಮೊದಲೇ ಊಹಿಸಿದ್ದನಂತೆ.
"ಅವರು ಒಂದು ನಮೂನಿ ಕೆಸರು ಅವರಿಗೆ ಕಲ್ಲು ಒಗದರ ತಾಕುವುದು ನಮಗ.." ಎಂಬ ಅನಂತನ ಟೀಕೆಯ ಮಾತು ಅನಂತನಿಗೆ ನೋವು ತಂದಿತ್ತು. ಆದರೆ ಅದಕ್ಕೂ ದಿಗಿಲಾದದ್ದು ಗೆಳೆಯ ದಸ್ತಗೀರನಲ್ಲಾದ ಬದಲಾವಣೆ.
ಹಂಗ ನೋಡಿದರ ದಸ್ತಗೀರ ಎಂದೂ ನಮಾಜು ತಪ್ಪಿಸಿದವನಲ್ಲ. ಓಣಿಯ ಮಸೀದಿಯ ಮೀಟಿಂಗುಗಳಲ್ಲಿ ಭಾಗಿಯಾಗುತ್ತಿದ್ದ. ಆದರೂ ಒಂದು ಸುರಕ್ಷಿತ ಅಂತರ ಅವ ಕಾಯ್ದುಕೊಂಡು ಬಂದಿದ್ದ. ಅವನ ಜಮಾತಿನ ಅನೇಕ ಹಿರಿಯರು ಅವನನ್ನು ಬದಲಾಯಿಸಲು ಪ್ರಯತ್ನ ಪಟ್ಟಿದ್ದರು. ಆದರೆ ಫಾತೀಮಾಳ ಪ್ರಕರಣ ಎಲ್ಲದಕೂ ನಾಂದಿ ಆಯಿತು ಎಂಬಂತೆ ದಸ್ತಗೀರ ಬದಲಾದ. ದಪ್ಪನಾಗಿ ಮೀಸೆ ಬಿಟ್ಟವ ಅದನ್ನು ತೆಗೆಸಿದ ದಾಡಿ ಬೆಳೆಸಿಕೊಂಡ . ಕೆಲಸ ಮಾಡುವಾಗ ಮಾತ್ರ ಪ್ಯಾಂಟು ಶರ್ಟು, ಉಳಿದಂತೆ ಸಡಿಲವಾದ ಪೈಜಾಮ ಅದರ ಕಾಲುಗಳು ಗಿಡ್ಡವು, ತಲೆಯಮೇಲೊಂದು ಟೋಪಿ ಹಿಗೆ ಅವನ ವೇಶಭೂಶ ಬದಲಾತು. ಕೆಲವರು ಹೇಳುವಹಾಗೆ ಫಾತೀಮಾಳನ್ನು ಮದುವೆ ಮಾಡಿಕೊಟ್ಟ ಮನೆತನ ತೀರ ಸಂಪ್ರದಾಯ ಪಾಲಿಸುವವರು ಅವರನ್ನು ಮೆಚ್ಚಿಸಲು ಅವ ಹೀಗೆ ಬದಲಾಗಿದ್ದಾನೆ ಅಂತ. ದತ್ತಣ್ಣಿಗೂ ಗೆಳೆಯನ ಈ ಬದಲಾದ ವರಸೆ ವಿಚಿತ್ರ ಅನ್ನಿಸಿತ್ತು.
ಈಗೀಗ ದಸ್ತಗೀರ ಸಿಗುವುದೇ ಅಪರೂಪ ಆಗಿತ್ತು. ಮೊದಲಿನ ಹಾಗೆ ಅವ ಮನೆಗೆ ಬರುತ್ತಿಲ್ಲ ಎಂಬ ಸಂಗತಿ ಮನದಟ್ಟಾಗಿತ್ತು. ಪ್ರತಿತಿಂಗಳೂ ಸೇರುವ ಬಾರಿಗೂ ಅವ ಬರುತ್ತಿರಲಿಲ್ಲ ಈಗೀಗ .ಫೋನಿನಲ್ಲೂ ಈಗ ಅವ ಸಲಿಗೆಯಿಂದ ಮಾತನಾಡುವುದಿಲ್ಲ . ವಿಚಿತ್ರ ಅಂದರೆ "ಬಾರಲೇ ಹೋಗಲೇ.." ಅನ್ನುವ ಬದಲು " ಸಲಾಂ ಆಲೈಕುಂ ಖೈರಿಯತ್.." ಅಂತೆಲ್ಲ ದಸ್ತಗೀರ ಮಾತನಾಡಲು ಸುರುವಿಟ್ಟಿದ್ದ. ದತ್ತಣ್ಣಿ ಮತ್ತು ದಸ್ತಗೀರರ ನಡುವೆ ಅಂತರ ಹೆಚ್ಚಿದಂತೆಲ್ಲ ಖುಶಿಪಟ್ಟವ ಅಂದರೆ ಅನಂತ. ಅಪ್ಪನಿಗೆ ಹೇಳಿ ಹೇಳಿ ಆಗದಿದ್ದುದು ತಾನಾಗಿಯೇ ಆಗುತ್ತಿರುವುದಕ್ಕೆ ಅವನಿಗೆ ಸಂತೋಶವಿತ್ತು.
ಸಂಪರ್ಕ ಕಮಿಯಾಗಿ ಕೊನೆಗೆ ಕಡಿದು ಹೋಗುವ ಸ್ಥಿತಿ. ಆಗೊಮ್ಮೆ ಈಗೊಮ್ಮೆ ದಸ್ತಗೀರ ಸಿಕ್ಕರೂ ಮುಗಮ್ ಆಗಿ ಮಾತಾಡುತ್ತಿದ್ದ.ಮೊದಲಿನ ನಗೆ ಚಾಷ್ಟಿ ಎಲ್ಲಾ ಹೋಗಿ ಮಾತು ಬರೀ ನೀರಸ ಆಗಿತ್ತು. ದತ್ತಣ್ಣಿ ಬರುವ ದೀಪಾವಳಿಗೆ ಫರಾಳಕ್ಕೇನೋ ಆಮಂತ್ರಿಸಿದ ಆದರೆ ಗೆಳೆಯ ಬರುವ ಬಗ್ಗೆ ಅವನಿಗೆ ಖಾತ್ರಿಇರಲಿಲ್ಲ. ದೀಪಾವಳಿಯ ಫರಾಳ ಗೆಳೆಯ ಬರದೇ ಕರಗಿ ಹೋಗಿತ್ತು..ಮುಂದ ಎಂಟುದಿನಕ್ಕ ಈದ್ ಹಬ್ಬ. ಗೆಳೆಯ ಕರೆಯದಿದ್ದರೂ ದತ್ತಣ್ಣಿ ಹೋಗಿದ್ದ. ದಸ್ತಗೀರ ಮನೆಯಲ್ಲಿರಲಿಲ್ಲ..ಬುರಖಾ ಹಾಕಿಕೊಂಡ ಅವನ ಹೆಂಡತಿ ಪಡದೆಯ ಹಿಂದಿನಿಂದಲೇ ಹೇಳಿದಳು..ಮೊದಲಿನ ಹಾಗೆ ಮಾತುಕತೆ ಇಲ್ಲ. ದತ್ತಣ್ಣಿಗೆ ಇರಿಸುಮುರಿಸಾಗಿ ಹೊರಟ. ದಾರಿಯ ತಿರುವಲ್ಲಿ ದಸ್ತಗೀರ ಭೇಟಿಯಾದ.
ಇವನ ಹಬ್ಬದ ಅಭಿನಂದನೆಗು ಅವನ ಅನ್ಯಮನಸ್ಸಿನ ಉತ್ತರ.,ಮಗ ಕೆಲಸಕ್ಕೆ ಹತ್ತಿದ್ದು, ಮುಂಬಯಿಯಲ್ಲಿ ಕೆಲಸ ಸಿಕ್ಕಿರುವುದಾಗಿ ಹೇಳಿದ. ಪ್ರಶ್ನೆಗೆ ಒಂದೋ ಎರಡೋ ಶಬ್ದದಲ್ಲಿ
ಮಾತ್ರ ಉತ್ತರ ಕೊಡುವ ಗೆಳೆಯ ಅಪರಿಚಿತನಂತೆ ಕಂಡ. ಸಣ್ಣವರಿದ್ದಾಗ ಕೆಲವು ಸಲ ಒಂದೇ ಡಬ್ಬಿ ಹಂಚಿಕೊಂಡು ತಿಂದವರು..ಇಂದು ಅಪರಿಚಿತರಂತೆ ವರ್ತಿಸಬೇಕಾಗಿ ಬಂದುದು
ಸಹಜವಾಗಿಯೇ ದತ್ತಣ್ಣಿಗೆ ನೋವು ತಂದಿತ್ತು. ಅದೂ ದಸ್ತಗೀರ ಹೆದರಿ ಹೆದರಿ ಮಾತನಾಡುತ್ತಿದ್ದ. ಗಳಿಗೆಗೊಮ್ಮೆ ತನ್ನನ್ನು ಯಾರೋ ನೋಡುತ್ತಿದ್ದಾರೆ ಎಂಬ ಆತಂಕದಿಂದ ಅಲ್ಲಿ ಇಲ್ಲಿ ನೋಡುತ್ತಿದ್ದ. ಗೆಳೆಯನ ಈ ವರ್ತನೆ ಸರಿಬರಲಿಲ್ಲ ದತ್ತಣ್ಣಿಗೆ,ಕೇಳಿಯೂ ಬಿಟ್ಟ. ಉತ್ತರ ಅನಿರೀಕ್ಷಿತ ವಾಗಿತ್ತು. ತಮ್ಮಿಬ್ಬರ ಗೆಳೆತನ ಜಮಾತ್ ಮಂದಿಗೆ ಸರಿ ಬರೋದಿಲ್ಲ..ಓಣಿಯಲ್ಲಿ ಮಾತು ಕೇಳಬೇಕಾಗುತ್ತದೆ ಮುಖ್ಯವಾಗಿ ಫಾತೀಮಾಳ ಮನೆಯವರಿಗೆ ಈ ಸಂಗತಿ ಗೊತ್ತಾದರೆ ತೊಂದರೆ ..ಇತ್ಯಾದಿ ದಸ್ತಗೀರ ಹೇಳಿದ ಇವನ ಉತ್ತರಕ್ಕೂ ಕಾಯದೇ "ಅಲ್ಲಾಹ ಹಾಫೀಜ" ಅಂತ ಹೇಳಿ ಹೊರಟುಹೋದ. ದತ್ತಣ್ಣಿಗೆ ಅವನ ಮಾತು ಪೂರ್ತಿ ಒಳಗಿಳಿಯಲಿಲ್ಲ. ಮೂಲೆಯ ಹೊಟೆಲನಲ್ಲಿ ಕುಳಿತು ಚಹಾ ಕುಡಿಯುತ್ತ ಕೂತವಗ ಈ ಹಿಂದೆ ಕಿಲ್ಲೆದಲ್ಲಿ ಮನೆವರೆಗೂ ಬಂದು ಒಂದು ರೀತಿ ಧಮಕಿ ಕೊಟ್ಟುಹೋದ ಪಾಠಕನ ಮಾತು ನೆನಪಿಗೆ ಬಂದವು..
"ದತ್ತಣ್ಣಿ ಹಿಂದಿನ ಹಂಗ ಆ ಮಂದಿ ಈಗಿಲ್ಲ ಬಹಳ ಹೆಚಿಗೊಂಡಾರ ಅವರ ಜೋಡಿ ಸಲಿಗಿ ಕಮಿ ಮಾಡರಿ ಇದು ನಿಮಗೂ ನಿಮ್ಮ ಕುಟುಂಬಕ್ಕೂ ಛಲೋ.." ಅವನ ಮಾತಿಗೆ ಲಕ್ಷಕೊಡದೆ ಮುಂದುವರೆದಿದ್ದೆ. ಗೆಳೆತನದಾಗ ಈ ಜಾತಿ ಧರ್ಮ ಬರಬಾರದು ಅಂತ ನಿಲುವು ತಳೆದಿದ್ದ. ಈಗ ದಸ್ತಗೀರನೂ ಇಂತಹುದೇ ಸುಳಿಯಲ್ಲಿ ಸಿಕ್ಕಾನ ಅವ ಅದರಿಂದ ಹೊರಗ ಬರಲಿ ಅಂತ ಆಶಿಸಿದ ದತ್ತಣ್ಣಿ.
ಅಸೀಫ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದವ ಎಂಟು ತಿಂಗಳ ನಂತರ ವಾಪಸ ಬಂದಿದ್ದ. ಮಗನ ಪಗಾರ ಛಲೋ ಇತ್ತು. ಆದರ ಕೆಲಸ ಬಿಟ್ಟು ಬಂದಿರುವುದಾಗಿ ಅವ ಹೇಳಿದಾಗ ದಸ್ತಗೀರನಿಗೆ ದಿಗಿಲು. ಅವನಿಗೊಂದು ಮದುವೆ ಮಾಡುವ ಮಾತು ಆಡಿದ. ಆರು ತೀಂಗಳ ನಂತರ ಅಂದ ಮಗ ಪರಕೀಯನಂತೆ ಕಂಡ. ಫಾತೀಮಾ ಈಗ ಎರಡು ಮಕ್ಕಳ ತಾಯಿ. ಮೊದಲಿನ ಹಾಗೆ ಅಸೀಫ ಇಲ್ಲ. ಈಗ ಜೀನ್ಸ ಪ್ಯಾಂಟಹಾಕುತ್ತಾನೆ ಹಾಗೆಯೇ ತಲೆಮೇಲೆ ಟೋಪಿಯು ಇಲ್ಲ ಆದರೂ ಮಸೀದೆಗೆ ಹೋಗಿ ನಮಾಜು ಮಾಡುವುದು ಬಿಟ್ಟಿರಲಿಲ್ಲ. ಅಂತೆಯೇ ಅವನ ಗೆಳೆಯರ ಗುಂಪು ಅವಾಗಿವಾಗ ಊರುರು ಸುತ್ತುತ್ತಿದ್ದರು. ಕೆಲವೊಮ್ಮೆ ಮನೆಯ ಅಟ್ಟದ ಮೇಲೆ ಮೀಟಿಂಗ ಮಾಡುತ್ತಿದ್ದರು ಹಾಗೆಯೇ ಆಸೀಫನ ಬಳಿ ಈಗ ಲ್ಯಾಪಟಾಪ ಬಂದಿತ್ತು. ದಸ್ತಗೀರನಿಗೆ ಮಗನ ಚಲನವಲನ ನಡವಳಿಕೆ ಗೆಳೆಯರ ಜೊತೆಗಿನ ಗುಸುಗುಸು ಮಾತು ಸರಿಬರುತ್ತಿರಲಿಲ್ಲ. ಒಂದೆರಡು ಸಲ ಆ ವಿಷಯವಾಗಿ ವಾದವಿವಾದವೂ ಆಗಿದ್ದವು. ದಸ್ತಗೀರ ಆತಂಕ ಪಡಲು ಕಾರಣ ಇರದೇ ಇರಲಿಲ್ಲ. ಬೆಂಗಳೂರಿನಲ್ಲಿದ್ದು ಈಗ ನಿವೃತ್ತಿಯ ನಂತರ ಓಣಿಯಲ್ಲಿ ತಮ್ಮ ಹಳೆಯ ಮನೆ ನವೀಕರಿಸಿ ವಾಸವಾಗಿರುವ ಖಾನಸಾಹೇಬರು ಹುಡುಗರ ಗುರು ಆಗಿದ್ದರು. ಅವರ ತೋಟದಲ್ಲಿ ಹುಡುಗರು ಸೇರುತ್ತಾರೆ ಅದಾರೋ ಕಾಸಿಂ ಎಂಬುವ ಮನುಷ್ಯ ಆಗಾಗ ಬಂದು ಹೋಗುತ್ತಾನೆ ಏನೇನೋ ಹೇಳುತ್ತಾನೆ ಹುಡುಗರಿಗೆ ಉಪದೇಶ ಮಾಡುತ್ತಾನೆ ಅಂತೆಲ್ಲ ಸುದ್ದಿ ಇದ್ದವು.ಈ ವಿಷಯ ದಸ್ತಗೀರಗೂ ಗೊತ್ತಿತ್ತು. ಮಗನೊಡನೆ ಕೇಳಿದಾಗ ನೇರ ಉvತ್ತರ ದೊರೆತಿರಲಿಲ್ಲ.ಖಾನಸಾಹೇಬರ ಸಹವಾಸವೇ ಮುಂದಿನ ಎಲ್ಲ ಅನಾಹುತಗಳಿಗೆ ನಾಂದಿಯಾಗಬಲ್ಲದು ಆಂತ ದಸ್ತಗೀರನಿಗೆ ಅಂದಾಜು ಬರಲಿಲ್ಲ.
ದಸ್ತಗೀರ ಒಂದು ಕಂಪ್ಯೂಟರ ರಿಪೇರಿ ಅಂಗಡಿ ತೆರೆಯಲು ಹಣ ಕೇಳಿದಾಗ ಖಾನಸಾಹೇಬರೆ ಕೊಟ್ಟಿದ್ದರು. ಮೇಲಾಗಿ ಅಸೀಫನ ಮೇಲೆ ಅವರಿಗೆ ವಿಶೇಷ ಮಮತೆ..ಅವರ ಜೊತೆ ಮುಖತಃ ಅಲ್ಲದೇ ಫೋನಿನಲ್ಲೂ ಆಗಾಗ ಅಸೀಫ ಮಾತಾಡುತ್ತಿದ್ದ. ಅಸೀಫನ ಗೆಳೆಯನ ತಂದೆ ಗುಡುಸಾಬ ಒಮ್ಮೆ ಸಿಕ್ಕಾಗ ಅಸೀಫನ ಮೇಲೆ ನಿಗಾ ಇಡುವಂತೆ ಹೇಳಿದ್ದ.ಅವ ಯಾಕೆ ಹೀಗೆ ಹೇಳಿರಬಹುದು ಈ ವಿಶಯ ಕೊರೆಯುತ್ತಿತ್ತು. ಅಸೀಫ ಪ್ರಶ್ನೆ ಕೇಳಿದರೆ ಸಿಡಿಮಿಡಿ ಮಾಡುತ್ತಿದ್ದ. ಮನೆಯಲ್ಲಿ ಅಶಾಂತಿಯ ವಾತಾವರಣ ದಸ್ತಗೀರಗೂ ಬೇಡ ಅನಿಸಿತ್ತು ಹೀಗಾಗಿ ಕೆದಕಿ ಕೇಳಲು ಅವನಿಗೆ ಹಿಂಜರಿತವಿತ್ತು. ಗುಡುಸಾಬನ ಮಾತು ಖರೆ ಆಗುವ ದಿನ ಬಂತು..ಒಂದು ರಾತ್ರಿ ಖಾನಸಾಹೇಬರು ಬಂದವರು ಅಸೀಫನನ್ನು ಉಟ್ಟ ಬಟ್ಟೆಯ ಮೇಲೆ ಕರಕೊಂಡು ಹೋಗಿದ್ದರು. ಎಲ್ಲಿ ಯಾಕೆ ಎಂಬ ಪ್ರಶ್ನೆಗಳು ದಸ್ತಗೀರನ ಗಂಟಲಲ್ಲಿಯೇ ಉಳಿದುಹೋದವು. ಮುಂದೆ ಆದ ವಿದ್ಯಮಾನಗಳು ಇಡೀ ರಾಜ್ಯ ವನ್ನೇ ತಲ್ಲಣಗೊಳಿಸಿದ್ದವು. ಅಹ್ಮದಾಬಾದಿನಲ್ಲಿ ವಿಧ್ವಂಸಕ ಕಾರ್ಯ ಹಮ್ಮಿಕೊಂಡ ಮುಸ್ಲಿಂ ಯುವಕರ ಗುಂಪೊಂದು ಸೆರೆಯಾಗಿತ್ತು. ಆ ಗುಂಪಿನ ಮುಖಂಡನೇ ಕಾಸಿಂ. ವಿಚಾರಣೆ ವೇಳೆ ಅವ ತನ್ನ ಹುಬ್ಬಳ್ಳಿಯ ವಾಸದ ಬಗ್ಗೆನೂ ಬಾಯಿಬಿಟ್ಟಿದ್ದ. ಅಲ್ಲಿ ಒಂದು ಸ್ಲೀಪರ ಸೆಲ್ ತಯಾರುಮಾಡಿರುವ ಸಂಗತಿ ಅಸೀಫ ಹಾಗೂ ಖಾನಸಾಹೇಬರ ಬಗ್ಗೆಯೂ ಬಾಯಿಬಿಟ್ಟಿದ್ದ. ಗುಡುಸಾಬನಿಗೆ ಅವನ ಮಗ ಹೆದರುತ್ತಲೇ ಖಾನ ಸಾಹೇಬರ ಮನೆಯಲ್ಲಿ ನಡೆಯುತ್ತಿದ್ದ ಮೀಟಿಂಗುಗಳ ಸತ್ಯ ಬಯಲುಮಾಡಿದ್ದ. ಸುದ್ದಿ ಕೇಳಿದ ದಸ್ತಗೀರ ಕುಸಿದು ಹೋದ. ಹೆಂಡತಿಯೂ ಕಂಗಾಲಾಗಿದ್ದಳು. ವಿಚಿತ್ರ ಅಂದರೆ ಖಾನಸಹೆಬರು ಊರುಬಿಟ್ಟು ಹೋಗಿದ್ದರು. ಅಂದೇ ಅಪರಾತ್ರಿ ಒಂದು ಜೀಪಿನಲ್ಲಿ ಬಂದ ಬೂಟುಗಾಲಿನ ಜನ ಮನೆಗೆ ನುಗ್ಗಿ ಅಸೀಫನ ರೂಮು ತಡಕಾಡಿದ್ದರು. ಅಸೀಫನನ್ನು ಕರಕೊಂಡು ಹೋಗಿದ್ದರು ಅಂತೆಯೇ ಅವನ ಮೊಬೈಲು, ಲ್ಯಾಪಟಾಪು ಕೆಲವು ಕಾಗದಪತ್ರ ಎಲ್ಲ ತೆಗೆದುಕೊಂಡು ಹೋಗಿದ್ದರು. ಇದ್ದಬಿದ್ದ ಧೈರ್ಯಒಟ್ಟುಮಾಡಿಕೊಂಡು ಕೇಳಿದ. ಇವನ ಪ್ರಶ್ನೆಗೆ ಉತ್ತರ ಕೊಡದೆ ಕೆಕ್ಕರಿಸಿ ನೋಡಿದರು.
ಓಣಿಯ ಜನ ಜಮಾಯಿಸಿದ್ದರು ಮರುದಿನ ಅವನ ಮನೆ ಮುಂದೆ. ಹಾಗೆಯೇ ಟಿವಿ ಚಾನಲ್‍ನವರ ವ್ಯಾನುಗಳು ಆ ಕಿರಿದಾದ ಓಣಿಯಲ್ಲಿ ತುಂಬಿಕೊಂಡವು. ರಿಪೋರ್ಟರುಗಳು ಪ್ರಶ್ನೆಗಳ ಮಳೆ ಸುರಿಸುತ್ತಿದ್ದರು. ಉತ್ತರ ಕೊಡಲಾರದೆ ದಸ್ತಗೀರ ಕಂಗಾಲಾಗಿದ್ದ. ಅವನ ಅಳಲು ಕೇಳುವ ಗರಜು ಅವರಿಗಿರಲಿಲ್ಲ. ಹೆಚ್ಚಿನ ಚಾನೆಲನವರು ತಮ್ಮ ವಿಶೇಷ ಟಿ ಪ್ಪಣಿಗಳ ಜೊತೆಗೆ ಸುದ್ದಿ ಬಿತ್ತರಿಸುತ್ತಿದ್ದರು.ಅವರ ಮಾತಿನಲ್ಲಿ ಹೇಗೆ ಅಮಾಯಕ ಮುಸ್ಲಿಂಯುವಕರು ಸುಲಭವಾಗಿ ದಾಳಗಳಾಗುತ್ತಿದ್ದಾರೆ ಅಪ್ಪ ಅಮ್ಮ ಅಮಾಯಕರಗಳಾಗಿ ನಟಿಸುತ್ತಾರೆ ಇತ್ಯಾದಿ ತಮಗೆ ತಿಳಿದಂತೆ ವರದಿ ಮಾಡುತ್ತಿದ್ದರು. ಗುಡೂಸಾಬನೂ ಟಿವಿ ಕೆಮರಾಗಳ ಮುಂದೆ ಹೇಳುತ್ತಿದ್ದ ಹೇಗೆ ತಾನು ದಸ್ತಗೀರನಿಗೆ ವಾರ್ನಮಾಡಿದ್ದು ಅವ ಕೇಳದೇ ಹೋದದ್ದು ಇತ್ಯಾದಿ ಹೇಳುತ್ತಿದ್ದ. ಆಘಾತಕ್ಕಿ ಒಳಗಾದ ದಸ್ತಗೀರ ಬಾಗಿಲು ಬಂದು ಮಾಡಿ ರೂಮುಸೇರಿದವ ಬಿಕ್ಕಿಬಿಕ್ಕಿ ಆಳಲು ಸುರುವಿಟ್ಟ. ಯಾಕೋ ಅವನಿಗೆ ದತ್ತಣ್ಣಿ ನೆನಪಾದ..ತನ್ನ ಅಳಲನ್ನು ಕೇಳಿಸಿಕೊಳ್ಳುವವ ಅವನೊಬ್ಬನೇ ಮಾತ್ರ ಈ ಭಾವನೆ ಬಲವಾಯಿತು. ಆದರೆ ದತ್ತಣ್ಣಿ ನಂಬುತ್ತಾನೆಯೇ ಮಗನ ಕಾರಭಾರ ತನಗೇನೂ ಗೊತ್ತಿಲ್ಲ ಎಂಬ ಸತ್ಯ ಅವನಾದರೂ ನಂಬುತ್ತಾನೆಯೇ..ಮುಖ್ಯವಾಗಿ ಪಾಲನೆಯಲ್ಲಿ ಯಾವ ಕೊರತೆ ಕಂಡಿತು ಅಸೀಫ ಹೀಗೆಕೆ ಬದಲಾದ. ಹೆತ್ತವರ ಸಂಕಟ ಯಾಕೆ ಹೀಗೆ ಮಕ್ಕಳಿಗೆ ಅರ್ಥ ಆಗುವುದಿಲ್ಲ. ಅವನಲ್ಲಿ ಪ್ರಶ್ನೆಗಳಿದ್ದವು. ಅವನಿಗೆ ಗೊತ್ತು ದತ್ತಣ್ಣಿಯ ಬಳಿಯೂ ಉತ್ತರ ಇರುವುದಿಲ್ಲ ಆದರೆ ತನ್ನ ಅಳಲು ಕೇಳಲು ಅವ ಕಿವಿಯಾದನು ಎಂಬ ನಿರೀಕ್ಷೆ ಅವನಲ್ಲಿ ಅವನ ಹೆಗಲ ಮೇಲೆ ತಲೆಇಟ್ಟು ಅಳಬಹುದು ಮನಸ್ಸು ಹಗುರುಮಾಡಿಕೊಳ್ಳಬಹುದು..ನಿರೀಕ್ಷೆ ಹೊಸ ಬೆಳಕು ಮೂಡಿಸಿತು. ನಮ್ಮ ನಡುವೆ ಗೋಡೆಗಳನ್ನು ಬೆಳೆಯಲು ಬಿಟ್ಟು ತಪ್ಪುಮಾಡಿಯಾಗಿದೆ..ಈಗ ಗೋಡೆ ಒಡೆದು ಕೈ ಚಾಚಬೇಕು ಮತ್ತು ತಾನು ಚಾಚಿದ ಕ್ಯೆ ಹಿಡಿಯಲು ದತ್ತಣ್ಣಿನೂ ಮುಂದೆ ಬರಬಹುದೇನೋ…ಈ ಯೋಚನೆಯಿಂದ ದಸ್ತಗೀರ ನಿರಾಳವಾದ. ಅಂತೆಯೇ ಬಂದ ದತ್ತಣ್ಣಿಯ ಫೋನು ಅವನ ಆಸೆಗೆ ಇಂಬು ನೀಡಿತ್ತು. ಬರಲಿರುವ ಗೆಳೆಯನ ದಾರಿ ಕಾಯುತ್ತ ಅವ ಕುಳಿತ.