ಎಷ್ಟೊ ವರ್ಷಗಳ ಮ್ಯಾಲೆ ಅಜ್ಜಿ ಊರಿಗೆ ಬಂದಿದ್ದೆ. ಖುಷಿ ಆಗಿತ್ತ ಆಕಿಗೆ ನನ್ನಕಿಂತಾ, ಮರಿಮೊಮ್ಮಕ್ಕಳನ್ನ ನೋಡಿ. ನನ್ನ ಮದವಿ ಆದಮ್ಯಾಲೆ ಬಂದಿದ್ದೇನ ಇಲ್ಲಾ ನಾನು. ಆಡಿಬೆಳೆದ ಊರಿನ ಮಣ್ಣಿನ ವಾಸನಿಗೆ ಮನಸು ಅರಳಿತ್ತು. ನನಗ ಅಜ್ಜಿ ಊರಾಗ ಭಾಳ ಮಂದಿ ಗೇಳತ್ಯಾರ ಇದ್ರು. ಎಷ್ಟು ನಕ್ಕು ನಲಿತಿದ್ವಿ ದಿನಾಪೂರ್ತಿ. ವಾಪಸ್ ಊರಿಗೆ ಹೋಗಬೇಕಾದ್ರ ಮುಂದಿನ ಸರತೆ ಬರೊತನಕಾ ಆಗೊವಷ್ಟು ಖುಷಿಯ ಕ್ಷಣಗಳ ನೆನಪಿನ ದೊಡ್ಡ ಗಂಟನ್ನ ಮನಸಿನ್ಯಾಗ ಹೊತಗೊಂಡ ಹೋಗ್ತಿದ್ದೆ. ಅದನ್ನೆಲ್ಲಾ ಈಗ ನೆನಪ ಮಾಡಕೊಂಡ್ರ ಎಷ್ಟ ಖುಶಿ ಆಗತದ. ನಮಗ ಸಿಕ್ಕ ಜೀವನದ ಆ ಸುಂದರ ಅವಕಾಶನ ತೄಪ್ತಿಯಾಗಿ ಅನುಭವಿಸಿದ್ವಿ ಅನಿಸ್ತದ.
ನಾ ಯಾವಾಗಲು ಸೂಟಿಯೊಳಗ ಧಾರವಾಡಕ್ಕ ಅಜ್ಜಿ ಮನಿಗೆ ಹೊಗ್ತಿದ್ದೆ. ಸಂಜಿಮುಂದ ಮಳಿ ಬರೋ ಲಕ್ಷಣ ಎನರೆ ಕಾಣಸ್ತು ಅಂದ್ರ ನಾವೆಲ್ಲಾ ಗೆಳತ್ಯಾರು ಮುದ್ದಾಮ ವಾಕಿಂಗ್ ಹೋಗತಿದ್ವಿ.ಸಂಜಿ ಮಳಿ ಜಿಟಿ ಜಿಟಿ ಶುರುವಾಗೆ ಬಿಡತಿತ್ತು,ಹಂಗ ಮಳಿಯೊಳಗ ಹರಟಿ ಹೊಡಕೊತ್, ಮಾತಾಡಕೊತ ಐಸ್ ಕ್ರೀಮ್ ಕಾರ್ನರ್ ದಾಗ ಐಸ್ ಕ್ರೀಮ್ ತಿನ್ನತಿದ್ವಿ.ಆ ಹೊತ್ತನ್ಯಾಗ ಆ ಅಂಗಡಿಯಾವ ಅಷ್ಟ ಅಲ್ಲಾ ಆಜು ಬಾಜು,ಹೋಗೊವರು ಬರೊವರು ಸುದ್ಧಾ ಇವಕ್ಕೇನ ಹುಚ್ಚ್ ಗಿಚ್ಚ ಹಿಡದದೇನ ಅಂತ ನಮ್ಮನ್ನ ಘಾಬರ್ಯಾಗಿ ನೋಡ್ತಿದ್ರು.ಹಂಗ ಅವರು ನಮ್ಮನ್ನ ನೋಡಿದಾಗ ನಾವು ಮುದ್ದಾಮ ಜೋರಾಗಿ ನಗತಿದ್ವಿ.ನೀವ ಏನಾ ಅನ್ರಿ ಈ ರಪಾ ರಪಾ ಬೀಳೊ ಮಳಿಯೊಳಗ ತೊಯ್ಸ್ಕೊತ ಐಸ್ ಕ್ರೀಮ್ ತಿನ್ನೊದ್ರಾಗ ಮತ್ತ ಬಿಸಿ ಬಿಸಿ ಚಹಾ ಕುಡಿಯೊದ್ರಾಗ ಭಾಳ ಮಜಾ ಇರ್ತದ.
ಹಿಂಗ ಯಾರರ ನೊಡ್ಲಿ, ಎನರೆ ಬಯ್ಯಲಿ ನಮಗ ಫರಕನ ಬಿಳತಿದ್ದಿಲ್ಲಾ. ಹಂಗ ಮಾತಾಡಕೊತ ಮಳ್ಯಾಗ ನಮ್ಮ ವಾಕಿಂಗ್ ಮುಂದವರಿಸ್ಕೊತ ಉಳವಿ ಬಸಪ್ಪನ ಗುಡಿ ಹತ್ರ ಗೋಂಜಾಳ ತೆನಿ ಮಾರವ ಇರತಿದ್ದಾ,ಅವನ ಕಡೆ ಎಳೆವ ಗೊಂಜಾಳ ಸುಡಿಸ್ಕೊಂಡ ತಿನಕೊತ, ಹರಟಿಹೊಡ್ಕೊತ ಮನಿಗೆ ಬರತಿದ್ವಿ.ಮನ್ಯಾಗ ಅಜ್ಜಿ ಕಡೆ ಒಂದಸ್ವಲ್ಪ ಮಂತ್ರಪುಷ್ಪ ಉದರತಿದ್ವು." ಮಳ್ಯಾಗ ನೆನದ ಎನಕೇನರೆ ಮಾಡ್ಕೊಂಡ ಕುತ್ರ ನಿಮ್ಮ ಅಮ್ಮಗ ಎನಂತ ಉತ್ತರಾ ಕೊಡ್ಲಿ ನಾ ಹುಚ್ಚ ಖೋಡಿ "ಅಂತ ಬಯತಿದ್ಲು. ಆದರ ಆವಾಗ ಆ ಹದಿಹರಯದ ವಯಸ್ಸನ ಹಂಗಿರತದ ಎನೊ,ಯಾರ ಎನ ಅಂದ್ರು,ಬಯ್ದ್ರು ತಲ್ಯಾಗ ಹೊಗತಿರಂಗಿಲ್ಲಾ.ಹುಚ್ಚ ಮನಸ್ಸು ತನಗ ಹೆಂಗಬೇಕೊ ಹಂಗ ಕುಣಿತಿರ್ತದ.
ಉಳವಿ ಬಸಪ್ಪನ ಗುಡಿ ಅಂದಕೂಡಲೆ ಯಾಕೊ ಗೊಂಜಾಳದ ಹುಡುಗಾ ಭಾಳ ನೆನಪಾಗ್ಲಿಕತ್ತಾ. ನೆನಪಿನ ಹಂದರದೊಳಗ ಎಲ್ಲೊ ಒಂದ ಕಡೆ ಸಿಕ್ಕಿ ಹಾಕ್ಕೊಂಡಾಂವಾ ಒಮ್ಮೆಲೆ ಧುತ್ತಂತ ಮ್ಯಾಲೆ ಹಾರಿಬಂದು ಕಣ್ಣಮುಂದ ಸುಳಿದಾಡಿದಂಗ ಅನಿಸ್ಲಿಕತ್ತಿತ್ತು.
ದಿನಾ ನಾವು ಗುಡಿ ಹತ್ರ ವಾಕಿಂಗ ಹೋದಾಗ ನಮ್ಮನ್ನೆಲ್ಲಾ ಮಂದಹಾಸದಿಂದ ಸ್ವಾಗತಿಸತಿದ್ದಾ. ಆದ್ರ ಒಂದಿನಾನು ಮಾತಾಡಿರಲಿಲ್ಲ. ಗೊಂಜಾಳ ತಿನಕೋತ ನಾವು ಹರಟಿ ಹೊಡೆಯೊದನ್ನ ನೋಡಕೋತ ನಿಂತಿರತಿದ್ದಾ. ಆದ್ರ ಆಂವಾ ನಂಗ ಮಾತ್ರ ಆರಿಸಿ ಆರಿಸಿ ಎಳೆ ಗೊಂಜಾಳ ಹುಡುಕಿ ಸುಟ್ಟು ಕೊಡೊದು ಸಾವಕಾಶಾಗಿ ಎಲ್ಲಾರ ಗಮನಕ್ಕ ಬರಲಿಕತ್ತು. ಎಲ್ಲಾರು ನನ್ನ ಕಾಡೊದ ನೋಡಿ ನಾನು ಆಂವನ್ನ ಗಮನಿಸ್ಲಿಕತ್ತೆ. ನಂಗು ಖರೆ ಅನಿಸ್ತು. ನನ್ನ ನೋಡಿದಾಗ ಅದ್ಯಾವುದೊ ತೃಪ್ತಿಯ ಮಂದಹಾಸ ಆಂವನ ಮುಖದಾಗ ಕಾಣಿಸ್ತಿತ್ತು. ಆಂವನ ಮಿಂಚುವ ಕಣ್ಣು,”ನಿನ್ನ ನೋಡಿ ನನಗ ಖುಷಿ ಅಗೇದ “ ಅಂತ ಹೇಳಲಿಕತ್ತಾವ ಅನಿಸ್ತಿತ್ತು. ನಂಗ ಇನ್ನು ನೆನಪದ ಆವತ್ತ ನಾವೆಲ್ಲಾ ಮಳ್ಯಾಗ ತೊಯಿಸಿಕೊಂಡು ಗೊಂಜಾಳ ತಿನ್ನಕೋತ ನಿಂತಾಗ, ಆಂವನ ಮುಖದೊಳಗಿನ ಆ ಚಡಪಡಿಕೆಯ ಭಾವ. ಅಲ್ಲೆ ಇದ್ದ ಗಿಡದ ಕೇಳಗ ಹೋಗಬಹುದಿತ್ತು ಆಂವಾನು. ಆದ್ರ ತನ್ನ ಗೊಂಜಾಳ ಗಾಡಿ ಜೋಡಿ ತೊಯಿಸಿಕೋತ ಹಂಗ ನಿಂತಿದ್ದಾ.
ಪ್ರತಿ ವರ್ಷ ನಾ ಅಜ್ಜಿ ಮನಿಗೆ ಬಂದಾಗೊಮ್ಮೆ ದಿನಾ ಗೇಳತ್ಯಾರ ಜೊಡಿ ಉಳವಿ ಬಸಪ್ಪನ ಗುಡಿ ಗೆ ಹೋಗತಿದ್ದೆ. ಆ ಗೊಂಜಾಳದ ಹುಡುಗಾ ನನ್ನ ಅದೇ ಮಂದಹಾಸದಿಂದ ಎದುರುಗೊಳ್ಳತಿದ್ದಾ. ಈ ನೆನಪಿನ ಹಂದರದ ಬಲೆಯಿಂದ ಬಿಡಿಸಿಕೊಂಡು ಹೊರಗ ಬಂದೆ. ನನ್ನ ಮನಿಸಿನ್ಯಾಗ ಅರಳಿಸಿದ ನೆನಪಿನ ಹೂವುಗಳಿಂದ ಮನಸ್ಸು ಹೂವಿನಂಗ ಹಗುರ ಆಗಿತ್ತು.
ಸಂಜಿಮುಂದ ಮಕ್ಕಳನ ಕರಕೊಂಡು ಉಳವಿ ಬಸಪ್ಪನ ಗುಡಿಗೆ ಹೋದೆ. ಒಂಚೂರು ಬದಲಾಗಿರಲಿಲ್ಲ. ಅಲ್ಲೆ ಹೊರಗ ಕೂತು ಕಣ್ಣಾಡಿಸಿದೆ. ಎಲ್ಲಾದ್ರು ನನ್ನ ನೆನಪಿನ ತುಣುಕುಗೊಳು ಸಿಗ್ತಾವೆನೊ ಅಂತ. ಅಷ್ಟರೊಳಗ ನನ್ನ ಮಗಳು “ ಅಮ್ಮಾ ಗೊಂಜಾಳ ಕೊಡಸಮ್ಮಾ ಅಂತ ಕೇಳಿದ್ಲು. ನಂಗ ಆಶ್ಚರ್ಯ ಆತು. ಇಷ್ಟು ವರ್ಷದ ಮ್ಯಾಲೆ ಆಂವಾ ಇರಲಿಕ್ಕಿಲ್ಲಾ ಅನಿಸ್ತು. ಆದ್ರು ಒಂದು ಕೂತುಹಲಾ ನೋಡೊಣಂತ ಮಗಳು ತೋರಿಸಿದ ಕಡೆ ಹಣಿಕಿ ಹಾಕಿ ನೋಡಿದ್ರ, ಅದ ಗಿಡದ್ದ ಕೆಳಗ ಆವತ್ತಿನ ಆ ಗೊಂಜಾಳದ ಹುಡುಗನ ಇದ್ದಾ. ಹತ್ತಿರ ಹೋದೆ, ಆಂವ ನನ್ನ ಗುರುತು ಹಿಡಿದಾ. ಮತ್ತದ ಮಂದಹಾಸ, ನಿನಗಾಗಿ ಕಾಯ್ದು ಹೈರಾಣ ಆಗೇನಿ ಅನ್ನೊ ಭಾವಗಳು ಆ ಮಿಂಚಿನ ಕಣ್ಣಿನ್ಯಾಗ ಕಾಣಲಿಕತ್ತಿದ್ವು. ಸಮಯ ತನ್ನ ಚಿನ್ಹೆ ತೊರಿಸಿತ್ತು. ಸ್ವಲ್ಪ ಪ್ರೌಢತೆ ಬಂದಿತ್ತು ಆಂವನ ಮುಖದೊಳಗ. ಅಲ್ಲಲ್ಲೆ ಕೂದಲ ಬೆಳ್ಳಗಾಗಿದ್ವು. ನನ್ನ ಮಕ್ಕಳಿಗಾಗಿ ಎಳೆಯ ಗೊಂಜಾಳ ತೆನಿ ಹುಡುಕಿ ಸುಟ್ಟು ಕೊಟ್ಟಾ. ಮನಿಗೆ ಬರಬೇಕಾದ್ರ ಹೊಳ್ಳಿ ಆಂವನ ಕಡೆ ನೋಡಿದೆ, ನಾ ಹೋಗೊದನ್ನ ನೋಡಕೊತ ನಿಂತ ಆಂವನ ಕಣ್ಣಿನ ಮಿಂಚೊ, ಕಣ್ಣಿರೊ ಗೊತ್ತಾಗಲಿಲ್ಲಾ, ಆಂವನ ಮುಖದ ಮಂದಹಾಸದೊಳಗ “ನೀನಗಾಗಿ ನಾ ಮತ್ತೆ ಮತ್ತೆ ಕಾಯ್ತಿನಿ” ಅನ್ನೊ ಭಾವ ಇತ್ತು. ಇದು ಪ್ರೀತಿನೊ, ಆರಾಧನೆಯೊ, ಮೆಚ್ಚುಗೆಯೋ, ಹುಚ್ಚೊ ಒಂದು ತಿಳಿಲಾರದ ಗೊಂದಲ ಬಿಡಿಸಿಕೊತ ಮನಿ ಕಡೆ ಹೆಜ್ಜಿ ಹಾಕಿದೆ..
******
ಚೆನ್ನಾಗಿದೆ ಮೇಡಂ…… ಲೇಖನ.
ಮಸ್ತ್ ಬರದೀರ ಸುಮನ್ ಜೀ, ಎಂದಿನಂತೆ. 🙂
heart touching
lovely memories isnt it of Dharwad
ಅವಸರ ಪ್ರಕೃತಿಯ ನಾನು, ನಿಮ್ಮ ಕನ್ನಡ ತಲೆಯೊಳಗೆ ಸರಿಯಾಗಿ ಹೋಗುವುದಿಲ್ಲ ಎಂದು ಓದುತ್ತಿರಲಿಲ್ಲ. ಈ ದಿನ ಓದಿದೆ. ಈವಾಗ ಹಿಂದಿನ ಸಂಚಿಕೆಗಳನ್ನು ನೋಡಬೇಕೆನಿಸುತ್ತದೆ. ನಿಮ್ಮ ಭಾಷೆಯಲ್ಲಿ ಹೇಳುವೆ, ಛಲೋದಾಗ ಬರೆದಿದ್ದೀರ.
ಎಳೆಯ ಪ್ರಾಯದ ಭಾವನೆಗಳನ್ನು ಸರಳವಾಗಿ, ಸುಂದರವಾಗಿ ಬರೆದಿದ್ದೀರಿ. ಅಭಿನಂದನೆಗಳು.
ಅಯ್ಯೋ ಪಾಪ ಹೇಳಿಕೊಳ್ಳಲಾಗದೆ ಅದೆಷ್ಟು ಚದಪಡಿಸಿದನೋ ಆ ಹುಡುಗ…:)
Lekhanavannu ishtapattu haraisida yellarigu nanna Dhanyavadagalu….
ಗೊಂಜಾಳದ ಹುಡುಗನ ಕತೆ ಚೆನ್ನಾಗಿದೆ!
ನಿಮ್ಮ ಬರುವಣಿಗೆ ಚನ್ನಾಗಿದೆ. ಯಾವುದೇ ವಿಷಯ ಸಿಕ್ಕರೂ ಅದಕ್ಕೆ ಅಕ್ಷರಕ್ಕಿಳಿಸುವ ಗತ್ತುಗಾರಿಕೆ ನಿಮ್ಮಲ್ಲಿದೆ. ಹೀಗೆ ನಿಮ್ಮ ಬರುವಣಿಗೆ ಸಾಗಲಿ………….