ವಾಸುಕಿ ಕಾಲಂ

ಗೆಸ್ ಹೂ ಇಸ್ ಕಮಿಂಗ್ ಟು ಡಿನ್ನರ್: ವಾಸುಕಿ ರಾಘವನ್ ಅಂಕಣ

 
ಆಗಿನ್ನೂ ಅಮೇರಿಕಾದಲ್ಲಿ ವರ್ಣಬೇಧ ಹೆಚ್ಚು ಇದ್ದ ಕಾಲ. ಬಿಳಿಯರು ಮತ್ತು ಕರಿಯರು ಬಸ್ಸುಗಳಲ್ಲಿ ಒಟ್ಟಿಗೆ ಕೂರುವಂತಿರಲಿಲ್ಲ. ಇಬ್ಬರ ನಡುವೆ ಮದುವೆಯಂತೂ ದೂರದ ಮಾತು, ಸುಮಾರು ರಾಜ್ಯಗಳಲ್ಲಿ ಅದು ಶಿಕ್ಷಾರ್ಹ ಅಪರಾಧ ಕೂಡ ಆಗಿತ್ತು. ಅದೇ ಸಮಯದಲ್ಲಿ ಬಿಡುಗಡೆಯಾದ ಸ್ಟಾನ್ಲಿ ಕ್ರೇಮರ್ ನಿರ್ದೇಶನದ “ಗೆಸ್ ಹೂ ಇಸ್ ಕಮಿಂಗ್ ಟು ಡಿನ್ನರ್” ಈ ವರ್ಣಬೇಧ ಮತ್ತು ಜನರಲ್ಲಿರುವ ತಾರತಮ್ಯದ ಬಗೆಗಿನ ಚಿತ್ರಣ ಹೊಂದಿದೆ.

ಜೋಯೀ ಮುಕ್ತ ಮನಸ್ಸಿನ ಹದಿಹರೆಯದ ಹುಡುಗಿ. ಪತ್ರಿಕೋದ್ಯಮಿ ತಂದೆ ಮ್ಯಾಟ್ ಮತ್ತು ಅಮ್ಮ ಕ್ರಿಸ್ಟಿನಾ ಇವಳನ್ನು ತುಂಬಾ ಪ್ರಗತಿಪರವಾಗಿ ಬೆಳೆಸಿರುತ್ತಾರೆ. ಬೇರೆ ಜನಾಂಗಗಳ ಬಗ್ಗೆ ತಿರಸ್ಕಾರ, ಅಸಹನೆ ಇದ್ದ ಕಾಲದಲ್ಲೂ, ಜನರನ್ನು ಸಮಾನವಾಗಿ ಕಾಣಬೇಕು, ಅವರ ಮೈಬಣ್ಣದಿಂದ ಅವರನ್ನು ಅಳೆಯಬಾರದು ಅನ್ನುವ ಮೌಲ್ಯಗಳನ್ನು ಅವಳಿಗೆ ಹೇಳಿಕೊಟ್ಟಿರುತ್ತಾರೆ. ಒಂದು ದಿನ ಅಚಾನಕ್ಕಾಗಿ ಜೋಯೀ ತನ್ನ ಪ್ರಿಯತಮ ಜಾನ್ ಅನ್ನು ತನ್ನ ಅಪ್ಪ ಅಮ್ಮನಿಗೆ ಪರಿಚಯಿಸಲು ಮನೆಗೆ ಕರೆತರುತ್ತಾಳೆ. ಆತ ಉನ್ನತ ಸಂಶೋಧನೆಗಳನ್ನು ಮಾಡಿರುವ ಡಾಕ್ಟರ್, ಸಜ್ಜನ. ಆದರೆ ಅವನು ಬಣ್ಣ ಕಪ್ಪು!

ತನ್ನ ಅಪ್ಪ ಅಮ್ಮ ಸುಲಭವಾಗಿ ತಮ್ಮ ಸಂಬಂಧವನ್ನು ಒಪ್ಪುತ್ತಾರೆ ಅಂದುಕೊಂಡಿದ್ದ ಜೋಯೀಗೆ ಅವರ ಹಿಂಜರಿಕೆ ಕಂಡು ಅಚ್ಚರಿಯಾಗುತ್ತದೆ. ಅವಳ ಅಪ್ಪ ಅಮ್ಮ ಎಂದೂ ಕರಿಯರನ್ನು ಬೇಧಭಾವದ ದೃಷ್ಟಿಯಿಂದ ನೋಡಿರುವುದಿಲ್ಲ, ಆದರೆ ಒಬ್ಬ ಕರಿಯ ತಮ್ಮ ಮನೆಗೆ ಅಳಿಯನಾಗಿ ಬರುತ್ತಾನೆಂಬುದು ತಮಗೇ ಆಶ್ಚರ್ಯವಾಗುವಂತೆ ಅವರನ್ನು ಬಾಧಿಸುತ್ತದೆ. ನಿಮ್ಮ ಒಪ್ಪಿಗೆಯಿದ್ದರೆ ಮಾತ್ರ ನಿಮ್ಮ ಮಗಳನ್ನು ಮದುವೆಯಾಗುತ್ತೀನಿ ಅಂತ ಜಾನ್ ಖಡಾಖಂಡಿತವಾಗಿ ಹೇಳಿಬಿಡುತ್ತಾನೆ. ವಿಧಿಯಿಲ್ಲದೇ ಜಾನ್ ಅಪ್ಪ ಅಮ್ಮರನ್ನೂ ಅಲ್ಲಿಗೆ ಕರೆಯಿಸಬೇಕಾಗುತ್ತದೆ. ವಿಚಿತ್ರವೆಂದರೆ, ಅವರೂ ಈ ಸಂಬಂಧವನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ.

ತಮ್ಮಲ್ಲಿರುವ ದ್ವಂದ್ವವನ್ನು ಅರ್ಥ ಮಾಡಿಕೊಳ್ಳಲು ತೊಳಲಾಡುವ ಜೋಯೀಯ ಅಪ್ಪ ಅಮ್ಮನ ದೃಶ್ಯಗಳು ಬಹಳವಾಗಿ   ಮನಮಿಡಿಯುವಂತಿದೆ. ಮನೆಯಲ್ಲಿ ತಮ್ಮ ಮಗಳ ಪ್ರಿಯಕರನ ಆಗಮನದಿಂದ ಉಂಟಾದ ಮುಜುಗರದ ಪರಿಸ್ಥಿತಿಯಿಂದ ಹೊರಬರಲು ಮ್ಯಾಟ್ ಮತ್ತು ಕ್ರಿಸ್ಟಿನಾ ಆಚೆ ಒಂದು ಡ್ರೈವ್ ಗೆ ಹೋಗುತ್ತಾರೆ. ತಾವು ಮಾಮೂಲಿಯಾಗಿ ಹೋಗುವ ಐಸ್ ಕ್ರೀಂ ಅಂಗಡಿಯ ಬಳಿ ಕಾರ್ ನಿಲ್ಲಿಸುತ್ತಾರೆ. ಮ್ಯಾಟ್ ಗೆ ತಾನು ಸಾಮಾನ್ಯವಾಗಿ ತಿನ್ನುವ ಫ್ಲೇವರ್ರಿನ ಐಸ್ ಕ್ರೀಂ ಸಿಗಲಿಲ್ಲ ಅಂತ ಸ್ವಲ್ಪ ಗೋಳಾಡುತ್ತಾನೆ. ಕಡೆಗೆ ವಿಧಿಯಿಲ್ಲದೇ ಹೊಸದೊಂದು ಫ್ಲೇವರ್ ಕೊಳ್ಳುತ್ತಾನೆ. ಗೊಣಗಾಡಿಕೊಂಡೇ ತಿನ್ನಲು ಶುರುಮಾಡುವ ಅವನು ಮುಗಿಸುವ ಹೊತ್ತಿಗೆ “ಅರೆ, ಬೇರೆಯಾದರೂ ಇದೂ ಕೂಡ ಒಂಥರಾ ಚನ್ನಾಗೇ ಇತ್ತು” ಅಂತ ಹೇಳುತ್ತಾನೆ. ಹೇಗೆ ನಾವು ನಮ್ಮದೇ ಪೂರ್ವಾಗ್ರಹಗಳಲ್ಲಿ ಬಂಧಿತರಾಗಿರುತ್ತೇವೆ, ಮತ್ತು ಮುಕ್ತಮನಸ್ಸನ್ನು ಇಟ್ಟುಕೊಂಡಾಗ ಹೊಸದನ್ನು ಸ್ವೀಕರಿಸಲು ಸಾಧ್ಯ ಅಂತ ಮನಗಾಣುತ್ತಾನೆ.

ಚಿತ್ರದಲ್ಲಿ ರೇಸಿಸಮ್ಮಿನ ಇನ್ನೊಂದು ಮುಖದ ಚಿತ್ರಣವೂ ಇದೆ, ಅದು ಕರಿಯರ ದೃಷ್ಟಿಕೋನದಿಂದ. ಈ ಮದುವೆಯ ವಿಷಯ ತಿಳಿದಾಗ ಜಾನ್ ಅಪ್ಪ ಅಮ್ಮ ಕೂಡ ಮೊದಲಿಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. “ಸಾಮಾಜಿಕವಾಗಿ” ಮೇಲು ವರ್ಗದ ಹುಡುಗಿಯನ್ನು ಮದುವೆಯಾಗುತ್ತಿರುವ ಬಗ್ಗೆ ಅವರಿಗೆ ತಕರಾರು ಇರಬಾರದಿತ್ತು ಅಂದುಕೊಳ್ಳುತ್ತೇವೆ, ಆದರೆ ಪ್ರಚಲಿತ ಸಾಮಾಜಿಕ ಏರ್ಪಾಡನ್ನು ಬುಡಮೇಲು ಮಾಡಲು ಅವರೂ ಇಷ್ಟಪಡುವುದಿಲ್ಲ. ಹಾಗೆಯೇ ಜಾನ್ ಆಗಮನವನ್ನು ಅತೀ ತೀವ್ರವಾಗಿ ವಿರೋಧಿಸುವವಳು ಜೋಯೀ ಮನೆಯ ಕೆಲಸದಾಕೆ. ವಿಪರ್ಯಾಸ ಅಂದರೆ ಆಕೆ ಕೂಡ ಕಪ್ಪು ಹೆಂಗಸೇ. ಈ ಮದುವೆಯ ವಿಷಯ ಅವಳಿಗೆ ನೇರವಾಗಿ ಸಂಬಂಧಿಸಿಲ್ಲದಿದ್ದರೂ, ಅವಳ ತೀವ್ರ ನಿಲುವು ವಿಡಂಬನಾತ್ಮಕವಾಗಿದೆ. ಶೋಷಣೆಯ ಸ್ವರೂಪವೇ ಅಂತಹುದು, ಅದು ಯಾವ ಪ್ರಮಾಣದಲ್ಲಿ ಘಾಸಿ ಮಾಡಿರುತ್ತದೆ ಅಂದರೆ ಬದಲಾವಣೆಯ ಸಮಯ ಬಂದಾಗ ಶೋಷಿತರೇ ಅದನ್ನು ಒಪ್ಪಿಕೊಳ್ಳುವುದರಲ್ಲಿ ಹಿಂದೇಟು ಹಾಕುತ್ತಾರೆ!

ಚಿತ್ರದಲ್ಲಿ ನನ್ನ ಫೇವರಿಟ್ ಸೀನ್ ಇದು. ಇದನ್ನು ಬಹುಷಃ ಬಹಳಷ್ಟು ಜನ ಭಾರತೀಯರು ಒಪ್ಪಲಿಕ್ಕಿಲ್ಲ. ಜಾನ್ ಅಪ್ಪ ಅವನೊಂದಿಗೆ ಮಾತನಾಡುತ್ತಾ, ನಿನ್ನನ್ನು ನಾನು ಎಷ್ಟು ಕಷ್ಟ ಪಟ್ಟು, ತ್ಯಾಗಗಳನ್ನು ಮಾಡಿ ಬೆಳೆಸಿದ್ದೇನೆ, ನೀನು ಆ ಬಿಳೀ ಹುಡುಗಿಯನ್ನು ಮದುವೆಯಾಗುವುದರಿಂದ ನನಗೆ ನೋವು, ನಿರಾಶೆ ಉಂಟಾಗುತ್ತದೆ ಅಂತ ಹೇಳುತ್ತಾನೆ. ಆದರೆ ಜಾನ್ ಈ ಎಮೋಷನಲ್ ಬ್ಲಾಕ್ಮೇಲ್ ಗೆ ಬೀಳುವುದಿಲ್ಲ. ನೀವು ನನಗಾಗಿ ಏನು ಮಾಡಿದ್ದೀರೋ ಅದು ನಿಮ್ಮ ಕರ್ತವ್ಯ, ನೀವು ಪಟ್ಟ ಕಷ್ಟಗಳಿಗೆ ನಾನು ಹೊಣೆಯಲ್ಲ. ಹಾಗೆಯೇ ನಾನು ಮುಂದೆ ಹುಟ್ಟುವ ನನ್ನ ಮಗುವಿಗೆ ತ್ಯಾಗ ಮಾಡುತ್ತೀನಿ, ಕಷ್ಟ ಪಡುತ್ತೀನಿ, ಅದು ಮಾತ್ರವೇ ನನ್ನ ಕರ್ತವ್ಯ ಮತ್ತು ಜವಾಬ್ದಾರಿ ಅಂತ ಹೇಳುತ್ತಾನೆ!

ಮ್ಯಾಟ್ ಪಾತ್ರದಲ್ಲಿ ಸ್ಪೆನ್ಸರ್ ಟ್ರೇಸಿ, ಕ್ರಿಸ್ಟಿನಾ ಪಾತ್ರದಲ್ಲಿ ಕ್ಯಾಥೆರೀನ್ ಹೆಪ್ಬರ್ನ್, ಜಾನ್ ಪಾತ್ರದಲ್ಲಿ ಸಿಡ್ನಿ ಪಾಟ್ಯರ್ ಒಬ್ಬರನ್ನೊಬ್ಬರು ಮೀರಿಸುವ ಅಭಿನಯ. ಚಿತ್ರೀಕರಣದ ಸಮಯದಲ್ಲಿ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಪೆನ್ಸರ್ ಟ್ರೇಸಿ ಚಿತ್ರೀಕರಣ ಮುಗಿದ ಎರಡು ವಾರಕ್ಕೆ ಅಸು ನೀಗಿದ್ದರು. ಒಂಭತ್ತು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದ ಟ್ರೇಸಿ, ಹೆಪ್ಬರ್ನ್ ನಿಜಜೀವನದಲ್ಲೂ ಒಳ್ಳೆಯ ಗೆಳೆಯರಾಗಿದ್ದರು. ಗೆಳೆಯನ ಸಾವಿನ ನೋವನ್ನು ಭರಿಸಲಾಗದೇ ಹೆಪ್ಬರ್ನ್ ಈ ಚಿತ್ರವನ್ನು ನೋಡಲೇ ಇಲ್ಲವಂತೆ! ಅಂದು ಅಮೇರಿಕಾದಲ್ಲಿ ನಡೆದಿದ್ದ ವರ್ಣಬೇಧದ ಕಥೆ ಇಂದು ನಮ್ಮಲ್ಲಿನ ಅಂತರ್ಜಾತೀಯ ಕಥೆ ಆಗಬಹುದು. ಬೇರೆ ಬೇರೆ ಭಾಷಿಕರ ನಡುವಿನ ಕಥೆಯೂ ಆಗಬಹುದು. ಹಾಗಾಗಿ ತೆರೆಕಂಡು ನಲವತ್ತೈದು ವರ್ಷಗಳಾಗಿದ್ದರೂ ಈ ಚಿತ್ರದ ಪ್ರಸ್ತುತತೆ ಕೊಂಚವೂ ಕಮ್ಮಿಯಾಗಿಲ್ಲ!

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಗೆಸ್ ಹೂ ಇಸ್ ಕಮಿಂಗ್ ಟು ಡಿನ್ನರ್: ವಾಸುಕಿ ರಾಘವನ್ ಅಂಕಣ

  1. ವರ್ಣ ಭೇದ ನೀತಿಯನ್ನೇ ಬ೦ಡವಾಳವಾಗಿಸಿ ಬ೦ದ ಚಿತ್ರಗಳಲ್ಲಿ ಕೆಲವು ಮಾತ್ರ  ಅದರ ಸೂಕ್ಷ್ಮತೆಯನ್ನು ತೋರಿಸುವ ಚಿತ್ರಗಳು ಕಮ್ಮಿಯೇ. 
    ನೀವು ಹೇಳಿದ ಚಿತ್ರ ನೋಡಬೇಕು. 
    ಸಿಡ್ನಿ ಪಾಟ್ಯರ್  ನ ಇನ್ ದಿ ಹೀಟ್ ಆಫ್ ನೈಟ್ ನೋಡಿದ್ದೆ. ಕರಿ ಜನಾ೦ಗದ ಪೋಲಿಸನೊಬ್ಬ ಮರ್ಡರ್ ಇನ್ವೆಸ್ಟಿಗೇಷನ್ ನಲ್ಲಿ ಪಡುವ ಕಷ್ಟಗಳನ್ನು ಬಿಡಿಬಿಡಿಯಾಗಿ ತೋರಿಸುವ ಚಿತ್ರ. ಒಳ್ಳೆಯ ಚಿತ್ರ. ಇಷ್ಟವಾಗಿತ್ತು.  ಜನಾ೦ಗ ದ್ವೇಷದ ಬಗ್ಗೆ ಸ್ಪೈಕ್ ಲೀ ಯ 'ಡು ದ ರೈಟ್ ಥಿ೦ಗ್' ನಷ್ಟು ನಿಷ್ಕಾರುಣ ಹಾಗೂ ಪ್ರಾಮಣಿಕ ಚಿತ್ರ ಬೇರೆಲ್ಲೂ ನೋಡಿಲ್ಲ!!. ನನ್ನ ಫೇವರಿಟ್ ಇದು

Leave a Reply

Your email address will not be published. Required fields are marked *