ಪಂಜು-ವಿಶೇಷ

ಗೆಳೆಯಾ..: ನಂದಾದೀಪ, ಮಂಡ್ಯ

ಹಗಲು ರಾತ್ರಿಗಳನ್ನು ಒಂದುಗೂಡಿಸುವ ಒಂದು ಎಳೆಯೆಂದರೆ ಮುಸ್ಸಂಜೆ..! ಅಂತಹ ಮುಸ್ಸಂಜೆಯ ತಂಪಿನಲಿ ಕಡಲ ಮರಳಿನ ಮಡಿಲಿನಲಿ ಕುಳಿತು ಬೆರಳು ನಿನ್ನ ಹೆಸರನು ಗೀಚುವಾಗ ಆ ಅಲೆಗಳಿಗೂ ಅದೇನು ಸಂಕಟವೋ ಓಡೋಡಿ ಬಂದು ಅಳಿಸಲೆತ್ನಿಸುತ್ತವೆ..ಅಲೆಗಳು ಅಳಿಸಿದಷ್ಟು ನಿನ್ಪ ಹೆಸರನ್ನು ಮತ್ತಷ್ಟು ನನ್ನೆದೆಯಲ್ಲಿ ಗಟ್ಟಿಯಾಗಿ ಅಚ್ಚೊತ್ತುಕೊಳ್ಳಬೇಕೆಂಬ ಭಾವಗಳು ಮೂಡಿ, ಅಮೂಲ್ಯವಾದ ಕನಸುಗಳನ್ನು ಹುಟ್ಟು ಹಾಕಿಬಿಡುತ್ತದೆ..

ಇಂತಹ ಭಾವನೆಗಳು ಮನಸನ್ನು ಅರಳಿಸುವುದಕ್ಕಿಂತ ಎಲ್ಲಿ ನೀ ಸಿಗದೆ ನರಳಿಸಿಬಿಡುತ್ತದೊ ಎಂಬ ಭಯವೊಂದು ಕಾಡದೆ ಇರಲಾರದು.. ಆದರೆ ಒಲವೆನ್ನುವುದೆ ಹಾಗೆ ಅಲ್ಲವೆ ಒಂಟಿ ಹೆಜ್ಜೆಗಳ ಜೊತೆಯಾಗೊ ನೆರಳಿನಂತೆ ಬಿಸಿಲಶಾಖದಿ ತಂಗಾಳಿಯಾಗೊ ತಂಪಿನಂತೆ ಒಲವೆನ್ನುವ ಭಾವನೆ ಎಂತಹ ವೈಭವವನ್ನು ತಾಕಲಾರದು ಅಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ..

ನನ್ನೆಲ್ಲ ಕನಸು, ಕಲ್ಪನೆಗಳನ್ನು ನಿನಗಾಗಿಯೇ ಮೀಸಲಿಟ್ಟಿರುವಾಗ ಯಾವುದೆ ದಾರಿಯೂ ನನ್ನ ಪ್ರೇಮವನ್ನು ವಿಚಲಿತಗೊಳಿಲಾರದು..ಇದು ಮನದ ನಿವೇದನೆಯೊ ಕನಸುಗಳ ಒಟ್ಟಾರೆ ಕಲ್ಪನೆಯೋ ಸದಾ ಸದ್ದು ಮಾಡುತ್ತ ಖುದ್ದಾಗಿ ಬಂದು ಒಲವನ್ನು ಅರಸುವ ಹೃದಯದ ಕಾಳಜಿಯೋ..!? ನನ್ನ ಜೀವಕ್ಕಾಗಿ ಮಿಡಿಯುತ್ತಿದ್ದ ಉಸಿರಿಂದು ಮತ್ತೊಂದು ಜೀವದುಸಿರಿಗಾಗಿ ಹಂಬಲಿಸುತಿದೆ ಅಂದ್ರೆ ಇದು ಪ್ರೇಮವೋ..!? ಪ್ರೇಮ ಲೇಪಿತ ಸ್ನೇಹವೋ..!? ಒಡನಾಟ ಬಯಸುವ ಉತ್ಕಟ ಆಸೆಯೋ..?

ಆದರೆ ಮನ ಮಳೆಗಾಗಿ ಹಂಬಲಿಸಿ ಕಾದು ನಿಂತ ಭೂಮಿಯಂತೆ ನಿನ್ನ ಪ್ರೇಮದ ಸಾನಿಧ್ಯಕೆ ಹಾತೊರೆಯುತ್ತಿದ್ದರೂ ನಿನ್ನ ನಗುವಿನ ಮೋಡಗಳ ಚೆಲ್ಲಾಟವೊ ಅಥವಾ ಅರ್ಥವಾದರೂ ಮೌನದಿ ಸಲ್ಲಾಪವೋ .. ನಾನರಿಯೆ …ಕಾಯಿಸುವ ನಿನ್ನ ಒಲವಲಿ ತೋಯಿಸುವ ಸರದಿ ನನ್ನ ಪಾಲಿಗೆ ಎಂದಿದಿಯೋ …ನಿನ್ನ ಹೃದಯದ ಚಿಪ್ಪಲಿ ನನ್ನೊಲವು ಮುತ್ತಾಗಲು ಸ್ವಾತಿ ಮಳೆಯ ಕಾದಂತೆ ಕಾದಿದೆ.. ಕಾತರಿಸಿದೆ..!

ಅದೆಲ್ಲೊ ಅದ್ಯಾವಗಲೊ ಹುಟ್ಟಿಕೊಂಡಿತೊ ಒಲವು ಜೀವತಳೆಯಿತು ಮನವು.. ಚಿಗುರೊಡೆದು ಹಬ್ಬಿದೆ ನನಗೊ ವಿಚಿತ್ರ ಪ್ರತಿದಿನದ ಈ ಭಾವಗಳ ತಲ್ಲಣಗಳು ಅರಿವಾಗದೆ ನಾನು ಮತ್ತಷ್ಟು ಮೌನಿಯಾದೆ ಆ ಮೌನ ನಿನಗರ್ಥವಾದರೂ ನಿನ್ನ ಉತ್ತರ ಮಾತ್ರ ನಸುನಗುವೊಂದೆ..! ಗೊತ್ತು ಗೆಳೆಯ ನಿನ್ನಲು ಭಾವನೆಗಳು ಬೆಳಕಾಗಿ ಅಂಗಳದಿ ಹಾಲಬೆಳದಿಂಗಳಾಗಿ ಸುರಿಯ ಬಯಸುತಿದೆಯೆಂದು.. ಆದರೂ ಆ ಚಂದಿರನಾಟದಂತೆ ಮೋಡದ ಮರೆಯಲ್ಲೆ ತಾವರೆಯ ಚೆಲುವನ್ನು ಕದ್ದು ನೋಡುತ್ತಿರುವೆ ..

ಆದರೂ ನಿನ್ನ ಚಂಚಲ ನನ್ನಲ್ಲಿ ಹುಟ್ಟಿಸುತ್ತಿದೆ ಗೊಂದಲ..! ಬದುಕಿನ ಹಾದಿಯಲ್ಲಿ ನನ್ನ ನಿಲ್ದಾಣ ಎಲ್ಲಿದಿಯೋ ? ನನ್ನ ಕಿರುಬೆರಳ ಬೆಸೆಯುವ ಸ್ಪರ್ಶ ಯಾವುದಿದೆಯೋ ? ಎಲ್ಲವೂ ಪ್ರಶ್ನೆಗಳಾಗಿ ನನ್ನ ಮನವನು ಕಲ್ಲೆಸೆದ ನೀರಿನಂತೆ ತಲ್ಲಣಗೊಳಿಸುತ್ತಲೆ ಇದೆ.. ನನ್ನ ಕೊನೆಯ ನಿಲ್ದಾಣ, ಆ ಕಿರು ಬೆರಳ ಸ್ಪರ್ಶ ನಿನ್ನದೆ ಎಂದು ಮನವು ಕೂಗಿ ಕೂಗಿ ಹೇಳಿದರೂ ನಿನ್ನೆಡೆಗೆ ಬರುವ ಹಾದಿ ಅದೆನೋ ಮಂಜು ಆವರಿಸಿದ ದಾರಿಯಂತೆ ಅಸ್ಪಷ್ಟ..!

ಕವನವಾಗುತ್ತಿದ್ದ ಭಾವಗಳೆಲ್ಲ ಕಥೆಯಾಗುವಷ್ಟು ಬೆಳೆಯುತ್ತಲೆ ಇವೆ.. ಹೇಳಿಕೊಳ್ಳಲು ಪದಗಳೆ ಇಲ್ಲವೇನೋ ಎನಿಸುತ್ತಿದೆ..! ಕಾರಣ ತಿಳಿಯದಾಗಿದೆ.. ಯಾವ ರೀತಿ ವ್ಯಕ್ತಪಡಿಸಲಿ ನನ್ನ ಮನದ ಮಾತನ್ನು ಅರಿಯದಾಗಿದೆ…? ನಿನ್ನ ಮೇಲಿನ ಈ ಗೊಂದಲದ ಪ್ರಶ್ನೆಗಳಿಗೆ ನಿನ್ನಿಂದ ಉತ್ತರ ಬಯಸಲೇ..!? ಅಥವಾ ಹೇಳಲಾಗದ ಹೇಳಿದರೂ ಮುಗಿಯಲಾರದ ಈ ಸ್ಥಿತಿಯನ್ನೇ ಪ್ರೀತಿ ಎಂದು ತಿಳಿಯಲೇ.‌.!?

ನಂದಾದೀಪ, ಮಂಡ್ಯ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *