ಪ್ರೀತಿಯ ಗೆಳೆಯನಿಗೆ ನಿನ್ನ ಗೆಳೆಯನ ನಮಸ್ಕಾರ. ಹೇಗಿದ್ದಿಯಾ ಎಂದು ಕೇಳುವುದಿಲ್ಲ, ಇತ್ತಿಚೆಗೆ ನಿನ್ನಲ್ಲಾದ ಕೆಲವು ಬದಲಾವಣೆಗಳನ್ನು ಗಮನಿಸಿಯೇ ಈ ಪತ್ರ ಬರೆಯುತ್ತಿದ್ದೇನೆ. ಬದುಕೇ ಮುಗಿದುಹೋಯಿತು ಎಂಬಂತೆ ಆತ್ಮಹತ್ಯೆಗೆ ಪ್ರಯತ್ನಿಸಿದಿಯಂತೆ? ಯಾಕೊ ನನ್ನ ಗೆಳೆಯ ನೀನು ಸದಾ ಜೀವನೋತ್ಸಾಹದ ಬಗ್ಗೆ ಮಾತನಾಡುತ್ತಿದ್ದವನು, ನಿನಗೆ ಜೀವನದ ಮೇಲೆ ಬೇಸರವೇ? ನಂಬೋಕೆ ಆಗ್ತಾ ಇಲ್ಲ ಕಣೋ. ಆದ್ರೂ ನಂಬಲೇಬೇಕು, ನಿನ್ನ ಇತ್ತಿಚೆಗಿನ ಬದಲಾದ ಮನೋಸ್ಥಿತಿಯನ್ನು. ಅಲ್ಲಾ ಕಣೋ ನೀನು ಪ್ರೀತಿಸಿದ ಹುಡುಗಿ ನಿನಗೆ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಈ ನಿರ್ಧಾರವೇ? ಸದಾ ವೈಜ್ಞಾನಿಕವಾಗೇ ಯೋಚಿಸುವ ನಿನ್ನ ಭಾವನೆಗಳು ಇಷ್ಟು ಮೃದು ಅಂತ ತಿಳ್ಕೊಳ್ಳೋದನ್ನು ಮರೆತಿದ್ದೆ ನೋಡು. ಪ್ರೀತಿಸಿದವಳು ದೂರವಾದ ಮಾತ್ರಕ್ಕೆ ನಿನ್ನ ಜೀವನ ಮುಗಿದುಹೋಯ್ತಾ, ಒಮ್ಮೆ ಯೋಚಿಸಿ ನೋಡು.ನಾಳೆಯ ಬಗ್ಗೆ ನಿನಗೆಷ್ಟು ಕನಸುಗಳಿದ್ದವು, ಪ್ರೀತಿಸಿದಾಕ್ಷಣ ಆ ಕನಸುಗಳೆಲ್ಲಾ ನಿನ್ನಿಂದ ದೂರವಾಯ್ತೆನೂ? ಯಾವುದು ಪ್ರೀತಿ ನೀನು ಸಿಗಲಾರದ್ದಕ್ಕೆ ಸಂಕಟಪಡುತ್ತಿರುವುದೇ ಇಲ್ಲ ಜೊತೆಯಲ್ಲೇ ಇದ್ದು ನಿನ್ನ ಕಣ್ಣೀರಿಗೆ ಕರಗುತ್ತಿರುವವರನ್ನು ಮರೆತಿರುವುದಾ? ಹೌದು ಕಣೋ ನಿನ್ನ ಅಪ್ಪ ಅಮ್ಮ ನಿನ್ನ ಮೇಲೆ ಅದೆಷ್ಟು ಭರವಸೆಗಳನ್ನು ಇಟ್ಟುಕೊಂಡಿದ್ದರು, ನಮ್ಮ ಮಗ ದೊಡ್ಡವನಾಗಿ ನಮ್ಮನ್ನು ಪ್ರೀತಿಯಿಂದ ಸಾಕಿ ಸಲಹುತ್ತಾನೆ ಅಂತ ಏನೇನೋ ಕನಸುಗಳು.ಪಾಪ ಅವರೇನು ತಪ್ಪು ಮಾಡಿದ್ದರೋ? ನಿನ್ನ ಕಣ್ಣೀರಲ್ಲಿ ಕಣ್ಣೀರಾಗಿ ಸ್ಪಂದಿಸ್ತಾ ಇದ್ದಾರಲ್ಲ ಅದು ಕಣೋ ಪ್ರೀತಿ. ಅದನ್ನು ಬಿಟ್ಟು ಕಳೆದುಕೊಂಡೆ ಅಂತ ಪದೇ ಪದೇ ಯಾಕೆ ಯೋಚಿಸ್ತಿಯಾ.
ಗೆಳೆಯಾ ನಿನಗೆ ದೇವರ ಮೇಲೆ ಭಕ್ತಿ ಇಲ್ಲದೇ ಇರಬಹುದು,ಆದ್ರೂ ಒಂದು ಸತ್ಯಾನಾ ನೀನು ಒಪ್ಪಿಕೊಳ್ಳಲೇಬೇಕು ಈ ಜೀವನ ಒಂದು ಗಿಫ್ಟ್ ಕಣೋ.ಅದು ದೇವರು ಕೊಟ್ಟಿದ್ದು,ನೀನು ಮಾಡಿಕೊಂಡದ್ದು ಅಲ್ಲವೇ ಅಲ್ಲಾ.ಫ್ರೀ ಆಗಿ ಸಿಕ್ಕಿರೋ ಈ ಗಿಫ್ಟ್ ನ ಹಾಳು ಮಾಡ್ತಿದ್ದಿಯಾ ಅಂತ ಅನ್ನಿಸಲೇ ಇಲ್ವಾ ನಿಂಗೆ?ಹಿರಿಯರು ಹೇಳಿದ್ರು ಮಾನವ ಜನ್ಮ ದೊಡ್ಡದು ಅಂತ, ಇನ್ನು ಕೆಲವರು ಮತ್ತೊಂದು ಜನ್ಮ ಇದ್ರೆ ಅದು ಮನುಷ್ಯರಾಗೇ ಇರಲಿ ಅಂತ ಬಯಸಿದ್ರು.ನೀನು ಹೋಗಿ ಹೋಗಿ ಈ ಜೀವನವೇ ವೇಸ್ಟ್ ಅನ್ನೋ ತೀರ್ಮಾನಕ್ಕೆ ಬಂದಿದ್ದಿಯಲ್ಲಾ ಇದು ನ್ಯಾಯಾನಾ? ನೀನು ಹೇಳಬಹುದು ನಿನಗೇನು ಗೊತ್ತು ಪ್ರೀತಿಯ ಬೆಲೆ, ಒಂದ್ಸಾರಿ ಪ್ರೀತಿಸಿ ನೋಡು ಆಗ ಗೊತ್ತಾಗುತ್ತೆ ಅಂತ. ನಿಜ ಕಣೋ ನಾನು ಪ್ರೀತಿಸದೇ ಇರಬಹುದು ಆದ್ರೆ ನಾನು ಒಬ್ಬ ಪ್ರೇಮಿ ಕಣೋ, ನನಗೆ ನನ್ನ ಜೀವನಕ್ಕಿಂತ ದೊಡ್ಡ ಪ್ರೀತಿ ಬೇರೆ ಯಾವುದೂ ಇಲ್ಲ. ಯಾಕಂದ್ರೆ ನಾನು ಚೆನ್ನಾಗಿದ್ರೆ ತಾನೆ ನನ್ನೋರು ಅಂದ್ಕೊಂಡೋರು ಚೆನ್ನಾಗಿರೋಕೆ ಸಾಧ್ಯ. ಒಮ್ಮೆ ಯೋಚಿಸಿ ನೋಡು ನೀನು ನಿಜವಾಗ್ಲು ಕಳ್ಕೊಂಡಿದ್ದೀಯಾ ಇಲ್ಲಾ ಕಳೆದುಕೊಳ್ತಾ ಇದ್ದಿಯಾ ಅಂತ. ಹೌದು ಕಣೋ ದೂರಾದ ಹುಡುಗಿಗೆ ಮತ್ತೆ ಹಂಬಲಿಸೋದು ತಪ್ಪು ಅಂತ ಹೇಳ್ತಾ ಇಲ್ಲಾ ಆದ್ರೆ ಯಾವುದು ನಿನ್ನದು ಅಲ್ವೋ ಅದರ ಬಗ್ಗೆ ಯೋಚಿಸ್ತಾ ಅದನ್ನ ಬಯಸೋದು ಮಾತ್ರ ತಪ್ಪು ಅಂತ ಹೇಳಬಲ್ಲೆ. ನೀನು ಜೀವನದ ಮೇಲೆ ನಂಬಿಕೆ ಕಳ್ಕೊಂಡಿದ್ದಿಯಾ ಅದೂ ಬರೀಯ ಪ್ರೀತಿಗಾಗಿ. ಆದ್ರೆ ಈಗ ನಿಜವಾಗ್ಲು ನೀನು ಏನೇನು ಕಳೆದುಕೊಳ್ತಾ ಇದ್ದಿಯಾ ಅನ್ನೋ ಯೋಚನೆ ಮಾಡಿದ್ದಿಯಾ?ಯೋಚನೆ ಮಾಡು ನಿನ್ನ ಪ್ರೀತಿ ದೂರವಾಯ್ತು ಈಗ ನಿನ್ನ ಆರೋಗ್ಯ, ನಿನ್ನ ಅಪ್ಪ ಅಮ್ಮನ ಆರೋಗ್ಯ ನಿನ್ನಿಂದಾಗಿ ಬಲಿ ಆಗ್ತಿದೆ ಕಣೋ. ನಿನಗೆ ನಿನ್ನ ಪ್ರೀತಿಯ ಚಿಂತೆ, ನೀನು ನಿನ್ನ ಅಪ್ಪ ಅಮ್ಮನ ಪ್ರೀತಿ ಕಣೋ ಅವರೆಷ್ಟು ನೊಂದುಕೊಳ್ತಿದ್ದಾರೆ ಅಂತ ಅರ್ಥವಾಯ್ತಾ?
ಗೆಳೆಯಾ ನೀನು ಯಾಕೆ ಬದಲಾಗಬೇಕು, ನೀನು ಸತ್ತು ಹೋದರೆ ತ್ಯಾಗಿಯಾಗ್ತಿಯೇನು? ಖಂಡಿತಾ ಇಲ್ಲ, ಕನಸಲ್ಲೂ ಆ ತರಹ ಯೋಚನೆ ಮಾಡಬೇಡ. ನಿನಗಾಗಿ ಮಿಡಿಯುವುದು ಜೊತೆಯಿರುವವರು ಮಾತ್ರ ಕಣೋ ದೂರಾದವರು ಅಲ್ಲ. ಅವರು ಯಾರೇ ಆದ್ರೂ ಎಲ್ಲೇ ಇದ್ರೂ ಚೆನ್ನಾಗಿರಲಿ ಅಂತ ಯಾಕೆ ನೀನು ಹಾರೈಸಬಾರದು. ನೀನಿನ್ನು ಚಿಕ್ಕವನು ಜೀವನ ಏನು ನೋಡಿದ್ದೀಯಾ ಅಂತ ಇಷ್ಟೊಂದು ವೈರಾಗ್ಯ ನಿನಗೆ? ಮನುಷ್ಯನಿಗೆ ನೋವು ನಲಿವು ಕಷ್ಟ ಸುಖ ಬರದೆ ಕಲ್ಲು ಮಣ್ಣಿಗಾ ಬರುತ್ತೆ? ಇದು ನಿನ್ನ ಸೋಲು ಅಂತ ನೀನಂದುಕೊಂಡ್ರೆ ನಿನ್ನಂಥ ಮೂರ್ಖ ಮತ್ತೊಬ್ಬ ಇಲ್ಲ. ಪ್ರೀತಿಯೇ ಜೀವನ ಅಲ್ಲಾ ಕಣೋ, ಜೀವನದಲ್ಲಿ ಪ್ರೀತಿ ಒಂದು ಭಾಗ ಅಷ್ಟೇ. ಅಷ್ಟಕ್ಕೂ ನೀನು ಸೋತಿದ್ದೀಯಾ ಅಂತ ತೀರ್ಮಾನ ಯಾಕೆ ತಗೋತಿದ್ದೀಯಾ? ಅದು ನಿನ್ನ ಸೋಲಲ್ಲ ಬರೀ ಒಂದು ಜೀವನ ಪಾಠ ಅರ್ಥ ಮಾಡ್ಕೊ. ನಿನ್ನ ಜೀವನಕ್ಕಿಂತ ದೊಡ್ಡದು ಬೇರೆ ಇಲ್ಲ, ಎಡವಿದ್ರೂ ಎದ್ದು ನಿಲ್ಲೋಕೆ ಇದು ಮೊದಲ ಮೆಟ್ಟಿಲು ಅಷ್ಟೆ.ಖುಷಿಪಡು ಜೀವನದಲ್ಲಿ ಪ್ರೀತಿ ಅಂದ್ರೆ ಏನು ಅಂತ ತಿಳ್ಕೊಂಡೆ ಅಂತ, ಭಗ್ನಪ್ರೇಮಿ ಅಂತ ನೆಗೆಟಿವ್ ಯಾಕೆ ಬೇಕು? ನಿಜ ಕಣೋ ಒಪ್ಕೊತೀನಿ ದೇಹಕ್ಕಾದ ಗಾಯಕ್ಕೂ ಮನಸಿಗಾದ ನೋವಿಗೂ ವ್ಯತ್ಯಾಸ ಖಂಡಿತಾ ಇದೆ, ಆದ್ರೆ ನೆನಪು ಅನ್ನೋದು ದೇವರು ಕೊಟ್ಟ ವರ ಆದ್ರೆ ಮರೆವು ಅವನು ಕೊಟ್ಟ ಶಾಪ ಅಂತ ತಿಳ್ಕೊಂಡು ಹೊಸ ಜೀವನ ಶುರು ಮಾಡು ಗೆಳೆಯಾ. ಸೋಲೇ ಬರಲಿ ಗೆಲುವೇ ಇರಲಿ ನಿನ್ನ ಜೊತೆಯೆಂದೂ ನೀನು ನಿಲ್ಲು, ಎಲ್ಲೂ ನಿನ್ನ ಬಗ್ಗೆ ನಿನಗೆ ಅನುಮಾನ ಬೇಡ. ಕೊನೆಯದಾಗಿ ಇಷ್ಟು ಮಾತ್ರ ಹೇಳಬಲ್ಲೆ ಗೆಳೆಯಾ ನಿನ್ನ ಪರಿವರ್ತನೆ ನಿನ್ನಲ್ಲೇ ಇದೆ ಗೆಳೆಯನಾಗಿ ನಾನು ಕಂಡ ಸತ್ಯದ ಪರಿಚಯ ಅಷ್ಟೇ ನಿನಗೆ ನೀಡಿರುವೆ. ಜೀವನ ಇರುವುದು ಸಂಭ್ರಮಿಸೋಕೆ, ಆದ್ರೆ ನೋವನ್ನು ಆಚರಿಸೋಕೆ ಖಂಡಿತಾ ಅಲ್ಲಾ.
ಇಂತಿ ನಿನ್ನ ಗೆಳೆಯಾ
ಆತ್ಮೀಯ ಗೆಳೆಯನಿಗೆ ಅಷ್ಟೇ ಆತ್ಮೀಯವಾಗಿ ಬುದ್ಧಿ ಹೇಳುತ್ತಾ….ಸಲುಗೆಯಿಂದ ಗದರಿಕೊಳ್ಳುತ್ತಾ ಮತ್ತೆ ಜೀವನಪ್ರೀತಿಯನ್ನು ಹುಟ್ಟಿಸುವ ಪತ್ರ ಬರೆದು ಹೆಚ್ಚಿನ ಹುಮ್ಮಸ್ಸು…..ತುಂಬಿದಂತಹ ಲೇಖನ ನೀಡಿದ ಗೆಳೆಯ ಜಯಪ್ರಕಾಶ ಅವರಿಗೆ ಧನ್ಯವಾದಗಳು…
ಚೆನ್ನಾಗಿದೆ ಸರ್… ಪತ್ರ…
ಜೀವನ ಒಂದು ಚದುರಂಗದ ಆಟ, ಇಲ್ಲಿ ರಾಜ ರಾಣಿ, ಮಂತ್ರಿ ಸೈನಾಧಿಪತಿ, ಸೈನಿಕರು ಕೊನೆಗೆ ಸುತ್ತಮುತ್ತಲಿನ ವಂದಿಮಾಗದರು, ಸೇವಕರು ಎಲ್ಲಾ ಇದ್ದು; ಧೈರ್ಯದಿ ಮುನ್ನುಗ್ಗಿ ಜಯ ನಮ್ಮದೆಂದೇ ಸೋಲೋ ಗೆಲುವೋ ಸಾವೆಂದರೆ ಹೆದರದೆ ಎದೆಯುಬ್ಬಿಸಿ ಹೋರಾಡುವರಲ್ಲ ಆ ಕೆಚ್ಚು, ಹುರಿದುಂಬಿಸುವ ಮಾತುಗಳು ಈ ನಿಮ್ಮ ಆತ್ಮೀಯ ಸ್ನೇಹಿತನಿಗೆ ಬರೆದ ಪತ್ರದಲ್ಲಿ ಕಾಣಬಹುದು ಜಯಪ್ರಕಾಶ್ ಪುತ್ತೂರ್.