ಗೆಳೆಯನಲ್ಲ (ಭಾಗ 1): ವರದೇಂದ್ರ ಕೆ.

ಕಮಲ ಬುದ್ಧಿವಂತೆ, ದಿಟ್ಟೆ ಜೊತೆಗೆ ಬಾಲ ವಿಧವೆ, ವಿವಾಹದ ಪರಿಕಲ್ಪನೆಯೂ ಇರದ ವಯಸ್ಸಲ್ಲಿ ಬಾಲ್ಯ ವಿವಾಹವಾಗಿ ಗಂಡನ ಉಸಿರನ್ನೂ ಸೋಕಿಸಿಕೊಳ್ಳದೆ, ತನ್ನ ಸೌಭಾಗ್ಯವನ್ನು ಅದರ ಮಹತ್ವ ಅರಿಯುವ ಮುನ್ನ ಕಳೆದುಕೊಂಡಾಕೆ. ತವರು ಮನೆಯೆಲ್ಲ ಸಂಪ್ರದಾಯಕ್ಕೆ ಕಟ್ಟು ಬಿದ್ದಿದ್ದರೂ ಓದಿಗೆ ಅಡ್ಡಿ ಆಗದ ಕಾರಣ, ಪದವೀಧರೆ ಆಗಿದ್ದಾಳೆ. ಪ್ರಾಯ ಬಂತು, ಪರಕಾಯ ಪ್ರವೇಶದಿಂದ ವಂಚಿತಳಾಗಿ; ಮನದ, ದೇಹದ ಭಾವನೆಗಳನ್ನು ಗಂಟು ಕಟ್ಟಿ ಎದೆಯೊಳಗೆ ಅಡಗಿಸಿಟ್ಟುಕೊಂಡಿದ್ದಾಳೆ. ಯಾರೂ ಅರಿಯದ ಕಮಲಳ ಭಾವನೆ, ತಂದೆ ತಾಯಿಯರ ಅರಿವಿಗೆ ಬರದಿರಲು ಸಾಧ್ಯವೇ? ತಂದೆಯ ಹೃದಯಕ್ಕೆ ಮಗಳ ಭಾವನೆ ನೂಕಿತ್ತು. ಹಿರಿಯರ, ಬಂಧು, ಬಳಗದವರ ಒಣ ಮಾತು ಕೇಳಲಿಲ್ಲ ತಂದೆ, ಸಾಧಿಸಿಯೇ ಬಿಟ್ಟರು. ಬಾಲ್ಯದಲ್ಲಿ ಮಗಳ ಕುರಿತಾಗಿ ತಾವು ಮಾಡಿದ ತಪ್ಪಿಂದ ಹದ ತಪ್ಪಿದ್ದ ಮಗಳ ಜೀವನಕ್ಕೆ ಹರಿಯುವ ಮೈ ಮನದ ವಾಂಛೆಗೆ ಪನ್ನೀರ ಮಳೆ ಸುರಿಸಿದರು. ಎಲ್ಲ ಬಂಧು, ಊರಿನ ಹಿರಿಯರ ವಿರೋಧದ ನಡುವೆ ಖ್ಯಾತ ವಕೀಲ ಅಶೋಕನೆಂಬ ವರನಿಗೆ ಸುಮೂರ್ತ, ಸುಲಗ್ನದಲ್ಲಿ ಮದುವೆ ಮಾಡಿಕೊಟ್ಟರು.

ಅಶೋಕ ವಕೀಲ ವೃತ್ತಿಯಲ್ಲಿ ಹೆಸರುಮಾಡಿದವರು. ನ್ಯಾಯದಪರ ಹೋರಾಡುವವರು. ಮಹಾನ್ ಆದರ್ಶ ಇಟ್ಟುಕೊಂಡ ವ್ಯಕ್ತಿ. ದುಡ್ಡು ಕಾಸಿಗೆ ಜೋತು ಬೀಳದೆ, ನೊಂದವರಿಗೆ ನ್ಯಾಯ ಕೊಡಿಸಿದರೆ ಸಾಕು ಎನ್ನುವ ಭಾವ. ಸಾಕಷ್ಚು ಹಣ ಸಂಪಾದನೆಯೂ ಆಗಿದೆ. ವಾಸಕ್ಕೆ ಸೂರಿದೆ. ವೆಚ್ಚಕ್ಕೆ ಹಣ ಸಾಕಷ್ಟಿದೆ.

ಅಶೋಕ, ಕಮಲಳ ಜೀವನದ ಚಕ್ರವರ್ತಿಯಾದ, ಉದಾರ ಮನಸು, ಹಿತ ಚಿಂತಕ, ಮೌಢ್ಯತೆಯನ್ನು ದೂರಮಾಡಲು ಪಣತೊಟ್ಟಂತೆ ಇರುವ ಮನುಷ್ಯ. ಮಹತ್ತರವಾದ ಆದರ್ಶಗಳನ್ನು ಹೊಂದಿದವ ಶಾಂತಿದೂತನೂ ಹೌದು. ಗಾಂಧಿವಾದಿ. ಅದಕ್ಕೆ ತಕ್ಕಂತೆ ಕಮಲಳ ಕೈ ಹಿಡಿದು ವಿಧವೆಯನ್ನು ಮದುವೆಯಾಗಿ ಎಲ್ಲರ ಕಣ್ಣಿನಲ್ಲಿ ಮಾದರಿಯಾಗಿ ಮಿಂಚಾಗಿದ್ದ. ಆದರೆ ಅವನಿಗೆ ಎಂದೂ ನಾನು ಶ್ರೇಷ್ಠ, ನಾನು ಕಮಲಳಿಗೆ ಬಾಳು ಕೊಡುತ್ತಿದ್ದೇನೆ, ವಿಧವೆಯನ್ನು ಕೈ ಹಿಡಿದ ಕೀರ್ತಿ ನನ್ನದು, ಎಲ್ಲರಿಂದ ಹೊಗಳಿಕೆಗೆ ಪಾತ್ರನು, ಅರ್ಹನು ನಾನು; ಎನ್ನುವ ಭಿಂಕದ ಚೂರೂ ಅಹಂಭಾವ ತನ್ನ ಬಳಿ ಸುಳಿಯಲು ಬಿಟ್ಟವನಲ್ಲ.

ಪತಿಗೆ ತಕ್ಕಂತ ಸತಿ. ಆದರ್ಶ ಪ್ರಾಯಳಾಗಿ ಕಮಲ; ಗಂಡನ ಔದಾರ್ಯಗುಣವನ್ನು ಹೊಗಳಿ ಹೊಗಳಿ ಅವನ ಜೀವನದ ಸಾಗರಕ್ಕೆ ಸುಖದ ಝರಿಯಾಗಿ ಹರಿದು ಬಂದಿದ್ದಳು. ನಲ್ಮೆಯ ಕತ್ತಲ ರಾತ್ರಿಗಳನ್ನು ಕಳೆದಂತೆ ಒಂದರ ಮೇಲೆ ಒಂದರಂತೆ ನಾಲ್ಕು ಹೆಣ್ಣು ಮಕ್ಕಳನ್ನು ಬೆಳಕಿಗೆ ತಂದಳು. ಕೀರ್ತಿ, ಸ್ಪೂರ್ತಿ, ಆರತಿ, ಭಾರತಿ, ನಾಲ್ಕು ಮುತ್ತುಗಳ ಪುಟ್ಟ ಪುಟ್ಟ ಹೆಜ್ಜೆಗಳು ಬಲಿಯುವ ಹೊತ್ತಿಗೆ ಐದನೇಯವನಾಗಿ ಬಂದ. ಮನೆ, ಮನಕೆ ನಗುವಿನ ಸಂಪತ್ತನ್ನು ಹೊತ್ತು ತಂದ ‘ವಂಶೋದ್ಧಾರಕ’. ಬಂದ ಖುಷಿಯ ಸಂಪತ್ತಿನ ನೆನಪಿಗಾಗಿ ಇಟ್ಟ ನಾಮ ಸಂಪತ್.

ಎಲ್ಲವೂ ಸುಂದರವಾಗಿಯೇ ಇತ್ತು. ದಿನಗಳುರುಳಿದಂತೆ ಮಕ್ಕಳು ಬಲಿಯುತ್ತಿದ್ದರು, ಬೆಳೆಯುತ್ತಿದ್ದರು. ಯಾವುದಕ್ಕೂ ಕೊರತೆ ಇರದ ಸಂಸಾರ, ನೋಡುಗರಿಂದ ದೃಷ್ಟಿ ತಾಕುವಂತೆ ಕಮಲ ಸಂಸಾರವನ್ನು ಚೊಕ್ಕವಾಗಿ ನಡೆಸುತ್ತಿದ್ದರು.

ತಾಕಿಯೇ ಬಿಟ್ಟಿತು ಕೆಟ್ಟ ಕಣ್ಣುಗಳ, ದುಷ್ಟ ಮನಸುಗಳ ದೃಷ್ಟಿ. ಯಾರ ಹೊಟ್ಟೆಕಿಚ್ಚಿನ ಕಿಡಿ ತಾಕಿತೋ ಮುದ್ದಾದ ಸಂಸಾರಕೆ, ಬಿದ್ದೇಬಿಟ್ಟಿತು ದುಷ್ಟ ಪ್ರಳಯಾಂತಕ ಗೋಮುಖವ್ಯಾಘ್ರ ಗೋಪಾಲಯ್ಯನ ನೀಚ ಕಣ್ಣು. ಅಶೋಕ ಪ್ರಸಿದ್ಧ ವಕೀಲನಾಗಿ, ಗೋಪಾಲಯ್ಯ ಮಾಡಿದ ಕೊಲೆಯನ್ನು ಸಾಬೀತು ಮಾಡಿ ಶಿಕ್ಷೆಗೆ ಗುರಿಯಾಗಿಸಿದುದಕ್ಕೆ, ಅವನ ಕಡೆಯ ರೌಡಿ ಹೂಡಿದ ಬಂದೂಕಿನ ಗುಂಡು ನೇರ ಅಶೋಕನೆದೆಯ ಗೂಡಿಗೆ ಹೊಕ್ಕು ಹೃದಯವನ್ನು ಛಿದ್ರಗೊಳಿಸಿತ್ತು. ಹಾರಿದ ನೆತ್ತರು ಕಮಲಳ ಸಂಸಾರವನ್ನು ಸಂಪೂರ್ಣವಾಗಿ ರಕ್ತಮಯವಾಗಿಸಿತು.

ಗೋಪಾಲಯ್ಯ ಊರಿಗೆ ಧನಿಕ, ಊರಿನಲ್ಲಿ ಯಾರು ಸಬಲರಾಗಿ ಬೆಳೆದರೂ ಸಹಿಸದ ವ್ಯಕ್ತಿ. ತನ್ನ ಕಾರ್ಯಗಳಿಗೆ ಯಾರು ಅಡ್ಡ ಬಂದರೂ ಬಿಡದವ. ನಿಯಮ ಮೀರಿ ಮಾಡುವ ಕಾರ್ಯಕ್ಕೆ ಅಡ್ಡಿಪಡಿಸಿದ ಸರಕಾರಿ ಅಧಿಕಾರಿಯನ್ನು ಕೊಲ್ಲಿಸಿದ ಆಪಾದನೆಗೆ ಗುರಿಯಾಗಿದ್ದ. ಅವನ ವಿರುದ್ಧ ಯಾವ ಸಾಕ್ಷಿ ಇಲ್ಲದೆ ಆಪಾದನೆಯಿಂದ ಋಣ ಮುಕ್ತನಾಗುತ್ತಾನೆ ಎನ್ನುವಾಗಲೇ, ಅಶೋಕ ಕೇಸನ್ನು ಕೈಗೆತ್ತಿಕೊಂಡಿದ್ದ. ಸುದ್ದಿ ತಿಳಿದಿದ್ದೇ ತಡ ಗೋಪಾಲಯ್ಯನ ಕಡೆಯವರಿಂದ ಅಶೋಕನಿಗೆ ಕಿರುಕುಳ ಪ್ರಾರಂಭವಾಗಿತ್ತು. ಕೇಸನ್ನು ಕೈ ಬಿಡುವಂತೆ ಎಚ್ಚರಿಸಿದರೂ ಕೇಳದೆ ನ್ಯಾಯಪರ ಹೋರಾಟ ಮಾಡಿದ್ದಕ್ಕಾಗಿ ಪ್ರಾಣ ತೆಗೆದಿದ್ದ ನರಹಂತಕ. ಈ ಘಟನೆ ಅರಗಿಸಿಕೊಳ್ಳಲಾಗದಂತಾಗಿತ್ತು ಕಮಲಗೆ, ಬಾಲ ವಿಧವೆಯಾಗಿದ್ದು, ಅಶೋಕನ ಕೈ ಹಿಡಿದು ಮುತ್ತೈದೆ ಎನಿಸಿಕೊಂಡಿದ್ದ ಕಮಲ ಮತ್ತೆ ಎಲ್ಲರ ಬಾಯಲ್ಲಿ ವಿಧವೆಯಾಗಿದ್ದಳು.


ನಾಲ್ಕ ಜನ ಹೆಣ್ಣು ಮಕ್ಕಳ ಮದುವೆ ಇಲ್ಲ ಇನ್ನು, ಜೀವನಕ್ಕೆ ಸಾಕಾಗುವಷ್ಟು ದುಡ್ಡಿದೆ, ತೊಂದರೆಯಿಲ್ಲ. ಆದರೆ ಮನೆಯ ಯಜಮಾನ ಇಲ್ಲದೆ ಇರುವುದು ಕಷ್ಟವಾಗಿತ್ತು. ಧೃತಿಗೆಡಲಿಲ್ಲ ದಿಟ್ಟೆ ಅಲ್ವಾ, ಬದುಕಿದಳು, ಬದುಕಿಸಿದಳು. ನಾಲ್ವರು ಹೆಣ್ಣು ಮಕ್ಕಳಿಗೆ ಓದಿಸಿ ಒಳ್ಳೆಯ ಕಡೆಗೆ ಸಂಬಂಧ ನೋಡಿ ಮದುವೆಯನ್ನೂ ಮುಗಿಸಿದಳು. ಮೊಮ್ಮಕ್ಕಳೂ ಬಂದಾಯಿತು. ವಯಸ್ಸು ಸಾಗಿದಂತೆ ಕಮಲ, ಕಮಲಮ್ಮ ಆದಳು. ಮನೆಯಲ್ಲಿ ಕಮಲಮ್ಮ ಮತ್ತು ಸಂಪತ್ ಇಬ್ಬರೇ. ಹೆಣ್ಣುಮಕ್ಕಳು ಬಂದು ಹೋಗುವ ಅತಿಥಿಗಳಾದರು.

ಮನೆಗೆ ಸಂಪತ್ತು ಎನಿಸಿಕೊಂಡವನು ಸಂಪತ್, ವಿದ್ಯಾ ಸಂಪತ್ತನ್ನೂ ಗಳಿಸಿದ. ಸಕಾಲಕ್ಕೆ ನೌಕರಿಯೂ ಆಯಿತು. ಕಮಲಮ್ಮಗೆ ಇರೋ ಆಸೆ ತನ್ನವರು ಮತ್ತೆ ಮಗನಿಂದ ಹುಟ್ಟಿ ಮನೆಗೆ ಬರಬೇಕು. ಅದಕ್ಕೆ ಸಂಪತ್ಗೆ ಮದುವೆ ಭಾಗ್ಯ ಬರಬೇಕು. ಅದೂ ಬಂದಾಯ್ತು. ದೇವರು ಒಲಿದರೆ ಎಲ್ಲ ಕೆಲಸ ತಾನು ತಾನೆಗೇ ಆಗುತ್ತವೆ. ದೇವರು ಕಷ್ಟ ಕಾಲ ಮುಗಿಸಿ ಸುಖ ನೀಡುತ್ತಿರುವಂತೆ ಆಗಿದೆ.

ಕಮಲಮ್ಮ ಹುಡುಕಿ ಆಯ್ತು ಚಂದುಳ್ಳಿ ಗೊಂಬೆಯನ್ನು. ಮಗನ ರೂಪಕ್ಕೆ ತಕ್ಕಂತ ರೂಪವತಿ, ಜಾಣೆ, ವಿದ್ಯಾವಂತೆ ಕೂಡ. ಹೆಸರು ಪ್ರೀತಿ, ಶ್ರೀಮಂತ ತಂದೆ ತಾಯಿಗೆ ಒಬ್ಬಳೇ ಮಗಳು. ಹಣದ ಶ್ರೀಮಂತಿಕೆಗಿಂತ ಗುಣ, ಸಂಸ್ಕೃತಿಯಲ್ಲಿ ಶ್ರೀಮಂತರು. ಯುವ ಜೋಡಿಗಳು ಒಪ್ಪಿ ಹಸೆಮಣೆ ಏರಿದರು. ಬೊಗಸೆ ತುಂಬ ಪ್ರೀತಿ ಹೊತ್ತು ಮಗನನ್ನು ಒರಿಸಿದಳು. ಪ್ರೀತಿ ಒಲಿದು ಬಂದಾಯ್ತು.

ಮನೆಗೆ ಭಾಗ್ಯಲಕ್ಷ್ಮಿಯಾಗಿ, ಸಂತಾನ ಲಕ್ಷ್ಮಿಯಾಗಿ ನಲ್ಲನ ಒಲವಿನ ನಲ್ಲೆಯಾಗಿ ಸಂಪತ್ನ ಬದುಕಿನಲ್ಲಿ ಬಂದಿದ್ದಾಳೆ. ಸಿರಿವಂತಿಕೆಯ ಮನೆಯಲ್ಲಿ ರಾಜಕುಮಾರಿಯಾಗಿ ಬೆಳೆದವಳು, ಗಂಡನ ಮನೆಯಲ್ಲಿ ಮಹಾರಾಣಿಯಂತಾಗಿದ್ದಾಳೆ. ಎಲ್ಲವೂ ಹೊಸತು, ಮನೆ ಮನಸುಗಳು ನವನವೀನವಾಗಿವೆ. ದಿನಗಳು ಕಳೆದಂತೆ ಪ್ರೀತಿ ಮನೆಗೆ ಸಂಪೂರ್ಣವಾಗಿ ಹೊಂದಿಕೊಂಡಿದ್ದಾಳೆ. ಮನೆಯ ಎಲ್ಲ ಜವಾಬ್ದಾರಿಯನ್ನೂ ನಿಭಾಯಿಸುತ್ತಾಳೆ. ಅತ್ತೆಯನ್ನು ತಾಯಿಯಂತೆ ಕಾಣುತ್ತಾಳೆ. ಆದರೆ ಪ್ರೀತಿ ಸಿರಿತನದಲ್ಲಿ ಬೆಳೆದ ಕಾರಣ, ತಂದೆ ತಾಯಿ ಮನೆಯಲ್ಲಿ ಇದ್ದಾಗ ಶಾಪಿಂಗ್, ಸಿನೆಮಾ, ಪಾರ್ಟಿ ಅಂತ ಸುತ್ತಾಡಿಕೊಂಡಿದ್ದೋಳು. ಮಾಡರ್ನ್ ಹುಡುಗಿಯಾಗಿ ಬೆಳೆದಿದ್ದಳು. ಗಂಡನ ಮನೆಗೆ ಸೇರಿ ಎಷ್ಟು ದಿನಗಳಾದರೂ ಹೊರಗಡೆ ಹೋಗಿಲ್ಲ. ಚಡಪಡಿಕೆಯಿಂದ ಒದ್ದಾಡುತ್ತಿದ್ದಳು.

ಅತ್ತೆ ಕಮಲಮ್ಮಗೆ ಅರಿವಾಗಿ, “ಪ್ರೀತಿ ಏನಾಯ್ತು ಮದುವೆ ಆಗಿ ಇಷ್ಟು ದಿನವಾದರೂ ಹೊರಗಡೆ ಹೋಗಿಲ್ಲ. ನೀನು ಸಂಪತ್ ನಾಲ್ಕು ದಿನ ಹೊರಗಡೆ ಹೋಗಿ ಬನ್ರಿ. ನಿಂಗೂ ಬೇಸರ ಕಳಿಯುತ್ತೆ” ಎಂದರು. ಪ್ರೀತಿಗೆ ಮನದಲ್ಲೇ ಖುಷಿ ಆಯ್ತು, ಅತ್ತೆ ಆದ್ರೆ ಇವರು ನನ್ ಜೊತೆ ಸರಿಯಾಗಿ ಮಾತೇ ಆಡ್ತಿಲ್ಲ, ಹೊರಗಡೆ ಬರ್ತಾರೋ ಇಲ್ವೋ…? ಎಂದು ಸುಮ್ಮನೆ ಉದ್ಗಾರ ತೆಗೆದಳು.

ಮಗನ ಮದುವೆ ನಂತರ ಮಗನ ಕುರಿತಾಗಿ ಕಾಳಜಿನೇ ಕಡಿಮೆಯಾಗಿದೆ ನಂಗೆ, ಯಾಕೋ ಅವನು ಯಾವಾಗಲೂ ಮಂಕಾಗಿರುತ್ತಾನೆ. ಮುಖದಲ್ಲಿ ನಗುವನ್ನೇ ತುಂಬಿಕೊಂಡಿರುತ್ತಿದ್ದವನು, ಈಗ ನಗುವುದನ್ನೇ ಮರೆತಂತಿದೆ. ಮನೆಯಿಂದ ಹೊರಗೆ ಹೋಗೋದು ಬರೋದು ಏನು ನನಗೆ ತಿಳಿಯುತ್ತಿಲ್ಲ. ಪ್ರೀತಿನೇ ಎಲ್ಲವನ್ನು ನೋಡಿಕೊಳ್ಳುತ್ತಾಳೆ ಎಂದು ನಾನು ಸಂಪತ್ನ ಬಗ್ಗೆ, ವಿಚಾರಿಸುತ್ತಿಲ್ಲ. ಗಂಡ ಹೆಂಡತಿ ಅನ್ಯೋನ್ಯವಾಗಿದ್ದಾರೋ ಇಲ್ಲವೋ ಎಂದು ಯೋಚಿಸತೊಡಗಿದಳು.

ಅಷ್ಟರಲ್ಲೇ ಪ್ರೀತಿ, “ಅತ್ತೆ ನಾನು ನಾಲ್ಕು ದಿನ ಅಮ್ಮನ ಮನೆಗೆ ಹೋಗಿ ಬರುವೆ. ಅಪ್ಪ ಅಮ್ಮನ ನೆನಪಾಗುತ್ತಿದೆ” ಎಂದು ಹೇಳಲು, ಕಮಲಮ್ಮ “ಆಯ್ತು ಪ್ರೀತಿ ಹೋಗಿ ಬರುವಂತೆ. ಸಂಪತ್ ಬಂದ ಮೇಲೆ ಕರೆದುಕೊಂಡು ಹೋಗು ನಾಲ್ಕು ದಿನ ರಜೆ ಹಾಕ್ಸಿ…” ಎಂದಿದ್ದೇ ತಡ….

ಅತ್ತೆ, “ಸುಮ್ನೆ ಯಾಕೆ ಅವರ ರಜೆ ವೇಸ್ಟ್ ಮಾಡೋದು. ನಾಲ್ಕು ದಿನ ಅಷ್ಟೇ ಅಲ್ವ. ಒಬ್ಬಳೇ ಹೋಗಿ ಬರುತ್ತೇನೆ” ಎಂದು ಹೊರಟು ನಿಂತಳು. ಕಮಲಮ್ಮರ ಮನಸಿಗೆ ಏನೋ ಕಸಿವಿಸಿ ಆಯಿತು. ಮದುವೆ ಆಗಿ ಎರಡು ತಿಂಗಳಾಗಿಲ್ಲ ಗಂಡ ಜೊತೆ ಬರೋದು ಬೇಡ ಅಂತಾಳಲ್ಲ, ಏಕೆ ಎಂದು ತಿಳಿಯದೆ, ಇವಳನ್ನು ಹೋಗಲು ಬಿಟ್ಟು ಸಂಜೆ ಸಂಪತ್ನ ವಿಚಾರಿಸಬೇಕು ಎಂದುಕೊಂಡು, “ಮದುವೆ ಆಗಿ ಮೊದಲಬಾರಿಗೆ ತವರು ಮನೆಗೆ ಹೋಗ್ತಿದೀಯ, ಗಂಡನ ಜೊತೆ ಹೋಗಿದ್ರೆ ಚೆನ್ನಾಗಿರೋದು, ಇರಲಿ ನೀನು ಹುಷಾರಾಗಿ ಹೋಗು, ಕ್ಯಾಬ್ ಮಾಡ್ಕೊಂಡು, ಹೋಗ್ತಾ ಸಂಪತ್ಗೆ ಕಾಲ್ ಮಾಡಿ ಹೇಳು. ನಂಗೆ ಹೇಳೇ ಇಲ್ಲ ಅನ್ಕೋಬಾರ್ದಲ್ವ” ಎಂದು ಪ್ರೀತಿಯನ್ನು ಕಳಿಸಿಕೊಟ್ಟರು.

ಇತ್ತ ಪ್ರೀತಿ ಸಿದ್ಧಳಾಗಿ, ಗಂಡಗೆ ಹೇಳಬೇಕಿತ್ತೆಂಬ ಅಳುಕಿನಿಂದ, ಬೇಸರ ಮಾಡ್ತಾ ಇದೀನಲಾ ಅಂತ ನೊಂದುಕೊಂಡು ಕ್ಯಾಬ್ ಬುಕ್ ಮಾಡುತ್ತಾಳೆ. ಮನೆಯಿಂದ ಎರೆಡು ನಿಮಿಷದ ದಾರಿ ಸಾಗಿ ಒಂದು ಮರದಡಿ ನಿಲ್ಲುತ್ತಾಳೆ.
ಕ್ಯಾಬ್ ಬಂತು, ಒಳಗೆ ಕೂರಬೇಕು ಎನ್ನುವಷ್ಟರಲ್ಲಿ, ಯಾರೋ ಒಳಗಡೆ ಇದಾರೆ ನಾನು ಕೂರುವುದಿಲ್ಲ, ಎನ್ನುತ್ತಾಳೆ.

ಕ್ಯಾಬ್ ಬಾಗಿಲು ತೆಗೆದು “ಹಾಯ್ ಪ್ರೀತಿ….” ಎಂಬ ಗಂಡು ಧ್ವನಿ ಬರುತ್ತದೆ. ಪ್ರೀತಿ ಆಶ್ಚರ್ಯದಿಂದ ನೋಡುತ್ತಾಳೆ. ಅವನೇ ಅವನೇ ಸಂತೋಷ್ ಪ್ರೀತಿಯ ಗೆಳೆಯ. ಪ್ರೀತಿ ಒಂದು ಕ್ಷಣ ಮೈ ಮರೆತಂತೆ ನಿಲ್ಲುತ್ತಾಳೆ.

ಸಂತೋಷ್, “ಬಾ ಪ್ರೀತಿ ಒಳಗಡೆ” ಎಂದು ಕರೆದೊಡನೆ ಎಚ್ಚರವಾದಂತಾಗಿ, ನಾನು ಬರುವುದಿಲ್ಲ ಎನ್ನುತ್ತಾಳೆ. ಸಂತೋಷ್, “ಪ್ಲೀಸ್ ಬಾ ಪ್ರೀತಿ” ಎಂದು ಕರೆದು ಕೂರಿಸಿಕೊಳ್ಳುತ್ತಾನೆ.
ಕ್ಯಾಬ್ ಚಲಿಸುತ್ತದೆ. ಇವನು ಇಲ್ಲಿ ಹೇಗೆ ಬಂದ, ಇಷ್ಟು ದಿನ ಎಲ್ಲಿಗೆ ಹೋಗಿದ್ದ, ಎಂದು ಮೈಮರೆಯುತ್ತಾಳೆ.

ಸಂತೋಷ್ ಪ್ರೀತಿಯ ಆತ್ಮೀಯ ಗೆಳೆಯ, ಪದವಿ ಓದುತ್ತಿರುವಾಗಲೇ ಪರಿಚಯವಾಗಿ ಸ್ನೇಹ ಬೆಳೆದಿರುತ್ತದೆ. ಸಂತೋಷ್ ಯಾವಾಗಲೂ ಸುತ್ತಲೂ ಇರುವವರನ್ನು ನಗಿಸುತ್ತ, ಚುಡಾಯಿಸುತ್ತ, ಬದುಕಿನಲ್ಲಿ ಎಲ್ಲವನ್ನೂ ಪ್ರ್ಯಾಕ್ಟಿಕಲ್ ಆಗಿ ತಗೋಬೇಕು. ಯಾವುದಕ್ಕೂ ಹೆಚ್ಚು ಚಿಂತಿಸದೆ ಜೀವನವನ್ನು ಎಂಜಾಯ್ ಮಾಡಬೇಕು ಎಂದು ಹೇಳುತ್ತಿದ್ದ. ಅನೇಕ ಗೆಳೆಯ ಗೆಳತಿಯರನ್ನು ಹೊಂದಿದ್ದ ಸಂತೋಷ್ ಓದಿನಲ್ಲೂ ಅಷ್ಟೇ ಬುದ್ಧಿವಂತ. ತರಗತಿಯಲ್ಲಿ ಯಾವಾಗಲೂ ಚುರುಕಾಗಿರುತ್ತಿದ್ದ. ಮೊದಲಿಗ.. ಯಾವುದೇ ಕಾರ್ಯಕ್ರಮ ಇದ್ದರೂ ಅದರ ಪಟ್ಟಿಯಲ್ಲಿ ಸಂತೋಷನ ಹೆಸರಿರುತ್ತಿತ್ತು. ಒಂಥರಾ ಆಲ್ ರೌಂಡರ್ ಪ್ಲೇಯರ್.

ಡಿಗ್ರಿಯಲ್ಲಿ ಪ್ರೀತಿಯ ಜೊತೆ ಎಲ್ಲರಿಗಿಂತ ಕೊಂಚ ಹೆಚ್ಚೇ ಆತ್ಮೀಯತೆ ಬೆಳೆಸಿಕೊಂಡಿದ್ದ. ನಿತ್ಯ ಹಲವಾರು ಸಂದೇಶಗಳನ್ನು ಮೊಬೈಲ್ನಲ್ಲಿ ಹಂಚಿಕೊಳ್ಳುತ್ತಿದ್ದರು. ತಡ ರಾತ್ರಿಯವರೆಗೂ ಇಬ್ಬರು ಚಾಟಿಂಗ್ ಮಾಡುತ್ತಿದ್ದರು. ಡಿಗ್ರಿ ಮುಗಿದು ಇಬ್ಬರೂ ದೂರವಿದ್ದರೂ ಸ್ನೇಹ ಕಳೆದುಕೊಂಡಿರಲಿಲ್ಲ. ತನ್ನ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಹೋಗಿದ್ದ ಸಂತೋಷ್ ಬಿಡುವು ಮಾಡಿಕೊಂಡು ಪ್ರೀತಿಗೆ ಮೆಸೇಜ್ ಮಾಡ್ತಿದ್ದ. ಕೆಲವು ದಿನಗಳ ನಂತರ, ಮೆಸೇಜ್ ಮಾಡುವುದು ಕಡಿಮೆ ಆಯ್ತು. ಕೇಳಿದರೆ ತಾಯಿಗೆ ಹುಷಾರಿಲ್ಲ, ಆಸ್ಪತ್ರೆಗೆ ಬಂದಿರುವುದಾಗಿ ಹೇಳಿದ. ಸಮಯ ಸಿಕ್ಕಾಗೆಲ್ಲ ಒಂದೊಂದು ಮೆಸೇಜ್ ಮಾಡ್ತಿದ್ದ ಅಷ್ಟೆ. ದಿನಕಳೆದಂತೆ ಅದೂ ಕಡಿಮೆ ಆಯ್ತು. ಒಂದು ವಾರದಿಂದ ಪ್ರೀತಿ ಮೆಸೇಜ್ ಮಾಡಿದ್ರೂ ಅದು ಸಂತೋಷ್ಗೆ ತಲುಪುತ್ತಿರಲಿಲ್ಲ. ಕಾಲ್ ಮಾಡಿದ್ರೆ ಸ್ವಿಚ್ಡ್ ಆಫ್.

-ವರದೇಂದ್ರ ಕೆ.


ಮುಂದುವರೆಯುವುದು…


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
trackback

[…] ಇಲ್ಲಿಯವರೆಗೆ.. […]

1
0
Would love your thoughts, please comment.x
()
x