
(11)
“ತಪ್ಪು ಮಾಡುವುದು ಸಹಜ, ಅದನ್ನು ಅರಿತು ಪಶ್ಚಾತ್ತಾಪದಿಂದ ಬದಲಾಗಿ ಉತ್ತಮ ವ್ಯಕ್ತಿ ಆಗುವವನೇ ನಿಜವಾದ ಮನುಜ. ನಾವು ಖಂಡಿತ ನಿಮ್ಮನ್ನು ಕ್ಷಮಿಸುತ್ತೇವೆ, ನಿಮ್ಮ ಮೇಲಿನ ಕೋಪವೆಲ್ಲ ಪ್ರೀತಿಗೆ ಇಂದು ಇಳಿದಿದೆ. ಅವಳ ಮನದಲ್ಲಿನ ನೋವು ಇಂದು ಹೊರ ಬಂದು ಅವಳ ಮನಸು ನಿರಾಳವಾಗಿದೆ.
ಪ್ರೀತಿ ಇಷ್ಟು ನೊಂದಕೊಂಡ ಮನುಷ್ಯನಿಗೆ ಮತ್ತೆ ನೋವು ಕೊಡುವುದು ತರವಲ್ಲ. ನಿಮ್ಮ ಸ್ನೇಹ ಯಾವತ್ತಿಗೂ ಚಿರಾಯುವಾಗಿರಬೇಕು. ನೀನೂ ನಿನ್ನ ಸ್ನೇಹಿತನ ತಪ್ಪನ್ನು ಮನ್ನಿಸಬೇಕು ಎಂದು ಪ್ರೀತಿಗೆ ಹೇಳುತ್ತಾನೆ ಸಂಪತ್. ಸಂತೋಷ್ ಎಂದಿಗೂ ನಿಮ್ಮ ಸ್ನೇಹ ಅಮರವಾಗಿರುತ್ತದೆ. ನೀವು ನಿಶ್ಚಿತೆಯಿಂದಿರಬೇಕು. ನಾವು ಎಲ್ಲವನ್ನೂ ಮರೆತುಸ್ನೇಹದಿಂದಿರೋಣ” ಎಂದು ಹೇಳಿ ತನ್ನ ಉದಾರ ಮನಸನ್ನು ತೋರುತ್ತಾನೆ ಸಂಪತ್.
ತನ್ನ ಗಂಡನ ನಡೆ ಕಂಡು, ನೆಮ್ಮದಿಯ ನಿಟ್ಟುಸಿರು ಬಿಟ್ಟ ಪ್ರೀತಿ, “ನಿಜ ಸಂತೋಷ್ ಆದ ಕಹಿ ಘಟನೆಯಿಂದ ನಾನು ಸಂಪೂರ್ಣವಾಗಿ ಬಳಲಿ ಹೋಗಿದ್ದೆ. ನೀನು ಮಾಡಿದ್ದು ತಪ್ಪಾದರೂ ನಮ್ಮಿಬ್ಬರ ಅತಿಯಾದ ಸ್ನೇಹ ನಿನ್ನನ್ನು ಹಾಗೆ ಮಾಡಿಸಿದೆ. ಅಂದಿನ ಪರಿಸ್ಥಿತಿಯಲ್ಲಿ ನೀನು ನೀನಾಗಿರಲಿಲ್ಲ. ಎಲ್ಲವನ್ನೂ ಕ್ಷಮಿಸಿ ನನ್ನನ್ನೇ ನನ್ನ ನಲ್ಲ ಒಪ್ಪಿಕೊಂಡ ಮೇಲೆ ನನ್ನ ಗೆಳೆಯನನ್ನು ನಾನು ಕ್ಷಮಿಸದಿರಲು ಸಾಧ್ಯವೇ. ನಾನೂ ನಿನ್ನನ್ನು ಕ್ಷಮಿಸುತ್ತೇನೆ. ಆದರೇ….?! ಎಂದು ತನ್ನ ಗಂಡನ ಬಳಿ ಓಡಿಹೋಗಿ ತಬ್ಬಿಕೊಂಡು ಅಳುತ್ತಾಳೆ. ಆದರೆ.. ! ಏನು? ಎಂದು ಕೇಳಬೇಕೆಂಬ ಮಾತು ಬಾಯಿಗೆ ಬಂದರೂ, ತುಟಿಕಚ್ಚಿ; ತನ್ನ ಗೆಳತಿಯ ಸಂಸಾರದ ಸಂತೋಷದ ಸಂಪತ್ತನ್ನು ಕಂಡು ಸಂತೋಷ್ ನೆಮ್ಮದಿಯ ಉಸಿರಿನೊಂದಿಗೆ, ಸುಮ್ಮನಾಗುತ್ತಾನೆ.
ಸಂಪತ್ ಅಮ್ಮ ಈಗ ಹಾಗಿದ್ದಾರೆ? ವಾರ್ಡ್ಗೆ ಶಿಫ್ಟ್ ಮಾಡಿದ್ರಾ? ಎಂದು ಸಂತೋಷ್ ಕೇಳುತ್ತಾನೆ. “ಬಾ ತೋರಿಸುವೆ ಎಂದು ಅಮ್ಮನ ಬಳಿ ಕರೆದೊಯ್ದು, ಇವರು ಸಂತೋಷ್ ಗೋಪಾಲಯ್ಯನವರ ಮಗ, ಅವರಂತಹ ಮುಖವಿದೆ ಆದರೂ ಮನಸಿನಲ್ಲಿ ಅವರಂತಹ ಕ್ರೌರ್ಯವಿಲ್ಲ, ಅಮ್ಮ. ಇವರಿಂದಲೇ, ಇವರ ಸಮಯ ಪ್ರಜ್ಞೆಯಿಂದಲೇ ಇಂದು ನೀನು ನಮಗೆ ಜೀವಂತವಾಗಿ ಸಿಕ್ಕಿರುವುದು”ಎನ್ನುವುದರಲ್ಲಿ ಸಂತೋಷ್ ಕಮಲಮ್ಮನವರಿಗೆ ನಮಿಸಿ ಕ್ಷಮೆ ಕೇಳುತ್ತಾನೆ. ತಾನು ಮನೆಗೆ ಸಂಪತ್ ನನ್ನು ಭೇಟಿ ಆಗಲು ಬಂದಿದ್ದಾಗಿ, ತಾನು ಸಂಪತ್‌ನ ಗೆಳೆಯನೆಂದು ಹೇಳಿಸುಮ್ಮನಾಗುತ್ತಾನೆ.
ಸಂಪತ್ ಮತ್ತು ಕಮಲಮ್ಮನ ಆರೈಕೆಯಲ್ಲಿ ಪ್ರೀತಿಯು ತುಂಬು ಗರ್ಭಾವಸ್ಥೆಯನ್ನು ಸಂತೋಷದಿಂದ ಕಳೆಯುತ್ತಾಳೆ. ಮುದ್ದಾದ ಹೆಣ್ಣು ಮಗುವಿಗೆ ತಾಯಿಯಾಗುತ್ತಾಳೆ. ಸಂತೋಷ್ ಸಂಪತ್ ಇಬ್ಬರ ನಡುವೆಯೂ ಆತ್ಮೀಯತೆ ಬೆಳೆದಿರುತ್ತದೆ. ಸಂತೋಷ್ ಆಗಾಗ ಬಂದು ಹೋಗುತ್ತಿರುತ್ತಾನೆ. ಪ್ರೀತಿ ಮತ್ತು ಸಂಪತ್ ರ ಸುಖ ಸಂಸಾರ ಕಂಡು ಸಂತೋಷ್ ಖುಷಿಯಾಗಿದ್ದರೂ, ಅವನ ಒಂಟಿತನ ಅವನನ್ನು ಕಿತ್ತುತಿನ್ನುತ್ತಿರುತ್ತದೆ. ಪ್ರತಿ ಬಾರಿ ಬಂದಾಗಲೂ ಸಂತೋಷ್ನಲ್ಲಿಆಗುವ ಬದಲಾವಣೆ, ಪ್ರೀತಿಯ ಗಮನಕ್ಕೆ ಬರುತ್ತಿರುತ್ತದೆ. ಒಂಟಿತನದ ಖಿನ್ನತೆ ಸಂತೋಷ್‌ನಲ್ಲಿ ಕಂಡ ಪ್ರೀತಿ, ಮನಸಲ್ಲೇ ರೋಧಿಸುತ್ತಾಳೆ. ಏನಾದರು ಮಾಡಿ ಸಂತೋಷ್ ಜೀವನಕ್ಕೆಒಂದು ದಾರಿ ಮಾಡಬೇಕೆಂದು ನಿಶ್ಚಯಿಸುತ್ತಾಳೆ.
(12 )
ಸಂಪತ್ ಪ್ರಿತಿ ಮಧ್ಯೆ ನಿಂತೇ ಹೋಗಿದ್ದ ದಾಂಪತ್ಯ ಜೀವನವನ್ನ ಮೊದಲು ಪ್ರಾರಂಭಿಸಬೇಕೆಂದು, ಪ್ರೀತಿ ಒಂದು ಸುಸಂದರ್ಭದಲ್ಲಿ ಸಂಪತ್‌ನನ್ನು ಒರಿಸುತ್ತಾಳೆ. ಈ ವಿಷಯಕ್ಕೇ ಬೇಸರಗೊಂಡರೂ, ಸಹಿಸಿಕೊಂಡಿದ್ದ ಸಂಪತ್‌ನ ತಾಳ್ಮೆ ನಿಜಕ್ಕೂ ಗೆದ್ದುಬಿಡುತ್ತದೆ. ಖುಷಿಯಿಂದ ಸಂಪತ್ ಪ್ರೀತಿ ಒಂದಾಗುತ್ತಾರೆ.
ಮಿಲನದ ಸವಿ ಸವಿಯುತ್ತಲೇ ಪ್ರೀತಿ ಮರುವರ್ಷದಲ್ಲೇ ಮತ್ತೊಂದು ಮಗುವಿನ ತಾಯಿಯಾಗುತ್ತಾಳೆ. ಗಂಡು ಮಗು, ಮನೆಯಲ್ಲಿ ಆನಂದ ತುಂಬುತ್ತದೆ. ಗಂಡನೇ ಮತ್ತೆ ಹುಟ್ಟಿ ಬಂದ ಸಂತೋಷ, ಕಮಲಮ್ಮನದಾಗುತ್ತದೆ.
ಒಂದು ದಿನ ಸಂತೋಷ್ ಪ್ರೀತಿ ಮನೆಗೆ ಬರುತ್ತಾನೆ. ಪ್ರೀತಿ, ಕಮಲಮ್ಮ, ಮಕ್ಕಳನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋಗಿರುತ್ತಾರೆ. ಸಹಜವಾದ ಕುಶಲೋಪರಿಯ ಜೊತೆಗೆ ಸಂತೋಷ್, “ಸಂಪತ್, ನನ್ನದೊಂದು ಬೇಡಿಕೆಯಿದೆ, ನೀವು ಬೇಸರ ಆಗುವುದಿಲ್ಲವೆಂದರೆ ಹೇಳುತ್ತೇನೆ”. ಎನ್ನುತ್ತಾನೆ. “ಸಂತೋಷ್, ಇಷ್ಟು ಆತ್ಮೀಯತೆ ಇರುವ ನಮ್ಮ ಮಧ್ಯೆ ಬೇಸರದ ಮಾತೆಲ್ಲಿ ದಯವಿಟ್ಟು ಕೇಳಿ” ಎನ್ನುತ್ತಾನೆ ಸಂಪತ್.
ಅದೂ.. “ನಾನು ಒಬ್ಬಂಟಿಯಾಗಿದ್ದೇನೆ, ಅದು ನಿಮಗೂಗೊತ್ತು. ತಂದೆ ಇದ್ದಾರಾದರೂ ಅವರಿಂದ ನನ್ನ ಒಂಟಿತನ ದೂರವಾಗುವುದಿಲ್ಲ. ಮದುವೆ ಮಾಡಿಕೊಳ್ಳೋಣವೆಂದರೆ, ಸಂಸಾರ ಮಾಡುವ ಶಕ್ತಿಯನ್ನೂ ಕಳೆದುಕೊಂಡಿದ್ದೇನೆ. ಒಂದು ಬಾರಿ ಹೆಣ್ಣಿಗೆ ಮಾಡಿದ ದ್ರೋಹದ ಫಲ. ಈಗ ನನ್ನ ಮನಸಿಗೆ ತೋಚಿದ್ದು ಅದೊಂದೆ, ಅದಕ್ಕೆ ನಿಮ್ಮ ಸಹಕಾರದ ನಿರೀಕ್ಷೆಯಲ್ಲಿದ್ದೇನೆ.”
“ಸಂತೋಷ್, ಪ್ಲೀಸ್ ಅದೇನೆಂದು ಹೇಳಿ. ನನ್ನ ಮತ್ತು ಪ್ರೀತಿಯ ಆತ್ಮೀಯ ಗೆಳೆಯರಾದ ನೀವು ಇಷ್ಟೊಂದು ಕೇಳಿಕೊಳ್ಳಬೇಕೇ?” ದಯವಿಟ್ಟು ಸಂಕೋಚವಿಲ್ಲದೆ ಹೇಳಿ, ಎಂಬ ಸಂಪತ್ ಮಾತಿಗೆ..
ಸಂತೋಷ್: “ಸಂಪತ್, ನಾನು ಒಂದು ಮಗುವನ್ನು ದತ್ತು ತೆಗೆದುಕೊಳ್ಳಬೇಕೆಂದು ನಿರ್ಧಾರ ಮಾಡಿದ್ದೇನೆ. ಅನಾಥಾಲಯದಿಂದ ತಂದೆ ತಾಯಿ ಯಾರೆಂದು ತಿಳಿಯದ ಮಗುವನ್ನು ದತ್ತು ಪಡೆದು ಸಾಕಿ ಸಲಹುವ ಬದಲು, ನನಗೆ ತಿಳಿದವರ, ತಂದೆ ತಾಯಿ ಇಬ್ಬರೂ ಇರುವ ಮಗುವನ್ನು ಶಾಸ್ತ್ರೋಕ್ತವಾಗಿ ದತ್ತು ಪಡೆದು ಅದರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂಬುದೇ ನನ್ನಾಸೆ. ಹೆಣ್ಣಿಗೆದ್ರೋಹ ಮಾಡಿದ ನಾನು; ಹೆಣ್ಣು ಮಗುವನ್ನೇ ದತ್ತು ಪಡೆದು ಅದರ ಲಾಲನೆ ಪೋಷಣೆ ಮಾಡಿ ನನ್ನ ಪಾಪವನ್ನು ಕಳೆದುಕೊಳ್ಳಬೇಕೆಂದುಕೊಂಡಿದ್ದೇನೆ. ಅಷ್ಟೇ ಅಲ್ಲ ಸಂಪತ್, ನಾನು ನಿಮ್ಮ ಕುಟುಂಬಕ್ಕೆ ಮಾಡಬಾರದ ಮೋಸ ಮಾಡಿದ್ದು ಪ್ರಾಯಶ್ಚಿತ್ತವಾಗಿ ನಿಮ್ಮ ಮಗುವನ್ನೇ ದತ್ತು ಪಡೆಯಬೇಕೆಂಬುದು ನನ್ನ ಅಭಿಲಾಷೆ. ಈ ರೀತಿಯಾದರೂ ನನ್ನ ಮನಸು ಕೊಂಚ ನೆಮ್ಮದಿ ತಾಳುತ್ತದೇನೋ ಎಂಬುದು ನನ್ನ ಅನಿಸಿಕೆ.
ಒತ್ತಾಯವಿಲ್ಲ, ಅವಸರವೂ ಇಲ್ಲ. ಪ್ರೀತಿ, ನೀವು ಮಾತಾಡಿ ನಿಮ್ಮ ನಿರ್ಧಾರ ತಿಳಿಸಿ. ಅದು ನನ್ನ ಪರವಾಗಿದ್ದರೂ ಸರಿ, ಇರದಿದ್ದರೂ ಸರಿ. ತಿಳಿಸಲು ಯಾವ ಸಂಕೋಚ ಬೇಡ. ನಮ್ಮ ಸ್ನೇಹಕ್ಕಂತೂ ಈ ಕಾರಣದಿಂದ ಯಾವ ಬಾಧೆಯೂ ಬರಬಾರದು. ನಿಮ್ಮ ತೀರ್ಮಾನವನ್ನು ನಾನು ಗೌರವಿಸುತ್ತೇನೆ. ನಾ ಇನ್ನು ಹೋಗಿ ಬರುತ್ತೇನೆ.” ಎಂದು ಹೇಳಿ ಹೊರಡುತ್ತಾನೆ.
ಇತ್ತ ಸಂಪತ್, ಸಂತೋಷ್‌ನ ಮಾತಿನ ಕುರಿತು ಯೋಚಿಸತೊಡಗುತ್ತಾನೆ. ಸಂತೋಷ್‌ನ ಮಾತಿನಲ್ಲಿ ದಿಟ್ಟ ನಿರ್ಧಾರವಿದೆ. ತಾನು ಮಾಡಿದ ಪಾಪದಿಂದ ಆದ ಮನೋವೇದನೆಯಿಂದ ಹೊರಬರಲು ಈ ರೀತಿಯಾಗಿ ಯೋಚಿಸುತ್ತಿರುವುದು ಸರಿಯೇ ಇದೆ. ಒಂಟಿಯಾಗಿ ಸಂತೋಷ್ ದಿನದಿಂದ ದಿನಕ್ಕೆ ಹದಗೆಡುತ್ತಿರುವುದೂ ಅರಿತು, ಪ್ರೀತಿಯ ಜೊತೆ ಮಾತನಾಡಬೇಕೆಂದುಕೊಳ್ಳುತ್ತಾನೆ. ಅಷ್ಟರಲ್ಲಿ ಎಲ್ಲರೂ ದೇವಸ್ಥಾನದಿಂದ ಮರಳಿ ಬರುತ್ತಾರೆ. ತಾಯಿಗೆ ತಿಳಿಯದಂತೆ ಪ್ರೀತಿಯನ್ನು ಕೋಣೆಗೆ ಕರೆದು ಮಾತಿಗಿಳಿಯುತ್ತಾನೆ.
“ಪ್ರೀತಿ, ಇವತ್ತು ಸಂತೋಷ್ ಬಂದಿದ್ದ.”
“ಹೌದೇನ್ರಿ ಹೇಗಿದಾನೆ? ಇತ್ತೀಚೆಗೆ ತುಂಬಾ ಸೊರಗುತ್ತಿದ್ದಾನೆ ರಿ. ಏನೋ ಒಬ್ಬ ಮಾನಸಿಕ ರೋಗಿಯಂತಾಗಿದ್ದಾನೆ. ರೀ ಅವನ ಬದುಕಿಗೆ ಏನಾದರೊಂದು ದಾರಿ ಮಾಡಬೇಕು. ತಾನು ಮಾಡಿದ ತಪ್ಪಿನಿಂದ ಕೊರಗಿ ಕೊರಗಿ ಪೂರ್ತಿ ಖಿನ್ನನಾಗಿದ್ದಾನೆ. ಅವನನ್ನು ಖಿನ್ನತೆಯಿಂದ ಹೊರತರಬೇಕು ರಿ. ಮತ್ತು ಅವನ ಒಂಟಿತನಕ್ಕೆ ಮುಕ್ತಿ ತೋರಬೇಕು. ಆದರೆ ಅವನು ಮದುವೆಯೇ ಆಗುವುದಿಲ್ಲ ಎನ್ನುತ್ತಾನೆ. ಮದುವೆ ಆದರೂ ಸಂಸಾರ…” ಸಾಧ್ಯವಿಲ್ಲವಲ್ಲರಿ.
“ಪ್ರೀತಿ, ಇವತ್ತು ಅವನು ಬಂದದ್ದೂ ಅದಕ್ಕೆ ಕಣೆ. ಮದುವೆಯಂತೂ ಆಗುವುದಿಲ್ಲ ಎಂದ, ಆದರೇ….”
“ಏನ್ರೀ ಅದು”
ಅದು, ಸಂತೋಷ್ ಒಂದು ಮಗುವನ್ನು ದತ್ತು ಪಡೆಯಬೇಕೆಂದುಕೊಂಡಿದ್ದಾನೆ. ಆದರೆ ಆ ಮಗು ನಮ್ಮ ಮಗಳೇ ಯಾಕಾಗಬಾರದು? ನಮ್ಮ ಮಗಳನ್ನೇ ಯಾಕೆ ದತ್ತು ಪಡೆದು ಕೊಳ್ಳಬೇಕೆಂದಿದ್ದಾನೆ, ಎಂಬುದನ್ನು ಮತ್ತು ಸಂತೋಷ್ ಹೇಳಿದ ಎಲ್ಲ ವಿಷಯವನ್ನೂ ಪ್ರೀತಿಗೆ ಹೇಳುತ್ತಾನೆ. ಗೆಳೆಯನ ಮನಸ್ಥಿತಿ ಕುರಿತು ಕೇಳಿದ ಪ್ರೀತಿಗೆ, ದುಃಖ ಉಮ್ಮಳಿಸಿ ಬರುತ್ತದೆ. ತಡೆದು ಕೊಂಡು ಸುಮ್ಮನಾಗುತ್ತಾಳೆ.
“ಪ್ರೀತಿ ನಿನ್ನ ಜೊತೆ ಮಾತಾಡಿ ತಿಳಿಸಿ ಎಂದಿದ್ದಾನೆ. ನಿನ್ನ ಅಭಿಪ್ರಾಯ ಏನು ಪ್ರೀತಿ?
ಸಂತೋಷ್ ನನಗೂ ಆತ್ಮೀಯ ಗೆಳೆಯ. ಅವನು ಅದೊಂದು ತಪ್ಪು ಮಾಡಿದ್ದಾನೆಂಬುದು ಬಿಟ್ಟರೆ, ತುಂಬ ಒಳ್ಳೆಯ ಮನುಷ್ಯ. ಹಾಗಾಗಿ ಅವನ ಬಳಿ ನಮ್ಮ ಮಾಧುರಿ ಇರುವುದು ನನಗೂ ಖುಷಿಯೇ. ಆದರೆ…….
“ಆದರೆ….
“ಏನು ಪ್ರೀತಿ, ಮಾಧರೀ…. ಅವನ……..” ತಡೆದು,
ರೀ…….
ಎಂದು ಕಣ್ಣಿರು ಸುರಿಸುತ್ತಾಳೆ ಪ್ರೀತಿ. ಆದ ದರ್ಘಟನೆಯ ಬಗ್ಗೆ ಇದ್ದ ಬೇಸರ ಮತ್ತು ನೋವನ್ನು ಮತ್ತೆ ಹೊರಹಾಕುತ್ತಾಳೆ.
“ಪ್ರೀತಿ, ನನ್ನ ಮುದ್ದು ಬಂಗಾರಿ, ನಾನು ನಿನ್ನ ಮಾತನ್ನು ಮುಂದುವರೆಸಿದೆ ಅಷ್ಟೆ. ನೊಂದುಕೊಳ್ಳಬೇಡ. ಆ ವಿಷಯ ಈಗ ಬೇಡ. ಮಾಧುರಿ ಅವನ ರಕ್ತ ಎಂಬುದು ನನಗೆ ನಿನಗೆ ಮಾತ್ರ ಗೊತ್ತು. ಈ ವಿಷಯ ಅವನಿಗೂ ತಿಳಿಯಬಾರದು”. ಎಂದು ಪ್ರೀತಿಯನ್ನು ಸಂತೈಸುತ್ತಾನೆ.
“ಪ್ರೀತಿ ನಮ್ಮ ಮಗಳೆಂದುಕೊಂಡ, ಮಾಧುರಿ ಅವನ ಮಗಳೆಂಬುದು ಅವನಿಗೆ ತಿಳಿದಿಲ್ಲ. ನಾವು ಅವನಿಗೆ ಮಾಧುರಿಯನ್ನು ದತ್ತು ಕೊಟ್ಟರೂ ಒಂದು ರೀತಿ ನೈತಿಕವಾಗಿ, ಮತ್ತು ಮಾನವೀಯತೆ ದೃಷ್ಟಿಯಿಂದ ಒಳ್ಳೆಯದೆನಿಸುತ್ತದೆ. ಇದರಲ್ಲಿ ನನ್ನ ಅಭ್ಯಂತರವೇನಿಲ್ಲ. ಆದರೆ ನಿನ್ನ ಮತ್ತು ಅಮ್ಮನ ನಿರ್ಧಾರದ ಮೇಲೆ ಸಂತೋಷನ ನೆಮ್ಮದಿ, ನಗು ನಿಂತಿದೆ. ಅವನ ಆತ್ಮೀಯ ಗೆಳೆಯನಾದ ನಾನು ಇದನ್ನು ಒಪ್ಪುತ್ತೇನೆ”.
ನೀ ಏನಂತಿ?
“ರೀ, ನಿಮ್ಮ ಒಳ್ಳೆಯ ಗುಣವನ್ನು ನಾನೆಷ್ಟು ಹೊಗಳಿದರೂ ಸಾಲದು. ನಿಮ್ಮ ಮಾತಿಗೆ ನನ್ನ ಸಮ್ಮತಿಯೂ ಇದೆ ರಿ.
ಸಂಪತ್: “ಪ್ರೀತಿ ನಾವು ಈಗ ಅಮ್ಮನನ್ನು ಒಪ್ಪಿಸಬೇಕು ಬಾ” ಎಂದು ಅಮ್ಮನ ಬಳಿ ಬಂದು; ಸಂತೋಷ್ ಕಾರು ಅಪಘಾತದಲ್ಲಿ ಪುರುಷತ್ವ ಕಳೆದುಕೊಂಡದ್ದು, ಮದುವೆಯೂ ಆಗುವುದಿಲ್ಲ ಎಂದದ್ದು. ತಮ್ಮ ಮಗಳನ್ನು ದತ್ತು ಕೊಟ್ಟರೆ ಚೆನ್ನಾಗಿ ಬೆಳೆಸುತ್ತಾನೆ. ಅವನಿಗೂ ಜಿವನಕ್ಕೆ ಭರವಸೆ ಸಿಕ್ಕಂತಾಗುತ್ತದೆ. ಅಲ್ಲದೆ ಮಾಧುರಿ ನಮ್ಮಿಂದ ದೂರವೇನೂ ಹೋಗುವುದಿಲ್ಲ, ಬೇಕಾದಾಗ ನೋಡಿಕೊಂಡು ಬರಬಹುದು. ಸಂತೋಷನೂ ಕರೆದುಕೊಂಡು ಬರುತ್ತಿರುತ್ತಾನೆ. ಎಂದು ಹೇಳಿ ಹಿರಿಮಗಳು ಮಾಧುರಿಯನ್ನು ದತ್ತು ಕೊಡುವುದಕ್ಕೆ ಒಪ್ಪಿಸುತ್ತಾರೆ.
ಸುಮುಹೂರ್ತದಲ್ಲಿ ತಮ್ಮ ಮಗಳನ್ನು ಸಂತೋಷ್‌ಗೆ ದತ್ತುನೀಡುತ್ತಾರೆ. ಸಂತೋಷನ ಬಾಳಿಗೆ ಮಾಧುರಿ ಬೆಳಕಾಗುತ್ತಾಳೆ. ಅವನ ಒಂಟಿತನ ಕಳೆದು ನೆಮ್ಮದಿಯನ್ನು ತಂದ ದೇವತೆ ಆಗುತ್ತಾಳೆ.
ಪ್ರೀತಿಯ ಗೆಳೆಯ ಸಂತೋಷ್ ಬಾಳಿಗೆ ನೆಲೆ ನೀಡಿದ ನೆಮ್ಮದಿ ಪ್ರೀತಿಗೆ. ನಲ್ಲನ ಪ್ರೀತಿಯ ಸೋನೆಯಲ್ಲಿ ಬದುಕನ್ನು ಬಂಗಾರವಾಗಿಸಿಕೊಂಡ ಸಂತೃಪ್ತಿ ಹೊಂದಿದ್ದಾಳೆ. ಗೆಳೆಯನಲ್ಲರ ಸ್ನೇಹ ಪ್ರೀತಿ ಎರಡನ್ನೂ ಶಾಶ್ವತವಾಗಿ ಉಳಿಸಿಕೊಂಡು ಸಂತೋಷದ ಬದುಕನ್ನು ಕಂಡುಕೊಳ್ಳುತಾಳೆ.
ಮುಗಿಯಿತು