ಅನಿ ಹನಿ

ಗೆಳೆತನದ ಸುವಿಶಾಲ ಆಲದಡಿ..:ಅನಿತಾ ನರೇಶ್ ಮಂಚಿ.

 
ಜೀವನದಲ್ಲಿ  ನನ್ನರಿವಿಗೆ ಬಂದಂತೆ ಮೊಟ್ಟ ಮೊದಲಿಗೆ ನನಗೊಂದು ಪ್ರಮೋಶನ್ ಸಿಕ್ಕಿತ್ತು. ಅದೂ ನಾವು ಅ ಊರಿಗೆ ಕಾಲಿಟ್ಟ ಕೆಲವೇ ಸಮಯದಲ್ಲಿ..

ಅಂಗನವಾಡಿಗೆ ಹೋಗಲಿಕ್ಕೆ ಶುರು ಮಾಡಿ ತಿಂಗಳಾಗಬೇಕಾದರೆ  ಡೈರೆಕ್ಟ್ ಆಗಿ ಒಂದನೇ ತರಗತಿಗೆ.. 
ಒಂದನೇ ತರಗತಿಗೆ  ವಯಸ್ಸು ಇಷ್ಟೇ ಆಗಿರಬೇಕೆಂಬ ಸರ್ಕಾರಿ ನಿಯಮವೇನೋ ಇದ್ದರೂ ಮಕ್ಕಳು ಮನೆಯಲ್ಲಿದ್ದರೆ ಅಪ್ಪ ಅಮ್ಮನಿಗೆ ಬೇಗನೇ ವಯಸ್ಸಿಗೆ ಬಂದಂತೆ ಕಾಣಿಸಲು ಶುರು ಆಗ್ತಾರಲ್ಲ ಅದಕ್ಕೇನು ಮಾಡೋದು.. ಹಾಗೆ ನಾನೂ ನನ್ನ ಅವಳಿ ಅಣ್ಣನೂ ಒಂದನೇ ತರಗತಿಯೊಳಗೆ ಉದ್ದದ ಒಂದೇ ಕೈ ಇರುವ ಬ್ಯಾಗ್, ಅದರೊಳಗೆ ಒಂದು ಸ್ಲೇಟ್ ಮತ್ತು ಒಂದೇ ಒಂದು ತುಂಡು ಬಳಪದ ಕಡ್ಡಿ ಹಿಡಿದುಕೊಂಡು  ಎಂಟ್ರಿ ಕೊಟ್ಟಿದ್ದೆವು.

ಒಂದನೇ ಕ್ಲಾಸ್ ಅಂದರೆ ಈಗಿನ ಕ್ಲಾಸುಗಳ ಮಕ್ಕಳಂತೆ ಪುಟ್ಟು ಮಕ್ಕಳು ಮಾತ್ರ ಇದ್ದ ತರಗತಿಯೇನೂ ಆಗಿರಲಿಲ್ಲ. ಆ ಕ್ಲಾಸನ್ನು ಬಿಟ್ಟು ಹೋಗಲೇ ಮನಸ್ಸಿಲ್ಲದೆ ಮೂರು ಮೂರು ವರ್ಷಗಳಿಂದ ಬೆಂಚ್ ಬಿಸಿ ಮಾಡುತ್ತಿದ್ದ ಹಳೆಯ ಹುಲಿಗಳ ಅಖಾಡವಾಗಿತ್ತು ಅದು. ಕ್ಲಾಸಿನೊಳಗೆ ಸರ್ ಬಂದ ಕೂಡಲೇ ಶುರು ಮಾಡುತ್ತಿದ್ದ ಸಹಸ್ರ ನಾಮಾರ್ಚನೆಗಳಲ್ಲಿ ಹಿಂದಿನ ಬೆಂಚ್ ಹುಡುಗರಿಗೆ ನಮ್ಮನ್ನು ತೋರಿಸಿ ’ ಇವ್ರನ್ನು ನೋಡಿ ಕಲೀರಿ.. ಇಲ್ಲಾಂದ್ರೆ ಈ ಜನ್ಮದಲ್ಲಿ ನೀವು ಉದ್ಧಾರ ಆಗೋದಿಲ್ಲ’ ಎಂಬುದು ದಿನ ನಿತ್ಯದ್ದಾಗಿತ್ತು. ಆಗೇನೋ ನಾವುಗಳು ಅವರೆಡೆಗೆ ತಿರುಗಿ ಹೆಮ್ಮೆಯ ನಗು ಬೀರಿದರೂ, ಸಾರ್  ಬೆನ್ನು ಹಾಕುತ್ತಿದ್ದಂತೆ   ನಮಗೆ   ಸಿಗುತ್ತಿದ್ದ ಮರ್ಯಾದೆ, ಮಾಯವಾಗುತ್ತಿತ್ತು. ನಂತರವೇ ಶುರು ಆಗುತ್ತಿದ್ದುದು ಅವರ ಚಿತ್ರ ವಿಚಿತ್ರ ಹಿಂಸೆಗಳು. ನಾವವರ ಶತ್ರುಗಳೇನೋ ಎಂಬಂತೆ ನಮ್ಮ ಸ್ಲೇಟಿನಲ್ಲಿ ಬರೆದಿದ್ದನ್ನು ಅಳಿಸಿ ಹಾಕುವುದು, ಬಳಪ ಕದ್ದು ಮುಚ್ಚಿಡುವುದು ಸ್ಲೇಟಿನ ಮೇಲೆ ಗೀರು ಹಾಕುವುದು, ಬ್ಯಾಗಿನ ಕೈ ಕತ್ತರಿಸುವುದು ಹೀಗೇ..  ಒಂದೆರಡು ಸಲ ಸರ್ ಗೆ ಹೇಳಿ ಕೋಲು ಮುರಿಯುವಂತೆ ಹೊಡೆಸಿದರೂ ಏನೂ ಪ್ರಯೋಜನ ಆಗಿರಲಿಲ್ಲ. ಮತ್ತೆ ದಿನಾ ಅದೇ ದೂರು, ದಿನಾ ಅದೇ ಶಿಕ್ಷೆ ಎಂದು ಕೊಡಲು ಸಾಧ್ಯವೇ.. ನಮ್ಮ ದೂರಲ್ಲದೇ ಪ್ರತಿ ಪಿರಿಯೆಡ್ಡಿನಲ್ಲಿ ಹೋಮ್ ವರ್ಕ್ ಮಾಡದಿದ್ದುದ್ದಕ್ಕಾಗಿ ತಿನ್ನಬೇಕಾಗಿದ್ದ ನಿತ್ಯ ಪುಷ್ಪಾರ್ಚನೆ ಬೇರೆಯೇ ಇತ್ತಲ್ಲಾ.. ಮೇಷ್ಟುಗಳಾದರೂ ಎಷ್ಟೆಂದು ಹೊಡೆದಾರು..!

ನಾನಂತೂ ಆ ದಿನ ಸರ್  ಕೊಟ್ಟಿದ್ದ ಹೋಮ್ ವರ್ಕ್  ಐದು ಸಲ ಎರಡನೇ ಮನೆ ಮಗ್ಗಿ ಬರೆಯೋದು.  ಅದನ್ನು ಸ್ಲೇಟಿನಲ್ಲಿ ಚೆಂದಕ್ಕೆ ಗೆರೆ ಹಾಕಿ ಬರೆದಿದ್ದೆ.  ಅದಕ್ಕೆ ಗುಡ್ ಅಂತ ಸಿಕ್ಕೇ ಸಿಗುತ್ತದೆ ಎಂಬ ಆಸೆಯೂ ಮನದೊಳಗೆ.

ಕುಶಿಯಲ್ಲಿ ತರಗತಿಗೆ ನುಗ್ಗಿದ್ದೆ. ಕ್ಲಾಸ್ ಪ್ರಾರಂಭ ಆಗುವುದಕ್ಕೆ ಸ್ವಲ್ಪ ಮೊದಲು ಎಲ್ಲರನ್ನೂ ಅಸೆಂಬ್ಲಿ ಹಾಲ್ ಗೆ ಬರಲು ಹೇಳಿದ್ದರು. ಅಂತಹ ವಿಶೇಷ ಸಂಗತಿಗಳೇನಾದರೂ ಇದ್ದರೆ ಮಾತ್ರ ಈ ಹಾಲ್ ನ ದರ್ಶನ ನಮಗಾಗುತ್ತಿದ್ದುದು. ಆ ದಿನ ಶಾಲಾ ಲೀಡರ್ ಅಂತ ನಮ್ಮಿಂದ ದೊಡ್ಡ ತರಗತಿಯ ಹುಡುಗನೊಬ್ಬನನ್ನು ನೇಮಿಸಿದ್ದರು. ’ಅರ್ರೇ..   ನಮ್ಮ ಕ್ಲಾಸಿನ ಕೆಲವು ಹುಡುಗರಿಗಿಂತಲೂ ಕುಳ್ಳಗಿದ್ದ ಅವನು ಅದು ಹೇಗಪ್ಪಾ ಶಾಲೆಯ ಲೀಡರ್ ಆದ’ ಎಂದು ಆಲೋಚಿಸುತ್ತಲೇ ತರಗತಿಯೊಳಗೆ ಬಂದಿದ್ದೆ. ಸರ್ ಒಳಗೆ ಬಂದು ಹಾಜರಿ ಕರೆದು ಹೋಮ್ ವರ್ಕ್ ತೋರಿಸಿ ಅಂದಾಗ ಹೆಮ್ಮೆಯಿಂದ ಬ್ಯಾಗ್ ತೆರೆದು ಸ್ಲೇಟ್ ಎತ್ತಿಕೊಂಡಿದ್ದೆ. ನೋಡಿದರೆ  ಖಾಲಿ ಸ್ಲೇಟ್.. ಒಂದಕ್ಷರವೂ ಇಲ್ಲ.. ಎಲ್ಲಾ ಅಳಿಸಿ ಇಟ್ಟಿದ್ದರು. 

ನಾನು ಬರೆದಿದ್ದೆ ಸಾರ್ .. ಯಾರೋ ಅಳಿಸಿದ್ದಾರೆ ಎಂದು ಅಳುತ್ತಲೇ ಹೇಳಿದರೂ ಎಂದು ಹೇಳಿದರೂ ಸುಳ್ಳು ಹೇಳುತ್ತಿದ್ದೀಯಾ ಅಂತ ಮೇಷ್ಟ್ರು  ಎಂದು ಒಂದು ಪೆಟ್ಟು ಕೊಟ್ಟರು. 
ಹೊಡೆದದ್ದು ಚರ್ಮಕ್ಕೆ ನಾಟದೇ ಮನಸ್ಸಿಗೇ ನಾಟಿತ್ತು. ನಾನು ಸುಳ್ಳು ಹೇಳುತ್ತಿಲ್ಲ ಅಂತ ಸಾಧಿಸಲೂ ಸಾಧ್ಯವಿಲ್ಲ. ಮೇಷ್ಟ್ರು ಎಂದರೆ ಹುಲಿ ಸಿಂಹಗಳೇನೋ ಎಂದು ಹೆದರುತ್ತಿದ್ದ ಕಾಲವದು. ಅವರೊಡನೆ ವಾದಿಸಲುಂಟೇ!

ನನ್ನ ಅಳುವಿಗೆ ಅಂತ್ಯವೇ ಇರಲಿಲ್ಲ. ಅದೂ ತಪ್ಪು ಮಾಡದೇ ಇದ್ದುದಕ್ಕಾಗಿ ಸಿಕ್ಕ ಪೆಟ್ಟು.. 
ಕೆಟ್ಟದ್ದೇ ಆಗಲಿ ಒಳ್ಳೆಯದ್ದೇ ಆಗ್ಲಿ ನಿರಂತರವಾಗಿ ಇರುವುದಿಲ್ಲ. ಎಲ್ಲದಕ್ಕೂ ಕೊನೆ ಅನ್ನುವುದು ಇದ್ದೇ ಇರುತ್ತದೆ. 
ನನಗೆ ಆ ಕೊನೆ ಸಿಕ್ಕಿದ್ದು ಒಂದು ಹೆಸರಿನ ರೂಪದಲ್ಲಿ.. ಅದೂ  ಆ ಹೆಸರಿನ ವ್ಯಕ್ತಿ ನನಗೆ ಪರಿಚಿತನಾಗುವ ಮೊದಲೇ.. 

ನಾವು ಊರಿಗೆ ಬಂದು ಹೆಚ್ಚೇನು ಸಮಯವಾಗದ ಕಾರಣ ಪರಿಚಿತರಿಂದ ಅಪರಿಚಿತರ ಸಂಖ್ಯೆಯೇ ಅಧಿಕವಿತ್ತು. ಅದೊಂದು ದಿನ ಸಂಜೆ ನಾವು ಮನೆ ತಲುಪಿದ ಕೂಡಲೇ ಅಮ್ಮ ನಮ್ಮ ಮುಖ ತೊಳೆಸಿ  ಬೇರೆ ಬಟ್ಟೆ ಹಾಕಿಸಿ ಬಾಗಿಲಿಗೆ ಬೀಗ ಹಾಕಿಕೊಂಡು ಒಂದು ಮನೆಗೆ ಕರೆದೊಯ್ದಳು. ಆ ಮನೆಯ  ಎದುರಿದ್ದ ಮರದ  ಗೇಟನ್ನು ದಾಟಿದೊಡನೆ ಅಲ್ಲಿನ ಹೂಗಿಡಗಳು ಅಮ್ಮನನ್ನು ಸೆಳೆದರೆ ನನಗೆ ಮತ್ತು ಅಣ್ಣನಿಗೆ ಇಷ್ಟವಾಗುವಂತಹ ವಸ್ತುಗಳು ಮನೆಯೊಳಗೆ ಇತ್ತು. ಅದೂ ಮೇಜಿನ ಮೇಲೆ ಒಂದು ರಾಶಿ.. ಅಂದವಾಗಿ ಜೋಡಿಸಿಕೊಂಡು..  ಪ್ಯಾಂಟಮ್, ವಿಕ್ರಮ್, ಎಂಬೆಲ್ಲಾ ಹೀರೋಗಳ ಕಥೆಗಳಿರುವ ಕಾಮಿಕ್ಸ್ ಪುಸ್ತಕಗಳು ಅಣ್ಣನ ಕೈ ಸೇರಿದರೆ ಅಮರಚಿತ್ರ ಕಥೆಗಳೊಳಗೆ ನಾನು ಮುಳುಗಿದ್ದೆ. 

ತಿಂಡಿ ತಿನ್ನಲು ಒಳ ಮನೆಗೆ ಕರೆದು ಮಣೆ ಹಾಕಿ ಕೂರಿಸಿದಾಗ ಅಮ್ಮ ಮಾತು ತೆಗೆದರು. ’ಎಲ್ಲಿ ನಿಮ್ಮ ಮಗ ಕಾಣ್ತಾ ಇಲ್ಲಾ..’ 
’ಅವನಾಗಲೇ ಶಾಲೆಯಿಂದ ಬಂದು ಆಡಲಿಕ್ಕೆ ಹೋಗಿ ಆಯ್ತು.ಈ ಹುಡುಗ್ರಿಗೆ ಯಾರು ಹೇಳೋದು.. ಇಡೀ ದಿನ ಆಟ ಆಟ ಆಟ.. ಇನ್ನು ನಮ್ಮವನೋ ಮಾಡದ ತರಲೆ ಕೆಲ್ಸಗಳೂ ಇಲ್ಲ ಬಿಡಿ. ದಿನಾ ಏನಾದ್ರು ಒಂದು ಮಾಡಿಕೊಂಡೇ ಇರ್ತಾನೆ. ಆದರೂ ಅವನಿಗೆ ಎಲ್ಲರ ಸಪೋರ್ಟ್ ಬೇರೆ. ಶಾಲೆಯಲ್ಲಿ ತರಲೆ ಮಾಡಿದ್ರೂ ಹುಡುಗ ಚುರುಕಿದ್ದಾನೆ ಅಂತ ಮೇಷ್ಟ್ರುಗಳು ಸುಮ್ಮನಾಗ್ತಾರೆ. ಅಕ್ಕ ಪಕ್ಕದ ಮನೆಯವರಿಗೆ ಇವನ ತುಂಟತನ ಇಷ್ಟ. ಹಾಗಾಗಿ ನನ್ನ ಬಯ್ಗಳನ್ನು ಕೇಳುವವರೆಗೆ ಅವನು ನನ್ನೆದುರಿನಲ್ಲಿ ಇರೋದೇ ಇಲ್ಲ. ಆದರೆ ಅಲ್ಲಿ ನೋಡಿ.. ಅವನು ನನ್ನ ತಂಗಿ ಮಗ. ಇಲ್ಲೇ ಶಾಲೆಗೆ ಹೋಗ್ತಾ  ಇದ್ದಾನೆ.  ಒಳ್ಳೇ ಹುಡುಗ.. ಈ ಸಲ ಶಾಲೆಯ ಲೀಡರ್ ಅವನೇ..’ ಎಂದರು. 

ನಾನು ಕುತೂಹಲದಿಂದ ಅತ್ತ ನೋಡಿದೆ. ಶಾಲೆಯ ಅಸೆಂಬ್ಲಿಯಲ್ಲಿ ಕಂಡ ಮುಖವೇ.. ಗಂಭೀರವಾಗಿ  ಶಾಲೆ ಪುಸ್ತಕ ಕೈಯಲ್ಲಿ ಹಿಡಿದು ಓದುತ್ತಾ ಕುಳಿತ ಆ ಹುಡುಗನೇನು ನಮ್ಮ ಜೊತೆ ಆಡಲು ಬರುವವನಂತೆ ಕಾಣಲಿಲ್ಲ.ನಾನು ಮತ್ತು ಅಣ್ಣನೂ ಅವರ ಹಿತ್ತಲಿನ ಗಿಣಿಕೆ ಹಣ್ಣು, ಪುಟ್ಟ ಟೊಮೇಟೋ ಹಣ್ಣು ಕೊಯ್ಯುತ್ತಾ ಹತ್ತಿರದಲ್ಲೇ ಇದ್ದ ಸೀಬೆ ಹಣ್ಣುಗಳನ್ನು ಆಸೆಯಿಂದ ನೋಡುತ್ತಿದ್ದೆವು. ಅದನ್ನು ಕಂಡ ಅವರು ’ಅಯ್ಯೋ.. ಇವ್ನು ಇನ್ನೂ ಬರ್ಲಿಲ್ಲ.. ಬಂದಿದ್ರೆ ಮಕ್ಕಳಿಗಾದ್ರೂ ಹಣ್ಣು ಕೊಯ್ದುಕೊಡಬಹುದಿತ್ತು..’ ಎಂದು ಅಲವತ್ತುಕೊಂಡರು.ನಾನು ಕೈಯಲ್ಲಿದ್ದ ಹಣ್ಣು ತಿನ್ನುತ್ತಾ ಆಡಲು ಹೊರಗೆ ಹೋಗಿದ್ದ  ಅವರ ಮಗನನ್ನು ಕಾಯುತ್ತಾ  ಕಾಮಿಕ್ಸ್ ಪುಸ್ತಕದಲ್ಲಿ ಮುಳುಗಿ ಹೋದೆ. ಅಣ್ಣ ಕೈಗೆ ಸಿಕ್ಕಿದ ಚಿಕ್ಕ ಕೋಲಿನಲ್ಲಿ ಸೀಬೆ ಹಣ್ಣು ಕೊಯ್ಯುವ ಪ್ರಯತ್ನ ಮಾಡುತ್ತಾ ಮರದ ಕೆಳಗೆ ಉಳಿದ.   ಅಮ್ಮ ಬಂದು ಮನೆಗೆ ಹೋಗೋಣ ನಡೀರಿ.. ಕತ್ತಲಾದರೆ ಕಷ್ಟ ಎಂದು  ಏಳಿಸಿದಾಗಲೇ ಎದ್ದದ್ದು. 

ಆ ದಿನ ಮನೆಯಲ್ಲಿ ಅಮ್ಮ ಅಪ್ಪನೊಡನೆ  ಮಾತನಾಡುವಾಗ ಕೇಳಿಸಿಕೊಂಡಿದ್ದೆ.. ’ಅವರ ಮಗನೂ ನಮ್ಮ ಮಕ್ಕಳ ಶಾಲೆಯಲ್ಲಿದ್ದಾನಂತೆ.. ಅಶೋಕ ಅಂತ ಹೆಸರು..ಅವನ ಅಣ್ಣನೇ ಶಾಲೆಯ ಲೀಡರ್ ಅಂತೆ..’ ಹ್ಹೋ.. ಆ ಹುಡುಗನ ಹೆಸರು ಕೇಳಲೆ ಮರೆತೆ’ ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.

ನನಗೆ  ಸೀಬೆ ಹಣ್ಣಿನ ಮರ ಹತ್ತದ, ಗಿಣಿಕೆ ಹಣ್ಣು ಕೊಯ್ದು ಕೊಡದ, ಮಾವಿನ ಮರಕ್ಕೆ ಕಲ್ಲು ಬಿಸುಡದ, ತೋಳೆರಿಸಿಕೊಂಡು ಯಾರೊಡನೆಯೂ ಕಾದಾಡದ ಶಾಲೆಯ ಲೀಡರಿನ ಹೆಸರು ಗೊತ್ತಿಲ್ಲದ್ದು ಏನೂ ತೊಂದರೆ ಎನ್ನಿಸಲಿಲ್ಲ.  ಆದರೆ ಅಶೋಕ ಅನ್ನುವವನು ಹಾಗಲ್ಲ. ಈ ಎಲ್ಲಾ ಮಂಗ ಬುದ್ಧಿಗಳ ಜೊತೆಗೆ ಶಾಲೆಯಲ್ಲಿ ಬುದ್ಧಿವಂತ ಹುಡುಗ ಎಂಬ ಹೆಗ್ಗಳಿಕೆಯ ಅವನದ್ದು. ಅವನಲ್ಲಿ ನಮ್ಮ ಕ್ಲಾಸಿನ ಮಕ್ಕಳ ಬಗ್ಗೆ ದೂರುಕೊಟ್ಟರೆ ..!! ಆದರೆ ಅವನನ್ನು ನೋಡಿಯೇ ಇರದ ನಾನು ನನ್ನ ಕ್ಲಾಸಿನ ಸಮಸ್ಯೆಗಾಗಿ ಅವನ  ಸಹಾಯ ಕೇಳುವುದು   ಹೇಗೆ ಎಂಬುದು ನನಗೆ ಗೊತ್ತಿರಲಿಲ್ಲ.. ಆದರೆ ಗೊತ್ತಿದ್ದದ್ದು ಒಂದೇ .. ಅವನ ಹೆಸರು..
ನನ್ನ ಮಂಡೆಗೆ ಆಗ ಹೊಳೆದ ಉಪಾಯವದು. ನೀನ್ಯಾಕೋ ನಿನ್ನ ಹಂಗ್ಯಾಕೋ.. ನಿನ್ನ ನಾಮದ ಬಲವೊಂದಿದ್ದರೆ ಸಾಕು ಎನ್ನುವುದನ್ನು ಪ್ರಮಾಣೀಕರಿಸಿದ್ದ ಹೊತ್ತದು. 

ಮರುದಿನ ಕ್ಲಾಸಿಗೆ ಹೋದವಳೇ ನನ್ನನ್ನು ಪೀಡಿಸುವ ಗುಂಪಿನ ಕಡೆಗೆ ತಿರುಗಿ ’ಇನ್ನು ಯಾರಾದರೂ ನನ್ನ ತಂಟೆಗೆ ಬಂದರೆ ಅಶೋಕನ ಹತ್ರ ಹೇಳ್ತೀನಿ .. ಅವನು ಯಾರು ಅಂತ ಗೊತ್ತಲ್ಲಾ.. ಅವನ ಅಣ್ಣನೇ ಶಾಲೆಯ ಲೀಡರ್ ಅದೂ ಗೊತ್ತು ತಾನೇ’ ಎಂದೆ. ಒಬ್ಬರ ಮುಖ ಇನ್ನೊಬ್ಬರು ನೋಡಿಕೊಂಡು ಮೌನವಾದರು. ಅದಕ್ಕೆ ಸರಿಯಾಗಿ  ಕೆಲ ಮಕ್ಕಳು ನೋಡಲ್ಲಿ ಅಶೋಕ ಈ ಕಡೆಯೇ ಬರ್ತಾ ಇದ್ದಾನೆ ಎಂದು ಪಿಸುಗುಟ್ಟಲು ತೊಡಗಿದರು. ನಾನು ಅತ್ತ ಕಡೆ ನೋಡಿದರೂ ಅಲ್ಲಿ ಬರುತ್ತಿದ್ದ ಹತ್ತಾರು ಹುಡುಗರಲ್ಲಿ ಅಶೋಕ ಯಾರು ಎಂದು  ನನಗೂ ತಿಳಿದಿರಲಿಲ್ಲ. ಆದರೆ  ನನ್ನನ್ನು ಪೀಡಿಸುವ  ಮಕ್ಕಳು ನಿಜಕ್ಕೂ ಹೆದರಿಕೊಂಡಿದ್ದರು. ಮೇಷ್ಟ್ರ ಪೆಟ್ಟಿಗೇ ಹೆದರದ ಇವರುಗಳು ಈಗ ಬಾಲ ಮಡಚಿಕೊಂಡಿದ್ದರು.
ಅದೇ ಕೊನೆ.. ಮತ್ತೆ ನನ್ನ ತಂಟೆಗೆ ಬರುವ ಧೈರ್ಯ ಯಾರಿಗೂ ಇರಲಿಲ್ಲ. 

ಇದಾಗಿ ಕೆಲವು ದಿನಗಳಲ್ಲಿ ನಾವೆಲ್ಲಾ ಪರಿಚಿತರಾದೆವು. ನಮ್ಮ ಮನೆಯಲ್ಲಿ ಅಮ್ಮ  ಮಾಡಿದ ರವೆ ಉಂಡೆಗೆ ಅವನು ಪಾಲುದಾರನಾದರೆ ಅವರ ಮನೆಯ ಎಲ್ಲಾ ತಿಂಡಿಗಳ  ಬಹುಪಾಲು ನನಗೇ..ನಮ್ಮ ಮನೆಯಲ್ಲಿ ನಾನಿಲ್ಲ ಎಂದಾದರೆ ಅವರ ಮನೆಯ ಪುಸ್ತಕ ಕೋಣೆಯಲ್ಲಿ  ಪುಸ್ತಕಗಳನ್ನೆಳೆದು ರಾಶಿ ಹಾಕಿಕೊಂಡು ಕುಳಿತಿದ್ದೇನೆ ಎಂದೇ ಅರ್ಥ.

 ಮತ್ತೆಷ್ಟೋ ಸಮಯ ಕಳೆದ ನಂತರ  ನಾವೆಲ್ಲಾ ಒಂದೇ ತರಲೆ ಗ್ರೂಪಿಗೆ ಸೇರಿದವರಾದ  ಮೇಲೆ ಅಶೋಕನಿಗೆ ಈ ಸಂಗತಿ  ಹೇಳಿ ಜೋರಾಗಿ ನಕ್ಕಿದ್ದೆವು. 
ಕಾಲ ಸರಿಯುತ್ತಾ ಹೋಯಿತು.. ನಮ್ಮ ಆ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾ.. ಅದೇ ನಿಷ್ಕಲ್ಮಶ ನಗುವನ್ನು ಇನ್ನೂ ತುಟಿಗಳಲ್ಲಿ ಅರಳಿಸುತ್ತಾ.. ಈಗಿರುವ ನೂರಾರು ಮೈಲುಗಳ ದೂರದ ಅಡ್ಡಿಯನ್ನು ನಿವಾರಿಸುತ್ತಾ..  

ಈಗಲೂ ಅದೇ ಸ್ನೇಹ, ಅದೇ ಪ್ರೀತಿ,  ಮತ್ತು ಹಾಗೆಯೇ ತರಲೆ ಕೆಲಸಗಳನ್ನು ಮಾಡುವ ನಾವುಗಳು ಇನ್ನೂ ಬಾಲ್ಯದಲ್ಲೇ ಉಳಿದುಬಿಟ್ಟಿದ್ದೇವೆ. ದೊಡ್ಡವರಾಗಲೇ ಇಲ್ಲ..ಆಗುವುದೂ ಇಲ್ಲ..
ಅವನ ಹುಟ್ಟುಹಬ್ಬ ಮೊನ್ನೆಯಷ್ಟೇ ಕಳೆಯಿತು.
ಇದೀಗ ಅವನಿಗೆ ಶುಭಾಶಯ ಹೇಳುವ ಸಮಯ..

 ಮೂರು ಕೋಣನ ವಯಸ್ಸಾಯ್ತು ನಿಂಗಿನ್ಯಾವಾಗ ಬುದ್ಧಿ ಬರುತ್ತೋ….  ಅಲ್ಲಾ ನಂಗೆ ಚಾಕೋಲೇಟ್, ಕೇಕ್ ಎಲ್ಲಾ ಮೊದಲೇ ಪಾರ್ಸೆಲ್ ಕಳಿಸ್ಬೇಕು ಅನ್ನೋ ಯೋಚನೆ ಕೂಡ ಇಲ್ವಲ್ಲಾ ನಿಂಗೆ.. ಇರ್ಲಿ ತೆಗೋ.. ನಂದೂ ಒಂದು ಹ್ಯಾಪಿ ಬರ್ತ್ ಡೇ ವಿಶ್..  ಹೀಗೇ ನೂರ್ಕಾಲ ಚೆನ್ನಾಗಿರು … 
-ಅನಿತಾ ನರೇಶ್ ಮಂಚಿ.

******

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಗೆಳೆತನದ ಸುವಿಶಾಲ ಆಲದಡಿ..:ಅನಿತಾ ನರೇಶ್ ಮಂಚಿ.

  1. ಅರೆ ವ್ಹಾ! ಅದೆಷ್ಟು ನವಿರಾಗಿ ನಿರೂಪಿಸಿದ್ದೀರಿ ಬಾಲ್ಯವನ್ನು… ಆ ಸ್ನೇಸವನ್ನು.. ನಿಷ್ಕಲ್ಮಶ ಪ್ರೀತಿಯನ್ನು. ..

    ಇಷ್ಟ ಆಯ್ತು…
    ನಂದೂ ಒಂದು ವಿಷಶ್ ತಿಳಿಸಿಬಿಡಿ… 🙂

  2. ಬಾಲ್ಯದ ಸವಿ ನೆನಪುಗಳನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ ಮೇಡಂ 

Leave a Reply

Your email address will not be published. Required fields are marked *