ನಮ್ಮೂರ ಯಂಕ್ಟ ಅದ್ಭುತ ಮಾತುಗಾರ, ಏನನ್ನೇ ಕೊಟ್ಟರೂ ಮಾರಾಟ ಮಾಡಬಲ್ಲ. ಎಲ್ಲಿ ಬೇಕಾದರೂ ಬದುಕಬಲ್ಲ. ಯಾವ ವಿಷಯದ ಬಗ್ಗೆ ಬೇಕಾದರೂ ಮಾತಾಡಬಲ್ಲ. ರಿಸೆಶ್ಶನ್, ಷೇರು ಮಾರುಕಟ್ಟೆಯಿಂದ ರಸಗೊಬ್ಬರ, ಮಣ್ಣಿನ ಫಲವತ್ತತೆಯವರೆಗೆ ಎಲ್ಲ ವಿಷಯಗಳೂ ಅವನಿಗೆ ಗೊತ್ತು. ಜನರನ್ನ ಸೆಳೆಯುವುದು, ಸಂವಹನ ಮಾಡುವುದು, ಯಾವುದೇ ವಿಷಯದ ಬಗ್ಗೆ ಮಾತಾಡುವುದು ಇದರಲ್ಲಿ ಅವನು ತುಂಬಾ ನಿಪುಣ. ಆದರೇನು, ಕಳೆದ 20 ವರ್ಷಗಳಿಂದಲೂ ಅವನು ಸೇಲ್ಸ್‍ಮೆನ್ ಆಗಿಯೇ ದುಡಿಯುತ್ತಿದ್ದಾನೆ.
ನಮ್ಮೂರ ಬಡ ಮೇಷ್ಟ್ರ ಮಗ ತುಂಬಾ ಬುದ್ದಿವಂತ. ನಾವೆಲ್ಲ ಕಂಪ್ಯೂಟರ್ ಎಂದರೇನು ಎಂದು ತಿಳಿಯುವ ಹೊತ್ತಿಗಾಗಲೇ ಅವನು ಕಂಪ್ಯೂಟರ್ ಲಾಂಗ್ವೇಜ್‍ಗಳ ಬಗ್ಗೆ ಮಾತಾಡುತ್ತಿದ್ದ. ನಾವೆಲ್ಲಾ ಹಾಯಾಗಿ ಅಪ್ಪ ಕೊಟ್ಟ ಪಾಕೇಟ್ ಮನಿಯಲ್ಲಿ ಶೇಂಗಾ ತಿನ್ನುತ್ತಿದ್ದರೆ, ಅವನು ಪೇಪರ್ ಹಾಕಿ ಬಂದ ದುಡ್ಡಿನಲ್ಲಿ ಹೆನ್ರಿ ಫೋರ್ಡ್ ಬಯಾಗ್ರಫಿ ಖರೀದಿಸುತ್ತಿದ್ದ. ನಾವು ಡಿಗ್ರಿ ಓದುವುದು ಯಾವ ಕಾಲೇಜಿನಲ್ಲಿ ಎಂದು ಯೋಚಿಸುತ್ತಿದ್ದರೆ ಅವನಾಗಲೇ ಪಾರ್ಟ್ ಟೈಮ್ ಬಿಜ್ನೆಸ್ ಶುರು ಮಾಡುವುದಾ ಇಲ್ಲಾ ಕೆಲಸ ಮಾಡುವುದಾ ಎಂದು ಯೋಜನೆ ರೂಪಿಸುತ್ತಿದ್ದ. ಈಗಾ ನಾವೆಲ್ಲ ಬೆಳಿಗ್ಗೆ ಕಛೇರಿಗೆ ಹೋಗಿ ಸಂಜೆ ಸುಸ್ತಾಗಿ ಮನೆಗೆ ಹಿಂತಿರುಗುತ್ತಾ, ಮಾಸಾಂತ್ಯದ ಖಾಲಿ ಬ್ಯಾಂಕ್ ಅಕೌಂಟ್ ಶಪಿಸುತ್ತಾ ಇದ್ದರೆ ಅವನಾಗಲೇ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾನೆ.
ಎಲ್ಲಾ ಕ್ಲಾಸುಗಳಲ್ಲಿ, ತರಬೇತಿಗಳಲ್ಲಿ ನಾವೆಲ್ಲಾ ಪದೇ ಪದೇ ಕೇಳುತ್ತೇವೆ, ಇದು ಸ್ಪರ್ಧಾತ್ಮಕ ಯುಗ, ಇಲ್ಲಿ ತಿಳಿದಷ್ಟು ಕಡಿಮೆ. ಗೆಲ್ಲುವುದಾದರೆ ಓದಬೇಕು, ಓಡಬೇಕು ಇತ್ಯಾದಿ ಇತ್ಯಾದಿ. ಓದಿದವರು ಓಡಿದವರು ಎಲ್ಲಾ ಗೆದ್ದಿದ್ದಾರಾ..? ಓದಿದ ನಾವೆಲ್ಲಾ ಏನಾಗಿದ್ದೇವೆ. ಓದದ ಅವರೆಲ್ಲಾ ಏನಾಗಿದ್ದಾರೆ..?? ಶಾಲೆಯಿಂದ ಹೊರಹಾಕಲ್ಪಟ್ಟವರು ದೇಶದ ಆರ್ಥಿಕತೆಗೆ ಬೆನ್ನೆಲಬಾಗುವಂತ ಉದ್ಯಮವನ್ನ ಸ್ಥಾಪಿಸಿದ್ದಾರೆ, ಓದಲು ನಾಲಾಯಕ್ಕು ಎನಿಸಿಕೊಂಡವರು ದೊಡ್ಡ ವಿಜ್ಞಾನಿಯಾಗಿದ್ದಾರೆ. ವೇಗವಾಗಿ ಓಡಿದ ಸತ್ಯಂ ಕಂಪ್ಯೂಟರ್ಸ್ ಏನಾಯ್ತು ಎನ್ನುವುದು ನಮಗೆ ಗೊತ್ತಿದೆ. ಓಡುತ್ತಿದ್ದ ಅಮೇರಿಕದ ಆರ್ಥಿಕತೆ ಕುಸಿದು ಬಿದ್ದಿದ್ದು ಕಣ್ಮುಂದೆಯೇ ಇದೆ. ಹಾಗಾದರೆ ಗೆದ್ದಿದ್ದು ಯಾರು..?? ಗೆಲ್ಲಿಸಿದ್ದು ಯಾವುದು..??
ಯಂಕ್ಟ ಹಾಗೂ ಮೇಷ್ಟ್ರ ಮಗ ಇಬ್ಬರೂ ಬುದ್ದಿವಂತರು. ಜ್ಞಾನವನ್ನೂ ಆ ಮೂಲಕ ವಿವಿಧ ಕೌಶಲ್ಯವನ್ನೂ ಗಳಿಸಿಕೊಂಡು ನಮ್ಮ ಅಚ್ಚರಿಗೆ ಕಾರಣರಾದವರು. ಹಾಗೆ ನೋಡಿದರೆ ಮೇಷ್ಟ್ರ ಮಗನಿಗಿಂತಲೂ ಹೆಚ್ಚು ವಿಷಯ ಯಂಕ್ಟನಿಗೆ ಗೊತ್ತು. ನಿಮಗೆ ಇಬ್ಬರೂ ಒಟ್ಟಿಗೆ ಸಿಕ್ಕರೆ ನೀವು ಯಂಕ್ಟನನ್ನೇ ಮೆಚ್ಚುತ್ತೀರಿ. ಆದರೆ ಗೆಲುವಿನ ಆಯ್ಕೆಯಲ್ಲಿ ವ್ಯತ್ಯಾಸ ಆದದ್ದು ಹೇಗೆ? ಯಂಕ್ಟನ ಸೋಲಿಗೂ, ಮೇಷ್ಟ್ರ ಮಗನ ಗೆಲುವಿಗೂ ಕಾರಣ ಏನು?? ನಾವು ಸಾಮಾನ್ಯ ಜನ ಅದೃಷ್ಟ ಎಂದು ಬಿಡುತ್ತೇವೆ. ಅಸಾಮಥ್ರ್ಯವನ್ನು ಮುಚ್ಚಿಕೊಳ್ಳೋಕೆ ಇನ್ನು ಚೆನ್ನಾಗಿರೋ ಶಬ್ದ ಇಲ್ವಲ್ಲ. ಒಂದಿಷ್ಟು ಯೋಚನೆ ಮಾಡಿದರೆ ಮತ್ತೇನೋ ಸಿಗುತ್ತೆ. ಸಿಕ್ಕವರು, ಸಿಕ್ಕಿದ್ದು ಅರ್ಥವಾದವರು ಗೆಲ್ತಾರೆ.
ನಮ್ಮ ಮೇಷ್ಟ್ರು ಹೇಳುತ್ತಿದ್ದರು, ಗೆಲ್ಲುವುದಕ್ಕೆ ಬೇಕಾಗಿರೋದು ಓದೊಂದೆ ಅಲ್ಲ, ಕೌಶಲ್ಯವೂ ಬೇಕು ಅಂತ. ಕೌಶಲ್ಯ ಬೇಕಿಲ್ಲ ಸ್ಪೀಡಾಗಿದ್ರೆ ಸಾಕು ಅಂತ ಹಿಂದಿನ ಪೀಳಿಗೆಯವರು ನಾವು ಅನ್ಕೊಂಡಿದ್ವಿ. ಹಾಗಾಗೆ ನಾವೀಗ ಮಧ್ಯಮವರ್ಗದ ಕಷ್ಟಪಟ್ಟು ದುಡಿಯುವ ನೌಕರರು. ಇದಕ್ಕಿಂತ ಹೆಚ್ಚಾಗೋಕೆ, ಇವತ್ತಿಗೆ ಕೌಶಲ್ಯವೊಂದೆ ಸಾಕಾಗೋದಿಲ್ಲ ಅಂತ ನಮ್ಮ ಮೇಷ್ಟ್ರಿಗೂ ಗೊತ್ತಾಗಿದೆ. ಅವರದೇ ಮಗ ನಿರೂಪಿಸಿದ್ದಾನೆ, ಜೊತೆಗೆ ಸ್ಪೀಡೂ ಬೇಕು ಅಂತ. ಹಾಗಾದರೆ ಕೌಶಲ್ಯವೆಂದರೇನು..? ಯಾವಾಗ ವೇಗ ಗೆಲ್ಲಿಸುತ್ತದೆ..??
* * * * * * *
ಕೌಶಲ್ಯವೆಂದರೆ : ಇಂದಿನ ಪ್ರಪಂಚದಲ್ಲಿ ಮಾಹಿತಿ ಸರಾಗವಾಗಿ ಹರಿಯುತ್ತಿದೆ. ಮಾಹಿತಿಯೆಂದರೆ ಜ್ಞಾನ ಅಲ್ಲವೇ. ಕೈಯಲ್ಲಿನ ಮೊಬೈಲ್, ಅಂತರ್ಜಾಲದಲ್ಲಿ ಎಲ್ಲ ಮಾಹಿತಿಯೂ ಕ್ಷಣ ಮಾತ್ರದಲ್ಲಿ ದೊರೆಯುತ್ತಿದೆ. ಹಾಗಾಗೇ ಈಗ ಜ್ಞಾನಕ್ಕೆ ಮಹತ್ವ ಕಡಿಮೆಯಾಗಿ ಕೌಶಲ್ಯ ಎನ್ನುವುದು ಪದೇ ಪದೇ ಕೇಳುತ್ತಿದೆ. ಜ್ಞಾನ ಸಂಪಾದನೆಯಿಂದ ಕೌಶಲ್ಯ ವೃದ್ಧಿಯ ಅನಿವಾರ್ಯತೆಯೆಡೆಗೆ ಆಧುನಿಕತೆ ನಮ್ಮನ್ನ ನೂಕಿದೆ ಅಂದಂತಾಯ್ತು. ಹಾಗಾದರೆ ಜ್ಞಾನ ಅಥವಾ ಮಾಹಿತಿ ಕೌಶಲ್ಯವಾಗುವ ಹಂತ ಯಾವುದು? ಸಂದರ್ಭಕ್ಕನುಸಾರವಾಗಿ ಅವರವರೇ ಅವರವರ ಕೌಶಲ್ಯ ಕಂಡುಕೊಳ್ಳಬೇಕೆನ್ನುವುದು ನಿಜವಾದರೂ ಇಲ್ಲೊಂದಿಷ್ಟು ಕೌಶಲ್ಯದ ಬಗ್ಗೆ ನೋಡೋಣ.
ಕೌಶಲ್ಯ ಬರಬೇಕೆಂದರೆ ಮೊದಲಿಗೆ ಜ್ಞಾನ ಬೇಕು. ಜ್ಞಾನ ಅಧ್ಯಯನದಿಂದ ಅನುಭವದಿಂದ ಬರುತ್ತದೆ. ಜ್ಞಾನವೆಂದರೆ ವಿಷಯ ಸಂಗ್ರಹ. ಕೌಶಲ್ಯವೆಂದರೆ, ಅರಿತ ಜ್ಞಾನವನ್ನು ಹೇಗೆ, ಎಲ್ಲಿ ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎನ್ನುವ ತಿಳುವಳಿಕೆ. ಯಾವುದೇ ಕೆಲಸವನ್ನ ಅತ್ಯುತ್ತಮವಾಗಿ ಮಾಡಿ ಮುಗಿಸುವ ಸಾಮಥ್ರ್ಯ, ಪರಿಣಿತಿಗೆ ಕೌಶಲ್ಯ ಎನ್ನುತ್ತಾರೆ ಎನ್ನುತ್ತದೆ ಶಬ್ದಕೋಶ. “ಜ್ಞಾನವೆಂದರೆ ಮುಂದೇನು ಮಾಡುವುದು ಎಂದು ತಿಳಿಯುವುದು, ಕೌಶಲ್ಯವೆಂದರೆ ಅದನ್ನು ಹೇಗೆ ಮಾಡುವುದು ಎಂದು ತಿಳಿಯುವುದು, ಸದ್ಗುಣವೆಂದರೆ ಅದನ್ನು ಕಾರ್ಯಗತಗೊಳಿಸುವುದು” ಎಂದಿದ್ದಾರೆ ಡೇವಿಡ್ ಸ್ಟಾರ್ ಜಾರ್ಡನ್.
ಕೌಶಲ್ಯ ಹೇಗೆಲ್ಲ ಬದಲಾಗುತ್ತ ಬಂದಿದೆ, ಕೌಶಲ್ಯದ ವಿಧಗಳು ಯಾವುವು ಎನ್ನುವುದನ್ನ ಮುಂದಿನ ಸಂಚಿಕೆಯಲ್ಲಿ ನೋಡೋಣ.
* * * * * * *