ಬಹುಶ: ನನಗಾಗ ನಾಲ್ಕೈದು ವರ್ಷಗಳಿರಬಹುದು. ಅಮ್ಮನ ಜೊತೆ ಅಜ್ಜನ ಮನೆಯಲ್ಲಿ ವಾಸ್ತವ್ಯ ಹೂಡಿದ್ದೆ. ಆ ಊರಿನಲ್ಲಿ ಆಗ ಮಾರಿಜಾತ್ರೆಯ ಸಂದರ್ಭ. ಮಾರಿಜಾತ್ರೆಯೆಂದರೆ, ಬೆಳಗಿನ ಜಾವವೇ ಶುರುವಾಗುತ್ತದೆ. ಅದೇಕೋ ಗೊತ್ತಿಲ್ಲ ಗಾಢ ನಿದ್ದೆಯಲ್ಲಿದ್ದ ನನ್ನನ್ನೂ ಎಬ್ಬಿಸಿಕೊಂಡು ಮಾರಿಜಾತ್ರೆಗೆ ಕರೆದುಕೊಂಡು ಹೋದರು. ಅಜ್ಜನ ಮನೆಯ ಎದುರುಭಾಗದಲ್ಲಿರುವ ಆಚೆಕೇರಿಯಲ್ಲಿ ಮಾರಿಹಬ್ಬದ ಆಚರಣೆ. ಕತ್ತಲಲ್ಲಿ ತೋಟವಿಳಿದು ಆಚೆಕಡೆ ಹೋಗಬೇಕು. ಟಾರ್ಚ್ ಹಿಡಿದ ಯಾರೋ ಮುಂದೆ ಹೋಗುತ್ತಿದ್ದರು. ನನ್ನನ್ನು ಯಾರೋ ಎತ್ತಿಕೊಂಡಿದ್ದರು. ಆ ವಿವರಗಳು ನೆನಪಿನಲ್ಲಿ ಇಲ್ಲ. ಮಾರಿಜಾತ್ರೆ ನಡೆಯುವ ಸ್ಥಳ ತಲುಪಿದೆವು. ಆಗ ಆ ಊರಿನಲ್ಲಿ ವಿದ್ಯುಚ್ಚಕ್ತಿಯಿರಲಿಲ್ಲ. ಎಲ್ಲೆಲ್ಲೂ ಗ್ಯಾಸ್‌ಲೈಟ್ ಇದ್ದವು. ಈಗಿನವರಿಗೆ ಗ್ಯಾಸ್‌ಲೈಟ್ ಎಂದರೆ ಗೊತ್ತಾಗಲಿಕ್ಕಿಲ್ಲವೆಂದು ತುಸು ವಿವರಣೆಯನ್ನು ನೀಡುತ್ತೇನೆ. ಸೀಮೆಎಣ್ಣೆಯಿಂದ ಬೆಳಕು ನೀಡುವ ಇದು ಲಾಟೀನ್‌ಗಿಂತ ತಂತ್ರಜ್ಞಾನದಲ್ಲಿ ಮುಂದಿತ್ತು. ಗಾಳಿಯ ಒತ್ತಡದಿಂದ ಚಿಕ್ಕದಾದ ರಂದ್ರದಿಂದ ಸೀಮೆಎಣ್ಣೆ ರಭಸದಿಂದ ಹಾರುತ್ತಿತ್ತು. ಇಷ್ಟರಲ್ಲೇ ಸೀಮೆಎಣ್ಣೆ ಬರುವ ನಳಿಕೆಯ ಬುಡದಲ್ಲಿ ದೀಪಹಚ್ಚಿ ಕಾಯಿಸಲಾಗುತ್ತಿತ್ತು. ಕಾವಿಗೆ ಸೀಮೆಎಣ್ಣೆ ದ್ರವರೂಪದಿಂದ ಅನಿಲರೂಪ ಪಡೆಯುತ್ತಿತ್ತು. ಮ್ಯಾಂಟಲ್ ಎನ್ನುವ ದಾರದಿಂದ ಕೂಡಿದ ಬುರುಡೆ ಪ್ರಖರವಾಗಿ ಉರಿದು ಸುತ್ತ-ಮುತ್ತ ಬೆಳಕು ನೀಡುತ್ತಿತ್ತು. ಬಟ್ಟೆಯಂತಿರುವ ಹೊಸ ಮ್ಯಾಂಟಲ್ ಒಂದು ಬಾರಿ ಉಪಯೋಗಿಸುತ್ತಿದ್ದಂತೆ, ಬೂದಿಯ ರೂಪ ಪಡೆಯುತ್ತಿತ್ತು. ಗ್ಯಾಸ್‌ಲೈಟ್ ಜೋರಾಗಿ ಅಲುಗಿದರೆ ಆ ಬೂದಿಯಂತಹ ಮ್ಯಾಂಟಲ್ ಉದುರಿಹೋಗುತ್ತಿತ್ತು.
ಅರೆನಿದ್ದೆಯಲ್ಲಿದ್ದವನಿಗೆ ಕೀಚಲು ಕೂಗು ದಿಗಿಲು ಹುಟ್ಟಿಸಿತು. ನಾಲ್ಕು ಜನ ಸೇರಿ ಹಂದಿಯನ್ನು ಒಂದು ಕೋಲಿಗೆ ತಲೆಕೆಳಗಾಗಿ ಕಟ್ಟಿಕೊಂಡು, ಹೊತ್ತಿದ್ದರು. ಹಂದಿ ಭಯದಿಂದ ಚೀರುತ್ತಿತ್ತು. ಅಷ್ಟು ನಸುಕಿನಲ್ಲೇ ಜನಜಂಗುಳಿಯಿತ್ತು. ನನ್ನನ್ನು ಎತ್ತಿಕೊಂಡವರಿಗೆ ಕೈನೋವಾಗಿರಬೇಕು, ನಡೆಯಲು ಬಿಟ್ಟು ಒಂದು ಕೈಯನ್ನು ಹಿಡಿದುಕೊಂಡಿದ್ದರು. ಹಾಗೆ ಸ್ವಲ್ಪ ಮುಂದೆ ಹೋದ ನೆನಪು. ಕುರಿಯ ಕೊರಳಿಗೆ ಹಗ್ಗ ಹಾಕಿಕೊಂಡು ಒಬ್ಬ ಆ ಕಡೆ ಎಳೆದು ಹಿಡಿದಿದ್ದ, ಮತ್ತೊಬ್ಬ ಕುರಿಯ ಬಾಲವನ್ನು ಈ ಕಡೆ ಜಗ್ಗಿ ಹಿಡಿದಿದ್ದ. ಮತ್ತೊಬ್ಬ ಖಡ್ಗದಂತಹ ಕತ್ತಿಯನ್ನು ಗಾಳಿಯಲ್ಲಿ ಮೇಲೆ-ಕೆಳಗೆ ಆಡಿಸಿ ಒಮ್ಮೆ ಜೋರಾಗಿ ಕೆಳಗೆ ಇಳಿಸಿ ಕುರಿಯ ಕತ್ತನ್ನು ಕತ್ತರಿಸಿದ. ನೋಡಿದ ನನಗೆ ತಲೆತಿರುಗಿದಂತಾಯಿತು, ಎಚ್ಚರ ತಪ್ಪಿತು. ಮುಂದೆ ಎಚ್ಚರವಾಗಿದ್ದು, ಅಜ್ಜನ ಮನೆಯಲ್ಲಿ. ಎಲ್ಲರೂ ಅವರವರ ಕೆಲಸದಲ್ಲಿದ್ದರು. ಹಾಗಾದರೆ ನಾನೇನಾದರೂ ಕನಸು ಕಂಡೆನೇ? ನನಗೇ ಅಯೋಮಯ. ಆದರೆ, ನನ್ನ ಕಣ್ಣು-ಬುದ್ಧಿ ನನಗೆ ಮೋಸ ಮಾಡಿಲ್ಲವೆಂಬುದು ಗೊತ್ತಿತ್ತು. ಆ ದೃಶ್ಯ ನನ್ನ ಮನಸ್ಸಿನಲ್ಲಿ ಈಗಲೂ ಅಚ್ಚೊತ್ತಿದಂತಿದೆ. ಕಾಲ ಎಲ್ಲವನ್ನೂ ಮರೆಸುತ್ತದೆ ಎಂಬುದು ಸಂಪೂರ್ಣ ನಿಜವಲ್ಲ.
ಈಗಿನಂತೆ ಎಲ್.ಕೆ.ಜಿ-ಯು.ಕೆ.ಜಿ.ಗಳಿರಲಿಲ್ಲ. ಸೀದಾ ೧ ತರಗತಿಗೆ ಸೇರಿಸಿದರು. ಕಾಲಚಕ್ರ ಸುತ್ತುತ್ತಲೇ ಇತ್ತು. ರಕ್ತ ನೋಡಿದರೆ ತಲೆ ತಿರುಗುತ್ತಿತ್ತು. ನಮ್ಮೂರಿನ ಆಚೆದಿಂಬದಲ್ಲಿ ಸೋಬೇಟೆಯಾಡುವವರ ಕೂಗು-ಮಟ್ಟಿ ಬಡಿತ ನನ್ನ ಎದೆ ಬಡಿತವನ್ನು ಹೆಚ್ಚಿಸುತ್ತಿತ್ತು. ಸುತ್ತಲೂ ಸೊಪ್ಪು ಹಾಕಿ, ಒಂದು ಕಡೆ ಬಲೆ ಹಾಕಿ ಮಟ್ಟಿಗಳನ್ನು ಬಡಿಯುವುದು ಸೋಬೇಟೆಯ ವಿಧಾನ. ಜಿಗಿಯುತ್ತಾ ಓಡುವ ಮೊಲ ಬಲೆಯಲ್ಲಿ ಸಿಕ್ಕಿಕೊಳ್ಳುತ್ತದೆ. ದೊಣ್ಣೆಯಿಂದ ಬಡಿದೋ ಅಥವಾ ಗೋಣು ಮುರಿದೋ ಬಲಿಯನ್ನು ಕೊಂದು ಚೀಲ ತುಂಬಿಕೊಳ್ಳುತ್ತಾರೆ. ಇಂತದ್ದನ್ನು ನೋಡಿದಾಗಲೆಲ್ಲಾ ಮನಸ್ಸು ಭಾರವಾಗುತ್ತಿತ್ತು. ಕಡೆ-ಕಡೆಗೆ ಬೇರೆ ಏನೂ ಯೋಚನೆ ಮಾಡುವುದೇ ಕಷ್ಟವಾಗುತ್ತಿತ್ತು. ಯಾರಾದರೂ ಪಟಾಕಿ ಹೊಡೆದರೂ, ಅದ್ಯಾರೋ ಜಿಂಕೆಯನ್ನೇ ಹೊಡೆದರೇನೋ ಎಂಬ ಭಾವನೆ ಬರುತ್ತಿತ್ತು. ನನ್ನ ಜೀವನದಲ್ಲಿ ಇದೊಂದು ಅಸಹಜವಾದ ದೌರ್ಭಲ್ಯವೆನಿಸಿತು. ಈ ಸಂದರ್ಭದಲ್ಲಿ ಆಗಿನ ಸಾಮಾಜಿಕ ಜೀವನದ ಸ್ಥಿತಿ-ಗತಿಗಳನ್ನು ವಿವರಿಸಬೇಕು. ಹೆಚ್ಚಿನವರು ಬಡವರು. ಸಂಸಾರದ ರಥ ಮುನ್ನೆಡಸಲು ಹಗಲೂ-ರಾತ್ರಿ ದುಡಿಯುವ ಅನಿವಾರ್ಯ. ಬಡತನದ ಕಾರಣಕ್ಕೇ ಇರಬೇಕು ಕುಟುಂಬಗಳಲ್ಲಿ ಸಿಟ್ಟು-ಸೆಡವು ಹೆಚ್ಚು. ಬಾಲಕಾರ್ಮಿಕ ಎಂಬ ಭೇದವಿರಲಿಲ್ಲ. ಕೆಲಸಕ್ಕೆ ಮೊದಲನೇ ಆದ್ಯತೆ. ಕೆಲಸ ಮಾಡಿ ಸಮಯವುಳಿದರೆ ಓದು ಅದೂ ಲಾಟೀನ್ ಬೆಳಕಿನಲ್ಲಿ. ಇರುವ ಒಂದೇ ಲಾಟೀನು ಬೇಗ ಸಿಗುತ್ತಿರಲಿಲ್ಲ. ಒಟ್ಟಾರೆ ಓದಿಗೆ ಸಮಯ ಸಿಗುತ್ತಿರಲಿಲ್ಲ. ಅತ್ತ ಶಾಲೆಯಲ್ಲೂ ಸ್ಥಿತಿ ಬೇರೆಯಲ್ಲ. ಎಲ್ಲಾ ಮಾಸ್ತರರಿಗೂ ಮೂಗಿನ ಮೇಲೆ ಸಿಟ್ಟು. ವಿನಾಕಾರಣ ಹೊಡೆಯುತ್ತಿದ್ದರು ಎಂದು ಈಗ ಅನಿಸುತ್ತದೆ. ೭ನೇ ತರಗತಿಯಲ್ಲಿದ್ದಾಗ, ಸ್ಕೂಲಿನ ಹೆಡ್‌ಮಾಸ್ತರ್ ಒಬ್ಬರು ಸಮಾಜ ಪಾಠವನ್ನು ಮಾಡುತ್ತಿದ್ದರು.
ಕರ್ನಾಟಕದ ಮ್ಯಾಪ್ ಬಿಡಿಸಿ ಎಂದರು. ಸಮಾಜ ಪಠ್ಯದ ಪುಸ್ತಕವಿರಲಿಲ್ಲ. ಸಾರ್ ನೀವೊಮ್ಮೆ ಬೋರ್ಡ್ ಮೇಲೆ ಬರೆದು ತೋರಿಸಿ ಎಂದು ಹೆದರುತ್ತಲೇ ಹೇಳಿದೆ. ಮೊದಲೇ ಸ್ವಲ್ಪ ಕಪ್ಪನೆಯ ಬಣ್ಣದಲ್ಲಿದ್ದ ಹೆಡ್‌ಮಾಸ್ತರ ಮೂಗಿನ ಹೊಳ್ಳೆಗಳು ಅಗಲವಾದವು. ಕಣ್ಣಿನಲ್ಲಿ ಬೆಂಕಿ! ಮುಷ್ಟಿ ಕಟ್ಟಿಕೊಂಡು ಮುಖದ ಮೇಲೆ ಹೊಡೆದರು. ತಪ್ಪಿಸಿಕೊಳ್ಳುವ ನನ್ನ ಪ್ರಯತ್ನ ವಿಫಲವಾಯಿತು. ಹೊಡೆಯುತ್ತಲೇ ಇದ್ದರು. ತುಟಿಯೊಡೆದು ರಕ್ತ ಬಂದಿತು. ರಕ್ತವನ್ನು ಕಂಡ ಮಾಸ್ತರರಿಗೆ ಭಯವಾಗಿರಬೇಕು, ಹೊಡೆತ ನಿಲ್ಲಿಸಿ ಗೊಣಗುತ್ತಾ ತರಗತಿಯಿಂದ ಹೊರನಡೆದರು. ಸಹವಿದ್ಯಾರ್ಥಿಗಳೆಲ್ಲಾ ಗರಬಡಿದವರಂತೆ ಇದ್ದರು. ಸಾಂತ್ವಾನ ಮಾಡಲು ಯಾರೂ ಬರಲಿಲ್ಲ. ರಕ್ತ ಒರೆಸಿಕೊಳ್ಳಲು ಜೇಬಿನಲ್ಲಿ ಬಟ್ಟೆಯಿರಲಿಲ್ಲ. ಅಸಲಿಗೆ ಜೇಬೇ ಇರಲಿಲ್ಲ. ಅಂಗಿಯಲ್ಲೇ ಒರೆಸಿಕೊಳ್ಳುತ್ತಾ, ಏಕುತ್ತಾ ಇರುವಾಗಲೇ ಕೊನೆಯ ಗಂಟೆ ಬಾರಿಸಿತು. ಏಕುತ್ತಲೇ ಮನೆಗೆ ಹೋದೆ. ಮುಖಕ್ಕೆ ಏನಾಯಿತು ಎಂದು ಕೇಳಿದರು. ಮರ-ಗಿರ ಹತ್ತಿ ಬಿದ್ದು ಬಂದಿದ್ದರೆ, ಇನ್ನೂ ನಾಕೇಟು ಬೀಳುವ ಭಯವಿತ್ತು. ನಿಜವನ್ನೇ ನುಡಿದೆ. ಮನೆಯವರ ಮುಖದಲ್ಲಿ ಯಾವುದೇ ಭಾವನೆಗಳಿಲ್ಲ. ಬಹುಶ: ನಂದೇ ತಪ್ಪಿರಬೇಕು ಎಂದುಕೊಂಡು ಸುಮ್ಮನಾದೆ. ಮರುದಿನ ನೋಡಿದರೆ ಬಲಗಣ್ಣಿನ ಕೆಳಭಾಗದಲ್ಲಿ ಚೀಲದಲ್ಲಿ ರಕ್ತ ಸೇರಿ ನೀಲಿಗಟ್ಟಿತ್ತು. ಅದೇ ಸ್ಥಿತಿಯಲ್ಲೇ ಶಾಲೆಗೆ ಹೋಗಬೇಕಾಯಿತು. ಶಾಲೆಯಲ್ಲೂ ಯಾರೂ ಏನೂ ಕೇಳಲಿಲ್ಲ. ನಾಲ್ಕು ದಿನದಲ್ಲಿ ನೀಲಿಗಟ್ಟಿದ ಭಾಗ ಮತ್ತೆ ಮೊದಲಿನಂತಾಯಿತು.
ಪ್ರಾಥಮಿಕ ಶಿಕ್ಷಣದ ನಂತರ ಊರಿನಿಂದ ೪ ಕಿ.ಮಿ. ದೂರದ ಪಟ್ಟಣದ ಹೈಸ್ಕೂಲಿಗೆ ಸೇರಿಸಿದರು. ಮನೆಯಿಂದ ನಡೆದುಕೊಂಡು ಬರಬೇಕು ಮತ್ತು ವಾಪಾಸು ಹೋಗಬೇಕು. ಹಳ್ಳಿಗಳಿಗಿಂತ ಪೇಟೆಗಳಲ್ಲೇ ಕ್ರೌರ್ಯ ಮತ್ತು ಹಿಂಸೆ ಹೆಚ್ಚು ಎಂಬುದು ನನ್ನ ಅನುಭವ. ಈ ತರಹದ ಹಿಂಸಾತ್ಮಕ ದೃಶ್ಯಗಳನ್ನು ತಪ್ಪಿಸಿಕೊಂಡು ಒಡಾಡುವುದು ಕಷ್ಟಸಾಧ್ಯ. ಬೆಳಗ್ಗೆ ತಿಂಡಿ ತಿಂದು ಹೋದರೆ ಸಂಜೆ ಮನೆಗೆ ಬರುವುದು. ಮಧ್ಯಾಹ್ನ ಡಬ್ಬಿ ಊಟ. ಮಳೆಗಾಲದಲ್ಲಿ ಈ ಡಬ್ಬಿಯೂಟ ಐಸ್‌ನಂತಾಗಿರುತ್ತಿತ್ತು. ಬೇಸಿಗೆಕಾಲದಲ್ಲಿ ಬಿಸಿಗೆ ಹೆಚ್ಚಿನ ಬಾರಿ ಹಳಸಿಹೋಗುತ್ತಿತ್ತು. ಬೆಳೆಯವ ದೇಹಕ್ಕೆ ಹೆಚ್ಚಿನ ಪೋಷಕಾಂಶ ಬೇಕು. ಶಾಲೆಗೆ ಹೋಗುವ ಕಾರಣಕ್ಕೆ ಮಧ್ಯಾಹ್ನದ ಊಟವಿಲ್ಲ. ಹೀಗಾಗಿ ದಿನಾ ಸಂಜೆ ಮನೆಗೆ ಹೋಗುವಷ್ಟರಲ್ಲಿ ತಲೆನೋವು ಶುರುವಾಗುತ್ತಿತ್ತು. ಶಾಲೆಯಿಂದ ಮನೆಗೆ ಬರಲು ಹತ್ತಿರದ ದಾರಿಯನ್ನು ಹುಡುಕುವ ಯತ್ನ ಸಫಲವಾದರೂ, ಆ ದಾರಿಯಲ್ಲಿ ದೃಶ್ಯಮಾಲಿನ್ಯವಿರುತ್ತಿತ್ತು. ಹೀಗೆ ಹೈಸ್ಕೂಲು ಮುಗಿಸಿ, ಕಾಲೇಜು ಮೆಟ್ಟಿಲು ಹತ್ತಿದ್ದಾಯಿತು.
ಹಿಂಸೆಗೆ ಸಂಬಂಧಿಸಿ ಕೃತ್ಯಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಹಾಗೂ ಅದಕ್ಕೆ ಹೊಂದಿಕೊಳ್ಳುವುದೇ ಮಾರ್ಗವೆಂದು ಅನಿಸಿತು. ಊರಿಗೆ ಹೋಗುವ ದಾರಿಯಲ್ಲೊಂದು ಕಸಾಯಿಖಾನೆಯಿತ್ತು. ರಸ್ತೆಯಿಂದ ಸ್ವಲ್ಪ ದೂರದಲ್ಲಿದ್ದ ಮಾಂಸದಂಗಡಿಯ ಹಿಂಭಾಗದಲ್ಲೇ ಕುರಿಗಳನ್ನು ತರಿದು, ಹಿಸಿಯುತ್ತಿದ್ದರು. ಧೈರ್ಯಮಾಡಿ ಒಂದು ದಿನ ನೋಡಲೇ ಬೇಕೆಂದು ಸಂಕಲ್ಪ ಮಾಡಿದೆ. ಇಲ್ಲಿ ಇನ್ನೂ ಒಂದು ಅಪಾಯವಿತ್ತು. ಮಾಂಸದಂಗಡಿಯ ಹತ್ತಿರ ನನ್ನನ್ನು ನೋಡಿದ ಯಾರಾದರೂ ಮನೆಗೆ ಹೋಗಿ ವಿಷಯ ತಿಳಿಸಿದರೆ ಆಪತ್ತು ಮೈಮೇಲೆ ಎಳೆದುಕೊಂಡ ಹಾಗೆ ಆಗುತ್ತದೆ. ಇದೇ ದ್ವಂದ್ವದಲ್ಲಿ ಹಲವು ದಿನ ಕಳೆಯಿತು. ಆ ದಿನ ಮನೆಗೆ ಬರುವ ದಾರಿಯಲ್ಲಿ ನಾನು ಬರುವುದಕ್ಕೂ ಅಲ್ಲಿ ಕುರಿಯ ರುಂಡ ಬೇರೆಯಾಗಲಿಕ್ಕೂ ಸರಿಯಾಯಿತು. ಇವತ್ತು ದೈರ್ಯ ಮಾಡಿ ನೋಡುವುದೇ ಸೈ ಎಂದು ತೀರ್ಮಾನಿಸಿ ಅಂಗಡಿಯ ಕಡೆಗೆ ಹೋದೆ. ಹೋಗುವಷ್ಟರಲ್ಲಿ ಕುರಿಯ ಜೀವ ಹೋಗಿತ್ತು. ಮುಂಗಾಲಿನ ಭಾಗದಿಂದ ಚೂರಿಯನ್ನು ಹಾಕಿ ಸಿಗಿಯುತ್ತಿದ್ದ. ಅಲ್ಲಿ ಇಬ್ಬರಿದ್ದರು, ನನ್ನ ಬಗ್ಗೆ ಅವರು ತಲೆ ಕೆಡಿಸಿಕೊಳ್ಳಲಿಲ್ಲ. ಆ ರಕ್ತ, ಎದೆಯ ಗೂಡಿನ ಎಲುಬುಗಳನ್ನು ತುಂಡರಿಸುವ ಕಟ್ ಸದ್ದು, ಕರುಳನ್ನು ಬಾವಿ ಹಗ್ಗದಂತೆ ಸುತ್ತಿದ ರೀತಿ ಹೀಗೆ ಸುಮಾರು ಅರ್ಧಗಂಟೆ ಕುರಿ ಸುಲಿಯುವ ಪ್ರಕ್ರಿಯೆಯನ್ನು ನೋಡಿದೆ. ಅಲ್ಲಿನ ಅಸಹನೀಯ ವಾಸನೆ ಸಹಿಸಲಿಕ್ಕೆ ಆಗುತ್ತಿರಲಿಲ್ಲ. ಹಾಗೆ ನೋಡಿ ವಾಪಾಸು ಬಂದೆ. ತಲೆ ತಿರುಗಿ ಬೀಳಲಿಲ್ಲ ಎಂಬುದು ಅವತ್ತಿನ ಮಟ್ಟಿಗೆ ನನ್ನ ಗೆಲುವು.
ಆಮೇಲೆ ಜೀವನದಲ್ಲಿ ಏನೋನೊ ಘಟನೆಗಳು ನಡೆದವು. ಜೀವನ ಎತ್ತೆತ್ತಲೋ ಕರೆದುಕೊಂಡು ಹೋಗಿ ಮತ್ತೆ ವಾಪಾಸು ಊರಿಗೆ ತಂದು ಬಿಟ್ಟಿತು. ಮಣ್ಣಿನ ಋಣ ತೀರಿಸಬೇಕು. ಈ ಮಧ್ಯೆ ಜಗತ್ತಿನಲ್ಲಿ ಕಂಪ್ಯೂಟರ್ ಕ್ರಾಂತಿಯಾಗಿ, ಇಂಟರ್‌ನೆಟ್ ಮೂಲಕ ಇವತ್ತು ಜಗತ್ತನ್ನು ಅಂಗೈಯಲ್ಲಿ ನೋಡಬಹುದು. ಕಣ್ಣಿಗೆ ಕಾಣದವರು, ಬರೀ ವಿಚಾರಗಳಲ್ಲಿ ಸಾಮ್ಯತೆ ಇರುವವರು ಗೆಳೆಯರಾಗುತ್ತಾರೆ. ಹೊಸ ಮಾಹಿತಿಗಳು ಸಿಗುತ್ತವೆ. ಬರೆಯುವ ಲೇಖನಗಳನ್ನು ಮೆಚ್ಚುವವರೂ ಇದ್ದಾರೆ. ಅಕ್ಟೋಬರ್ ೨ರಂದು ಗಾಂಧಿ ಜಯಂತಿ. ರಾಷ್ಟ್ರಪಿತ ಸಾರಿದ್ದು ಅಹಿಂಸೆ. ಆ ದಿನವೇ ಫೇಸ್‌ಬುಕ್‌ನಲ್ಲಿ ಒಂದು ವಿಡಿಯೋ ಹಾಕಿದ್ದರು. ಅಬಟೋಯರ್ (ಯಾಂತ್ರಿಕೃತ ಕಸಾಯಿಖಾನೆ) ನಲ್ಲಿ ಹಸುಗಳನ್ನು ಹೇಗೆ ವಧಿಸಲಾಗುತ್ತದೆ ಎನ್ನುವ ವಿಡಿಯೋ. ಈ ವಿಡಿಯೋವನ್ನು ನೋಡಿದವರು ಮಾಂಸಹಾರವನ್ನು ತ್ಯಜಿಸುವ ಮನೋಭಾವ ತೋರಬಹುದು ಎಂಬುದು ವಿಡಿಯೋ ಹಾಕಿದವರ ಯೋಚನೆ. ಕುತೂಹಲದಿಂದ ವಿಡಿಯೋವನ್ನು ನೋಡುವ ಮನಸ್ಸು ಮಾಡಿದೆ. ೩೦ ಸೆಕೆಂಡ್ ನೋಡಿರಬಹುದು, ಮುಂದೆ ನೋಡಲಾಗಲಿಲ್ಲ. ಮತ್ತೆ ಹಿಂದಿನ ದಿನಗಳಲ್ಲಿ ಆಗುತ್ತಿದ್ದ ಯಾತನೆ ಶುರುವಾಯಿತು. ಹಾಗೆಯೇ ಮನೆಗೆ ಹೋಗುವಾಗ ಹಲವು ಜನ ಕುರಿಗಳಿಗೆ ಸಂಭ್ರಮದಿಂದ ಹುಲ್ಲು ತಿನ್ನಿಸುತ್ತಿದ್ದ ದೃಶ್ಯ ಕಾಣಿಸಿತು. ಕೆಲವು ಟಗರುಗಳ ಕೋಡುಗಳಿಗೆ ಬಣ್ಣ ಬಳಿದಿದ್ದರು. ಬರಲಿರುವ ಹಬ್ಬಕ್ಕೆ ಬಲಿಯಾಗಲಿರುವ ಕುರಿಗಳವು. ಗಾಂಧಿ ಜಯಂತಿಯ ದಿನ ಮಾಂಸ ಮಾರಾಟಕ್ಕೆ ನಿಷೇಧವಿದೆಯೇ ಹೊರತು, ಹುಲ್ಲು ತಿನ್ನಿಸಲು ಅಲ್ಲ. ಗೆದ್ದೆನೆಂದು ತಿಳಿದಿದ್ದ ನಾನು ಹಿಂಸೆಯಂತಹ ದೃಶ್ಯಮಾಲಿನ್ಯವನ್ನು ಸಹಿಸಿ, ಗೆಲ್ಲುವಲ್ಲಿ ಸಂಪೂರ್ಣ ಸೋತಿದ್ದೆ. ಬಹುಶ: ಸೋಲುತ್ತಲೇ ಇರುತ್ತೇನೆ.
*****