ಶಾಲೆಯಿಂದ ಬರುವ ದಾರಿಯಲ್ಲೇ ಇದ್ದ ಅಪ್ಪನ ಕ್ಲಿನಿಕ್ಕಿನ ಪಕ್ಕದ ಖಾಲಿ ಕೋಣೆ ನನ್ನ ಕಣ್ಣಿಗೆ ನಿತ್ಯವೂ ಬೀಳುತ್ತಿತ್ತು. ಎಲ್ಲಾ ಅಂಗಡಿಯ ಬಾಗಿಲುಗಳಂತೆ ಇದಕ್ಕೂ ಮರದ ಉದ್ದುದ್ದ ಹಲಗೆಗಳೇ ಬಾಗಿಲು. ಒಂದರ ಪಕ್ಕದಲ್ಲಿ ಒಂದರಂತೆ ಜೋಡಿಸಿ ಇಡುತ್ತಿದ್ದ ಇದನ್ನು ಹಾಕುವುದು ಮತ್ತು ತೆರೆಯುವುದೂ ಕೂಡಾ ನಾಜೂಕಿನ ಕೆಲಸವೇ. ಯಾಕೆಂದರೆ ಆಯಾಯ ಜಾಗ ತಪ್ಪಿ ಹಲಗೆಗಳನ್ನು ಜೋಡಿಸಿದರೆ ಅಂಗಡಿಯ ಬಾಗಿಲು ಹಾಕಲೇ ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿಯೇ ಹೆಚ್ಚಿನೆಲ್ಲಾ ಬಾಗಿಲಿನ ಹಲಗೆಗಳ ಮೇಲೆ ಒಂದು, ಎರಡು, ಮೂರು … ಎಂದು ಸಂಖ್ಯೆಗಳನ್ನು ಬರೆದಿಡುತ್ತಿದ್ದರು. ಅದನ್ನು ಎತ್ತಿ ಇಡುವುದು ಕೂಡಾ ದೇಹಬಲವಿಲ್ಲದವರ ವಹಿವಾಟಾಗಿರಲಿಲ್ಲ. ನಾವು ಮಕ್ಕಳು ಪಕ್ಕದ ಖಾಲಿ ಕೋಣೆಯ ಹಲಗೆಗಳ ಸಣ್ಣ ಸಂದಿನಲ್ಲಿ ಕಣ್ಣು ತೂರಿಸಿ ಒಳಗಿರುವ ರಹಸ್ಯವನ್ನು ತಿಳಿಯಲು ಬಿಡುವಿನ ವೇಳೆಯನ್ನು ಉಪಯೋಗಿಸುತ್ತಿದ್ದರೂ ನಮ್ಮ ನೋಟಕ್ಕೆ ಕತ್ತಲೆಯ ಹೊರತು ಬೇರೇನೂ ದಕ್ಕುತ್ತಿರಲಿಲ್ಲ. ವರುಷಗಳಿಂದ ಅಪ್ಪ ಅದೇ ಜಾಗದಲ್ಲಿ ತಮ್ಮ ಕ್ಲಿನಿಕ್ ನಡೆಸುತ್ತಿದ್ದರು. ಅಪ್ಪನ ಪರಿಚಯವಿಲ್ಲದ ಮಂದಿ ಇಲ್ಲದ ಕಾರಣ ಯಾರಿಗಾದರೂ ಅಡ್ರೆಸ್ ಹೇಳಲು ಡಾಕ್ಟ್ರ ಕ್ಲಿನಿಕ್ಕಿನಿಂದ ಮೂರು ಅಂಗಡಿ ಕೆಳಗೆ, ಡಾಕ್ಟ್ರ ಕ್ಲಿನಿಕ್ಕಿನ ಮುಂದೆಯೇ ..ಎಂದು ಹೇಳುವವರಿದ್ದರು. ಇದರಿಂದಾಗಿ ಆಗಾಗ ಜನರು ಅಪ್ಪನ ಕ್ಲಿನಿಕ್ಕಿಗೆ ಔಷದ ತೆಗೆದುಕೊಳ್ಳಲಲ್ಲದೇ ಅಡ್ರೆಸ್ ಕೇಳಲು ಬರುವುದಿತ್ತು. ಬಂದವರಲ್ಲಿ ಪಕ್ಕದ ಅಂಗಡಿಯ ಬಗ್ಗೆ ವಿಚಾರಿಸುವವರೂ ಇದ್ದರು.
ಕೆಲವೊಮ್ಮೆ ಆ ಕೋಣೆ ಯಾರೋ ಅಪರಿಚಿತರ ಕಟ್ಲೇರಿ ಅಂಗಡಿಯೋ, ಟೈಲರಿಂಗ್ ಶಾಪೋ, ಶಬರಿಮಲೆಗೆ ಮಾಲೆ ಹಾಕಿದವರ ತಾತ್ಕಾಲಿಕ ವಸತಿಯೋ.. ಹೀಗೆ ಏನಾದರೂ ಆಗಿ ರೂಪಾಂತರ ಹೊಂದುತ್ತಿತ್ತು. ಅಲ್ಲಿಗೆ ಪರ್ಮನೆಂಟಾಗಿ ಇರಲು ಯಾರೂ ಬರುತ್ತಲೇ ಇರಲಿಲ್ಲ. ಹಾಗಾಗಿ ಹೆಚ್ಚಿನೆಲ್ಲಾ ದಿನ ಅದು ತನ್ನ ಮುಖದೆದುರು ನಂಬರ್ ಬರೆದಿರುವ ಹಲಗೆಗಳನ್ನು ಮುಚ್ಚಿಕೊಂಡೇ ಇರುತ್ತಿತ್ತು. ಹಾಗಾಗಿ ಅದರ ಮೆಟ್ಟಿಲುಗಳು ಮಕ್ಕಳಾದ ನಮ್ಮ ಆಟದ ಜಾಗವಾಗಿ ಉಪಯೋಗಿಸಲ್ಪಡುತ್ತಿತ್ತು.
ಆ ದಿನ ಕುಣಿಯುತ್ತಲೇ ಆ ದಾರಿಯಲ್ಲಿ ಬರುತ್ತಿದ್ದ ನನ್ನ ಕಣ್ಣಿಗೆ ಬಿದ್ದಿದ್ದು ಹಲಗೆಗಳನ್ನು ನೀಟಾಗಿ ಪಕ್ಕದಲ್ಲಿಟ್ಟು ತೆರೆದಿದ್ದ ಅಂಗಡಿ. ಬಿಟ್ಟ ಕಣ್ಣಿನಿಂದ ಅದನ್ನೇ ನೋಡುತ್ತಾ ಹೆಜ್ಜೆ ಹಾಕುತ್ತಿದ್ದವಳಿಗೆ ಪಕ್ಕದಲ್ಲೇ ಅಪ್ಪ ಬಂದು ನಿಂತಿದ್ದು ಕಾಣಿಸಲೇ ಇಲ್ಲ. ಗಾಬರಿಯಿಂದ ಅಪ್ಪನ ಕಡೆ ನೋಡಿದರೆ ಅವರ ಮುಖದಲ್ಲಿ ಕೋಪದ ಬದಲು ನಗುವಿತ್ತು. ಬೆನ್ನಿನ ಹಿಂದೆ ಬಚ್ಚಿಟ್ಟ ಕೈಗಳಲ್ಲಿ ಏನೋ ಹಿಡಿದು ನಿಂತಿದ್ದರು. ಚಾಚಿದ ನನ್ನ ಕೈಯನ್ನು ನೋಡಿ ಕಣ್ಣು ಮುಚ್ಚು ಎಂದರು. ಅರೆಗಣ್ಣು ಮುಚ್ಚಿ ನಿಂತವಳ ಕೈಗೆ ಬಿದ್ದಿದ್ದು ಕೆಂಪು ಬಣ್ಣದ ಗುಲಾಬಿ ಹೂಗಳ ಗೊಂಚಲು. ಅಚ್ಚರಿಯಿಂದ ಅವುಗಳನ್ನು ಅವುಚಿಕೊಂಡು ’ಯಾರು ಕೊಟ್ಟರು’? ಎಂದೆ. ಅಪ್ಪನ ಕೈ ಬಾಗಿಲು ತೆರೆದಿದ್ದ ಆ ಅಂಗಡಿಯ ಕಡೆ ತೋರಿಸಿತ್ತು. ಅದರಾಚೆ ಯಾರೋ ಕಂಡಂತಾಗಿ ನೋಡಹೊರಟರೂ ನೋಟಕ್ಕೇನೂ ನಿಲುಕಲಿಲ್ಲ.
ಮತ್ತೆ ಮತ್ತೆ ಹೂಗಳನ್ನು ಸವರುತ್ತಿದ್ದ ನನಗೆ ಅವುಗಳು ಬಟ್ಟೆಯಿಂದ ಮಾಡಿದ ಹೂಗಳು ಎಂದು ಗೊತ್ತಾಗಿದ್ದು ಮನೆಯಲ್ಲಿ ಅಮ್ಮ ಹೇಳಿದಾಗಲೇ.. ಗಿಡದದಲ್ಲಿಟ್ಟರೆ ಚಿಟ್ಟೆಗಳು ಮೋಸ ಹೋಗುವಂತಹ ನೈಜತೆಯಿಂದ ಕೂಡಿತ್ತದು. ಅದನ್ನು ಮಾಡಿದವರ ಬಗ್ಗೆ ಅಪ್ಪ ಏನೋ ಅಮ್ಮನಲ್ಲಿ ಹೇಳುತ್ತಿದ್ದರೆ ನಾನಾಗಲೇ ನನ್ನ ಸ್ನೇಹಿತರ ಗುಂಪಿಗೆ ಅದನ್ನು ತೋರಿಸಲು ಎತ್ತಿಕೊಂಡು ಹೊಸ್ತಿಲು ದಾಟಿದ್ದೆ.
ಈಗ ಆ ಅಂಗಡಿಯ ಕೋಣೆಯ ಬಾಗಿಲು ನಾನು ನೋಡುವಾಗಲೆಲ್ಲಾ ತೆರೆದೇ ಇರುತ್ತಿತ್ತು. ಇದು ನನ್ನ ಆಟದ ಸ್ವಾತಂತ್ರ್ಯಕ್ಕೆ ಭಂಗ ತಂದರೂ, ನಾನು ಅಲ್ಲಿನ ಪುಟ್ಟ ಹಸಿರು ಬಣ್ಣದ ಮೇಜಿನ ಮೇಲೆ ಇಟ್ಟಿರುತ್ತಿದ್ದ ಬಣ್ಣ ಬಣ್ಣದ ಹೂಗಳನ್ನು ನೋಡುತ್ತಾ ಮೈ ಮರೆಯುತ್ತಿದ್ದೆ.ಅದನ್ನು ಮಾಡುತ್ತಿದ್ದವರ ಮುಖವನ್ನು ಒಂದು ಸಲವೂ ನೋಡಿಯೇ ಇರಲಿಲ್ಲ.
ಆ ದಿನ ನಮ್ಮ ಶಾಲೆಯ ವಾರ್ಷಿಕೋತ್ಸವ. ಕೆಂಪು ಉದ್ದನೆಯ ಮ್ಯಾಕ್ಸಿ ಧರಿಸಿ, ಬಾಡದ ಕೃತಕ ಗುಲಾಬಿ ಹೂವನ್ನು ಮುಡಿದು ಅಲಂಕೃತಗೊಂಡಿದ್ದೆ. ನಾನು ಶಾಲೆಗೆ ಹೋಗುವುದರಿಂದ ಮೊದಲೇ ಅಪ್ಪ ಮನೆ ಬಿಡುತ್ತಿದ್ದ ಕಾರಣ ಕ್ಲಿನಿಕ್ಕಿಗೆ ನುಗ್ಗಿ ಬೇಗ ಶಾಲೆಗೆ ಬರಬೇಕು ಮೊದಲು ನನ್ನದೇ ಡ್ಯಾನ್ಸು, ಮತ್ತೆ ಇವತ್ತು ಸನ್ಮಾನ ಮಾಡಲಿರುವವರನ್ನು ಸ್ಟೇಜಿನ ಮೇಲೆ ಕರೆದುಕೊಂಡು ಹೋಗೋದು ಕೂಡಾ ನಾನೇ ಗೊತ್ತಾ ಎಂದು ತುಟಿಯುಬ್ಬಿಸಿ ರಗಳೆ ಮಾಡಿ ಅಪ್ಪನಿಂದ ’ಬೇಗ ಬರ್ತೀನಿ’ ಎಂದು ಹೇಳಿಸಿಕೊಂಡು ಮೆಟ್ಟಿಲಿಳಿಯುತ್ತಿದ್ದೆ. ಆಗ ಕೇಳಿಸಿತ್ತು ಆ ಕಡೆಯಿಂದ ’ ಹ್ಹೋ ಪುಟ್ಟ ರಾಜಕುಮಾರಿ ಶಾಲೆಗೆ ಹೊರಟಿದ್ದಾ? ಎಂದು. ನಾಚಿಕೆಯಿಂದ ಅತ್ತ ತಿರುಗಿದೆ. ಮೇಜಿನ ಬದಿಯಲ್ಲಿ ಫ್ರಾಕ್ ತೊಟ್ಟ ಯುವತಿಯೊಬ್ಬರು ಕುಳಿತಿದ್ದರು. ಅಪ್ಪ ಅವರ ಕಡೆಗೆ ಕೈ ಮಾಡಿ ಇವರೇ ನಿನ್ನ ತಲೆಯಲ್ಲಿರುವ ಹೂ ಮಾಡಿ ಕೊಟ್ಟಿದ್ದು ಎಂದರು. ’ನೀವು ಬನ್ನಿ ಸ್ಕೂಲ್ ಡೇ’ ಗೆ ಎಂದೆ. ಮುಖದಲ್ಲಿ ನಗು ಅರಳಿಸಿ ’ಖಂಡಿತಾ.. ಎಷ್ಟು ಹೊತ್ತಿಗೆ ಬರಲಿ, ಬಂದ್ರೆ ನಂಗೆ ಕೂರಲಿಕ್ಕೆ ಜಾಗ ಕೊಡ್ತೀರಾ’ ಎಂದೆಲ್ಲಾ ವಿಚಾರಿಸಿದರು. ’ನಿಮ್ಗೆ ಜಾಗ ಕೊಡುವಾ ಅದಕ್ಕೇನು’ ಎಂದು ಇಡೀ ಶಾಲೆಯ ಉಸ್ತುವಾರಿ ಸಚಿವೆಯಂತೆ ಉತ್ತರ ಕೊಟ್ಟು ಅಲ್ಲಿಂದ ಓಡಿದ್ದೆ.
ಸಭಾ ಕಾರ್ಯಕ್ರಮ ಶುರು ಆಗಿತ್ತು. ಸ್ವಲ್ಪ ಹೊತ್ತಿನಲ್ಲಿ ಸನ್ಮಾನಿತರನ್ನು ಸಭೆಗೆ ಕರೆತರಲು ನನ್ನನ್ನು ಕರೆದರು. ನಮ್ಮ ಟೀಚರಲ್ಲೊಬ್ಬರು ನಾನು ಕರೆತರಲಿರುವವರ ಕಡೆಗೆ ಸನ್ನೆ ಮಾಡಿ ತೋರಿಸಿದರು. ನನ್ನ ಕಣ್ಣುಗಳು ಅಗಲವಾಗಿ ತೆರೆದುಕೊಂಡವು. ನೀಲಿ ಬಟ್ಟೆಯ ಮೇಲೆ ಬಿಳಿ ಬಣ್ಣದ ಹೂಗಳಿದ್ದ ಉದ್ದದ ಫ್ರಾಕ್ ಧರಿಸಿ ಕುರ್ಚಿಯಲ್ಲಿ ಕುಳಿತಿದ್ದ ಅವರು ನನ್ನ ಗುಲಾಬಿ ಹೂವನ್ನು ಮಾಡಿಕೊಟ್ಟವರೇ ಆಗಿದ್ದರು.
ನಾನು ನಾಚಿಗೆಯಿಂದ ’ಬನ್ನಿ’ ಎಂದೆ. ಕುಳಿತಿದ್ದ ಕುರ್ಚಿಯ ಮೇಲಿನಿಂದ ಕೆಳಗೆ ಹಾರಿದರು. ಅರ್ರೇ ಅವರು ನನ್ನಿಂದಲೂ ಗಿಡ್ಡ ಇದ್ದರು ಈಗ. ಕೈಗಳನ್ನು ನೆಲಕ್ಕೊತ್ತಿ ವೇಗವಾಗಿ ಸ್ಟೇಜಿನ ಕಡೆಗೆ ಸಾಗಿದರು. ಅಂದರೆ ಅವರಿಗೆ ಕಾಲುಗಳೇ ಇರಲಿಲ್ಲ. ಆಘಾತವಾದಂತಾದ ನಾನು ನನ್ನ ಕೆಲಸ ಮರೆತು ನಿಂತೇ ಇದ್ದೆ. ಕುಳಿತವರೆಲ್ಲಾ ಎದ್ದು ನಿಂತು ಚಪ್ಪಾಳೆ ಹೊಡೆದು ಅವರನ್ನು ಸ್ವಾಗತಿಸಿದರು. ಒಂದು ಕಡೆಯಲ್ಲಿ ಅವರ ಸಾಧನೆಗಳ ಪಟ್ಟಿಯನ್ನು ಓದಿ ಹೇಳುತ್ತಿದ್ದರು.
ಹುಟ್ಟುವಾಗಲೇ ಕಾಲುಗಳನ್ನು ಕಳೆದುಕೊಂಡಿದ್ದ ಅವರ ವಿದ್ಯಾಭ್ಯಾಸ ಏಳನೇ ತರಗತಿಗೇ ಮೊಟಕುಗೊಂಡಿತ್ತು.ಆಗ ಯಾರೋ ಹೇಳಿದ್ದರಂತೆ, ಸರ್ಕಸ್ಸಿಗೆ ಇವರನ್ನು ಮಾರಿದರೆ ನಾಲ್ಕು ಕಾಸಾದರು ಮನೆಯವರಿಗೆ ದಕ್ಕೀತು ಎಂದು. ಮನೆಯಲ್ಲಿ ಉಳಿದವರಿಗೆ ಇವರ ಇರುವಿಕೆ ಹಿಂಸೆ ಅನ್ನಿಸುವ ಸುಳಿವು ಸಿಕ್ಕಿದ ಕೂಡಲೇ ಸ್ವಾಭಿಮಾನಿ ಮನಸ್ಸು ಎಚ್ಚೆತ್ತಿತ್ತು. ಮಹಿಳಾ ಸಮಾಜದ ಅಕ್ಕಂದಿರು ಕಲಿಸಿ ಕೊಟ್ಟ ಕರಕುಶಲ ಕಲೆಯನ್ನು ಜೀವನೋಪಾಯವಾಗಿ ಮಾರ್ಪಡಿಸಿಕೊಳ್ಳುವ ಪ್ರಯತ್ನ ಮಾಡಿದರು. ಜೊತೆಗೆ ಕೈಯಲ್ಲೆ ತಿರುಗಿಸಿ ಬಟ್ಟೆ ಹೊಲಿಯುವ ಮಿಷನ್ನನ್ನು ಬಳಸಿ ಬಟ್ಟೆ ಹೊಲಿದುಕೊಡಲು ಶುರು ಮಾಡಿದರು. ಅದನ್ನೇ ಉಳಿದವರಿಗೆ ಕಲಿಸಿಕೊಡುವ ಕೆಲಸವನ್ನು ಮಾಡಿದರು. ತಮ್ಮಂತೆ ದೈಹಿಕ ತೊಂದರೆಯಿಂದ ಬದುಕುವವರಿಗೆ ಯಾರದೋ ಕನಿಕರದ ಮೇಲೆ ಬದುಕನ್ನು ಅಳವಡಿಸಿಕೊಳ್ಳದೇ ಸ್ವಾಭಿಮಾನದಿಂದ ಬದುಕುವುದು ಹೇಗೆ ಎಂಬುದನ್ನು ಬದುಕಿ ತೋರಿಸುತ್ತಿದ್ದಾರೆ..
ಎಲ್ಲರ ಚಪ್ಪಾಳೆ ಸದ್ದಿನೊಡನೆ ನನ್ನ ಕೈಗಳ ಬಡಿತವೂ ಸೇರಿತ್ತು.
ನಾವು ಬೆಳೆದಂತೆಲ್ಲಾ ನಮ್ಮ ಸುತ್ತ ವರ್ತುಲವನ್ನು ಕಟ್ಟಿಕೊಳ್ಳುತ್ತಲೇ ಬೆಳೆಯುತ್ತೇವೇನೋ..
ಅಲ್ಲೇ ಕೆಲ ವರ್ಷಗಳು ಇದ್ದು ಬದುಕು ಕಟ್ಟಿಕೊಂಡಿದ್ದ ಆಕೆ ಇದ್ದಕ್ಕಿದ್ದಂತೆ ದೊಡ್ಡ ಪೇಟೆಯಲ್ಲಿ ಟೆಲಿಫೋನ್ ಬೂತ್ ಇಟ್ಟು ಅಲ್ಲಿಗೆ ಹೋದೊಡನೆ ಅಷ್ಟು ವರ್ಷಗಳಿಂದ ಇದ್ದ ಸಂಬಂಧದ ಕೊಂಡಿ ಕಳಚಿ ಬಿತ್ತು. ಆದರೂ ಇತ್ತಲಿಂದ ಹೋದವರನ್ನು ಅಕ್ಕಾ ಅಣ್ಣಾ ಎಂದು ಬಾಯ್ತುಂಬ ಕರೆದು ಮಾತಾಡಿಸುತ್ತಿದ್ದ ಅವರ ಅಭಿಮಾನ ಆಗೀಗ ಕಿವಿಗಳನ್ನು ತಲುಪುತ್ತಿತ್ತು.
ಪೇಪರಿನ ಮೂಲೆಯಲ್ಲಿ ಅದೊಂದು ದಿನ ಆ ಸುದ್ದಿ ಬರುವ ಮೊದಲೇ ವಿಷಯ ತಿಳಿದು ಎಲ್ಲರ ಮನದಲ್ಲಿ ನೋವು ಮಡುಕಟ್ಟಿತ್ತು. ಸಂಜೆಗತ್ತಲಿನ ಹೊತ್ತಿನಲ್ಲಿ ಯಾರೋ ಅವರ ಮೇಲೆ ಅತ್ಯಾಚಾರ ಮಾಡಿದ್ದರಂತೆ. ಕೆಲ ದಿನಗಳು ಅಮ್ಮಂದಿರು ತಮ್ಮ ಹೆಣ್ಣುಮಕ್ಕಳು ಒಳ ಹೊರಗೆ ಹೋಗುವಾಗಲೂ ಅಂಜುತ್ತಿದ್ದರು. ಹಾಗೆಂದು ಅವರೇನು ಅತ್ತು ಕರೆದು ಮುಸುಕೆಳೆದು ಕುಳಿತುಕೊಳ್ಳಲಿಲ್ಲ. ಅಂಜಿ ಅಲ್ಲಿಂದ ದೂರ ಹೋಗಲಿಲ್ಲ. ಅಲ್ಲೇ ಉಳಿದಿದ್ದರು. ಕೆಲವು ಯುವಕರು ಅವರಿಗೆ ಒತ್ತಾಸೆಯಾಗಿ ಅವರ ಸುರಕ್ಷತೆಯ ಹೊಣೆ ಹೊತ್ತಿದ್ದರು.
ನನ್ನ ಮದುವೆಯಾಗಿ ಈ ಊರಿಗೆ ಬಂದು ಎಷ್ಟೋ ವರ್ಷ ಕಳೆದ ಮೇಲೆ ಹೆಸರಾಂತ ಪತ್ರಿಕೆಯೊಂದರಲ್ಲಿ ಅವರ ಫೊಟೋ ಪ್ರಕಟವಾಗಿತ್ತು. ತನ್ನ ಹೋರಾಟದ ಬದುಕಿನಲ್ಲಿ ಅವರು ಮೇಲ್ಮಟ್ಟಕ್ಕೇರಿದ್ದರು. ತಮ್ಮಂತೆ ಇರುವ ಹತ್ತು ಹಲವು ಜನರ ಜೊತೆ ಸಂಘವೊಂದನ್ನು ಕಟ್ಟಿಕೊಂಡು ಜೊತೆಗೇ ದುಡಿದು ಜೊತೆಗೇ ಉಣ್ಣುವಂತಹ ಕೈಂಕರ್ಯದಲ್ಲಿ ತೊಡಗಿದ್ದರು. ಸರಕಾರದಿಂದಲೂ ಮಾನ್ಯತೆ ದೊರಕಿಸಿಕೊಂಡಿದ್ದರು. ಕಡು ಕಷ್ಟದ ಜೀವನದ ಹಾದಿಯನ್ನು ಸಹನೆಯಿಂದಲೂ, ಹಠದಿಂದಲೂ ಮುಂದುವರಿಸುತ್ತಲೇ ಇರುವ, ರಾಮಾಯಣದ ಸೀತೆಯ ಇನ್ನೊಂದು ಹೆಸರನ್ನು ಹೊತ್ತ ಅವರ ಮುಂದಿನ ಬದುಕಿಗೆ ನಮ್ಮೆಲ್ಲರ ಶುಭಾಶಯಗಳು ಇದ್ದೇ ಇರುತ್ತದಲ್ಲಾ..
*****
ಗ್ರೇಟ್……