ಗೆಜ್ಜೆಪೂಜೆ: ವಾಸುಕಿ ರಾಘವನ್ ಅಂಕಣ

 
ಮನೆಯ ಮೇಲಿನ ಮಹಡಿಯ ಕೋಣೆಯಲ್ಲಿರುವ ಬಸುರಿ ಪಿಟೀಲಿನಲ್ಲಿ ವಿಷಾದಗೀತೆ ನುಡಿಸುತ್ತಿರುತ್ತಾಳೆ. ಕೆಳಮಹಡಿಯಲ್ಲಿ ಅವಳ  ಅಮ್ಮ ತಲೆಯ ಮೇಲೆ ಕೈ ಹೊತ್ತುಕೊಂಡು “ಅಯ್ಯೋ ಗಂಡು ಮಗು ಹುಟ್ಟಿಬಿಟ್ಟರೆ ಹೆಂಗಪ್ಪಾ?” ಅಂತ ಚಿಂತಾಕ್ರಾಂತಳಾಗಿ ಕುಳಿತಿರುತ್ತಾಳೆ. ಆಗಿನ ಕಾಲದ ಚಿತ್ರಗಳಲ್ಲಿ ಹೆಣ್ಣುಮಗು ಹುಟ್ಟಿದಾಕ್ಷಣ ಕುಟುಂಬದ ಕೆಲವರಾದರೂ ನಿರಾಶರಾಗುವ, ತಾಯಿ ಸಂತಸಗೊಂಡಿದ್ದರೂ ಸಂಭ್ರಮ ಪಡಲಾಗದೆ ಒದ್ದಾಡುವ ಸನ್ನಿವೇಶಗಳು ಅಪರೂಪವೇನಲ್ಲ. ಆದರೆ ಆಶ್ಚರ್ಯ ಅನ್ನುವಂತೆ ಇಲ್ಲಿನ ಸನ್ನಿವೇಶ ಅದಕ್ಕೆ ತದ್ವಿರುದ್ಧ. ನಂತರ ಹೆಣ್ಣುಮಗು ಚಂದ್ರಾ ಹುಟ್ಟಿದಾಗ ಅದರ ಅಜ್ಜಿ ಸಂಭ್ರಮಿಸುತ್ತಾಳೆ, ತಾಯಿ ಬೇಸರದ ಕಣ್ಣೀರು ಸುರಿಸುತ್ತಾಳೆ.

ಈ ವಿಡಂಬನಾತ್ಮಕ ದೃಶ್ಯಕ್ಕೆ ಕಾರಣ ಅದು ವೇಶ್ಯೆಯರ ಮನೆ. ಹೆಣ್ಣು ಮಗು ಆದರೆ ಮುಂದಿನ ಸಂಪಾದನೆಗೆ ದಾರಿ ಅನ್ನುವುದು ಆ ಅಜ್ಜಿಯ ಲೆಕ್ಕಾಚಾರ. ಚಂದ್ರಾಗೆ ಏಳೆಂಟು ವರ್ಷ ಇರುವಾಗ ಅವರು ಮೈಸೂರಿನ ಅಗ್ರಹಾರದ ಬೀದಿಯಲ್ಲಿ ವಾಸಕ್ಕೆ ಬರುತ್ತಾರೆ, ಚಂದ್ರಾಳ ಅಮ್ಮನನ್ನು “ಇಟ್ಟುಕೊಂಡಿರುವ” ಸಾಹುಕಾರನ ಸಹಾಯದಿಂದ. ಮೊದಮೊದಲಿಗೆ ವೇಶ್ಯೆಯರು ಅಂತ ಮೂದಲಿಸೋ ಸುತ್ತಮುತ್ತಲಿನ ಜನ ಬರಬರುತ್ತಾ ಚಂದ್ರಾ ಮತ್ತು ಅವಳ ಅಮ್ಮನ ಸಜ್ಜನಿಕೆ ಮತ್ತು ಒಳ್ಳೆಯ ಸ್ವಭಾವ ಕಂಡು ಅವರನ್ನು ಗೌರವಿಸುತ್ತಾರೆ. ಮೊದಲಿಂದಲೂ ಚಂದ್ರಾಳಿಗೆ ಎದುರು ಮನೆಯವರ ಜೊತೆ ಹೆಚ್ಚಿನ ಸಲಿಗೆ. ಬೆಳೆದು ದೊಡ್ಡವರಾದಂತೆ ಎದುರು ಮನೆಯ ಹುಡುಗ ಶೇಖರ್ ಮತ್ತು ಚಂದ್ರಾ ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡುತ್ತಾರೆ. ಚಿಕ್ಕಂದಿನಿಂದಲೂ ಶೇಖರ್ ತಂದೆಗೆ ಓದಿನಲ್ಲಿ ಮುಂದಿರುವ, ಎಲ್ಲ ವಿಚಾರಗಳನ್ನು ತಿಳಿದುಕೊಳ್ಳಲು ಆಸಕ್ತಿಯಿರುವ ಚಂದ್ರಾಳ ಮೇಲೆ ಒಲವು, ಅಭಿಮಾನ. ಆದರೂ ಅವಳು ವೇಶ್ಯಾಕುಲದವಳು ಅನ್ನುವ ವಿಚಾರ ಭಿನ್ನಾಭಿಪ್ರಾಯಗಳಿಗೆ ದಾರಿ ಮಾಡಿಕೊಟ್ಟು ಅವಳ ಭವಿಷ್ಯವನ್ನು ದುರಂತದೆಡೆಗೆ ಕರೆದೊಯ್ಯುತ್ತದೆ.

1969ರಲ್ಲಿ ಬಂದ ಪುಟ್ಟಣ್ಣ ಕಣಗಾಲರ ನಿರ್ದೇಶನದ ಚಿತ್ರ “ಗೆಜ್ಜೆಪೂಜೆ” ಎಂ.ಕೆ.ಇಂದಿರಾ ಅವರ ಕಾದಂಬರಿಯನ್ನು ಆಧರಿಸಿದ್ದು. ಪ್ರಜಾಮತದಲ್ಲಿ ಧಾರಾವಾಹಿ ರೂಪದಲ್ಲಿ ಮೂಡಿಬಂದು ಜನಮೆಚ್ಚಿಗೆ ಗಳಿಸಿದ್ದ ಈ ಕಥೆ ಚಲನಚಿತ್ರವಾಗಿಯೂ ಅಷ್ಟೇ ಮನ್ನಣೆ ಪಡೆಯಿತು. “ಸಾಮಾಜಿಕ ಪಿಡುಗಾದ ಈ ವೃತ್ತಿಯನ್ನು ಹೋಗಲಾಡಿಸುವೆಡೆಗೆ ನಮ್ಮ ಪ್ರಯತ್ನ” ಅನ್ನುವಂತಹ ಹೇಳಿಕೆಯಿಂದ ಶುರುವಾಗುವ ಚಿತ್ರ, ಚಿಂತನೆಗೆ ಹಚ್ಚುವ ಬಹುಮುಖೀ ಸಾಮಾಜಿಕ ಚಿತ್ರವಾಗದೇ, ಕೇವಲ ಸಲೀಸಾಗಿ ನೋಡಿಸಿಕೊಂಡು ಹೋಗುವ ಕೌಟುಂಬಿಕ ಚಿತ್ರವಾಗಿಯೇ ಉಳಿದುಬಿಡುತ್ತದೆ. ವೇಶ್ಯೆಯರ ಮನೆಯಲ್ಲಿ ಹುಟ್ಟಿದ್ದರಿಂದ ಚಂದ್ರಾಳಿಗೆ ಹೇಗೆ ತೊಂದರೆಯಾಯಿತು ಅನ್ನುವಲ್ಲಿಗೆ ವೇಶ್ಯಾವೃತ್ತಿ ಚಿತ್ರದ ಮಟ್ಟಿಗೆ ನಿಮಿತ್ತ ಮಾತ್ರ. ಹಾಗೆ ನೋಡಿದರೆ ಇಡೀ ಚಿತ್ರದಲ್ಲಿ ವೇಶ್ಯಾವೃತ್ತಿಯನ್ನು ಅವಲಂಬಿಸಿರುವುದು ಕೇವಲ ಒಂದೇ ಪಾತ್ರ, ಅದು ಚಂದ್ರಾಳ ಅಮ್ಮ. ಅವಳಿಗೂ ಕೂಡ ಒಬ್ಬನೇ “ಗಿರಾಕಿ”. ಆತ ಕೂಡ ಅವಳನ್ನು ಹಿಂಸಿಸುವುದಿಲ್ಲ, ಬಲವಂತವಾಗಿ ಆಕ್ರಮಿಸುವುದಿಲ್ಲ, ದುಡ್ದುಕಾಸಿನ ವಿಚಾರದಲ್ಲಿ ಮೋಸ ಮಾಡುವುದಿಲ್ಲ. ಸಮಾಜದಲ್ಲಿ ಅವಳಿಗೆ ಹೆಂಡತಿಯ ಸ್ಥಾನಮಾನ ಕೊಟ್ಟಿರಲಿಲ್ಲ ಅನ್ನುವುದನ್ನು ಬಿಟ್ಟರೆ ಅವನನ್ನು ಕೆಟ್ಟವನು ಅಂತ ಹೇಳಲಾಗದು. ವೇಶ್ಯಾವೃತ್ತಿಯಲ್ಲಿ ಇರಬಹುದಾದ ಎಷ್ಟೋ ಆಯಾಮಗಳ ಪ್ರಸ್ತಾಪವೇ ಆಗೋದಿಲ್ಲ ಚಿತ್ರದಲ್ಲಿ – ಬಲವಂತವಾಗಿ ವೃತ್ತಿಗೆ ಸೇರಿಸಲ್ಪಡುವ ಹೆಂಗಸರು, ಸುಖಪಡೆದುಕೊಂಡು ಹಣಕೊಡದೆ ಸತಾಯಿಸುವ ದುರುಳರು, ಹಲವಾರು ಗಂಡಸರ ಜೊತೆ ಸಂಬಂಧವಿರಬೇಕಾದ ಅನಿವಾರ್ಯತೆ, ಅವರು ಅನುಭವಿಸುವ ದೈಹಿಕ ಹಲ್ಲೆಗಳು, ಹಲಜನರ ಸಂಗದಿಂದ ಉಂಟಾಗಬಹುದಾದ ರೋಗರುಜಿನಗಳು, ವಯಸ್ಸಾಗುತ್ತ ಹೋದಂತೆ ಕ್ಷೀಣಿಸುವ ಆಕರ್ಷಣೆ, ಅವರದೇ ಕಸುಬಿನವರೊಂದಿಗಿನ ಒಡನಾಟ ಇತ್ಯಾದಿ.

ಹಾಗೆಯೇ ಪಾತ್ರವಾಗಿ ಮತ್ತು ನಟನೆಯ ದೃಷ್ಟಿಯಿಂದ ಕೂಡ ಚಂದ್ರಾ ಮತ್ತು ಕಲ್ಪನಾ ಪರಿಣಾಮಕಾರಿ ಅನಿಸಲಿಲ್ಲ. ಚಂದ್ರಾ ಮೂಲತಃ ಸೂಕ್ಷ್ಮ ಸಂವೇದನೆಗಳ ಹುಡುಗಿ. ಆದರೂ ಎಷ್ಟೋ ವಿಚಾರಗಳು ಅವಳ ಗಮನಕ್ಕೆ ಬಂದಿರುವುದಿಲ್ಲ ಅನ್ನುವುದು ಸೋಜಿಗ. ಇಪ್ಪತ್ತರ ಆಸುಪಾಸಿನ ಹುಡುಗಿ ಚಂದ್ರಾ ತನ್ನ ಅಮ್ಮನ ಬಳಿ ಬರುವ “ಅಪ್ಪಾಜಿ”ಗೆ ತಾನು ಉತ್ತಮ ಅಂಕ ಪಡೆದಿರುವುದಾಗಿ ಹೇಳಿದಾಗ ಅವನು ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಚಿಕ್ಕಂದಿನಿಂದಲೂ ಅವನಿಂದ ಭಾವನಾತ್ಮಕ ತಿರಸ್ಕಾರ, ಅಸಡ್ಡೆಯನ್ನು ಅನುಭವಿಸಿರುವ ಚಂದ್ರಾಳಿಗೆ ಅವನು ಬರುತ್ತಿರುವುದು ತನ್ನ ತಾಯಿಯ ಸಂಗವನ್ನು ಬಯಸಿ ಮಾತ್ರ ಅನ್ನುವ ಸತ್ಯ ಅರ್ಥವಾಗಿರಲಿಲ್ಲವೇ? ಎಲ್ಲವನ್ನೂ ತಿಳಿದುಕೊಳ್ಳುವ ಅದಮ್ಯ ಬಯಕೆ ಹೊಂದಿರುವ ಚಂದ್ರಾ, ಮದುವೆಯ “ನಾತಿ ಚರಾಮಿ” ಮಂತ್ರದ ಅರ್ಥವನ್ನು ಅಷ್ಟು ದೊಡ್ಡವಳಾಗುವವರೆಗೂ ಕೇಳದಿರುವುದು ಕೂಡ ಅಸಹಜ ಅನಿಸುತ್ತದೆ. ತನ್ನ ನಿಜವಾದ ತಂದೆ ಯಾರು ಅಂತ ಗೊತ್ತಾಗಿ, ಅವರ ಮುಖಾಮುಖಿಯಾದಾಗಲೂ ಚಂದ್ರಾಳಿಗೆ ಅವರ ಮೇಲೆ ಸಹಜವಾದ ಬೇಸರ, ತನ್ನ ತಾಯಿಯ ಈ ಸ್ಥಿತಿಗೆ ಪರೋಕ್ಷವಾಗಿ ಕಾರಣವಾದವರ ಮೇಲಿನ ಆಕ್ರೋಶ ಕಂಡುಬರುವುದಿಲ್ಲ. ಕಲ್ಪನಾ ನಟನೆ ಕೂಡ ತುಂಬಾ ಕೃತಕವಾಗಿ, ಮೆಲೋಡ್ರಾಮಾ ಇಂದ ಕೂಡಿದೆ. ನನಗೆ ನಾಟಕೀಯವಾದ, ಭಾವಾವೇಶದ ಅಭಿನಯದ ಮೇಲೇನೂ ತಕರಾರಿಲ್ಲ, ಆದರೆ ಅದು ಚಿತ್ರದ, ಪಾತ್ರಕ್ಕೆ ಹೊಂದಿಕೆಯಾಗಬೇಕು ಅಷ್ಟೇ. ಉದಾಹರಣೆಗೆ, ಬಬ್ರುವಾಹನದಲ್ಲಿ ನಾವು ಮೆಚ್ಚುವ ರಾಜಕುಮಾರ್ ಅಭಿನಯ ಹಾಲುಜೇನು ಚಿತ್ರದಲ್ಲಿ ಬಂದಿದ್ದರೆ ನಮಗೆ ಅದು ಅಸಂಬದ್ಧ ಅನಿಸುತ್ತದೆ. ಇನ್ನೊಂದು ಉದಾಹರಣೆ ಹೇಳಬೇಕಂದರೆ, ಬಾಲಣ್ಣ ಅಭಿನಯ ಎಂದಿಗೂ ಡ್ರಮ್ಯಾಟಿಕ್, ಆದರೆ ಬಂಗಾರದ ಮನುಷ್ಯದ ರಾಚೂಟಪ್ಪ ಮತ್ತು ಭೂತಯ್ಯನ ಮಗ ಅಯ್ಯುವಿನ ಬುಂಡೇಕ್ಯಾತ ತುಂಬಾ ವಿಭಿನ್ನ ಪಾತ್ರಗಳಾಗಿ ಹೊರಹೊಮ್ಮುತ್ತಾರೆ, ಹಾಗಾಗಿ ಬಾಲಣ್ಣ ನಟನೆ ಇಷ್ಟು ದಶಕಗಳಾದ ಮೇಲೂ ಅಷ್ಟೇ ಮನೋಜ್ಞ ಅನಿಸೋದು. ಆದರೆ ಕಲ್ಪನಾ ವಿಷಯದಲ್ಲಿ ಬೆಳ್ಳಿಮೋಡ, ಗೆಜ್ಜೆಪೂಜೆ, ಶರಪಂಜರ ಇವುಗಳಲ್ಲಿನ ಪಾತ್ರಗಳು ಸಾಮಾಜಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಬೇರೆಬೇರೆಯಾದರೂ ಅವೆಲ್ಲವೂ ಮಾತಾಡುವ ರೀತಿ, ಹಾವಭಾವ, ನಿಲುವು ಒಂದೇ ರೀತಿಯದ್ದಾಗಿವೆ.

ನನ್ನ ಪ್ರಕಾರ ಚಿತ್ರದ ಭಾವನಾತ್ಮಕ ಕೇಂದ್ರಬಿಂದು ಚಂದ್ರಾ ಅಲ್ಲ, ಅವಳ ಅಮ್ಮ ಅಲ್ಲ, ಅದು ಎದುರುಮನೆ ಶೇಖರ್ ತಂದೆಯ ಪಾತ್ರ. ತಮ್ಮ ಎದುರುಮನೆಗೆ ಬಂದಿರೋರು ವೇಶ್ಯೆಯರು ಅಂತ ಕಳವಳ ಪಡುತ್ತಿರೋ ಹೆಂಡತಿಗೆ ಹೋಲಿಸಿದರೆ, ಅವರ ಮನೆಯಿಂದ ಬರುತ್ತಿವ ಪಿಟೀಲು ಗಾಯನದ ಮಾಧುರ್ಯವನ್ನು ಪ್ರಶಂಸಿಸುವ ಅವನು ದೊಡ್ಡವನಾಗಿ ಕಾಣುತ್ತಾನೆ. ಆ ವೇಶ್ಯೆಯರ ಮನೆಗೆ ಎಷ್ಟೋ ಹೊತ್ತಿನಲ್ಲಿ ಕಾರ್ ಬಂತು, ಕಾರ್ ಹೋಯ್ತು ಅಂತ ಅಸಹ್ಯಪಟ್ಟುಕೊಳ್ಳೋ ಹೆಂಡತಿಗೆ “ಅವರ ಮನೆಗೆ ಯಾರೋ ಬಂದರೆ ಅದು ಅವರ ವಿಚಾರ, ನಿನಗೇನು ಸಮಸ್ಯೆ?” ಅಂತ ಬುದ್ಧಿ ಹೇಳುತ್ತಾನೆ. ಹಾಗಂತ ಆತ ಸಂಪ್ರದಾಯಗಳನ್ನೆಲ್ಲಾ ಧಿಕ್ಕರಿಸುವ ವಿಚಾರವಾದಿ ಅಲ್ಲ. ದೇವರಿಗೆ ದಿನಾ ಪೂಜೆ ಮಾಡುತ್ತಾನೆ, ಆದರೆ ಆ ವೇಶ್ಯೆಯರ ಹುಡುಗಿಯನ್ನು ದೇವರಮನೆಗೆ ಬರಮಾಡಿಕೊಂಡು ತೀರ್ಥ ಕೊಡುತ್ತಾನೆ. ಅವನು ವೇಶ್ಯೆಯರ ಸಂಪ್ರದಾಯಗಳನ್ನೆಲ್ಲಾ ಹೀಯಾಳಿಸುವುದಿಲ್ಲ – ನಾವು ಮದುವೆ ಅಂತೀವಿ, ಅವರು ಗೆಜ್ಜೆಪೂಜೆ ಅಂತಾರೆ, ಅಂತಹ ವ್ಯತ್ಯಾಸ ಏನಿಲ್ಲ ಅಂತ ಪ್ರಬುದ್ಧವಾಗಿ ಮಾತನಾಡುತ್ತಾನೆ. ಇವತ್ತಿನ ಸಮಾಜದಲ್ಲೂ ಕಡಿಮೆ ಮಟ್ಟದಲ್ಲಿರುವ ಮತ್ತು ಹೆಚ್ಚುಹೆಚ್ಚು ಬೇಕಿರುವ “ನಾನ್ ಜಡ್ಜ್ ಮೆಂಟಲ್ ಆಟಿಟ್ಯೂಡ್” ಬಿಂಬಿಸುತ್ತಾನೆ ಅವನು. ಪ್ರಪಂಚದ ಎಲ್ಲಾ ಸಮಸ್ಯೆಗಳನ್ನೂ, ಪಿಡುಗುಗಳನ್ನೂ ನಮ್ಮಿಂದ ಬಗೆಹರಿಸಲು ಆಗುವುದಿಲ್ಲ, ಆದರೆ ವೈಯಕ್ತಿಕ ಮಟ್ಟದಲ್ಲಿ ಸಾಧ್ಯವಿರುವುದು ಬೇರೆಯವರನ್ನು ಅಂತಃಕರಣದಿಂದ, ಗೌರವದಿಂದ, ಮಾನವೀಯತೆಯಿಂದ ಕಾಣಲು. ಹಾಗಾದಾಗ ಮಾತ್ರ ನಾವಿರುವ ಸಮಾಜ ಸಹನೀಯವಾಗಲು ಸಾಧ್ಯ!

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
sharada.m
sharada.m
10 years ago

nicely  analysed

ಹೃದಯಶಿವ
ಹೃದಯಶಿವ
10 years ago

ಇಷ್ಟವಾಯ್ತು.

Vasuki
10 years ago

Thanks! 🙂

3
0
Would love your thoughts, please comment.x
()
x