ಅಂದು ರಾತ್ರಿ ಸರಿಯಾಗಿ ಹತ್ತು ಗಂಟೆ ಸಮಯ ಊಟ ಮಾಡಿ ನಿದ್ರಾದೇವತೆಯ ಮುತ್ತಿಟ್ಟು ಮಲಗುವ ಸಮಯವಾಗಿತ್ತು, ಆಗ ಕಾವ್ಯಮನೆಯ ರುವಾರಿ ಪುಟಾಣಿ ಗೆಳೆಯ ಕಪಿಲ್ ಅವರ ಕರೆ ರಿಂಗಣಿಸಿತು. “ಗುರುಗಳೆ ನಮಸ್ಕಾರ ಗೆಂಡೆದೇವ್ರು ಕಳಿಸಿದ್ದೀನಿ ನೀವು ಓದಬೇಕು” ಆಗಲಿ ಕ್ಯಾಪ್ಟ್‍ನ್ ಅವರೆ ಎಂದು ನಿದ್ದೆ ಬಂದಿದ್ದರಿಂದ ಮಲಗಿದೆ. ಆ ರಾತ್ರಿಯಿಂದು ಸರಿ ಸುಮಾರು ಏಳು ರಾತ್ರಿಗಳು ಗೆಂಡೆದೇವ್ರ ಕಡೆಗೆ ಮನಸ್ಸು ಹೋಗಲೆಯಿಲ್ಲ. ಕೆಲಸದ ಒತ್ತಡದೊಳಗೆ ಜೀವನ ಹೊಸೆಯುತ್ತಾ, ಹತ್ತಾರು ಕಾರ್ಯಕ್ರಮಗಳು ವೃತ್ತಿ ಜೀವನದಲ್ಲಿ ಭರದಲ್ಲಿ ಗೆಂಡೆದೇವ್ರನ ಕಾಣಲು ಆಗಲೆಯಿಲ್ಲ. ಇತ್ತೀಚೆಗೆ ಅಕಾಡೆಮಿ ಕೆಲಸದ ನಿಮಿತ್ಯ ಕೆಂಪೆಗೌಡರ ನಗರದತ್ತ ಪಯಣದಲ್ಲಿ ಹವಾನಿಯಂತ್ರಿತ ವಾಹನದಲ್ಲಿ ಗೆಂಡೆದೇವ್ರ ಎದೆಗೊತ್ತಿಕೊಂಡೆ ಅಲ್ಲಿನ ಅಹ್ಲಾದಕರ ಅನುಭವವೆ ಈ ಲೇಖನ.
ಮೂಕನಾಗಿ ಹುಟ್ಟಿದ ಮಲ್ಲಯ್ಯ ಹಳ್ಳಿಯಲ್ಲಿನ ಮುಗ್ದತೆಗೆ ಗೆಂಡೆದೇವ್ರು ಮಾಡಿರುವ ಹಳ್ಳಿ ಹೈಕ್ಳು ಎಲ್ಲರು ಕಾಡುವಂತಹ ಮತ್ತು ಓದಿಸಿಕೊಂಡು ಹೋಗುವ ಕಥೆ. ಗೆಂಡೆದೇವ್ರು, ಗೆಂಡೆ ದೇವರ ಮಠ ಮುಂಬೈ ಪ್ರಾಂತದ್ದು, ಧರೆಗಟ್ಟಿ ಎಂಬ ಪುರದ ಈ ನೆಲದ ಸನಾತನ ಪರಂಪರೆಯನ್ನು ಅರೆದು ಕುಡಿದಿರುವ ಜನರು ಸಹ ಕಾಲದ ಗರ್ಭದಲ್ಲಿ ಹುಟ್ಟಿ ಬರುವ ದೈವ ಪುರುಷರನ್ನು ಅವರ ಬಾಲ ಲೀಲೆಗಳಿಂದಲೇ ಗುರುತಿಸಿ ಅವರಿಗೆ ದೇವರ ಪಟ್ಟವನ್ನು ಕಟ್ಟಿ ತಮ್ಮ ಸಂಕಷ್ಟಗಳನ್ನು ಅವರ ಕೊರಳಿಗೆ ನೇತಾಕಿ ತಾವು ನೆಮ್ಮದಿಯಿಂದ ನಿಟ್ಟುಸಿರು ಬಿಡುವ ದೃಶ್ಯಗಳು ನಮ್ಮ ಹಳ್ಳಿಗಳಿಂದ ಬಂದ ಸಂಸ್ಕøತಿ. ಈ ಊರಿನ ದೈವಿ ಸಂಭೂತ, ಗುರು ಪ್ರಭಾವಳಿಯ ಐನೋರ ಮನೆಯಲ್ಲಿಯೇ ಈಗ ಗೆಂಡೆದೇವರು ಉದೈಸಿರುವುದು. ಈ ರೀತಿಯಲ್ಲಿ ಪ್ರಾರಂಭವಾಗುವ ಕಥೆಗಳು ಒಂದೊಂದು ಸುಂದರ ಹಳ್ಳಿ ಬದುಕನ್ನು ಕಟ್ಟಿಕೊಡುವ ದೃಶ್ಯಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗುತ್ತವೆ. ನಾವೆಲ್ಲರು ಚಿಕ್ಕಂದಿನಲ್ಲಿ ಆಡಿ ಬೆಳೆದ ಪರಿಸರದಲ್ಲಿ ದೇವರುಗಳ ಬಗ್ಗೆ, ನಾವು ಆಡಿದ ಆಟಗಳು ಅಷ್ಟಿಷ್ಟಲ್ಲ ದೇವರನ್ನು ಮಾಡಿ ಅದನ್ನು ಓಡಾಡುವ ರೀತಿಯನ್ನು ಹೇಳಿದ್ದೇವೆ ಮಕ್ಕಳಿದ್ದಾಗ ಆಡಿದ್ದೇವೆ. ನಮ್ಮೂರಿನ ಸುತ್ತಮುತ್ತಲಿನಲ್ಲಿರುವ ಅದೆಷ್ಟು ಕಲ್ಲುಗಳನ್ನು ದೇವರೆಂದು ನಂಬಿ ಅವುಗಳೆ ಮುಂದೆ ದೊಡ್ಡ ದೇವರಾಗಿ ಪಲ್ಲಕ್ಕಿ ಉತ್ಸವ ಮಾಡಿಕೊಂಡ ನೈಜ ಉದಾಹರಣೆಗಳಿವೆ.
‘ಒಣ ದಿಮಾಕು ಮಾಡಬ್ಯಾಡ, ನಿನೇಟು, ನಿನ್ನ ಶಕ್ತಿಯೆಟು ಅಂಬೋದನ್ನು ತೋರಿಸು’ ಎಂದು ಇವಾಗಲೂ ನಮ್ಮ ಊರಿನಲ್ಲಿ ಮರಗಮ್ಮ ದುರಗಮ್ಮ ದೇವರು ಮೈಮೇಲೆ ಬಂದರೆ ಹಿರಿಯರು ಕೇಳುತ್ತಾರೆ. ನಿಮಗೇನು ಬೇಕವ್ವ ಆಯಿ ಮುತ್ಯಾ ಎಂದು ಭಯವಿಲ್ಲದೆ ದೇವರ ಜೊತೆಗೆ ಮಾತನಾಡುತ್ತಾರೆ. ಗೆಂಡೆದೇವರ ಪೂರ್ವಾಶ್ರಮದ ನಾಮ ಮಲ್ಲಯ್ಯ. ಎಲ್ಲ ಬಾಲಕರಂತೆ ಸಾಮಾನ್ಯ ಬಾಲ ಲೀಲೆಗಳಲ್ಲಿಯೇ ಬೆಳೆದ ಮಲ್ಲಯ್ಯನಗೆ ಎಳೆಂಟು ವರ್ಷಗಳಾದರೂ ನಾಲಿಗೆಯೇ ಹೊರಳಾಡಿಲಿಲ್ಲವಾಗಿ ಅವನಿಗೆ ಮೂಕ ಮಲ್ಲಯ್ಯ ಎಂದು ರೂಡಿನಾಮ ಜಾರಿಗೊಂಡಿತ್ತು. ಈ ಮೂಕ ಮಲ್ಲಯ್ಯನೆ ಕಥಾನಾಯಕನಾಗುವ ಕಥೆ ಗೆಂಡೆದೇವ್ರು ಆಗಿ ಪರಿವರ್ತನೆಯಾಗುವ ವಿಷಯ ಅತ್ಯಂತ ಆಹ್ಲಾದಕರಾವಾಗಿದೆ. ಗೆಂಡೆದೇವರ ವರ್ಣನೆ ರಮಣೀಯವಾಗಿದೆ. ಓದುಗನನ್ನು ಹಿಡಿದಿಡುತ್ತದೆ. ನೀವು ಓದುತ್ತಲೆಯಿರುವ ಅನುಭವ ಪಡೆಯುತ್ತೀರಿ.
ಅವರನ್ನೆಲ್ಲ ಕಣ್ತುಂಬಿಕೊಳ್ಳುತ್ತಾ ಮಲ್ಲಯ್ಯ ಅಲ್ಲೆ ಮೂಲೆಯಲ್ಲಿ ಅಡ್ಡಾದ. ಇದಾಗಿ ಅದಾಗಿ ವರ್ಷಾನುಗಟ್ಟಲೇ ಈ ಕೋಲಿಯ ಅಂಗಳವೇ ಮಲ್ಲಯ್ಯನ ಶಯನಗ್ರಹವಾಗಿಬಿಟ್ಟಿತ್ತು. ಇವರ ಗದ್ದಲಕ್ಕೆ ಮೇಲೆದ್ದ ಮೂಕ ಮಲ್ಲಯ್ಯ ಎರಡು ಕೈ ಆಕಾಶಕ್ಕೆಸೆಯುತ್ತಾ ಎದ್ದು ನಿಂತು ಬೆನ್ನು ನಿಟಾರಿಸತೊಡಗಿದಾಗ ನಿಧಾನಕ್ಕೆ ಅವನ ಸೊಂಟದ ಸುತ್ತಲಿದ್ದ ಲುಂಗಿ ಕೆಳಕ್ಕೆ ಜಾರುವುದಕ್ಕೂ, ಗೆಳೆಯರ ಜೋಕಿಗೆ ಈ ಕಡೆ ಹೊರಳಿ ಹಲ್ಲುಕಿಸಿಯುತ್ತಿದ್ದ ಪಲ್ಯಾನಿಗೆ ಮಲ್ಲಯ್ಯನ ಗುಪ್ತಾಂಗದ ದರ್ಶನವಾಗುವುದಕ್ಕೂ ಸರಿ ಹೋಯಿತು. ಈ ಮೇಲಿನ ದೃಶ್ಯವು ನಮ್ಮ ಹಳ್ಳಿಗಳಲ್ಲಿ ನಮ್ಮ ಹೈಕ್ಳುಗಳಲ್ಲಿ ಕಂಡು ಬರುತ್ತದೆ. ಇದನ್ನೆ ನೆನಸಿಕೊಂಡು ಮಜಾ ಮಾಡುತ್ತಾ ನಮ್ಮ ಹಳ್ಳಿ ಹುಡುಗರು ಕಾಲಕಳೆಯುವ ಸಾಮಾನ್ಯ ದೃಶ್ಯ ಮನಕುಲಕುತ್ತದೆ.
ಮರುದಿನ ಬೆಳ್ಳಂಬೆಳಿಗ್ಗೆ ಪಲ್ಯಾ ಅವಸರವಾಗಿ ಬಸ್ಯಾನನ್ನು ಹುಡುಕಿಕೊಂಡು ಬಂದ. ಪಲ್ಯಾ ಬಂದವನೇ ನನ್ನ ಪಾಲಿನ ದೇವರು ಎಲ್ಲಿ? ಎಂದು ಸುತ್ತಲೂ ಹುಡುಕತೊಡಗಿದ. ಮೂಕ ಮಲ್ಲಯ್ಯ ಸಹ ಅಲ್ಲೇ ಚಾಪೆಯೊಳಗ ಬಿದ್ದುಕೊಂಡಿದ್ದ. ‘ನೀ ಹೇಳಿದ್ದ ಕರೆಕ್ಟ್ ಲೇ ಬಸ್ಯಾ ನನಗ ನಿನ್ನಿ ಓಸಿ ನಂಬರಕ್ಕ 22 ಸಾವರ ರೊಕ್ಕ ಬಂದ್ವು’ ಎಂದ ಎಲ್ಲರೂ ಅಚ್ಚರಿಯಿಂದ ದಿಗ್ಮೂಡರಾದರು. ಇವರ ಗದ್ದಲಕ್ಕೆ ಮೂಕ ಮಲ್ಲಯ್ಯ ಎದ್ದು ನಿಂತ. ಪಲ್ಯಾ ‘ನಾನು ನನ್ನ ದೇವರಿಗೆ ನಮಸ್ಕಾರ ಮಾಡಬೇಕು’ ಎಂದಾಗ ಬಸ್ಯಾನ ಗೆಳೆಯರು ಮೂಕ ಮಲ್ಲಯ್ಯನನ್ನು ಎಬ್ಬಿಸಿಕೊಂಡು ಭಜನಾ ಕೋಲಿ ಹಿಂದಿನ ಹಿತ್ತಿಲಕ್ಕೆ ಕರೆ ತಂದರು. ಅಲ್ಲಿ ಪಲ್ಯಾ ಮಲ್ಲಯ್ಯನ ಲುಂಗಿ ಎತ್ತಿದ್ದವನೇ ತನ್ನ ಬೊಕ್ಕಣದಲ್ಲಿಂದ ಕುಂಕುಮ ವಿಭೂತಿ ತೆಗೆದು ಅಲ್ಲಿನ ಗೆಂಡೆದೇವರಿಗೆ ಹಚ್ಚಿ ಅಡ್ಡಬಿದ್ದು ನಮಸ್ಕಾರ ಮಾಡಿದ. ಅವನ ಭಕ್ತಿಗೆ ಮರಳಾದವರಂತೆ ಉಳಿದವರು ಸಹ ನಮಸ್ಕರಿಸಿದರು. ಈ ದೃಶ್ಯದಲ್ಲಿರುವ ಮುಗ್ಧತೆ ಹಳ್ಳಿ ಜನರ ನಂಬಿಕೆ ಹಿಡದಿಟ್ಟುಕೊಂಡಷ್ಟು ಕಥೆ ಎಲ್ಲರಿಗೂ ಇಷ್ಟವಾಗಲು ಮುಂದೆ ನಿಲ್ಲುತ್ತದೆ.
ಸೌಂದರ್ಯದ ಒಡತಿಯರು ಬಂದಾಗ ಅವರನ್ನು ಇದಿರುಗೊಳ್ಳಲೆಂಬಂತೆ, ಅವರ ಸೌಂದರ್ಯರಸ ಆಸ್ವಾದಿಸಲೆಂಬಂತೆ ನಿಧಾನಕ್ಕೆ ಎದ್ದುನಿಂತು ಮಿಡುಕತಿತ್ತು. ಅದು ಮಿಡುಕಿದಾಗಲೆಲ್ಲ ಅದರ ಎಡಬಲದಲ್ಲಿದ್ದ ಸಂಪಿಗೆ, ಸೇವಂತಿಗೆ, ಮಲ್ಲಿಗೆ ಪುಷ್ಪಗಳು ನೆಲಕ್ಕೆ ಉದುರುತ್ತಿದ್ದವು. ಅವು ಉದುರಿದಾಗಲೆಲ್ಲ ತಮಗೆ ದೇವರ ವಿಶೇಷ ಅನುಗೃಹ ಲಬಿಸಿದಂತಾಯಿತು ಎಂದು ಭಕ್ತಿಭಾವದಿಂದ ಗಲ್ಲ ಬಡೆದುಕೊಳ್ಳುತ್ತಿದ್ದರು. ಇಂತಹ ವರ್ಣನೆ ನಮ್ಮ ಹಳ್ಳಿ ಹುಡುಗರಿಗೆ ಬಹಳ ಇಷ್ಟವಾಗುತ್ತದೆ. ಹಳ್ಳಿ ಓಣಿಯಲ್ಲಿ ಬೇವಿನ ಮರದ ಕೆಳಗ ರಾತ್ರಿ ಹತ್ತು ಗಂಟೆಯ ನಂತರ ದೋಸ್ತುರೆಲ್ಲ ಅಂಗಾತ ಮಲಗಿಕೊಂಡು ಊರು ಉಸಾಬರಿ ಮಾತಾಡಿಕೊಂಡರ ಇರೋ ಸುಖವನ್ನು ಈ ಕಥೆಗಳು ಬಿಚ್ಚಿಡಲಿವೆ. ಹಳ್ಳಿಗಳಲ್ಲಿ ನಡೆಯುವ ಸಾಮಾನ್ಯ ಸಂಗತಿಗಳೆ ಮುಂದೆ ಹೇಗೆ ಜನಪ್ರಿಯವಾಗಿ ಮುಂದುವರೆಯುತ್ತವೆ ಎಂಬುವುದು ಈ ಕಥೆಗಳ ಮುಖ್ಯವಾದ ಸಾರವಾಗಿದೆ. ಕಥೆಗಳ ಒಳಗೆ ಸಾಮಾಜಿಕ ಪ್ರಜ್ಞೆ ಕಲಿಸುವ ಕೆಲಸವನ್ನು ಕಥಾಸಂಕಲನ ಮಾಡಲಿದೆ.
ಹಾಳು ಸುಡಗಾಡು ಬದುಕು ಎಂಬ ಇನ್ನೊಂದು ಕಥೆ ಈ ಕಥಾ ಸಂಕಲನದ ಇನ್ನೊಂದು ಮೈಲಿಗಲ್ಲಾಗುತ್ತದೆ. ಹಳ್ಳಿ ಬದುಕಿನ ವಾಸ್ತವ ಚಿತ್ರಣ ನೀಡುತ್ತದೆ. ‘ಕುನ್ನಿ ಕೂಳು ಬೇಡಿದ್ರ ಮುದಿನಾಯಿ ಹಾಲು ಬೇಡಿತ್ತಂತ. ಈ ಹಳ್ಳಿ ಮಾತಿನಿಂದ ಪ್ರಾರಂಭವಾಗುವ ಕಥೆ ದೊರೆರಾಜ್ ಅಂವ ಮಾಡುತ್ತಿದ್ದ ವೃತ್ತಿಯ ಕಾರಣದಿಂದಲೂ ಏನೋ, ಅವನ ಪೂರ್ತಿ ಹೆಸರನ್ನು ಕರೆಯುವುದು ತಮಗೆ ಅವಮಾನ ಎಂದುಕೊಂಡ ಮರ್ಯಾದಸ್ತ ಜನರು ಅವನ ಹೆಸರನ್ನು ತಮ್ಮ ಹುಬ್ಬಳಿಗೆ ಸುತ್ತಲಿನ ಆಡುಭಾಷೆಗೆ ಹೊಂದಿಸಿಕೊಂಡು ದರ್ಯಾ ಅಂತಿದ್ರು, ಕೆಲವರು ಇನ್ನಷ್ಟು ಮುಂದೆ ಹೋಗಿ ದರಿದ್ರ ಅನ್ನುವವರು ಇದ್ದರು. ಇದು ಸುಡಗಾಡು ಕಾಯುವವರ ದುರಂತ ಬದುಕನ್ನು ಮತ್ತೆ ಮತ್ತೆ ನೆನಪು ಮಾಡುತ್ತದೆ. ದೀನರ ದಲಿತರ ಹೆಸರನ್ನು ಅವರು ಮಾಡುವ ಕೆಲಸದ ಮೇಲೆ ನಿರ್ಧರಿಸುತ್ತಾರೆ. ಇಲ್ಲಿ ಸುಡಗಾಡು ಕಾಯುವ ದರ್ಯಾ ಕೂಡ ಹಾಗೆಯೆ. ಜನ ಸತ್ತರೆ ಮಾತ್ರ ಇವರಿಗೆ ಅವತ್ತು ಹೊಟ್ಟೆ ತುಂಬ ಊಟ. ಇಲ್ಲದಿದ್ದರೆ ಯಾರಾದರೂ ಸಾಯುವವರೆಗೆ ಜಾತಕ ಪಕ್ಷಿಯಂತೆ ಕಾಯುತ್ತ ಕೂಡ್ರಬೇಕು. ಎಷ್ಟೋ ಸಲ ದರ್ಯಾ ಹೊಟ್ಟೆ ಹಸಿವು ತಾಳಲಾರದೇ ಹುಬ್ಬಳಿ ಸಿಟಿಯೊಳಗ ಹೋಗಿ ಯಾರಾದ್ರು ಸತ್ತಾರೆಯೆ? ಎಂದು ಹುಡುಕುವಾಗ ಕರುಳು ಕಿತ್ತಿ ಬರುತ್ತದೆ. ಕಥೆಗಳಲ್ಲಿ ಇಂತಹ ಸನ್ನಿವೇಶಗಳು ಸಾಮಾನ್ಯವಾಗಿ ಕಂಡುಬರುತ್ತವೆ.
ಈ ಕಥೆಯ ಇನ್ನೊಂದು ಮುಖ್ಯಭಾಗ ಕಹಿರಸ (ಕರ್ನಾಟಕ ಹಿಂದೂ ರಕ್ಷಣಾ ಸಮಿತಿ) ಮುಖಂಡನೊಬ್ಬನ ಚುರುಕುಗಣ್ಣುಗಳಲ್ಲಿ ಕಿಡಕಿಗೆ ಆಸರಾಗಿ ಇಟ್ಟಿದ್ದ ಆ ನಾಮಫಲಕಗಳು ಪ್ರತಿಫಲಿಸಿ ಅವು ಕೆಂಪಾಗಲು ಕಾರಣವಾಗಿದ್ದವು. ‘ಅಯ್ಯೋ ನಮ್ಮ ಹಿರಿಕರು ಉಲ್ಟಾ ಪಲ್ಟಾ ಕುಂತಾರ, ಕರಿರಿ ಆ ಕಿರಿಸ್ತಾನ್ ಬೊಳಿ ಮಗನ್ನ ಇದು ಸಧ್ಯದ ಸ್ಥಿತಿಗತಿಗಳನ್ನು ಬಿಚ್ಚಿ ಹೇಳುತ್ತದೆ. ಇವತ್ತಿನ ಜಾತಿ ಜಗಳಗಳು ಹಿಂದು ಮುಸ್ಮಿಂ ದಲಿತರೊಳಗಿನ ಅಂತರವನ್ನು ಒತ್ತಿ ಹೇಳುತ್ತದೆ. ಐದು ವರ್ಷದ ನಂತರ ಬಿಡುಗಡೆಗೊಂಡ ದರಿಯಜ್ಜ ಸುಡುಗಾಡಿಗೆ ಬಂದರೆ ಅಲ್ಲೇನಿದೆ ಮಣ್ಣು? ತನ್ನ ಗೂಡನ್ನು ಕಳೆದುಕೊಂಡ ದರಿಯಜ್ಜನ ಸ್ಥಿತಿಗತಿ ನಮ್ಮ ಸುತ್ತಮುತ್ತಲಿನಲ್ಲಿ ಅನೇಕ ಬದುಕುಗಳಲ್ಲಿ ಕಂಡುಬರುತ್ತದೆ. ಹಳ್ಳಿಗಳಲ್ಲಿ ವಾಸಮಾಡುವ ಬಡವರ ಬದುಕಿನ ಅತ್ಯಂತ ಅಂಚಿನ ಅಳಲನ್ನು ಕಥಾ ಸಂಕಲನ ಒಳಗೊಂಡಿದೆ. ನೀವು ಓದುತ್ತಾ ಹೋದಂತೆ ನಿಮ್ಮೊಳಗಿನ ಸಿಟ್ಟು ನಿಮಗೆ ಅರಿವಿಲ್ಲದೆ ಪುಟಿದೇಳುತ್ತದೆ. ಈ ಸಮಾಜವನ್ನು ಪ್ರಶ್ನೆ ಮಾಡುವಂತೆ ಮಾಡುವ ಶಕ್ತಿ ಇಲ್ಲಿನ ಕಥೆಗಳಲ್ಲಿದೆ.
ದರಿಯಜ್ಜ ಕೊನೆಯ ದಿನ ತನ್ನ ಸುತ್ತಲಿನ ಪ್ರಪಂಚದ ಗೊಡವೆ ತೊರೆದು ಸಾಯುತ್ತಾನೆ. ದಿನ ಅಪರಾಹ್ನ ನೊಣಗಳು ಅವನ ದೇಹದೊಳಗೆ ಹೋಗಿಬರುವುದನ್ನು ಮಾಡುವ ಮೂಲಕ ಅವನ ಜೀವ ಹೋಗಿದ್ದನ್ನು ಜಗತ್ತಿಗೆ ಸಾರಲು ಯತ್ನಿಸುತ್ತಿದ್ದವು. ಆದರೆ, ತನ್ನದೇ ಆದ ಜಂಜಡದೊಳಗೆ ಮುಳುಗಿದ್ದ ಈ ಜಗತ್ತು ಬೈಕು, ಬಸ್ಸು, ಕಾರುಗಳಲ್ಲಿ ಇದ್ಯಾವುದರ ಪರಿವೆಯಿಲ್ಲದೇ ಅತ್ಯವಸರದಿಂದ ಓಡುತ್ತಲೇ ಇತ್ತು. ಇವತ್ತಿನ ಬಿಡುವಿಲ್ಲದ ದುನಿಯಾದಲ್ಲಿ ಇಂತಹ ಹಾದಿ ಹೆಣಗಳಾಗಿ ಬಡವ ಪಾಡಾಗಿದೆ. ಕಾನೂನಿನ ಕೊಳೆಯಲ್ಲಿ ಶ್ರೀಮಂತರ ಅಟ್ಟಹಾಸದಲ್ಲಿ ಯೋಚಿಸುವ ಶಕ್ತಿ ಕಳೆದುಕೊಂಡ ಬಡವರ ಬದುಕು ಹೀನಾಯವಾಗಿದ್ದನ್ನು ಕಥೆಗಾರ ಸಾಮಾಜಿಕ ಕಳಕಳಿ ಮತ್ತು ಆತಂಕ ವ್ಯಕ್ತಪಡಿಸುತ್ತಾರೆ. ಹಾಲಗೇರಿ ಬಹುತೇಕ ಗ್ರಾಮೀಣ ಬದುಕನ್ನು ಬಹು ಹತ್ತಿರಿದಿಂದ ನೋಡಬಲ್ಲ ಅದನ್ನು ಸೂಕ್ಷ್ಮವಾಗಿ ಪ್ರಪಂಚಕ್ಕೆ ತಿಳಿಸಬಲ್ಲ ಕಥೆಗಾರ. ಸಮಕಾಲಿನವರನ್ನು ತನ್ನ ಕಥೆಯಲ್ಲಿ ಹಿಡಿದಿಡುವ ಶಕ್ತಿ ಸಾಹಿತ್ಯದ ಒಳಹರೆವನ್ನು ಆಸಕ್ತರಿಗೆ ಉಣಬಡಿಸುವಲ್ಲಿ ಹಾಲಗೇರಿ ಯಶಸ್ವಿಯಾಗಿದ್ದಾರೆ. ಎಲ್ಲೊ ಒಂದುಕಡೆ ಕೆಂಗುಲಾಬಿಯ ಕಾಮ ಮತ್ತು ಮನುಷ್ಯರೊಳಗಿನ ಮಂದಾನಾಲತೆ ಇಲ್ಲಿಯೂ ವಾಸನೆ ಬೀರುತ್ತದೆ. ಜಾನಪದದ ಸೊಗಡು ನಿಮಗೆ ಕಾಡದೆಯಿರದು. ಕಥೆಗಾರ ತನ್ನದೇ ಆದ ಒಂದು ಸಾಹಿತ್ಯಕ ಭಾಷೆ ಬಳಸಿಕೊಂಡರೆ ಈ ಸಾಹಿತ್ಯಿಕ ಲೋಕದಲ್ಲಿ ಹೆಚ್ಚು ದಿನ ಬದುಕುವ ಲಕ್ಷಣ ಕಾಣುತ್ತದೆ ಇಲ್ಲವಾದಲ್ಲಿ ಹಾಲಗೇರಿ ಬರಿ ಮನಸ್ಸಿನಲ್ಲಿ ಉಳಿಯುತ್ತಾರೆ ಕಥೆಗಾರ ಕನ್ನಡ ಸಾಹಿತ್ಯ ಲೋಕದ ಹೃದಯದೊಳಗೆ ಇಳಿಯುವ ಪ್ರಮಾಣಿಕ ಪ್ರಯತ್ನ ಮಾಡಬೇಕಿದೆ ಎಂಬುವುದು ನನ್ನ ಆಶೆಯ.
-ಕೆ.ಎಂ.ವಿಶ್ವನಾಥ ಮರತೂರ.