ಗೃಹ ಬಂಧನದ ಸದ್ಬಳಕೆ: ಸೂರಿ ಹಾರ್ದಳ್ಳಿ


ಕೊರೋನಾ ಮಾರಿಯಿಂದಾಗಿ ಭಾರತದಲ್ಲಿ ಲಾಕ್‍ಡೌನ್ ಅನುಭವಿಸಬೇಕಾಗಿ ಬಂದಿದೆ. ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರಬೇಕಾಧ ಇಂತಹ ಸಂದರ್ಭಗಳಲ್ಲಿಯೂ ನಮ್ಮ ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದಕ್ಕೆ ಕೆಲ ಟಿಪ್ಸ್‍ಗಳು ಇಲ್ಲಿವೆ.

ನಿಮ್ಮ ಸಂಬಂಧಿಕರ, ಗೆಳೆಯರ, ಶತ್ರುಗಳ ಹೆಸರಿನ ಪಟ್ಟಿ ಮಾಡಿ. ಅವರ ವಿಳಾಸಗಳು, ದೂರವಾಣಿ ಸಂಖ್ಯೆಗಳು, ಇ-ಮೈಲ್ ಐಡಿಗಳು, ಇವನ್ನೆಲ್ಲಾ ಸಂಗ್ರಹಿಸಿ ನಿಮ್ಮ ಕಂಪ್ಯೂಟರಿನಲ್ಲಿ ಅಥವಾ ಪುಸ್ತಕಗಳಲ್ಲಿ ಬರೆದಿಡಿ. ಅರೆರೆ, ಇವರ ಸಂಖ್ಯೆ ಇಷ್ಟೊಂದಿದೆಯೇ ಎಂಬ ಅಚ್ಚರಿ ನಿಮಗಾಗಿಯೇ ಆಗುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಅವಶ್ಯಕ ಕೆಲಸಗಳಿಗೆ ಬೇಕಾದವರ ಹೆಸರನ್ನು ಸೇರಿಸಿ. ಉದಾಹರಣೆಗೆ ವಿದ್ಯುತ್ ರಿಪೇರಿಯವರು, ಮರದ ಕೆಲಸದವರು, ನಲ್ಲಿ ರಿಪೇರಿ ಮಾಡುವವರು, ಗ್ಯಾಸ್ ಕಂಪನಿಯೆ ಹೆಸರು, ವಿಳಾಸಗಳು, ಮೊಬೈಲ್ ರಿಪೇರಿಯವರು, ಟಿವಿಗೆ ಕೇಬಲ್ ಸಂಪರ್ಕ ಕೊಡುವವರು, ಇವರನ್ನೂ ಸೇರಿಸಿ. ನಿಮ್ಮ ಮೊಬೈಲ್‍ಗಳನ್ನು ಪೂರ್ಣವಾಗಿ ನಂಬಬೇಡಿ. ಫೋನ್ ಕಳೆದುಹೋದರೆ ಅಥವಾ ಕೆಟ್ಟರೆ ಪುನಃ ಸಂಖ್ಯೆಗಳಿಗಾಗಿ ಪರಿತಪಿಸಬೇಕಾಗುತ್ತದೆ. ಹಾಗಾಗಿ ಹಾರ್ಡ್ ಪ್ರತಿ ಮಾಡಿಡಿ. ನಿಮ್ಮ ಅಕ್ಕಪಕ್ಕದ ಮನೆಯವರ ದೂರವಾಣಿ ಸಂಖ್ಯೆಗಳೂ ಬೇಕಾಗುತ್ತವೆ, ಅವನ್ನೂ ಸಂಗ್ರಹಿಸಿಕೊಳ್ಳಿ. ನಿಮ್ಮ ಮನೆಗೆ ದಿನಸಿ ತರುವವನು, ನಿಮ್ಮ ಕುಟುಂಬದ ವೈದ್ಯರು, ಆಂಬ್ಯುಲೆನ್ಸ್, ನೇತ್ರದಾನ ಮಾಡಬೇಕಾದ ಸಂದರ್ಭದಲ್ಲಿ ಸಂಪರ್ಕಿಸಬೇಕಾದ ಆಸ್ಪತ್ರೆಯ ಸಂಖ್ಯೆ, ಇವುಗಳೂ ಇದ್ದಿರಲಿ.

ನಿಮ್ಮ ವಂಶವೃಕ್ಷಗಳನ್ನು ನೆನಪಿಸಿಕೊಳ್ಳಿ. ನಿಮ್ಮ ಅಜ್ಜನ ಅಪ್ಪ-ಅಮ್ಮ, ಅವರ ಮಕ್ಕಳು, ಮಕ್ಕಳ ಮಕ್ಕಳು, ನಿಮ್ಮ ತಂದೆ-ತಾಯಿಯರು, ನಿಮ್ಮ ಸಹೋದರ-ಸಹೋದರಿಯರು, ಅವರ ಪುತ್ರ-ಪುತ್ರಿಯರು, ಇವರಲ್ಲಿ ಹೆಚ್ಚಿನವರ ಹೆಸರನ್ನು ನೀವು ಮರೆತೇಹೋಗಿರುವುದು ಜಾಸ್ತಿ. ಅವನ್ನು ಅವರಿವರಿಂದ ಪಡೆದು ಬರೆದಿಟ್ಟುಕೊಳ್ಳಿ. ಅಷ್ಟು ಮಾತ್ರವಲ್ಲ, ಅವರ ಜನ್ಮದಿನ, ವಿವಾಹದ ದಿನ, ಹೆಂಡತಿ/ಗಂಡ, ಇವರ ಹೆಸರುಗಳು, ಸತ್ತಿದ್ದರೆ ಆ ದಿನಗಳು, ಇವನ್ನೆಲ್ಲಾ ದಾಖಲಿಸಿಟ್ಟುಕೊಳ್ಳಿ. ಅಬ್ಬಬ್ಬಾ, ನಮ್ಮ ವಂಶದಲ್ಲಿ ಇಷ್ಟೊಂದು ಜನರಿದ್ದಾರೆಯೇ ಎಂಬ ಅಚ್ಚರಿ ನಿಮಗೆ ಮೂಡುವ್ಯದಂತೂ ಸಹಜ.
ಕುಟುಂಬ ಎಂದರೆ ಗಂಡ, ಹೆಂಡತಿ, ಮಗ, ಮಗಳು, ಅಪ್ಪ, ಅಮ್ಮ, ಇವಿಷ್ಟೇ ಅಲ್ಲ, ಎಷ್ಟು ಪ್ರಕಾರದ ಸಂಬಂಧಗಳಿವೆ ಎಂದು ಪಟ್ಟಿ ಮಾಡಿ. ನನಗೆ ಸುಮಾರು 87 ರೀತಿಯ ಸಂಬಂಧಗಳು ಸಿಕ್ಕವು. ಅವುಗಳನ್ನು ಪಟ್ಟಿಮಾಡಿ. ನಿಮಗೆ ಒಳ್ಳೆಯದನ್ನು ಮಾಡಿದ ಹಲವಾರು ಜನರಿರಬಹುದು, ಅವರನ್ನು ನೀವು ನಿಮ್ಮ ಧಾವಂತದ ಬದುಕಿನಲ್ಲಿ ಮರೆತೂ ಇರಬಹುದು. ಈಗ ಅವರನ್ನು ನೆನಪಿಸಿಕೊಳ್ಳಿ. ಸಾಧ್ಯವಾದರೆ ಸಂಪರ್ಕಿಸಿ, ಹಳೆಯ ಮಧುರ ನೆನಪುಗಳನ್ನು ಮರುಕಳಿಸಿಕೊಳ್ಳಿ.

ನಿಮ್ಮ ಮನೆಯ ಷೋಕೇಸುಗಳನ್ನು ತೆರೆಯದೇ ಎಷ್ಟೊಂದು ಕಾಲವಾಯಿತಲ್ಲ, ಈಗ ತೆರೆಯಿರಿ. ನಿಮ್ಮ ಮೂಗಿಗೆ ಒಂದು ಬಟ್ಟೆ ಕಟ್ಟಿಕೊಂಡಿರುವುದು ಸೂಕ್ತ. ಅಬ್ಬಬ್ಬಾ, ಅಲ್ಲಿ ಎಷ್ಟೊಂದು ಸಾಮಾನುಗಳಿವೆ!
ಒಂದಕ್ಕೊಂದು ಅಂಟಿಕೊಂಡಿರುವ ಪುಸ್ತಕಗಳು, ಥಂಡಿಯಾಗಿ, ಮುದುರಿದ, ಮುಗ್ಗುಲು ವಾಸನೆ ಬೀರುವ ಹೊತ್ತಗೆಗಳು, ಎಂದೋ, ಏನನ್ನೋ ಬರೆದಿಟ್ಟುಕೊಂಡ ನೋಟ್‍ಬುಕ್‍ಗಳು, ಯಾವುದೋ ಒಂದಿಷ್ಟು ಲಕೋಟೆಗಳು, ಇವೆಲ್ಲಾ ಕಂಡೇ ಕಾಣುತ್ತವೆ. ಅವನ್ನೆಲ್ಲಾ ಹೊರತೆಗೆದು ಒದ್ದೆ ಬಟ್ಟೆಯಿಂದ ಒರೆಸಿ. ಅವುಗಳನ್ನು ನೀವು ಎಷ್ಟು ಮಟ್ಟಿಗೆ ಬಳಸಿದ್ದೀರಿ ಎಂದು ಯೋಚಿಸಿ. ಇಂದಿನ ಡಿಜಿಟಲ್ ಯುಗದಲ್ಲಿ ಆ ಎಷ್ಟು ಪುಸ್ತಕಗಳ ಅವಶ್ಯಕತೆ ಎಷ್ಟು ಇದೆ ಎಂದು ತೀರ್ಮಾನಿಸಿ, ಉಪಯುಕ್ತವಾದವುಗಳನ್ನು ಬಿಸಿಲಿಗೆ ಹಾಕಿ. ಷೋಕೇಸಿನಲ್ಲಿ ಇರುವ ಜಿರಳೆಗಳಿಗೆ, ಗೆದ್ದಲುಗಳಿಗೆ ಒಂದಿಷ್ಟು ಕ್ರಿಮಿಮಾಶಕ ಸಿಂಪಡಿಸಿ, ಸಾಯಿಸಿ, ಅವನ್ನು ಹೊರತೆಗೆಯಿರಿ. ಒಂದು ದಿನ ಬಾಗಿಲು ತೆರೆದಿಟ್ಟರೆ ದುರ್ವಾಸನೆ ಹೊರ ಹೋದೀತು. ನಂತರ ನಿಮ್ಮ ಹತ್ತಿರ ಇರುವ ಉಪಯುಕ್ತ ಪುಸ್ತಕಗಳ ಪಟ್ಟಿ ಮಾಡಿ. ಪುಸ್ತಗಳಿಗೆ ಸಂಖ್ಯೆ ಕೊಟ್ಟು, ಅವನ್ನು ಪುನಃ ಜೋಡಿಸಿಡಿ. ನಂತರ ಪಟ್ಟೆಯನ್ನು ಷೋಕೇಸಿನ ಬಾಗಿಲಿನ ಒಳಗಿನ ಭಾಗದಲ್ಲಿ ಅಂಟಿಸಿ.

ನೀವು ಒಮ್ಮೆ ಓದಿದ ಅಥವಾ ಓದಲಾಗದೇ ಇಟ್ಟಿರುವ ಪುಸ್ತಕಗಳು ಮುಂದೆ ಬೇಕಿಲ್ಲವೆನಿಸಿದರೆ ಅವನ್ನು ಬೇರೆಯಾಗಿ ತೆಗೆದಿಡಿ. ಲಾಕ್‍ಡೌನ್ ಅವಧಿ ಮುಗಿದ ಮೇಲೆ ಅವನ್ನು ಯಾವುದಾದರೂ ಗ್ರಂಥಾಲಯಕ್ಕೆ ದಾನ ಮಾಡಿ.

ನಿಮ್ಮ ಮನೆಯಲ್ಲಿ ಹಲವಾರು ವಾರ್ಡ್‍ರೋಬ್‍ಗಳು ಇರಬಹುದು. ಅವುಗಳಲ್ಲಿ ಎಂದೋ ಯಾರೋ ಕೊಟ್ಟ ಗಿಫ್ಟ್ ವಸ್ತುಗಳು, ಬಟ್ಟೆಬರೆಗಳು, ಪಾತ್ರೆಪರಡಿಗಳು ಇದ್ದೇ ಇರುತ್ತವೆ. ಅವನ್ನು ಎಸೆಯಲೂ ಆಗದೇ, ಇಟ್ಟಕೊಳ್ಳಲೂ ಆಗದೇ ಈ ವಾರ್ಡ್‍ರೋಬ್‍ಗಳಲ್ಲಿ ಪೇರಿಸಿಟ್ಟಿರುತ್ತೀರಿ. ಈವ ಅವನ್ನೆಲ್ಲಾ ಹೊರತೆಗೆಯಿರಿ. ಹಲವಾರು ದಶಕಗಳಿಂದ ಉಪಯೋಗಿಸೇ ಇದ್ದ ಪಾತ್ರೆಗಳನ್ನು ಅವಶ್ಯಕ, ಆಗಾಗ ಅವಶ್ಯಕ ಮತ್ತು ಅನವಶ್ಯಕ ಎಂದು ವಿಂಗಡಿಸಿ. ಅನವಶ್ಯಕ ವಸ್ತುಗಳನ್ನು ಬೇರೆ ಇರಿಸಿ, ಲಾಕ್‍ಡೌನ್ ಅವಧಿ ಮುಗಿದ ಮೇಲೆ ಯಾರಾದರೂ ಕೂಲಿ ಕಾರ್ಮಿಕರಿಗೆ, ಬಡವರಿಗೆ ದಾನಮಾಡಿ.
ನಮ್ಮದು ಕೊಳ್ಳುಬಾಕ ಸಂಸ್ಕøತಿ. ಕಂಡಕಂಡ ದಿರಿಸುಗಳನ್ನು ಬೇಕರಲಿ, ಬೇಡವಿರಲಿ, ಖರೀದಿಸಿಡುತ್ತೇವೆ. ಆದರೆ ಅವುಗಳನ್ನು ವರ್ಷಕ್ಕೆ ಒಂದು ಬಾರಿ ಕೂಡಾ ಬಳಸಿರುವುದು ಕಡಿಮೆ. ಅವುಗಳನ್ನು ಹೊರತೆಗೆಯಿರಿ, ಅವುಗಳ ಸ್ಥಿತಿಗತಿ ನೋಡಿ. ಅವುಗಳು ಪುನಃ ಬಳಕೆಗೆ ಬೇಕಾಗಬಹುದೇ, ಗುಂಡಿಗಳು, ಹೊಲಿಗೆಗಳು ಹೇಗಿವೆ ಎಂದೆಲ್ಲಾ ಪರೀಕ್ಷಿಸಿ. ಅವುಗಳ ಅವಶ್ಯಕತೆ ಇಲ್ಲವೆನಿಸಿದರೆ ಯಾರಿಗಾಗದರೂ ದಾನ ಮಾಡಿ. ಕೊಡುವಾಗ ಮುದ್ದೆ ಮಾಡಿ, ಚೀಲದಲ್ಲಿ ತುಂಬಿ ಕೊಡಬೇಡಿ. ಸ್ವಲ್ಪ ಮಾನವೀಯತೆಯಂದ ಅವನ್ನು ಒಗೆದು, ಹೋದ ಗುಂಡಿಗಳನ್ನು ಹಾಕಿ, ಇಸ್ತ್ರಿ ಮಾಡಿ ಕೊಡಿ.

ಕಪಾಟಿನ ಡಬ್ಬಗಳಲ್ಲಿ ಹಳೆಯ ಚಪ್ಪಲಿಗಳು, ಶೋಕೇಸಿನಲ್ಲಿ ಬ್ಯಾಟರಿ ಹಾಕದ ಹಲವಾರು ವಾಚುಗಳು, ಗಡಿಯಾರಗಳು ಇದ್ದಿರಬಹುದು, ಅವನ್ನು ನೀವು ನೋಡದೇ ದಶಕಗಳೇ ಕಳೆದಿರಬಹುದು. ಅವನ್ನೂ ತೆಗೆದು, ರಿಪೇರಿ ಆಗುವುದಾದರೆ, ನಿಮಗೆ ಅವುಗಳ ಅವಶ್ಯಕತೆ ಇದ್ದರೆ ಶುಭ್ರಗೊಳಿಸಿ, ಬಳಸಿ. ಇಲ್ಲವಾದರೆ ಹೊರಗೆ ಎಸೆಯಿರಿ.

ಪಾಕಶಾಲೆಗೆ ಹೋಗಿ. ನಿಮಗೇ ಅಚ್ಚರಿಯಾಗುವಂತೆ ಅಲ್ಲಿ ನೂರಾರು ಡಬ್ಬಗಳು, ವಸ್ತುಗಳು ಇವೆ. ಎಂದೋ ಉಪಯೋಗಿಸುತ್ತಿದ್ದ, ಈಗ ತುಕ್ಕು ಹಿಡಿದ ಪೀಲರ್‍ಗಳು, ಚಾಕುಗಳು, ಸೋಸುವ ಫಿಲ್ಟರ್‍ಗಳು, ಮೂಲೆಯಲ್ಲಿ ವಿರಾಜಮಾನವಾಗಿರುತ್ತವೆ. ಅವನ್ನೆಲ್ಲಾ ತೆಗೆದು ಗಾಳಿಗೆ ಬಿಡಿ. ಅವುಗಳ ಪರಿಸ್ಥಿತಿ ನೋಡಿ, ಬಳಕೆಗೆ ಅರ್ಹವಾಗಿವೆಯೋ ಇಲ್ಲವೋ ಎಂದು ತೀಮಾನಿಸಿ. ಬೇಡವಾದವುಗಳನ್ನು ಹೊರಗೆಸೆಯಿರಿ. ನಂತರ ಮನೆಯ ಕಿಚನ್‍ನಲ್ಲಿರುವ ವಿವಿಧ ಡಬ್ಬಗಳನ್ನು ಪಟ್ಟಿಮಾಡಿ. ಯಾವ ಯಾವ ಡಬ್ಬಗಳಲ್ಲಿ ಏನೇನಿವೆ ಎಂದು ಬರೆದಿಡಿ. ವಸ್ತುಗಳು ಪೊಟ್ಟಣಗಳಲ್ಲಿ ಇದ್ದರೆ ಅವುಗಳ ಎಕ್ಸ್‍ಪಯರಿ ದಿನಾಂಕ ನೋಡಿ, ಅವು ಮೀರಿದ್ದರೆ ಹೊರಗೆಸೆಯಿರಿ. ಹೇಗೆ ಉಳಿದ ಡಬ್ಬಗಳನ್ನು ವ್ಯವಸ್ಥಿತವಾಗಿ ಇಡಬಹುದು ಎಂದು ಪರಿಶೀಲಿಸಿ. ಉದಾಹರಣೆಗೆ ಹೆಚ್ಚು ಬಳಸುವ ಉಪ್ಪು, ಸಕ್ಕರೆ, ತೊಗರಿಬೇಳೆ, ಇವೆಲ್ಲಾ ಮುಂದೆಯೇ ಇರಲಿ. ಅಪರೂಪಕ್ಕೆ ಬಳಸುವ ಗೋಧಿಹಿಟ್ಟು, ಕಡಲೆಹಿಟ್ಟು, ಅವಲಕ್ಕಿ, ಇವುಗಳು ಹಿಂದಕ್ಕೆ ಇರಲಿ.

ಮನೆಯಲ್ಲಿದ್ದಾಗ ಹೊಟ್ಟೆಯಲ್ಲಿನ ವೃಕವು ಜಾಗೃತವಾಗುತ್ತದೆ. ಎಚ್ಚರವಿರಲಿ, ಕಂಡಕಂಡದ್ದನ್ನೆಲ್ಲಾ ಕುರುಕಲು ಹೋಗಬೇಡಿ. ಹಸಿವಾದಾಗ ಮಾತ್ರ ತಿನ್ನಿ. ‘ಹಸಿಯದೇ ಉಣಬೇಡ, ಹಸಿದು ಉಣದಿರಬೇಡ,’ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಿ. ಸಾಕಷ್ಟು ನೀರು ಕುಡಿಯಿರಿ.

ನಿಮ್ಮ ಚರ್ಮಕ್ಕೆ ಎಣ್ಣೆ ತೋರಿಸಿ ಎಷ್ಟು ದಿನಗಳು, ಅಲ್ಲಲ್ಲ, ತಿಂಗಳುಗಳಾದವು? ಮೈಗೆಲ್ಲಾ ತೈಲ ಸವರಿಕೊಂಡು, ತುಸು ಹೊತ್ತು ಬಿಟ್ಟು, ಸ್ನಾನ ಮಾಡಿ. ನಿಮ್ಮ ತ್ವಚೆ ಹೊಳಪಾಗುತ್ತದೆ, ಆರೋಗ್ಯಕ್ಕೂ ಅಭ್ಯಂಜನ ಒಳ್ಳೆಯದು.

ಕನ್ನಡದವರಿಗೆ ಹಲವಾರು ಭಾಷೆಗಳ ಪರಿಚಯವಿರುವುದು ಸ್ವಾಭಾವಿಕ. ಆದರೆ ಯಾವದೂ ಸರಿಯಾಗಿ ಬರದಿರುವ ಸಂದರ್ಭಗಳೇ ಹೆಚ್ಚು. ನಿಮ್ಮ ಸೋದರ ಭಾಷೆಗಳನ್ನು ಕಲಿಯಲು ಈ ಸಮಯವನ್ನು ಉಪಯೋಗಿಸಿಕೊಳ್ಳಿ. ಭಾಷೆಗಳನ್ನು ಅಧ್ಯಯನ ಮಾಡುವುದು ಎಂದಿಗೂ ಖುಷಿಕೊಡುವ ವಿಷಯವೇ!

ಪತ್ರಿಕೆಗಳಲ್ಲಿ ಬರುವ ಪದಬಂಧ, ಸುಡೊಕು, ಕ್ವಿಜ್, ಇವುಗಳನ್ನು ಮಾಡಿ. ಇವು ಬುದ್ಧಿಯನ್ನು ಚುರುಕುಗೊಳಿಸುತ್ತವೆಯಲ್ಲದೇ ನಿಮ್ಮ ಸಮವನ್ನೂ ಕಳೆಯುವಂತೆ ಮಾಡುತ್ತವೆ. ಅವನ್ನು ಮಾಡಿ. ನಿಮ್ಮ ಮೊಬೈಲ್‍ಗಳಲ್ಲಿ ಕೆಲ ಆಟಗಳ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳಿ. ಫೇಸ್‍ಬುಕ್, ಯುಟ್ಯೂಬ್, ವಾಟ್ಸ್‍ಅಪ್‍ಗಳು ಮೊದಲಾದವುಗಳು ತುಸು ಹೊತ್ತು ಕಳೆಯಲು ಉಪಯೋಗಕಾರಿ. ಆದರೆ ಎಚ್ಚರವಿರಲಿ, ಹೆಚ್ಚು ಹೊತ್ತು ಮೊಬೈಲ್ ಸ್ಕ್ರೀನ್ ನೋಡುವುದು ಕಣ್ಣಿಗೆ ಅಪಾಯಕಾರಿ!

ನಿಮ್ಮ ಮನೆಯ ಹಿಂದೋ, ಮುಂದೋ ತುಸು ಜಾಗ ಇರಬಹುದಲ್ಲವೇ? ನಿಮ್ಮ ದಿನದ ಕೆಲ ಸಮಯವನ್ನು ತೋಟಗಾರಿಕೆಗೆ ಮೀಸಲಿಡಿ. ಅಲ್ಲಿಗೆ ಹೋಗಿ, ಹಳೆಯ ಗಿಡಗಳನ್ನು ಕಿತ್ತು, ಪಾತಿ ಮಾಡಿ, ಮಣ್ಣು ಸಡಿಲಗೊಳಿಸಿ, ಕಳೆ ಕಿತ್ತು, ನೀರು ಹಾಕಿ, ಬಾಗಿದ ಗಿಡಗಳಿಗೆ ಊತು ಕೊಟ್ಟು, ಹೊಸತಾಗುವಂತೆ ಮಾಡಿ. ಇದು ಮನಸ್ಸಿಗೂ, ದೇಹಕ್ಕೂ ಆನಂದ ಕೊಡುವ ಕೆಲಸ. ನಳನಳಿಸುವ ಹೂಗಳನ್ನು ಕಂಡು ಆನಂದಿಸಿ.

ನಿಮ್ಮ ಮೆದುಳಿಗೂ ಒಂದಿಷ್ಟು ಕೆಲಸ ಕೊಡಿ. ಪೆನ್ ಮತ್ತು ಪೇಪರ್ ತೆಗೆದುಕೊಂಡು ಎಡಗೈಯಿಂದ ಬರೆಯಿರಿ (ಎಡಚರಾದರೆ ಬಲಗೈಯಿಂದ). ಕನ್ನಡಿಯ ಅಕ್ಷರಗಳನ್ನು ಬರೆಯಿರಿ, ಅಂದರೆ ಅದನ್ನು ಕನ್ನಡಿಯೆದುರು ಇಟ್ಟಾಗ ಪ್ರತಿಬಿಂಬದಲ್ಲಿ ಸರಿಯಾಗಿ ಓದಲು ಅರ್ಹವಾಗಿರುತ್ತದೆ. ನಿಮ್ಮ ಮನೆಯ ಗಡಿಯಾರವು ಕನ್ನಡಿಯೆದುರು ಇದ್ದರೆ ಅದು ಹೇಗೆ ಇರುತ್ತದೆ ಎಂದು ಚಿತ್ರ ಬರೆಯಿರಿ. ಮೇಜಿನ ಮೇಲೆ ಯಾವುದಾದರೂ ಒಂದು ವಸ್ತುವನ್ನು ಇಟ್ಟು, ಅದನ್ನು ಬೇರೆ ಬೇರೆ ಕೋನಗಳಿಂದ ನೋಡಿ, ಅದು ಹೇಗೆ ಕಾಣುತ್ತದೆ ಎಂದು ಹಾಳೆಯಲ್ಲಿ ಚಿತ್ರಿಸಿ.

ಇವೆಲ್ಲಾ ಬೋರ್ ಎನಿಸುತ್ತದೆಯೇ? ಮನರಂಜನೆಯೂ ಬೇಕೇ? ಹಾಗಾದರೆ ಟಿವಿ ನೋಡಿ. ಅಲ್ಲಿ ಯಾವುದೇ ಚಾನೆಲ್ ಹಾಕಿದರೂ ಇರುವುದು ಬರೀ ಕೊರೊನಾ ಸುದ್ದಿಯೇ. ಅವುಗಳ ನಡುವೆಯೂ ಒಂದಿಷ್ಟು ತಮಾಷೆಯನ್ನು ಗಮನಿಸುವಷ್ಟು ಮನಸ್ಸನ್ನು ಸೂಕ್ಷ್ಮಗೊಳಿಸಿಕೊಳ್ಳಿ. ಉದಾಹರಣೆಗೆ ಟಿವಿ ವಾಹಿನಿಹೊಂದರ ವಾರ್ತಾ ವಾಚಕ ಹೇಳಿದ್ದ, ‘ಬೆಂಗಳೂರಿನಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಕೊರೊನಾದಿಂದ ಆರು ಜನ ಸತ್ತಿದ್ದಾರೆ. ಬೆಂಗಳೂರಿನಲ್ಲಿ ಮಾಂಸ ಮಾರಲು ಬಿಬಿಎಂಪಿಯವರು ಅನುಮತಿ ಕೊಟ್ಟಿದ್ದಾರೆ,’ ಇತ್ಯಾದಿ. ಸುಮ್ಮನೇ ನೋಡಿ ಮರೆಯಬೇಡಿ, ಯಾವ ಮಾಂಸ ಎಂದು ಯೋಚಿಸಿ. ಇಂತಹ ಹಲವಾರು ಮಜಾ ಸಂಗತಿಗಳನ್ನು ಟಿವಿಯಲ್ಲಿ ನೋಡಬಹುದು. ಟಿವಿಯರು ಕೆಲವಿರಗೆ ತಾವಾಗಿಯೇ ಕೆಲ ಪದವಿಗಳನ್ನು ಕೊಡುತ್ತಾರೆ. ಉದಾಹರಣೆಗೆ: ಚಕ್ರವರ್ತಿ, ಬಡ್ನಿ ಭೀಮ, ಒಡೆಯ, ಡಿ-ಬಾಸ್, ಟಗರು, ಜೋಡೆತ್ತು, ರಾಜಾಹುಲಿ, ಹುಲಿಯಾ, ರಾಜಾ ಹುಲಿಯಾ, ಕನಕಪುರದ ಬಂಡೆ/ಕಲ್ಲು, ಟ್ರಬಲ್ ಶೂಟರ್, ಕೌರವ, ಕಮಲಾಧಿಪತಿ, ಯುವರಾಜ, ಇತ್ಯಾದಿ. ಅವು ಯಾರಾರಿಗೆ ಅನ್ವಯವಾಗುತ್ತದೆ ಎಂದು ಯೋಚಿಸಿ, ಅನಂದಿಸಿ.

ಈ ಲೇಖನ ಪುರುಷ ಕೇಂದ್ರಿತವಾಗಿದೆ ಎಂದೆನಿಸುತ್ತದೆಯೇ? ಹೌದು, ಮನೆಯ ಮಹಿಳೆಯರಿಗೆ ಸದಾ ಕಾಯಕ ಇದ್ದೇ ಇರುತ್ತದೆ. ಅದರಲ್ಲಿಯೂ ಗಂಡಸು ಮನೆಯಲ್ಲಿ ಇದ್ದಾಗ ಅದು ಜಾಸ್ತಿ. ಆದುದರಿಂದ….

ಸೂರಿ ಹಾರ್ದಳ್ಳಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Reny
Reny
4 years ago

Good work

reny
reny
4 years ago

ಕನ್ನಡ ನಾಡು
ಇಧು ನಮ್ಮ ನಾಡು

2
0
Would love your thoughts, please comment.x
()
x