ಮನೆಯ ಮುಂದಿನ ಬಟ್ಟೆ ಒಣ ಹಾಕುವ ತಂತಿಗೆ ಪ್ರತಿ ವರ್ಷದ ಹಾಗೆ ಈ ವರ್ಷವೂ ಹಳದಿ ಕಪ್ಪು ಬಣ್ಣ ಮಿಶ್ರಿತ ಪುಟ್ಟ ಹಕ್ಕಿಯೊಂದು ಗೂಡು ಕಟ್ಟಲು ಬರುತ್ತಿತ್ತು. ಅದರ ಪುಟ್ಟ ಚುಂಚಿನಲ್ಲಿ ಇಷ್ಟಿಷ್ಟೆ ಕಸ ಕಡ್ಡಿ, ಮರದ ತೊಗಟೆ, ಒಣಗಿದ ಎಲೆ ಎಲ್ಲವನ್ನೂ ಕಚ್ಚಿಕೊಂಡು ಬಂದು ಆ ಗೂಡಿಗೆ ಅಂಟಿಸುತ್ತಿತ್ತು. ಅದರ ಪುಟ್ಟ ಬಾಯಿಗೆ ನಿಲುಕುತ್ತಿದ್ದುದೆಷ್ಟೋ… ಕಚ್ಚಿಕೊಂಡು ಹಾರಿ ಬರುವಾಗ ಅದರ ಬಾಯಲ್ಲಿ ಇರುತ್ತಿದ್ದುದು ಎಷ್ಟೋ… ಗೂಡಿಗೆ ಅಂಟಿಸುವಾಗ ಕೆಳಗೆ ಬೀಳದೇ ಅಂಟಿಕೊಳ್ಳುತ್ತಿದ್ದುದು ಎಷ್ಟೋ… ಒಟ್ಟನಲ್ಲಿ ನಿಮಿಷಕ್ಕೆ ನಾಲ್ಕು ಸಲ ಹಾರಿ ಹೋಗಿ ಏನಾದರೂ ಕಚ್ಚಿ ತಂದು, ತಂತಿಯ ಮೇಲೆ ತಲೆ ಕೆಳಗಾಗಿ ನೇತಾಡುತ್ತ ಅದು ಗೂಡು ಕಟ್ಟುವ ಚಂದವನ್ನು ನೋಡಿಯೇ ಆನಂದಿಸ ಬೇಕು. ಆದರೆ ಬೆಳಿಗ್ಗೆ ಹೋಗಿ ಸಂಜೆ ನಾವು ವಾಪಸ್ ಆಗುವಷ್ಟರಲ್ಲಿ ಮನೆಯ ಮುಂದೆ ಕಸ ಕಡ್ಡಿಗಳ ರಾಶಿ. ಯಾರಾದರೂ ಬೆಳಿಗ್ಗೆ ಎದ್ದು ಮನೆ ಮುಂದಿನ ಕಸವನ್ನೂ ತೆಗೆಯಲಿಲ್ಲವೇ ಎಂದು ಅನುಮಾನ ಪಡುವಷ್ಟು. ನಮ್ಮ ಜೊತೆಯಿದ್ದು ಕಾಲೇಜಿಗೆ ಹೋಗುವ ತನುಜಾ ಸಿಡಿಮಿಡಿಗೊಳ್ಳುತ್ತ ಗೂಡು ತೆಗೆದು ಬಿಡಬೇಕು ಟೀಚರ್ ಎಂದು ರೇಗುವಷ್ಟು ಕಸ ಅಲ್ಲಿ ತುಂಬಿರುತ್ತಿತ್ತು. ’ಬೇಡ ಇರು. ಇದು ಆ ಪುಟ್ಟ ಹಕ್ಕಿ ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡುವ ಸಮಯ. ಎರಡು ತಿಂಗಳು ಅಷ್ಟೇ ನಾನು ಸಮಾಧಾನದಿಂದ ನುಡಿದಿದ್ದೆ. ಬಹುಶಃ ಇಂತಹ ಸಂದರ್ಭದಲ್ಲಿ ಮಾತ್ರ ನಾನು ಅಷ್ಟೊಂದು ಶಾಂತವಾಗಿ ಪ್ರತಿಕ್ರಿಯಿಸುವುದು ಎಂಬ ಅರಿವಿದ್ದ ’ಇವರು’ ಮೀಸೆಯಡಿ ನಕ್ಕಿದ್ದರು.
ಯಾಕೋ ಪ್ರತಿ ವರ್ಷವೂ ಅದೇ ಜಾಗದಲ್ಲಿ ಗೂಡು ಕಟ್ಟುವ ಆ ಪುಟ್ಟ ಹಕ್ಕಿ ಮೊದಲ ವರ್ಷ ನಾವಲ್ಲಿಗೆ ಬಂದಾಗ ಮಾತ್ರ ಎರಡು ದಿನ ಗೂಡು ಕಟ್ಟಲು ಬಂದಿತ್ತು. ಬಟ್ಟೆ ಹರವಿ ಹಾಕುವ ತಂತಿಗೆ ಇದೇನು ಕಸ ಎಂದು ನಾನು ಕಸಿವಿಸಿಗೊಂಡಿದ್ದೆ. ಆದರೆ ನನ್ನ ಮಗ ’ಅಮ್ಮ ಒಂದು ಪುಟ್ಟ ಹಕ್ಕಿ ಅದನ್ನು ತಂದಿದೆ. ತೆಗೆಯಬೇಡಮ್ಮ’ ಎಂದಿದ್ದ. ಅಲ್ಲಿಯವರೆಗೂ ಅದನ್ನು ಗಮನಿಸದಿದ್ದ ನಾನು ನಂತರ ಗಮನಿಸಲಾರಂಭಿಸಿದೆ. ಹಳದಿ ಬಣ್ಣದ ಕಪ್ಪು ಪಟ್ಟಿ ಇರುವ ಅ ಪುಟ್ಟ ಹಕ್ಕಿ ಹೀಗೆ ಹಾರಿ ಹೋಗಿ ಹಾಗೆ ಬಂದು ಗೂಡು ಕಟ್ಟುವ ಚಂದವನ್ನು ನೋಡಿಯೇ ತಿಳಿಯಬೇಕು. ನಮ್ಮ ಹೆಬ್ಬೆರಳ ಗಾತ್ರದಲ್ಲಿರುವ ಆ ಪುಟ್ಟ ಹಕ್ಕಿಯ ಮನೆ ಕಟ್ಟುವ ಸಂಭ್ರಮವನ್ನು ನೋಡಿಯೇ ಖುಷಿಪಡಬೇಕು. ಕೆಲವು ದಿನ ಅದರೊಟ್ಟಿಗೆ ಇನ್ನೊಂದು ಹಕ್ಕಿ ಬರುತ್ತಿದ್ದುದನ್ನು ಗಮನಿಸಿದ್ದೆ. ಆದರೆ ಅದು ಈ ಹಕ್ಕಿಯ ಸಂಗಾತಿಯೋ ಅರ್ಥವಾಗಲಿಲ್ಲ. ಕೆಲವು ದಿನ ಅದರ ಜೊತೆಗೆ ಹಾರಿ ಬಂದು ಕುಳಿತು ಚಿಲಿಪಿಲಿ ಎಬ್ಬಿಸುತ್ತಿದ್ದ ಅದು ನಂತರದ ದಿನಗಳಲ್ಲಿ ಕಾಣುತ್ತಿರಲಿಲ್ಲ. ಥೇಟ್ ಮನೆಯ, ಮಕ್ಕಳನ್ನು ನೋಡಿಕೊಳ್ಳುವ ಎಲ್ಲಾ ಜವಾಬ್ಧಾರಿಯನ್ನು ಹೆಂಡತಿಯ ತಲೆಗೆ ಕಟ್ಟಿ ಹಾಯಾಗಿರುವ ಗಂಡಸರಂತೆ, ಹೆಂಡತಿ ಆಸ್ಪತ್ರೆಯಲ್ಲಿ ಹೆರಿಗೆ ನೋವಿನಲ್ಲಿ ನರಳುತ್ತಿದ್ದರೆ, ಅದೆಲ್ಲೋ ಬಾರಲ್ಲಿ ಕುಳಿತು, ನಶೆ ಏರಿಸಿಕೊಳ್ಳುವ ಥೇಟ್ ಮಾನವ ಮೇಲ್‌ನಂತೆ, ಲಿವಿಂಗ್ ಟುಗೆದರ್ ಎಂದು ಜೊತೆಗಿದ್ದು ಎಲ್ಲವನ್ನೂ ಅನುಭವಿಸಿ ನಂತರ ಅದಕ್ಕೂ ತನಗೂ ಏನು ಸಂಬಂಧ ಇಲ್ಲ ಎಂದು ತನ್ನ ಪಾಡಿಗೆ ತಾನು ಮತ್ತೊಂದು ರಿಲೇಶನ್‌ನ್ನು ಹುಡುಕಿ ಹೊರಟು ಹೋಗುವ ಜವಾಬ್ಧಾರಿ ಇಲ್ಲದ ಗಂಡಸಿನಂತೆ ಒಂದಿಷ್ಟು ದಿನ ಹಾರಾಡಿ, ಏನನ್ನೋ ಹೇಳಿಕೊಡುವ ಯಜಮಾನಿಕೆ ತೋರಿ ಹೊರಟು ಹೋಗಿತ್ತು. ಅಥವಾ ಅದೇನೂ ಆಗಿರದೇ ಬಹುಶಃ ಗೂಡು ಕಟ್ಟಲು ಹೇಳಿಕೊಡಲು ಬಂದಿದ್ದ ಎಂಜಿನಿಯರ್ ಆಗಿತ್ತೋ ಏನೋ? ಅಂತೂ ಕೆಲವು ದಿನ ಕಚಿಪಿಚಿ ಮಾಡಿದ ಅದು ನಂತರದ ದಿನಗಳಲ್ಲಿ ನಾಪತ್ತೆ ಆಗುತ್ತಿತ್ತು. ಇದು ಸಾಮಾನ್ಯವಾಗಿ ಪ್ರತಿವರ್ಷ ನಡೆಯುವಂತಹುದ್ದು. ಈ ವರ್ಷವೂ ಎರಡು ಹಕ್ಕಿಗಳು ಹಾರಿ ಬಂದು ಜಾಗದ ಸರ್ವೆ ಮಾಡಿ, ಒಂದೆರಡು ಕಡೆ ಗೂಡು ಕಟ್ಟುವ ಸಿದ್ಧತೆ ಎಂಬಂತೆ ನಾಲ್ಕಾರು ಕಸಕಡ್ಡಿಗಳನ್ನು ಅಂಟಿಸಿ, ಮತ್ತೆ ಸೈಟ್ ಬದಲಿಸಿದಂತೆ ಬೇರೆ ಕಡೆ ಗೂಡು ಕಟ್ಟಲಾರಂಭಿಸಿತ್ತು. ನಾವ್ಯಾರಾದರೂ ಅದನ್ನು ಗಮನಿಸುತ್ತಿರುವ ಚಿಕ್ಕ ಸಂದೇಹ ಬಂದರೂ ಸಾಕು ಅದು ಆ ಕಡೆ ಎಲ್ಲೂ ಸುಳಿಯುತ್ತಿರಲಿಲ್ಲ. ತಾನು ಗೂಡು ಕಟ್ಟುತ್ತಿರುವ ಜಾಗ ಸುರಕ್ಷಿತವಲ್ಲ ಎನ್ನುವ ಸಣ್ಣ ಸುಳಿವು ಸಿಕ್ಕರಂತೂ ಗೂಡು ಕಟ್ಟಿ ಇನ್ನೇನು ಅದರಲ್ಲಿ ವಾಸ್ತವ್ಯ ಹೂಡಿ, ಮೊಟ್ಟೆ ಇಡಬೇಕು ಎಂಬ ಸಮಯದಲ್ಲೂ ಪೂರ್ಣಗೊಂಡ ಆ ಗೂಡನ್ನು ಯಾವ ಮುಲಾಜೂ ಇಲ್ಲದೇ ತ್ಯಜಿಸಿ ಮತ್ತೆ ಹೊಸದಾಗಿ ಗುಡು ಕಟ್ಟಲು ಹೊರಡುವ ಅದರ ಸಹನೆ, ಮುನ್ನೆಚ್ಚರಿಕೆ, ಕಷ್ಣಸಹಿಷ್ಣುತೆ ಹಾಗು ತನ್ನ ಮುಂದಿನ ಪೀಳಿಗೆಯ ರಕ್ಷಣೆಗಾಗಿ ಅದು ವಹಿಸುವ ಕಾಳಜಿ ನಿಜಕ್ಕೂ ಅನನ್ಯ. ಹೌದು. ಆ ಪುಟ್ಟ ಹಕ್ಕಿ ತನ್ನ ಮರಿಯ ಉಳಿವಿಗಾಗಿ ಎಂತಹ ರಿಸ್ಕ ತೆಗೆದುಕೊಳ್ಳಲೂ ಸಿದ್ಧವಿರುವ ರೀತಿ ಮಾತ್ರ ಎಂತಹ ಮನುಷ್ಯನಂತಹ ಮನುಷ್ಯನೂ ನಾಚಬೇಕು. ಒಂದು ಸಪೂರದ ತಂತಿಗೆ ತಟ್ಟನೆ ನೋಡಿದರೆ ಒಂದಿಷ್ಟು ಕಸ ನೇತು ಹಾಕಿದಂತೆ ಕಾನುವ ಗೂಡು ಎಷ್ಟು ಸಿಸ್ಟಮೆಟಿಕ್ ಆಗಿರುತ್ತಿತ್ತು ಎಂದರೆ ಒಳಗೆ ನೋಡಿದರೆ ಮೃದುವಾದ ಪುಟ್ಟ ಮೊಟ್ಟೆ ಏನೂ ಅಪಾಯವಾಗದಂತೆ ಹಾಸಿದ ಮೆತ್ತನೆಯ ಒಳ ಆವರಣ.ಹತ್ತಿ ಹಾಗು ಇತರ ಮೆತ್ತನೆಯ ವಸ್ತುಗಳನ್ನು ಈ ಮಳೆಗಾಲದಲ್ಲಿ ಅದು ಎಲ್ಲಿಂದ ಸಂಪಾದಿಸಿ ತರುತ್ತಿತ್ತೋ ದೇವರೇ ಬಲ್ಲ. ತನ್ನ ದೇಹವಿಡೀ ಒಳತೂರುವಷ್ಟು ದೊಡ್ಡ ಗೂಡು ಕಟ್ಟುವಷ್ಟು ಕಸವನ್ನು ಅದರ ಪುಟ್ಟ ಚೊಂಚಿನಿಂದ ಹೇಗೆ ತರುತ್ತಿತ್ತೋ? ಎಲ್ಲಿಂದ ತರುತ್ತಿತ್ತೋ? ಒಂದೂ ಅರ್ಥವಾಗುತ್ತಿರಲಿಲ್ಲ. ಆದರೂ ಬರೀ ತನ್ನ ಚುಂಚಷ್ಟನ್ನೇ ಕಾಣುವಂತೆ ಮಾಡಿ ಕುಳಿತುಕೊಂಡು ಕಾವು ಕೊಡುವಷ್ಟು ಸದೃಢವಾಗಿ ಅದು ಗೂಡು ಕಟ್ಟುವ ಚಾಣಾಕ್ಯತೆಗೆ ಎಂತಹ ಇಂಜಿನಿಯರ್ ಆದರೂ ಬೆರಗಾಗಲೇ ಬೇಕು.
ಕೆಲವು ದಿನ ಅದರ ಗೂಡು ಕಟ್ಟುವ ಸಂಭ್ರಮ ಕಂಡಾದ ಮೇಲೆ ಒಮ್ಮೆಲೆ ಮೌನ, ನಿಜಕ್ಕೂ ಭಯ ಆಗುವಷ್ಟು. ಎಲ್ಲಿ ಹೋಯ್ತಪ್ಪಾ ಈ ಪುಟಾಣಿ ಎಂದು ಒಂದು ದಿನ ದೂರದಿಂದ ಬಗ್ಗಿ ನೊಡಿದರೆ ಗುಡಿನಲ್ಲಿ ನೀರವ ಮೌನ. ಇಷ್ಟಲ್ಲ ಗೂಡು ಕಟ್ಟಿ ಆದ ಮೇಲೆ ಹೊರಟೇ ಹೋಯ್ತೆ ಎಂಬ ಬೇಸರದಲ್ಲಿ ರಾತ್ರಿ ಮತ್ತೊಮ್ಮೆ ಕಣ್ಣು ಕಿಸುರಿ ನೋಡಿದರೆ ಪುಟ್ಟ ಚುಂಚನ್ನು ಹೊರಗಿಟ್ಟು ಯೋಗನಿದ್ರೆ ಮಾಡುವಂತೆ ಕುಳಿತ ಹಕ್ಕಿಯನ್ನು ಕಂಡು ಏನೋ ನೆಮ್ಮದಿ. ಯಾಕೆಂದರೆ ಹಿಂದಿನ ವರ್ಷ ಗೂಡು ಕಟ್ಟಿದ್ದ ಹಕ್ಕಿ ಮತ್ತೆ ಆ ಗೂಡಿಗೆ ಬಂದಿರಲೇ ಇಲ್ಲ. ನನ್ನ ಎರಡನೇ ಮಗ ಗೂಡಿನಲ್ಲಿ ಇಣುಕಿ ಮೊಟ್ಟೆ ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಲೋ ಎಂಬಂತೆ ಗೂಡಿನ ಒಳಗೆ ಬೆರಳು ತೂರಿಸಿದ್ದ. ಅಮ್ಮಾ, ಮೊಟ್ಟೆ ಇದೆ ಒಳಗೆ, ಇನ್ನು ಸ್ವಲ್ಪ ದಿನದಲ್ಲಿ ಮರಿಯಾಗುತ್ತೆ. ಎಂದು ನಾನು ಶಾಲೆಯಿಂದ ಬರುತ್ತಿದ್ದಂತೆ ಏನನ್ನೋ ಕಂಡ ಸಂಭ್ರಮದಲ್ಲಿ ಹೇಳಿದ್ದ. ಅಯ್ಯೋ ಮುಟ್ಟಿ ಬಿಟ್ಟೆಯಾ? ಹಾಗಾದ್ರೆ ಇನ್ನು ಮುಂದೆ ಆ ಹಕ್ಕಿ ಮೊಟ್ಟೆಗೆ ಕಾವು ಕೊಡೋದಿಲ್ಲ. ನಾನು ಬೇಸರದಲ್ಲಿ ಹೇಳಿದ್ದೆ. ನಾನು ಅಂದುಕೊಂಡಂತೆಯೇ ಆಗಿತ್ತು. ಒಮ್ಮೆ ಬಂದು ಚೆಕ್ ಮಾಡಿದ ಆ ಪುಟ್ಟ ಹಕ್ಕಿಗೆ ಏನು ಅನುಮಾನವಾಯಿತೋ? ಕೊನೆಗೂ ಅದು ಆ ಗೂಡಿಗೆ ಮರಳಲೆ ಇಲ್ಲ. ಅಲ್ಲೇ ಸ್ವಲ್ಪ ದೂರದಲ್ಲಿ ಮತ್ತೆ ಹೊಸದಾಗಿ ಗೂಡು ಕಟ್ಟಿತ್ತು. ಹೀಗಾಗಿ ಅದು ಗೂಡು ಕಟ್ಟಲು ಬಂದ ದಿನವೇ ’ಯಾವುದೇ ಕಾರಣಕ್ಕೂ ಗೂಡಿನ ಕಡೆ ತಿರುಗಿಯೂ ನೋಡಬಾರದು’ ಎಂದು ಕಟ್ಟಪ್ಪಣೆ ಮಾಡಿದ್ದೆ. ಮೌನ ಮುಗಿದ ಕೆಲವೇ ದಿನಗಳಲ್ಲಿ ಜಗತ್ತೇ ಬರೀ ಚಿಂ ಚಿಂನಿಂದ ಕೂಡಿದೆಯೇನೋ ಎಂಬಷ್ಟು ಗಲಾಟೆ. ನಮ್ಮ ಕಿರು ಬೆರಳ ಗಾತ್ರದಷ್ಟೂ ಇರದ ಆ ಮರಿಗಳಿಗೆ ಅದೆನು ರಾವಣಾಸುರನ ಹಸಿವೆಯೋ? ಅಮ್ಮ ಹಕ್ಕಿ ಹಾರಿ ಹಾರಿ ಹೋಗಿ ಅದರ ಪುಟ್ಟ ಚುಂಚಲ್ಲಿ ತಂದ ಆಹಾರ ಈ ಮರಿಗಳಿಗೆ ಅರೆ ಕಾಸಿನ ಮಜ್ಜಿಗೆಯಂತಾಗುತ್ತಿತ್ತೇನೋ. ಅಮ್ಮ ಹಾರಿ ಹೋಗುವಾಗ ಸುಮ್ಮನಿರುತ್ತಿದ್ದ ಮರಿಗಳಿಗೆ ಅಮ್ಮ ಹಿಂತಿರುಗಿ ಬರುವ ಸೂಚನೆ ಅದ್ಯಾವ ಮಾಯದಲ್ಲಿ ಸಿಗುತ್ತಿತ್ತೋ? ಒಮ್ಮೆಲೆ ಜಗತ್ತಿನ ಗದ್ದಲವೆಲ್ಲ ಅದೊಂದೇ ಪುಟ್ಟ ಗೂಡಲ್ಲಿದೆಯೋ ಎಂಬಂತೆ ಚಿಲಿಪಿಲಿಗುಡುತ್ತಿದ್ದವು. ಎಲ್ಲಾ ಚಿಲಿಪಿಲಿ ಮುಗಿದು, ಚಿಕ್ಕದಾಗಿ ರೆಕ್ಕೆ ಬಲಿತು ಹಾರುವ ಸಂಭ್ರಮದಲ್ಲಿ ಮತ್ತೊಂದಿಷ್ಟು ಗದ್ದಲ. ರೆಕ್ಕೆ ಇನ್ನೂ ಪೂರ್ತಿ ಬಲಿತಿರದ ರೆಕ್ಕೆಯಿಂದ ಹಾರಲು ಹೊಗಿ, ಕೆಳಗೆ ಬಿದ್ದು, ಅಮ್ಮನಿಗೆ ಏನೋ ಆಗಿ ಹೊದ ಆತಂಕದಲ್ಲಿ ಭೂಮ್ಯಾಕಾಶ ಒಂದು ಮಾಡುವಂತೆ ಕಿರುಚುವುದು ಬೇರೆಯದ್ದೇ ಕಥೆ. ಹಾಗೇನಾದರೂ ’ಮರಿ ಬಿದ್ದು ಹೋಯಿತು ಪಾಪ’ ಎಂದೇನಾದರೂ ನಾವು ಮುಟ್ಟಿದರೆ ತಾಯಿ ಹಕ್ಕಿ ಮತ್ತೆ ಆ ಮರಿಯತ್ತ ತಿರುಗಿ ಕೂಡ ನೋಡುವುದಿಲ್ಲ. ಹೀಗಾಗಿ ಅದಕ್ಕೆ ಸಹಾಯ ಮಾಡಬೇಕೆನ್ನಿಸಿದರೂ ಅದನ್ನು ಮುಟ್ಟದಿರುವುದೇ ಅದಕ್ಕೆ ನಾವು ಮಾಡುವ ಅತಿ ದೊಡ್ಡ ಸಹಾಯ ಎಂಬುದು ಅನುಭವದಿಂದ ಗೊತ್ತಾಗಿದ್ದರಿಂದ, ಅಷ್ಟು ಹೊತ್ತು ಮನೆಯ ಬಾಗಿಲು ಹಾಕಿ ಒಳಗೆ ಸುಮ್ಮನೆ ಕುಳಿತು ಬಿಡಬೇಕು. ಹೇಗೋ ಆ ಅಮ್ಮ ತನ್ನ ಮರಿಯನ್ನು ಗೂಡಿಗೆ ಸಾಗಿಸಿದ ನಂತರವಷ್ಟೇ ಮನೆಯಿಂದ ಹೊರಬರುವ ಸಾಹಸ ಮಾಡಬಹುದು. ಇಷ್ಟೆಲ್ಲ ಆಗುವುದಕ್ಕೆ ಒಂದು ತಿಂಗಳಿಂದ ಒಂದುವರೆ ತಿಂಗಳ ಕಾಲಾವಕಾ ಮಾತ್ರ ಸಾಕು. ಹೀಗಾಗಿ ಆ ಒಂದು-ಒಂದುವರೆ ತಿಂಗಳು ಆ ಹಕ್ಕಿಗೆ ಹೊಂದುವಂತೆ ನಮ್ಮನ್ನು ಅಡ್ಜೆಸ್ಟ ಮಾಡಿಕೊಳ್ಳುವುದು ರೂಢಿಯಾಗಿಬಿಟ್ಟಿದೆ. ನಾವು ಸ್ವಲ್ಪ ದಿನ ನಮ್ಮ ಚಟುವಟಿಕೆಗಳಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಒಂದು ಸಂಭ್ರಮದ ಗೂಡು-ಸಂಸಾರವನ್ನು ಕಾಣುವ ಖುಷಿ ನಮ್ಮದಾಗುತ್ತದೆ. ಆ ಖುಷಿಗೋಸ್ಕರವೇ ಪ್ರತಿ ವರ್ಷದ ಮಳೆಗಾಲದ ಆರಂಭವನ್ನು ನಾವು ಎದುರು ನೋಡುತ್ತಿರುತ್ತೇವೆ.
-ಶ್ರೀದೇವಿ ಕೆರೆಮನೆ
******
ನಿಜಕ್ಕೂ ಖುಷಿಯಾದ ವಿಚಾರ. ಪ್ರತಿವರ್ಷ ಹಕ್ಕಿ ವೀಕ್ಷಣೆ ಹಬ್ಬ. ಚೆನ್ನಾಗಿದೆ ಶ್ರೀದೇವಿಯವರೆ.