‘ನಿರಂತರ ಸಂತೋಷವೆಂಬುದಿಲ್ಲ ಕೇವಲ ಸಂತಸದ ಕ್ಷಣಗಳಿವೆ.’ ಎನ್ನುವುದು ಬಲ್ಲವರ ಮಾತು. ಇಂಥ ಸಂತಸದ ಕ್ಷಣಗಳನ್ನು ದಕ್ಕಿಸಿಕೊಳ್ಳಲು ಸ್ವಂತದ್ದೊಂದು ಗೂಡು (ಹೋಮ್ ಸ್ವೀಟ್ ಹೋಮ್) ಕಟ್ಟಲೇಬೇಕೆಂದು ಮುಂದಾಗುತ್ತೇವೆ. ಸ್ವಂತದ್ದೊಂದು ಮನೆ ಕಟ್ಟಿಕೊಳ್ಳುವುದು ಬದುಕಿನ ಪರಮೋಚ್ಚ ಗುರಿ. ಆ ಗುರಿ ಮುಟ್ಟಲು ಬ್ಯಾಂಕ್ ಲೋನ್‍ಗೆ ಅರ್ಜಿ ಸಾಲದ್ದಕ್ಕೆ ಸಂಬಂಧಿಕರು ಸ್ನೇಹಿತರು ಪರಿಚಿತರ ಹತ್ತಿರ ಸಾಲ. ಮನೆಯಾಕೆಯ ಸಾಮಾನು ಅಡವಿಡುವುದು ಇನ್ನೂ ಏನೇನೋ ನಡೆಯುತ್ತವೆ. ಇದನ್ನೆಲ್ಲ ಅರಿತ ನಮ್ಮ ಹಿರಿಯರು ‘ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು.’ ಎಂಬ ಮಾತು ಹೇಳಿದ್ದು. ಅದು ನಮ್ಮಲ್ಲಿ ಜನಜನಿತವಾಗಿದೆ. ಮನೆ ಕಟ್ಟುವುದೆಂದರೆ ಹಿಮಾಲಯ ಪರ್ವತ ಏರಿದಂಥ ಅನುಭವ ಎಂಬುದು ಆ ಹರ ಸಾಹಸಕ್ಕೆ ಕೈ ಹಾಕಿದವರಿಗೇ ಗೊತ್ತು. ಹಾಗೂ ಹೀಗೂ ಮನೆ ಕಟ್ಟಿ ಒಳ ನುಗ್ಗುವ ಸಂಭ್ರಮವೂ ಸಂಭ್ರದಿಂದಲೇ ಮುಗಿಯಿತು. ಆ, ಈ ಸಾಮಾನು ಎಲ್ಲಿ ಇಡುವುದು ಯಾವ ಗೋಡೆಗೆ ಯಾವುದನ್ನು ತೂಗು ಹಾಕಿದರೆ ಚಂದ. ಗೋಡೆಗೆ ಯಾವ ಯಾವ ಡಿಸೈನ್ ಮಾಡಿಸಿದರೆ ಅಂದ ಚಂದ ಹೆಚ್ಚಾಗುತ್ತದೆ. ಇನ್ನೂ ಏನೇನು ತಂದು ಮನೆ ತುಂಬಿಸುವುದು ಎಂಬ ಲೆಕ್ಕಾಚಾರದಲ್ಲಿ ತಿಂಗಳು ಕಳೆದಿದ್ದೇ ಗೊತ್ತಾಗಲಿಲ್ಲ. ಏನೇ ಆಗಲಿ ಸ್ವಂತ ಮನೆಯೊಂದಿದ್ದರೆ, ಮೇಲಿಂದ ಮೇಲೆ ಮಾಲಿಕರು ಮತ್ತು ನಮ್ಮ ನಡುವೆ ನೀರು, ಕಸ, ಬಾಡಿಗೆ ವಿಷಯದಲ್ಲಿ ಟುಸ್ ಪುಸ್ ನಡೆದಾಗ ಗುಳೆ ಹೋದವರಂತೆ ಇದ್ದ ಬಿದ್ದ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ಹೊಸ ಮಾಲಿಕರ ಮನೆಯಲ್ಲಿ ಹೊಸದಾಗಿ ತಂದು ಚೆಲ್ಲುವದಂತೂ ತಪ್ಪಿತು ಎಂದು ನಿಟ್ಟುಸಿರು ಬಿಟ್ಟಿದ್ದೆ.
ಇನ್ನು ಹೇಗೆ ಬೇಕಿದ್ದರೂ ಇರಬಹುದು.ಇಷ್ಟು ದಿನ ಬಾಡಿಗೆ ಮನೆಯನ್ನು ತಿಕ್ಕಿ ತೊಳೆದದ್ದಾಯಿತು. ಸ್ವಂತ ಮನೆಯಲ್ಲಿ ನಮ್ಮನ್ನು ಯಾರೂ ಕೇಳುವವರಿಲ್ಲ. ನಾವೇ ಒಡೆಯರು. ಎಷ್ಟು ಕಸ ಬಿದ್ದರೂ ಜೇಡ ಬಲೆ ನೇಯ್ದರೂ ಹೇಳುವವರಿಲ್ಲ ಕೇಳುವವರಿಲ್ಲ. ಅಂತ ಇರೋಕೆ ಆಗುವುದಿಲ್ಲ ಇರೋದು ಒಂದು ರವಿವಾರ. ಅವತ್ತು ತಲೆಗೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಕಸಬರಿಗೆ ಹಿಡಕೊಂಡು ಮನೆಯವರೆಲ್ಲ ಸ್ವಚ್ಛತಾ ಅಭಿಯಾನ ನಡೆಸಿದರೆ ಮನೆ ಝಳ ಝಳ ಆಗಿರುತ್ತದೆ. ಅಂತ ಏನೇನೋ ಹೊಸ ಕನಸುಗಳ ದೊಡ್ಡ ಸಂಗ್ರಹವೇ ಇತ್ತು. ಮನೆಯನ್ನು ಅಂದಗಾಣಿಸಲು ಆಸಕ್ತಿಯಿಂದ ಹೊಸ ಹೊಸ ಚೆಂದದ ಪ್ರಯತ್ನಗಳನ್ನು ಮಾಡುತ್ತ ಸಾಗಿದ್ದೆ. ಉಳಿದವರೆಲ್ಲ ನನ್ನ ಹುಚ್ಚಾಟಗಳಿಗೆ ಬೇಸತ್ತಿದ್ದರೂ ಮನೆಯ ಯಜಮಾನಿಗೆ ಎದುರಾಡುವುದು ಹೇಗೆಂದು ಅಸಹಾಯಕರಾಗಿ ಬಾಯಿ ಗಟ್ಟಿಯಾಗಿ ಹಿಡಿದುಕೊಂಡಿದ್ದರು.
ಹೊರಗಿನ ಧೂಳು ಒಳಗೆ ಸರಳವಾಗಿ ಪ್ರವೇಶ ಪಡೆಯದಿರಲೆಂದು ಮಲಗುವ ಕೋಣೆಗಳ ಬಾಗಿಲು ಕಿಟಕಿಗಳು ಮುಚ್ಚೇ ಇರುತ್ತವೆ.ನೂರಾರು ಕರಡಿಗಳು ಮಲಗಿದಂಥ ಕತ್ತಲು ತುಂಬಿಕೊಂಡಿರುತ್ತದೆ. ಒಳಕೋಣೆಗಳನ್ನು ವಿವಿಧ ಶೋಕಿ ವಸ್ತುಗಳಿಂದ ಶೃಂಗರಿಸಲಾಗಿದೆ. ಬೆಳಕು ಬೇಕೆಂದಾಗ ಕೊಂಚ ಕರ್ಟನ್ ಸರಿಸಿದರೂ ಸಾಕು ಸೂರ್ಯ ಮನೆಯೊಳಗೆ ಟೆಂಟ್ ಹಾಕಿದ ಅನುಭವ. ಸ್ವಚ್ಛತೆಯ ಉದ್ದೇಶದಿಂದ ಬಂಧಿಸಿಟ್ಟ ಮನೆಯ ಬಾಯಿಗಳು ನನ್ನ ಕಿವಿಗೆ ಬೀಳದಂತೆ ತೆರೆದು ಮುಚ್ಚುತ್ತವೆ. ಅಂತ ನನಗೂ ಗೊತ್ತು. ಸ್ವಂತ ಮನೆಯಲ್ಲಿದ್ದೂ ಉಸಿರು ಕಟ್ಟಿದ ಸ್ಥಿತಿಗೆ ಬಂದಿದ್ದೇವೆ. ಎಂಬ ಗುಸು ಗುಸು ಕಿವಿಗೆ ಬೀಳದೇ ಇರುವುದಿಲ್ಲ. ಕಾಲ ಕಾಲಕ್ಕೆ ಮನೆ ಸ್ವಚ್ಛಗೊಳಿಸಲು ಒಬ್ಬ ಮಹಿಳೆ ಮತ್ತಾಕೆಯ ತರುಣಿ ಮಗಳು ಹಾಜರಾಗುತ್ತಾರೆ. ಗಲೀಜು ಮಾಡುವ ಕೈಗಳೆಲ್ಲ ಅಚ್ಚರಿಯ ಮುಖಭಾವ ಹೊತ್ತು ಕೂತುಕೊಳ್ಳುತ್ತವೆ. ಅಗತ್ಯಕ್ಕೆ ಬೇಕಾದಷ್ಟನ್ನು ಮನೇಲಿಟ್ಟುಕೊಂಡು ಬೇಡವಾದ್ದನ್ನು ಕಚಡಾ ಡಬ್ಬದೊಳಗೆ ತುರುಕುವುದು. ಉಪಯೋಗಿಸಿ ಬಿಟ್ಟ ಹಳೆ ಬಟ್ಟೆಯಿಂದ ಹೊಸ ಟಿವಿ ಹಳೆ ರೇಡಿಯೋ ಫರ್ನಿಚರ್ ಹೀಗೆ ಎಲ್ಲ ಅಂದರೆ ಎಲ್ಲ ಸಾಮಾನುಗಳ ಮೇಲೆ ಹಾಯಾಗಿ ಮಲಗಿರುವ ಧೂಳಿಗೆ ಅಂದು ಕೊನೆ.ಓದುವ ಉಮೇದು ತುಸು ಹೆಚ್ಚೇ..ಓದದಿದ್ದರೆ ತಿಂದ ಅನ್ನ ಕರಗುವುದಿಲ್ಲ. ಹೀಗಾಗಿ ಮನೆಯಲ್ಲಿ ಕೈ ಇಟ್ಟಲೆಲ್ಲ ಪುಸ್ತಕ ಸಿಗುತ್ತವೆ. ಪುಸ್ತಕಗಳನ್ನೆಲ್ಲ ಮುಟ್ಟಿ ತಟ್ಟಿ ಸುಖಿಸುತ್ತ ಮರಳಿ ಅದರ ಗೂಡಿಗೆ ಸೇರಿಸುವುದು ನನ್ನ ಕೈಯಿಂದಲೇ ಆಗುತ್ತೆ. ಅದೂ ಸ್ವಚ್ಛತೆಯ ಪಟ್ಟಿಯಲ್ಲಿ ಇರುತ್ತೆ ಅನ್ನೋದು ಮನೆಯ ಸರ್ವ ಸದಸ್ಯರಿಗೂ ಗೊತ್ತಿರುವ ವಿಷಯ. ಈಗೀಗ ಸ್ವಚ್ಚತೆಗೆ ಮನೆಯ ಎಲ್ಲ ಕೈಗಳೂ ಕೈಗೂಡುತ್ತಿವೆ. ಬಹುಶಃ ಸ್ವಚ್ಛತಾ ಅಭಿಯಾನದ ಇಫೆಕ್ಟ್ ಇರಬಹುದು.
ಮೊನ್ನೆ ಸ್ವಚ್ಛತೆಯ ಕಾರ್ಯ ಮುಗಿಸಿ ಉಲ್ಲಾಸ ಭಾವದಿಂದ ಕೈಯಲ್ಲೊಂದು ಪುಸ್ತಕ ಹಿಡಿದು ಮನೆಯ ತಾರಸಿಗೆ ಕಾಲಿಟ್ಟೆ. ಇನ್ನೇನು ಪುಸ್ತಕ ಬಿಡಸಿ ಕಣ್ಣಾಡಿಸಬೇಕು ಎನ್ನುವಷ್ಟರಲ್ಲಿ ಕಿಟಕಿಯ ಬಳಿ ಚಿಂವ್ ಚಿಂವ್ ಸದ್ದು ಕೇಳಿತು. ಕುತೂಹಲದಿ ಕಣ್ಣಗಲಿಸಿ ನೋಡಿದೆ ಎರಡು ಪುಟ್ಟ ಗುಬ್ಬಿ ಮರಿಗಳು ಆಡುತ್ತಿವೆ.ಮರಿಗಳ ಅವ್ವ ಅಪ್ಪ ಕಡ್ಡಿ ಕಸ ಒಟ್ಟುಗೂಡಿಸಿ, ನಮ್ಮ ಕಿಟಕಿಯನ್ನೇ ನಿವೇಶನವನ್ನಾಗಿಸಿ ಗೂಡು ಕಟ್ಟುವುದರಲ್ಲಿ ನಿರತವಾಗಿವೆ. ಗೂಡಿಗೆ ಇನ್ನಷ್ಟು ಒಣ ಹುಲ್ಲು, ಒಣಗಿದ ಎಲೆಗಳು,ಎಳೆಗಳು,ಕಡ್ಡಿಗಳು, ರವದಿ ಬೇಕೆಂದು ತರಲು ಮತ್ತೆ ಪುರ್ರೆಂದು ಹಾರಿತು ಅಪ್ಪ ಗುಬ್ಬಿ. ಪುಟ್ಟ ಬಾಯಲ್ಲಿ ವಿಧ ವಿಧವಾದ ಎಳೆಗಳನ್ನು ರವದಿಗಳನ್ನು ತಂದು ಸುರಿಯಿತು. ತಂದ ಎಳೆಗಳನ್ನು ಗಾಳಿ ಬೇರೆಡೆಗೆ ಒಯ್ದು ಚೆಲ್ಲಿದರೂ ಬೇಸರಿಸಿಕೊಳ್ಳದೇ ಅವ್ವ ಗುಬ್ಬಿ ಅದನ್ನು ಮತ್ತೆ ಹೆಕ್ಕಿ ತಂದು ಜೋಡಿಸಿಡುತ್ತಿತ್ತು. ಅಪ್ಪ ಗುಬ್ಬಿ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಮತ್ತೆ ಹಾರುತ್ತಿತ್ತು. ಅವ್ವ ಗುಬ್ಬಿ ಇಂದು ನಮಗೊಂದು ಗೂಡು ತಯಾರಾಗುತ್ತೆ ಇದರಲ್ಲಿ ನನ್ನ ಮರಿಗಳೊಂದಿಗೆ ಬೆಚ್ಚಗಿರಬಹುದು ಎಂದು ಸಂಭ್ರಮದಲ್ಲಿದ್ದುದನ್ನು ಕಂಡು ನನಗೆ ಎಲ್ಲಿಲ್ಲದ ಸಂತಸ ಮತ್ತು ಅಚ್ಚರಿ. ಇಷ್ಟೊಂದು ಪುಟ್ಟ ಜೀವಿಗಳಿಗೂ ತಮ್ಮದೇ ಆದ ಗೂಡು ಇರಬೇಕೆಂಬ ಆಸೆ ಕಾಡುವುದಾದರೆ, ಎಷ್ಟೆಲ್ಲ ಆಸೆಗಳ ಹೊತ್ತು ತಿರುಗುವ ಮನುಷ್ಯನಿಗೆ ಸ್ವಂತ ಗೂಡಿನ ಆಸೆ ಇರಬೇಕಾದ್ದು ನ್ಯಾಯವೇ ಎಂದೆನಿಸಿ ಪುಳಕಿತಳಾದೆ. ಗೂಡಿನಲ್ಲೊಂದು ಗೂಡು ಎಂದು ವಿಸ್ಮಿತಳಾದೆ. ಮಗಳನ್ನು ಕರೆದು ಪುಟ್ಟ ಗುಬ್ಬಚ್ಚಿಗಳ ಗೂಡು ತೋರಿಸಿದೆ. ಗುಬ್ಬಚ್ಚಿಗಳು ಸ್ವಾಭಾವಿಕವಾಗಿ ಕಲಾತ್ಮಕತೆಯಿಂದ ಚಾಕುಚಾಕ್ಯತೆಯಿಂದ ಕಟ್ಟಿದ ಗೂಡು ಕಂಡು ಆವಕ್ಕಾದೆ. ಪುಟ್ಟ ಜೀವಿಗಳ ಖುಷಿಯಲ್ಲಿ ಪುಟ್ಟ ಮಗಳು ಭಾಗಿಯಾಗಿ ನಲಿದಳು.
-ಜಯಶ್ರೀ. ಜೆ. ಅಬ್ಬಿಗೇರಿ ಬೆಳಗಾವಿ