ಮೊಣ್ಣಪ್ಪ ಸರ್ ನ ಕ್ಲಾಸ್ ಎಂದರೆ ಯಾಕೋ ನಮಗೆಲ್ಲಾ ನಡುಕ. ಅವರ ಜೀವಶಾಸ್ತ್ರದ ಕ್ಲಾಸ್ ವಾರಕ್ಕೆರಡೇ ಪಿರಿಯೆಡ್ ಇದ್ದರೂ ಅದನ್ನು ನೆನೆಸಿಕೊಂಡರೆ ನಮಗೆಲ್ಲಾ ಹೆದರಿಕೆ. ಕ್ಲಾಸಿನೊಳಗೆ ಬರುವಾಗ ಚಾಕ್ಪೀಸಿನ ಡಬ್ಬ ಮತ್ತು ಡಸ್ಟರ್ ಮಾತ್ರ ತರುವ ಅವರು ಒಳ ನುಗ್ಗಿದೊಡನೇ ಕಣ್ಣಲ್ಲೇ ಅಟೆಂಡೆನ್ಸ್ ತೆಗೆದುಕೊಳ್ಳುತ್ತಿದ್ದರು. ಈಗಿನ ಸಿ ಸಿ ಕ್ಯಾಮೆರಾ ಅವರ ಕಣ್ಣೊಳಗೆ ಫಿಕ್ಸ್ ಆಗಿತ್ತೇನೋ.. ಆಫೀಸ್ ರೂಮಿಗೆ ಹೋಗಿಯೇ ನಮ್ಮೆಲ್ಲರ ಹಾಜರಿಯನ್ನು ಪುಸ್ತಕದೊಳಗೆ ಮಾರ್ಕ್ ಮಾಡ್ತಾ ಇದ್ದರು. ಪ್ರಶ್ನೆಗಳಿಗೆ ತಪ್ಪು ಉತ್ತರ ನೀಡಿದವರ ಅಟೆಂಡೆನ್ಸ್ ಹಾಕುವುದಿಲ್ಲ ಎಂಬ ಬೆದರಿಕೆ ಅವರಿಂದ ನಿತ್ಯವೂ ಇದ್ದದ್ದೇ.
ಅದೊಂದು ದಿನ ಕ್ಲಾಸಿಗೆ ನುಗ್ಗಿದವರೇ ‘ ಮನುಷ್ಯನ ಶರೀರದ ಪಾರದರ್ಶಕ ಭಾಗ ಯಾವುದು’ ? ಈ ಪಾಠ ನಿಮಗಿನ್ನೂ ಮಾಡಿಲ್ಲ ಆದರೆ ನಿಮ್ಮ ಸಾಮಾನ್ಯ ಬುದ್ಧಿಮತ್ತೆ ಎಷ್ಟಿದೆ ಅಂತ ಸಣ್ಣ ಪರೀಕ್ಷೆ ಇದು ಎಂದರು. ಹಳ್ಳಿ ಶಾಲೆಯ ಮಕ್ಕಳಾದ ನಾವು ನೂರಕ್ಕೆ ಮೂವತ್ತೈದು ಮಾರ್ಕು ತೆಗೆದರೆ ಜನ್ಮ ಪಾವನವಾಯಿತು ಎನ್ನುವ ಕೆಟಗರಿಗೆ ಸೇರಿದವರು. ಆದ ಪಾಠಗಳನ್ನೇ ಪರೀಕ್ಷೆಯ ಮುನ್ನಾ ದಿನ ಓದಿ ಬಂದಷ್ಟು ಬರೆದು ಮೇಷ್ಟ್ರುಗಳ ಕರುಣೆಗೆ ಸಿಲುಕಿ ಮುಂದಿನ ಕ್ಲಾಸೆಂಬ ನಮ್ಮ ಪಾಲಿನ ಇನ್ನೊಂದು ನರಕಕ್ಕೆ ದಬ್ಬಲ್ಪಡುವವರಾದ ಕಾರಣ ಈ ಪ್ರಶ್ನೆಗೆ ಉತ್ತರ ಬಿಡಿ, ಪ್ರಶ್ನೆಯಲ್ಲಿರುವ ‘ಪಾರದರ್ಶಕ’ ಎಂಬ ಪದವೇ ಅರ್ಥವಾಗದೇ ಮುಖ ಮುಖ ನೋಡಿಕೊಂಡವರ ಸಂಖ್ಯೆಯೇ ಹೆಚ್ಚು.
ಹಿಂದಿನ ಬೆಂಚಿನ ಮಕ್ಕಳು ಯಾವಾಗಲೂ ಗುರುಗಳ ದೃಷ್ಟಿಗೆ ಮೊದಲು ಸಿಲುಕುವವರಾದ ಕಾರಣ ಅಲ್ಲಿಂದಲೇ ಉತ್ತರದ ಅಭಿಯಾನ ಪ್ರಾರಂಭವಾಯಿತು. ಸಾಲು ಸಾಲಾಗಿ ತರಗತಿ ನಿಲ್ಲುತ್ತಲೇ ಹೋಯಿತು. ಕೆಲವರು ಹೆದರುತ್ತಾ ಕೈ, ಕಾಲು, ಮೂಗು, ತಲೆ ಎಂಬೆಲ್ಲಾ ಉತ್ತರ ನೀಡುತ್ತಾ ಗುರುಗಳ ಅವಕೃಪೆಗೆ ಪಾತ್ರರಾಗಬೇಕಾಯಿತು. ಯಾರಾದರೊಬ್ಬರು ಸರಿ ಉತ್ತರ ಕೊಟ್ಟು ನನ್ನನ್ನು ಉತ್ತರ ಹೇಳುವ ಕಷ್ಟದಿಂದ ಪಾರು ಮಾಡಲಿ ಎಂದು ಮುಕ್ಕೋಟಿ ದೇವರನ್ನು ಬೇಡಿಕೊಂಡರೂ ಸಮಯಕ್ಕಾಗುವಾಗ ಒಬ್ಬ ದೇವನೂ ಸಹಾಯಕ್ಕೆ ಬಾರದೇ ಮೊಣ್ಣಪ್ಪ ಸರ್ ನ ಬೆರಳು ನನ್ನನ್ನು ಉತ್ತರ ಹೇಳುವಂತೆ ನಿರ್ದೇಶಿಸಿತು.
ಅದ್ಯಾಕೋ ಅವರ ಕೆಂಪನೆ ಕಣ್ಣುಗಳು ನನ್ನನ್ನು ತಲೆ ಎತ್ತದಂತೆ ಮಾಡಿದರೂ ಯಾರೂ ಹೇಳದುಳಿದಿದ್ದ ನಮ್ಮ ಶರೀರದ ಭಾಗವಾದ ‘ಕಣ್ಣು’ ಎಂಬ ಉತ್ತರ ನೀಡಿದೆ. ಇಡೀ ತರಗತಿ ಬೆಚ್ಚುವಂತೆ ಅವರು ಚಪ್ಪಳೆ ತಟ್ಟಿ ಹೇಳಿದರು “ ಇದು ನೋಡಿ ಕಲಿಯುವ ಮಕ್ಕಳ ಗುಣ, ನಿಮಗೆ ಕಲಿಸಿದಷ್ಟೇ ಇವಳಿಗೂ ಕಲಿಸಿದ್ದು ಆದರೆ ಅವಳು ಉತ್ತರ ಹೇಳಿದಳು. ನೀವೆಲ್ಲ ಇನ್ನೊಂದು ಜನ್ಮ ನನ್ನ ಪಾಠ ಕೇಳಿದರೂ ಹೀಗೆ ಬೆಂಚಿನ ಮೇಲೆ ನಿಲ್ಲುತ್ತೀರಲ್ಲದೇ ನಾಲಿಗೆ ಎಳೆದು ಜಗ್ಗಿದರೂ ಉತ್ತರ ಹೇಳಲಾರಿರಿ. ಇವಳನ್ನು ನೋಡಿ ಆದರೂ ಕಲಿಯಿರಿ, ಯೂಸ್ ಲೆಸ್ ಫೆಲೋಸ್” ಎಂದು ಬಯ್ದದ್ದಲ್ಲದೇ ಇಡೀ ತರಗತಿಯ ಮಕ್ಕಳನ್ನು ನಿಂತೇ ಇರುವಂತೆ ಅಪ್ಪಣೆ ಕೊಡಿಸಿದರು. ಆ ಪಿರಿಯೆಡ್ ಇಡೀ ಕ್ಲಾಸಿನಲ್ಲಿ ಕೂತಿದ್ದವಳೆಂದರೆ ನಾನು ಮಾತ್ರ. ಸರ್ ಕೂಡಾ ನಿಂತೇ ಪಾಠ ಹೇಳುವವರಲ್ಲವೇ..!!
ಆ ದಿನ ಪಾಠ ಮಾಡುತ್ತಾ ನಮ್ಮ ಮೆದುಳಿನಲ್ಲಿ ನಮ್ಮ ನೆನಪು ಶಕ್ತಿಯ ಕೋಶಗಳಿವೆ ಎಂದರು. ನಾವು ಓದಿದ್ದು, ನಾವು ನೋಡಿದ್ದು, ನಾವು ಕೇಳಿದ್ದು ಇದೆಲ್ಲವೂ ನೆನಪುಗಳಾಗಿ ನಮ್ಮ ಮೆದುಳಿನಲ್ಲಿ ಉಳಿದುಕೊಳ್ಳುತ್ತದೆ. ಅದಕ್ಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಓದಿದ್ದನ್ನು ಕಣ್ಣು ಮುಚ್ಚಿ ನೆನಪಿಗೆ ತಂದುಕೊಳ್ಳಿ ಎಂದೆಲ್ಲಾ ಉಪದೇಶ ನೀಡಿದರು. ಆಗಲೇ ಒಂದು ಪ್ರಶ್ನೆಗೆ ಉತ್ತರ ಹೇಳಿ ದೊಡ್ಡ ವಿಜ್ಞಾನಿಯಾದಂತೆ ಬೀಗುತ್ತಿದ್ದ ನನಗೆ ಇದೊಂದು ಹೊಸ ವಿಷಯ ಸಿಕ್ಕಿದಂತಾಯಿತು. ಈ ನೆನಪುಗಳೆಲ್ಲಾ ನಮ್ಮ ತಲೆಯ ಒಳಗೇ ಇರುತ್ತದೆ ಎಂದಾದರೆ ಅದು ಹೊರ ಹೋಗದಂತೆ ನೋಡಿಕೊಂಡರೆ ನಾವೆಲ್ಲಾ ಬುದ್ಧಿವಂತರಾಗಬಹುದಲ್ಲಾ ಎನ್ನಿಸಿ ಅದು ಮಾಯವಾಗಿ ಹೋಗುವುದು ಯಾವ ರೂಪದಲ್ಲಾಗಿರಬಹುದು ಎಂಬ ಬಗ್ಗೆ ಶೋಧನೆ ನಡೆಸಲು ಹೊರಟೆ.
ಮರುದಿನದಿಂದಲೇ ನನ್ನ ಹೊಸ ಸಂಶೋಧನೆ ಪ್ರಾರಂಭವಾಯಿತು. ನೆನಪುಗಳು ನಮಗೆ ಶೀತವಾಗಿರುವಾಗ ನೆಗಡಿಯ ರೂಪದಲ್ಲಿ ಹೋಗುತ್ತದೆ ಎಂಬ ಬಗ್ಗೆ ಮೊದಲು ಯೋಚಿಸಿದೆ. ಆದರೆ ನಮ್ಮ ಕ್ಲಾಸಿನಲ್ಲಿ ಕಳೆದೈದು ವರ್ಷಗಳಿಂದ ಫೇಲಾಗಿ ಈ ವರ್ಷವೂ ಫಾಸಾಗುವ ಯಾವ ಸೂಚನೆಗಳೂ ಇಲ್ಲದಿದ್ದ ಕೃಷ್ಣಪ್ಪ ಎಂಬಾತ ಶೀತ ಭಾದೆಯಿಂದ ಬಳಲಿದ್ದನ್ನೇ ನಾನು ಕಂಡದ್ದಿಲ್ಲ. ಅವನ ನೆನಪು ಶಕ್ತಿಗಳು ಅವನ ತಲೆಯೊಳಗೇ ಉಳಿದರೂ ಫೈಲ್ ಆಗುತ್ತಿದ್ದ ಎಂದರೆ ನೆನಪುಗಳು ನೆಗಡಿಯ ರೂಪದಲ್ಲಿ ಹೊರ ಹೋಗುವುದಿಲ್ಲ ಎಂದಾಯಿತು. ಇದನ್ನು ಒಂದನೇ ಅಧ್ಯಾಯದಲ್ಲಿ ಬರೆದಿಟ್ಟೆ.
ಎಂಜಲು ರೂಪದಲ್ಲಿ ನುಂಗಿ ಹೋಗುತ್ತದೆಯೇ ಎಂಬ ಯೋಚನೆ ಶುರುವಾಯಿತು. ಇಲ್ಲ ಹಾಗಾಗದು. ಹಾಗೊಂದು ವೇಳೆ ಆಗುತ್ತಿದ್ದರೆ ಯಾರಿಗೂ ನೆನಪುಗಳೇ ಉಳಿಯುತ್ತಿದ್ದಿಲ್ಲ ಅಲ್ಲವೇ ಎಂಬ ಎರಡನೇ ನಿರ್ಣಯಕ್ಕೆ ಬಂದೆ.
ಹಾಗಿದ್ದರೆ ನೆನಪುಗಳು ತಲೆಯಿಂದ ಕೆಳಗಿಳಿಯಲಾರವು. ಅವು ಯಾವ ರೂಪದಲ್ಲಿ ತಲೆಯಿಂದ ಹೊರ ಹೋಗುವುದಪ್ಪಾ ಎಂಬ ಆಲೋಚನೆ ತಲೆ ತಿನ್ನಲು ಪ್ರಾರಂಭಿಸಿ ತಲೆ ಕೆರೆದುಕೊಂಡೆ. ಉಗುರಿನಲ್ಲಿ ಬಿಳಿಯ ಬಣ್ಣದ ಪುಡಿ ಕಾಣಿಸಿತು.
ಯುರೇಖಾ.. ಎಂದು ಕೂಗಿದೆ. ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ನೆನಪುಗಳು ತಲೆ ಹೊಟ್ಟಿನ ರೂಪದಲ್ಲೇ ಹೊರಗೆ ಹೋಗುವುದು ಎಂಬ ಹೊಸ ಥಿಯರಿಯೊಂದನ್ನು ಬರೆದೆ. ಅದನ್ನು ಸರ್ ಗೆ ತೋರಿಸಿ ಶಹಬ್ಬಾಸ್ ಎನ್ನಿಸಿಕೊಳ್ಳೋಣ ಎಂದುಕೊಂಡೆ. ಆದರೆ ಅದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗೋಸ್ಕರ ಕೆಲವರ ಸಂದರ್ಶನ ಮಾಡಹೊರಟೆ. ನನ್ನ ಅತ್ಯಂತ ಬುದ್ಧಿವಂತ ಪ್ರಶ್ನೆಗಳು ಅಪ್ಪ ಅಮ್ಮಂದಿರಿಗೆ ತಲೆಹರಟೆಯ ಇನ್ನೊಂದು ರೂಪವಾಗಿ ಕಾಣುವ ಕಾರಣ ಅವರನ್ನು ನನ್ನ ಸಂದರ್ಶನಾ ವಲಯದಿಂದ ಹೊರಗುಳಿಸಿದೆ. ಮನೆಯಲ್ಲಿ ಉಳಿದವನು ಅವಳಿ ಅಣ್ಣ. ಅವನೋ ನನ್ನಿಂದಲೂ ದೊಡ್ಡ ಸಂಶೋಧಕ. ಹೊಸಾ ಬ್ಯಾಟರಿ ಚಾಲಿತ ಕಾರು ತಂದ ದಿನವೇ ಅದರ ಪಾರ್ಟುಗಳನ್ನೆಲ್ಲಾ ಕದಲಿಸಿ ಮತ್ತೆ ಅಷ್ಟನ್ನೂ ಅದರೊಳಗೆ ತುಂಬಿಸಲಾರದೇ ಹೊರ ಹಾಕಿ ಪುಣ್ಯಕ್ಕೆ ನಾಲ್ಕು ಚಕ್ರಗಳು ಸರಿ ಇದ್ದ ಕಾರಣ ಅದನ್ನು ದೂಡಿಯೇ ಮುಂದಕ್ಕೋಡಿಸಿ ಆಟ ಆಡುತ್ತಾ ಬೆಳೆದವ. ಅವನಿಗೆ ನನ್ನ ಸಂಶೋಧನೆಯ ಸುಳಿವು ಸಿಕ್ಕರೆ ಸಾಕು ಮೆದುಳನ್ನೇ ಬುಡಮೇಲು ಮಾಡಬಲ್ಲ ಚಾಣಾಕ್ಯ. ಅವನ ಸುದ್ದಿಗೆ ಹೋಗದಿರುವುದು ನನಗೂ ಒಳ್ಳೆಯದೇ ಆದ ಕಾರಣ ಅವನನ್ನು ದೂರವಿರಿಸಿದೆ.
ಮನೆಯ ಜನರನ್ನು ಹೊರತುಪಡಿಸಿದರೆ ಮತ್ತುಳಿದವರು ನನ್ನ ಕ್ಲಾಸಿನವರು. ಅವರಲ್ಲೂ ಬುದ್ಧಿವಂತರೆಂದಿರುವವರನ್ನು ನನ್ನ ಪಟ್ಟಿಯಿಂದ ಹೊರ ಹಾಕಿ ಹಿಂದಿನ ಬೆಂಚು ಬಿಸಿ ಮಾಡುವ ನನ್ನ ಗೆಳತಿಯರನ್ನು ಆಯ್ಕೆ ಮಾಡಿದೆ.ಅವರೋ ನನ್ನ ಪ್ರಶ್ನೆಯನ್ನು ಬಹು ಭಕ್ತಿಯಿಂದ ಕೇಳಿ ಇದಕ್ಕೆ ಉತ್ತರ ಹೇಳಿದರೆ ಕೊನೆಯ ವಾರ್ಷಿಕ ಪರೀಕ್ಷೆ ಕೂಡಾ ಪಾಸಾಗುವುದೇನೋ ಎಂಬಷ್ಟು ಆಸೆಯಿಂದ ಉತ್ತರಿಸಿದರು.
ಇದನ್ನೆಲ್ಲಾ ಸೇರಿಸಿಕೊಂಡು ಸರ್ ಹತ್ತಿರ ನನ್ನ ಸಂಶೋಧನೆಯ ವಿಷಯ ತಿಳಿಸಲು ಹೋದೆ. ಒಮ್ಮೆ ಅಮೂಲಾಗ್ರವಾಗಿ ನನ್ನ ಕೈಯಲ್ಲಿರುವ ಪೇಪರುಗಳನ್ನು ಓದಿ, ‘ನೆನಪುಗಳೆಲ್ಲಾ ತಲೆ ಹೊಟ್ಟಿನ ರೂಪದಲ್ಲಿ ಹೊರ ಹೋಗುತ್ತಿದ್ದರೆ ಅದಕ್ಕೆ ಕಾಯಿಸಿದ ಎಣ್ಣೆ ಹಾಕಿ ನಿಲ್ಲಿಸಬಹುದಲ್ಲಾ.. ನೀನು ಯಾವಾಗಲಾದ್ರು ಸಾಧ್ಯ ಆದ್ರೆ ಲಘು ಬರಹಗಳನ್ನು ಬರಿಯಮ್ಮ’ ಎಂದು ಶಾಪ ನೀಡಿದ್ದಲ್ಲದೇ, ನನ್ನ ಸಂಶೋಧನಾ ಪೇಪರುಗಳನ್ನು ಮತ್ತೊಮ್ಮೆ ಓದುತ್ತಾ ಆಫೀಸ್ ರೂಮಿನ ಹಂಚು ಹಾರುವಷ್ಟು ಜೋರಾಗಿ ನಗತೊಡಗಿದರು.
ಅವರಿಂದಾಗಿ ಒಬ್ಬಳು ಬಡ್ಡಿಂಗ್ ವಿಜ್ಞಾನಿ ಮುರುಟಿ ಬಿದ್ದರೂ, ಅವರ ಗುರು ಶಾಪದ ಫಲವನ್ನು ನೀವೀಗ ಅನುಭವಿಸುತ್ತಿದ್ದೀರಿ.
-ಅನಿತಾ ನರೇಶ್ ಮಂಚಿ
ಹಹ್ಹ, ಸೊಗಸಾದ ಬರಹ. ಉತ್ತಮವಾದ ಹರಟೆಯ ಎಲ್ಲ ಲಕ್ಷಣಗಳೂ ಇವೆ 🙂
ವಂದನೆಗಳು 🙂
ಗುರುಗಳ ಘೋರ ಶಾಪ ನಿಮಗೆ ತಟ್ಟಿದ್ದು ಸಾರ್ಥಕವಾಯಿತು.
ವಾಹ್!!! ನಿಮ್ಮ ಸಂಶೋಧನೆಗೆ ಇಗ್ನೋಬೆಲ್ ಪ್ರಶಸ್ತಿ ಗ್ಯಾರೆಂಟಿ!
ನಕ್ಕೋ ನಕ್ಕು!!!!!!
🙂
ತುಂಬಾ ಚೆನ್ನಾಗಿದೆ.
Thank u 🙂
:p 😛 🙂 gurubhyonamaha 🙂 chennaagide nimma some-shOdhane
Roopa 🙂
ಗುರುಗಳ ಶಾಪ "ವರ"ವಾಯಿತು. ಹೋ ….. ಎನು…..? ಎಂದು ಕೇಳಬೇಡಿ
ಹ್ಹೋ ಹ್ಹೋ .. ಏನು ಅಂತ ಕೇಳೋದಿಲ್ಲ ಬಿಡಿ 🙂
ನಿಜವಾಗಿಯೂ ಕಾರ್ಣಿಕದ ಗುರುಗಳು. ಅವರ ಶಾಪ ಪಡೆದ ನೀವೇ ಧನ್ಯವಾದ. ನಾವು ಅದರ ಫಲಾನುಭವಿಗಳು
ಹ್ಹ ಹ್ಹ
ಹ ಹ, ಅದ್ಭುತ ಸಂಶೋದನೆ,,,,,,,,,,, ಬಾಲ್ಯದ ನೆನಪುಗಳೆಲ್ಲ ಮನಸಲ್ಲಿ ಹಾದು ಹೋದವು,
ಆಗೆಲ್ಲ ಅದನ್ನು ಸೀರಿಯಸ್ ಆಗಿಯೇ ಮಾಡ್ತಾ ಇದ್ದಿದ್ದು.. ಈಗ ನೆನೆಸಿಕೊಂಡ್ರೆ.. 🙂
Congrats
ನೀವು ಪರವಾಗಿಲ್ಲ ಬಿಡಿ. ನಾನಂತೂ ಅಣ್ಣ ಮನೆಯಲ್ಲಿ ಮಾಡುತ್ತಿದ್ದ ಪ್ರಯೋಗಗಳನ್ನು ನೋಡಿ, ಅದನ್ನು ಶಾಲೆಯಲ್ಲಿ ಮಾಡಿ ಶಹಬ್ಬಾಸ್ ಗಿರಿ ಪಡೆಯುತ್ತಿದ್ದೆ.
ನಿಮ್ಮ ಲೇಖನ ಚೆನ್ನಾಗಿದೆ. ಓದಿಸಿಕೊಂಡು ಹೋಯಿತು, ಹಾಗೆಯೇ ತುಟಿ ಸ್ವಲ್ಪ ಅಗಲವಾಯಿತು.
So simple.. But so nice.. Joy reading..
ಚೆನ್ನಾಗಿದೆ ’ಗುರು’ಬರಹ
ಚೆನ್ನಾಗಿದೆ ’ಲಘು’ಶಾಪದ ’ಗುರು’ಬರಹ 🙂
ಇಷ್ಟವಾಯ್ತು ನಿಮ್ಮ ಬರಹ 🙂