“ಶಿವಪಥವರಿವಡೆ ಗುರುಪಥ ಮೊದಲು” ಎಂದು ಶರಣರು ಹೇಳಿದ್ದಾರೆ. ಜೀವನದಲ್ಲಿ ಗುರಿ ಹಾಗೂ ಗುರು ಬಹುಮುಖ್ಯ. ಗುರುಗಳು ಬೀರಿದ ಪ್ರಭಾವದಿಂದ ಜೀವನದ. ದಿಕ್ಕನ್ನೇ ಬದಲಾಗಿ ಯಶಸ್ಸನ್ನು ಕಂಡು ಸಾಧನೆಯ ಹಾದಿ ತುಳಿದವರ ಸಂಖ್ಯೆ ಸಾಕಷ್ಟಿದೆ. ಗುರಿ ಮುಟ್ಟಲು ಸೋಪಾನ ಅಗತ್ಯ. ಗುರು ಸ್ಥಾನಕ್ಕೆ ತನ್ನದೇ ಆದ ಘನತೆ ಗೌರವಗಳೊಂದಿಗೆ ತನ್ನದೇ ಆದ ಔನ್ನತ್ಯವೂ ಇದೆ.
ನಗುರೋರಧಿಕಂ ತತ್ವಂನ ಗುರೋರಧಿಕಂ ತಪಃ|
ತತ್ವಜ್ಞಾನಾತ್ ಪರಂ ನಾಸ್ತಿ ತಸ್ಮೈಶ್ರೀ ಗುರುವೇ ನಮಃ°||
ಗುರುವಿಗಿಂತಲೂ ಅಧಿಕವಾದ ತತ್ವವಿಲ್ಲ; ಗುರುವಿಗಿಂತಲೂ ಅಧಿಕವಾದ ತಪಸ್ಸಿಲ್ಲ; ತತ್ವಜ್ಞಾನಕ್ಕಿಂತಲೂ ಶ್ರೇಷ್ಠವಾದದ್ದು ಯಾವುದೂ ಇಲ್ಲ. ಆದುದರಿಂದ ಶ್ರೀಗುರುವನ್ನು ನಮಿಸುತ್ತೇನೆ. ಇದೊಂದು ಅದ್ಬುತವಾದ ಗುರು ಸ್ಮೃತಿಯಾಗಿದೆ.
ಮಾನವನ ಸರ್ವತೋಮುಖ ಅಭಿವೃದ್ಧಿಯತ್ತ ವಿಶೇಷವಾಗಿ ಗಮನಿಸಿ, ಅರ್ಥಪೂರ್ಣವಾಗಿ ಕಾರ್ಯೋನ್ಮುಖವಾಗುವ ವಿಚಾರದಲ್ಲಿ ಭಾರತವು ಜಗತ್ತಿಗೆ ನೀಡಿದ ಕೊಡುಗೆ ಅತ್ಯಪಾರವಾಗಿದೆ. ಪ್ರತಿಯೊಬ್ಬ ಮಾನವನ ಬದುಕನ್ನು ರೂಪಿಸುವಲ್ಲಿ ಜನ್ಮ ನೀಡುವ ಮಾತಾ ಪಿತೃಗಳು ಹಾಗೂ ವಿದ್ಯೆ ಸಂಸ್ಕಾರವನ್ನೀಯುವ ಗುರು ಸಮೂಹವು ಗೌರವಾನ್ವಿತರೂ ಹಾಗೂ ಪೂಜನೀಯರೂ ಆಗಿದ್ದಾರೆ. ತಂದೆ ತಾಯಿ ಮತ್ತು ಗುರು ಇವರ ಮಾರ್ಗದರ್ಶನದಲ್ಲಿ ಮಗು ಕಾಲಕ್ರಮದಲ್ಲಿ “ಮಾನವ ಸಂಪನ್ಮೂಲ”ವಾಗಿ ಜಗತ್ತಿಗೆ ಸಮರ್ಪಿತವಾಗುವ ಪ್ರಕ್ರಿಯೆ ಮನೋಜ್ಞವಾದದ್ದಾಗಿದೆ. ಹೀಗಾಗಿ ಈ ಮೂರು ಅಕ್ಷರಗಳನ್ನು ಸೇರಿಸಿ “Parents are first teachers and teachers are second parents” ಎಂಬ ಮಾತನ್ನು ನಮ್ಮ ಸಮಾಜವು ಸಮರ್ಥಿಸಿರುವುದು ಮಾನವನ ಸಮಗ್ರ ರಕ್ಷಣೆ, ಪೋಷಣೆ ಹಾಗೂ ಉದ್ಧಾರದ ಪಯಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಗುರುವಿನ ಕರುಣದಿಂದ ಲಿಂಗ ಜಂಗಮವ ಕಂಡೆ|
ಗುರುವಿನ ಕರುಣದಿಂದ ಪಾದೋದಕ ಪ್ರಸಾದವ ಕಂಡೆ|
ಗುರುವಿನ ಕರುಣದಿಂದ ಸಜ್ಜನ ಸದ್ಬಕ್ತ ಗೋಷ್ಠಿಯ ಕಂಡೆ|
ಚೆನ್ನಮಲ್ಲಿಕಾರ್ಜುನಯ್ಯ,
ನಾ ಹುಟ್ಟಲೊಡನೆ ವಿಭೂತಿಯ ಪಟ್ಟವ ಕಟ್ಟಿ|
ಸದ್ಗುರು ಸ್ವಾಮಿ ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆ||
ಎಂದು ಅಕ್ಕಮಹಾದೇವಿ ತನ್ನ ವಚನದಲ್ಲಿ ಹೇಳಿದ್ದಾಳೆ. ಇದರರ್ಥ, ಗುರುಕೃಪೆ ಇದ್ದರೆ ಸರ್ವವೂ ಸಾಧ್ಯವಾಗುತ್ತದೆ. ಲಿಂಗ ಜಂಗಮದ ನಿಲುವನ್ನು ಅರಿಯಲು ಗುರುಕೃಪೆಯೇ ಬೇಕು. ಪಾದೋದಕ ಪ್ರಸಾದವೂ ಸಜ್ಜನ ಸದ್ಬಾವಿಗಳ ಸಂಗವೂ ಗುರುಕೃಪೆಯಿಂದಲೇ ಸಾಧ್ಯವಾಗುವುದು. ಜನನವಾದ ತಕ್ಷಣ ವಿಭೂತಿಯನ್ನು ಧರಿಸಿ ಲಿಂಗಧಾರಣವನ್ನು ಗುರು ನೆರವೇರಿಸಿದುದರಿಂದ ನಾನು ಧನ್ಯಳಾದೆ ಎಂಬುದೇ ಅಕ್ಕನ ವಚನದ ಅಭಿಪ್ರಾಯವಾಗಿದೆ.
ಸಮಾಜದಲ್ಲಿ ಇತ್ತೀಚೆಗೆ ಶಿಕ್ಷಕ ಹುದ್ದೆಯೂ ಕಳಂಕಿತಗೊಳ್ಳುತ್ತಿರುವುದು ಚಿಂತನಾ ವಿಷಯವಾಗಿದೆ. ನೈತಿಕ ಅಧಃಪತನ ಹೊಂದಿದವರು, ವೃತ್ತಿಯ ಹೊಣೆಗಾರಿಕೆಯನ್ನರಿಯದವರು ಇದಕ್ಕೆ ಕಾರಣೀಕರ್ತರಾಗಿದ್ದಾರೆ. ಇದರ ಮಧ್ಯೆ ಕೆಲವರು ವೃತ್ತಿಯ ಪ್ರಾಮುಖ್ಯತೆಯನ್ನರಿತವರು, ಬದ್ಧತೆಯುಳ್ಳವರು ಮೊದಲಾದವರು ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ಮುಂದುವರಿಸಿರುವುದಲ್ಲದೇ ಇವರೊಂದಿಗೆ ಸಮಾಜದಲ್ಲಿನ ಕೆಲವು ಶಿಕ್ಷಣ ಪ್ರೇಮಿಗಳು ಶಿಕ್ಷಣಕ್ಕೆಂದೇ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವುದು ಪ್ರಶಂಸನೀಯ ವಿಷಯವಾಗಿದೆ. ಅನಕ್ಷರಸ್ಥರಾಗಿದ್ದರೂ ಶಿಕ್ಷಣದ ಮಹತ್ವವನ್ನರಿತ “ಅಕ್ಷರ ಸಂತ” ಹರೇಕಳ ಹಾಜಪ್ಪ. ಬೀದಿ ಬದಿ ಕಿತ್ತಳೆ ಮಾರಿ ಶಿಕ್ಷಕನಿಂದ ಸಾಧ್ಯವಾಗದ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಶಿಕ್ಷಣದ ಬಗ್ಗೆ ಅರಿವಿಲ್ಲದ ಹಮಾಲಿ ಕೆಲಸ ಮಾಡುವ ಮಕ್ಕಳಿಗೆ, ಹುಬ್ಬಳ್ಳಿಯ ರಾಮು ಮೂಲಗಿ ಎಂಬ ಜಾನಪದ ತಜ್ಞ ಮಾರ್ಗದರ್ಶಕರಾಗಿದ್ದಾರೆ. ಶಿಕ್ಷಣದೊಂದಿಗೆ ಜನಪದ ಸಾಹಿತ್ಯವನ್ನು ಪಸರಿಸುವ ಕೊಪ್ಪಳ ಜಿಲ್ಲೆಯ ಬಿನ್ನಾಳ ಗ್ರಾಮದ ಜೀವನಸಾಬ ವಾಲೀಕಾರ, ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ವಿಶ್ವದಲ್ಲೇ ಅತೀ ಕಿರಿಯ ಮುಖ್ಯ ಶಿಕ್ಷಕನೆಂದು ಗುರುತಿಸಿಕೊಂಡಿರುವ ಪಶ್ಚಿಮ ಬಂಗಾಳದ ಬಾಬರ ಅಲಿ, ಶಿಕ್ಷಣದ ಹುಲಿಮರಿಯಾಗಿದ್ದಾನೆ. ಸೈಕಲ ನಲ್ಲಿ ಸುತ್ತಿ ಸ್ಲಂ ಮಕ್ಕಳಿಗೆ ಪಾಠ ಹೇಳುವ ಆದಿತ್ಯಕುಮಾರ, ನದಿಯಲ್ಲಿ ಈಜುತ್ತಾ ಶಾಲೆಗೆ ಬಂದು ಅಕ್ಷರ ಜ್ಞಾನ ನೀಡುವ ಅಬ್ದುಲ್ ಮಲಿಕ್ ಮೊದಲಾದ ಶಿಕ್ಷಣ ಪ್ರೇಮಿಗಳು ಇಡೀ ಶಿಕ್ಷಣ ಕ್ಷೇತ್ರಕ್ಕೆ ಮಾದರಿಯಾಗಿದ್ದಾರೆ. ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಇವರನ್ನು ನೆನೆದು ಗೌರವ ಸಲ್ಲಿಸುವುದು ಇಂದು ಔಚಿತ್ಯವಾಗಿದೆ.
ತಾತ್ವಿಕತೆಯ ಮೂರ್ತರೂಪವಾದ ಗುರುವು ನಮ್ಮ ಬದುಕಿನ ಪಯಣದಲ್ಲಿ ಚುಕ್ಕಾಣಿಕನಾಗಿ ನಮ್ಮೊಂದಿಗೆ ಸಂಚರಿಸುತ್ತಾನೆ. ಧರ್ಮದ ಪ್ರತಿನಿಧಿ ಎನಿಸಿದ ಆತನ ಕೃಪೆ ಅಸಾಧಾರಣವಾದದ್ದು ಮತ್ತು ಯುಗಪ್ರವರ್ತಕರಾದ ಅವತಾರ ಪುರುಷರು ಕೂಡ ಈ ಗುರುಶಕ್ತಿಗೆ ನಮಿಸಿದ್ದಾರೆ.
ಗುರುಶಕ್ತಿಯನ್ನು ಮೀರಿದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ತನ್ನೆಡೆಗೆ ಬಂದ ಪುಣ್ಯಾತ್ಮರನ್ನು ಆತ ಸಂತೋಷದಿಂದ ಹಾಗೂ ಪಾಪಾತ್ಮರನ್ನು ಕಡೆಗಣಿಸದೇ ಕರುಣೆಯಿಂದ ಸ್ವೀಕರಿಸುವ ವಿಧಾನವೇ ಆಲೋಚನಾಯೋಗ್ಯವಾದದ್ದು. ಬಡವನನ್ನು ಅಥವಾ ಹೊಟ್ಟೆಗೆ ತುತ್ತು ಅನ್ನ ಇಲ್ಲದವನನ್ನು ‘ದೀನ’ನೆಂದು ತಿಳಿದಿರಬಹುದಾದರೂ, ಗುರುಕೃಪೆ ಇಲ್ಲದವನಿಗಿಂತ ದೀನ ಮತ್ತೊಬ್ಬನಿಲ್ಲ. ಗುರುಕೃಪೆಯನ್ನು ಕಳೆದುಕೊಂಡವನ ನಷ್ಟ ಅಷ್ಟಿಷ್ಟಲ್ಲ. “ಹರಿಮುನಿದರೆ ಗುರುಕಾಯ್ವನು, ಗುರುಮುನಿದರೆ ಕಾವರಾರು?” ಎಂದು ಹೇಳಲಾಗಿದೆ. ಹೀಗಾಗಿ ಗುರುವೇ ತತ್ವ, ಗುರುವೇ ತಪಸ್ಸು, ಗುರುವೇ ಸರ್ವಸ್ವ..!
-ಫರಜಾನಾ ಹಬುಗೋಳ